ಹೆಣ್ಣಿನ ಮಾನ-ಪ್ರಾಣ ಚುನಾವಣಾ ಜಾಹೀರಾತುಗಳಿಗೆ ವಸ್ತುವಾಗದಿರಲಿ
Photo Credit: X/@BJP4India
ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ
ತಮ್ಮ ರಾಜಕೀಯಗಳಿಗೆ ಮಹಿಳೆಯರ ಮಾನ-ಪ್ರಾಣವನ್ನು ಒತ್ತೆಯಾಗಿಟ್ಟು ಆಡುವುದನ್ನು ಭಾರತ ಒಂದು ಸಂಸ್ಕೃತಿಯಾಗಿ ಆಚರಿಸಿಕೊಂಡು ಬರುತ್ತಿದೆ. ಹಿಂದೆ ಪುರಾಣದಲ್ಲಿ, ಕೌರವ-ಪಾಂಡವರ ನಡುವಿನ ಪ್ರತಿಷ್ಠೆಗೆ ದ್ರೌಪದಿಯ ಮಾನ ಹರಣವಾಯಿತು. ಒಬ್ಬರನ್ನೊಬ್ಬರು ಮಣಿಸುವ ಭರದಲ್ಲಿ ದ್ರೌಪದಿಯನ್ನೇ ಇಟ್ಟು ಜೂಜಾಟ ನಡೆಸಿದರು. ಸಭೆಯ ಮಧ್ಯೆ ಆಕೆಯ ವಸ್ತ್ರಾಪರಹಣವಾಯಿತು. ರಾಮಾಯಣವೂ ಇದಕ್ಕೆ ಭಿನ್ನವಾಗಿಯೇನೂ ಇಲ್ಲ. ರಾಮ-ರಾವಣರ ತಿಕ್ಕಾಟದಲ್ಲಿ ನೋವನ್ನನುಭವಿಸಿದ್ದು ಶೂರ್ಪನಖಿ ಮತ್ತು ಸೀತಾದೇವಿ. ಪ್ರೀತಿಯನ್ನು ಯಾಚಿಸಿಕೊಂಡು ಬಂದ ಶೂರ್ಪನಖಿಯ ಮೂಗು, ಕಿವಿ ಹರಿದು ರಾಮ -ಲಕ್ಷ್ಮಣರು ಕ್ರೌರ್ಯವನ್ನು ಮೆರೆದರು, ಇದರ ವಿರುದ್ಧ ಸೇಡು ತೀರಿಸಲು ರಾವಣ ಸೀತಾದೇವಿಯನ್ನು ಅಪಹರಿಸಿದ. ರಾಮ-ರಾವಣರ ನಡುವಿನ ಸಂಘರ್ಷಕ್ಕೆ ಅವಮಾನ, ನೋವುಗಳನ್ನು ಅನುಭವಿಸಿದ್ದು ಇಬ್ಬರು ಹೆಣ್ಣು ಮಕ್ಕಳು. ರಾಜ-ರಾಜರುಗಳ ನಡುವಿನ ಸಂಘರ್ಷಗಳಲ್ಲಿ ಮಹಿಳೆಯರು ಸಾಲು ಸಾಲಾಗಿ ಅವಮಾನ, ನೋವುಗಳನ್ನು ಅನುಭವಿಸಿದ್ದು ಇತಿಹಾಸದುದ್ದಕ್ಕೂ ನಡೆದಿವೆ. ವಿಪರ್ಯಾಸವೆಂದರೆ, ಈ ಆಧುನಿಕ ಕಾಲದಲ್ಲೂ ಇದು ಮುಂದುವರಿಯುತ್ತಿದೆ.
ಯಾವುದೇ ಕೋಮುಗಲಭೆಗಳ ಮೊದಲ ಸಂತ್ರಸ್ತರು ಮಹಿಳೆಯರಾಗಿರುವುದನ್ನು ನಾವು ಅಸಹಾಯಕರಾಗಿ ನೋಡುತ್ತಿದ್ದೇವೆ. ‘ಹಿಂದೂಧರ್ಮದ ಸಾಂಸ್ಕೃತಿಕ ಪುನರುತ್ಥಾನ’ ಎಂದು ಕೆಲವು ಸಂಘಪರಿವಾರ ಮುಖಂಡರಿಂದ ಕರೆಯಲ್ಪಟ್ಟ ಗುಜರಾತ್ ಹತ್ಯಾಕಾಂಡದಲ್ಲಿ ಅತಿ ಹೆಚ್ಚು ಸಾವು, ನೋವಿಗೀಡಾದದ್ದು ಮಹಿಳೆಯರು. ಆ ಬಳಿಕ ಮಕ್ಕಳು. ಮಹಿಳೆಯರನ್ನು ಸಾಮೂಹಿಕವಾಗಿ ಅತ್ಯಾಚಾರ ಗೈದು, ಅವರನ್ನು ಬರ್ಬರವಾಗಿ ಕೊಂದು ದುಷ್ಕರ್ಮಿಗಳು ತಮ್ಮ ಶೌರ್ಯವನ್ನು ಜಗತ್ತಿಗೆ ಸಾಬೀತು ಪಡಿಸಿದರು. ಹೀಗೆ ನೋವುಂಡ ಬಿಲ್ಕಿಸ್ಬಾನು ಈಗಲೂ ನ್ಯಾಯಕ್ಕಾಗಿ ನ್ಯಾಯಾಲಯದ ಮೆಟ್ಟಿಲು ತುಳಿಯುತ್ತಿದ್ದಾರೆ. ಕಳೆದ ಗುಜರಾತ್ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಈ ಹೆಣ್ಣಿನ ಮೇಲೆ ಸಾಮೂಹಿಕವಾಗಿ ಅತ್ಯಾಚಾರಗೈದ ದುಷ್ಕರ್ಮಿಗಳನ್ನು ಬಿಡುಗಡೆ ಮಾಡಲಾಯಿತು. ಅತ್ಯಾಚಾರ ಆರೋಪಿಗಳು ಬಹಿರಂಗವಾಗಿ ಯಾವ ಲಜ್ಜೆಯೂ ಇಲ್ಲದೆ ಬಿಜೆಪಿ ಅಭ್ಯರ್ಥಿಗಳ ಪರವಾಗಿ ಮತ ಯಾಚಿಸಿದರು. ಹೆಣ್ಣಿನ ಮೇಲೆ ನಡೆಸಿದ ಅತ್ಯಾಚಾರವೇ ಇವರ ಹೆಗ್ಗಳಿಕೆಯಾಗಿತ್ತು. ಬಿಜೆಪಿ ತನ್ನ ರಾಜಕೀಯ ಗೆಲುವಿಗಾಗಿ ಹೆಣ್ಣಿನ ಕಣ್ಣೀರನ್ನು ದಾಳವಾಗಿಸಿಕೊಳ್ಳುತ್ತಾ ಬಂದಿದೆ. ಮಣಿಪುರದಲ್ಲಿ ಎರಡು ಬುಡಕಟ್ಟುಗಳ ನಡುವಿನ ಸಂಘರ್ಷದಲ್ಲೂ ಬಲಿಯಾಗಿದ್ದು ಮಹಿಳೆಯರೇ. ಕುಕಿ ಜನಾಂಗಕ್ಕೆ ಪಾಠ ಕಲಿಸಲು ಮಹಿಳೆಯರ ಬೆತ್ತಲೆ ಮೆರವಣಿಗೆಗಳು ನಡೆದವು. ಅವರ ಮೇಲೆ ಸಾಮೂಹಿಕ ಅತ್ಯಾಚಾರಗಳಾದವು. ಲೋಕಸಭಾ ಚುನಾವಣೆ ಘೋಷಣೆಯಾದರೂ, ಈ ಮಹಿಳೆಯರಿಗೆ ನ್ಯಾಯ ಮರೀಚಿಕೆಯಾಗಿಯೇ ಉಳಿದಿದೆ.
ಲೋಕಸಭಾ ಚುನಾವಣೆ ಘೋಷಣೆಯಾದ ಬೆನ್ನಿಗೇ, ಎನ್ಡಿಎ-ಇಂಡಿಯಾ ನಡುವಿನ ತಿಕ್ಕಾಟಗಳು ತಾರಕಕ್ಕೇರಿವೆ. ಪರಸ್ಪರ ಮಾತಿನ ದಾಳಿಗಳು ಇಕ್ಕೆಡೆಗಳನ್ನು ಬಾಣಗಳಂತೆ ಇರಿಯುತ್ತಿವೆ. ವಿಪರ್ಯಾಸವೆಂದರೆ, ಈ ದಾಳಿಯ ಸಂದರ್ಭದಲ್ಲಿ ಅವರು ಮತ್ತೆ ಗುರಿಯಾಗಿಸುತ್ತಿರುವುದು ಹೆಣ್ಣನ್ನು ‘ಇಂಡಿಯಾ’ ವಿಪಕ್ಷ ಮೈತ್ರಿಕೂಟದ ವಿರುದ್ಧ ಟೀಕೆ ಮಾಡುವ ಭರದಲ್ಲಿ, ಒಬ್ಬ ವಧುವಿಗಾಗಿ ಹಲವು ಯುವಕರು ಪರಸ್ಪರ ಕಿತ್ತಾಡುವ ಜಾಹೀರಾತನ್ನು ಬಿಜೆಪಿ ನಾಯಕರು ಮಾರುಕಟ್ಟೆಗೆ ಬಿಟ್ಟಿದ್ದಾರೆ. ಅಧಿಕಾರವನ್ನು ಹೆಣ್ಣಿಗೆ ಹೋಲಿಸುತ್ತಾ, ಆಕೆಗಾಗಿ ‘ಇಂಡಿಯಾ’ದ ನಾಯಕರು ಪರಸ್ಪರ ಬಡಿದಾಡಿಕೊಳ್ಳುವ ಈ ಜಾಹೀರಾತು ತೀರಾ ಕೀಳು ಅಭಿರುಚಿಯಿಂದ ಕೂಡಿದೆ. ಅಧಿಕಾರವನ್ನು ಹೆಣ್ಣಾಗಿ ಗುರುತಿಸುವ ಮೂಲಕ ಹೆಣ್ಣನ್ನು ಅನುಭೋಗಿಸುವ ವಸ್ತುವಾಗಿ ಬಿಜೆಪಿ ಬಿಂಬಿಸಿದೆ. ಈ ಜಾಹೀರಾತು ಹೆಣ್ಣನ್ನು ಪುರುಷರ ಕೈಗೊಂಬೆಯಾಗಿಸಿದೆ. ಆಕೆಯನ್ನು ಸಾರ್ವಜನಿಕವಾಗಿ ತಮಾಷೆಗೀಡು
ಮಾಡುವ ಮೂಲಕ, ‘ಇಂಡಿಯಾ’ದ ನಾಯಕರನ್ನು ವ್ಯಂಗ್ಯ ಮಾಡುವ ಪ್ರಯತ್ನವನ್ನು ಬಿಜೆಪಿ ನಾಯಕರು ಮಾಡಿದ್ದಾರೆ. ಇದರ ವಿರುದ್ಧ ಹಲವು ನಾಯಕರು ಈಗಾಗಲೇ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ. ವಿವಿಧ ಮಹಿಳಾ ಸಂಘಟನೆಗಳು, ವಿವಿಧ ಪಕ್ಷಗಳು, ಮಹಿಳಾ ನಾಯಕಿಯರು ಇದರ ವಿರುದ್ಧ ಧ್ವನಿಯೆತ್ತಿದ್ದಾರೆ ಮಾತ್ರವಲ್ಲ, ಚುನಾವಣಾ ಆಯೋಗಕ್ಕೆ ದೂರನ್ನು ನೀಡಿದ್ದಾರೆ. ಪ್ರಧಾನಿ ಹುದ್ದೆಯನ್ನು ಹೆಣ್ಣಿಗೆ ಹೋಲಿಸುವುದು ಪುರುಷ ಪ್ರಧಾನ ಮನಸ್ಥಿತಿಯಾಗಿದೆ. ನಾಳೆ ಈ ಕುರ್ಚಿಯನ್ನು ಒಬ್ಬ ಮಹಿಳೆಯೂ ಏರಬಹುದಾಗಿದೆ. ಇಂತಹ ಹೋಲಿಕೆ ಅತ್ಯಂತ ಬೇಜವಾಬ್ದಾರಿತನದಿಂದ ಕೂಡಿದೆ ಎಂದು ಅವರು ಆರೋಪಿಸಿದ್ದಾರೆ.
ಮಹಿಳೆಯರನ್ನು ಕೀಳಾಗಿ ಪರಿಗಣಿಸಿ ಚುನಾವಣಾ ಪ್ರಚಾರ ಸಂದರ್ಭದಲ್ಲಿ ಹೇಳಿಕೆ ನೀಡುವ ಪ್ರವೃತ್ತಿ ಬಿಜೆಪಿಗಷ್ಟೇ ಸೀಮಿತವಾಗಿಲ್ಲ. ಕರ್ನಾಟಕದಲ್ಲಿ ಹಿರಿಯ ಕಾಂಗ್ರೆಸ್ ಮುಖಂಡ ಶಾಮನೂರು ಶಿವಶಂಕರಪ್ಪ ಅವರೂ ಮಹಿಳೆಯ ವಿಷಯದಲ್ಲಿ ಮಾತನಾಡುವಾಗ ಎಡವಿದ್ದಾರೆ. ದಾವಣಗೆರೆ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಗಾಯತ್ರಿ ಸಿದ್ದೇಶ್ವರ್ ಅವರನ್ನು ಟೀಕಿಸುವ ಭರದಲ್ಲಿ ‘‘ಮಹಿಳೆಯರು ಅಡುಗೆ ಮಾಡುವುದಕ್ಕೆ ಮಾತ್ರ ಯೋಗ್ಯರು’’ ಎಂದು ವ್ಯಂಗ್ಯವಾಡಿದ್ದಾರೆ. ಈ ಮಾತು ನಾಡಿನ ಮಹಿಳೆಯರನ್ನು ಕೆರಳಿಸಿದೆ. ಖ್ಯಾತ ಬ್ಯಾಡ್ಮಿಂಟನ್ ಆಟಗಾರ್ತಿ, ಒಲಿಂಪಿಕ್ ಪದಕ ವಿಜೇತೆ ಸೈನಾ ನೆಹ್ವಾಲ್ ಅವರು ಈ ಲಘು ಹೇಳಿಕೆಗೆ ಪ್ರತಿಕ್ರಿಯಿಸಿದ್ದು, ‘‘ಭಾರತವನ್ನು ಪ್ರತಿನಿಧಿಸಿ ನಾನು ಪದಕ ಗೆದ್ದಾಗ ಕಾಂಗ್ರೆಸ್ ನಾನು ಏನು ಮಾಡಬೇಕು ಎಂದು ಬಯಸಿತ್ತು?’’ ಎಂದು ಪ್ರಶ್ನಿಸಿದ್ದಾರೆ. ‘‘ತರುಣಿಯರು ತಾವು ಬಯಸಿದ ಕ್ಷೇತ್ರಗಳಲ್ಲಿ ಅಪಾರವಾದುದನ್ನು ಸಾಧಿಸಲು ಕನಸು ಕಾಣುತ್ತಿರುವ ಸಂದರ್ಭದಲ್ಲಿ ಕಾಂಗ್ರೆಸ್ ನಾಯಕರ ಈ ಹೇಳಿಕೆ ನನ್ನನ್ನು ಕಳವಳಕ್ಕೀಡು ಮಾಡಿದೆ’’ ಎಂದು ‘ಎಕ್ಸ್’ನಲ್ಲಿ ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ತಮಾಷೆಯೆಂದರೆ, ಹೆಣ್ಣಿನ ಕುರಿತಂತೆ ಶಾಮನೂರು ಅವರು ಹಗುರವಾಗಿ ಮಾತನಾಡುತ್ತಿರುವಾಗಲೇ, ಇನ್ನೊಂದೆಡೆ, ಅವರದೇ ಸೊಸೆ ಪ್ರಭಾ ಮಲ್ಲಿಕಾರ್ಜುನ ಅವರು ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ಗುರುತಿಸಿಕೊಂಡಿದ್ದಾರೆ. ತನ್ನ ಸೊಸೆಯ ಕುರಿತಂತೆ ಅವರು ಯಾವ ಅಭಿಪ್ರಾಯವನ್ನು ಹೊಂದಿದ್ದಾರೆ ಎನ್ನುವುದನ್ನು ಅವರಿನ್ನೂ ಸ್ಪಷ್ಟಪಡಿಸಿಲ್ಲ. ಹೆಣ್ಣು ಮಕ್ಕಳ ಬಗ್ಗೆ ಶಾಮನೂರು ವ್ಯಕ್ತಪಡಿಸಿದ್ದ ಅಭಿಪ್ರಾಯದ ಬಗ್ಗೆ ಸೊಸೆಯೂ ಈವರೆಗೆ ಯಾವುದೇ ಸ್ಪಷ್ಟೀಕರಣವನ್ನೂ ನೀಡಿಲ್ಲ.
ಶಾಮನೂರು ಅವರು ಕಾಂಗ್ರೆಸ್ನೊಳಗಿದ್ದುಕೊಂಡೇ ಹಲವು ಬಾರಿ ಕಾಂಗ್ರೆಸ್ಗೆ ಮುಜುಗರವನ್ನುಂಟು ಮಾಡುವ ಹೇಳಿಕೆಗಳನ್ನು ನೀಡಿದ್ದಾರೆ. ಈ ಹಿಂದೆ, ಲಿಂಗಾಯತ ಸಮುದಾಯದ ಸಭೆಯಲ್ಲಿ ಬಹಿರಂಗವಾಗಿಯೇ ಬಿಜೆಪಿಯ ಮುಖಂಡ ಯಡಿಯೂರಪ್ಪ ಅವರ ಪುತ್ರನನ್ನು ಬಹುಮತದಿಂದ ಗೆಲ್ಲಿಸಿ ಎಂದು ಕರೆ ನೀಡಿದ್ದರು. ಲಿಂಗಾಯತ ಸಮುದಾಯಕ್ಕೆ ಸೇರಿದ್ದರೆ ಬಿಜೆಪಿಯಲ್ಲಿ ಸ್ಪರ್ಧಿಸಿದ್ದರೂ ಅವರನ್ನು ಗೆಲ್ಲಿಸಬೇಕು ಎನ್ನುವುದು ಶಾಮನೂರು ಇಂಗಿತ. ಜಾತಿ ಗಣತಿಯ ವಿರುದ್ಧ ಅಪಸ್ವರವನ್ನು ವ್ಯಕ್ತಪಡಿಸಿದವರಲ್ಲಿ ಶಾಮನೂರು ಮೊದಲಿಗರು. ಇದೀಗ ಮಹಿಳೆಯ ಕುರಿತಂತೆ ಹಗುರವಾಗಿ ಮಾತನಾಡುವ ಮೂಲಕ ಬಸವಣ್ಣನ ಚಿಂತನೆಗೂ ಅವರು ಅಪಚಾರ ಎಸಗಿದ್ದಾರೆ. ಅಕ್ಕಮಹಾದೇವಿಯಂತಹ ಹಲವು ಪ್ರಮುಖ ಶರಣೆಯರು 12 ನೇ ಶತಮಾನದಲ್ಲಿ ಅಡುಗೆಗೆ ಸೀಮಿತರಾಗಿರಲಿಲ್ಲ. ಶರಣ ಚಳವಳಿಯಲ್ಲಿ ಈ ಮಹಿಳೆಯರ ಪಾತ್ರ ಬಹುದೊಡ್ಡದಿತ್ತು. ಅಷ್ಟೇ ಅಲ್ಲ, ಮಹಿಳೆಯರು ಅಡುಗೆ ಮಾಡುವುದಕ್ಕಷ್ಟೇ ಲಾಯಕ್ಕಾದರೆ, ಈ ದೇಶದ ಪ್ರಧಾನಿಯಾಗಿ ಹತ್ತು ಹಲವು ಕೊಡುಗೆಗಳನ್ನು ನೀಡಿದ ಕಾಂಗ್ರೆಸ್ನ ನಾಯಕಿ ಇಂದಿರಾಗಾಂಧಿಯ ಬಗ್ಗೆ ಅವರೇನು ಹೇಳುತ್ತಾರೆ? ತನ್ನ ಹೇಳಿಕೆಯ ಮೂಲಕ ಬಿಜೆಪಿಯ ಅಭ್ಯರ್ಥಿಯನ್ನು ಟೀಕಿಸಲು ಹೊರಟು ಅವರು ಪರೋಕ್ಷವಾಗಿ ಇಂದಿರಾಗಾಂಧಿಯನ್ನೇ ಕೇವಲವಾಗಿಸಿದ್ದಾರೆ. ಈ ಹಿಂದೆ ನಾಯಕರೊಬ್ಬರು ನಟಿ ಸುಮಲತಾ ಚುನಾವಣೆಗೆ ನಿಂತಾಗಲೂ ಕೀಳು ಅಭಿರುಚಿಯ ಮಾತನ್ನಾಡಿರುವುದನ್ನು ನಾವು ನೆನಪಿಸಿಕೊಳ್ಳಬಹುದು. ‘ಗಂಡ ಸತ್ತ ಬೆನ್ನಿಗೇ ಸುಮಲತಾ ಚುನಾವಣೆಗೆ ನಿಂತಿರುವುದು ಎಷ್ಟು ಸರಿ?’ ಎಂದು ಅವರು ಕೇಳಿದ್ದರು. ಇದು ತೀವ್ರ ಆಕ್ರೋಶಕ್ಕೆ ಕಾರಣವಾಗಿತ್ತು.
ಸಂಸತ್ತಿನಲ್ಲಿ ಮಹಿಳೆಯರಿಗೆ ಮೀಸಲಾತಿಯನ್ನು ನೀಡಬೇಕು ಎಂದು ಎಲ್ಲ ಪಕ್ಷಗಳ ನಾಯಕರೊಬ್ಬರು ಸಾರ್ವಜನಿಕ ವೇದಿಕೆಯಲ್ಲಿ ಮಾತನಾಡುತ್ತಾರೆ. ಆದರೆ ಆಳದಲ್ಲಿ ಮಹಿಳೆಯ ಕುರಿತಂತೆ ಅವರ ನಿಲುವು ಏನು ಎನ್ನುವುದು ಚುನಾವಣೆಯ ಸಂದರ್ಭದಲ್ಲಿ ಬಹಿರಂಗವಾಗುತ್ತದೆ. ಸಂಸತ್ನಲ್ಲಿ ಮಹಿಳೆಯರ ಮೀಸಲಾತಿಯು ಯಾಕೆ ಜಾರಿಗೆ ಬರಲು ಸಾಧ್ಯವಾಗುತ್ತಿಲ್ಲ ಎನ್ನುವುದಕ್ಕೆ ಅವರ ಮಾತು, ವರ್ತನೆಗಳಲ್ಲಿ ಉತ್ತರವಿದೆ.