ದೇಶ ಒಗ್ಗೂಡಿಸುವ ಭಾಗವಾಗಿ ಅಮಿತ್ ಶಾ ಕನ್ನಡ ಕಲಿಯಲಿ
ವಿಡಿಯೋ ವಾರ್ತಾಭಾರತಿ ಯೂಟ್ಯೂಬ್ ಚಾನಲ್ ನಲ್ಲಿ ವೀಕ್ಷಿಸಿ : ಲಿಂಕ್ ಕಮೆಂಟ್ ಬಾಕ್ಸ್ ನಲ್ಲಿ ಇದೆ
‘‘ಹಿಂದಿ ಭಾಷೆ ಭಾರತವನ್ನು ಒಗ್ಗೂಡಿಸುವಲ್ಲಿ ಅಭೂತ ಪೂರ್ವ ಪಾತ್ರವನ್ನು ವಹಿಸುತ್ತದೆ’’ ಎಂದು ದೇಶದ ಗೃಹ ಸಚಿವ ಅಮಿತ್ ಶಾ ಅಭಿಪ್ರಾಯ ಪಟ್ಟಿದ್ದಾರೆ. ಎಲ್ಲ ಭಾಷೆಗಳನ್ನು, ರಾಜ್ಯಗಳನ್ನು ಒಗ್ಗೂಡಿಸಲು ಹಿಂದಿ ಸಹಾಯ ಮಾಡುವುದರಿಂದ, ಹಿಂದಿಯೇತರ ರಾಜ್ಯಗಳು ಹಿಂದಿಯನ್ನು ಕಲಿಯಬೇಕು ಎನ್ನುವ ಪರೋಕ್ಷ ಆದೇಶವನ್ನು ಅವರು ನೀಡಿದ್ದಾರೆ. ಇದೇ ಸಂದರ್ಭದಲ್ಲಿ ದಕ್ಷಿಣ ಭಾರತದಲ್ಲಿ ‘ಹಿಂದಿ ದಿವಸ್’ ಆಚರಣೆಯ ವಿರುದ್ಧ ಕಾರ್ಯಕ್ರಮಗಳು ನಡೆದಿವೆ. ಅಮಿತ್ ಶಾ ಹೇಳಿಕೆಯನ್ನು ದಕ್ಷಿಣ ಭಾರತದ ಹಲವು ನಾಯಕರು ಖಂಡಿಸಿದ್ದಾರೆ. ‘‘ಅಮಿತ್ ಶಾ ಅವರ ಹೇಳಿಕೆ ಅಸಂಬದ್ಧ’’ ಎಂದು ತಮಿಳು ನಾಡಿನ ನಟ, ರಾಜಕೀಯ ನಾಯಕ ಉದಯನಿಧಿ ಸ್ಟಾಲಿನ್ ಅಭಿಪ್ರಾಯ ಪಟ್ಟಿದ್ದಾರೆ.
ಸಂವಹನದಲ್ಲಿ ಭಾಷೆ ಪ್ರಧಾನ ಪಾತ್ರವಹಿಸುತ್ತದೆ ಎನ್ನುವುದರಲ್ಲಿ ಎರಡು ಮಾತಿಲ್ಲ. ‘ಎಲ್ಲರೂ ಒಂದೇ ಭಾಷೆಯಲ್ಲಿ ಮಾತನಾಡಿದಾಕ್ಷಣ ಒಂದಾಗುತ್ತಾರೆ’ ಎನ್ನುವುದು ಮಾತ್ರ ಅಸಂಬದ್ಧ. ಒಂದು ಭಾಷೆಯಲ್ಲಿ ನಾವು ಏನನ್ನು ಮಾತನಾಡಿದ್ದೇವೆ ಎನ್ನುವುದನ್ನು ಆಧರಿಸಿ ಮನಸ್ಸು, ಭಾವಗಳು ಒಂದಾಗುತ್ತವೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಅಮಿತ್ ಶಾ ಅವರು ಕರ್ನಾಟಕದ ಹಲವೆಡೆ ಹಿಂದಿಯಲ್ಲಿ ಆಡಿದ ಭಾಷಣ ‘ಜನರನ್ನು ಒಂದು ಗೂಡಿಸುವ ಬದಲು ಬೇರ್ಪಡಿಸಿತು’ ಎನ್ನುವ ಆರೋಪಗಳು ವ್ಯಾಪಕವಾಗಿವೆ. ಹಿಂದಿಯಲ್ಲೇ ಆಗಿರಲಿ, ಕನ್ನಡದಲ್ಲೇ ಆಗಿರಲಿ ನಾವು ಏನನ್ನು ಆಡುತ್ತೇವೆ ಎನ್ನುವುದರ ಆಧಾರದಲ್ಲಿ ಜನರು ಒಂದಾಗುತ್ತಾರೆಯೋ ಬೇರ್ಪಡುತ್ತಾರೆಯೋ ಎನ್ನುವುದನ್ನು ನಿರ್ಧರಿಸಬಹುದು. ಹಿಂದಿ ಗೊತ್ತಿಲ್ಲ ಎನ್ನುವ ಕಾರಣಕ್ಕಾಗಿ ದಕ್ಷಿಣ ಭಾರತೀಯರು ಮತ್ತು ಉತ್ತರ ಭಾರತೀಯರ ನಡುವೆ ಹೊಡೆ ಬಡಿ ಸಂಘರ್ಷಗಳೇನೂ ನಡೆಯುತ್ತಿಲ್ಲ. ದಕ್ಷಿಣ ಭಾರತದ ಜನರು ಕೂಡ ಪ್ರಧಾನಿಯಂತಹ, ರಾಷ್ಟ್ರಪತಿಯಂತಹ ಸ್ಥಾನಗಳನ್ನು ಅಲಂಕರಿಸಿದ್ದಾರೆ. ಭಾಷೆಗಳ ಗಡಿಯನ್ನು ಮೀರಿ ಕೊಡುಕೊಳ್ಳುವಿಕೆಗಳು ನಡೆಯುತ್ತಲೇ ಇವೆ. ಇದೇ ಸಂದರ್ಭದಲ್ಲಿ ಹಿಂದಿಯನ್ನೇ ಆಡುವ ಉತ್ತರ ಭಾರತವೇನೂ ಶಾಂತಿ, ಸೌಹಾರ್ದದ ನೆಲೆವೀಡಾಗಿ ಗುರುತಿಸಿಕೊಂಡಿಲ್ಲ. ಬೇರೆ ಬೇರೆ ಭಾಷೆಗಳನ್ನಾಡುವ, ವೈವಿಧ್ಯಮಯ ಸಂಸ್ಕೃತಿಯನ್ನೊಳಗೊಂಡಿರುವ ದಕ್ಷಿಣ ಭಾರತಕ್ಕಿಂತ ಹಿಂದಿ ಮಾತನಾಡುವ ಉತ್ತರ ಭಾರತದಲ್ಲೇ ಅತ್ಯಧಿಕ ಕೋಮುಗಲಭೆಗಳು, ಹತ್ಯಾಕಾಂಡಗಳು ನಡೆದಿವೆ ಎನ್ನುವುದನ್ನು ಅಂಕಿಅಂಶಗಳು ಹೇಳುತ್ತವೆ. ಹಿಂದಿಗೆ ಬೆಸೆಯುವ, ಒಗ್ಗೂಡಿಸುವ ಶಕ್ತಿಯಿದೆ ಎಂದಾಗಿದ್ದರೆ ಉತ್ತರ ಭಾರತದಲ್ಲಿ ನಡೆಯುತ್ತಿರುವ ಹಿಂಸಾಚಾರಗಳ ಬಗ್ಗೆ ದೇಶದ ಗೃಹ ಸಚಿವರೂ ಆಗಿರುವ ಅಮಿತ್ ಶಾ ಏನು ಹೇಳುತ್ತಾರೆ? ಇತ್ತೀಚೆಗೆ ಹರ್ಯಾಣದಲ್ಲಿ ನಡೆದ ಗಲಭೆ ಭಾಷೆಯ ಸಂವಹನದ ಕೊರತೆಯಿಂದಾಗಿರುವುದೆ? ಮಣಿಪುರದಲ್ಲಿ ಮೈತೈ ಸಮುದಾಯ ಕುಕಿ ಬುಡಕಟ್ಟು ಜನರ ವಿರುದ್ಧ ನಡೆಸುತ್ತಿರುವ ಹಿಂಸಾಚಾರ ಭಾಷೆಯ ಕಾರಣದಿಂದ ಸೃಷ್ಟಿಯಾಗಿರುವುದೆ? ಅಥವಾ ರಾಜಕೀಯ ಕಾರಣಗಳಿಂದಲೆ?
ಹಿಂದಿಯ ಮೂಲಕ ದೇಶವನ್ನು ಒಗ್ಗೂಡಿಸಲು ಹೊರಟಿರುವ ಅಮಿತ್ ಶಾ ಅವರು ದೇಶ ಒಗ್ಗೂಡಬೇಕು ಎನ್ನುವುದರ ಬಗ್ಗೆ ಎಷ್ಟರಮಟ್ಟಿಗೆ ಪ್ರಾಮಾಣಿಕರಾಗಿದ್ದಾರೆ? ಎನ್ನುವುದು ಇಲ್ಲಿ ಬಹಳ ಮುಖ್ಯವಾಗಿದೆ. ಹೋದಲ್ಲೆಲ್ಲ ಮನಸ್ಸುಗಳನ್ನು ಜಾತಿ, ಧರ್ಮಗಳ ಹೆಸರಿನಲ್ಲಿ ವಿಭಜಿಸುವ ಮಾತನಾಡುವ ಅಮಿತ್ ಶಾ ಅವರು ‘ಹಿಂದಿ’ಯ ಮೂಲಕ ದೇಶ ಒಗ್ಗೂಡಿಸುವ ಪ್ರಯತ್ನ ನಡೆಸುತ್ತಾರೆ ಎನ್ನುವುದನ್ನು ದೇಶ ಅದರಲ್ಲೂ ದಕ್ಷಿಣ ಭಾರತೀಯರು ಯಾಕೆ ನಂಬಬೇಕು? ಹಿಂದಿ ಭಾಷೆಯಲ್ಲಿ ಉತ್ತರ ಭಾರತದ ಹಲವು ನಾಯಕರು ಮಾಡುತ್ತಿರುವ ಪ್ರಚೋದನಕಾರಿ ಭಾಷಣಗಳನ್ನು ದಕ್ಷಿಣ ಭಾರತಕ್ಕೆ ತಲುಪಿಸುವುದಕ್ಕಾಗಿ ಇಲ್ಲಿನ ಜನರು ಹಿಂದಿಯನ್ನು ಕಲಿಯಬೇಕೆ? ಎಂದು ದಕ್ಷಿಣ ಭಾರತೀಯರು ಕೇಳುತ್ತಿದ್ದಾರೆ. ದೇಶವನ್ನು ಭಾಷೆಯ ಮೂಲಕ ಒಗ್ಗೂಡಿಸಲು ಸಾಧ್ಯವಿಲ್ಲ. ಆದರೆ ಅಭಿವೃದ್ಧಿಯ ಮೂಲಕ ಒಗ್ಗೂಡಿಸಲು ಸಾಧ್ಯವಿದೆ. ಹಿಂದಿ ಮಾತನಾಡುವ ರಾಜ್ಯಗಳು-ಮಾತನಾಡದ ರಾಜ್ಯಗಳು ಎನ್ನುವ ಕೀಳರಿಮೆ, ಅಸಹನೆಯನ್ನು ಮೊತ್ತ ಮೊದಲು ಅಮಿತ್ ಶಾರಂತಹ ಉತ್ತರ ಭಾರತದ ನಾಯಕರು ತೊರೆಯಬೇಕು. ಸಂಪನ್ಮೂಲಗಳ ಸಮಾನ ಹಂಚಿಕೆ, ಅಭಿವೃದ್ಧಿ ಮಾತ್ರ ಇಡೀ ದೇಶವನ್ನು ಒಂದು ತೆಕ್ಕೆಗೆ ತರಬಹುದು. ಯಾವ ರಾಜ್ಯಗಳು ಅಭಿವೃದ್ಧಿಯಲ್ಲಿ ಹಿಂದುಳಿಯುತ್ತದೆಯೋ ಅಲ್ಲಿ ದೇಶದ ವಿರುದ್ಧ ಅಸಹನೆಗಳು ಚಿಗುರೊಡೆಯುತ್ತವೆ. ಬಡತನ, ಅಪೌಷ್ಟಿಕತೆ, ಅನಕ್ಷರತೆ ಹೆಚ್ಚಿರುವಲ್ಲಿ ದೇಶ ವಿರೋಧಿ ಚಟುವಟಿಕೆಗಳು, ದಂಗೆಗಳು ನಡೆಯುತ್ತವೆ. ಉತ್ತರ ಭಾರತಕ್ಕೆ ಹೋಲಿಸಿದರೆ ದಕ್ಷಿಣ ಭಾರತ ಅಭಿವೃದ್ಧಿಯಲ್ಲಿ ಬಹಳಷ್ಟು ಮುಂದಿದೆ ಎನ್ನುವುದು ಈಗಾಗಲೇ ಬಹಿರಂಗವಾಗಿರುವ ಅಂಶ. ಐಟಿ, ಬಿಟಿ, ಆರೋಗ್ಯ ಕ್ಷೇತ್ರ, ಶಿಕ್ಷಣ, ಪೌಷ್ಟಿಕತೆ ಎಲ್ಲ ಕ್ಷೇತ್ರಗಳಲ್ಲೂ ದಕ್ಷಿಣ ಭಾರತ ಉತ್ತರ ಭಾರತಕ್ಕೆ ಮಾದರಿಯಾಗಿದೆ. ವೈದ್ಯಕೀಯ ಶಿಕ್ಷಣದಲ್ಲಿ ದಕ್ಷಿಣ ಭಾರತದ ಕಾಲೇಜುಗಳಲ್ಲಿ ಪಾಲು ಪಡೆಯುವುದಕ್ಕಾಗಿಯೇ ಕೇಂದ್ರ ಸರಕಾರ ನೀಟ್ನ್ನು ಜಾರಿಗೆ ತಂದಿತು. ಸಿನೆಮಾದಂತಹ ಸಾಂಸ್ಕೃತಿಕ ರಂಗದಲ್ಲಿ ವಿಶ್ವ ಮಟ್ಟದ ಸಾಧನೆಗಳನ್ನು ಮಾಡಿದವರು ದಕ್ಷಿಣ ಭಾರತದಲ್ಲಿದ್ದಾರೆ. ಆಸ್ಕರ್ನಂತಹ ಪ್ರಶಸ್ತಿಯನ್ನು ಪಡೆದು ದೇಶಕ್ಕೆ ಗೌರವವನ್ನು ತಂದುಕೊಟ್ಟವರು ದಕ್ಷಿಣ ಭಾರತೀಯರು. ಅತಿ ಹೆಚ್ಚು ಜ್ಞಾನಪೀಠ ಪ್ರಶಸ್ತಿಗಳನ್ನು ತನ್ನದಾಗಿಸಿಕೊಂಡ ಹೆಗ್ಗಳಿಕೆಯನ್ನು ಕರ್ನಾಟಕ ಹೊಂದಿದೆ. ಬಹುಶಃ ಈ ಎಲ್ಲ ಕಾರಣಗಳಿಂದಲೇ ಇರಬೇಕು, ದಕ್ಷಿಣ ಭಾರತದಲ್ಲಿರುವ ಶಾಂತಿ, ಸೌಹಾರ್ದವನ್ನು ನಾವು ಉತ್ತರ ಭಾರತದಲ್ಲಿ ಕಾಣಲು ಸಾಧ್ಯವಿಲ್ಲ. ತಮಿಳುನಾಡು, ಕೇರಳ, ಕರ್ನಾಟಕದಂತಹ ರಾಜ್ಯಗಳು ತನ್ನ ವೈವಿಧ್ಯಮಯ ಸಂಸ್ಕೃತಿಗಾಗಿಯೂ ವಿಶ್ವಮಟ್ಟದಲ್ಲಿ ಗುರುತಿಸಿಕೊಂಡಿದೆ.
ನಿಜಕ್ಕೂ ದಕ್ಷಿಣ ಭಾರತದ ಜೊತೆಗೆ ಅವಿನಾಭಾವ ಸಂಬಂಧವನ್ನು ಬೆಳೆಸುವ ಉದ್ದೇಶವಿದೆ ಎಂದಾದರೆ, ದಕ್ಷಿಣವನ್ನು ಉತ್ತರದ ಜೊತೆಗೆ ಬೆಸೆಯುವ, ಒಗ್ಗೂಡಿಸುವ ಕಳಕಳಿ ಹೊಂದಿದ್ದಾರಾದರೆ ಕೇಂದ್ರ ಸರಕಾರ ಉತ್ತರ ಭಾರತೀಯರಿಗೆ ದಕ್ಷಿಣ ಭಾರತದ ಒಂದು ಭಾಷೆಯನ್ನು ಪಠ್ಯ ಕ್ರಮದಲ್ಲಿ ಕಡ್ಡಾಯವಾಗಿಸಬೇಕು. ತೆಲುಗು, ಕನ್ನಡ, ಮಲಯಾಳಂ, ತುಳು ಇವುಗಳಲ್ಲಿ ಒಂದು ಭಾಷೆಯನ್ನು ಅಥವಾ ಎಲ್ಲವನ್ನು ಲಿಪಿಯ ಸಹಿತ ಕಲಿಸಲು ಉತ್ತರ ಭಾರತದಲ್ಲಿರುವ ಎಲ್ಲ ಶಾಲೆಗಳಲ್ಲೂ ಪ್ರಾಥಮಿಕ ಹಂತದಲ್ಲಿ ಕ್ರಮ ತೆಗೆದುಕೊಳ್ಳಬೇಕು. ಎಲ್ಲ ವಿಶ್ವವಿದ್ಯಾನಿಲಯಗಳಲ್ಲಿ ದ್ರಾವಿಡ ಭಾಷೆಗಳ ಪೀಠವನ್ನು ಸ್ಥಾಪಿಸಬೇಕು. ದಕ್ಷಿಣ ಭಾರತ ಈಗಾಗಲೇ ಹಿಂದಿಯನ್ನು ಪಠ್ಯ ಕ್ರಮವಾಗಿ ಶಾಲೆಗಳಲ್ಲಿ ಕಲಿಸುತ್ತಿರುವುದು ಹೊಸ ಕ್ರಮದ ಅಗತ್ಯವಿಲ್ಲ. ಅಷ್ಟೇ ಅಲ್ಲ, ದಕ್ಷಿಣ ಭಾರತೀಯರು ಹಿಂದಿ ಹೇರಿಕೆಯನ್ನು ವಿರೋಧಿಸುತ್ತಿದ್ದಾರೆಯೇ ಹೊರತು ಹಿಂದಿ ಭಾಷೆಯನ್ನಲ್ಲ. ದಕ್ಷಿಣ ಭಾರತದ ಖ್ಯಾತ ಕಲಾವಿದರು, ಲೇಖಕರು ಹಿಂದಿ ಭಾಷೆಯಲ್ಲೂ ಸಾಧನೆಗಳನ್ನು ಮಾಡಿದ್ದಾರೆ. ಆದುದರಿಂದ ಹಿಂದಿ ಭಾಷೆಯ ಬಗ್ಗೆ ದಕ್ಷಿಣ ಭಾರತೀಯರಿಗೆ ಅದರಲ್ಲೂ ಕನ್ನಡಿಗರಿಗೆ ಅಮಿತ್ ಶಾ ಉಪದೇಶ ಮಾಡುವುದನ್ನು ನಿಲ್ಲಿಸಬೇಕು. ಹಿಂದಿ ಭಾಷಿಗರು ಯಾವ ಯಾವ ರಾಜ್ಯಗಳಲ್ಲಿ ವೃತ್ತಿಯನ್ನು ನಿರ್ವಹಿಸುತ್ತಿದ್ದಾರೆಯೋ ಆ ರಾಜ್ಯಗಳ ಭಾಷೆಗಳನ್ನು ತಮ್ಮದಾಗಿಸಿಕೊಳ್ಳುವ ಮೂಲಕ ದೇಶದ ಒಗ್ಗೂಡುವಿಕೆಗೆ ಕೊಡುಗೆಯನ್ನು ನೀಡಲು ಅಮಿತ್ ಶಾ ಅವರು ಕರೆ ನೀಡಬೇಕು. ಎಲ್ಲಕ್ಕಿಂತ ಮುಖ್ಯವಾಗಿ ದಕ್ಷಿಣ ಭಾರತದ ಯಾವುದಾದರೊಂದು ಭಾಷೆಯನ್ನು ಕಲಿಯುವ ಮೂಲಕ ಅಮಿತ್ ಶಾ ಅವರು ದೇಶವನ್ನು ಒಗ್ಗೂಡಿಸಲು ಇತರರಿಗೆ ಮಾದರಿಯಾಗಬೇಕು. ಜೊತೆಗೆ ಯಾವ ಭಾಷೆಯಲ್ಲೇ ಮಾತನಾಡಲಿ, ಮನಸ್ಸನ್ನು ಬೆಸೆಯುವ, ಸೌಹಾರ್ದದ ಮಾತುಗಳನ್ನಾಡಲು ತನ್ನ ಪಕ್ಷದ ಕಾರ್ಯಕರ್ತರಿಗೆ ಆದೇಶವನ್ನು ನೀಡಬೇಕು.