ಯಾವ ಮುಖ ಹೊತ್ತು ಜನರ ಬಳಿ ಹೋಗುತ್ತೀರಿ?
ವಿಡಿಯೋ ವಾರ್ತಾಭಾರತಿ ಯೂಟ್ಯೂಬ್ ಚಾನಲ್ ನಲ್ಲಿ ವೀಕ್ಷಿಸಿ : ಲಿಂಕ್ ಕಮೆಂಟ್ ಬಾಕ್ಸ್ ನಲ್ಲಿ ಇದೆ
ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕರ್ನಾಟಕದ ಜನರಿಂದ ತಿರಸ್ಕರಿಸಲ್ಪಟ್ಟ ಬಿಜೆಪಿ ನಾಯಕರಿಗೆ ಇನ್ನೂ ಬುದ್ಧಿ ಬಂದಿಲ್ಲ. ಮತದಾರರು ತಮ್ಮನ್ನು ಯಾಕೆ ತಿರಸ್ಕರಿಸಿದರು? ತಾವು ಮಾಡಿದ ತಪ್ಪೇನು? ಎಂಬುದರ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳುವ ಪ್ರಾಮಾಣಿಕತೆಯೂ ಇಲ್ಲದ ಇವರು ಈಗ ರಾಜ್ಯ ಕಾಂಗ್ರೆಸ್ ಸರಕಾರದ ವಿರುದ್ಧ ಹೋರಾಟ ಮಾಡಲು ಗಣೇಶ ಚತುರ್ಥಿ ಬಳಿಕ ರಾಜ್ಯಾದ್ಯಂತ ಪ್ರವಾಸ ಮಾಡುತ್ತಾರಂತೆ. ವಿಧಾನಸಭಾ ಚುನಾವಣೆ ನಡೆದು ನಾಲ್ಕು ತಿಂಗಳು ಗತಿಸಿದ ನಂತರವೂ ವಿಧಾನಸಭೆಯಲ್ಲಿ ಪ್ರತಿಪಕ್ಷದ ನಾಯಕನನ್ನು ಆಯ್ಕೆ ಮಾಡಿಕೊಳ್ಳಲಾಗದವರು ಜನರ ಬಳಿ ಹೋಗಿ ಏನು ಹೇಳುತ್ತಾರೆ? ಮುಖ್ಯಮಂತ್ರಿ ಸ್ಥಾನಕ್ಕೆ ಬಲವಂತವಾಗಿ ರಾಜೀನಾಮೆ ಕೊಡಿಸಲಾಗಿದ್ದ ಯಡಿಯೂರಪ್ಪನವರನ್ನು ಮುಂದಿಟ್ಟುಕೊಂಡು ಜನರ ಬಳಿ ಹೊರಟ ಬಿಜೆಪಿ ನಾಯಕರು ಜನರ ಪ್ರಶ್ನೆಗಳಿಗೆ ಮೊದಲು ಉತ್ತರ ಕೊಡಬೇಕಾಗಿದೆ.
ಮುಂದಿನ ವರ್ಷ ಲೋಕಸಭಾ ಚುನಾವಣೆ ನಡೆಯಲಿರುವುದರಿಂದ ರಾಜ್ಯದಲ್ಲಿ ೨೮ ಸ್ಥಾನಗಳನ್ನು ಗೆಲ್ಲುವ ಗುರಿಯನ್ನಿಟ್ಟುಕೊಂಡ ಕರ್ನಾಟಕ ಯಾತ್ರೆ ಹೊರಟಿರುವ ಬಿಜೆಪಿ ನಾಯಕರು ರಾಜ್ಯದಲ್ಲಿ ತಾವು ಅಧಿಕಾರದಲ್ಲಿ ಇದ್ದಾಗ ಮಾಡಿದ ಸಾಧನೆ ಏನು? ಆಗ ನಡೆದ ಶೇ. ೪೦ ಕಮಿಶನ್ ಹಗರಣ, ಪಿ.ಎಸ್.ಐ. ನೇಮಕಾತಿ ಹಗರಣ, ಮುಂತಾದವುಗಳ ಬಗ್ಗೆ ಜನರಿಗೆ ಉತ್ತರ ನೀಡಬೇಕಾಗಿದೆ. ಅದು ಹೋಗಲಿ ತೀರಾ ಈಚೆಗೆ ನಡೆದ ಚೈತ್ರಾ ಕುಂದಾಪುರ ಬಾನಗಡಿ, ಬಿಜೆಪಿ ಟಿಕೆಟ್ ಕೊಡಿಸುವುದಾಗಿ ಗೋವಿಂದ ಬಾಬು ಪೂಜಾರಿ ಎಂಬ ಉದ್ಯಮಿಯಿಂದ ಕೋಟ್ಯಂತರ ರೂಪಾಯಿ ದೋಚಿದ ಪ್ರಕರಣ, ಇವುಗಳ ಬಗ್ಗೆ ಬಿಜೆಪಿ ನಾಯಕರು ಜನರಿಗೆ ಯಾಕೆ ಸಮಜಾಯಿಷಿ ನೀಡಬೇಕೆಂದರೆ ಪ್ರತೀ ಚುನಾವಣೆ ಸಂದರ್ಭದಲ್ಲಿ ಇದೇ ಚೈತ್ರಾ ಕುಂದಾಪುರರಂತಹವರನ್ನು ಕೋಮು ಪ್ರಚೋದಕ ಭಾಷಣಕ್ಕೆ ಆಹ್ವಾನಿಸಿ ರಾಜಕೀಯ ಲಾಭ ಮಾಡಿಕೊಂಡವರು ಬಿಜೆಪಿ ನಾಯಕರು. ಈ ಪ್ರಕರಣದಲ್ಲಿ ದೊಡ್ಡ ನಾಯಕರೂ ಇದ್ದಾರೆ ಎಂಬ ಚೈತ್ರಾ ಹೇಳಿಕೆಗೆ ಉತ್ತರ ನೀಡಿ ಬಿಜೆಪಿ ನಾಯಕರು ಜನರಿಗೆ ಮುಖ ತೋರಿಸಲಿ.
ವಿಧಾನಸಭಾ ಚುನಾವಣೆ ನಡೆದು ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗಿನಿಂದ ಕಳೆದುಕೊಂಡ ಕುರ್ಚಿಗಾಗಿ ಒದ್ದಾಡುತ್ತಿರುವ ಬಿಜೆಪಿ ನಾಯಕರು ಮೊದಲು ಗ್ಯಾರಂಟಿ ಯೋಜನೆಯನ್ನು ವಿರೋಧಿಸಿದರು. ನಂತರ ಗ್ಯಾರಂಟಿ ಯೋಜನೆಯನ್ನು ತಕ್ಷಣ ಜಾರಿಗೆ ತರಲು ಚಳವಳಿ ಎಂಬ ಬೀದಿ ಪ್ರಹಸನ ನಡೆಸಿದರು. ಈಗ ಕರ್ನಾಟಕ ಪ್ರವಾಸ ಹೊರಟಿದ್ದಾರೆ. ಈ ಹಿನ್ನೆಲೆಯಲ್ಲಿ ಕೋಲಾರ ಜಿಲ್ಲೆಯ ಮುಳಬಾಗಿಲು ತಾಲೂಕಿನ ಕುರುಡುಮಲೆ ಗಣಪತಿ ದೇಗುಲದ ಎದುರು ಪ್ರಧಾನಿ ನರೇಂದ್ರ ಮೋದಿಯವರ ಜನ್ಮದಿನದ ಅಂಗವಾಗಿ ಯಡಿಯೂರಪ್ಪ ಅವರಿಗೆ ಈಶ್ವರಪ್ಪ ಕೇಕ್ ತಿನ್ನಿಸಿ ರಾಜ್ಯ ಪ್ರವಾಸದ ವಿವರಗಳನ್ನು ಪ್ರಕಟಿಸಿದ್ದಾರೆ. ಈ ಕಾರ್ಯಕ್ರಮದಲ್ಲಿ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಬಸನಗೌಡ ಪಾಟೀಲ್ ಯತ್ನಾಳ್ ಪಾಲ್ಗೊಂಡಿಲ್ಲ ಎಂಬುದು ಗಮನಾರ್ಹ ಸಂಗತಿಯಾಗಿದೆ.
ರಾಜ್ಯದಲ್ಲಿ ಭೀಕರ ಬರಗಾಲ ಆವರಿಸಿದೆ, ಕುಡಿಯುವ ನೀರಿಗೆ ಹಾಹಾಕಾರ ಉಂಟಾಗಿದೆ. ಸಿದ್ದರಾಮಯ್ಯನವರ ನೇತೃತ್ವದ ಕಾಂಗ್ರೆಸ್ ಸರಕಾರ ರಾಜ್ಯದ ಹಿತವನ್ನು ಸಂಪೂರ್ಣ ಮರೆತಿದೆ ಎಂಬುದು ಬಿಜೆಪಿ ನಾಯಕರ ಆರೋಪವಾಗಿದೆ. ನಿಜ ರಾಜ್ಯದಲ್ಲಿ ಬರ ಪರಿಸ್ಥಿತಿ ಇದೆ. ಇಂತಹ ಸಂದರ್ಭದಲ್ಲಿ ಕೇಂದ್ರ ಸರಕಾರ ನೆರವಿಗೆ ಬರಬೇಕು. ರಾಜ್ಯದ ೨೫ ಮಂದಿ ಬಿಜೆಪಿ ಸಂಸದರು ತಮ್ಮದೇ ಆದ ಕೇಂದ್ರ ಸರಕಾರದ ಮೇಲೆ ಒತ್ತಡ ತಂದು ಕರ್ನಾಟಕದ ನೆರವಿಗೆ ಬರುವಂತೆ ಮಾಡಲಿ. ರಾಜ್ಯದ ಕೃಷ್ಣಾ ಮೇಲ್ದಂಡೆ ಯೋಜನೆ, ಮಹಾದಾಯಿ ಯೋಜನೆ, ಮೇಕೆದಾಟು ಯೋಜನೆಗಳಿಗೆ ಸಂಬಂಧಿಸಿದಂತೆ ಎದುರಾಗಿರುವ ಸಮಸ್ಯೆಗಳ ಬಗ್ಗೆ ಚರ್ಚಿಸಲು ಪ್ರಧಾನಿ ನರೇಂದ್ರ ಮೋದಿಯವರ ಭೇಟಿಗಾಗಿ ರಾಜ್ಯ ಸರಕಾರ ಪದೇ, ಪದೇ ಮನವಿ ಮಾಡಿದರೂ ಚರ್ಚೆಗೆ ಸಮಯ ಕೊಡದ ಪ್ರಧಾನಿ ನಡೆಯ ಬಗ್ಗೆ ರಾಜ್ಯ ಬಿಜೆಪಿ ನಾಯಕರ ಉತ್ತರವೇನು?
ಬಿಜೆಪಿ ನಾಯಕರು ಜನರ ಬಳಿ ಹೋಗುವ ಮುನ್ನ ತಾವು ಹಿಂದಿನ ಚುನಾವಣೆಯಲ್ಲಿ ಜನತೆಗೆ ನೀಡಿದ ಭರವಸೆಗಳನ್ನು ಎಷ್ಟರ ಮಟ್ಟಿಗೆ ಜಾರಿಗೆ ತಂದಿದ್ದಾರೆ ಎಂಬುದನ್ನು ವಿವರಿಸಲಿ. ಆಪರೇಶನ್ ಕಮಲದ ಮೂಲಕ ಅಧಿಕಾರ ಹಿಡಿದು ಕೋವಿಡ್ ಸಮಯದಲ್ಲಿ ನಾನಾ ಹಗರಣಗಳನ್ನು ಮಾಡಿ ಅದನ್ನು ಮುಚ್ಚಿ ಕೊಳ್ಳಲು ಜನರನ್ನು ಕೋಮು ಆಧಾರದಲ್ಲಿ ವಿಭಜಿಸಲು ಹಿಜಾಬ್, ಲವ್ ಜಿಹಾದ್, ಮುಸ್ಲಿಮ್ ವ್ಯಾಪಾರಸ್ಥರಿಗೆ ನಿರ್ಬಂಧದಂಥ ಪ್ರಚೋದನಕಾರಿ ಚಟುವಟಿಕೆಗಳನ್ನು ಸರಕಾರದ ಮೂಲಕವೇ ನಡೆಸಿದ್ದನ್ನು ರಾಜ್ಯದ ಜನರು ಮರೆತಿಲ್ಲ.
ಈಗ ಕರ್ನಾಟಕ ಪ್ರವಾಸ ಹೊರಟಿರುವ ಬಿಜೆಪಿ ನಾಯಕರು ತಮ್ಮ ಪಕ್ಷದ ಕೇಂದ್ರ ಸರಕಾರದ ಸಾಧನೆಗಳೇನು ಎಂಬುದನ್ನು ವಿವರಿಸುವರೇ? ವರ್ಷಕ್ಕೆ ಎರಡು ಕೋಟಿ ಉದ್ಯೋಗ ಸೃಷ್ಟಿಯ ಭರವಸೆ ಏನಾಯಿತು? ಜೀವನಾವಶ್ಯಕ ಪದಾರ್ಥಗಳ ಬೆಲೆಗಳನ್ನು ಯಾಕೆ ನಿಯಂತ್ರಿಸಲಿಲ್ಲ? ಅಡುಗೆ ಅನಿಲದ ಬೆಲೆ ೨೦೧೪ರಲ್ಲಿ ೪೦೦ ರೂ. ಇದ್ದುದು ಒಮ್ಮೆಲೇ ಒಂದು ಸಾವಿರ ರೂಪಾಯಿ ಆಗಲು ಕಾರಣವೇನು.? ಈಗ ಲೋಕಸಭಾ ಚುನಾವಣೆ ಬಂದಿದೆಯೆಂದು ೨೦೦ ರೂ. ಬೆಲೆ ಇಳಿಸುವ ನಾಟಕವಾಡಿದರೆ ಜನರು ನಂಬುವುದಿಲ್ಲ.
ಕರ್ನಾಟಕ ಪ್ರವಾಸ ಮಾಡುವ ಮುನ್ನ ಬಿಜೆಪಿ ನಾಯಕರು ತಮ್ಮ ತಪ್ಪುಗಳನ್ನು ಪ್ರಾಂಜಲ ಮನಸ್ಸಿನಿಂದ ಜನರ ಬಳಿ ಒಪ್ಪಿಕೊಳ್ಳಲಿ. ಚೈತ್ರಾ ಕುಂದಾಪುರಗೂ ತಮಗೂ ಸಂಬಂಧವಿಲ್ಲ ಎಂದು ಹಾರಿಕೆಯ ಉತ್ತರ ನೀಡಿದರೆ ಸಾಲದು, ಆಕೆಯನ್ನು ಯಾರ್ಯಾರು ಚುನಾವಣಾ ಪ್ರಚಾರಕ್ಕೆ ಬಳಸಿಕೊಂಡರು ಎಂಬುದನ್ನು ಜನರ ಬಳಿ ವಿವರಿಸಲಿ. ಬರೀ ಕಾಂಗ್ರೆಸ್ ಸರಕಾರವನ್ನು ಟೀಕಿಸುವುದರಿಂದ ಜನರ ಒಲವು ಗಳಿಸಿಕೊಳ್ಳಲು ಸಾಧ್ಯವಿಲ್ಲ.
ಎಲ್ಲಕ್ಕಿಂತ ಮುಖ್ಯವಾಗಿ ಬಿಜೆಪಿ ನಾಯಕರು ಸಿದ್ದರಾಮಯ್ಯನವರ ನೇತೃತ್ವದ ಕಾಂಗ್ರೆಸ್ ಸರಕಾರದ ಗೃಹ ಜ್ಯೋತಿ, ಶಕ್ತಿ, ಗೃಹ ಲಕ್ಷ್ಮಿ ಮುಂತಾದ ಗ್ಯಾರಂಟಿ ಯೋಜನೆಗಳನ್ನು ವಿರೋಧಿಸುವರೋ ಇಲ್ಲ ಒಪ್ಪುವರೋ ಎಂಬುದನ್ನು ಸ್ಪಷ್ಟವಾಗಿ ತಿಳಿಸಲಿ. ಕಾಂಗ್ರೆಸ್ ಸರಕಾರ ಬಂದ ನಂತರ ಜಾರಿಗೆ ತಂದ ಈ ಗ್ಯಾರಂಟಿ ಯೋಜನೆಗಳನ್ನು ಬಹಿರಂಗವಾಗಿ ವಿರೋಧಿಸುವ ನೈತಿಕತೆ ಬಿಜೆಪಿ ನಾಯಕರಿಗೆ ಇದೆಯೇ?