ಅತ್ಯಾಚಾರಗಳಿಗೆ ಕುಖ್ಯಾತವಾಗುತ್ತಿರುವ ಭಾರತ
ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ
ದೇಶ ಮಹಿಳಾ ದಿನದ ಶುಭಾಶಯಗಳನ್ನು ಹಂಚಿಕೊಳ್ಳುತ್ತಿರುವಾಗಲೇ, ಉತ್ತರ ಪ್ರದೇಶದ ಕಾನ್ಪುರದಲ್ಲಿ ಅತ್ಯಾಚಾರಕ್ಕೊಳಗಾಗಿರುವ ದಲಿತ ಸಮುದಾಯದ ಇಬ್ಬರು ಮಹಿಳೆಯರು ಆತ್ಮಹತ್ಯೆ ಮಾಡಿಕೊಂಡಿರುವ ಪ್ರಕರಣ ಬೆಳಕಿಗೆ ಬಂದಿದೆ. ಮೊತ್ತ ಮೊದಲು ಈ ಇಬ್ಬರು ಮಹಿಳೆಯರ ಮೇಲೆ ಮೇಲ್ಜಾತಿಯ ಜನರಿಂದ ಅತ್ಯಾಚಾರ ನಡೆದಿತ್ತು. ಇದು ಸುದ್ದಿಯಾಗುತ್ತಿದ್ದಂತೆಯೇ ಇವರ ಮೃತದೇಹ ಆತ್ಮಹತ್ಯೆ ಮಾಡಿಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿದೆ. ದುರಂತ ಇಲ್ಲಿಗೇ ಮುಗಿಯುವುದಿಲ್ಲ. ತನ್ನ ಮಕ್ಕಳಿಗಾಗಿರುವ ಅನ್ಯಾಯವನ್ನು ವಿರೋಧಿಸಿ ನ್ಯಾಯಕ್ಕಾಗಿ ಒತ್ತಾಯಿಸಿದ ತಂದೆಯೂ ಬಳಿಕ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ತರುಣಿಯರದು ಆತ್ಮಹತ್ಯೆಯೋ ಅಥವಾ ಕೃತ್ಯವನ್ನು ಬಹಿರಂಗ ಪಡಿಸಿದ್ದಕ್ಕಾಗಿ ಆರೋಪಿಗಳು ಅವರನ್ನು ಕೊಂದು ಹಾಕಿದರೋ ಎನ್ನುವುದು ತನಿಖೆಯಿಂದಷ್ಟೇ ಬೆಳಕಿಗೆ ಬರಬೇಕು. ಅತ್ಯಾಚಾರವನ್ನು ಒಪ್ಪಿಕೊಂಡು ಬಾಯಿ ತೆರೆಯದೇ ಇದ್ದಿದ್ದರೆ ಆ ತರುಣಿಯರು ಮತ್ತು ಅವರ ತಂದೆ ಬದುಕುತ್ತಿದ್ದರೋ ಏನೋ. ಅದರ ವಿರುದ್ಧ ಧ್ವನಿಯೆತ್ತಿದ ಕಾರಣಕ್ಕಾಗಿ ಅವರೆಲ್ಲರೂ ಪ್ರಾಣವನ್ನು ಕಳೆದುಕೊಳ್ಳಬೇಕಾಯಿತು. ಇದೀಗ ಇಡೀ ಪ್ರಕರಣವನ್ನು ರಾಜಿಯಲ್ಲಿ ಮುಗಿಸಬೇಕು ಎಂದು ಕುಟುಂಬದ ಮೇಲೆ ಒತ್ತಡಗಳನ್ನು ಹೇರಲಾಗುತ್ತಿದೆ. ಇಂತಹ ಪ್ರಕರಣಗಳು ಉತ್ತರ ಪ್ರದೇಶಕ್ಕೆ ಹೊಸತೇನೂ ಅಲ್ಲ. ಹಾಥರಸ್, ಉನ್ನಾವ ಪ್ರಕರಣಗಳ ಮುಂದುವರಿದ ಭಾಗ ಇದಾಗಿದೆ. ಈ ಹಿಂದೆ ಹಾಥರಸ್ನಲ್ಲಿ ದಲಿತ ಮಹಿಳೆಯ ಅತ್ಯಾಚಾರ, ಕೊಲೆ ಪ್ರಕರಣ ಯಾವೆಲ್ಲ ತಿರುವುಗಳನ್ನು ಪಡೆದುಕೊಂಡಿತ್ತು ಎನ್ನುವುದನ್ನು ದೇಶ ಕಂಡಿದೆ. ಸಂತ್ರಸ್ತರಿಗೆ ರಕ್ಷಣೆ ನೀಡಬೇಕಾಗಿದ್ದ ಜಿಲ್ಲಾಡಳಿತ, ಆರೋಪಿಗಳ ಬೆನ್ನಿಗೆ ನಿಂತಿತು. ದೂರುಕೊಟ್ಟ ಕುಟುಂಬ ಜೀವಭಯದಿಂದ ಕಾಲ ಕಳೆಯುವಂತಾಯಿತು. ಅವರನ್ನು ಪತ್ರಕರ್ತರು, ರಾಜಕೀಯ ನಾಯಕರು ಭೇಟಿ ಮಾಡದಂತೆ ಪೊಲೀಸ್ ಸರ್ಪಗಾವಲನ್ನು ಹಾಕಲಾಯಿತು. ವರದಿ ಮಾಡಲೆಂದು ಹೋದ ಕೇರಳದ ಪತ್ರಕರ್ತರು ದೇಶದ್ರೋಹದ ಆರೋಪದಲ್ಲಿ ಎರಡು ವರ್ಷ ಜೈಲಿನಲ್ಲಿ ಕಳೆಯಬೇಕಾಯಿತು. ಉನ್ನಾವ ಪ್ರಕರಣದಲ್ಲೂ ಅತ್ಯಾಚಾರ ಸಂತ್ರಸ್ತ ಕುಟುಂಬ ನ್ಯಾಯ ಪಡೆಯಲು ಹೊರಟು ಸರಣಿ ಅನ್ಯಾಯಗಳನ್ನು ಎದುರಿಸಬೇಕಾಯಿತು. ಸಂತ್ರಸ್ತೆಯ ಕುಟುಂಬ ಸದಸ್ಯರು ಕೊಲೆಗೀಡಾದರು. ಇದೀಗ ಕಾನ್ಪುರದಲ್ಲಿ ಮತ್ತೆ ಅದೇ ಸರಣಿ ಅನ್ಯಾಯ ಮುಂದುವರಿದಿದೆ. ಅನ್ಯಾಯಕ್ಕೊಳಗಾದ ಕುಟುಂಬ ನ್ಯಾಯ ಕೇಳಲು ಹೋಗಿ ಸಾಮೂಹಿಕವಾಗಿ ಆತ್ಮಹತ್ಯೆ ಮಾಡಿಕೊಂಡಿದೆ.
ಇಂತಹದೇ ಇನ್ನೊಂದು ಪ್ರಕರಣ ಬಿಜೆಪಿ ಆಡಳಿತದಲ್ಲಿರುವ ಮಧ್ಯ ಪ್ರದೇಶದಲ್ಲಿ ನಡೆದಿದೆ. ಮಹಿಳೆಯ ಮೇಲೆ ನಡೆದ ದೌರ್ಜನ್ಯವನ್ನು ವಿರೋಧಿಸಿ ಆಕೆಯ ಪತಿ ದೂರು ಸಲ್ಲಿಸಿದ್ದಾರೆ. ಆದರೆ ನ್ಯಾಯ ಸಿಗುವುದಿರಲಿ, ಬಾಹ್ಯ ಒತ್ತಡಕ್ಕೆ ತತ್ತರಿಸಿ ತನ್ನ ಇಬ್ಬರು ಮಕ್ಕಳೊಂದಿಗೆ ಆತ ಆತ್ಮಹತ್ಯೆ ಮಾಡಿಕೊಳ್ಳಬೇಕಾದ ಸ್ಥಿತಿ ನಿರ್ಮಾಣವಾಯಿತು. ಬಿಜೆಪಿ ಆಡಳಿತದಲ್ಲಿರುವ ಸರಕಾರದ ‘ಬುಲ್ಡೋಜರ್ ನ್ಯಾಯ’ ದಲಿತ ಸಂತ್ರಸ್ತ ಕುಟುಂಬಕ್ಕೆ ಸಿಗುವುದಿಲ್ಲ. ಬದಲಿಗೆ ನ್ಯಾಯ ಕೇಳಿದ ದಲಿತ ಕುಟುಂಬವನ್ನೇ ಬುಲ್ಡೋಜರ್ನಿಂದ ಧ್ವಂಸಗೈಯಲಾಗುತ್ತದೆ. ಸಂಘಪರಿವಾರದ ಸದಸ್ಯರು ಸಾಮಾಜಿಕ ಜಾಲತಾಣಗಳಲ್ಲಿ ಆದಿತ್ಯನಾಥ ಸರಕಾರದ ‘ಬುಲ್ಡೋಜರ್ ನ್ಯಾಯ’ವನ್ನು ಮೆಚ್ಚಿ ಸ್ಟೇಟಸ್ಗಳನ್ನು ಹಾಕುವುದಿದೆ. ದುರದೃಷ್ಟವಶಾತ್ ಇಂದು ದೇಶದಲ್ಲೇ ಮಹಿಳಾ ದೌರ್ಜನ್ಯಗಳಿಗಾಗಿ ಉತ್ತರ ಪ್ರದೇಶ ಕುಖ್ಯಾತಿಯನ್ನು ಪಡೆದಿದೆ. ದಲಿತ ಮಹಿಳೆಯರ ಮೇಲೆ ನಡೆಯುವ ಅತ್ಯಾಚಾರಗಳಿಗಾಗಿಯೂ ಉತ್ತರ ಪ್ರದೇಶ ಅಗ್ರಸ್ಥಾನವನ್ನು ಪಡೆದಿದೆ. ದಲಿತರ ಮೇಲೆ ದೌರ್ಜನ್ಯ ಎಸಗಿದ ಯಾವುದೇ ಆರೋಪಿಯ ಮೇಲೆ ಆದಿತ್ಯನಾಥ್ ಸರಕಾರ ಬುಲ್ಡೋಜರ್ ಪ್ರಯೋಗ ಮಾಡಿದ ಉದಾಹರಣೆಗಳಿಲ್ಲ. ಉತ್ತರ ಪ್ರದೇಶದಲ್ಲಿ ದಲಿತರು ನ್ಯಾಯ ಕೇಳುವುದೇ ಅಪರಾಧ ಎನ್ನುವ ಸ್ಥಿತಿ ನಿರ್ಮಾಣವಾಗಿದೆ. ದಲಿತರ ಪರವಾಗಿ ಪತ್ರಕರ್ತರು ಮಾತನಾಡುವುದು ದೇಶದ್ರೋಹ ಎನ್ನುವ ಅಲಿಖಿತ ಕಾನೂನು ಜಾರಿಯಲ್ಲಿದೆ.
ಮಹಿಳೆಯರ ಪಾಲಿಗೆ ಭಾರತ ಅತ್ಯಂತ ಅಪಾಯಕಾರಿ ದೇಶವೆಂದು ಗುರುತಿಸಲ್ಪಟ್ಟಿದೆ.ನೇರವಾಗಿ ಮತ್ತು ಪರೋಕ್ಷವಾಗಿ ಆಕೆಯ ಮೇಲೆ ನಡೆಯುತ್ತಿರುವ ದೌರ್ಜನ್ಯಗಳನ್ನು ಗುರುತಿಸಿ ಅದರ ಆಧಾರದಲ್ಲಿ ಭಾರತಕ್ಕೆ ಈ ‘ಗೌರವ’ವನ್ನು ನೀಡಲಾಗಿದೆ. ಮೋದಿ ಭಾರತದಲ್ಲಿ ಮಹಿಳೆಯರ ಮೇಲೆ ನೇರವಾಗಿ ನಡೆಯುವ ಹಲ್ಲೆ, ಅತ್ಯಾಚಾರ, ದೌರ್ಜನ್ಯಗಳು ಹೆಚ್ಚಾಗಿರುವುದನ್ನು ಸರಕಾರಿ ಅಂಕಿಅಂಶಗಳು ಹೇಳುತ್ತಿವೆ. ಇತ್ತೀಚೆಗೆ ಜಾರ್ಖಂಡ್ನಲ್ಲಿ ವಿದೇಶಿ ಮಹಿಳೆಯ ಮೇಲೆ ನಡೆದ ಅತ್ಯಾಚಾರ ಭಾರತದ ವರ್ಚಸ್ಸನ್ನು ಅಂತರ್ರಾಷ್ಟ್ರೀಯ ಮಟ್ಟದಲ್ಲಿ ಕುಗ್ಗಿಸಿದೆ. ಸ್ಪಾನಿಶ್ ಮಹಿಳೆಯೊಬ್ಬಳು ತನ್ನ ಪತಿಯ ಜೊತೆಗೆ ಹಲವು ದೇಶಗಳನ್ನು ಸುತ್ತಾಡಿ ಭಾರತಕ್ಕೆ ಬಂದಿದ್ದಳು. ಅದಾಗಲೇ ಆಕೆ ಪಾಕಿಸ್ತಾನ, ಬಾಂಗ್ಲಾ ದೇಶಗಳ ಪ್ರವಾಸವನ್ನೂ ಯಶಸ್ವಿಯಾಗಿ ಮುಗಿಸಿದ್ದಳು. ಆದರೆ ಹೆಣ್ಣನ್ನು ‘ಪೂಜನೀಯಳು’ ಎಂದು ಆರಾಧಿಸುವ ಭಾರತದಲ್ಲಿ ಆಕೆಗೆ ಭಾರೀ ಆಘಾತ ಎದುರಾಗಿತ್ತು. ಜಾರ್ಖಂಡ್ನಲ್ಲಿ ಆಕೆಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆಯಿತು. ಮಹಿಳೆಯರ ಮೇಲಿನ ದೌರ್ಜನ್ಯದಲ್ಲಿ ಕರ್ನಾಟಕವೇನೂ ಕಡಿಮೆಯಿಲ್ಲ. ಇತ್ತೀಚೆಗೆ ದಕ್ಷಿಣ ಕನ್ನಡ ಜಿಲ್ಲೆಯ ಗ್ರಾಮೀಣ ಪ್ರದೇಶವೊಂದರಲ್ಲಿ ಮೂವರು ವಿದ್ಯಾರ್ಥಿನಿಯರ ಮೇಲೆ ಯುವಕನೊಬ್ಬ ಆ್ಯಸಿಡ್ ದಾಳಿ ನಡೆಸಿದ ಘಟನೆ ವರದಿಯಾಗಿತ್ತು. ಮಹಿಳೆಯ ಮೇಲೆ ನಡೆಯುವ ಆ್ಯಸಿಡ್ ದಾಳಿ ಯಾವುದೇ ಅತ್ಯಾಚಾರಕ್ಕಿಂತ ಕಡಿಮೆಯಿಲ್ಲ. ಅಲ್ಲಿಯೂ ಮಹಿಳೆಯ ವ್ಯಕ್ತಿತ್ವದ ಮೇಲೆಯೇ ದಾಳಿ ನಡೆಯುತ್ತದೆ. ಆ್ಯಸಿಡ್ ದಾಳಿಯ ಗಾಯಗಳನ್ನು ಆಕೆ ಜೀವನದುದ್ದಕ್ಕೂ ಹೊತ್ತುಕೊಂಡು ಬದುಕಬೇಕಾಗುತ್ತದೆ.
ಎರಡು ದಿನಗಳ ಹಿಂದೆ, ರಾಜ್ಯ ಗೃಹ ಸಚಿವರ ಕ್ಷೇತ್ರವಾಗಿರುವ ತುಮಕೂರಿನಲ್ಲಿ ಅಪ್ರಾಪ್ತ ಬಾಲಕಿಯ ಮೇಲೆ ಮೂವರು ಸಾಮೂಹಿಕ ಅತ್ಯಾಚಾರಗೈದಿರುವುದು ಬೆಳಕಿಗೆ ಬಂತು. ಮಹಿಳೆಯ ಮೇಲೆ ಅತ್ಯಾಚಾರ ಕೃತ್ಯ ಸಮಾಜದಲ್ಲಿ ಸುದ್ದಿಯಾಗಬೇಕಾದರೆ ಅತ್ಯಾಚಾರಕ್ಕೊಳಗಾಗಿರುವ ಸಂತ್ರಸ್ತೆ ಮತ್ತು ಆರೋಪಿಗಳ ಧರ್ಮ ಬೇರೆ ಬೇರೆಯಾಗಿರಬೇಕು. ಸಂತ್ರಸ್ತೆ ಬಹುಸಂಖ್ಯಾತ ಸಮುದಾಯಕ್ಕೆ ಸೇರಿದ್ದು ಆರೋಪಿ ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿದವನಾಗಿದ್ದರೆ ಘಟನೆ ರಾಷ್ಟ್ರಮಟ್ಟದಲ್ಲಿ ಸುದ್ದಿಯಾಗುತ್ತದೆ. ಬಿಜೆಪಿ ಮತ್ತು ಸಂಘಪರಿವಾರ ಕೇಸರಿ ಬಾವುಟಗಳ ಜೊತೆಗೆ ಬೀದಿಗಿಳಿಯುತ್ತವೆ. ಆದರೆ ಸಂತ್ರಸ್ತರು ಮತ್ತು ಆರೋಪಿಗಳ ಸ್ಥಾನ ಅದಲು ಬದಲಾದರೆ ಅದು ಪ್ರತಿಭಟನೆಯ ವಿಷಯವಾಗುವುದಿಲ್ಲ. ಗೃಹ ಸಚಿವರು, ಪೊಲೀಸ್ ವರಿಷ್ಠಾಧಿಕಾರಿಗಳು ತುಟಿ ಬಿಚ್ಚುವುದಿಲ್ಲ. ತುಮಕೂರಿನಲ್ಲಿ ಅಪ್ರಾಪ್ತ ವಯಸ್ಸಿನ ಬಾಲಕಿಯ ಮೇಲೆ ದುಷ್ಕರ್ಮಿಗಳು ಬರ್ಬರ ಅತ್ಯಾಚಾರ ನಡೆಸಿರುವುದು ಸುದ್ದಿಯಾಗದೇ ಇರುವುದಕ್ಕೆ ಇದುವೇ ಕಾರಣವಾಗಿದೆ. ಇಲ್ಲಿ ಮಹಿಳೆಯ ಮೇಲಿನ ದೌರ್ಜನ್ಯ ಸುದ್ದಿಯಾಗಬೇಕಾದರೆ ಅದು ರಾಜಕೀಯವಾಗಿ ಒಂದು ನಿರ್ದಿಷ್ಟ ಪಕ್ಷಕ್ಕೆ ಲಾಭದಾಯಕವಾಗಿರಬೇಕು. ಅಥವಾ ಸಂತ್ರಸ್ತ ಮಹಿಳೆ ವಿದ್ಯಾವಂತಳೂ, ಮೇಲ್ಜಾತಿಗೆ ಸೇರಿದವಳಾಗಿರಬೇಕು.
೨೦೨೦ರಲ್ಲಿ ಭಾರತದಲ್ಲಿ ೫,೦೦೦ಕ್ಕೂ ಅಧಿಕ ಅತ್ಯಾಚಾರ ಪ್ರಕರಣಗಳು ವರದಿಯಾಗಿವೆ. ಅತ್ಯಾಚಾರಕ್ಕಾಗಿ ರಾಜಸ್ಥಾನ ಅಗ್ರಸ್ಥಾನದಲ್ಲಿದ್ದರೆ, ಉತ್ತರ ಪ್ರದೇಶ ಎರಡನೆಯ ಸ್ಥಾನದಲ್ಲಿತ್ತು. ಮೂರನೇ ಸ್ಥಾನದಲ್ಲಿ ಮಧ್ಯ ಪ್ರದೇಶ, ನಾಲ್ಕನೆಯ ಸ್ಥಾನದಲ್ಲಿ ಮಹಾರಾಷ್ಟ್ರವಿತ್ತು. ಭಾರತದಲ್ಲಿ ಬಹುತೇಕ ಅತ್ಯಾಚಾರ ಪ್ರಕರಣಗಳು ಪೊಲೀಸ್ ಠಾಣೆಯಲ್ಲಿ ದಾಖಲಾಗುವುದೇ ಇಲ್ಲ ಎನ್ನುವುದನ್ನು ವರದಿಗಳು ಹೇಳುತ್ತವೆ. ಅದಕ್ಕೆ ಒಂದು ಕಾರಣ, ಅತ್ಯಾಚಾರ ಎಸಗಿದ ಆರೋಪಿಯ ಹಿಂದಿರುವ ಜಾತಿ. ಮತ್ತು ಆತನಿಗಿರುವ ರಾಜಕೀಯ ಶಕ್ತಿ. ಎರಡನೇ ಕಾರಣ, ಅತ್ಯಾಚಾರ ಸಂತ್ರಸ್ತೆಯನ್ನೇ ಸಮಾಜ ಕೆಟ್ಟ ದೃಷ್ಟಿಯಿಂದ ನೋಡುವುದು. ಸಂತ್ರಸ್ತೆಯ ಭವಿಷ್ಯವನ್ನು ಮುಂದಿಟ್ಟುಕೊಂಡು ಪ್ರಕರಣವನ್ನು ಮುಚ್ಚಿ ಹಾಕಲಾಗುತ್ತದೆ. ಅತ್ಯಾಚಾರ ಪ್ರಕರಣ ದಾಖಲಾದರೂ ನ್ಯಾಯ ಸಿಗುವುದು ಇಲ್ಲಿ ಸುಲಭವಿಲ್ಲ. ೨೦೧೯ರ ಅಂಕಿಅಂಶಗಳ ಪ್ರಕಾರ, ಭಾರತದಲ್ಲಿ ಪ್ರತೀ ದಿನ ಸರಾಸರಿ ೮೮ ಅತ್ಯಾಚಾರಗಳು ನಡೆಯುತ್ತವೆ. ೧೦೦ ಆರೋಪಿಗಳಲ್ಲಿ ೨೮ ಜನರು ಮಾತ್ರ ಶಿಕ್ಷೆಗೊಳಗಾಗುತ್ತಾರೆ. ೯೦ ಶೇಕಡ ಅತ್ಯಾಚಾರ ಪ್ರಕರಣಗಳಲ್ಲಿ ಆರೋಪಿ ಖುಲಾಸೆಯಾಗುತ್ತಿದ್ದಾನೆ ಎಂದು ಸುಪ್ರೀಂಕೋರ್ಟ್ ಕೂಡ ಕಳವಳ ವ್ಯಕ್ತಪಡಿಸಿದೆ.
ಈ ದೇಶದಲ್ಲಿ ಅತ್ಯಾಚಾರ ಘಟನೆ ನಡೆದರೆ ಅದಕ್ಕೆ ಸಂತ್ರಸ್ತೆಯನ್ನು ಹೊಣೆ ಮಾಡುವುದೇ ಹೆಚ್ಚು. ಹೆಣ್ಣು ಧರಿಸುವ ಬಟ್ಟೆ, ಆಕೆಯ ಚಾರಿತ್ರ್ಯ ಇತ್ಯಾದಿಗಳನ್ನು ನೆಪವಾಗಿಟ್ಟುಕೊಂಡು ಪುರುಷ ತನ್ನನ್ನು ತಾನು ಸಂಭಾವಿತನೆಂದು ಘೋಷಿಸಿಕೊಂಡು ಬಂದಿದ್ದಾನೆ. ಮೊತ್ತ ಮೊದಲು ಹೆಣ್ಣಿನ ಕುರಿತಂತೆ ಈ ದೇಶದ ಮನಸ್ಥಿತಿ ಬದಲಾಗಬೇಕು. ಹೆಣ್ಣನ್ನು ದೇವಿ ಎಂದು ಕರೆಯುವ ಈ ದೇಶದಲ್ಲಿ ದೇವಸ್ಥಾನದೊಳಗೇ ಯಾಕೆ ಅತ್ಯಾಚಾರ ನಡೆಯುತ್ತಿದೆ ಎನ್ನುವುದರ ಬಗ್ಗೆ ನಾವು ಯೋಚಿಸಬೇಕು. ಕಠಿಣ ಕಾನೂನು ಅತ್ಯಾಚಾರ ತಡೆಯುವುದಕ್ಕೆ ಪೂರಕವಾಗಿರುತ್ತದೆ ನಿಜ. ಆದರೆ ಅಶ್ಲೀಲ ಸಿನೆಮಾಗಳು, ಪೋರ್ನ್ ಸೈಟ್ಗಳು, ಮಾದಕ ದ್ರವ್ಯ, ರಾಜಕೀಯ ದ್ವೇಷ ಭಾಷಣಗಳು ಇವೆಲ್ಲವುಗಳಿಗೆ ಕಡಿವಾಣ ಹಾಕದೆ ನಾವು ಅತ್ಯಾಚಾರಗಳನ್ನು ತಡೆಯುವುದು ಅಸಾಧ್ಯ. ಈ ದೇಶದಲ್ಲಿ ಹೆಣ್ಣಿನ ಮೇಲೆ ನಡೆಯುವ ಸಾಮೂಹಿಕ ಅತ್ಯಾಚಾರಗಳನ್ನು ಸಾಂಸ್ಕೃತಿಕ ವಿಜಯೋತ್ಸವವಾಗಿ ಆಚರಿಸುವ ರಾಜಕೀಯ ಮನಸ್ಥಿತಿಯೊಂದು ಬೆಳೆಯುತ್ತಿರುವಾಗ ಇಲ್ಲಿ ನಾವು ಪರಸ್ಪರ ಹಂಚಿಕೊಳ್ಳುವ ‘ಮಹಿಳಾ ದಿನ’ದ ಶುಭಾಶಯಗಳು ಅರ್ಥ ಪಡೆದುಕೊಳ್ಳುವುದಾದರೂ ಹೇಗೆ?