ಬೆಳ್ಳಿ ತೆರೆಯ ನಾಯಕನೊಬ್ಬ ನಿಜ ಬದುಕಿನಲ್ಲಿ ಖಳನಾಯಕನಾದರೆ?
ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ
ಸ್ಯಾಂಡಲ್ವುಡ್ ದುರ್ನಾತ ಬೀರುತ್ತಿದೆ. ಸ್ಟಾರ್ ನಟ ದರ್ಶನ್ ಅವರನ್ನು ಕೊಲೆ ಆರೋಪ ಹೊರಿಸಿ ಬಂಧಿಸಲಾಗಿದೆ. ತನ್ನ ಪ್ರೇಯಸಿ ಪವಿತ್ರಾ ಅವರಿಗೆ ನಿರಂತರ ಅಶ್ಲೀಲ ಸಂದೇಶಗಳನ್ನು ಕಳುಹಿಸಿ ಮಾನಸಿಕವಾಗಿ ಚಿತ್ರಹಿಂಸೆ ನೀಡಿದ್ದಾನೆಂದು ಓರ್ವನನ್ನು ಅಪಹರಿಸಿ ಅವನಿಗೆ ಚಿತ್ರಹಿಂಸೆ ನೀಡಿ ಕೊಂದು ಹಾಕಿದ ಆರೋಪ ಅವರ ಮೇಲೆ ಮೇಲಿದೆ. ಪ್ರಕರಣದಲ್ಲಿ ಅವರು ಮಾತ್ರವಲ್ಲ, ಪವಿತ್ರಾ ಮತ್ತು ಇತರ ೧೩ ಮಂದಿಯನ್ನು ಬಂಧಿಸಲಾಗಿದೆ. ತನ್ನ ಅಭಿನಯದ ಕಾರಣಕ್ಕಾಗಿಯಷ್ಟೇ ಅಲ್ಲದೆ, ನಿಜ ಬದುಕಿನ ಹತ್ತು ಹಲವು ವಿವಾದಗಳಿಗಾಗಿಯೂ ಸುದ್ದಿಯಲ್ಲಿರುತ್ತಿದ್ದ ದರ್ಶನ್ ಎಲ್ಲ ವಿವಾದಗಳನ್ನು ಮೀರಿ ತನ್ನ ವೃತ್ತಿ ಬದುಕಿನಲ್ಲಿ ಯಶಸ್ಸಿನ ಉತ್ತುಂಗಕ್ಕೆ ಏರಿದ್ದರು. ಸ್ವತಃ ಪತ್ನಿಯ ಮೇಲಿನ ಹಲ್ಲೆ ಆರೋಪ ಅವರ ಮೇಲಿತ್ತು. ‘ವನ್ಯ ಪ್ರಾಣಿ ಅವಶೇಷಗಳ’ ಶೋಕಿಗಾಗಿಯೂ ಅವರು ವಿವಾದಕ್ಕೊಳಗಾಗಿದ್ದರು. ಹಲ್ಲೆ, ಹೊಡಿಬಡಿಗಾಗಿ ಆಗಾಗ ಮಾಧ್ಯಮಗಳಲ್ಲಿ ಸುದ್ದಿಯಾಗುತ್ತಿದ್ದವರು, ಅಂತಿಮವಾಗಿ ಕೊಲೆಯಂತಹ ಬರ್ಬರ ಕೃತ್ಯಕ್ಕಾಗಿ ಗುರುತಿಸಿಕೊಂಡಿದ್ದಾರೆ. ಒಬ್ಬ ಸ್ಟಾರ್ನಟನ ಈ ಕೃತ್ಯ ಇಡೀ ಗಾಂಧಿನಗರದ ಮೇಲೆ ತನ್ನದೇ ಆದ ರೀತಿಯಲ್ಲಿ ದುಷ್ಪರಿಣಾಮಗಳನ್ನು ಬೀರುತ್ತಿದೆ. ಈಗಾಗಲೇ ನೋಟು ನಿಷೇಧ, ಕೊರೋನ, ಲಾಕ್ಡೌನ್ ಮೊದಲಾದ ಕಾರಣದಿಂದ ಹಳ್ಳ ಹಿಡಿಯುತ್ತಿರುವ ಕನ್ನಡ ಚಿತ್ರೋದ್ಯಮದ ಗೋರಿಯನ್ನು ತೋಡುವಲ್ಲಿ ಕಲಾವಿದರೇ ಕೈ ಜೋಡಿಸುತ್ತಿರುವುದು ಅತ್ಯಂತ ವಿಷಾದನೀಯ ಸಂಗತಿಯಾಗಿದೆ.
ಕನ್ನಡ ಚಿತ್ರೋದ್ಯಮದಲ್ಲಿ ಹತ್ತು ಹಲವು ಪ್ರಭಾವಿಗಳ ನಡುವೆ ಜಾಗ ಮಾಡಿಕೊಡಿಕೊಂಡು ದರ್ಶನ್ ಎನ್ನುವ ಈ ನಟ ಬೆಳೆದು ಬಂದ ರೀತಿ ಅಚ್ಚರಿ ಹುಟ್ಟಿಸುವಂತಹದ್ದು. ಇವರ ತಂದೆ ತೂಗು ದೀಪ ಶ್ರೀನಿವಾಸ್ ಬದುಕಿನುದ್ದಕ್ಕೂ ಖಳನಾಯಕನಾಗಿ ಪಾತ್ರ ನಿರ್ವಹಿಸುತ್ತಾ ಬಂದವರು. ಆದರೆ ನಿಜ ಬದುಕಿನಲ್ಲಿ ಅವರೆಂದೂ ಖಳರಾಗಿ ಸುದ್ದಿಯಾಗಿರಲಿಲ್ಲ. ಹಲವು ಹಿರಿಯ ಸ್ಟಾರ್ ನಟರು ಅವರನ್ನು ಅತೀವವಾಗಿ ಗೌರವಿಸುತ್ತಿದ್ದರು. ಅವರು ತನ್ನ ಸ್ಟುಡಿಯೋಗೆ ಎಂದೂ ಮಗನನ್ನು ಜೊತೆಗೆ ಕರೆದೊಯ್ಯುತ್ತಿರಲಿಲ್ಲವಂತೆ. ಯಾಕೆಂದರೆ ಅಲ್ಲಿ ಅತ್ಯಾಚಾರ ಅಥವಾ ದರೋಡೆ, ಕೊಲೆ ಮೊದಲಾದ ದೃಶ್ಯಗಳಲ್ಲಿ ಅಭಿನಯಿಸಬೇಕಾಗುತ್ತದೆ. ಅದು ತನ್ನ ಮಗನ ಮೇಲೆ ಕೆಟ್ಟ ಪರಿಣಾಮವನ್ನು ಬೀರಬಹುದು ಎನ್ನುವ ಆತಂಕ ಅವರಿಗಿತ್ತು. ಚಿತ್ರರಂಗದಿಂದ ಮಗ ದೂರ ಉಳಿಯಬೇಕು ಎನ್ನುವುದು ಅವರ ಒಳಗಿನ ಬಯಕೆಯಾಗಿತ್ತು. ತಂದೆಯ ಬೆಂಬಲವಿಲ್ಲದೆ, ಯಾವುದೇ ಗಾಡ್ ಫಾದರ್ ಇಲ್ಲದೆ ಸಣ್ಣದೊಂದು ವಿಲನ್ ಪಾತ್ರದ ಮೂಲಕ ಕನ್ನಡ ಚಿತ್ರೋದ್ಯಮಕ್ಕೆ ಕಾಲಿಟ್ಟ ಈ ದರ್ಶನ್ ಎನ್ನುವ ತರುಣ ಬಳಿಕ ತನ್ನ ತಂದೆಯನ್ನು ಮೀರಿಸುವಂತೆ ನಟನಾಗಿ ಬೆಳೆದಿರುವುದು ಸಣ್ಣ ವಿಷಯವೇನೂ ಅಲ್ಲ. ಆದರೆ ತನಗೆ ಸಿಕ್ಕಿದ ಅಪಾರ ಯಶಸ್ಸು, ಜನಪ್ರಿಯತೆ ಮತ್ತು ದುಡ್ಡು ಇವುಗಳನ್ನು ಸದುಪಯೋಗಗೊಳಿಸುವ ವಿಷಯದಲ್ಲಿ ಮಾತ್ರ ದರ್ಶನ್ ಎಡವಿದರು. ತಂದೆ ಬೆಳ್ಳಿ ಪರದೆಯಲ್ಲಿ ವಿಲನ್ ಆಗಿ, ನೇಪಥ್ಯದಲ್ಲಿ ಹೀರೋ ಆಗಿಯೇ ಬದುಕಿದರು. ಆದರೆ ದರ್ಶನ್ ಬೆಳ್ಳಿ ಪರದೆಯಲ್ಲಿ ಸೂಪರ್ ಸ್ಟಾರ್ ಆಗಿ, ಪರದೆಯ ನೇಪಥ್ಯದಲ್ಲಿ ಖಳನಾಯಕನಾಗಿ ಗುರುತಿಸಲ್ಪಡುತ್ತಿದ್ದಾರೆ. ಮಗನ ವಿಷಯದಲ್ಲಿ ಯಾವುದು ಆಗಬಾರದು ಎಂದು ತೂಗು ದೀಪ ಶ್ರೀನಿವಾಸ್ ಅವರು ಬಯಸಿದ್ದರೋ ಅದೇ ಆಗಿದ್ದು ಮಾತ್ರ ವಿಪರ್ಯಾಸವಾಗಿದೆ.
ಇಡೀ ಪ್ರಕರಣದಲ್ಲಿ ಕೊಲೆಯಾದವನೂ ಅಮಾಯಕನೇನೂ ಅಲ್ಲ. ಆತನ ಮೇಲಿರುವ ಆರೋಪ ನಿಜವೇ ಆಗಿದ್ದರೆ ಆತನೂ ಕ್ರಿಮಿನಲ್ ಮನಸ್ಥಿತಿಯನ್ನೇ ಹೊಂದಿದ್ದಾನೆ. ಮಹಿಳೆಯೊಬ್ಬಳ ಮೊಬೈಲ್ಗೆ ಅತ್ಯಂತ ಅಶ್ಲೀಲ ಸಂದೇಶಗಳನ್ನು ಕಳುಹಿಸಿ ಆಕೆಯನ್ನು ಮಾನಸಿಕವಾಗಿ ಜರ್ಜರಿತಗೊಳ್ಳುವಂತೆ ಮಾಡಿ ವಿಕೃತ ಖುಷಿ ಪಡುವ ಸೈಕೋಪಾತ್ಗಳ ಸಂಖ್ಯೆ ಸಮಾಜದಲ್ಲಿ ಹೆಚ್ಚುತ್ತಿವೆ. ನಂಬರನ್ನು ಬ್ಲಾಕ್ ಮಾಡಿದರೆ ಹೊಸ ಐಡಿಗಳ ಮೂಲಕ ಇವರು ಬೆಂಬತ್ತುತ್ತಾರೆ. ಇಂತಹ ಮನಸ್ಥಿತಿಯ ವಿಕೃತರಿಂದ ಎಷ್ಟೋ ಮನೆಗಳು, ಮನಗಳು ಮುರಿದು ಬಿದ್ದಿವೆ. ಅಮಾಯಕ ಮಹಿಳೆಯರು ಆತ್ಮಹತ್ಯೆಗೆ ಶರಣಾದದ್ದಿದೆ. ಮಹಿಳೆಯರ ಫೋಟೊಗಳನ್ನು ವಿರೂಪಗೊಳಿಸಿ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿ ಬಿಡುವವರೂ ಇಂತಹ ವಿಕೃತರೇ ಆಗಿರುತ್ತಾರೆ. ದರ್ಶನ್ ಪ್ರಕರಣದಲ್ಲಿ ಕೊಲೆಯಾದ ರೇಣುಕಾ ಸ್ವಾಮಿಯ ಮೇಲೆ ಇಂತಹದೇ ಆರೋಪಗಳಿವೆ. ಆದರೆ ಇದನ್ನು ನಿಭಾಯಿಸಲು ದರ್ಶನ್ನಂತಹ ಪ್ರಭಾವಿಗಳಿಗೆ ಹಲವು ದಾರಿಗಳಿದ್ದವು. ಪೊಲೀಸ್ ಇಲಾಖೆಯನ್ನು ಸಂಪರ್ಕಿಸಿದ್ದರೆ ತಕ್ಷಣವೇ ಇದಕ್ಕೆಲ್ಲ ಒಂದು ಪರಿಹಾರ ಸಿಕ್ಕಿ ಬಿಡುತ್ತಿತ್ತು. ಆದರೆ ಹಣ, ಜನಪ್ರಿಯತೆ, ಕುಡಿತ ಇವೆಲ್ಲವೂ ತಲೆಗೇರಿದ್ದ ನಟ ದರ್ಶನ್ ಪ್ರಕರಣವನ್ನು ಅತ್ಯಂತ ಕೆಟ್ಟ ರೀತಿಯಲ್ಲಿ ನಿಭಾಯಿಸಿದ. ಕಾನೂನನ್ನು ಕೈಗೆತ್ತಿಕೊಂಡದ್ದು ಮಾತ್ರವಲ್ಲ, ಆರೋಪಿಯನ್ನು ಅತ್ಯಂತ ಬರ್ಬರವಾಗಿ ಚಿತ್ರಹಿಂಸೆ ನೀಡಿ ಕೊಂದು ಹಾಕಿದ್ದಾನೆ. ದರ್ಶನ್ಗೆ ಸಂತ್ರಸ್ತನನ್ನು ಕೊಂದು ಹಾಕುವ ಉದ್ದೇಶ ಇಲ್ಲದೇ ಇರಬಹುದು. ಆದರೆ ಆತ ಕೊಲೆಯಾಗಿದ್ದಾನೆ ಎನ್ನುವುದು ಸತ್ಯ. ಅಷ್ಟೇ ಅಲ್ಲ, ಕೊಂದ ಬಳಿಕ ಪೊಲೀಸರಿಗೆ ಶರಣಾಗದೆ ಕೊಲೆಯನ್ನು ಮುಚ್ಚಿ ಹಾಕುವ ಪ್ರಯತ್ನವನ್ನೂ ಮಾಡಿದ್ದ.
ಇತ್ತೀಚೆಗೆ ಸಿನೆಮಾಗಳು ಹಿಂಸೆ, ಅಶ್ಲೀಲತೆ, ವಿಕೃತಿಗಾಗಿಯೇ ಸುದ್ದಿ ಮಾಡುತ್ತಿವೆ. ಯುವ ಸಮಾಜವನ್ನು ಈ ಸಿನೆಮಾಗಳು ದಾರಿ ತಪ್ಪಿಸುತ್ತಿವೆ ಎನ್ನುವ ಆರೋಪಗಳು ಕೇಳಿ ಬರುತ್ತಿವೆ. ಮಹಿಳೆಯರ ಮೇಲೆ ಹಲ್ಲೆ, ಪ್ರೀತಿಯ ಹೆಸರಿನಲ್ಲಿ ನಡೆಯುವ ಕೊಲೆಗಳಿಗೂ ಸಿನೆಮಾಗಳು ಸ್ಫೂರ್ತಿಯಾಗುತ್ತಿವೆ. ವಿಪರ್ಯಾಸವೆಂದರೆ, ಸಿನಿಮಾ ಮಾತ್ರವಲ್ಲ, ಈ ಸಿನೆಮಾದಲ್ಲಿ ನಾಯಕ ಪಾತ್ರವನ್ನು ನಿರ್ವಹಿಸಿದ ನಟರ ಖಾಸಗಿ ಬದುಕು ಕೂಡ ಯುವಕರ ಕೆಟ್ಟ ಕೃತ್ಯಗಳಿಗೆ ಸ್ಫೂರ್ತಿಯಾಗುವ ಹಂತಕ್ಕೆ ಬಂದಿರುವುದು ದುರಂತವಾಗಿದೆ. ಒಂದು ಕಾಲದಲ್ಲಿ ಡಾ. ರಾಜಕುಮಾರ್, ವಿಷ್ಣುವರ್ಧನ್ರಂತಹ ಹಿರಿಯ ಕಲಾವಿದರು ನಟಿಸಿರುವ ಸಿನೆಮಾಗಳು ಮಾದರಿ ಸಮಾಜವನ್ನು ಕಟ್ಟಿದ್ದವು. ಡಾ. ರಾಜಕುಮಾರ್ ಚಿತ್ರಗಳಿಂದಲೇ ಬದುಕಿನ ಮೌಲ್ಯಗಳನ್ನು ಕಲಿತ ಒಂದು ತಲೆಮಾರು ನಮ್ಮ ನಡುವೆ ಇನ್ನೂ ಬದುಕಿದೆ. ತಮ್ಮ ವೈಯಕ್ತಿಕ ಬದುಕನ್ನು ಹಿರಿಯ ತಲೆಮಾರಿನ ನಟರು ಸ್ವಚ್ಛವಾಗಿಟ್ಟುಕೊಂಡಿದ್ದರು. ಕೆರೆಯ ನೀರನ್ನು ಕೆರೆಗೆ ಚೆಲ್ಲುವಂತೆ ಬೆಳ್ಳಿತೆರೆಯಲ್ಲಿ ಸಿಕ್ಕಿದ ಹಣ, ಪ್ರಸಿದ್ಧಿಯನ್ನು ಮರಳಿ ಸಮಾಜಕ್ಕೆ ಅರ್ಪಿಸಿದ ಹಲವು ನಟರು ಆಗಿ ಹೋಗಿದ್ದಾರೆ. ಅವರು ಅಭಿಮಾನಿಗಳ ಮನಸ್ಸು ನೋಯದಂತೆ, ಅವರು ದಾರಿಗೆಡದಂತೆ ಬದುಕಿದರು. ಕನ್ನಡದ ಇಂದಿನ ತಲೆಮಾರಿನ ನಟರಿಗೂ ಆ ಹಿರಿಯ ನಟರ ಬದುಕು ಮಾದರಿಯಾಗುತ್ತಿದ್ದರೆ ಇಂತಹ ದುರಂತಗಳು ಸಂಭವಿಸುತ್ತಿರಲಿಲ್ಲವೇನೋ?
ದರ್ಶನ್ ಆರೋಪಿಯಾಗಿರುವ ಈ ಕೊಲೆ ತನಿಖೆ ಇನ್ನಷ್ಟು ಆಳವಾಗಿ ನಡೆಯಬೇಕು. ಕೊಲೆ ಮಾಡಿರುವುದು ನಟ ದರ್ಶನ್ ಎನ್ನುವುದು ಸಾಬೀತಾದರೆ, ಆತನ ಕೃತ್ಯ ಈ ಸಮಾಜಕ್ಕೆ ಯಾವತ್ತೂ ಮಾದರಿಯಲ್ಲ ಎನ್ನುವ ಎಚ್ಚರಿಕೆ ದರ್ಶನ್ ಅವರ ಅಭಿಮಾನಿ ಪಡೆಗಳಿಗೂ ಇರಬೇಕು. ಜನಸಾಮಾನ್ಯರು ಆರಾಧಿಸುವುದು ತೆರೆಯ ಮೇಲಿನ ನಾಯಕ ಪಾತ್ರಗಳ ಆದರ್ಶಗಳನ್ನೇ ಹೊರತು, ನಟನನ್ನು ಅಲ್ಲ. ಆತ ಇಲ್ಲಿ ಒಂದು ನೆಪ ಮಾತ್ರ. ತನ್ನನ್ನು ಸಮಾಜದ ಉತ್ತುಂಗಕ್ಕೇರಿಸಿದ ಆ ಆದರ್ಶ, ಮೌಲ್ಯಗಳನ್ನೇ ನಟನೊಬ್ಬ ವಾಸ್ತವ ಬದುಕಿನಲ್ಲಿ ತನ್ನ ಹಣ, ಪ್ರಸಿದ್ಧಿ ತಲೆಗೇರಿ ಕಾಲಲ್ಲಿ ತುಳಿದು ಹಾಕಿದರೆ ಅದಕ್ಕೆ ಯಾರು ಹೊಣೆ? ಈ ಕೊಲೆಯಲ್ಲಿ ನಟ ದರ್ಶನ್ ಭಾಗಿಯಾಗಿದ್ದು ನಿಜವೇ ಆದರೆ, ಆತನಿಗೆ ಅತ್ಯಂತ ಕಠಿಣ ಶಿಕ್ಷೆಯಾಗಬೇಕಾಗಿದೆ.