ಮತ್ತೆ ಪ್ರಶ್ನೆಗೊಳಗಾಗುತ್ತಿರುವ ಇವಿಎಂ ವಿಶ್ವಾಸಾರ್ಹತೆ
ಸಾಂದರ್ಭಿಕ ಚಿತ್ರ Photo: PTI
ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ
ಮಧ್ಯ ಪ್ರದೇಶ, ರಾಜಸ್ಥಾನ, ಛತ್ತೀಸ್ಗಡ ವಿಧಾನಸಭಾ ಚುನಾವಣೆಗಳಲ್ಲಿ ಕಾಂಗ್ರೆಸ್ ಪಕ್ಷ ದಯನೀಯ ಸೋಲನ್ನು ಅನುಭವಿಸಿರುವ ಬೆನ್ನಲ್ಲೇ ಕಾಂಗ್ರೆಸ್ ಪಕ್ಷದ ಕೆಲವು ಮುಖಂಡರು ಇವಿಎಂ ಬಗ್ಗೆ ತಮ್ಮ ಸಂದೇಹಗಳನ್ನು ವ್ಯಕ್ತಪಡಿಸಿದ್ದಾರೆ. ಕಾಂಗ್ರೆಸ್ನ ಹಿರಿಯ ನಾಯಕ ದಿಗ್ವಿಜಯ ಸಿಂಗ್ ಅವರು ‘ಎಕ್ಸ್’ನಲ್ಲಿ ಅಭಿಪ್ರಾಯವೊಂದನ್ನು ಹಂಚಿಕೊಂಡಿದ್ದು ‘‘ಚಿಪ್ ಹೊಂದಿರುವ ಯಾವುದೇ ಯಂತ್ರವನ್ನು ಹ್ಯಾಕ್ ಮಾಡಬಹುದಾಗಿದೆ. ೨೦೦೩ರಿಂದಲೂ ಇವಿಎಂಗಳ ಮೂಲಕ ಮತದಾನ ನಡೆಸುವುದನ್ನು ನಾನು ವಿರೋಧಿಸಿದ್ದೇನೆ. ವೃತ್ತಿಪರ ಹ್ಯಾಕರ್ಗಳ ಮೂಲಕ ಭಾರತೀಯ ಪ್ರಜಾಪ್ರಭುತ್ವವನ್ನು ನಿಯಂತ್ರಿಸಲು ನಾವು ಅವಕಾಶ ನೀಡಬೇಕೆ? ಎಲ್ಲ ರಾಜಕೀಯ ಪಕ್ಷಗಳು ಈ ಪ್ರಶ್ನೆಯನ್ನು ಎತ್ತಬೇಕಾಗಿದೆ. ಮಾನ್ಯ ಚುನಾವಣಾ ಆಯೋಗ ಹಾಗೂ ಗೌರವಾನ್ವಿತ ಸುಪ್ರೀಂಕೋರ್ಟ್ ನಮ್ಮ ಭಾರತೀಯ ಪ್ರಜಾಪ್ರಭುತ್ವವನ್ನು ರಕ್ಷಿಸುವಿರಾ?’’ ಎಂದು ಅವರು ಕೇಳಿಕೊಂಡಿದ್ದಾರೆ. ಇದೇ ಸಂದರ್ಭದಲ್ಲಿ ಫಲಿತಾಂಶವು ಇವಿಎಂ ನೀಡಿದ ತೀರ್ಪು ಎಂದು ಉದ್ಧವ್ ಬಣದ ಶಿವಸೇನಾ ನಾಯಕ ಸಂಜಯ್ ರಾವತ್ ಕೂಡ ಅಭಿಪ್ರಾಯಪಟ್ಟಿದ್ದಾರೆ. ಕಾಶ್ಮೀರದಲ್ಲಿ ನ್ಯಾಶನಲ್ ಕಾನ್ಫರೆನ್ಸ್ ನಾಯಕ ಫಾರೂಕ್ ಅಬ್ದುಲ್ಲಾ ಅವರು ಕಾಂಗ್ರೆಸ್ ನಾಯಕರ ಜೊತೆಗೆ ಧ್ವನಿಗೂಡಿಸಿದ್ದಾರೆ. ‘ಕಾಂಗ್ರೆಸ್ ಆಡಳಿತದ ಅವಧಿಯಲ್ಲಿ ಇವಿಎಂ ಜಾರಿಗೆ ಬಂದಾಗ ನಾನು ಮುಖ್ಯಮಂತ್ರಿಯಾಗಿದ್ದೆ. ಮತಯಂತ್ರದಲ್ಲಿ ಯಾವುದೇ ರೀತಿಯ ಕಳ್ಳತನ ನಡೆಯಲು ಸಾಧ್ಯವೆ? ಎಂದು ಆಗ ನಾನು ಚುನಾವಣಾ ಅಧಿಕಾರಿಗಳಲ್ಲಿ ಪ್ರಶ್ನಿಸಿದ್ದೆ. ಅದಕ್ಕೆ ಅವರು ಅದು ಸಾಧ್ಯವಿದೆ’ ಎಂದು ಹೇಳಿದ್ದರು ಎನ್ನುವುದನ್ನು ನೆನಪಿಸಿಕೊಂಡಿದ್ದಾರೆ.
ಇವಿಎಂ ಬಗ್ಗೆ ವಿರೋಧ ಪಕ್ಷಗಳು ಪದೇ ಪದೇ ಇಂತಹ ಸಂಶಯಗಳನ್ನು ವ್ಯಕ್ತಪಡಿಸುತ್ತಲೇ ಬರುತ್ತಿವೆ. ಆದರೆ ಅವರ ಪ್ರಶ್ನೆಗಳು ವಿಶ್ವಾಸಾರ್ಹತೆಯನ್ನು ಪಡೆಯದೇ ಇರುವುದಕ್ಕೆ ಮುಖ್ಯ ಕಾರಣ, ತಾವು ಮುಂದಿಡುವ ಪ್ರಶ್ನೆಗಳ ಬಗ್ಗೆ ಅವರಿಗೇ ಗೊಂದಲಗಳಿರುವುದು. ಎರಡನೇ ಬಾರಿ ಮೋದಿಯವರು ಪ್ರಧಾನಿಯಾದ ದಿನಗಳಿಂದಲೇ ಇವಿಎಂ ಕುರಿತಂತೆ ಒಂದು ಸ್ಪಷ್ಟವಾದ ನಿಲುವಿಗೆ ವಿರೋಧ ಪಕ್ಷಗಳು ಬಂದು ಸಂಘಟಿತವಾಗಿ ಹೋರಾಟ ನಡೆಸಿದ್ದರೆ, ಇವಿಎಂ ಸ್ಥಾನದಲ್ಲಿ ಮತ ಪತ್ರಗಳ ಬಳಕೆ ಮತ್ತೆ ಜಾರಿಗೆ ಬರುತ್ತಿತ್ತೋ ಏನೋ? ಚುನಾವಣೆಯಲ್ಲಿ ಗೆದ್ದಾಗ ಇವಿಎಂ ಬಗ್ಗೆ ತುಟಿ ಬಿಚ್ಚದೆ, ಸೋತಾಗ ಮಾತ್ರ ಇವಿಎಂ ವಿರುದ್ಧ ಹೇಳಿಕೆ ನೀಡುವ ವಿರೋಧ ಪಕ್ಷಗಳ ದ್ವಂದ್ವಗಳೇ ಇಂದಿಗೂ ಇವಿಎಂ ಬಗ್ಗೆ ಗಂಭೀರ ಚರ್ಚೆಗಳು ನಡೆಯದಂತೆ ನೋಡಿಕೊಳ್ಳುತ್ತಿರುವುದು. ಮುಖ್ಯವಾಗಿ ಇವಿಎಂನ್ನು ಬಳಕೆಗೆ ತಂದಿರುವುದು ಬಿಜೆಪಿಯಲ್ಲ, ಕಾಂಗ್ರೆಸ್ ಪಕ್ಷ. ಇದರ ವಿರುದ್ಧ ಮೊದಲು ಧ್ವನಿಯೆತ್ತಿರುವುದು ಕೂಡ ಕಾಂಗ್ರೆಸ್ ಪಕ್ಷವಲ್ಲ, ಬಿಜೆಪಿಯ ಹಿರಿಯ ನಾಯಕರಾಗಿರುವ ಎಲ್. ಕೆ. ಅಡ್ವಾಣಿ. ಆಗ ಯುಪಿಎ ಸರಕಾರ ಇವಿಎಂನ್ನು ಸಮರ್ಥಿಸಿಕೊಂಡಿತ್ತು. ಇವಿಎಂನ್ನು ಹ್ಯಾಕ್ ಮಾಡಲಾಗುತ್ತದೆ ಎನ್ನುವುದು ಸಾಬೀತಾದರೂ ಮೊದಲು ಅಪರಾಧಿ ಸ್ಥಾನದಲ್ಲಿ ನಿಲ್ಲುವುದು ಕಾಂಗ್ರೆಸ್ ಪಕ್ಷವೇ ಆಗಿರುತ್ತದೆ. ಇವಿಎಂನ್ನು ಹ್ಯಾಕ್ ಮಾಡಲು ಸಾಧ್ಯ ಎನ್ನುವುದು ಮೊದಲೇ ಗೊತ್ತಿದ್ದಿದ್ದರೆ ಅದನ್ನು ಬಳಕೆಗೆ ತಂದದ್ದು ಯಾಕೆ ಎನ್ನುವ ಪ್ರಶ್ನೆಗೆ ಕಾಂಗ್ರೆಸ್ನ ಹಿರಿಯರೇ ಸ್ಪಷ್ಟೀಕರಣ ನೀಡಬೇಕಾಗುತ್ತದೆ. ಆ ಬಳಿಕ ಬಿಜೆಪಿಯನ್ನು ಆರೋಪಿ ಸ್ಥಾನದಲ್ಲಿ ನಿಲ್ಲಿಸಬಹುದು. ಆದುದರಿಂದಲೇ ಕಾಂಗ್ರೆಸ್ ನಾಯಕರ ಪಾಲಿಗೆ ಇವಿಎಂ ನುಂಗಲೂ ಆಗದೆ, ಉಗುಳಲೂ ಆಗದೆ ಗಂಟಲಲ್ಲಿ ಸಿಕ್ಕಿ ಹಾಕಿಕೊಂಡಿದೆ. ಇವಿಎಂ ಬಗ್ಗೆ ಈ ಹಿಂದೆ ಬಿಎಸ್ಪಿ ನಾಯಕಿ ಮಾಯಾವತಿಯೂ ದೊಡ್ಡ ಧ್ವನಿಯಲ್ಲಿ ಮಾತನಾಡಿದ್ದರು. ಆದರೆ ಅವರ ಜೊತೆಗೆ ಇತರ ವಿರೋಧ ಪಕ್ಷಗಳ ನಾಯಕರು ನಿಲ್ಲಲಿಲ್ಲ.
ಇವಿಎಂ ಹ್ಯಾಕ್ ಆಗಿದೆಯೋ ಇಲ್ಲವೋ ಆದರೆ ಜಾತ್ಯತೀತ ಪಕ್ಷಗಳೆಂದು ಕರೆಸಿಕೊಂಡ ಬಹುತೇಕ ಪಕ್ಷಗಳ ಮೆದುಳಿಗೆ ಬಿಜೆಪಿ ಮತ್ತು ಆರೆಸ್ಸೆಸ್ ಎಂದೋ ಕನ್ನ ಹಾಕಿದೆ. ಅದನ್ನು ಮರೆ ಮಾಚುವುದಕ್ಕಾಗಿ, ಇವಿಎಂ ಮೇಲೆ ಗೂಬೆ ಕೂರಿಸುವುದರಿಂದ ಕಳೆದುಕೊಂಡದ್ದನ್ನು ಗಳಿಸಿಕೊಳ್ಳುವುದಕ್ಕೆ ಸಾಧ್ಯವಿಲ್ಲ. ಕಳೆದ ಬಾರಿ ಮಧ್ಯಪ್ರದೇಶದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರ ಹಿಡಿದಿತ್ತು ಎನ್ನುವುದು ದಿಗ್ವಿಜಯ್ ಸಿಂಗ್ ಮರೆತಿರಬಹುದು, ಆದರೆ ದೇಶದ ಜನತೆ ಮರೆತಿಲ್ಲ. ಕಾಂಗ್ರೆಸ್ ಬಹುಮತ ಗಳಿಸಿದ ಬಳಿಕವೂ ಮಧ್ಯಪ್ರದೇಶವನ್ನು ಬಿಜೆಪಿ ತನ್ನ ಕೈ ವಶ ಮಾಡಿಕೊಂಡಿತು. ಈ ಸಂದರ್ಭದಲ್ಲಿ ಕಾಂಗ್ರೆಸ್ನ ಹಲವು ವರ್ಚಸ್ವೀ ನಾಯಕರೇ ಗುಂಪಾಗಿ ಬಿಜೆಪಿಯನ್ನು ಸೇರಿದರು. ಇದನ್ನು ಬಿಜೆಪಿ ಸಾಧಿಸಿದ್ದು ಇವಿಎಂ ಮೂಲಕ ಅಲ್ಲ. ಅಧಿಕಾರ, ಹಣ ಸಿಗುವುದಾದರೆ ಬಿಜೆಪಿ ಮತ್ತು ಆರೆಸ್ಸೆಸ್ ಸಿದ್ಧಾಂತದ ಜೊತೆಗೆ ಯಾವ ಲಜ್ಜೆಯೂ ಇಲ್ಲದೆ ಕೈ ಜೋಡಿಸಲು ಸಿದ್ಧರಿರುವ ನಾಯಕರನ್ನು ಕಟ್ಟಿಕೊಂಡು ಕಾಂಗ್ರೆಸ್ ಚುನಾವಣೆಯನ್ನು ಎದುರಿಸಿದರೆ ಫಲಿತಾಂಶ ಇನ್ನೇನಾಗುತ್ತದೆ? ಇವಿಎಂ ಬಗ್ಗೆ ಆಕ್ಷೇಪ ಎತ್ತಿರುವ ಉದ್ಧವ್ ನೇತೃತ್ವದ ಶಿವಸೇನೆಯ ಗತಿಯೇನಾಯಿತು? ಅವರು ಮಹಾರಾಷ್ಟ್ರದಲ್ಲಿ ಅಧಿಕಾರ ಕಳೆದುಕೊಂಡದ್ದು ಕೂಡ ಇವಿಎಂ ಕಾರಣದಿಂದ ಅಲ್ಲ. ಬಿಜೆಪಿ ಒಡ್ಡಿದ ಹಣ ಮತ್ತು ಅಧಿಕಾರದ ಆಮಿಷಕ್ಕೆ ಬಲಿಯಾಗಿ ಶಿವಸೇನೆ ಇಬ್ಭಾಗವಾಯಿತು. ಇವಿಎಂ ಬಗ್ಗೆ ಹಲವು ಬಾರಿ ಮಾತನಾಡಿರುವ ಮಾಯಾವತಿ ಕೂಡ, ದಲಿತರು, ಅಲ್ಪಸಂಖ್ಯಾತರ ಬಗ್ಗೆ ಎಷ್ಟರಮಟ್ಟಿಗೆ ಪ್ರಾಮಾಣಿಕತೆಯಿಂದ ಬೀದಿಗಿಳಿದು ಕೆಲಸ ಮಾಡುತಿದ್ದೇನೆ ಎನ್ನುವುದರ ಬಗ್ಗೆ ಆತ್ಮವಿಮರ್ಶೆ ನಡೆಸಬೇಕು. ಬಿಎಸ್ಪಿಯ ಮೆದುಳಿಗೇ ಬಿಜೆಪಿ ಕನ್ನ ಹಾಕಿದೆ. ಕಳೆದ ಒಂದು ದಶಕದಲ್ಲಿ ದೇಶದ ದಲಿತರು, ಅಲ್ಪಸಂಖ್ಯಾತರ ವಿರುದ್ಧ ನಡೆಯುತ್ತಿರುವ ದೌರ್ಜನ್ಯಗಳ ಬಗ್ಗೆ ಮಾಯಾವತಿ ನೇತೃತ್ವದ ಬಿಎಸ್ಪಿ ನಿಗೂಢ ಮೌನವನ್ನು ತಾಳಿದೆ.
ಈ ಬಾರಿಯ ಚುನಾವಣೆಯಲ್ಲಿ ಕಮಲ್ನಾಥ್ ನೇತೃತ್ವವೇ ಕಾಂಗ್ರೆಸ್ಗೆ ಬಹುದೊಡ್ಡ ಹಿನ್ನಡೆಯಾಗಿತ್ತು. ಅತ್ತ ರಾಜಸ್ಥಾನದಲ್ಲೂ ಕಾಂಗ್ರೆಸ್ನೊಳಗಿರುವ ಭಿನ್ನಮತ ಒಳಗೊಳಗೆ ಬಿಜೆಪಿಗೆ ಪೂರಕವಾಗಿ ಕೆಲಸ ಮಾಡಿತು. ಈ ಎರಡೂ ರಾಜ್ಯಗಳಲ್ಲಿ ಪಕ್ಷವನ್ನು ಪುನರ್ ಸಂಘಟಿಸುವ ಕಾರ್ಯ ನಡೆಯಬೇಕಾಗಿದೆ. ಅವನ್ನೆಲ್ಲ ಮರೆಮಾಚಿ ಇವಿಎಂ ಕಡೆಗೆ ಕೈ ತೋರಿಸುವುದು ಕಾಂಗ್ರೆಸನ್ನು ಇನ್ನಷ್ಟು ನಷ್ಟಕ್ಕೆ ತಳ್ಳಬಹುದು. ಚುನಾವಣೆ ಬಂದಾಗಷ್ಟೇ ಜನರನ್ನು ತಲುಪುವ ಪ್ರಯತ್ನ ಮಾಡುವ ವಿರೋಧ ಪಕ್ಷಗಳಿಗೆ ಹೋಲಿಸಿದರೆ, ಬಿಜೆಪಿಯ ಪರವಾಗಿ ಆರೆಸ್ಸೆಸ್ ಮತ್ತು ಸಂಘಪರಿವಾರ ವರ್ಷವಿಡೀ ಕೆಲಸ ಮಾಡುತ್ತಿರುತ್ತವೆ. ಜನರ ನಡುವೆ ದ್ವೇಷ ಬಿತ್ತಿ ಮತಗಳ ಬೆಳೆ ಬೆಳೆಯುವ ಪ್ರಯತ್ನದಲ್ಲಿರುತ್ತದೆ. ಹ್ಯಾಕ್ ಆಗಿರುವುದು ಇವಿಎಂ ಅಲ್ಲ, ಜನರ ಮೆದುಳು ಎನ್ನುವುದನ್ನು ಮೊದಲು ವಿರೋಧ ಪಕ್ಷಗಳು ಅರ್ಥ ಮಾಡಿಕೊಳ್ಳಬೇಕು. ಇಷ್ಟಾದ ಬಳಿಕವೂ ಇವಿಎಂ ಬಗ್ಗೆ ವಿರೋಧ ಪಕ್ಷಗಳಿಗೆ ಅನುಮಾನಗಳಿದ್ದರೆ ಅದನ್ನು ಚುನಾವಣಾ ಫಲಿತಾಂಶದ ಬಳಿಕವಲ್ಲ, ಚುನಾವಣೆಗೆ ಮುನ್ನವೇ ವ್ಯಕ್ತಪಡಿಸಬೇಕು ಮತ್ತು ಎಲ್ಲ ವಿರೋಧ ಪಕ್ಷಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಸಂಘಟಿತವಾಗಿ ಇವಿಎಂ ವಿರುದ್ಧ ರಾಷ್ಟ್ರಮಟ್ಟದಲ್ಲಿ ಆಂದೋಲನಗಳನ್ನು ರೂಪಿಸಬೇಕು. ಇವಿಎಂನ್ನು ಹ್ಯಾಕ್ ಮಾಡಬಹುದೇ ಇಲ್ಲವೇ ಎನ್ನುವುದರ ಬಗ್ಗೆ ತಮ್ಮದೇ ತಂಡದಿಂದ ತನಿಖೆಯೊಂದನ್ನು ನಡೆಸಬಹುದು. ಎಲ್ಲ ಪಕ್ಷಗಳು ಸಂಘಟಿತವಾಗಿ ಇವಿಎಂನ್ನು ವಿರೋಧಿಸಿದ್ದೇ ಆದರೆ ಚುನಾವಣಾ ಆಯೋಗವೂ ಈ ಬಗ್ಗೆ ಗಂಭೀರವಾಗಿ ಯೋಚಿಸುವುದಕ್ಕೆ ಮುಂದಾಗಬಹುದು. ಇವಿಎಂ ಮೂಲಕ ನಡೆಸುವ ಚುನಾವಣೆಯ ಬಗ್ಗೆ ಪಕ್ಷಗಳು ಸಹಮತ ಹೊಂದಿಲ್ಲ ಎಂದಾದರೆ ಅವುಗಳನ್ನು ಬಲವಂತವಾಗಿ ಜನರ ಮೇಲೆ ಹೇರುವ ಅಗತ್ಯವಾದರೂ ಚುನಾವಣಾ ಆಯೋಗಕ್ಕೆ ಏನಿದೆ? ಚುನಾವಣೆ ಪ್ರಕ್ರಿಯೆಗಳು ಶೀಘ್ರವಾಗಿ ಮುಗಿಯುವುದಕ್ಕೆ ಸಹಾಯ ಮಾಡುತ್ತದೆ ಎನ್ನುವ ಒಂದೇ ಒಂದು ಕಾರಣವನ್ನು ಮುಂದಿಟ್ಟುಕೊಂಡು ಇವಿಎಂನ್ನು ಸಮರ್ಥಿಸುವುದು ಚುನಾವಣಾ ಆಯೋಗಕ್ಕೂ ಶೋಭೆಯಲ್ಲ. ಚುನಾವಣೆ ಎಷ್ಟು ಬೇಗ ಮುಗಿಯಿತು ಎನ್ನುವುದಕ್ಕಿಂತ ಎಷ್ಟರಮಟ್ಟಿಗೆ ಪಾರದರ್ಶಕವಾಗಿ, ಅಕ್ರಮಗಳಿಲ್ಲದೆ ನಡೆಯಿತು ಎನ್ನುವುದು ಪ್ರಜಾಸತ್ತೆಯಲ್ಲಿ ಮುಖ್ಯವಾಗುತ್ತದೆ. ಈ ದೇಶವನ್ನು ಆಳುವ ಸರಕಾರವನ್ನು ಚುನಾಯಿಸುವುದು ಈ ದೇಶದ ಜನತೆಯೇ ಹೊರತು ‘ಯಂತ್ರ’ಗಳಲ್ಲ ಎನ್ನುವ ಪ್ರಾಥಮಿಕ ಅರಿವು ಚುನಾವಣಾ ಆಯೋಕ್ಕೆ ಇರಬೇಕಾಗಿದೆ. ಜನರ, ಪಕ್ಷಗಳ ವಿಶ್ವಾಸಾರ್ಹತೆಯನ್ನು ಕಳೆದುಕೊಂಡ ಇವಿಎಂ ಮೂಲಕ ನಡೆಸಿದ ಚುನಾವಣೆಯ ಫಲಿತಾಂಶವೂ ಸಹಜವಾಗಿಯೇ ವಿಶ್ವಾಸಾರ್ಹತೆಯನ್ನು ಕಳೆದುಕೊಳ್ಳುತ್ತದೆ.