ಬಲಾಢ್ಯರ ನಿಯಂತ್ರಣದಲ್ಲಿ ಕಾರ್ಯಾಂಗ
ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ
2018ರಿಂದ 2022ರವರೆಗೆ ಭಾರತೀಯ ಆಡಳಿತ ಸೇವೆ ಅಂದರೆ ಐಎಎಸ್ ಮತ್ತು ಭಾರತೀಯ ಪೊಲೀಸ್ ಸೇವೆಗೆ ನೇಮಕಗೊಂಡ 1,653 ಜನರಲ್ಲಿ ಕನಿಷ್ಠ 46.15 ಶೇಕಡ ಜನರು ಸಾಮಾನ್ಯ ವರ್ಗಕ್ಕೆ ಅಂದರೆ ಮೇಲ್‌ಜಾತಿಗೆ ಸೇರಿದವರು ಎನ್ನುವ ಅಂಶವನ್ನು ಕೇಂದ್ರ ಸರಕಾರದ ಅಂಕಿಅಂಶಗಳು ಬಹಿರಂಗಪಡಿಸಿವೆ. ಉಳಿದಂತೆ 29.4 ಶೇ.ಜನರು ಹಿಂದುಳಿದ ವರ್ಗಕ್ಕೆ ಸೇರಿದವರಾಗಿದ್ದಾರೆ. ಶೇ. 16.33ರಷ್ಟು ಪರಿಶಿಷ್ಟ ಜಾತಿಗೆ ಮತ್ತು ಶೇ. 7.83ರಷ್ಟು ಪರಿಶಿಷ್ಟ ಪಂಗಡಕ್ಕೆ ಸೇರಿದ್ದಾರೆ. ಸಂಸದರೊಬ್ಬರು ಕೇಳಿದ ಪ್ರಶ್ನೆಗೆ ಉತ್ತರಿಸುತ್ತಾ, ಸಚಿವ ಜಿತೇಂದ್ರ ಸಿಂಗ್ ಮೇಲಿನ ಅಂಕಿಅಂಶಗಳನ್ನು ಬಹಿರಂಗಪಡಿಸಿದ್ದಾರೆ. 2018ರಿಂದ 2022ರವರೆಗಿನ ಅವಧಿಯಲ್ಲಿ 763 ಅಧಿಕಾರಿಗಳು ನೇಮಕಗೊಂಡಿದ್ದಾರೆ. ಇವರಲ್ಲಿ 382 ಐಎಎಸ್ ಮತ್ತು 381 ಐಪಿಎಸ್ ಅಧಿಕಾರಿಗಳು ಸಾಮಾನ್ಯ ವರ್ಗಕ್ಕೆ ಸೇರಿದ್ದಾರೆ ಎನ್ನುವುದು ಅವರು ನೀಡಿದ ಮಾಹಿತಿಯಿಂದ ಬೆಳಕಿಗೆ ಬಂದಿದೆ. 2022ರಲ್ಲಿ ಸಾಮಾನ್ಯ ವರ್ಗದಿಂದ 75 ಮಂದಿ, ಒಬಿಸಿಯಿಂದ 45 ಮಂದಿ ಐಎಎಸ್‌ಗೆ ಆಯ್ಕೆಯಾಗಿದ್ದರೆ, 29 ಮಂದಿ ಎಸ್‌ಸಿಗೆ ಮತ್ತು 13 ಮಂದಿ ಎಸ್‌ಟಿ ಸಮುದಾಯಕ್ಕೆ ಸೇರಿದವರಾಗಿದ್ದಾರೆ. ಶೇಕಡವಾರು ಅತಿ ಕಡಿಮೆ ಸಮುದಾಯವೆಂದು ಗುರುತಿಸಲ್ಪಡುವ ಸಾಮಾನ್ಯ ವರ್ಗ ಈ ದೇಶದ ಅತ್ಯುನ್ನತ ಹುದ್ದೆಯೆಂದು ಗುರುತಿಸಲ್ಪಟ್ಟಿರುವ ಐಎಎಸ್ ಮತ್ತು ಐಪಿಎಸ್‌ಗಳಲ್ಲಿ ಅತ್ಯಧಿಕವಾಗಿ ಗುರುತಿಸಲ್ಪಟ್ಟಿರುವುದು ಏನನ್ನು ಹೇಳುತ್ತದೆ? ಈ ದೇಶದ ಆಡಳಿತ ಚುಕ್ಕಾಣಿ ಇನ್ನೂ ಬಲಾಢ್ಯ ವರ್ಗದಿಂದ ದುರ್ಬಲವರ್ಗಕ್ಕೆ ಹಸ್ತಾಂತರವಾಗಿಲ್ಲ ಎನ್ನುವುದನ್ನು ತಾನೆ? 2022ರಲ್ಲಿ ಐಪಿಎಸ್ ಹುದ್ದೆಗೆ ಸಾಮಾನ್ಯ ವರ್ಗದಿಂದ 83 ಮಂದಿ ಆಯ್ಕೆಯಾಗಿದ್ದರೆ ಒಬಿಸಿಯಿಂದ 53 ಮಂದಿ ಮತ್ತು ಎಸ್‌ಸಿ ಸಮುದಾಯದಿಂದ 31 ಮತ್ತು ಎಸ್‌ಟಿ ಸಮುದಾಯದಿಂದ 13 ಮಂದಿ ಆಯ್ಕೆಯಾಗಿದ್ದಾರೆ. ಕರ್ನಾಟಕದಲ್ಲಿ 314 ಐಎಎಸ್ ಅಧಿಕಾರಿ ಹುದ್ದೆಗಳಿವೆ. ಅವುಗಳಲ್ಲಿ 273 ಹುದ್ದೆಗಳು ಭರ್ತಿಯಾಗಿದ್ದು, 41 ಹುದ್ದೆಗಳು ಖಾಲಿ ಉಳಿದಿವೆ. 224 ಹುದ್ದೆಗಳಲ್ಲಿ 193 ಹುದ್ದೆಗಳನ್ನು ಭರ್ತಿ ಮಾಡಲಾಗಿದ್ದು 31 ಹುದ್ದೆಗಳು ಖಾಲಿ ಬಿದ್ದಿವೆ ಎನ್ನುವ ಅಂಶವನ್ನೂ ಈ ಸಂದರ್ಭದಲ್ಲಿ ಸಚಿವರು ತಿಳಿಸಿದ್ದಾರೆ.
ಈ ದೇಶದಲ್ಲಿ ಜನಪರ ಆಡಳಿತ ಯಾಕೆ ಕಷ್ಟ ಎನ್ನುವ ಪ್ರಶ್ನೆಗೆ ನೀಡಿದ ಉತ್ತರದಂತಿದೆ ಈ ಅಂಕಿಅಂಶಗಳು. ಜನಪ್ರತಿನಿಧಿಗಳು ಈ ದೇಶವನ್ನು ಆಳುತ್ತಿದ್ದಾರೆ ಎನ್ನುವುದು ಈ ದೇಶದ ಪಾಲಿನ ಬಹಿರಂಗ ಸತ್ಯವಾಗಿದ್ದರೆ, ಅಂತಿಮವಾಗಿ ಅಧಿಕಾರ ಚಲಾಯಿಸುವುದು ಕಾರ್ಯಾಂಗ ಎನ್ನುವುದು ಅಂತರಂಗದ ಸತ್ಯವಾಗಿದೆ. ಸಂವಿಧಾನದ ಆಶಯಗಳು, ಸರಕಾರದ ಜನಪರ ಯೋಜನೆಗಳು ಅರ್ಹ ಫಲಾನುಭವಿಗಳನ್ನು ತಲುಪಬೇಕಾದರೆ ಕಾರ್ಯಾಂಗ ಪಕ್ಷಪಾತ ರಹಿತವಾಗಿ ಕೆಲಸ ನಿರ್ವಹಿಸುವುದು ಅತ್ಯಗತ್ಯವಾಗುತ್ತದೆ. ಆಯ್ಕೆಯಾದ ಒಬ್ಬ ಜನಪ್ರತಿನಿಧಿ ಆಡಳಿತವನ್ನು ಅರ್ಥ ಮಾಡಿಕೊಳ್ಳುವುದಕ್ಕೇ ತನ್ನ ಮೊದಲ ಮೂರು ವರ್ಷಗಳನ್ನು ವ್ಯಯ ಮಾಡಬೇಕಾಗುತ್ತದೆ. ಈ ಸಂದರ್ಭದಲ್ಲಿ ಆತ ತಿಳಿದೋ ತಿಳಿಯದೆಯೋ ಐಎಎಸ್ ಅಧಿಕಾರಿಗಳ ಕೈಗೊಂಬೆಯಾಗಿರಬೇಕಾಗುತ್ತಾನೆ. ಸರಕಾರದ ಭಾಗವಾಗಿರುವ ನಾಯಕರು ಯಾವುದೇ ಯೋಜನೆಗಳನ್ನು ಜಾರಿಗೆ ತರಲಿ ಅದನ್ನು ಯಶಸ್ವಿಗೊಳಿಸಬೇಕಾದವರು ಐಎಎಸ್ ಅಧಿಕಾರಿಗಳೇ ಆಗಿದ್ದಾರೆ. ಅನೇಕ ಸಂದರ್ಭಗಳಲ್ಲಿ ಅವರೇ ರಾಜಕೀಯ ನಾಯಕರಿಗೆ ಮಾರ್ಗದರ್ಶಿಗಳಾಗಿರುತ್ತಾರೆ. ಅಧಿಕಾರವರ್ಗ ಮತ್ತು ಜನಪ್ರತಿನಿಧಿಗಳ ನಡುವೆ ಹೊಂದಾಣಿಕೆಗಳಿಲ್ಲದೇ ಇದ್ದರೆ ಆಡಳಿತ ಯಶಸ್ವಿಯಾಗಲು ಸಾಧ್ಯವಿಲ್ಲ. ಒಬ್ಬ ಶೋಷಿತ ಸಮುದಾಯದ ಜನಪ್ರತಿನಿಧಿ ಸಂಸತ್‌ನ್ನು ಪ್ರವೇಶಿಸಿ ಸಚಿವನಾದರೂ, ಆತ ಕಾರ್ಯನಿರ್ವಹಿಸಬೇಕಾದರೆ ಆತನ ಜೊತೆಗೆ ಐಎಎಸ್ ಅಧಿಕಾರಿಗಳು ಎಷ್ಟರ ಮಟ್ಟಿಗೆ ಸಹಕಾರಿಸುತ್ತಾರೆ ಎನ್ನುವುದು ಕೂಡ ಮುಖ್ಯವಾಗುತ್ತದೆ. ಶಾಸಕಾಂಗ-ಕಾರ್ಯಾಂಗದ ನಡುವಿನ ಬಿಕ್ಕಟ್ಟು ಅನೇಕ ಸಂದರ್ಭಗಳಲ್ಲಿ ಜನಪರ ಆಡಳಿತಕ್ಕೆ ಬಹುದೊಡ್ಡ ಸಮಸ್ಯೆಯಾಗುತ್ತದೆ. ಆದುದರಿಂದಲೇ, ಪ್ರಜಾಪ್ರಭುತ್ವ ಯಶಸ್ವಿಯಾಗಬೇಕಾದರೆ, ಶೋಷಿತ ಸಮುದಾಯವನ್ನು ಪ್ರತಿನಿಧಿಸುವ ಐಎಎಸ್ ಅಧಿಕಾರಿಗಳ ಸಂಖ್ಯೆಯಲ್ಲೂ ಹೆಚ್ಚಳವಾಗಬೇಕಾಗುತ್ತದೆ. ವಿಪರ್ಯಾಸವೆಂದರೆ, ಇಂದು ಮೇಲ್‌ಜಾತಿಯ ಅಧಿಕಾರಿಗಳೇ ನಮ್ಮ ಸರಕಾರವನ್ನು ನಿಯಂತ್ರಿಸುತ್ತಿದ್ದಾರೆ. ಆದುದರಿಂದಲೇ ಬಹುತೇಕ ಜನಪರವಾದ ಯೋಜನೆಗಳೆಲ್ಲ ವಿಫಲವಾಗುತ್ತದೆ. ಯಾಕೆಂದರೆ ಈ ಅಧಿಕಾರಿಗಳಿಗೆ ಆ ಯೋಜನೆಗಳು ಯಶಸ್ವಿಯಾಗುವುದು ಬೇಕಾಗಿಲ್ಲ.
‘ಇನ್ನೂ ಮೀಸಲಾತಿ ಯಾಕೆ ಅಸ್ತಿತ್ವದಲ್ಲಿರಬೇಕು?’ ಎನ್ನುವ ಪ್ರಶ್ನೆ ದಿನದಿಂದ ದಿನಕ್ಕೆ ಬಲ ಪಡೆಯುತ್ತಿದೆ. ಆದರೆ ಮೀಸಲಾತಿಯಿಂದಾಗಿ ಶೋಷಿತ ಸಮುದಾಯ ನಿಜಕ್ಕೂ ಪೂರ್ಣ ಪ್ರಮಾಣದಲ್ಲಿ ಸಬಲೀಕರಣಗೊಂಡಿದೆಯೇ ಎನ್ನುವ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳುವುದು ಯಾರಿಗೂ ಬೇಕಾಗಿಲ್ಲ. ಇಷ್ಟು ವರ್ಷ ಕಳೆದರೂ ಮೀಸಲಾತಿ ಯಾಕೆ ಯಶಸ್ವಿಯಾಗಿ ಜಾರಿಗೊಳ್ಳಲಿಲ್ಲ, ಅರ್ಹರು ಯಾಕೆ ಇದರ ಪ್ರಯೋಜನವನ್ನು ಪಡೆದುಕೊಳ್ಳಲು ವಿಫಲರಾದರು? ಎನ್ನುವ ಪ್ರಶ್ನೆ ಬಂದಾಗ ಅದಕ್ಕೆ ಉತ್ತರ, ಈ ದೇಶದ ಕಾರ್ಯಾಂಗ ಸಾಮಾನ್ಯ ವರ್ಗಕ್ಕೆ ಸೇರಿದ ಅಧಿಕಾರಿಗಳಿಂದ ತುಂಬಿರುವುದು ಎನ್ನುವುದೇ ಆಗಿದೆ. ಶೋಷಿತರ ಪರವಾಗಿ ಸಂವಿಧಾನ ಮಾತನಾಡಿದರೂ, ಅದರ ಆಶಯಗಳನ್ನು ಜಾರಿಗೊಳಿಸುವ ಅಧಿಕಾರವನ್ನು ಮತ್ತೆ ಮೇಲ್‌ಜಾತಿಯ ಕೈಗೆ ನೀಡಲಾಗಿದೆ. ಇದೊಂದು ರೀತಿಯಲ್ಲಿ ತೋಳಗಳಿಗೆ ಕುರಿಗಳ ರಕ್ಷಣೆಯ ಹೊಣೆ ನೀಡಿದ ಹಾಗೆ. ಕೆಳಜಾತಿಯ ಕುರಿತಂತೆ ಅಸಹನೆಯನ್ನು ಹೊಂದಿರುವ, ದಲಿತರು ತಮಗೆ ಸರಿಸಮಾನವಾಗಿ ನಿಲ್ಲುವುದನ್ನು ಸಹಿಸದ ಮೇಲ್‌ಜಾತಿಯ ಜನರು ಶೋಷಿತರ ಪರವಾಗಿರುವ ಯೋಜನೆಗಳನ್ನು ಯಾಕಾದರೂ ಯಶಸ್ವಿಯಾಗಿ ಜಾರಿಗೊಳಿಸುತ್ತಾರೆ? ಸಮಾಜದೊಳಗಿರುವ ಜಾತೀಯ ಮನಸ್ಥಿತಿಗಳು ಈ ಅಧಿಕಾರಿಗಳ ಮೂಲಕವೇ ತಮ್ಮ ಕಾರ್ಯಯೋಜನೆಗಳನ್ನು ಸಾಧಿಸುತ್ತವೆ. ಪ್ರಜಾಸತ್ತೆಯ ಫಲಗಳು ದುರ್ಬಲ ಸಮುದಾಯವನ್ನು ತಲುಪದಂತೆ ನೋಡಿಕೊಳ್ಳುವಲ್ಲಿ ಐಎಎಸ್‌ನಲ್ಲಿರುವ ಸಾಮಾನ್ಯ ವರ್ಗದ ಅಧಿಕಾರಿಗಳ ಪಾತ್ರ ಬಹುದೊಡ್ಡದು. ತಳಸ್ತರದ ಅಭಿವೃದ್ಧಿ ಪ್ರಜಾಸತ್ತೆಯ ಗುರಿ ಎನ್ನುವುದು ನಿಜವೇ ಆಗಿದ್ದರೆ ಮೊದಲು ಕಾರ್ಯಾಂಗದಲ್ಲಿರುವ ಅಧಿಕಾರಿ ವರ್ಗದೊಳಗೆ ಮಹತ್ತರ ಬದಲಾವಣೆಗಳಾಗಬೇಕಾಗಿದೆ. ಐಎಎಸ್ ಅಧಿಕಾರಿಗಳಲ್ಲಿ ದಲಿತರು, ಹಿಂದುಳಿದ ವರ್ಗಗಳು ಮತ್ತು ಅಲ್ಪಸಂಖ್ಯಾತ ಅಧಿಕಾರಿಗಳ ಸಂಖ್ಯೆ ಹೆಚ್ಚಾದಾಗ ಮಾತ್ರ, ಆಡಳಿತವು ಶೋಷಿತರ ಪರವಾಗಿ ಬದಲಾಗುತ್ತದೆ.
ಇತ್ತೀಚಿನ ದಿನಗಳಲ್ಲಿ ನ್ಯಾಯ ವ್ಯವಸ್ಥೆಯೂ ಮೀಸಲಾತಿಯ ವಿರುದ್ಧ, ಶೋಷಿತ ಸಮುದಾಯದ ವಿರುದ್ಧ ಅಸಹನೆಯನ್ನು ಕಾರುವುದನ್ನು ನೋಡಿದ್ದೇವೆ. ವಿಶ್ವ ಹಿಂದೂ ಪರಿಷತ್‌ನ ಸಭೆಯಲ್ಲಿ ನ್ಯಾಯಾಧೀಶರು ನೇರವಾಗಿ, ಯಾವ ಲಜ್ಜೆಯೂ ಇಲ್ಲದೆ ರಾಜಕೀಯ ಮಾತುಗಳನ್ನು ಆಡುವುದನ್ನು, ದ್ವೇಷ ಭಾಷಣಗಳನ್ನು ಮಾಡುವುದನ್ನು ಕೇಳಿದ್ದೇವೆ ಮತ್ತು ಆ ನ್ಯಾಯಾಧೀಶರ ಜಾತಿ ಹಿನ್ನೆಲೆಯನ್ನು ಪರಿಶೀಲಿಸಿದರೆ ಅವರು ಹಾಗೆ ಯಾಕೆ ವರ್ತಿಸುತ್ತಿದ್ದಾರೆ ಎನ್ನುವುದು ನಮಗೆ ಅರ್ಥವಾಗಿ ಬಿಡುತ್ತದೆ. ನ್ಯಾಯಸ್ಥಾನದಲ್ಲಿ ಕುಳಿತು ಮನುಸ್ಮತಿಯನ್ನು ಉಲ್ಲೇಖಿಸುವ, ಕರ್ನಾಟಕದ ಒಂದು ಪ್ರದೇಶವನ್ನು ಪಾಕಿಸ್ತಾನವೆಂದು ನಿಂದಿಸುವ, ಮೀಸಲಾತಿ ಇನ್ನೂ ಯಾಕೆ ಅಸ್ತಿತ್ವದಲ್ಲಿದೆ ಎಂದು ಪ್ರಶ್ನಿಸುವ ನ್ಯಾಯಾಧೀಶರೆಲ್ಲ ಮೇಲ್‌ಜಾತಿಗೆ ಸೇರಿರುತ್ತಾರೆ ಎನ್ನುವುದು ಆಕಸ್ಮಿಕ ಖಂಡಿತಾ ಅಲ್ಲ. ಭಾರತದಲ್ಲಿ ಸರ್ವೋಚ್ಚ ನ್ಯಾಯಾಧೀಶರ ಪೈಕಿ ಒಬ್ಬರು ಮಾತ್ರ ಪರಿಶಿಷ್ಟ ಸಮುದಾಯಕ್ಕೆ ಸೇರಿದವರಾಗಿದ್ದಾರೆ. ಇಲ್ಲಿರುವ ನ್ಯಾಯಾಧೀಶರ ಪೈಕಿ ಶೇ. 80ಕ್ಕಿಂತಲೂ ಅಧಿಕ ಜನರು ಮೇಲ್‌ಜಾತಿಗೆ ಸೇರಿದವರು. ಇವರಿಂದಲೇ ದಲಿತರು, ಶೋಷಿತರು ತಮ್ಮ ನ್ಯಾಯವನ್ನು ಪಡೆದುಕೊಳ್ಳಬೇಕಾಗಿದೆ. ದಲಿತರು, ಅಲ್ಪಸಂಖ್ಯಾತರ ಪಾಲಿಗೆ ನ್ಯಾಯವೆನ್ನುವುದು ದುಬಾರಿ ವಸ್ತುವಾಗಲು ಇದು ಕೂಡ ಮುಖ್ಯ ಕಾರಣವಾಗಿದೆ. ಎಲ್ಲಿಯವರಿಗೆ ಕಾರ್ಯಾಂಗ ಮತ್ತು ನ್ಯಾಯಾಂಗದೊಳಗೆ ಮೀಸಲಾತಿ ಪರಿಣಾಮಕಾರಿಯಾಗಿ ಅನುಷ್ಠಾನಗೊಳ್ಳುವುದಿಲ್ಲವೋ ಅಲ್ಲಿಯವರೆಗೆ ಈ ದೇಶದಲ್ಲಿ ಸಮಾನತೆ ಎನ್ನುವುದು ಮರೀಚಿಕೆಯೇ ಸರಿ.