ಕಾಶ್ಮೀರದಲ್ಲಿ ಉಗ್ರವಾದ: ವಿಫಲವಾಯಿತೆ ಸೇನೆ?
Photo: PTI
ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ
ಜಮ್ಮು-ಕಾಶ್ಮೀರದ ವಿಶೇಷ ಸ್ಥಾನಮಾನವನ್ನು ಕಿತ್ತು ಹಾಕಿ, ಇಡೀ ರಾಜ್ಯವನ್ನು ಸೇನಾನಿಯಂತ್ರಣಕ್ಕೆ ಒಪ್ಪಿಸಿದ ಕೇಂದ್ರದ ಕ್ರಮವನ್ನು ಸುಪ್ರೀಂಕೋರ್ಟ್ ಇತ್ತೀಚೆಗೆ ಎತ್ತಿ ಹಿಡಿದಿದೆ. ಇದೇ ಸಂದರ್ಭದಲ್ಲಿ ಜಮ್ಮು-ಕಾಶ್ಮೀರದಲ್ಲಿ ಶೀಘ್ರ ಚುನಾವಣೆಯನ್ನು ನಡೆಸುವುದಕ್ಕೆ ಮತ್ತು ರಾಜ್ಯದ ಸ್ಥಾನಮಾನವನ್ನು ಮರಳಿಸುವುದಕ್ಕೂ ಸೂಚನೆ ನೀಡಿದೆ. ಜಮ್ಮು-ಕಾಶ್ಮೀರದ ಕುರಿತಂತೆ ನೀಡಿದ ಒಟ್ಟು ತೀರ್ಪಿನಲ್ಲಿ ಜಮ್ಮು-ಕಾಶ್ಮೀರದಲ್ಲಿ ಮತ್ತೆ ಶಾಂತಿ ಸ್ಥಾಪನೆಯಾಗಬೇಕು, ಜನಧ್ವನಿಗೆ ಬಲಬರಬೇಕು ಎನ್ನುವ ಆಶಯಕ್ಕೆ ಒತ್ತು ನ್ಯಾಯಾಲಯ ಒತ್ತು ನೀಡಿತ್ತು. ಸರಕಾರ ಸಂವಿಧಾನವನ್ನು ಉಲ್ಲಂಘಿಸಿಲ್ಲ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆಯಾದರೂ, ಆ ಕ್ರಮದಿಂದ ಕಾಶ್ಮೀರ ಪಡೆದುಕೊಂಡದ್ದು ಏನು ಎನ್ನುವುದು ಮಾತ್ರ ನ್ಯಾಯಾಲಯದ ತೀರ್ಪಿನ ಹೊರಗೇ ಉಳಿದು ಬಿಟ್ಟಿದೆ. ಜಮ್ಮು-ಕಾಶ್ಮೀರಕ್ಕೆ ವಿಶೇಷ ಸ್ಥಾನ ಮಾನ ನೀಡಿರುವುದರಿಂದ ಅಲ್ಲಿ ಉಗ್ರವಾದ ಬೆಳೆದಿದೆ ಎಂದು ಸರಕಾರ ವಾದಿಸುತ್ತಾ ಬಂದಿದೆ. ಆದರೆ ಜಮ್ಮು-ಕಾಶ್ಮೀರದ ಉಗ್ರವಾದ ಈಗ ನಿಂತಿದೆಯೇ ಎನ್ನುವ ಪ್ರಶ್ನೆಯಿಂದ ಮಾತ್ರ ಜಾರಿಕೊಳ್ಳುತ್ತಿದೆ. ಜಮ್ಮು-ಕಾಶ್ಮೀರಕ್ಕೆ ನೀಡಿರುವ ವಿಶೇಷ ಸ್ಥಾನಮಾನವನ್ನು 2019ರಲ್ಲಿ ಹಿಂದೆಗೆಯಲಾಯಿತು. ಕಳೆದ ಮೂರು ವರ್ಷಗಳಿಂದ ಜಮ್ಮು-ಕಾಶ್ಮೀರ ಮಿಲಿಟರಿ ದಿಗ್ಬಂಧನದಲ್ಲಿದೆ. ಉಗ್ರರನ್ನು ನಿಯಂತ್ರಿಸಲು ಸರಕಾರವೇ ಹೇಳುವಂತೆ ಯಾವುದೇ ಅಡೆತಡೆಗಳು ಇರಲಿಲ್ಲ. ಇಷ್ಟಾದರೂ ಕಾಶ್ಮೀರದಲ್ಲಿ ಉಗ್ರರ ನಿಯಂತ್ರಣವಾಗಿದೆಯೇ ಎಂದು ಕೇಳಿದರೆ ಉತ್ತರ ಇಲ್ಲ. ಬದಲಿಗೆ ಕಳೆದ ಮೂರು ವರ್ಷಗಳಲ್ಲಿ ಪಂಡಿತರ ಮೇಲೆ ದಾಳಿಗಳು ಹೆಚ್ಚಿವೆ. ಸರಕಾರಿ ಕೆಲಸ ನಿರ್ವಹಿಸುತ್ತಿರುವ ಪಂಡಿತರು ಸೇರಿದಂತೆ ಸಿಬ್ಬಂದಿ ಸಾಮೂಹಿಕವಾಗಿ ಕೆಲಸ ತೊರೆಯಲು ಮುಂದಾಗಿದ್ದಾರೆ. ಸೇನೆಗಳ ಮೇಲೂ ದಾಳಿಗಳು ಹೆಚ್ಚಿವೆ. ಎಲ್ಲಕ್ಕಿಂತ ಮುಖ್ಯವಾಗಿ ಈ ದೇಶದ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರೇ, ಜಮ್ಮು-ಕಾಶ್ಮೀರದಲ್ಲಿ ಭಯೋತ್ಪಾದನೆ ನಿರ್ಮೂಲನೆಯಾಗಿಲ್ಲ ಎನ್ನುವುದನ್ನು ಒಪ್ಪಿಕೊಂಡಿದ್ದಾರೆ. ಅಷ್ಟೇ ಅಲ್ಲ ಭಯೋತ್ಪಾದನೆಯನ್ನು ನಿಯಂತ್ರಿಸಲು ನೇಮಕಗೊಂಡ ಸೇನಾಧಿಕಾರಿಗಳೇ ಜನರಲ್ಲಿ ಭಯೋತ್ಪಾದನೆಯನ್ನುಂಟು ಮಾಡುವ ಮೂಲಕ ಸುದ್ದಿಯಲ್ಲಿದ್ದಾರೆ.
ಡಿಸೆಂಬರ್ 21ರಂದು ಯೋಧರ ವಾಹನದ ಮೇಲೆ ಶಂಕಿತ ಭಯೋತ್ಪಾದಕರು ಹೊಂಚು ದಾಳಿ ನಡೆಸಿದ ಪರಿಣಾಮವಾಗಿ ನಾಲ್ವರು ಯೋಧರು ಹುತಾತ್ಮರಾಗಿದ್ದರು. ಈ ಹಿನ್ನೆಲೆಯಲ್ಲಿ ಗಡಿಭಾಗಕ್ಕೆ ಭೇಟಿ ನೀಡಿದ ರಾಜನಾಥ ಸಿಂಗ್ ‘‘ಜಮ್ಮು-ಕಾಶ್ಮೀರದ ಮಣ್ಣಿನಲ್ಲಿ ಬೇರೂರಿರುವ ಭಯೋತ್ಪಾದನೆಯನ್ನು ಸೇನೆ ನಿರ್ಮೂಲನೆ ಮಾಡಲಿದೆ ಎಂಬ ಭರವಸೆ ತನಗಿದೆ’’ ಎಂದು ಹೇಳಿಕೆ ನೀಡಿದರು. ಇಡೀ ಜಮ್ಮು-ಕಾಶ್ಮೀರವನ್ನು ಮೂರು ವರ್ಷಗಳಿಂದ ದಿಗ್ಬಂಧನಕ್ಕೆ ಈಡು ಮಾಡಿ, ದೊಡ್ಡ ಸಂಖ್ಯೆಯಲ್ಲಿ ಹೆಚ್ಚುವರಿ ಸೇನೆಯನ್ನು ತಂದು ಕಾಶ್ಮೀರದಲ್ಲಿರಿಸಿದ ಬಳಿಕ ಇದೀಗ ‘‘ನಿರ್ಮೂಲನೆ ಮಾಡುವ ಭರವಸೆ’ಯ ಬಗ್ಗೆ ರಾಜನಾಥ್ ಸಿಂಗ್ ಮಾತನಾಡುತ್ತಿದ್ದಾರೆ. ರಾಜ್ಯದಲ್ಲಿ ಕೇಂದ್ರ ಸರಕಾರ ಭಯೋತ್ಪಾದನೆಯನ್ನು ನಿಯಂತ್ರಿಸುವಲ್ಲಿ ವಿಫಲವಾಗಿದೆ ಎನ್ನುವುದನ್ನು ಅವರು ಈ ಮೂಲಕ ಒಪ್ಪಿಕೊಂಡಂತಾಗಿದೆ. ಜಮ್ಮು-ಕಾಶ್ಮೀರದ ಪರಿಸ್ಥಿತಿಯನ್ನು ಇನ್ನಷ್ಟು ಉಲ್ಬಣಿಸುವಂತೆ ಮಾಡುವುದಕ್ಕಾಗಿ ಸರಕಾರ ಇಷ್ಟೆಲ್ಲ ಕ್ರಮಗಳನ್ನು ತೆಗೆದುಕೊಂಡಿತೆ? ಎನ್ನುವ ಪ್ರಶ್ನೆಯನ್ನು ಜಮ್ಮು-ಕಾಶ್ಮೀರದ ಜನತೆ ಮಾತ್ರವಲ್ಲ, ಜಮ್ಮು-ಕಾಶ್ಮೀರದ ಕುರಿತಂತೆ ವಿಶೇಷ ಮಮತಾಭಾವವನ್ನು ಹೊಂದಿರುವ ಸಕಲ ಭಾರತೀಯರು ಕೇಳುತ್ತಿದ್ದಾರೆ. ಪೂಂಛ್ ರಾಜೌರಿಯಲ್ಲಿ ಸೈನಿಕರ ಮೇಲೆ ಉಗ್ರರು ದಾಳಿ ನಡೆಸಿದ ಬಳಿಕ ಸೇನೆ ಮೂವರು ನಾಗರಿಕರನ್ನು ಬರ್ಬರವಾಗಿ ಚಿತ್ರಹಿಂಸೆ ನೀಡಿ ಕೊಂದು ಹಾಕಿದ ಆರೋಪವನ್ನು ಎದುರಿಸುತ್ತಿದೆ. ಸಫೀರ್ ಹುಸೈನ್, ಶೌಕತ್, ಶಬೀರ್ ಅಹ್ಮದ್ ಈ ಮೂವರು ನಾಗರಿಕರು ಸೇನೆಯ ಬರ್ಬರ ದೌರ್ಜನ್ಯಕ್ಕೊಳಗಾಗಿ ಮೃತಪಟ್ಟಿದ್ದರು. ವಿಪರ್ಯಾಸವೆಂದರೆ ಸೇನಾ ಕಾರ್ಯಾಚರಣೆಯಲ್ಲಿ ಉಗ್ರರೆಂದು ಚಿತ್ರಹಿಂಸೆ ನೀಡಿ ಕೊಂದು ಹಾಕಿದ ಓರ್ವ ನಾಗರಿಕನ ಸೋದರ 25 ವರ್ಷಗಳಿಂದ ಬಿಎಸ್ಎಫ್ನಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಆರಂಭದಲ್ಲಿ ಸೇನೆ ಇವರ ತಲೆಗೆ ಉಗ್ರರ ಪಟ್ಟವನ್ನು ಕಟ್ಟಲು ಯತ್ನಿಸಿತಾದರೂ, ವಾಸ್ತವವನ್ನು ಜಾಹೀರುಗೊಳ್ಳುತ್ತಿದ್ದಂತೆಯೇ ಪ್ರಮಾದವನ್ನು ಒಪ್ಪಿಕೊಂಡಿತು. ಇದೀಗ ನಾಗರಿಕರ ಹತ್ಯೆಯ ಬಗ್ಗೆ ತನಿಖೆ ನಡೆಯುತ್ತಿದೆ.
ಕಾಶ್ಮೀರದಲ್ಲಿ ಉಗ್ರರೆಂದು ನಾಗರಿಕರನ್ನು ಸೇನೆ ಹತ್ಯೆ ಮಾಡುತ್ತಿರುವುದು ಇದೇ ಮೊದಲಲ್ಲ. ಈ ಹಿಂದೆ ಹಲವು ಪ್ರಕರಣಗಳು ಇಂತಹ ಬೆಳಕಿಗೆ ಬಂದಿದ್ದು, ಕೆಲವು ಕೃತ್ಯಗಳಿಗೆ ಅಧಿಕಾರಿಗಳಿಗೆ ಶಿಕ್ಷೆಯೂ ಆಗಿದೆ. ಆಫ್ಸ್ಪಾವನ್ನು ಬಳಸಿಕೊಂಡು ಸೇನೆ ನಾಗರಿಕರನ್ನು ಬಂದೂಕಿನ ನಳಿಗೆಯಿಂದ ನಿಯಂತ್ರಿಸಲು ಯತ್ನಿಸುತ್ತಿದೆ. ಉಗ್ರರನ್ನು ನಿಯಂತ್ರಿಸಲಾಗದೆ ಆ ಹತಾಶೆಯಿಂದ ಸೇನೆ ನಾಗರಿಕರ ಮೇಲೆ ಎರಗುತ್ತಿದೆ ಎನ್ನುವ ಆರೋಪಗಳು ಕೇಳಿ ಬರುತ್ತಿವೆ. ಈ ಮೂಲಕ ಸೇನೆ, ಪರೋಕ್ಷವಾಗಿ ಕಾಶ್ಮೀರದಲ್ಲಿರುವ ಉಗ್ರರಿಗೆ ಅನುಕೂಲವನ್ನೇ ಮಾಡಿಕೊಡುತ್ತಿದೆ. ನಾಗರಿಕರ ಮೇಲೆ ದೌರ್ಜನ್ಯಗಳು ಹೆಚ್ಚುತ್ತಾ ಹೋದಂತೆ ಅವುಗಳು ಉಗ್ರರ ಕೃತ್ಯಗಳನ್ನು ಸಮರ್ಥಿಸತೊಡಗುತ್ತವೆ. ಒಂದೆಡೆ ಉಗ್ರರನ್ನು ದಮನಿಸುತ್ತಿದ್ದೇನೆ ಎನ್ನುತ್ತಲೇ ಮತ್ತೊಂದೆಡೆ ನಾಗರಿಕರ ಮೇಲೂ ದಾಳಿ ನಡೆಸುತ್ತಿರುವ ಸೇನೆ ಈ ಮೂಲಕ ಕಾಶ್ಮೀರದ ಯಾವ ರೀತಿಯಲ್ಲಿ ಒಳಿತನ್ನು ಮಾಡುತ್ತಿದೆ? ಕಾಶ್ಮೀರದ ಜನರನ್ನು ಸಂಪೂರ್ಣ ಹೊರಗಿಟ್ಟು ಅಥವಾ ಕೊಂದು ಹಾಕಿ ಅಥವಾ ಅವರನ್ನು ಶಾಶ್ವತವಾಗಿ ದಮನಿಸುತ್ತಾ ಕಾಶ್ಮೀರವನ್ನು ನಮ್ಮದಾಗಿಸಲು ಹೊರಟಿದೆಯೇ ಕೇಂದ್ರ ಸರಕಾರ? ಈ ಪ್ರಶ್ನೆಯನ್ನು ಇದೀಗ ಅಲ್ಲಿರುವ ಹಲವು ಹಿರಿಯ ನಾಯಕರು ಕೇಂದ್ರ ಸರಕಾರಕ್ಕೆ ಕೇಳುತ್ತಿದ್ದಾರೆ.
ನ್ಯಾಶನಲ್ ಕಾನ್ಫರೆನ್ಸ್ನ ಮುಖ್ಯಸ್ಥ ಹಾಗೂ ಜಮ್ಮು-ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಫಾರೂಕ್ ಅಬ್ದುಲ್ಲಾ ಅವರು ಇತ್ತೀಚೆಗೆ ಅತ್ಯಂತ ಗಂಭೀರವಾದ ಹೇಳಿಕೆಯನ್ನು ಜಮ್ಮು-ಕಾಶ್ಮೀರದ ಕುರಿತಂತೆ ನೀಡಿದರು. ‘‘ಮಾತುಕತೆಯ ಮೂಲಕ ಇದಕ್ಕೊಂದು ಪರಿಹಾರವನ್ನು ಕಾಣಿಸದೇ ಇದ್ದರೆ, ಜಮ್ಮು-ಕಾಶ್ಮೀರದ ಸ್ಥಿತಿ ಗಾಝಾ ಸ್ಥಿತಿಗಿಂತ ಭಿನ್ನವಾಗಿರುವುದಿಲ್ಲ. ಇಸ್ರೇಲ್ನ ಬಾಂಬ್ ದಾಳಿಯಿಂದ ತತ್ತರಿಸುತ್ತಿರುವ ಗಾಝಾ, ಫೆಲೆಸ್ತೀನ್ ಸ್ಥಿತಿಯೇ ಜಮ್ಮು-ಕಾಶ್ಮೀರದ್ದಾಗುತ್ತದೆ’’ ಎಂದು ಅವರು ಆತಂಕ ವ್ಯಕ್ತಪಡಿಸಿದರು. ಜಮ್ಮು-ಕಾಶ್ಮೀರ ಭಾರತದ ಅವಿಭಾಜ್ಯ ಅಂಗ ಎಂದು ಹೇಳುತ್ತಿರುವ ಕೇಂದ್ರ ಸರಕಾರ, ಆ ಅವಿಭಾಜ್ಯ ಅಂಗವನ್ನು ತನ್ನದಾಗಿ ಸ್ವೀಕರಿಸಲು ಯಾಕೆ ಹಿಂಜರಿಯುತ್ತಿದೆ? ಅಲ್ಲಿ ಯಾಕೆ ಪ್ರಜಾಸತ್ತಾತ್ಮಕವಾಗಿ ಚುನಾವಣೆಯನ್ನು ನಡೆಸಲು ಇನ್ನೂ ಸಾಧ್ಯವಾಗುತ್ತಿಲ್ಲ? ಎನ್ನುವ ಪ್ರಶ್ನೆಗೆ ಪ್ರಧಾನಿ ಮೋದಿಯವರು ಉತ್ತರಿಸಬೇಕಾಗಿದೆ. ಜಮ್ಮು-ಕಾಶ್ಮೀರದಲ್ಲಿ ಶಾಶ್ವತವಾಗಿ ನರಕ ಸ್ಥಿತಿಯನ್ನು ಸೃಷ್ಟಿಸಿದರೆ ಆ ನರಕದ ಪಾಲನ್ನು ಭಾರತದ ಉಳಿದಭಾಗವೂ ಉಣ್ಣಬೇಕಾಗುತ್ತದೆ ಎನ್ನುವ ವಾಸ್ತವವನ್ನು ಸರಕಾರ ಅರ್ಥ ಮಾಡಿಕೊಳ್ಳಬೇಕು. ಒಂದಲ್ಲ ಒಂದು ಸೇನೆ ಕಾಶ್ಮೀರದಿಂದ ಹಿಂದಕ್ಕೆ ಸರಿಯಲೇ ಬೇಕು. ಅಲ್ಲಿರುವ ಸೇನೆಯ ಹೊರೆಯನ್ನು, ನಾಶ ನಷ್ಟವನ್ನು ಭಾರತದಂತಹ ಅಭಿವೃದ್ಧಿಹೊಂದುತ್ತಿರುವ ದೇಶ ಬಹುಕಾಲ ತಾಳಿಕೊಳ್ಳಲು ಸಾಧ್ಯವಿಲ್ಲ.
ಫಾರೂಕ್ ಅಬ್ದುಲ್ಲಾ ಅವರು ಜಮ್ಮು-ಕಾಶ್ಮೀರದ ಅತ್ಯಂತ ಹಿರಿಯ ನಾಯಕರು. ಜಮ್ಮು-ಕಾಶ್ಮೀರ ಭಾರತದ ಭಾಗವಾಗುವುದರಲ್ಲಿ ಅವರ ಕುಟುಂಬದ ಕೊಡುಗೆ ಬಹುದೊಡ್ಡದಿದೆ. ಕಾಶ್ಮೀರದ ಸಮಸ್ಯೆಗಳ ಆಳಅಗಲವನ್ನು ಫಾರೂಕ್ ಅಬ್ದುಲ್ಲಾರಂತಹ ಹಿರಿಯ ನಾಯಕರು ಚೆನ್ನಾಗಿಬಲ್ಲರು. ಭಾರತ ಸರಕಾರ ಪಾಕಿಸ್ತಾನದ ಜೊತೆಗೆ ಮಾತುಕತೆ ನಡೆಸಲಿ ಬಿಡಲಿ, ಕನಿಷ್ಠ ಒಂದು ಕಾಲದಲ್ಲಿ ಜಮ್ಮು-ಕಾಶ್ಮೀರದ ಜನರನ್ನು ಭಾರತದಲ್ಲಿ ಪ್ರತಿನಿಧಿಸಿದ ಈ ಹಿರಿಯರ ಜೊತೆಗೆ ಮುಕ್ತವಾಗಿ ಮಾತುಕತೆ ನಡೆಸುವುದಕ್ಕೆ ಸಿದ್ಧವಾಗುವುದು ಅತ್ಯಗತ್ಯ. ಅಲ್ಲಿನ ಜನತೆಯನ್ನು ಹೊರಗಿಟ್ಟು ಸರಕಾರ ತೆಗೆದುಕೊಳ್ಳುವ ನಿರ್ಧಾರಗಳಿಂದ ಜಮ್ಮು-ಕಾಶ್ಮೀರವನ್ನು ಭಾವನಾತ್ಮಕವಾಗಿ ಪೂರ್ಣ ಪ್ರಮಾಣದಲ್ಲಿ ನಮ್ಮದಾಗಿಸಿಕೊಳ್ಳಲು ಸಾಧ್ಯವಿಲ್ಲ. ಅಲ್ಲಿಯ ಜನರ ಅಭಿವ್ಯಕ್ತಿಗಳಾಗಿರುವ ಈ ಹಿರಿಯ ನಾಯಕರ ಜೊತೆಗೆ ಮಾತುಕತೆ ನಡೆಸಿ ಅವರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಸರಕಾರ ಮುಂದಿನ ಜಾಣ ನಡೆಗಳನ್ನು ಇಡಬೇಕು. ಜಮ್ಮು-ಕಾಶ್ಮೀರಕ್ಕೆ ಪ್ರತ್ಯೇಕ ರಾಜ್ಯದ ಸ್ಥಾನಮಾನವನ್ನು ನೀಡುವುದು, ಆದಷ್ಟು ಬೇಗ ಚುನಾವಣೆಗಳನ್ನು ನಡೆಸುವುದು ಅಲ್ಲಿ ನ ನಾಗರಿಕರ ಮೇಲೆ ನಡೆಯುವ ಇನ್ನಷ್ಟು ದೌರ್ಜನ್ಯಗಳನ್ನು ತಡೆಯಬಲ್ಲದು ಮಾತ್ರವಲ್ಲ, ಉಗ್ರರ ಕೈಕಾಲುಗಳನ್ನು ಆ ಮೂಲಕ ಮಾತ್ರ ಕಟ್ಟಿ ಹಾಕಲು ಸಾಧ್ಯ.