ಔಷಧಿಗಳ ಕೊರತೆಯಿಂದ ಕ್ಷಯ ಉಲ್ಬಣಗೊಳ್ಳುವ ಆತಂಕ
photo: freepik.com
ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ
ದೇಶ ಕ್ಷಯದ ವಿರುದ್ಧ ಜಾಗೃತಿ ದಿನವನ್ನು ಆಚರಿಸುತ್ತಿರುವ ಸಂದರ್ಭದಲ್ಲೇ ಹೊಸದಿಲ್ಲಿಯಲ್ಲಿ ಕ್ಷಯ ಮತ್ತು ಎಚ್ಐವಿ ರೋಗಿಗಳು ಕ್ಷಯ ಪ್ರತಿರೋಧಕ ಔಷಧಿಗಳ ಕೊರತೆಯ ವಿರುದ್ಧ ಬೀದಿಗಿಳಿದು ಪ್ರತಿಭಟನೆ ನಡೆಸಿದ್ದಾರೆ. ವಿಶ್ವದಲ್ಲೇ ಅತಿ ಹೆಚ್ಚು ಕ್ಷಯ ರೋಗಿಗಳಿರುವ ದೇಶ ಭಾರತ. ಕೊರೋನೋತ್ತರ ದಿನಗಳಲ್ಲಿ ಕ್ಷಯ ಮತ್ತು ಎಚ್ಐವಿ ರೋಗಿಗಳಿಗೆ ಬೇಕಾದ ಔಷಧಿಯಲ್ಲಿ ತೀವ್ರ ಕೊರತೆ ಎದುರಾಗಿದ್ದು, ಔಷಧಿಗಳಿಗಾಗಿ ಸಾಮಾಜಿಕ ಕಾರ್ಯಕರ್ತರು ಹಲವು ಬಾರಿ ಬೀದಿಗಿಳಿದು ಪ್ರತಿಭಟನೆ ನಡೆಸಿದ್ದಾರೆ. ಈ ಬಾರಿಯೂ ಕ್ಷಯ ಜಾಗೃತಿ ದಿನವನ್ನು ಔಷಧಿಗಳ ಕೊರತೆಯ ಜೊತೆಗೇ ಆಚರಿಸಬೇಕಾದ ಸ್ಥಿತಿ ನಿರ್ಮಾಣವಾಗಿದೆ. 2025ರ ಒಳಗೆ ಭಾರತ ಕ್ಷಯ ಮುಕ್ತ ದೇಶವಾಗುತ್ತದೆ ಎಂದು ಎರಡು ವರ್ಷಗಳ ಹಿಂದೆ ಪ್ರಧಾನಮಂತ್ರಿ ಮೋದಿಯವರು ವಾರಣಾಸಿಯಲ್ಲಿ ಕರೆ ನೀಡಿದ್ದರು. ಕ್ಷಯರೋಗಿಗಳ ಅಗತ್ಯಕ್ಕೆ ತಕ್ಕ ಔಷಧಿಗಳನ್ನು ಸಮಯಕ್ಕೆ ಸರಿಯಾಗಿ ಪೂರೈಸುವುದಕ್ಕೇ ಸರಕಾರ ವಿಫಲವಾಗಿರುವಾಗ ದೇಶದಲ್ಲಿ ಕ್ಷಯ ರೋಗ ನಿರ್ಮೂಲನಗೊಳ್ಳುವುದು ದೂರದ ಮಾತು. ಒಂದು ದೇಶ ಕ್ಷಯ ರೋಗಕ್ಕೆ ಸಮಯಕ್ಕೆ ಸರಿಯಾಗಿ ಔಷಧಿ ನೀಡಲು ವಿಫಲವಾಗಿದೆಯೆಂದರೆ, ಪರೋಕ್ಷವಾಗಿ ದೇಶದಲ್ಲಿ ಕ್ಷಯವು ಅಕ್ಷಯವಾಗಿಸುತ್ತಿದೆಯೆಂದು ಅರ್ಥ. ಕೊರೋನೋತ್ತರ ದಿನಗಳಲ್ಲಿ ಭಾರತದಲ್ಲಿ ಕ್ಷಯ ರೋಗಿಗಳ ಸಂಖ್ಯೆ ಹೆಚ್ಚುತ್ತಿದೆ ಎನ್ನುವ ಕಳವಳ ಸಾಮಾಜಿಕ ಸಂಘಸಂಸ್ಥೆಗಳಿಂದ ವ್ಯಕ್ತವಾಗುತ್ತಿದೆ. ಕೊರೋನ ವಿಷಯದಲ್ಲಿ ಆಕಾಶ ಭೂಮಿ ಒಂದು ಮಾಡಿರುವ ಭಾರತ ಕ್ಷಯದ ವಿಷಯದಲ್ಲಿ ಪ್ರದರ್ಶಿಸುತ್ತಿರುವ ಗಾಢ ನಿರ್ಲಕ್ಷ್ಯ ಭಾರತವನ್ನು ರೋಗಗ್ರಸ್ತ ಭವಿಷ್ಯದ ಕಡೆಗೆ ಮುನ್ನಡೆಸುವುದರಲ್ಲಿ ಅನುಮಾನವಿಲ್ಲ.
ಭಾರತದಲ್ಲಿ ಕ್ಷಯ ರೋಗ ಈ ಮಟ್ಟವನ್ನು ತಲುಪುವುದಕ್ಕೆ ಕೊರೋನ ಕೊಡುಗೆ ಬಹುದೊಡ್ಡದು. ಕೊರೋನ ಸಂದರ್ಭದಲ್ಲಿ ಹೇರಲ್ಪಟ್ಟ ಲಾಕ್ಡೌನ್ನಿಂದ ದೇಶ ತೀವ್ರ ಆರ್ಥಿಕ ಬಿಕ್ಕಟ್ಟನ್ನು ಎದುರಿಸಿತು. ಈ ಸಂದರ್ಭದಲ್ಲಿ ಆರೋಗ್ಯ ಕ್ಷೇತ್ರಗಳಿಗಾಗಿ ಹೊಸದಾಗಿ ಸರಕಾರ ಹಣ ಹೂಡಿಕೆ ಮಾಡುವ ಸ್ಥಿತಿ ನಿರ್ಮಾಣವಾಯಿತು. ಕ್ಷಯ, ಎಚ್ಐವಿ ಮೊದಲಾದ ರೋಗಿಗಳಿಗಾಗಿ ಮೀಸಲಿರಿಸಿದ ಹಣವನ್ನು ಕೊರೋನಕ್ಕಾಗಿ ವರ್ಗಾಯಿಸಲಾಯಿತು. ಹೆಚ್ಚುವರಿ ಬೆಡ್, ಹೆಚ್ಚುವರಿ ಆಕ್ಸಿಜನ್, ಔಷಧಿಗಳು ಎಂದು ಉಳಿದೆಲ್ಲ ಕಾಯಿಲೆಗಳನ್ನು ನಿರ್ಲಕ್ಷಿಸಿ ಆರೋಗ್ಯ ಕ್ಷೇತ್ರ ಕೊರೋನ ಕೇಂದ್ರಿತವಾಯಿತು. ಲಾಕ್ಡೌನ್ನಿಂದಾಗಿ ಉಳಿದೆಲ್ಲ ಕಾಯಿಲೆಗಳಿಗೆ ಔಷಧಿಗಳು ದುರ್ಲಭವಾಯಿತು. ಆಸ್ಪತ್ರೆಗಳಿಗೆ ಹೋಗುವುದಕ್ಕೆ ಜನರು ಹಿಂಜರಿಯ ತೊಡಗಿದರು. ಕ್ಷಯ ರೋಗಿಗಳು ಕಾಲ ಕಾಲಕ್ಕೆ ವೈದ್ಯರನ್ನು ಭೇಟಿಯಾಗಿ ಅವರಿಂದ ಸಮಯಕ್ಕೆ ಸರಿಯಾಗಿ ಔಷಧಿಗಳನ್ನು ಪಡೆದುಕೊಳ್ಳುವುದು ಅತ್ಯಗತ್ಯವಾಗಿತ್ತು. ಸಮಯಕ್ಕೆ ಸರಿಯಾಗಿ ಸುಮಾರು ಒಂದು ವರ್ಷ ಔಷಧಿಗಳನ್ನು ಪಡೆದರೆ ಮಾತ್ರ ಕ್ಷಯ ಸಂಪೂರ್ಣ ವಾಸಿಯಾಗಲು ಸಾಧ್ಯ. ಒಂದುವೇಳೆ ಔಷಧಿ ಸೇವನೆ ಅರ್ಧದಲ್ಲೇ ನಿಂತರೆ ಭಾಗಶಃ ಗುಣವಾದ ಕಾಯಿಲೆ ಮತ್ತೆ ಉಲ್ಬಣವಾಗಬಹುದು. ಕೊರೋನ ಕಾಲದಲ್ಲಿ ದೊಡ್ಡ ಸಂಖ್ಯೆಯ ಬಡವರಲ್ಲಿ ಕ್ಷಯ ರೋಗ ಉಲ್ಬಣಗೊಂಡಿತು.
ಕೊರೋನ ಕಾಲದಲ್ಲಿ ಕ್ಷಯ ಉಲ್ಬಣಿಸಲು ಇನ್ನೊಂದು ಮುಖ್ಯ ಕಾರಣ ಅಪೌಷ್ಟಿಕತೆ. ಲಾಕ್ಡೌನ್ನಿಂದಾಗಿ ಬಡವರು ಇನ್ನಷ್ಟು ಬಡವರಾದರು. ಒಂದು ಹೊತ್ತಿನ ಊಟವೂ ಕಷ್ಟ ಎನ್ನುವ ಸಂಕಟದ ಕಾಲದಲ್ಲಿ ಅವರಿದ್ದರು. ಕ್ಷಯ ರೋಗ ಔಷಧಿಯನ್ನು ಮಾತ್ರವಲ್ಲ, ಪೌಷ್ಟಿಕ ಆಹಾರವನ್ನೂ ಬೇಡುತ್ತದೆ. ಭಾರತದಲ್ಲಿ ಕ್ಷಯ ಮತ್ತು ಅಪೌಷ್ಟಿಕತೆಯ ನಡುವೆ ಅವಿನಾಭಾವ ಸಂಬಂಧವಿದೆ. ಸಾಧಾರಣವಾಗಿ, ಕ್ಷಯ ರೋಗಿಗಳಿಗೆ ಪೌಷ್ಟಿಕ ಆಹಾರಕ್ಕಾಗಿ ಹೆಚ್ಚುವರಿ ಅನುದಾನವನ್ನು ಸರಕಾರ ಬಿಡುಗಡೆ ಮಾಡುತ್ತದೆ. ಕೊರೋನ ಕಾಲದಲ್ಲಿ ಕ್ಷಯ ರೋಗಿಗಳು ಮಾತ್ರವಲ್ಲ, ಲಾಕ್ಡೌನ್ ಸಂತ್ರಸ್ತರೆಲ್ಲರೂ ಆಹಾರಕ್ಕಾಗಿ ಸರಕಾರದ ಕಡೆಗೆ ಮುಖ ಮಾಡಿದ್ದರು. ಕ್ಷಯ ರೋಗಿಗಳಿಗೆ ಔಷಧಿ ಒದಗಿಸುವುದೇ ಕಷ್ಟವಾಗಿರುವಾಗ, ಇನ್ನು ಪೌಷ್ಟಿಕ ಆಹಾರ ವಿತರಣೆ ಸಾಧ್ಯವಾಗುವ ಮಾತೆ? ಕೊರೋನವನ್ನು ನಿಯಂತ್ರಿಸಿದ್ದೇವೆ ಎಂದು ಸರಕಾರ ಘೋಷಣೆ ಮಾಡುತ್ತಿರುವ ಮಧ್ಯದಲ್ಲೇ ಈ ದೇಶದಲ್ಲಿ ಕ್ಷಯ ರೋಗಿಗಳಲ್ಲಿ ಭಾರೀ ಪ್ರಮಾಣದ ಏರಿಕೆಯಾಗಿತ್ತು. ಜಗತ್ತಿನ ಒಟ್ಟು ಕ್ಷಯ ರೋಗಿಗಳಲ್ಲಿ ನಾಲ್ಕನೇ ಒಂದು ಭಾಗ ಭಾರತದಲ್ಲೇ ಇದ್ದಾರೆ. 2022ನೇ ವರ್ಷದ ಅಂತ್ಯಕ್ಕೆ ಭಾರತದಲ್ಲಿ 23.2 ಲಕ್ಷ ಕ್ಷಯ ರೋಗಿಗಳನ್ನು ಗುರುತಿಸಲಾಗಿತ್ತು. 2021ಕ್ಕೆ ಹೋಲಿಸಿದರೆ ಇದು ಶೇ. 13ರಷ್ಟು ಹೆಚ್ಚಳವಾಗಿದೆ. ಇದು ಸರಕಾರಿ ಅಂಕಿಅಂಶಗಳು. ಅನಧಿಕೃತ ಕ್ಷಯರೋಗಿಗಳ ಸಂಖ್ಯೆ ಬೇರೆಯೇ ಇದೆ. ಇವರು ಒಬ್ಬರಿಂದ ಇನ್ನೊಬ್ಬರಿಗೆ ಈ ರೋಗವನ್ನು ಹರಡುತ್ತಲೇ ಇದ್ದಾರೆ. ಪತ್ರಿಕೆಗಳು ಕೊರೋನ ಸೋಂಕಿತರ ಸಂಖ್ಯೆಯನ್ನು ಪ್ರಕಟಿಸಿದಂತೆ ಕ್ಷಯ ರೋಗಿಗಳ ಸಂಖ್ಯೆಯನ್ನೇನಾದರೂ ಪ್ರಕಟಿಸತೊಡಗಿದರೆ, ಸರಕಾರ ಅನಿವಾರ್ಯವಾಗಿ ಇನ್ನೊಂದು ಲಾಕ್ಡೌನ್ ಘೋಷಿಸಬೇಕಾದ ಸ್ಥಿತಿ ಬರಬಹುದು.ಕೊರೋನ ಕಾಲದಲ್ಲಿ ಬೃಹತ್ ಔಷಧ ಕಂಪೆನಿಗಳು ಇನ್ನಷ್ಟು ಶ್ರೀಮಂತವಾದವು. ಜನಸಾಮಾನ್ಯರ ತೆರಿಗೆ ಹಣವೆಲ್ಲ ಈ ಔಷಧ ಕಂಪೆನಿಗಳ ತಿಜೋರಿ ತುಂಬಿದವು. ಭಾರತದ ಸುಮಾರು 35 ಔಷಧ ಕಂಪೆನಿಗಳು ರಾಜಕೀಯ ಪಕ್ಷಗಳಿಗೆ 1,000 ಕೋಟಿ ರೂಪಾಯಿ ದೇಣಿಗೆ ನೀಡಿರುವುದು ಇತ್ತೀಚೆಗೆ ಮಾಧ್ಯಮಗಳಿಂದ ಬಹಿರಂಗವಾದವು. ಇದರಲ್ಲಿ ಕಳಪೆ ಗುಣಮಟ್ಟದ 7 ಕಂಪೆನಿಗಳು ಸರಕಾರದಿಂದ ತನಿಖೆಗೆ ಗುರಿಯಾದ ಸಂದರ್ಭದಲ್ಲಿ ಚುನಾವಣಾ ಬಾಂಡ್ಗಳನ್ನು ಖರೀದಿ ಮಾಡಿವೆ. ಭಾರತದಲ್ಲಿ ಔಷಧಗಳು ಹೇಗೆ ಲಾಭದಾಯಕ ಉದ್ಯಮವಾಗಿ ಪರಿವರ್ತನೆಗೊಂಡಿದೆ ಎನ್ನುವುದನ್ನು ಇದು ಹೇಳುತ್ತದೆ. ಕೊರೋನ ಕಾಲದಲ್ಲಿ ಉಂಡವನೇ ಜಾಣ ಎಂಬಂತೆ, ಔಷಧ ಕಂಪೆನಿಗಳು ಬೇರೆ ಬೇರೆ ರೀತಿಯಲ್ಲಿ ತಮ್ಮ ಸರಕುಗಳನ್ನು ಮಾರುಕಟ್ಟೆಗೆ ಬಿಟ್ಟಿತು. ಲಸಿಕೆಯ ಹೆಸರಿನಲ್ಲಿ ಕೋಟ್ಯಂತರ ರೂಪಾಯಿಯನ್ನು ಈ ಕಂಪೆನಿಗಳಿಗೆ ಸರಕಾರವೇ ಸುರಿಯಿತು. ಲಸಿಕೆಯನ್ನು ಕಡ್ಡಾಯವಾಗಿ ಪಡೆದುಕೊಳ್ಳುವಂತೆ ಒತ್ತಾಯ ಮಾಡಿತು. ಇಷ್ಟಾದರೂ ಅವಧಿ ಮುಗಿದ ಕೋಟ್ಯಂತರ ಬೆಲೆಬಾಳುವ ಲಸಿಕೆಗಳು ತ್ಯಾಜ್ಯ ಸೇರಿದವು. ಲಸಿಕೆ ಸ್ವೀಕರಿಸಿದ ನಕಲಿ ಪ್ರಮಾಣ ಪತ್ರಗಳು ಕಾಳಸಂತೆಯಲ್ಲಿ ದೊಡ್ಡ ಪ್ರಮಾಣದಲ್ಲಿ ಮಾರಾಟದವು. ಈ ಲಸಿಕೆಗೆ ಸುರಿದ ಹಣದ ಅರ್ಧ ಪಾಲನ್ನು ಕ್ಷಯ, ಎಚ್ಐವಿ ಮೊದಲಾದ ಔಷಧಿಗಳಿಗೆ ಮೀಸಲಿಟ್ಟಿದ್ದಿದ್ದರೆ ಇಂದು ದೇಶದ ಆರೋಗ್ಯ ಇಷ್ಟರಮಟ್ಟಿಗೆ ಕೆಡುತ್ತಿರಲಿಲ್ಲ.
ಒಂದೆಡೆ ಕ್ಷಯರೋಗ ಮತ್ತು ಎಚ್ಐವಿ ಔಷಧಿಗಳ ಕೊರತೆಯ ಬಗ್ಗೆ ಕಳೆದೆರಡು ವರ್ಷಗಳಿಂದ ಸಾಮಾಜಿಕ ಕಾರ್ಯಕರ್ತರಿಂದ ದೂರುಗಳು ಬರುತ್ತಿವೆಯಾದರೆ, ಸರಕಾರ ಇದನ್ನು ನಿರಾಕರಿಸುತ್ತಾ ಬಂದಿದೆ. ಆದರೆ, ಬೇರೆ ಬೇರೆ ಸರಕಾರೇತರ ಸಂಘಟನೆಗಳು ಅಂಕಿಅಂಶಗಳ ಜೊತೆಗೆ ಈ ಬಗ್ಗೆ ಆತಂಕ ವ್ಯಕ್ತಪಡಿಸುತ್ತಿವೆ. ಸರಕಾರ ಕೊರೋನ ಗುಂಗಿನಿಂದ ಹೊರ ಬಂದು ಈ ದೇಶದ ಸಾಮಾಜಿಕ ಮತ್ತು ಆರೋಗ್ಯ ವಲಯದ ಮೇಲೆ ತೀವ್ರ ಪರಿಣಾಮವನ್ನು ಬೀರಬಲ್ಲ ಕ್ಷಯ, ಎಚ್ಐವಿಯನ್ನು ಗಂಭೀರವಾಗಿ ತೆಗೆದುಕೊಳ್ಳಬೇಕಾಗಿದೆ. ದೇಶದಲ್ಲಿ ಹಸಿವು, ಬಡತನ ಹೆಚ್ಚುತ್ತಿರುವುದನ್ನು ಈ ಗಾಗಲೇ ಸಮೀಕ್ಷೆಗಳು ಬಹಿರಂಗ ಪಡಿಸಿವೆ. ಹೆಚ್ಚುತ್ತಿರುವ ಹಸಿವು ಕ್ಷಯ, ಎಚ್ಐವಿಯನ್ನು ಇನ್ನಷ್ಟು ಬಿಗಡಾಯಿಸುವಂತೆ ಮಾಡುತ್ತಿದೆ. ಕ್ಷಯ ರೋಗಿಗಳಿಗೆ ಪೌಷ್ಟಿಕ ಆಹಾರಕ್ಕಾಗಿ ನೀಡುವ ಮಾಸಿಕ ಆರ್ಥಿಕ ಸಹಾಯಧನ ನಿಂತು ಹೋಗಿ, ಸರಕಾರಿ ಆಸ್ಪತ್ರೆಗಳು ದಾನಿಗಳ ಮೊರೆ ಹೋಗುವ ಸ್ಥಿತಿ ನಿರ್ಮಾಣವಾಗಿದೆ. ಕನಿಷ್ಠ ಸಮಯಕ್ಕೆ ಸರಿಯಾಗಿ ರೋಗಿಗಳಿಗೆ ಔಷಧಿ ಸಿಗುವಂತೆ ಸರಕಾರ ನೋಡಿಕೊಳ್ಳಬೇಕು. ಕೊರೋನದ ಹೆಸರಿನಲ್ಲಿ ದಿಕ್ಕೆಟ್ಟ ಆರೋಗ್ಯ ವಲಯಕ್ಕೆ ಮತ್ತೆ ಜೀವ ತುಂಬಬೇಕಾಗಿದೆ.
ಔಷಧ ಕಂಪೆನಿಗಳ ಹಿಡಿತದಿಂದ ಈ ವಲಯವನ್ನು ರಕ್ಷಿಸಿ, ಜನಸಾಮಾನ್ಯರ ಬದುಕಿಗೆ ಇನ್ನಷ್ಟು ಹತ್ತಿರವಾಗುವಂತೆ ಆರೋಗ್ಯಕ್ಷೇತ್ರವನ್ನು ಪುನರ್ನಿರ್ಮಿಸುವುದು ಸರಕಾರದ ಕರ್ತವ್ಯವಾಗಿದೆ.