ಸರಕಾರಿ ಆಸ್ಪತ್ರೆಗಳ ಸುಧಾರಣೆಗೆ ಮೊದಲ ಆದ್ಯತೆ ನೀಡಿ
ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ
ರಾಜ್ಯದಲ್ಲಿ ಸಿದ್ದರಾಮಯ್ಯನವರ ನೇತೃತ್ವದ ಕಾಂಗ್ರೆಸ್ ಸರಕಾರ ಬಂದ ನಂತರ ಬದುಕಿನಲ್ಲಿ ಭರವಸೆಯನ್ನು ಕಳೆದುಕೊಂಡಿದ್ದ ದಮನಿತ ಸಮುದಾಯಗಳಿಗೆ ಮತ್ತು ಕೆಳ ಮಧ್ಯಮ ವರ್ಗಗಳ ಜನರಿಗೆ ಬೆಳಕಿನ ದಿನಗಳು ಬಂದಿವೆ. ಅದರಲ್ಲೂ ಗ್ಯಾರಂಟಿ ಯೋಜನೆ ರಾಷ್ಟ್ರಮಟ್ಟದಲ್ಲಿ ಎಲ್ಲರ ಗಮನವನ್ನು ಸೆಳೆದಿದೆ. ಆದರೆ ಇವಿಷ್ಟೇ ಸಾಲದು. ಆಗಬೇಕಾದ ಕೆಲಸಗಳು ಬೇಕಾದಷ್ಟಿವೆ. ಕಳೆದ ಐದು ವರ್ಷಗಳಿಂದ ತೀವ್ರ ನಿರ್ಲಕ್ಷಕ್ಕೆ ಒಳಗಾಗಿರುವ ಸಾರ್ವಜನಿಕ ಆರೋಗ್ಯ ವ್ಯವಸ್ಥೆಯ ಸುಧಾರಣೆಗೆ ವಿಶೇಷ ಆದ್ಯತೆಯನ್ನು ನೀಡಬೇಕಾಗಿದೆ. ಅಂದರೆ ಜನಸಾಮಾನ್ಯರ ಏಕೈಕ ಸಂಜೀವಿನಿ ಎಂದು ಹೆಸರಾದ ಸರಕಾರಿ ಆಸ್ಪತ್ರೆಗಳ ಸುಧಾರಣೆಗೆ ವಿಶೇಷ ಆದ್ಯತೆ ನೀಡಬೇಕಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಇದರ ಬಗ್ಗೆ ಗೊತ್ತಿದೆ. ರಾಜ್ಯದ ಸರಕಾರಿ ಆಸ್ಪತ್ರೆಗಳ ಅವ್ಯವಸ್ಥೆಯನ್ನು ಸರಿಪಡಿಸಲು ಅವರು ಆರೋಗ್ಯ ಇಲಾಖೆಯ ಹಿರಿಯ ಅಧಿಕಾರಿಗಳಿಗೆ ಮೂರು ತಿಂಗಳ ಗಡುವು ನೀಡಿದ್ದಾರೆ. ಈ ಕಾಲಾವಧಿಯಲ್ಲಿ ವ್ಯವಸ್ಥೆ ಸರಿಹೋಗದಿದ್ದರೆ ಅಧಿಕಾರಿಗಳನ್ನೇ ಹೊಣೆಯಾಗಿಸುವುದಾಗಿ ಅವರು ಎಚ್ಚರಿಕೆ ನೀಡಿದ್ದಾರೆ.
ಕರ್ನಾಟಕವಲ್ಲದೆ ಭಾರತದ ಎಲ್ಲೆಡೆ ನಗರ ಪ್ರದೇಶ ಮಾತ್ರವಲ್ಲ ಹಳ್ಳಿಗಾಡಿನ ಬಡವರು, ರೈತರು ತಮಗೆ ಬರುವ ಕಾಯಿಲೆ-ಕಸಾಲೆಗಳಿಗೆ ಚಿಕಿತ್ಸೆ ಪಡೆಯಲು ಬಹುತೇಕ ಸರಕಾರಿ ಆಸ್ಪತ್ರೆಗಳನ್ನು ಅವಲಂಬಿಸಿದ್ದಾರೆ. ಆದರೆ ಚಿಕಿತ್ಸೆಗೆಂದು ಬರುವ ಬಡವರಿಗೆ, ಜನಸಾಮಾನ್ಯರಿಗೆ ಚಿಕಿತ್ಸೆ ನೀಡುವ, ಸೂಕ್ತ ಆರೈಕೆ ಮಾಡುವ ಸ್ಥಿತಿಯಲ್ಲಿ ಸರಕಾರಿ ಆಸ್ಪತ್ರೆಗಳು, ಪ್ರಾಥಮಿಕ ಆರೋಗ್ಯ ಕೇಂದ್ರಗಳು ಇಲ್ಲ. ಎಲ್ಲ ಕಡೆ ಸರಕಾರಿ ಆಸ್ಪತ್ರೆಗಳಿಗೆ ಕಟ್ಟಡಗಳಿವೆ. ಆದರೆ ಅಲ್ಲಿ ಅಗತ್ಯವಿರುವಷ್ಟು ವೈದ್ಯಕೀಯ ಸಿಬ್ಬಂದಿ ಇರುವುದಿಲ್ಲ. ಚಿಕಿತ್ಸೆಗೆ ಬೇಕಾದ ಸಾಧನ, ಸಲಕರಣೆಗಳು ಇರುವುದಿಲ್ಲ. ರೋಗ ಪತ್ತೆ ಹಚ್ಚುವ ಪರೀಕ್ಷಾ ವ್ಯವಸ್ಥೆ ಇರುವುದಿಲ್ಲ. ಅವಶ್ಯ ಇರುವಷ್ಟು ಹಾಸಿಗೆಗಳು, ಶಸ್ತ್ರಚಿಕಿತ್ಸೆಗೆ ಅಗತ್ಯವಿರುವ ಕೊಠಡಿ, ತೀವ್ರ ನಿಗಾ ಘಟಕ, ಔಷಧಿ ಸಂಗ್ರಹ ಇವ್ಯಾವುದೂ ಇರುವುದಿಲ್ಲ. ಆರೋಗ್ಯ ಇಲಾಖೆಯ ಅಂಕಿ ಅಂಶಗಳ ಪ್ರಕಾರ ತಜ್ಞ ವೈದ್ಯರ ಕೊರತೆ ಶೇ. 52ರಷ್ಟಿದೆ. ಗ್ರಾಮೀಣ ಪ್ರದೇಶದಲ್ಲಿ ಕೆಲಸ ಮಾಡಲು ವೈದ್ಯರು ನಿರಾಕರಿಸುವುದರಿಂದ ವೈದ್ಯರಿಗಾಗಿ ಕಟ್ಟಿಸಿರುವ ಮನೆಗಳು ಖಾಲಿ ಉಳಿದಿವೆ. ವೈದ್ಯರು ಮಾತ್ರವಲ್ಲ ನರ್ಸ್‌ಗಳು ಮತ್ತು ಇತರ ವೈದ್ಯಕೀಯ ಸಿಬ್ಬಂದಿಯ ಕೊರತೆ ಸಾಕಷ್ಟಿದೆ. ಹೀಗಾಗಿ ತಾಲೂಕು ಆಸ್ಪತ್ರೆಗಳಲ್ಲಿ ತಜ್ಞ ವೈದ್ಯರಿಲ್ಲದಿದ್ದರೆ ಖಾಸಗಿ ಆಸ್ಪತ್ರೆಗಳಿಗೆ ರೋಗಿಗಳನ್ನು ಕಳಿಸಿಕೊಡಲಾಗುತ್ತಿದೆ. ತುರ್ತು ಚಿಕಿತ್ಸೆ ಅಗತ್ಯವಿರುವ ಗಂಭೀರ ಆರೋಗ್ಯ ಸಮಸ್ಯೆಗಳನ್ನು ಎದುರಿಸುತ್ತಿರುವ ರೋಗಿಗಳನ್ನು ಚಿಕಿತ್ಸೆಗಾಗಿ ಒಂದು ಆಸ್ಪತ್ರೆಯಿಂದ ಇನ್ನೊಂದು ಆಸ್ಪತ್ರೆಗೆ ಸಾಗ ಹಾಕುವುದು ಸರಿಯಲ್ಲ. ಈ ಅಲೆದಾಟದಲ್ಲಿ ರೋಗಿಯ ಕಾಯಿಲೆ ಉಲ್ಬಣಗೊಳ್ಳುತ್ತದೆ ಎಂಬುದು ಆತಂಕದ ಸಂಗತಿಯಾಗಿದೆ.
ಗ್ರಾಮಾಂತರ ಪ್ರದೇಶಗಳಲ್ಲಿ ಸಾರ್ವಜನಿಕ ಆರೋಗ್ಯ ಸೇವಾ ವ್ಯವಸ್ಥೆ ಸರಿಯಾಗಿಲ್ಲ. ಹಾಗಾಗಿ ಮೂಲಭೂತ ಸೌಕರ್ಯಗಳನ್ನು ಒದಗಿಸಲು ತುರ್ತಾಗಿ ಕ್ರಮ ಕೈಗೊಳ್ಳಬೇಕೆಂದು ಸಂಸತ್ತಿನ ಸ್ಥಾಯಿ ಸಮಿತಿ ಹಿಂದೆ ವರದಿ ನೀಡಿತ್ತು. ಆದರೆ ಸ್ಥಾಯಿ ಸಮಿತಿಯ ಈ ಶಿಫಾರಸು ಧೂಳು ತಿನ್ನುತ್ತಾ ಬಿದ್ದಿದೆ. ಕೇಂದ್ರದ ಬಿಜೆಪಿ ಸರಕಾರದ ನಿರ್ಲಕ್ಷ್ಯ ಒಂದೆಡೆಯಾದರೆ ರಾಜ್ಯದ ಬಿಜೆಪಿ ಸರಕಾರದ ಕಾಲಾವಧಿಯಲ್ಲಿ ಕೋವಿಡ್‌ನಂತಹ ಹಿಂದೆಂದೂ ಕಂಡರಿಯದ ಪರಿಸ್ಥಿತಿಯಲ್ಲೂ ಸರಕಾರಿ ಆಸ್ಪತ್ರೆಗಳನ್ನು ಮೇಲ್ದರ್ಜೆಗೆ ಏರಿಸುವ, ವೈದ್ಯಕೀಯ ಮತ್ತು ಇತರ ಸಿಬ್ಬಂದಿಯ ಕೊರತೆಯನ್ನು ನಿವಾರಿಸುವ ಕುರಿತು ಯಾವುದೇ ಕ್ರಮಗಳನ್ನು ಕೈಗೊಳ್ಳಲಿಲ್ಲ. ಪ್ರತೀ ಹತ್ತು ಸಾವಿರ ಜನರಿಗೆ ಒಂಭತ್ತು ವೈದ್ಯರು ಸೇವೆಗೆ ಲಭ್ಯವಿರಬೇಕು. ಆದರೆ ಕಲ್ಯಾಣ ಕರ್ನಾಟಕದ ಹಿಂದುಳಿದ ಜಿಲ್ಲೆಗಳಲ್ಲಿ ಪ್ರತೀ ಹತ್ತು ಸಾವಿರ ಜನಸಂಖ್ಯೆಗೆ ಕೇವಲ ಒಬ್ಬ ವೈದ್ಯರಿದ್ದಾರೆ. ಪ್ರಾಥಮಿಕ ಆರೋಗ್ಯ ಕೇಂದ್ರಗಳು ಕೇವಲ ಹೆಸರಿಗೆ ಮಾತ್ರ ಇವೆ. ಈ ಬಗ್ಗೆ ನೂತನ ಸರಕಾರ ಗಮನ ಹರಿಸಬೇಕು.
ಈ ವಿಷಯದಲ್ಲಿ ರಾಜ್ಯಕ್ಕೆ ತಮಿಳುನಾಡು ಮಾದರಿಯಾಗಲಿ. ಅಲ್ಲಿ ಪ್ರತೀ ಪ್ರಜೆಗೂ ಚಿಕಿತ್ಸಾ ಸೌಕರ್ಯ ಒದಗಿಸಲು ಪರಿಣಾಮಕಾರಿ ಆರೋಗ್ಯ ವಿಮೆ ಯೋಜನೆಯನ್ನು ರೂಪಿಸಿದ್ದಾರೆ. ಈ ಬಗ್ಗೆ ಅಧ್ಯಯನ ನಡೆಸಿ ವರದಿಯನ್ನು ನೀಡುವಂತೆ ಮುಖ್ಯ ಮಂತ್ರಿ ಸಿದ್ದರಾಮಯ್ಯನವರು ಆದೇಶ ಮಾಡಿದ್ದಾರೆ. ಮುಖ್ಯ ಮಂತ್ರಿಗಳು ಮತ್ತು ಆರೋಗ್ಯ ಮಂತ್ರಿಗಳು ಆರೋಗ್ಯ ಕ್ಷೇತ್ರದ ಸುಧಾರಣೆಗೆ ವಿಶೇಷ ಆದ್ಯತೆಯನ್ನು ನೀಡಬೇಕಾಗಿದೆ.
ಸಾರ್ವಜನಿಕ ಆರೋಗ್ಯ ವ್ಯವಸ್ಥೆಯನ್ನು ಸುಧಾರಿಸಬೇಕೆಂದರೆ ಮೊತ್ತಮೊದಲಿಗೆ ಎಲ್ಲಾ ಗ್ರಾಮಗಳ ಆರೋಗ್ಯ ಸೌಲಭ್ಯದ ಸ್ಥಿತಿಗತಿ ಕುರಿತು ವೈಜ್ಞಾನಿಕ ಸಮೀಕ್ಷೆಯನ್ನು ನಡೆಸಲಿ. ಯಾವ ಊರಿನಲ್ಲಿ ಏನು ಅಗತ್ಯವಿದೆ ಎಂಬುದನ್ನು ಪಟ್ಟಿ ಮಾಡಲಿ. ಈ ಕೊರತೆ ನಿವಾರಿಸಲು ಕಾಲಮಿತಿಯಲ್ಲಿ ನೀಲನಕ್ಷೆಯನ್ನು ರೂಪಿಸಬೇಕು.ತಾಲೂಕು ಆಸ್ಪತ್ರೆಗಳಲ್ಲಿ ಎಷ್ಟು ಅವ್ಯವಸ್ಥೆ ತಾಂಡವವಾಡುತ್ತಿದೆಯೆಂದರೆ ಅಲ್ಲಿ ಒಳರೋಗಿಗಳನ್ನು ಸೇರಿಸಲು ಹಿಂಜರಿಯಲಾಗುತ್ತಿದೆ. ಕಾರಣ ಹಾಸಿಗೆಗಳು ಮತ್ತು ವೈದ್ಯಕೀಯ ಸಿಬ್ಬಂದಿಯ ಕೊರತೆ ಎಂಬುದು ಸ್ಪಷ್ಟ.
ಪ್ರಾಥಮಿಕ ಆರೋಗ್ಯ ಕೇಂದ್ರವೆಂದರೆ ಹೀಗಿರಬೇಕು ಎಂದು ಸರಕಾರವೇ ಅದಕ್ಕೊಂದು ಮಾನದಂಡವನ್ನು ರೂಪಿಸಿದೆ. ಆದರೆ ವಾಸ್ತವವಾಗಿ ಆ ಮಾನದಂಡದ ಪ್ರಕಾರ ಸುಸಜ್ಜಿತವಾದ ಒಂದೇ ಒಂದು ಪ್ರಾಥಮಿಕ ಆರೋಗ್ಯ ಕೇಂದ್ರವೂ ರಾಜ್ಯದ ಗ್ರಾಮೀಣ ಪ್ರದೇಶದಲ್ಲಿ ಸಿಗುವುದಿಲ್ಲ. ಇಂಥ ಅವ್ಯವಸ್ಥೆಯ ಜಿಡ್ಡು ಗಟ್ಟಿದ ವ್ಯವಸ್ಥೆಯನ್ನು ಸರಿಪಡಿಸಲು ಮುಖ್ಯಮಂತ್ರಿಗಳು ಚುರುಕಿನ ಕ್ರಮವನ್ನು ಕೈಗೊಳ್ಳಬೇಕಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮನಸ್ಸು ಮಾಡಿದರೆ ಯಾವುದೂ ಅಸಾಧ್ಯವಲ್ಲ.
ಇನ್ನೊಂದು ಅಂಶವೆಂದರೆ ಸರಕಾರಿ ಆಸ್ಪತ್ರೆಗಳಲ್ಲಿ ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಔಷಧಿ ಖರೀದಿಯಲ್ಲಿ ಪಾರದರ್ಶಕತೆಯನ್ನು ಕಾಪಾಡಿಕೊಳ್ಳಬೇಕು. ಭ್ರಷ್ಟಾಚಾರದ ಪ್ರಕರಣಗಳಲ್ಲಿ ಮುಲಾಜಿಲ್ಲದೆ ಕ್ರಮ ಕೈಗೊಳ್ಳಬೇಕು. ಗ್ರಾಮೀಣ ಪ್ರದೇಶಗಳಲ್ಲಿ ಸೇವೆ ಸಲ್ಲಿಸಲು ನಿರಾಕರಿಸುವ ವೈದ್ಯರ ಮನವೊಲಿಸಿ ಕಳಿಸಿ ಕೊಡಬೇಕು.
ಸಾರ್ವಜನಿಕ ಆಸ್ಪತ್ರೆಗಳನ್ನು ಖಾಸಗಿ ಆಸ್ಪತ್ರೆಗಳಿಗೆ ಕಡಿಮೆಯಿಲ್ಲದಂತೆ ನಿರ್ವಹಿಸಬೇಕು. ಇದಕ್ಕೆ ಬೆಂಗಳೂರಿನ ಜಯದೇವ ಹೃದ್ರೋಗ ಆಸ್ಪತ್ರೆ ಒಂದು ಉದಾಹರಣೆಯಾಗಿದೆ. ಆರೋಗ್ಯ, ಶಿಕ್ಷಣ ಇವುಗಳು ಜನತೆಯ ಹಕ್ಕುಗಳು. ಅದರಲ್ಲೂ ಸಾರ್ವಜನಿಕ ಆರೋಗ್ಯ ಕ್ಷೇತ್ರ ಲಾಭಕ್ಕಾಗಿ ನಡೆಯುವ ಉದ್ದೇಶ ಹೊಂದಿರಬಾರದು. ಪ್ರಜೆಗಳ ಆರೋಗ್ಯ ರಕ್ಷಣೆ, ಸೇವೆ ಅವುಗಳ ಕರ್ತವ್ಯ ವಾಗಿರಬೇಕು. ಈ ನಿಟ್ಟಿನಲ್ಲಿ ಮುಖ್ಯಮಂತ್ರಿಗಳು ಸರಕಾರಿ ಆಸ್ಪತ್ರೆಗಳ ಸುಧಾರಣೆಗೆ ಆದಷ್ಟು ಬೇಗ ಸೂಕ್ತ ಕ್ರಮ ಕೈಗೊಳ್ಳುವುದು ಅಗತ್ಯವಾಗಿದೆ