ಶೌಚಗುಂಡಿಯಲ್ಲಿ ಸುದ್ದಿ ಮಾಡುತ್ತಿರುವ ಗುಜರಾತ್
ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ
ದೇಶಾದ್ಯಂತ ದೀಪಾವಳಿಯ ಸಂಭ್ರಮ. ಇದೇ ಸಂದರ್ಭದಲ್ಲಿ ಗುಜರಾತ್‌ನ ಸೂರತ್ ನಗರದಲ್ಲಿ ನಾಲ್ವರು ಕಾರ್ಮಿಕರು ಭೀಕರವಾಗಿ ಮೃತಪಟ್ಟಿರುವ ಘಟನೆ ವರದಿಯಾಗಿದೆ. ಅಂದ ಹಾಗೆ ಇವರು ದೀಪಾವಳಿ ಹಬ್ಬವನ್ನು ಆಚರಿಸುವ ಸಂದರ್ಭದಲ್ಲಿ ಪಟಾಕಿ ಸಿಡಿದು ಮೃತಪಟ್ಟವರಲ್ಲ. ಸೂರತ್ ನಗರದ ಕಾರ್ಖಾನೆಯೊಂದರ ಶೌಚಗುಂಡಿಗೆ ಇಳಿದು ಅದನ್ನು ಶುಚಿಗೊಳಿಸುವ ಸಂದರ್ಭದಲ್ಲಿ ಉಸಿರು ಗಟ್ಟಿ ಮೃತಪಟ್ಟಿದ್ದಾರೆ. ಎಲ್ಲ ಶೌಚಗುಂಡಿ ದುರಂತದಲ್ಲಿ ನಡೆಯುವುದೇ ಇಲ್ಲಿಯೂ ನಡೆದಿದೆ. ಆರಂಭದಲ್ಲಿ ಇಬ್ಬರು ಕಾರ್ಮಿಕರು ಶೌಚಗುಂಡಿ ಶುಚಿಗೊಳಿಸಲು ಇಳಿದಿದ್ದಾರೆ. ಅವರು ಕೂಡಲೇ ಮೂರ್ಛೆ ತಪ್ಪಿ ಬಿದ್ದರು. ಅವರನ್ನು ರಕ್ಷಿಸಲು ಇನ್ನಿಬ್ಬರು ಕಾರ್ಮಿಕರನ್ನು ಇಳಿಸಿದ್ದಾರೆ. ಅವರೂ ಕೂಡ ಶೌಚಗುಂಡಿಯೊಳಗೇ ಉಸಿರುಗಟ್ಟಿ ಮೃತಪಟ್ಟರು. ಮೃತಪಟ್ಟ ನಾಲ್ವರು ಕಾರ್ಮಿಕರು ಕೂಡ ಬಿಹಾರದಿಂದ ಬಂದವರು. ಶೌಚಗುಂಡಿ ಶುಚಿಗೊಳಿಸಲು ಮನುಷ್ಯರನ್ನು ಇಳಿಸುವುದು ಅಪರಾಧವೆಂದು ಘೋಷಣೆಯಾಗಿದ್ದರೂ, ಮನುಷ್ಯರ ಬಳಕೆ ನಿಂತಿಲ್ಲ. ಯಾಕೆಂದರೆ ಇಲ್ಲಿ ಯಂತ್ರ ಬಹಳ ದುಬಾರಿ. ಮನುಷ್ಯನ ಪ್ರಾಣ ಬಹಳ ಅಗ್ಗ. ಎಲ್ಲಕ್ಕಿಂತ ಮುಖ್ಯವಾಗಿ ಇಲ್ಲಿ ಕೆಲವು ನಿರ್ದಿಷ್ಟ ಸಮುದಾಯಕ್ಕೆ ಸೇರಿದ ಜನರು ‘ಮನುಷ್ಯ’ರೆಂದು ಪರಿಗಣಿಸಲ್ಪಟ್ಟಿಲ್ಲ. ಆದುದರಿಂದಲೇ ವ್ಯವಸ್ಥೆ ಯಾವ ಸಂಕೋಚವೂ ಇಲ್ಲದೆ ಇವರನ್ನು ಶೌಚಗುಂಡಿಗೆ ಇಳಿಸುತ್ತಿದೆ. ಕನಿಷ್ಠ, ಇಂತಹ ಸಂದರ್ಭದಲ್ಲಿ ಕಾರ್ಮಿಕರ ರಕ್ಷಣೆಗೆ ಬೇಕಾದ ಎಲ್ಲ ತುರ್ತು ಸಲಕರಣೆಗಳನ್ನು ತಂದಿಟ್ಟುಕೊಳ್ಳಬೇಕು ಎನ್ನುವ ನಿಯಮವಿದೆ. ಅದನ್ನು ಕೂಡ ಈ ಕಾರ್ಖಾನೆಯಲ್ಲಿ ಪಾಲಿಸಿಲ್ಲ. ಇಬ್ಬರು ಮನುಷ್ಯರು ಶೌಚಗುಂಡಿಯಲ್ಲಿ ಬಿದ್ದು ಸತ್ತಾಗ ಅವರನ್ನು ಮೇಲೆತ್ತಲು ಇನ್ನಿಬ್ಬರು ಮನುಷ್ಯರನ್ನೇ ಬಳಸಲಾಗಿದೆ. ಈ ಸಂದರ್ಭದಲ್ಲಿ ಅವರೂ ಮೃತಪಟ್ಟಿದ್ದಾರೆ. ದೀಪಾವಳಿಯ ದಿನ, ಗುಜರಾತ್ ಸರಕಾರದ ಮಾನ, ಶೌಚಗುಂಡಿಯಲ್ಲಿ ಬಿದ್ದು ಸತ್ತು ಹೋಯಿತು.
ಅಭಿವೃದ್ಧಿಗೆ ಮಾದರಿ ಎಂದು ಗುಜರಾತನ್ನು ಬಿಂಬಿಸಲು ಯತ್ನಿಸುವವರನ್ನು ಗುಜರಾತಿನ ಶೌಚಗುಂಡಿಗಳು ಕೂಗಿ ಕರೆಯುತ್ತಿವೆ. ಸಾಮಾಜಿಕ ಅಭಿವೃದ್ಧಿ ಸೂಚಕಗಳಿಗೆ ಗುಜರಾತಿನ ಆರ್ಥಿಕ ಅಭಿವೃದ್ದಿಯೊಂದಿಗೆ ಹೆಜ್ಜೆ ಹಾಕಲು ಸಾಧ್ಯವಾಗಿಲ್ಲ ಎನ್ನುವುದನ್ನು ಯುನಿಸೆಫ್ 2013ರಲ್ಲೇ ಹೇಳಿತ್ತು. ಗುಜರಾತ್‌ನಲ್ಲಿ ಅಭಿವೃದ್ಧಿಯ ಹೆಸರಿನಲ್ಲಿ ಹೆಚ್ಚುತ್ತಿರುವ ವ್ಯಾಪಕ ಅಸಮಾನತೆಗಳನ್ನು ಇದು ಉಲ್ಲೇಖಿಸಿತ್ತು. ಹತ್ತು ವರ್ಷಗಳ ಆನಂತರವೂ ಈ ಸ್ಥಿತಿಯಲ್ಲಿ ಬದಲಾವಣೆಗಳಾಗಿಲ್ಲ ಎನ್ನುವುದನ್ನು ಗುಜರಾತಿನಲ್ಲಿ ಸಂಭವಿಸುತ್ತಿರುವ ಶೌಚಗುಂಡಿ ಸಾವುಗಳು ಹೇಳುತ್ತಿವೆ. ಕಳೆದ ಶುಕ್ರವಾರ ಇದೇ ಗುಜರಾತ್‌ನ ಸರಕಾರಿ ಪ್ರಯೋಗಾಲಯವೊಂದರ ಶೌಚಗುಂಡಿಯಲ್ಲಿ ಒಬ್ಬ ಸ್ವಚ್ಛತಾ ಕಾರ್ಮಿಕ ಮೃತಪಟ್ಟಿದ್ದ. ಕಳೆದ ಒಂದು ವರ್ಷದಲ್ಲಿ ಸುಮಾರು ಎಂಟು ಮಂದಿ ಶೌಚಗುಂಡಿಯಲ್ಲಿ ಮೃತಪಟ್ಟಿರುವುದನ್ನು ಸರಕಾರಿ ಅಂಕಿಅಂಶಗಳು ಹೇಳುತ್ತಿವೆ. ಈ ಹಿಂದೆ ಗುಜರಾತ್ ಸರಕಾರದ ಪ್ರಕಟಣೆಯಲ್ಲಿ ಭಂಗಿ ಜಾತಿಗಳ ಶೌಚ ಕೆಲಸ ಅವರ ಪಾಲಿನ ಅಧ್ಯಾತ್ಮ ಸಾಧನೆಯ ಭಾಗ ಎಂದು ಬರೆದಿರುವುದು ಸಾಕಷ್ಟು ಟೀಕೆಗೆ ಕಾರಣವಾಗಿತ್ತು. ಮಹಾತ್ಮಾಗಾಂಧೀಜಿಯೂ ಭಂಗಿ ಕೆಲಸವನ್ನು ಪರೋಕ್ಷವಾಗಿ ಪ್ರೋತ್ಸಾಹಿಸಿದ್ದರು ಎನ್ನುವ ಆರೋಪ ಅವರ ಮೇಲಿದೆ. ವಿಪರ್ಯಾಸವೆಂದರೆ, ಗುಜರಾತ್‌ನಲ್ಲಾಗಲಿ, ಇತರ ರಾಜ್ಯಗಳಲ್ಲಾಗಲಿ ಈ ಶೌಚಗುಂಡಿ ಶುಚಿಗೊಳಿಸುವ ಕೆಲಸವನ್ನು ಯಾವುದೇ ಮೇಲ್‌ಜಾತಿಯ ಜನರು ಮಾಡುವುದಿಲ್ಲ. ಈ ಕೆಲಸ ಕೇವಲ ಕೆಳಜಾತಿಗೆ ಮಾತ್ರ ಸೀಮಿತವಾಗಿದೆ. ನಿಜಕ್ಕೂ ಶುಚಿತ್ವದ ಕೆಲಸದಲ್ಲಿ ಅಧ್ಯಾತ್ಮ ಸಾಧನೆಯನ್ನು ಮಾಡಬಹುದಾದರೆ, ಮೇಲ್‌ಜಾತಿಯ ಜನರು ಈ ಕೆಲಸದ ಮೂಲಕ ಯಾಕೆ ಮೋಕ್ಷವನ್ನು ಹುಡುಕುವುದಿಲ್ಲ? ಎನ್ನುವ ಪ್ರಶ್ನೆ ಏಳುತ್ತದೆ.
ಕಳೆದ 25 ವರ್ಷಗಳಲ್ಲಿ ಶೌಚಗುಂಡಿಯಲ್ಲಿ ಸುಮಾರು 928 ಮಂದಿ ಮೃತಪಟ್ಟಿದ್ದಾರೆ ಎಂದು ಅಂಕಿಅಂಶಗಳು ಹೇಳುತ್ತವೆ. ಗುಜರಾತ್ ಮತ್ತು ತಮಿಳು ನಾಡಿನಲ್ಲಿ ಅತಿ ಹೆಚ್ಚು ಸಾವುಗಳು ಸಂಭವಿಸಿವೆ ಎನ್ನುವುದೂ ಸಮೀಕ್ಷೆಯಿಂದ ಬಹಿರಂಗವಾಗಿದೆ. ಈ ಶೌಚಗುಂಡಿಯಲ್ಲಿ ಮೃತಪಟ್ಟವರೆಲ್ಲರೂ ಕೆಳಜಾತಿಗೆ ಸೇರಿರುವುದು ಆಕಸ್ಮಿಕವಲ್ಲ. ಯಾವ ರಾಜ್ಯದಲ್ಲಿ ಶೌಚಗುಂಡಿ ಸಾವುಗಳು ಅತಿ ಹೆಚ್ಚು ಸಂಭವಿಸಿವೆಯೋ ಆ ರಾಜ್ಯಗಳು ಜಾತಿ ದೌರ್ಜನ್ಯಗಳಿಗಾಗಿಯೂ ಕುಖ್ಯಾತವಾಗಿವೆ ಎನ್ನುವುದನ್ನು ನಾವು ಗಮನಿಸಬೇಕು. ಹಾಗೆಂದು ಹರ್ಯಾಣ, ರಾಜಸ್ಥಾನ ಮೊದಲಾದ ರಾಜ್ಯಗಳು ಶೌಚಗುಂಡಿ ಶುಚಿಗೊಳಿಸಲು ಅತ್ಯಾಧುನಿಕ ತಂತ್ರಜ್ಞಾನವನ್ನು ಬಳಸುತಿವೆ ಎಂದು ಅರ್ಥವಲ್ಲ. ಜಾತಿ ವ್ಯವಸ್ಥೆ ಸಮಾಜವನ್ನು ಸಂಪೂರ್ಣವಾಗಿ ನಿಯಂತ್ರಿಸುವ ಸ್ಥಳದಲ್ಲಿ ಶೌಚಗುಂಡಿಯಲ್ಲಿ ಸಂಭವಿಸುವ ಸಾವುಗಳು ವರದಿಯೇ ಆಗುವುದಿಲ್ಲ. ದೇಶದಲ್ಲಿ ಮಲಹೊರುವ ಪದ್ಧತಿಯೇ ಇಲ್ಲ ಎಂದು ಸರಕಾರ ಈಗಾಗಲೇ ಘೋಷಿಸಿರುವುದರಿಂದ, ಶೌಚಗುಂಡಿಯಲ್ಲಿ ಸಂಭವಿಸುವ ಸಾವುಗಳನ್ನು ವರದಿಯಾಗದಂತೆ ನೋಡಿಕೊಳ್ಳುವುದು ಅಧಿಕಾರಿಗಳ ಕರ್ತವ್ಯ ಎನ್ನುವಂತಾಗಿದೆ. ಯಾಕೆಂದರೆ, ಈ ಪ್ರಕರಣ ಅಧಿಕೃತವಾಗಿ ದಾಖಲಾದರೆ ಅದರಿಂದ ಅವರ ಹುದ್ದೆಗೆ ಸಮಸ್ಯೆಗಳಾಗುತ್ತವೆ. ಎಲ್ಲಕ್ಕಿಂತ ಮುಖ್ಯವಾಗಿ ಕಾರ್ಮಿಕರನ್ನು ಬಳಸಿದ ಮಾಲಕರ ಮೇಲೆ ಪ್ರಕರಣ ದಾಖಲಾಗುತ್ತವೆ. ಇಂತಹ ಕೆಲಸಗಳಿಗೆ ಕಾರ್ಮಿಕರನ್ನು ಬಳಸುವ ಮಾಲಕರೆಲ್ಲ ಮೇಲ್‌ಜಾತಿಯವರು, ಬಲಾಢ್ಯರೂ ಆಗಿರುತ್ತಾರೆ. ಇಡೀ ವ್ಯವಸ್ಥೆಯೇ ಒಂದಾಗಿ ಪ್ರಕರಣವನ್ನು ಮುಚ್ಚಿ ಹಾಕುತ್ತದೆ. ಪ್ರಕರಣ ಅಧಿಕೃತವಾಗಿ ದಾಖಲಾಗದ ಕಾರಣದಿಂದಾಗಿ ಸಂತ್ರಸ್ತ ಕಾರ್ಮಿಕರ ಕುಟುಂಬಕ್ಕೆ ಯೋಗ್ಯ ಪರಿಹಾರಗಳೂ ಸಿಗುವುದಿಲ್ಲ. ಆರೋಪಿಗಳಿಗೆ ಶಿಕ್ಷೆಯಾಗುವುದಂತೂ ದೂರದ ಮಾತು.
ಚಂದ್ರಲೋಕಕ್ಕೆ ರಾಕೆಟ್‌ಗಳನ್ನು ಕಳುಹಿಸುವ ಮೂಲಕ ಸುದ್ದಿಯಲ್ಲಿರುವ ಭಾರತ, ಶೌಚಗುಂಡಿಯನ್ನು ಶುಚಿಗೊಳಿಸುವ ಯಂತ್ರವನ್ನು ಯಾಕೆ ಇನ್ನೂ ಕಂಡು ಹುಡುಕಿಲ್ಲ? ಈ ಪ್ರಶ್ನೆಯನ್ನು ಸಾಮಾಜಿಕ ಕಾರ್ಯಕರ್ತರು ಕೇಳುತ್ತಲೇ ಬಂದಿದ್ದಾರೆ. ತಮಿಳುನಾಡಿನ ಹಿರಿಯ ನಟರೊಬ್ಬರು ಶೌಚಗುಂಡಿಗೆ ಮನುಷ್ಯರು ಇಳಿಸುವುದನ್ನು ತಡೆಯುವುದಕ್ಕೆ ಒಂದು ಪರಿಹಾರವನ್ನು ಸೂಚಿಸುತ್ತಾರೆ. ಶೌಚ ಗುಂಡಿಗೆ ಇಳಿಸುವುದಕ್ಕೆ ಯಂತ್ರಗಳನ್ನು ಕಂಡು ಹುಡುಕುವವರೆಗೆ, ಎಲ್ಲ ಜಾತಿಗಳಿಗೆ ಸೇರಿದವರನ್ನೂ ಸರದಿಯಲ್ಲಿ ಈ ಕಾರ್ಯಕ್ಕೆ ಬಳಸಬೇಕು. ಕೆಲವು ದೇಶಗಳಲ್ಲಿ ‘ಸೇನೆಗೆ ಸೇರುವುದು ಕಡ್ಡಾಯ’ ಇರುವಂತೆಯೇ ಎಲ್ಲ ಜಾತಿಯ ಜನರೂ ಶೌಚ ಗುಂಡಿಗೆ ಇಳಿದು ಶುಚಿತ್ವ ಕೆಲಸವನ್ನು ನೆರವೇರಿಸುವುದು ಕಡ್ಡಾಯ ಎನ್ನುವ ಕಾನೂನನ್ನು ತರಬೇಕು. ಯಾವಾಗ ಶೌಚ ಗುಂಡಿಯೊಳಗೆ ಮೇಲ್‌ಜಾತಿಯ ಜನರು ಇಳಿಯುವುದು ಕಡ್ಡಾಯವಾಗುತ್ತದೆಯೋ ಆ ಕ್ಷಣದಲ್ಲೇ ಶೌಚಗುಂಡಿಯನ್ನು ಸ್ವಚ್ಛ ಗೊಳಿಸುವ ಯಂತ್ರಗಳು ಸಿದ್ಧವಾಗುತ್ತವೆ ಎಂದು ಆ ನಟ ಅಭಿಪ್ರಾಯಪಡುತ್ತಾರೆ. ಅಂದರೆ, ಈ ದೇಶದಲ್ಲಿ ಶೌಚಗುಂಡಿಗೆ ಇಳಿಸುವುದಕ್ಕಾಗಿಯೇ ಒಂದು ಜಾತಿಯನ್ನು ಸೃಷ್ಟಿಸಿರುವ ಕಾರಣದಿಂದಾಗಿ ಇಲ್ಲಿ, ಅದಕ್ಕಾಗಿ ಯಂತ್ರಗಳನ್ನು ಸೃಷ್ಟಿಸುತ್ತಿಲ್ಲ.
ಎಲ್ಲಿಯವರೆಗೆ ಶೌಚ ಗುಂಡಿ ಶುಚಿಗೊಳಿಸಲು ಯಂತ್ರಗಳನ್ನು ಬಳಸುವುದಿಲ್ಲವೋ ಅಲ್ಲಿಯವರೆಗೆ, ಆ ಕಾರ್ಮಿಕನ ಕೆಲಸಕ್ಕೆ ಸೂಕ್ತ ಪರಿಹಾರ ನೀಡುವುದು ಸರಕಾರದ ಕರ್ತವ್ಯವಾಗಿದೆ. ಅತ್ಯಾಧುನಿಕ ಸಲಕರಣೆಗಳನ್ನು ಕಾರ್ಮಿಕರಿಗೆ ಒದಗಿಸುವುದು, ಸ್ಥಳದಲ್ಲಿ ಆ್ಯಂಬ್ಯುಲೆನ್ಸ್ ವಾಹನವನ್ನು ಇಟ್ಟುಕೊಳ್ಳುವುದು, ಆಕ್ಸಿಜನ್‌ನಂತಹ ತುರ್ತು ಅಗತ್ಯ ಸಲಕರಣೆಗಳನ್ನು ಒದಗಿಸುವುದು ಇತ್ಯಾದಿಗಳನ್ನು ಕಡ್ಡಾಯ ಮಾಡಬೇಕು. ಇವೆಲ್ಲ ಇಲ್ಲದೆ ಶೌಚಗುಂಡಿಗೆ ಕಾರ್ಮಿಕರನ್ನು ಇಳಿಸಿ ಸಾವಿಗೆ ಕಾರಣರಾದವರ ಮೇಲೆ ಕೊಲೆ ಪ್ರಕರಣ ದಾಖಲಿಸಬೇಕು. ಇದೇ ಸಂದರ್ಭದಲ್ಲಿ, ಶೌಚಗುಂಡಿಯಲ್ಲಿ ಆಕಸ್ಮಿಕವಾಗಿ ಮೃತಪಟ್ಟ ಕಾರ್ಮಿಕರ ಕುಟುಂಬಕ್ಕೆ ದೊಡ್ಡ ಮೊತ್ತದ ಪರಿಹಾರ ನೀಡುವುದು ಮಾತ್ರವಲ್ಲ, ಸಂತ್ರಸ್ತರ ಕುಟುಂಬಕ್ಕೆ ಉಚಿತ ಆರೋಗ್ಯ, ಶಿಕ್ಷಣ ನೀಡಬೇಕು. ಮುಂದೆಂದೂ ಅವರ ಮಕ್ಕಳು ಈ ಶೌಚಗುಂಡಿಗೆ ಇಳಿಯುವ ಸ್ಥಿತಿ ನಿರ್ಮಾಣವಾಗಬಾರದು. ಶೌಚಗುಂಡಿಯಲ್ಲಿ ಕಾರ್ಮಿಕನೊಬ್ಬ ಸಾಯುವಾಗ ಈ ದೇಶದ ಸರಕಾರವೂ ಆ ಶೌಚಗುಂಡಿಯೊಳಗೆ ಉಸಿರುಗಟ್ಟಿ ಸತ್ತಿರುತ್ತದೆ ಎನ್ನುವ ಸತ್ಯವನ್ನು ನಮ್ಮನ್ನಾಳುವವರು ಅರಿತುಕೊಂಡಾಗ ಮಾತ್ರ ಇದಕ್ಕೆ ಶಾಶ್ವತ ಪರಿಹಾರವೊಂದು ದೊರಕಬಹುದು.