ಹರ್ಯಾಣದ ಆಘಾತ, ಕಾಶ್ಮೀರದ ಗೆಲುವು
ಹರ್ಯಾಣದ ಕುರುಕ್ಷೇತ್ರ ಜಿಲ್ಲೆಯ ಲಾಡ್ವಾ ಕ್ಷೇತ್ರದಿಂದ ಗೆದ್ದ ಹರ್ಯಾಣ ಮುಖ್ಯಮಂತ್ರಿ ನಾಯಬ್ ಸಿಂಗ್ ಸೈನಿ ಮತ್ತು ಬೆಂಬಲಿಗರ ವಿಜಯೋತ್ಸವ
PC: PTI
ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ
ಹರ್ಯಾಣ ಮತ್ತು ಜಮ್ಮು-ಕಾಶ್ಮೀರ ಚುನಾವಣೆಗಳು ಇಡೀ ದೇಶದ ರಾಜಕೀಯ ಬೆಳವಣಿಗೆಗಳಿಗೆ ಹೊಸ ದಿಕ್ಕನ್ನು ನೀಡುವ ಸಾಧ್ಯತೆಗಳನ್ನು ತನ್ನೊಳಗೆ ಬಚ್ಚಿಟ್ಟುಕೊಂಡಿತ್ತು. ಪ್ರಧಾನಿ ಮೋದಿ ಮತ್ತು ಅಮಿತ್ ಶಾ ಅವರ ಹಲವು ಆರ್ಥಿಕ ಮತ್ತು ರಾಜಕೀಯ ನಿಲುವುಗಳ ಪರ-ವಿರೋಧದ ಧ್ವನಿಯಾಗಿ ಫಲಿತಾಂಶ ಹೊರಹೊಮ್ಮಲಿದೆ ಎನ್ನುವ ನಿರೀಕ್ಷೆಯಲ್ಲಿದ್ದರು ರಾಜಕೀಯ ವಿಶ್ಲೇಷಕರು, ಕೇಂದ್ರ ಸರಕಾರದ ರೈತವಿರೋಧಿ ಕಾನೂನುಗಳ ವಿರುದ್ಧ ಹರ್ಯಾಣ ಕೇಂದ್ರಿತ ಪ್ರತಿಭಟನೆ ದೇಶಾದ್ಯಂತ ವ್ಯಾಪಿಸಿತ್ತು. ಅಷ್ಟೇ ಅಲ್ಲ, ಹರ್ಯಾಣ ಮಣ್ಣಿನ ಕ್ರೀಡೆಯಾಗಿರುವ ಕುಸ್ತಿ ಪಟುಗಳು ಈ ಬಾರಿ ಕೇಂದ್ರ ಸರಕಾರದ ವಿರುದ್ಧ ತಿರುಗಿ ಬಿದ್ದಿದ್ದರು. ಏಕಕಾಲದಲ್ಲಿ ಕುಸ್ತಿ ಕ್ರೀಡೆ ಮತ್ತು ಅಲ್ಲಿನ ಮಹಿಳೆಯರ ಸ್ವಾಭಿಮಾನದ ಪ್ರಶ್ನೆಯಾಗಿ ಹರ್ಯಾಣ ಚುನಾವಣೆಯನ್ನು ಅಲ್ಲಿನ ಜನರು ತೆಗೆದುಕೊಂಡಿದ್ದರು. ಇತ್ತ ಜಮ್ಮು -ಕಾಶ್ಮೀರದಲ್ಲಿ ಕೇಂದ್ರ ಸರಕಾರ ನಡೆಸಿದ ಹಸ್ತಕ್ಷೇಪದ ಸರಿತಪ್ಪುಗಳು ಕೂಡ ಚುನಾವಣೆಯ ಫಲಿತಾಂಶವಾಗಿ ಹೊರಹೊಮ್ಮಲಿತ್ತು. ಜಮ್ಮು ಕಾಶ್ಮೀರದಲ್ಲಿ ಸೇನೆಯನ್ನು ಬಳಸಿಕೊಂಡು ಕೇಂದ್ರ ಸರಕಾರ ನಡೆಸಿದ ದಮನಕ್ಕೆ ಈ ಚುನಾವಣೆ ಉತ್ತರ ನೀಡುತ್ತದೆ ಎಂದು ರಾಜಕೀಯ ತಜ್ಞರು ನಿರೀಕ್ಷಿಸಿದ್ದರು. ಹರ್ಯಾಣ ಮತ್ತು ಜಮ್ಮು-ಕಾಶ್ಮೀರದಲ್ಲಿ ಬಿಜೆಪಿ ತೀವ್ರ ಹಿನ್ನಡೆ ಅನುಭವಿಸುತ್ತದೆ ಎಂದು ಚುನಾವಣೋತ್ತರ ಸಮೀಕ್ಷೆಯೂ ಹೇಳಿತ್ತು. ಆದರೆ ಸಮೀಕ್ಷೆಯನ್ನು ಬುಡಮೇಲು ಮಾಡುವಂತೆ ಹರ್ಯಾಣದಲ್ಲಿ ಬಿಜೆಪಿ ಹ್ಯಾಟ್ರಿಕ್ ಸಾಧಿಸಿದೆ. ಇದೇ ಸಂದರ್ಭದಲ್ಲಿ ಜಮ್ಮು- ಕಾಶ್ಮೀರವನ್ನು 'ಇಂಡಿಯಾ' ಗೆದ್ದುಕೊಂಡಿದೆ.
ಹರ್ಯಾಣದಲ್ಲಿ ಬಿಜೆಪಿ ಸೋಲಲೇಬೇಕಾದ ಕಾರಣಗಳು ಹಲವಿದ್ದವು. ಕೇಂದ್ರ ಸರಕಾರದ ರೈತ ವಿರೋಧಿ ನೀತಿಗಳ ವಿರುದ್ಧ ದೇಶಾದ್ಯಂತ ಆಂದೋಲನವನ್ನು ರೂಪಿಸಿರುವುದು ಹರ್ಯಾಣದ ರೈತ ನಾಯಕರು. ಜಾಟ್ ಸಮುದಾಯ ಕಾಂಗ್ರೆಸ್ನ ಕೈ ಹಿಡಿದಿತ್ತು ಎನ್ನುವುದಕ್ಕಿಂತ, ಬಿಜೆಪಿಗೆ ವಿರುದ್ಧವಾಗಿತ್ತು. ಬೀದಿಗಿಳಿದ ರೈತರನ್ನು ಉಗ್ರಗಾಮಿಗಳೆಂದು ಬಿಂಬಿಸಲು ಬಿಜೆಪಿ ಶತ ಪ್ರಯತ್ನ ನಡೆಸಿತ್ತು. ಕೇಂದ್ರದ ವಿರುದ್ದ ನಡೆಸಿದ ಆಂದೋಲನ ಹರ್ಯಾಣದ ತಳಸ್ತರದ ರೈತರದು ಎನ್ನುವುದನ್ನು ಸಾಬೀತು ಮಾಡುವುದಕ್ಕಾದರೂ, ಬಿಜೆಪಿಯನ್ನು ಸೋಲಿಸಲೇಬೇಕಾಗಿತ್ತು. ಇದೇ ಸಂದರ್ಭದಲ್ಲಿ ಹರ್ಯಾಣದ ಮಣ್ಣಿನ ಸೊಗಡಾಗಿರುವ ಕುಸ್ತಿ ಕ್ರೀಡೆಯಲ್ಲಿ ಕೇಂದ್ರ ಸರಕಾರ ನಡೆಸಿದ ಹಸ್ತಕ್ಷೇಪವೂ ಸಾಕಷ್ಟು ಜನಾಕ್ರೋಶಕ್ಕೆ ಕಾರಣವಾಗಿತ್ತು. ಹರ್ಯಾಣದ ಮಣ್ಣಿನ ಮಕ್ಕಳ ನೋವುಗಳಿಗೆ ಸರಕಾರ ಸ್ಪಂದಿಸಲಿಲ್ಲ. ಮಹಿಳಾ ಕುಸ್ತಿ ಪಟುಗಳ ಮೇಲೆ ದೌರ್ಜನ್ಯಗಳು ನಡೆದಾಗ ಕೇಂದ್ರ ಸರಕಾರ ಆರೋಪಿಯನ್ನು ರಕ್ಷಿಸಿತು. ಅಷ್ಟೇ ಅಲ್ಲ, ಕಳೆದ ಒಲಿಂಪಿಕ್ಸ್ನಲ್ಲಿ ವಿನೇಶ್ ಫೋಗಟ್ ಆದ ಅನ್ಯಾಯದ ಬಗ್ಗೆಯೂ ಹರ್ಯಾಣದ ಜನರು ನೊಂದಿದ್ದರು. ಇವೆಲ್ಲವೂ ಈ ಬಾರಿಯ ಚುನಾವಣೆಯ ಮೇಲೆ ಪರಿಣಾಮ ಬೀರಲಿದೆ ಎಂದು ಭಾವಿಸಲಾಗಿತ್ತು. ಇದೇ ಸಂದರ್ಭದಲ್ಲಿ, ಅಗ್ನಿಪಥ ಯೋಜನೆ ಸೇನೆಗೆ ಸೇರುವ ಆಕಾಂಕ್ಷೆಯುಳ್ಳ ಸಾವಿರಾರು ಯುವಕರ ಆಸೆಗೆ ತಣ್ಣೀರು ಎರಚಿತ್ತು. ಸೇನೆಗೆ ನಾಲ್ಕು ವರ್ಷಗಳ ಗುತ್ತಿಗೆಯಾಧಾರದಲ್ಲಿ ನೇಮಕಗೊಳಿಸುವ ಕೇಂದ್ರ ಸರಕಾರದ ಯೋಜನೆಯ ವಿರುದ್ಧ ಹರ್ಯಾಣದ ಯುವಕರು ಬೀದಿಗಿಳಿದಿದ್ದರು. ಅಲ್ಲಿನ ಪಂಚಾಯತ್ಗಳು ಅಗ್ನಿಪಥ ಯೋಜನೆಯ ವಿರುದ್ಧ ವ್ಯಾಪಕ ಆಕ್ರೋಶವನ್ನು ವ್ಯಕ್ತ ಪಡಿಸಿದ್ದವು. ಎಲ್ಲಕ್ಕಿಂತ ಹೆಚ್ಚಾಗಿ ಎರಡು ಬಾರಿ ನಿರಂತರ ಆಡಳಿತ ನಡೆಸಿರುವ ಬಿಜೆಪಿಯ ಮೇಲೆ ಜನಸಾಮಾನ್ಯರು ಸಹಜವಾಗಿಯೇ ಆಡಳಿತ ವಿರೋಧಿ ನಿಲುವನ್ನು ಹೊಂದಿದ್ದರು. ಹರ್ಯಾಣ ಹಲವು ಕ್ಷೇತ್ರಗಳಲ್ಲಿ ಹಿನ್ನಡೆ ಅನುಭವಿಸಿರುವುದು, ನಿರುದ್ಯೋಗ ಹೆಚ್ಚಿರುವುದು ಬಿಜೆಪಿಗೆ ಮುಳುವಾಗಿತ್ತು. ಇಷ್ಟಾದರೂ, ಈ ಬಾರಿ ಬಿಜೆಪಿ ಹ್ಯಾಟ್ರಿಕ್ ಸಾಧನೆಯನ್ನು ಸಾಧಿಸಿತು. ಈ ಮೂಲಕ ತನ್ನ ಮೇಲಿರುವ ಎಲ್ಲ ಆರೋಪಗಳೂ ಸುಳ್ಳು ಎಂದು ಬಿಜೆಪಿ ಪರೋಕ್ಷವಾಗಿ ಸಾಬೀತು ಪಡಿಸಿತು.
ಹರ್ಯಾಣದಲ್ಲಿ ಬಿಜೆಪಿ 48 ಸ್ಥಾನಗಳನ್ನು ತನ್ನದಾಗಿಸಿಕೊಂಡಿದೆ. ವಿಶೇಷವೆಂದರೆ, ಕಳೆದ ಬಾರಿಗಿಂತ ಹೆಚ್ಚು ಸ್ಥಾನಗಳನ್ನು ತನ್ನದಾಗಿಸಿಕೊಂಡು 'ಸಾಧನೆ'ಯನ್ನು ಪ್ರದರ್ಶಿಸಿದೆ. ಇದೇ ಸಂದರ್ಭದಲ್ಲಿ ಕಾಂಗ್ರೆಸ್, 'ಚುನಾವಣೆಯಲ್ಲಿ ಅಕ್ರಮ ನಡೆದಿದೆ. ಈ ಫಲಿತಾಂಶವನ್ನು ಒಪ್ಪಲು ಸಾಧ್ಯವಿಲ್ಲ' ಎಂದು ಹೇಳಿದೆ. ಆದರೆ, ಈ ಹೇಳಿಕೆಯಿಂದ ತಕ್ಷಣದ ಮುಖಭಂಗದಿಂದ ಪಾರಾಗುವ ವ್ಯರ್ಥ ಪ್ರಯತ್ನ ನಡೆಸಬಹುದೇ ಹೊರತು, ಉಳಿದಂತೆ ಯಾವ ಪರಿಣಾಮಗಳೂ ಆಗಲಾರವು. ಚುನಾವಣೆಯಲ್ಲಿ ಆಪ್ ಮತ್ತು ಕಾಂಗ್ರೆಸ್ ಜೊತೆಯಾಗಿ ಹೆಜ್ಜೆಯಿಟ್ಟಿದ್ದರೆ ಒಂದಿಷ್ಟು ಬದಲಾವಣೆಗಳನ್ನು ಕಾಣ ಬಹುದಿತ್ತೇನೋ. ಹರ್ಯಾಣವನ್ನು ಕೇಂದ್ರವಾಗಿಟ್ಟುಕೊಂಡು ವ್ಯಾಪಿಸಿರುವ ಚಳವಳಿಯನ್ನು ಜೀವಂತವಾಗಿಡುವುದು ಕಾಂಗ್ರೆಸ್, ಆಪ್ ಇಬ್ಬರಿಗೂ ಅಗತ್ಯವಾಗಿತ್ತು. ದಿಲ್ಲಿಯಲ್ಲಿ ತನಗಾಗಿರುವ ಅವಮಾನಕ್ಕೆ ಸೇಡು ತೀರಿಸುವ ಭಾಗವಾಗಿ, ಆಪ್ ಕಾಂಗ್ರೆಸ್ ಜೊತೆಗೆ ಕೈಜೋಡಿಸಬಹುದಿತ್ತು. ಭಾರತದ ರಾಜಕೀಯದ ದಿಕ್ಕು ಬದಲಿಸಬಹುದಾದ ಚುನಾವಣೆ ಎನ್ನುವುದನ್ನು ಅರಿತುಕೊಂಡು ಹರ್ಯಾಣವನ್ನು ಗೆಲ್ಲಲು ಯೋಜನೆಗಳನ್ನು ರೂಪಿಸಬೇಕಾಗಿತ್ತು. ಆದರೆ ಇಲ್ಲಿ ಉಭಯ ಪಕ್ಷಗಳ ವರಿಷ್ಠರಿಗೂ ತಮ್ಮ ತಮ್ಮ ಪ್ರತಿಷ್ಠೆಯೇ ಮುಖ್ಯವಾಯಿತು. ಇದರ ಲಾಭವನ್ನು ಬಿಜೆಪಿ ತನ್ನದಾಗಿಸಿಕೊಂಡಿತು. ಕಾಂಗ್ರೆಸ್ನ ಒಳಗಿರುವ ಆಂತರಿಕ ಕಲಹಗಳು, ಮುಖಂಡರೊಳಗಿನ ಜಟಾಪಟಿಯೂ ಫಲಿತಾಂಶವನ್ನು ತಿರುವುಮುರುವಾಗಿಸಿತು.
ಕಾಂಗ್ರೆಸ್ ಜಾಟ್ ಸಮುದಾಯದ ಮೇಲೆಯೇ ಅವಲಂಬಿತವಾದದ್ದು ಅಂತಿಮವಾಗಿ ಚುನಾವಣೆಯು ಜಾಟ್ ಮತ್ತು ಇತರ ಸಮುದಾಯಗಳಾಗಿ ಒಡೆದವು. ಟಿಕೆಟ್ ಹಂಚಿಕೆಯಲ್ಲಿ ಭೂಪಿಂದರ್ ಸಿಂಗ್ ಹೂಡ ಸಿಂಹಪಾಲನ್ನು ತನ್ನದಾಗಿಸಿಕೊಂಡರು. ಇದೇ ಸಂದರ್ಭದಲ್ಲಿ ಇತರ ಸಮುದಾಯಗಳನ್ನು ಸಮನ್ವಯಗೊಳಿಸುವಲ್ಲಿ ಕಾಂಗ್ರೆಸ್ ಎಡವಿತು. ಹೂಡ ಜೊತೆ ಜೊತೆಗೇ ದಲಿತ ನಾಯಕಿ ಕುಮಾರಿ ಸೆಲ್ಲಾ ಅವರನ್ನು ಗಂಭೀರವಾಗಿ ತೆಗೆದುಕೊಂಡಿದ್ದರೆ ಇಂತಹ ಹೀನಾಯ ಸೋಲನ್ನು ಕಾಂಗ್ರೆಸ್ ಕಾಣುತ್ತಿರಲಿಲ್ಲವೇನೋ. ಜಾಟ್ ಸಮುದಾಯದ ಬೆಂಬಲವನ್ನೂ ಪೂರ್ಣ ಪ್ರಮಾಣದಲ್ಲಿ ತನ್ನದಾಗಿಸಲು ಕಾಂಗ್ರೆಸ್ ಯಶಸ್ವಿಯಾಗಿಲ್ಲ. ಹೂಡ ಹಿಡಿತವಿರುವ ಪಾಣಿಪತ್ ಮತ್ತು ಸೋನಿಪತ್ ನಲ್ಲಿ ಜಾಟ್ ಮತಗಳು ಸೋರಿಕೆಯಾಗಿವೆ. ಜಾಟ್ ಪ್ರಾಬಲ್ಯವಿರುವ ಹಿಸಾರ್ ಮತ್ತು ಜಿಂದ್ ಜಿಲ್ಲೆಗಳಲ್ಲೂ ಬಿಜೆಪಿಯ ಸಾಧನೆಯನ್ನು ನಿರಾಕರಿಸುವಂತಿಲ್ಲ. ಇದೇ ಸಂದರ್ಭದಲ್ಲಿ, ಜಾಟ್ ಹೊರತಾದ ಇತರ ಸಮುದಾಯಗಳು ಮುಖ್ಯವಾಗಿ ದುರ್ಬಲ ಜಾತಿಗಳ ಮತಗಳು ಜಾಟ್ ವಿರೋಧಿ ಮತಗಳಾಗಿ ಬಿಜೆಪಿಯ ಖಾತೆಯನ್ನು ಸೇರಿದವು. ಆಳದಲ್ಲಿ ಕೇಂದ್ರ ಸರಕಾರದ ನೀತಿಗಳ ವಿರುದ್ಧ ಹರ್ಯಾಣಕ್ಕೆ ಆಕ್ರೋಶವಿದ್ದರೂ ಅವುಗಳನ್ನು ಮತಗಳಾಗಿ ಪರಿವರ್ತಿಸುವಲ್ಲಿ ಕಾಂಗ್ರೆಸ್ ಪಕ್ಷ ಎಡವಿತು. ಇದು ನಿಜಕ್ಕೂ ಕೇಂದ್ರದ
ಜನವಿರೋಧಿ ಆಡಳಿತದ ವಿರುದ್ದ ದೇಶಾದ್ಯಂತ ನಡೆಯುತ್ತಿರುವ ಆಂದೋಲನಗಳಿಗೆ ಒಂದು ಆಘಾತವಾಗಿದೆ. ಇದೇ ಸಂದರ್ಭದಲ್ಲಿ ಜಮ್ಮು -ಕಾಶ್ಮೀರದ ಫಲಿತಾಂಶ ಅಲ್ಲಿನ ಜನತೆಯ ಒಳದನಿಯನ್ನು ಬಹಿರಂಗಪಡಿಸಿದೆ. ಕಾಶ್ಮೀರದ ಜನತೆಯ ಮೇಲಾಗುತ್ತಿರುವ ದೌರ್ಜನ್ಯಗಳ ವಿರುದ್ಧ ಧ್ವನಿಯೆತ್ತುತ್ತಾ ಬಂದಿದ್ದ ಉಮರ್ ಅಬ್ದುಲ್ಲಾ ಮುಖ್ಯಮಂತ್ರಿಯಾಗುವ ಹಂತದಲ್ಲಿದ್ದಾರೆ. ಈ ಮೂಲಕ ಜಮು-ಕಾಶ್ಮೀರದ ರಾಜ್ಯ ಸ್ಥಾನಮಾನವನ್ನು ಮರಳಿಸುವ ಅಲ್ಲಿನ ನಾಯಕರ ಕೂಗಿಗೆ ಬಲಬಂದಂತಾಗಿದೆ. ಅಲ್ಲಿನ ವಿಶೇಷ ಸ್ಥಾನಮಾನವನ್ನು ಕಿತ್ತು ಹಾಕಿ, ರಾಜ್ಯ ಸ್ಥಾನಮಾನವನ್ನು ಇಲ್ಲವಾಗಿಸಿದ ಕೇಂದ್ರ ಸರಕಾರದ ನಿರ್ಧಾರವನ್ನು ಜಮ್ಮು-ಕಾಶ್ಮೀರದ ಜನರು ಸೋಲಿಸಿದ್ದಾರೆ. ತನ್ನ ನಿರ್ಧಾರದಿಂದ ಕಾಶ್ಮೀರದಲ್ಲಿ ಭಯೋತ್ಪಾದನೆ ನಿಲ್ಲಲಿದೆ ಎನ್ನುವ ಕೇಂದ್ರದ ಆಶ್ವಾಸನೆ ಈಗಾಗಲೇ ಸುಳ್ಳಾಗಿದೆ. ಕಾಶ್ಮೀರವನ್ನು ತನ್ನ ಕೋವಿಯ ಮೊನೆಯಲ್ಲಿ ಆಳುವ ಸೇನೆಯ ಪ್ರಯತ್ನ ವಿಫಲವಾಗಿದೆ. ಇದೇ ಸಂದರ್ಭದಲ್ಲಿ ಅಲ್ಲಿನ ಜನತೆ ಕೇಂದ್ರ ಸರಕಾರದ ವಿರುದ್ಧವಿದ್ದಾರೆ ಎನ್ನುವುದು ಚುನಾವಣೆಯಿಂದ ಸಾಬೀತಾಗಿದೆ. ಇದೇ ಸಂದರ್ಭದಲ್ಲಿ 1.48 ಶೇಕಡ ಜನರು ನೋಟಾವನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಜಮು- ಕಾಶ್ಮೀರದ ಕುರಿತಂತೆ ತನ್ನ ನಿರ್ಧಾರಗಳನ್ನು ಮರುಪರಿಶೀಲಿಸಲು ಕೇಂದ್ರ ಸರಕಾರ ಇನ್ನಾದರೂ ಮುಂದಾಗಬೇಕಾಗಿದೆ.