ಮಣಿಪುರ ಪರಿಸ್ಥಿತಿ ಸುಧಾರಣೆಯಾಗಿದೆಯೇ?
Photo: PTI
ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ
ಪತ್ರಿಕೆಯೊಂದಕ್ಕೆ ಸಂದರ್ಶನ ನೀಡುತ್ತಾ ‘‘ಮಣಿಪುರದಲ್ಲಿ ಪರಿಸ್ಥಿತಿ ಸುಧಾರಣೆ ಯಾಗಲು ಕೇಂದ್ರದ ಸಮಯೋಚಿತ ಮಧ್ಯ ಪ್ರವೇಶ ಕಾರಣ’’ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ‘‘ಹಿಂಸಾಚಾರ ಪೀಡಿತ ಮಣಿಪುರದಲ್ಲಿ ಗಮನಾರ್ಹ ಸುಧಾರಣೆ ಕಂಡು ಬಂದಿದೆ. ಕೇಂದ್ರ ಸರಕಾರದ ಸಮಯೋಚಿತ ಹಸ್ತಕ್ಷೇಪ, ಮಣಿಪುರ ಸರಕಾರದ ಪ್ರಯತ್ನಗಳಿಂದಾಗಿ ಪರಿಸ್ಥಿತಿಯಲ್ಲಿ ಗಮನಾರ್ಹ ಸುಧಾರಣೆ ಕಂಡು ಬಂದಿದೆ’’ ಎಂದು ಅವರು ಅಭಿಪ್ರಾಯ ಪಟ್ಟಿದ್ದಾರೆ. ಜನಾಂಗೀಯ ಹಿಂಸಾಚಾರದಿಂದ ತತ್ತರಿಸಿದ ಮಣಿಪುರದ ಕುರಿತಂತೆ ಪ್ರಧಾನಿ ಮೋದಿಯವರು ಸ್ಪಷ್ಟವಾಗಿ ಬಾಯಿ ತೆರೆದದ್ದು ಇದೇ ಮೊದಲಿರಬೇಕು. ಹಿಂಸೆಯಿಂದ ಮಣಿಪುರ ತತ್ತರಿಸುತ್ತಿರುವಾಗ ತುಟಿ ಬಿಚ್ಚದ ಪ್ರಧಾನಿ, ವಿಶ್ವಸಂಸ್ಥೆಯೂ ಸೇರಿದಂತೆ ಜಗತ್ತಿನ ದೇಶಗಳು ಮಣಿಪುರದಲ್ಲಿ ನಡೆಯುತ್ತಿರುವ ಬೆಳವಣಿಗೆಗಳ ಬಗ್ಗೆ ಕಳವಳ ವ್ಯಕ್ತಪಡಿಸುತ್ತಿರುವ ಸಂದರ್ಭದಲ್ಲಿ ಅಮೆರಿಕ ಪ್ರವಾಸದಲ್ಲಿ ಕಾಲ ಕಳೆದ ಪ್ರಧಾನಿ, ಮಹಿಳೆಯರ ಮೇಲೆ ಸಾಮೂಹಿಕ ಅತ್ಯಾಚಾರಗಳು ನಡೆಯುತ್ತಿರುವಾಗ ಕರ್ನಾಟಕ ವಿಧಾನಸಭೆಯ ಚುನಾವಣಾ ಪ್ರಚಾರದಲ್ಲಿ ತಲ್ಲೀನರಾಗಿದ್ದ ಪ್ರಧಾನಿ ಅವರು ‘‘ಮಣಿಪುರದ ಪರಿಸ್ಥಿತಿ ಸುಧಾರಣೆಗಾಗಿ ಮಧ್ಯ ಪ್ರವೇಶ ಮಾಡಿದ್ದಾದರೂ ಯಾವತ್ತು?’’ ಎಂದು ಜನರು ಕೇಳುತ್ತಿದ್ದಾರೆ. ರಾಜ್ಯ ಸರಕಾರದ ಕುಮ್ಮಕ್ಕು ಮತ್ತು ಪ್ರಧಾನಿ ಮೋದಿಯ ಮೌನವೇ ಮಣಿಪುರದ ಸ್ಥಿತಿಯನ್ನು ಚಿಂತಾಜನಕ ಮಾಡಿತು ಎನ್ನುವುದು ಜಗತ್ತಿಗೇ ಗೊತ್ತಿದೆ. ಕೇಂದ್ರ ಸರಕಾರದ ಮಧ್ಯ ಪ್ರವೇಶದಿಂದಾಗಿ ಮಣಿಪುರದಲ್ಲಿ ಪ್ರಕ್ಷುಬ್ಧ ಸ್ಥಿತಿ ನಿರ್ಮಾಣವಾಯಿತು. ಬಳಿಕ ಅದನ್ನು ತಹಬದಿಗೆ ತರಲು ರಾಜ್ಯ ಮತ್ತು ಕೇಂದ್ರ ಸಂಪೂರ್ಣ ವಿಫಲವಾಯಿತು. ಇನ್ನೂ ಸ್ಪಷ್ಟವಾಗಿ ಹೇಳುವುದಾದರೆ, ಕೇಂದ್ರ ಮತ್ತು ರಾಜ್ಯ ಸರಕಾರಗಳ ಪ್ರಾಯೋಜಕತ್ವದಲ್ಲೇ ಮಣಿಪುರದಲ್ಲಿ ಭಾರೀ ಹಿಂಸಾಚಾರ ನಡೆಯಿತು.
ಕಳೆದ ವರ್ಷ ಮೇ ತಿಂಗಳಿಂದ ಇಲ್ಲಿಯವರೆಗೆ 200ಕ್ಕೂ ಹೆಚ್ಚು ಚರ್ಚುಗಳು ಮಣಿಪುರದಲ್ಲಿ ಧ್ವಂಸವಾಗಿವೆ. 300ಕ್ಕೂ ಅಧಿಕ ಮಂದಿಯನ್ನು ಬರ್ಬರವಾಗಿ ಕೊಂದು ಹಾಕಲಾಗಿದೆ. ಹಲವು ಮಹಿಳೆಯರ ಮೇಲೆ ಸಾಮೂಹಿಕ ಅತ್ಯಾಚಾರಗಳು ನಡೆದಿವೆ. ಸಾವಿರಾರು ನಿರ್ವಸಿತರು ಈಗಲೂ ಪರಿಹಾರ ಶಿಬಿರದಲ್ಲಿ ಜೀವ ಭಯದಿಂದ ಬದುಕುತ್ತಿದ್ದಾರೆ ಮತ್ತು ಇದನ್ನೇ ಪ್ರಧಾನಿ ಮೋದಿಯವರು ಮಣಿಪುರದಲ್ಲಿ ‘ಪರಿಸ್ಥಿತಿ ಸುಧಾರಣೆ’ಯಾಗಿದೆ ಎನ್ನುತ್ತಿದ್ದಾರೆ. ಸಕಾಲದಲ್ಲಿ ಪ್ರಧಾನಿ ಮಧ್ಯ ಪ್ರವೇಶ ಮಾಡುತ್ತಿದ್ದರೆ, ಈ ಎಲ್ಲ ಸಾವು ನೋವುಗಳನ್ನು ತಪ್ಪಿಸಬಹುದಾಗಿತ್ತು. ಆದರೆ ಕಳೆದ ಮೇ ತಿಂಗಳಲ್ಲಿ ಪ್ರಧಾನಿ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಅವರು ಕರ್ನಾಟಕದಲ್ಲಿ ಚುನಾವಣಾ ರ್ಯಾಲಿ ನಡೆಸುತ್ತಿರುವಾಗ, ಮಣಿಪುರ ಹೊತ್ತಿ ಉರಿಯುತ್ತಿತ್ತು. ವಿಪರ್ಯಾಸವೆಂದರೆ, ಮಣಿಪುರದಲ್ಲಿ ನಡೆದ ಬರ್ಬರ ಹಿಂಸಾಚಾರ ಭಾರತದ ಉಳಿದ ಭಾಗಕ್ಕೆ ಗೊತ್ತಾದದ್ದೇ ಎರಡು ತಿಂಗಳ ಬಳಿಕ. ಹಿಂಸಾಚಾರ ಭುಗಿಲೆದ್ದ ಹೊತ್ತಿಗೆ ಸರಕಾರ ಮೊದಲು ಮಾಡಿದ ಕೆಲಸವೆಂದರೆ, ರಾಜ್ಯಾದ್ಯಂತ ಇಂಟರ್ನೆಟ್ ಸ್ಥಗಿತಗೊಳಿಸಿದ್ದು. ‘ಹಿಂಸೆ ಹರಡದಂತೆ ತಡೆಯಲು ಇಂಟರ್ನೆಟ್ ನಿರ್ಬಂಧಿಸಲಾಯಿತು’ ಎಂದು ಸರಕಾರ ಹೇಳಿಕೊಳ್ಳುತ್ತಿದೆ. ಆದರೆ ಮಣಿಪುರದಲ್ಲಿ ನಡೆಯುತ್ತಿರುವ ಹಿಂಸಾಚಾರ ಭಾರತದ ಇತರ ಭಾಗಕ್ಕೆ ತಿಳಿಯಬಾರದು ಎಂದು ಇಂಟರ್ನೆಟ್ನ್ನು ಸ್ಥಗಿತಗೊಳಿಸಲಾಗಿತ್ತು. ಸುಮಾರು ಎರಡು ತಿಂಗಳ ಕಾಲ ಮಣಿಪುರದಲ್ಲಿ ಹಿಂಸೆ, ಮಹಿಳೆಯರ ಬೆತ್ತಲೆ ಮೆರವಣಿಗೆ, ಸಾಮೂಹಿಕ ಅತ್ಯಾಚಾರಗಳು ನಡೆಯುತ್ತಲೇ ಇದ್ದರೂ ಹೊರ ಜಗತ್ತಿಗೆ ಇದು ತಿಳಿದಿರಲೇ ಇಲ್ಲ. ಸರಕಾರವೂ ಈ ಬಗ್ಗೆ ತುಟಿ ಬಿಚ್ಚಿರಲಿಲ್ಲ. ಯಾವಾಗ ಇಂಟರ್ನೆಟ್ ನಿರ್ಬಂಧ ಸಡಿಲಗೊಳಿಸಲಾಯಿತೋ, ಮಣಿಪುರದ ಕರಾಳ ಸ್ಥಿತಿ ಒಂದೊಂದಾಗಿ ಬಹಿರಂಗವಾಗತೊಡಗಿತು. ಹಿಂಸಾಚಾರದಲ್ಲಿ ಸರಕಾರದ ಪಾತ್ರವೂ ಬೆಳಕಿಗೆ ಬರತೊಡಗಿತು.
ಮೈತೈ ಸಮುದಾಯಕ್ಕೆ ಬುಡಕಟ್ಟು ಸ್ಥಾನಮಾನ ನೀಡಲು ರಾಜ್ಯ ಸರಕಾರ ಹಸ್ತಕ್ಷೇಪ ನಡೆಸಿರುವುದೇ ಮಣಿಪುರ ಹಿಂಸಾಚಾರ ಭುಗಿಲೇಳಲು ಮುಖ್ಯ ಕಾರಣ. ಇದರ ವಿರುದ್ಧ ಕುಕಿ ಸಮುದಾಯ ಆತಂಕಗೊಂಡು ಶಾಂತಿಯುತ ಪ್ರತಿಭಟನೆ ನಡೆಸಿದಾಗ ಅವರ ಮೇಲೆ ಮೈತೈ ಸಮುದಾಯವನ್ನು ಎತ್ತಿ ಕಟ್ಟಿದ್ದು ರಾಜ್ಯ ಸರಕಾರ. ಮೈತೈ ಸಮುದಾಯದೊಳಗೆ ನುಗ್ಗಿದ ಸಂಘಪರಿವಾರ ಮೈತೈ ಸಮುದಾಯದೊಳಗೆ ಹಿಂದುತ್ವವಾದವನ್ನು ಬಿತ್ತಿ, ಮಣಿಪುರ ಸಂಘರ್ಷವನ್ನು ಹಿಂದೂ-ಕ್ರಿಶ್ಚಿಯನ್ ನಡುವಿನ ಸಂಘರ್ಷವಾಗಿ ಬಿಂಬಿಸಲು ಯತ್ನಿಸಿದ್ದು ಕೂಡ ಗುಟ್ಟಾಗಿ ಉಳಿದಿಲ್ಲ. ಮಣಿಪುರ ಹಿಂಸಾಚಾರದಲ್ಲಿ ಮೈತೈ ಉಗ್ರರು ಬಳಸಿರುವುದು ಸರಕಾರಿ ಶಸ್ತ್ರಾಸ್ತ್ರಗಳನ್ನು ಎನ್ನುವುದು ಗಮನಾರ್ಹ. ಉಗ್ರರು ಪೊಲೀಸ್ ಠಾಣೆಗಳಿಗೆ ನುಗ್ಗಿ ಎ.ಕೆ. 47ನಂತಹ ಅತ್ಯಾಧುನಿಕ 5,000ಕ್ಕೂ ಅಧಿಕ ಶಸ್ತ್ರಾಸ್ತ್ರಗಳನ್ನು ಲೂಟಿ ಮಾಡಿದ್ದಾರೆ. ಕುಕಿ ಸಮುದಾಯದ ವಿರುದ್ಧ ಇದೇ ಶಸ್ತ್ರಾಸ್ತ್ರಗಳನ್ನು ಬಳಕೆ ಮಾಡಲಾಯಿತು. ಹಿಂಸಾಚಾರ ವಿಪರೀತಕ್ಕೆ ತಲುಪಿದಂತೆಯೇ, ಸಂತ್ರಸ್ತ ಕುಕಿ ಸಮುದಾಯವನ್ನೇ ವಿಲನ್ಗಳಾಗಿಸುವ ಪ್ರಯತ್ನವನ್ನು ಸಂಘಪರಿವಾರ ಸಂಘಟನೆಗಳು ಮಾಡತೊಡಗಿದವು. ಮಣಿಪುರದಲ್ಲಿ ನಡೆಯುತ್ತಿರುವ ಅಫೀಮು ಸಾಗಣೆಗೂ ಈ ಹಿಂಸಾಚಾರಕ್ಕೂ ತಳಕು ಹಾಕಲಾಯಿತು. ಈ ಸಾಗಣೆಯಲ್ಲಿ ಕುಕಿ ಸಮುದಾಯದ ಪಾತ್ರವನ್ನಷ್ಟೇ ಮುಂದಿಟ್ಟು, ಇಡೀ ಮಣಿಪುರವನ್ನು ಅಫೀಮು ತೋಟವನ್ನಾಗಿಸುವ ಪ್ರಯತ್ನ ನಡೆಸಲಾಗುತ್ತಿದೆ ಎಂದು ವದಂತಿ ಹರಡಲಾಯಿತು. ಅಷ್ಟೇ ಅಲ್ಲ ಮ್ಯಾನ್ಮಾರ್ನಿಂದ ಕುಕಿ ನಿರಾಶ್ರಿತರು ನಿರಂತರವಾಗಿ ಹರಿದು ಬರುತ್ತಿರುವ ಬಗ್ಗೆಯೂ ಅಪಪ್ರಚಾರಗಳನ್ನು ಸಂಘಪರಿವಾರ ನಡೆಸಿತು ಮತ್ತು ಕೇಂದ್ರ ಮತ್ತು ರಾಜ್ಯ ಸರಕಾರ ಮಣಿಪುರದಲ್ಲಿ ನಡೆಯುವ ಹಿಂಸಾಚಾರಕ್ಕೆ ಪರೋಕ್ಷವಾಗಿ ಸಂತ್ರಸ್ತ ಕುಕಿ ಸಮುದಾಯವನ್ನೇ ಹೊಣೆ ಮಾಡಿತು.
ಹಿಂಸಾಚಾರ ಕಾರಣಕ್ಕಾಗಿ ವಿಶ್ವವನ್ನೇ ಬೆಚ್ಚಿ ಬೀಳಿಸಿದ ಮಣಿಪುರಕ್ಕೆ ಈವರೆಗೆ ಪ್ರಧಾನಿ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಯಾಕೆ ಭೇಟಿ ನೀಡಿಲ್ಲ? ಈ ಪ್ರಶ್ನೆಗೆ ಪ್ರಧಾನಿ ಮೋದಿ ಉತ್ತರಿಸಿಲ್ಲ. ಮಣಿಪುರದಲ್ಲಿ ಪರಿಸ್ಥಿತಿ ಸುಧಾರಣೆಯಾಗಿದೆ ಎನ್ನುವುದಕ್ಕಿಂತ ಮೊದಲು ಮಣಿಪುರದಲ್ಲಿ ಇಂತಹದೊಂದು ಪರಿಸ್ಥಿತಿಯನ್ನು ಸೃಷ್ಟಿಸಿದ ಅಲ್ಲಿನ ರಾಜ್ಯ ಸರಕಾರದ ವಿರುದ್ಧ ಕೇಂದ್ರ ಸರಕಾರ ಏನು ಕ್ರಮ ತೆಗೆದುಕೊಂಡಿದೆ ಎನ್ನುವುದನ್ನು ಪ್ರಧಾನಿ ಮೋದಿ ಸ್ಪಷ್ಟ ಪಡಿಸಬೇಕು. 200ಕ್ಕೂ ಅಧಿಕ ಮಂದಿಯ ಕಗ್ಗೊಲೆ, ನೂರಾರು ಚರ್ಚುಗಳ ಧ್ವಂಸ, ಮಹಿಳೆಯರ ಸಾಮೂಹಿಕ ಅತ್ಯಾಚಾರ ಇತ್ಯಾದಿಗಳಿಗಾಗಿ ಅಲ್ಲಿನ ಸರಕಾರವನ್ನು ಎಂದೋ ವಜಾಗೊಳಿಸಬೇಕಾಗಿತ್ತು. ಆದರೆ ರಾಜ್ಯ ಸರಕಾರದ ಕ್ರಮವನ್ನು ಪ್ರಧಾನಿ ಮೋದಿ ಪ್ರಶಂಸಿಸಿದ್ದಾರೆ. ಮಣಿಪುರದಲ್ಲಿ ಪರಿಸ್ಥಿತಿ ಸುಧಾರಣೆಯಾಗಿದೆಯೆಂದಾದರೆ ಇನ್ನೂ ಸಾವಿರಾರು ಸಂತ್ರಸ್ತರು ಯಾಕೆ ಪರಿಹಾರ ಶಿಬಿರದಲ್ಲಿ ಕಾಲ ಕಳೆಯುತ್ತಿದ್ದಾರೆ ಎನ್ನುವುದಕ್ಕೆ ಮೋದಿ ಉತ್ತರಿಸಬೇಕು. ಮಣಿಪುರದಲ್ಲಿ ಸುಧಾರಣೆಯಾಗಬೇಕಾದರೆ, ಮೊತ್ತ ಮೊದಲು ಕುಕಿ ಸಮುದಾಯದ ಮೇಲಿನ ಹಿಂಸಾಚಾರಕ್ಕೆ ಪರೋಕ್ಷ ಬೆಂಬಲವನ್ನು ನೀಡಿದ ಮೈತೈ ಸಮುದಾಯಕ್ಕೆ ಸೇರಿದ ಮುಖ್ಯಮಂತ್ರಿ ಬಿರೇನ್ ಸಿಂಗ್ ರಾಜೀನಾಮೆ ನೀಡಬೇಕು. ಆರನೇ ಶೆಡ್ಯೂಲನ್ನು ಮಣಿಪುರಕ್ಕೆ ವಿಸ್ತರಿಸಬೇಕು. ಮೈತೈ ಮತ್ತು ಕುಕಿ ಸಮುದಾಯವನ್ನು ಎತ್ತಿ ಕಟ್ಟುವ ಸಂಘಪರಿವಾರ ಕಾರ್ಯಾಚರಣೆಗೆ ಲಗಾಮು ಹಾಕಬೇಕು. ರಾಜಕೀಯವಾಗಿ, ಆರ್ಥಿಕವಾಗಿ ಮತ್ತು ಸಾಮಾಜಿಕವಾಗಿ ಹೆಚ್ಚಿನ ಪ್ರಾತಿನಿಧ್ಯವನ್ನು ಪಡೆದಿರುವ ಮೈತೈ ಸಮುದಾಯವನ್ನು ಕುಕಿ ಬುಡಕಟ್ಟು ಸಮುದಾಯದ ಮೇಲೆ ಹೇರುವ ಕ್ರಮದಿಂದ ಹಿಂದೆ ಸರಿಯಬೇಕು. ‘ಪರಿಸ್ಥಿತಿ ಸುಧಾರಣೆ’ಗೆ ಯಾವೊಂದು ಕ್ರಮವನ್ನೂ ತೆಗೆದುಕೊಳ್ಳದೆ ಪರಿಸ್ಥಿತಿ ಸುಧಾರಣೆಯಾಗಿದೆ ಎಂದು ವಿಶ್ವದ ಕಣ್ಣಿಗೆ ಮಣ್ಣೆರಚಲು ಯತ್ನಿಸಿದರೆ ಮಣಿಪುರ ಸಮಸ್ಯೆ ಇತ್ಯರ್ಥವಾಗುವುದಿಲ್ಲ. ಬದಲಿಗೆ ಅದು ಇನ್ನಷ್ಟು ಉಲ್ಬಣಿಸಿ ಇಡೀ ಈಶಾನ್ಯ ಭಾಗ ಭಾರತದ ಪಾಲಿಗೆ ಸಮಸ್ಯೆಯಾಗಿ ಪರಿವರ್ತನೆಯಾಗಬಹುದು.