ಹೇಮಂತ್ ಕರ್ಕರೆ ಹತ್ಯೆ: ಭಯೋತ್ಪಾದಕರ ‘ಬಣ್ಣ’ ಬಯಲಾಗಲಿ
ಹೇಮಂತ್ ಕರ್ಕರೆ Photo: PTI
ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ
2008 ನವೆಂಬರ್ ತಿಂಗಳಲ್ಲಿ ಮುಂಬೈಯ ಮೇಲೆ ನಡೆದ ಭಯೋತ್ಪಾದಕ ದಾಳಿ ಭಾರತದ ಪಾಲಿಗೆ ಆರದ ಗಾಯ. ದಾಳಿ ನಡೆಸಿದ ಎಲ್ಲ ಉಗ್ರರನ್ನು ಕೊಂದು ಹಾಕಿದ ಬಳಿಕವೂ ಇದರ ಹಿಂದಿರುವ ಎಲ್ಲ ಸಂಚುಕೋರರನ್ನು, ಮಸಲತ್ತುಗಳನ್ನು ಗುರುತಿಸುವಲ್ಲಿ ನಾವು ಪೂರ್ಣ ಪ್ರಮಾಣದಲ್ಲಿ ಯಶಸ್ವಿಯಾಗಿಲ್ಲ.ಈ ದಾಳಿಗೆ ಸಂಬಂಧಿಸಿದ ಹಲವು ಪ್ರಶ್ನೆಗಳು ಇಂದಿಗೂ ಉತ್ತರವಿಲ್ಲದೆ ಬಿದ್ದುಕೊಂಡಿವೆ ಮತ್ತು ಹಲವು ವಿವರಗಳು ಇಂದಿಗೂ ಅನುಮಾನಾಸ್ಪದವಾಗಿ, ಆಗಾಗ ರೆಕ್ಕೆಪುಕ್ಕಗಳನ್ನು ಪಡೆದುಕೊಂಡು ಮಾಧ್ಯಮಗಳಲ್ಲಿ ಚರ್ಚೆಗೊಳಗಾಗುತ್ತವೆ. ಅದರಲ್ಲಿ ಮುಖ್ಯವಾದುದು, ಮಾಲೆಗಾಂವ್, ಸಂರೆತಾ ರೈಲು ಸ್ಫೋಟಗಳ ತನಿಖೆ ನಡೆಸುತ್ತಿದ್ದ ಎಟಿಎಸ್ ಮುಖ್ಯಸ್ಥ ಹೇಮಂತ್ ಕರ್ಕರೆ ಮತ್ತು ಅವರ ತಂಡದ ಸಾವು. ಮಾಲೆಗಾಂವ್ ಸ್ಫೋಟ, ಅಜ್ಮೀರ್ ಸ್ಫೋಟ, ಮಕ್ಕಾ ಮಸೀದಿ ಸ್ಫೋಟ ಹಿಂದಿರುವ ಸ್ವಾಮೀ ಅಸೀಮಾನಂದ, ಪುರೋಹಿತ್, ಪ್ರಜ್ಞಾ ಸಿಂಗ್ ಠಾಕೂರ್ರಂತಹ ಕೇಸರಿ ಶಂಕಿತ ಉಗ್ರರನ್ನು ಗುರುತಿಸಿ ಬಂಧಿಸಿದ್ದು ಕರ್ಕರೆ ತಂಡ. ಅಷ್ಟೇ ಅಲ್ಲ, ಆರೆಸ್ಸೆಸ್ನ ಹಿರಿಯ ನಾಯಕನೊಬ್ಬನ ಹೆಸರೂ ಅವರ ತನಿಖೆಯಲ್ಲಿ ಪ್ರಸ್ತಾಪವಾಗಿತ್ತು. ಆದರೆ ಅಷ್ಟರಲ್ಲೇ ಸಂಭವಿಸಿದ ಮುಂಬೈ ದಾಳಿ ಈ ತನಿಖೆಗೆ ಬಹುದೊಡ್ಡ ತಡೆಯಾಯಿತು. ಮುಂಬೈ ದಾಳಿ ನಡೆಸಿದ ಉಗ್ರರ ಗುಂಡಿಗೆ ಕರ್ಕರೆ ಸೇರಿದಂತೆ ಅಷ್ಟೂ ಅಧಿಕಾರಿಗಳು ಬಲಿಯಾದರು.
ಹೇಮಂತ್ ಕರ್ಕರೆ ಮತ್ತು ಅವರ ತಂಡದ ಸಾವಿನ ಬಗ್ಗೆ ಈ ಹಿಂದೆ ಹಲವು ರಾಜಕೀಯ ನಾಯಕರು ಅನುಮಾನಗಳನ್ನು ವ್ಯಕ್ತಪಡಿಸಿದ್ದಾರೆ. ಕರ್ಕರೆ ಹತ್ಯೆಯನ್ನು ಪ್ರತ್ಯೇಕವಾಗಿ ಗುರುತಿಸಿ, ಅದನ್ನು ತನಿಖೆ ನಡೆಸಬೇಕು ಎಂದು ಹಲವರು ಒತ್ತಾಯಿಸಿದ್ದಾರೆ. ಹೀಗೆ ಒತ್ತಾಯಿಸಿದವರಲ್ಲಿ ಪೊಲೀಸ್ ಇಲಾಖೆಯ ಹಿರಿಯ ನಿವೃತ್ತ ಅಧಿಕಾರಿಗಳೂ ಸೇರಿದ್ದಾರೆ. ‘ಕರ್ಕರೆ ಮತ್ತು ಅವರ ತಂಡವನ್ನು ಕೊಂದು ಹಾಕುವುದಕ್ಕಾಗಿಯೇ ಮುಂಬೈ ದಾಳಿಯನ್ನು ಪ್ರಾಯೋಜಿಸಲಾಯಿತೆ?’ ಎನ್ನುವ ಹಂತದವರೆಗೆ ಚರ್ಚೆಗಳು ತಲುಪಿದ್ದವು. ಈ ಬಗ್ಗೆ ವಿಶ್ಲೇಷಣಾ ವರದಿಗಳು, ಪುಸ್ತಕಗಳು ಹೊರ ಬಂದವು. ಇಷ್ಟಾದರೂ ಕರ್ಕರೆ ಮತ್ತು ಅವರ ತಂಡದ ಸಾವು ನಿಗೂಢವಾಗಿಯೇ ಉಳಿದಿದೆ. ಇದೀಗ ಲೋಕಸಭಾ ಚುನಾವಣೆಯ ಹೊತ್ತಿಗೆ ಕರ್ಕರೆ ಸಾವು ಮತ್ತೆ ಮುನ್ನೆಲೆಗೆ ಬಂದಿದೆ.
‘‘ಮುಂಬೈ ಭಯೋತ್ಪಾದಕ ದಾಳಿಯ ಸಂದರ್ಭದಲ್ಲಿ ಹೇಮಂತ್ ಕರ್ಕರೆ ಅವರನ್ನು ಕೊಂದ ಗುಂಡು ಅಜ್ಮಲ್ ಕಸಬ್ ಅಥವಾ ಪಾಕಿಸ್ತಾನದ ಇತರ ಭಯೋತ್ಪಾದಕರ ಬಂದೂಕಿನಿಂದ ಹಾರಿರಲಿಲ್ಲ. ಬದಲಾಗಿ ಆರೆಸ್ಸೆಸ್ನೊಂದಿಗೆ ನಂಟು ಹೊಂದಿದ್ದ ಪೊಲೀಸ್ ಅಧಿಕಾರಿಯೊಬ್ಬರ ಬಂದೂಕಿನಿಂದ ಹಾರಿತ್ತು’’ ಎಂದು ಮಹಾರಾಷ್ಟ್ರದ ಕಾಂಗ್ರೆಸ್ ನಾಯಕ ವಿಜಯ್ ವಡೆಟ್ಟಿವಾರ್ ಅವರು ಆರೋಪಿಸಿದ್ದಾರೆ. ‘‘ಈ ಸತ್ಯವನ್ನು ಮರೆ ಮಾಚಿದ ದೇಶದ್ರೋಹಿ ಉಜ್ವಲ್ ನಿಕಮ್’’ ಎಂಬ ಗಂಭೀರ ಆರೋಪವನ್ನು ಕೂಡ ಮಾಡಿದ್ದಾರೆ. ಮುಂಬೈ ದಾಳಿ ಪ್ರಕರಣದ ವಿಶೇಷ ಸರಕಾರಿ ವಕೀಲ ಉಜ್ವಲ್ ನಿಕಮ್ ಕಾರಣದಿಂದ, ತನಿಖೆ ದಿಕ್ಕು ತಪ್ಪಿತು ಎನ್ನುವ ಹೇಳಿಕೆಯನ್ನು ಈ ಹಿಂದೆಯೂ ಹಲವರು ನೀಡಿದ್ದರು. ಅಂದಿನ ವಿಶೇಷ ಸರಕಾರಿ ವಕೀಲರಲ್ಲಿ ಒಬ್ಬರಾಗಿದ್ದ ರೋಹಿಣಿ ಸಾಲಿಯಾನ್ ಅವರು ‘ಕೇಸರಿ ಭಯೋತ್ಪಾದಕ’ರ ಕುರಿತಂತೆ ಎನ್ಐಎ ಹೇಗೆ ಮೃದು ನಿಲುವು ತಳೆದಿತ್ತು ಎನ್ನುವುದನ್ನು ಮಾಧ್ಯಮಗಳಲ್ಲಿ ಬಹಿರಂಗ ಪಡಿಸಿದ್ದರು. ಅದೇ ಸಂದರ್ಭದಲ್ಲಿ ಉಜ್ವಲ್ ನಿಕಮ್ ಮುಂಬೈ ದಾಳಿ ಪ್ರಕರಣವನ್ನು ಸಂಪೂರ್ಣವಾಗಿ ರಾಜಕೀಯಗೊಳಿಸಿ ವಿಚಾರಣೆಯ ದಾರಿ ತಪ್ಪಿಸಿದರು ಎನ್ನುವ ಆರೋಪಗಳು ಕೇಳಿ ಬಂದಿದ್ದವು. ಇದೀಗ ಎಲ್ಲ ಆರೋಪಗಳನ್ನು ಪುಷ್ಟೀಕರಿಸುವಂತೆ ಉಜ್ವಲ್ ನಿಕಮ್ ಬಿಜೆಪಿಯ ಲೋಕಸಭಾ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದಾರೆ. ಈ ಕಾರಣದಿಂದಲೇ, ಮುಂಬೈ ದಾಳಿ ಸಂದರ್ಭದಲ್ಲಿ ಸಂಭವಿಸಿದ ಕರ್ಕರೆ ಸಾವು ಮತ್ತೆ ಮುನ್ನೆಲೆಗೆ ಬಂದಿದೆ.
ಕೇಸರಿ ಪರಿವಾರದ ಜೊತೆಗೆ ಉಜ್ವಲ್ ನಿಕಮ್ ನಂಟು ದೇಶಕ್ಕೇ ಗೊತ್ತಿರುವಂತಹದ್ದು. ಆದರೆ ಇದೀಗ ವಿಜಯ್ ವಡೆಟ್ಟಿವಾರ್ ಅವರ ಆರೋಪ, ಮಹಾರಾಷ್ಟ್ರ ಲೋಕಸಭಾ ಚುನಾವಣೆಯ ಪ್ರಚಾರದ ದಿಕ್ಕನ್ನು ಬದಲಿಸಿದೆ. ಬಿಜೆಪಿ ಈ ಆರೋಪವನ್ನೇ ಕಾಂಗ್ರೆಸ್ಗೆ ತಿರುಗುಬಾಣವಾಗಿಸಲು ಹೊರಟಿದೆ. ಕಾಂಗ್ರೆಸ್ ವಿರುದ್ಧ ಈಗಾಗಲೇ ಚುನಾವಣಾ ಆಯೋಗಕ್ಕೆ ದೂರು ನೀಡಿರುವ ಬಿಜೆಪಿ ‘‘ಈ ಮೂಲಕ ಕಾಂಗ್ರೆಸ್ ಪಕ್ಷವು ಪಾಕಿಸ್ತಾನಿ ಉಗ್ರರನ್ನು ಸಮರ್ಥಿಸಲು ಮುಂದಾಗಿದೆ’’ ಎಂದು ಟೀಕಿಸಿದೆ. ಬಹಳಷ್ಟು ಕಾಂಗ್ರೆಸ್ ನಾಯಕರು ವಿಜಯ್ ವಡೆಟ್ಟಿವಾರ್ ಅವರ ಆರೋಪದಿಂದ ಅಂತರವನ್ನು ಕಾಯ್ದುಕೊಂಡಿದ್ದಾರೆ. ಇದೇ ಸಂದರ್ಭದಲ್ಲಿ ಶಶಿ ತರೂರ್ ಅವರು, ವಿಜಯ್ ವಡೆಟ್ಟಿವಾರ್ ಅವರ ಹೇಳಿಕೆಯನ್ನು ಪೂರ್ಣವಾಗಿ ಬೆಂಬಲಿಸಿಲ್ಲವಾದರೂ, ಹೇಮಂತ್ ಕರ್ಕರೆ ಅವರ ಹತ್ಯೆ ಗಂಭೀರ ತನಿಖೆಗೊಳಗಾಗಬೇಕು ಎಂದು ಆಗ್ರಹಿಸಿದ್ದಾರೆ.
ಚುನಾವಣೆಯ ಹೊತ್ತಿಗೆ ಕರ್ಕರೆ ಸಾವನ್ನು ಎಳೆದು ತಂದಿರುವುದು ಎಷ್ಟು ಸರಿ? ಎನ್ನುವ ಪ್ರಶ್ನೆ ಒಂದೆಡೆಯಾದರೆ, ಕಾಂಗ್ರೆಸ್ ಮುಖಂಡ ವಡೆಟ್ಟಿವಾರ್ ಅವರ ಹೇಳಿಕೆ ಎಷ್ಟರ ಮಟ್ಟಿಗೆ ಸತ್ಯಾಂಶದಿಂದ ಕೂಡಿದೆ ಎನ್ನುವುದು ಕೂಡ ಮುಖ್ಯವಾಗಿದೆ. ಅವರ ಮಾತಿನಲ್ಲಿ ಶೇ. 50ರಷ್ಟು ಸತ್ಯವಿದೆಯಾದರೂ, ಅದು ದೇಶದ ಆಂತರಿಕ ಭದ್ರತೆಗೆ ಸಂಬಂಧಿಸಿ ಅತ್ಯಂತ ಆತಂಕಕಾರಿ ವಿಷಯವಾಗಿದೆ. ಇದನ್ನು ಸಂಬಂಧಪಟ್ಟವರು ಗಂಭೀರವಾಗಿ ತೆಗೆದುಕೊಳ್ಳ ಬೇಕು. ಅಥವಾ ಇಂತಹದೊಂದು ಸುಳ್ಳು ಆರೋಪ ಮಾಡಿರುವುದಕ್ಕಾಗಿ ಕಾಂಗ್ರೆಸ್ ಮುಖಂಡನ ಮೇಲೆ ಕ್ರಮ ತೆಗೆದುಕೊಳ್ಳಬೇಕು. ಹೇಮಂತ್ ಕರ್ಕರೆ ತಂಡ ಮಾಲೆಗಾಂವ್, ಮಕ್ಕಾಮಸೀದಿ ಸ್ಫೋಟ, ಸಂಜೋತಾ ರೈಲು ಸ್ಫೋಟಗಳಲ್ಲಿ ಕೇಸರಿ ಸಂಘಟನೆಗಳ ಪಾತ್ರವನ್ನು ಗುರುತಿಸಿತ್ತು ಮಾತ್ರವಲ್ಲ, ಶಂಕಿತ ಉಗ್ರರನ್ನು ಬಂಧಿಸಿತ್ತು. ಅವರಲ್ಲಿ ಪ್ರಜ್ಞಾ ಸಿಂಗ್ ಠಾಕೂರ್, ಪುರೋಹಿತ್, ಅಸೀಮಾನಂದ ಮೊದಲಾದವರು ಸೇರಿದ್ದಾರೆ. ಎಟಿಎಸ್ ತಂಡದ ಸಾಮೂಹಿಕ ಹತ್ಯೆಯ ಅತಿ ದೊಡ್ಡ ಫಲಾನುಭವಿಗಳು ಯಾರು ಎನ್ನುವುದನ್ನು ಊಹಿಸುವುದಕ್ಕೆ ಕಷ್ಟವಿಲ್ಲ. ಕರ್ಕರೆ ತಂಡದ ಬರ್ಬರ ಹತ್ಯೆಯ ಬಳಿಕ ಈ ತನಿಖೆ ಹೇಗೆ ಹಳ್ಳ ಹಿಡಿಯಿತು ಎನ್ನುವುದನ್ನೂ ನಾವು ನೋಡಿದ್ದೇವೆ. ಮಾತ್ರವಲ್ಲ, ಕರ್ಕರೆ ತಂಡ ಬಂಧಿಸಿದ ಪ್ರಜ್ಞಾ ಸಿಂಗ್ ಠಾಕೂರ್ಗೆ ಬಿಜೆಪಿ ಟಿಕೆಟ್ ನೀಡಿ ಚುನಾವಣೆಯಲ್ಲಿ ಗೆಲ್ಲಿಸಿ ಸಂಸತ್ಗೆ ಪ್ರವೇಶಿಸಲು ಅವಕಾಶ ಮಾಡಿಕೊಟ್ಟಿತು. ಕರ್ಕರೆ ಸಾವಿಗೆ ಪ್ರತಿಕ್ರಿಯಿಸಿದ ಪ್ರಜ್ಞಾ ಸಿಂಗ್ ‘‘ಆತನಿಗೆ ತಕ್ಕ ಶಿಕ್ಷೆಯಾಗಿದೆ’’ ಎಂಬ ಹೇಳಿಕೆ ನೀಡಿ, ಭಯೋತ್ಪಾದಕರಿಂದ ಹುತಾತ್ಮರಾಗಿದ್ದ ಕರ್ಕರೆ ಮತ್ತು ಅವರ ತಂಡದ ತ್ಯಾಗ, ಬಲಿದಾನವನ್ನು ಅವಮಾನಿಸಿದ್ದರು. ಆ ಮೂಲಕ, ಪರೋಕ್ಷವಾಗಿ ಆಕೆ ಕರ್ಕರೆಯನ್ನು ಕೊಂದ ಭಯೋತ್ಪಾದಕರ ಪರವಾಗಿ ನಿಂತಿದ್ದರು. ಇಂದು ವಿಜಯ್ ವಡೆಟ್ಟಿವಾರ್ ಅವರನ್ನು ‘ಪಾಕಿಸ್ತಾನಕ್ಕೆ ಕ್ಲೀನ್ ಚಿಟ್ ನೀಡಿದ್ದಾರೆ’ ಎಂದು ದೂರುತ್ತಿರುವ ಬಿಜೆಪಿಯು ಕರ್ಕರೆ ಸಾವಿಗೆ ಪ್ರಜ್ಞಾಸಿಂಗ್ ನೀಡಿದ ಪ್ರತಿಕ್ರಿಯೆಯ ಬಗ್ಗೆಯೂ ಸ್ಪಷ್ಟೀಕರಣ ನೀಡಬೇಕಾಗುತ್ತದೆ.
ಇದೇ ಸಂದರ್ಭದಲ್ಲಿ ಕರ್ಕರೆ ಹತ್ಯೆಗೆ ಸಂಬಂಧಿಸಿ ಕಾಂಗ್ರೆಸ್ ಪಕ್ಷ ಎಷ್ಟರಮಟ್ಟಿಗೆ ಪ್ರಾಮಾಣಿಕವಾಗಿದೆ ಎನ್ನುವುದೂ ಅಷ್ಟೇ ಮುಖ್ಯ. ಮುಂಬೈ ದಾಳಿ ನಡೆದಾಗ ಮಹಾರಾಷ್ಟ್ರದಲ್ಲೂ ಕೇಂದ್ರದಲ್ಲೂ ಇದ್ದದ್ದು ಕಾಂಗ್ರೆಸ್ ಸರಕಾರ. ಕರ್ಕರೆ ಹತ್ಯೆಯ ಬಗ್ಗೆ ನಿಷ್ಪಕ್ಷಪಾತವಾದ ತನಿಖೆ ನಡೆಸುವುದಕ್ಕೆ ಕಾಂಗ್ರೆಸ್ಗೆ ಯಾರ ಅಡ್ಡಿಯೂ ಇದ್ದಿರಲಿಲ್ಲ. ಕರ್ಕರೆ ತಂಡ ತಮ್ಮ ಪ್ರಾಣವನ್ನು ಒತ್ತೆಯಿಟ್ಟು ಈ ದೇಶದಲ್ಲಿ ಹರಡಿರುವ ಸ್ವದೇಶಿ ಭಯೋತ್ಪಾದನೆಯ ಬಹುದೊಡ್ಡ ಜಾಲವನ್ನು ಬಹಿರಂಗ ಪಡಿಸಿದರು. ದೇಶದಲ್ಲಿ ಭವಿಷ್ಯದಲ್ಲಿ ನಡೆಯಬಹುದಾಗಿದ್ದ ಹಲವು ದುರಂತಗಳನ್ನು ಅವರು ತಪ್ಪಿಸಿದರು. ಈ ಹಿನ್ನೆಲೆಯಲ್ಲಿ ಕರ್ಕರೆ ತಂಡದ ರಕ್ಷಣೆ ಕಾಂಗ್ರೆಸ್ ಸರಕಾರದ ಹೊಣೆಗಾರಿಕೆಯಾಗಬೇಕಾಗಿತ್ತು. ತಂಡದ ಸಾಮೂಹಿಕ ಹತ್ಯೆಯಾದಾಗ ಅದನ್ನು ಪ್ರತ್ಯೇಕವಾಗಿ ತನಿಖೆಗೊಳಪಡಿಸುವುದು ಕಾಂಗ್ರೆಸ್ ಸರಕಾರದ ಕರ್ತವ್ಯವಾಗಿತ್ತು. ಅದನ್ನು ಅಂದು ಆಗ್ರಹಿಸಿದವರು ಕೇಂದ್ರ ಸಚಿವರಾಗಿದ್ದ ಎ. ಆರ್. ಅಂತುಳೆ. ಹಾಗೆ ಒತ್ತಾಯಿಸಿದ ಬೆನ್ನಿಗೇ ಅಂತುಳೆ ಅವರ ಮೇಲೆ ಕಾಂಗ್ರೆಸ್, ಬಿಜೆಪಿ ನಾಯಕರು ಜೊತೆಯಾಗಿ ಬಿದ್ದರು. ಕಟ್ಟಕಡೆಗೆ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದರು. ರಾಜಕೀಯವಾಗಿ ಸಂಪೂರ್ಣ ಮೂಲೆಗುಂಪಾಗಬೇಕಾಯಿತು. ಅಂದು ಕಾಂಗ್ರೆಸ್ ನಾಯಕರು ಅಂತುಳೆಯ ಬೆನ್ನಿಗೆ ನಿಂತಿದ್ದರೆ, ಕರ್ಕರೆಯ ಹತ್ಯೆಯ ಹಿಂದಿದ್ದ ಭಯೋತ್ಪಾದಕರ ‘ಬಣ್ಣ’ ಬಹಿರಂಗವಾಗುತ್ತಿತ್ತು. ಈ ಹಿನ್ನೆಲೆಯಲ್ಲಿ, ಉಜ್ವಲ್ ನಿಕಮ್ರನ್ನು ಟೀಕಿಸುವ ಮೊದಲು, ಕಾಂಗ್ರೆಸ್ ಮುಖಂಡರು, ಕರ್ಕರೆ ಹತ್ಯೆ ಆರೋಪಿಗಳ ರಕ್ಷಣೆಯಲ್ಲಿ ತಮ್ಮ ಪಾತ್ರವೆಷ್ಟು ಎನ್ನುವುದನ್ನು ಆತ್ಮವಿಮರ್ಶೆಗೆ ಒಡ್ಡಿಕೊಳ್ಳಬೇಕು.