ಅಪಾಯದಲ್ಲಿ ಉನ್ನತ ಶಿಕ್ಷಣ

ಸಾಂದರ್ಭಿಕ ಚಿತ್ರ PC: freepik
ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ
ವಿಶ್ವವಿದ್ಯಾನಿಲಯ ಅನುದಾನ ಆಯೋಗ (ಯುಜಿಸಿ)ವು ಕಾಲೇಜು ಮತ್ತು ವಿಶ್ವವಿದ್ಯಾನಿಲಯಗಳಿಗೆ ನೇಮಕಾತಿ, ಕನಿಷ್ಠ ಅರ್ಹತೆ ಮತ್ತು ಭಡ್ತಿ ಕುರಿತ ಕರಡು ಮಾರ್ಗಸೂತ್ರಗಳು ಮತ್ತು ಕರಡು ನಿಯಮಾವಳಿ, 2025ನ್ನು ರೂಪಿಸಿದೆ. ಈ ಕರಡು ನಿಯಮಾವಳಿಗಳು ತುರ್ತಾಗಿ ಜಾರಿಗೊಳ್ಳಬೇಕಾದವುಗಳು ಎಂಬಂತೆ ಬಿಂಬಿಸಿ, ತಕ್ಷಣ ಅನುಮೋದಿಸುವಂತೆ ಅದು ರಾಜ್ಯಗಳ ಮೇಲೆ ಒತ್ತಡ ಹೇರುತ್ತಿದೆ. ಕರಡು ನಿಯಮಾವಳಿಗಳು ಬೇಗ ಅಂಗೀಕಾರಗೊಳ್ಳುವಂತೆ ಮಾಡಲು ಅದು ಅಂತಿಮ ಗಡುವನ್ನು ನಿಗದಿಪಡಿಸಿದೆ ಮತ್ತು ಚರ್ಚೆಗಳಿಗೆ ಅಲ್ಪ ಸಮಯಾವಕಾಶವನ್ನಷ್ಟೇ ಒದಗಿಸಿದೆ.ಯಾವುದೇ ನೀತಿಯನ್ನು ಜಾರಿಗೆ ತರಲು ಅವಸರಿಸುವುದೆಂದರೆ ಅದು ಹೇರಿಕೆಯೇ ಆಗಿದೆ. ಗುಪ್ತ ಕಾರ್ಯಸೂಚಿಗಳಿದ್ದಾಗ ಮಾತ್ರ ಆ ನೀತಿಯನ್ನು ಅವಸರವಸರವಾಗಿ ಜಾರಿಗೊಳಿಸಲು ಯತ್ನಿಸಲಾಗುತ್ತದೆ. ಹಾಗಾಗಿ, ಸಾರ್ವಜನಿಕರ ಹಣದಿಂದ ನಡೆಯುತ್ತಿರುವ ಶಿಕ್ಷಣ ವ್ಯವಸ್ಥೆ, ಶೈಕ್ಷಣಿಕ ಸ್ವಾಯತ್ತೆ ಮತ್ತು ಸಿಬ್ಬಂದಿ ಕಲ್ಯಾಣದ ಮೇಲೆ ಈ ಮಾರ್ಗಸೂತ್ರಗಳು ಬೀರುವ ಪರಿಣಾಮ ಮತ್ತು ಅವುಗಳ ಒಟ್ಟಾರೆ ಸೈದ್ಧಾಂತಿಕ ಅಗತ್ಯವನ್ನು ವಿಮರ್ಶಾತ್ಮಕವಾಗಿ ಪರಿಶೀಲಿಸುವುದು ಅಗತ್ಯವಾಗಿದೆ.
ನೂತನ ಶಿಕ್ಷಣ ನೀತಿ (ಎನ್ಇಪಿ) 2020 ನಾಲ್ಕು ವರ್ಷಗಳ ಪದವಿಯನ್ನು ಜಾರಿಗೆ ತಂದಿದೆ. ಇದರ ಮೊದಲ ಬ್ಯಾಚ್ನ ವಿದ್ಯಾರ್ಥಿಗಳು 2026ರಲ್ಲಷ್ಟೇ ಪದವಿ ಪಡೆಯಲಿದ್ದಾರೆ. ಈ ಪದವಿಯ ಅನುಷ್ಠಾನಕ್ಕೆ ಸಂಬಂಧಿಸಿದ ವಿಷಯಗಳು ಮತ್ತು ವಿದ್ಯಾರ್ಥಿಗಳ ಕಲಿಕಾ ಫಲಿತಾಂಶವನ್ನು ಗಣನೆಗೆ ತೆಗೆದುಕೊಳ್ಳದೆ, ಉನ್ನತ ಶಿಕ್ಷಣ ಮತ್ತು ಸಂಶೋಧನಾ ನಿಯಮಾವಳಿಗಳನ್ನು ರೂಪಿಸಿರುವುದು ಶೈಕ್ಷಣಿಕವಾಗಿ ಅನುಚಿತವಾಗಿದೆ. ಇದು ಈ ವ್ಯವಸ್ಥೆಯ ಇಬ್ಬರು ಮಹತ್ವದ ಭಾಗೀದಾರರಾಗಿರುವ ಶಿಕ್ಷಕರು ಮತ್ತು ವಿದ್ಯಾರ್ಥಿಗಳ ಕಳವಳಗಳಿಗೂ ಕಾರಣವಾಗಿದೆ. ಈ ಕರಡು ನಿಯಮಾವಳಿಗಳ ಜೊತೆಗೆ ಹಿಂದಿನಂತೆ ಯುಜಿಸಿ ವೇತನ ಪರಿಷ್ಕರಣೆ ಪ್ರಕ್ರಿಯೆ ಪ್ರಸ್ತಾವ ಯಾಕಿಲ್ಲ ಎಂದು ಶಿಕ್ಷಕರು ಕೇಳುತ್ತಿದ್ದಾರೆ. ಪ್ರಧಾನವಾಗಿ, ಈ ನಿಯಮಾವಳಿಗಳ ಹಿಂದಿರುವುದು ರಾಜ್ಯಗಳ ಚುನಾಯಿತ ಸರಕಾರಗಳ ಹಕ್ಕುಗಳು ಮತ್ತು ಅಧಿಕಾರಗಳನ್ನು ಕೇಂದ್ರ ಸರಕಾರದ ನಿಯಂತ್ರಣಕ್ಕೆ ಒಳಪಟ್ಟ ರಾಜ್ಯಪಾಲರಿಗೆ ವಹಿಸುವ ಯೋಜಿತ ಪ್ರಯತ್ನ. ಉಪಕುಲಪತಿಗಳ ಶೋಧ ಸಮಿತಿಯಲ್ಲಿ ಯುಜಿಸಿ ಪ್ರತಿನಿಧಿಯೊಬ್ಬರನ್ನು ಸೇರಿಸುವುದು ಅಧಿಕಾರ ಕೇಂದ್ರೀಕರಣದ ಕ್ರಮವಾಗಿದೆ. ಇದು ಶೈಕ್ಷಣಿಕ ಸ್ವಾಯತ್ತೆಯಲ್ಲಿ ಹಸ್ತಕ್ಷೇಪ ಮಾಡುವ ಮತ್ತು ಅದನ್ನು ದುರ್ಬಲಗೊಳಿಸುವ ಕ್ರಮವಾಗಿದೆ. ಅದೂ ಅಲ್ಲದೆ, ಈ ಮಾರ್ಗಸೂತ್ರಗಳು ಕುಲಪತಿಗಳೂ ಆಗಿರುವ ರಾಜ್ಯಪಾಲರು ಉಪಕುಲಪತಿಗಳ ನೇಮಕಾತಿಯಲ್ಲಿ ನಿರ್ಣಾಯಕ ಪಾತ್ರ ವಹಿಸುವ ಅಧಿಕಾರವನ್ನು ನೀಡುತ್ತವೆ. ರಾಜ್ಯ ಸರಕಾರಗಳು ಮತ್ತು ಶೋಧ ಸಮಿತಿಗಳ ಅಧಿಕಾರವನ್ನು ತಳ್ಳಿಹಾಕಿ ತನಗೆ ಬೇಕಾದವರನ್ನು ನೇಮಿಸಬಹುದಾದ ಹಕ್ಕನ್ನು ರಾಜ್ಯಪಾಲರಿಗೆ ನೀಡುತ್ತದೆ. ಇದನ್ನು ಪ್ರತಿಪಕ್ಷಗಳ ಆಡಳಿತದ ದಕ್ಷಿಣದ ರಾಜ್ಯಗಳು ವ್ಯಾಪಕವಾಗಿ ವಿರೋಧಿಸಿವೆ. ಈ ನಿಯಮಾವಳಿಗಳು, ವಿಶ್ವವಿದ್ಯಾನಿಲಯ ಆಡಳಿತವನ್ನು ನಿಯಂತ್ರಣಕ್ಕೆ ತೆಗೆದುಕೊಂಡು ಸೈದ್ದ್ಧಾಂತಿಕ ಪ್ರಾಬಲ್ಯವನ್ನು ವಿಶ್ವವಿದ್ಯಾನಿಲಯಗಳ ಮೇಲೆ ಹೇರಲು ಬಿಜೆಪಿ ನೇತೃತ್ವದ ಕೇಂದ್ರ ಸರಕಾರ ಮಾಡುತ್ತಿರುವ ಸ್ಪಷ್ಟ ಪ್ರಯತ್ನವಾಗಿದೆ ಎಂಬುದಾಗಿ ಈ ರಾಜ್ಯಗಳು ಭಾವಿಸಿವೆ. ಅದೂ ಅಲ್ಲದೆ, ಈ ಕರಡು ನಿಯಮಾವಳಿಗಳಲ್ಲಿ ಪ್ರಸ್ತಾಪಿಸಲಾಗಿರುವ ಅಧಿಕಾರ ಕೇಂದ್ರೀಕರಣದ ಬಗ್ಗೆ ಎನ್ಡಿಎ ಮಿತ್ರಪಕ್ಷಗಳೂ ಕಳವಳ ವ್ಯಕ್ತಪಡಿಸಿವೆ.
ಪ್ರಸಕ್ತ ಮಾರ್ಗಸೂತ್ರಗಳು ಬೋಧಕ ಸಿಬ್ಬಂದಿಯ ಕೆಲಸದ ಪರಿಸ್ಥಿತಿಯನ್ನು ಇನ್ನಷ್ಟು ಹದಗೆಡಿಸುವ ಮಹತ್ವದ ಬದಲಾವಣೆಗಳನ್ನು ಹೊಂದಿವೆ ಮತ್ತು ಶಿಕ್ಷಣ ತಜ್ಞರನ್ನು ಅನಿಶ್ಚಿತ ಶೋಷಣಾತ್ಮಕ ವ್ಯವಸ್ಥೆಗೆ ದೂಡುತ್ತವೆ. ಖಾಯಂ ಹಾಗೂ ಹಿರಿಯ ಬೋಧಕ ಹುದ್ದೆಗಳು ಕಡಿಮೆ ಇರುವಂತೆ ನೋಡಿಕೊಳ್ಳುತ್ತದೆ ಮತ್ತು ಕಿರಿಯ ಉಪನ್ಯಾಸಕರನ್ನು ಗುತ್ತಿಗೆ ಉದ್ಯೋಗಕ್ಕೆ ದೂಡುತ್ತದೆ. ವಿಶ್ವವಿದ್ಯಾನಿಲಯ ಕ್ಯಾಂಪಸ್ನಲ್ಲಿ ಕಡ್ಡಾಯವಾಗಿ ಎಂಟು ಗಂಟೆಗಳ ಕಾಲ ಇರಬೇಕೆನ್ನುವ ನೀತಿಯು ಬೋಧಕ ಸಿಬ್ಬಂದಿಯನ್ನು ಕಾರ್ಖಾನೆ ನೌಕರರಂತೆ ಪರಿಗಣಿಸುತ್ತದೆ. ಈ ಮೂಲಕ ಅದು ಸಂಶೋಧನೆ, ಮಾರ್ಗದರ್ಶನ ಮತ್ತು ಬೌದ್ಧಿಕ ಶ್ರಮ ಮುಂತಾದ ವಾಸ್ತವಗಳನ್ನು ಕಡೆಗಣಿಸುತ್ತದೆ. ಎಲ್ಲಕ್ಕಿಂತಲೂ ಹೆಚ್ಚಾಗಿ, ಈಗ ಶೈಕ್ಷಣಿಕ ಬೆಳವಣಿಗೆಗೆ ಅಗತ್ಯವಾದ ಅಧ್ಯಯನ ರಜೆಯನ್ನು ಅಸಿಸ್ಟೆಂಟ್ ಪ್ರೊಫೆಸರ್ಗಳಿಗೆ ಮಾತ್ರ ಸೀಮಿತಗೊಳಿಸಲಾಗಿದೆ. ಉಪನ್ಯಾಸ ವೃತ್ತಿ ನಡೆಸುತ್ತಿರುವವರಿಗೆ ಸಂಶೋಧನೆ ನಡೆಸುವ ಅವಕಾಶಗಳನ್ನು ನಿರಾಕರಿಸಲಾಗಿದೆ.
ನೂತನ ಮಾರ್ಗಸೂತ್ರಗಳ 3.2 ವಿಧಿಯಲ್ಲಿ, ನಿರ್ದಿಷ್ಟ ವಿಷಯದಲ್ಲಿ ಓರ್ವ ಬೋಧಕ ಸಿಬ್ಬಂದಿಗೆ ಬೇಕಾಗಿರುವ ಅರ್ಹತೆಯನ್ನು ತಗ್ಗಿಸಲು ಅವಕಾಶ ನೀಡಲಾಗಿದೆ. ಇಲ್ಲಿ ಆರಂಭಿಕ ಹಂತದ ಬೋಧಕ ಹುದ್ದೆಗಳಿಗೆ ಬೇಕಾಗಿರುವ ಅರ್ಹತೆ ಮಾನದಂಡಗಳನ್ನು ಬದಲಾಯಿಸಲಾಗಿದೆ. ತಮ್ಮ ಹಿಂದಿನ ಶೈಕ್ಷಣಿಕ ಹಂತಗಳಲ್ಲಿ ನಿರ್ದಿಷ್ಟ ವಿಷಯಗಳಲ್ಲಿ ಅಸಿಸ್ಟೆಂಟ್ ಪ್ರೊಫೆಸರ್ ಹುದ್ದೆಗಳಿಗೆ ಬೇಕಾಗುವ ಅರ್ಹತೆಯನ್ನು ಹೊಂದಿರದ, ಆದರೆ ಬಳಿಕ ಅದೇ ವಿಷಯಗಳಲ್ಲಿ ಎನ್ಇಟಿ/ಪಿಎಚ್ಡಿ ಪಡೆದಿರುವ ಅಭ್ಯರ್ಥಿಗಳಿಗೆ ಅನುಕೂಲ ಮಾಡಿಕೊಡುವುದಕ್ಕಾಗಿ ಈ ಬದಲಾವಣೆಯನ್ನು ತರಲಾಗಿದೆ. ಅದೂ ಅಲ್ಲದೆ, ಕರಡು ಮಾರ್ಗಸೂಚಿಯ 3.8 ವಿಧಿಯು ಬೋಧಕ ಸಿಬ್ಬಂದಿಯ ಮೌಲ್ಯಮಾಪನವನ್ನು ಕಾರ್ಪೊರೇಟ್ ಮಾದರಿಗೆ ಬದಲಾಯಿಸಿದೆ. ಬೋಧಕ ಸಿಬ್ಬಂದಿಯು ಸಮಾಲೋಚನೆ, ಡಿಜಿಟಲ್ ಕಂಟೆಂಟ್ ಸೃಷ್ಟಿ ಅಥವಾ ಸ್ಟಾರ್ಟ್
ಅಪ್ ಅಭಿವೃದ್ಧಿಯಲ್ಲಿ ತೊಡಗಿಕೊಳ್ಳಬೇಕು ಎನ್ನುವ ನೀತಿಯು ಆದಾಯ ಉತ್ಪತ್ತಿಗೆ ಹೆಚ್ಚಿನ ಗಮನ ನೀಡುತ್ತದೆ. ಇದರಿಂದಾಗಿ ತರಗತಿಗಳಿಗೆ ನೀಡಬೇಕಾಗಿರುವ ಬೋಧಕ ಸಿಬ್ಬಂದಿಯ ಗಮನವು ಬೇರೆಡೆಗೆ ಹರಿಯುತ್ತದೆ. ಈ ಕ್ರಮವು ಮಾನವಿಕ ವಿಷಯಗಳು ಮತ್ತು ಸಾಮಾಜಿಕ ವಿಜ್ಞಾನದ ಸ್ಕಾಲರ್ಗಳಿಗೆ ಮಾರಕವಾಗಿದೆ. ಯಾಕೆಂದರೆ ಅವರ ಸಂಶೋಧನೆಯನ್ನು ಕಾರ್ಪೊರೇಟ್ ಸಂಶೋಧನೆ ಅಥವಾ ತಾಂತ್ರಿಕ ನಾವೀನ್ಯತೆ ಮೂಲಕ ಸುಲಭವಾಗಿ ನಗದೀಕರಿಸಲಾಗುವುದಿಲ್ಲ. ಇದು ಭಾರೀ ಪ್ರಮಾಣದಲ್ಲಿ ಪ್ರೊಫೆಸರ್ಗಳ ಲ್ಯಾಟರಲ್ ಎಂಟ್ರಿ ಅಥವಾ ಹಿಂಬಾಗಿಲ ಪ್ರವೇಶಕ್ಕೆೆ ಅವಕಾಶ ಮಾಡಿಕೊಡುತ್ತದೆ. ಇದರೊಂದಿಗೆ ಉದ್ಯೋಗ ಮೀಸಲಾತಿ ಮೂಲಕ ಖಾತರಿಪಡಿಸಲಾಗುವ ಸಾಮಾಜಿಕ ನ್ಯಾಯಕ್ಕೂ ತಿಲಾಂಜಲಿ ಇಟ್ಟಂತಾಗುತ್ತದೆ.
ಮೊದಲ ಬಾರಿಗೆ, ಶೈಕ್ಷಣಿಕ ಕ್ಷೇತ್ರಕ್ಕೆ ಹೊರತಾದವರು, ಅಂದರೆ ಅಧಿಕಾರಶಾಹಿ, ಕಾರ್ಪೊರೇಟ್ ಉದ್ಯಮ, ಸೇನಾ ಪಡೆಗಳು ಮುಂತಾದ ಕ್ಷೇತ್ರಗಳ ಜನರು ವಿಶ್ವವಿದ್ಯಾನಿಲಯಗಳ ಉಪಕುಲಪತಿಗಳಾಗಬಹುದಾಗಿದೆ. ಮಾರ್ಗಸೂಚಿಯ 10.1 ವಿಧಿ ಇದಕ್ಕೆ ಅವಕಾಶ ನೀಡುತ್ತದೆ.ಯುಜಿಸಿ ಮಾರ್ಗಸೂಚಿಯ ಅತ್ಯಂತ ಅನಾಹುತಕಾರಿ ಅಂಶವೆಂದರೆ, ಅದು ಭಿನ್ನಾಭಿಪ್ರಾಯವನ್ನು ಅಪರಾಧ ಎಂಬುದಾಗಿ ಪರಿಗಣಿಸುತ್ತದೆ ಮತ್ತು ಸೈದ್ಧಾಂತಿಕ ಏಕತೆಯನ್ನು ಜಾರಿಗೊಳಿಸುತ್ತದೆ. ಬೋಧಕ ಸಿಬ್ಬಂದಿಯು ‘ರಾಷ್ಟ್ರೀಯ ಆದರ್ಶಗಳಿಗೆ’ ಬದ್ಧರಾಗಬೇಕು ಮತ್ತು ‘ಸೂಕ್ತ ನಡವಳಿಕೆ’ಯನ್ನು ಹೊಂದಿರಬೇಕು ಎಂಬುದಾಗಿ ಹೊಸದಾಗಿ ಪರಿಚಯಿಸಲಾಗಿರುವ ವೃತ್ತಿಪರ ನೀತಿ ಸಂಹಿತೆ ಹೇಳುತ್ತದೆ. ಆದರೆ, ‘ರಾಷ್ಟ್ರೀಯ ಆದರ್ಶಗಳು’ ಯಾವುದು ಮತ್ತು ‘ಸೂಕ್ತ ನಡವಳಿಕೆ’ ಏನು ಎಂಬುದನ್ನು ನಿರೂಪಿಸಲಾಗಿಲ್ಲ. ಇದು ವಿಮರ್ಶಾತ್ಮಕ ಬೋಧಕರ ಬಾಯಿ ಮುಚ್ಚಿಸುವ ಅಧಿಕಾರಶಾಹಿ ವ್ಯವಸ್ಥೆಯಾಗಿದೆ. ಶೈಕ್ಷಣಿಕ ಉನ್ನತಿಯನ್ನು ಅಳೆಯಲು ‘ಭಾರತೀಯ ಜ್ಞಾನ ವ್ಯವಸ್ಥೆ’ಯೇ ಮಾನದಂಡ ಎಂಬ ಅಂಶವನ್ನು ಇಲ್ಲಿ ಪರೋಕ್ಷವಾಗಿ ಪ್ರತಿಪಾದಿಸಲಾಗಿದೆ. ‘ಭಾರತೀಯ ಜ್ಞಾನ ವ್ಯವಸ್ಥೆ’ಗೆ ಸ್ಪಷ್ಟ ವ್ಯಾಖ್ಯಾನಗಳಿಲ್ಲ. ಅನೇಕ ಸಂದರ್ಭಗಳಲ್ಲಿ ಹಿಂದುತ್ವ ರಾಜಕಾರಣದ ಭಾಗವಾಗಿ ಇದನ್ನು ಬಳಸಲಾಗುತ್ತದೆ. ವಿಶ್ವವಿದ್ಯಾನಿಲಯಗಳನ್ನು ಹಂತ ಹಂತವಾಗಿ ತನ್ನ ಕಂಬಂಧ ಬಾಹುಗಳಲ್ಲಿ ತೆಗೆದುಕೊಳ್ಳುವುದಕ್ಕಾಗಿಯೇ ಈ ಪದವನ್ನು ಬಳಸಲಾಗಿದೆ. ಒಟ್ಟಿನಲ್ಲಿ ನಮ್ಮ ವಿಶ್ವವಿದ್ಯಾನಿಲಯಗಳನ್ನು ಕಾರ್ಪೊರೇಟ್ ಶಕ್ತಿಗಳು ಮತ್ತು ಹಿಂದುತ್ವ ಶಕ್ತಿಗಳು ಜಂಟಿಯಾಗಿ ಆಪೋಷನ ತೆಗೆದುಕೊಳ್ಳುವುದಕ್ಕಾಗಿಯೇ ಯುಜಿಸಿಯ ಹೊಸ ಮಾರ್ಗಸೂತ್ರಗಳನ್ನು ಸಿದ್ಧಪಡಿಸಲಾಗಿದೆ.