ಸರಕಾರದ ನೂರು ದಿನಗಳು: ತಲೆಗಿಂತ ಕಿರೀಟ ಭಾರ
ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ
ರಾಜ್ಯದ ನೂತನ ಕಾಂಗ್ರೆಸ್ ಸರಕಾರ ನೂರು ದಿನಗಳನ್ನು ಪೂರೈಸಿದೆ. ಇದೇ ಸಂದರ್ಭದಲ್ಲಿ ವಿರೋಧ ಪಕ್ಷದ ನಾಯಕನಿಲ್ಲದ ನೂರು ದಿನಗಳಾಗಿಯೂ ಸರಕಾರದ ಈ ಅವಧಿಯನ್ನು ಗುರುತಿಸಲಾಗುತ್ತಿದೆ. ಸರಕಾರ ರಚನೆಯಾಗಿ ನೂರು ದಿನಗಳು ಸಂದರೂ, ವಿರೋಧ ಪಕ್ಷದ ನಾಯಕನನ್ನು ಆಯ್ಕೆ ಮಾಡಲು ವಿಫಲವಾಗಿರುವ ಬಿಜೆಪಿ, ಈ ಮೂಲಕ ಕಾಂಗ್ರೆಸ್ ಸರಕಾರದ ನೂರು ದಿನಗಳ ವಿಮರ್ಶೆಯನ್ನು ಮಾಡುವ ನೈತಿಕತೆಯನ್ನು ಕಳೆದುಕೊಂಡಿದೆ. ವಿಪರ್ಯಾಸವೆಂದರೆ, ವಿರೋಧ ಪಕ್ಷದ ನಾಯಕನ ಆಯ್ಕೆಯಲ್ಲಿ ಮಾತ್ರವಲ್ಲ, ರಾಜ್ಯಾಧ್ಯಕ್ಷನ ಆಯ್ಕೆಯಲ್ಲೂ ಬಿಜೆಪಿ ವಿಫಲವಾಗಿದೆ. ಬಿಜೆಪಿಯನ್ನು ಮುನ್ನಡೆಸಬಲ್ಲ, ಸೋತು ಚದುರಿ ಹೋಗಿರುವ ಪಕ್ಷವನ್ನು ಪುನರ್ ಸಂಘಟಿಸಬಲ್ಲ ನಾಯಕನ ಕೊರತೆ ಬಿಜೆಪಿಯಲ್ಲಿ ಎದ್ದು ಕಾಣುತ್ತಿದೆ. ಇಂತಹ ಸಂದರ್ಭದಲ್ಲಿ ಸರಕಾರದ ಆಡಳಿತ ವೈಖರಿಯ ಕುರಿತಂತೆ ಬಿಜೆಪಿಯ ಟೀಕೆಯನ್ನು ಜನರು ಗಂಭೀರವಾಗಿ ತೆಗೆದುಕೊಳ್ಳುವುದು ಕಷ್ಟ. ಆರೆಸ್ಸೆಸ್ ಮುಖಂಡ ಬಿ.ಎಲ್. ಸಂತೋಷ್ ಅವರಂತೂ ತನ್ನ ಎಲೆಯಲ್ಲಿ ಸತ್ತು ಬಿದ್ದಿರುವ ಕತ್ತೆಯನ್ನು ಎತ್ತಲಾರದೆ, ಆಪರೇಷನ್ ಕಮಲದ ಬಗ್ಗೆ ಹೇಳಿಕೆ ನೀಡುತ್ತಾ ಹಾಸ್ಯಾಸ್ಪದರಾಗುತ್ತಿದ್ದಾರೆ. ಅಂದರೆ ಬಿಜೆಪಿ ಜನರ ನಿರ್ಧಾರಕ್ಕೆ ಇನ್ನೂ ತಲೆಬಾಗಿಲ್ಲ. ಬಿಜೆಪಿಯೊಳಗೆ ಆರೆಸ್ಸೆಸ್ ಮಾಡಿದ ಹಸ್ತಕ್ಷೇಪ ಇಂದು ಆ ಪಕ್ಷಕ್ಕೆ ಅತ್ಯಂತ ದೈನೇಸಿ ಸ್ಥಿತಿಯನ್ನು ತಂದಿಟ್ಟಿದೆ. ಒಂದು ವೇಳೆ ಬಿಜೆಪಿ ಅಲ್ಪಬಹುಮತ ಪಡೆದಿದ್ದರೂ, ಈ ನೂರು ದಿನಗಳ ಕಾಲ ರಾಜ್ಯ ಮುಖ್ಯಮಂತ್ರಿಯಿಲ್ಲದೆ ಅನಾಥವಾಗಿ ಬಿಡುವ ಸಾಧ್ಯತೆಯಿತ್ತು.
ತಲೆಗಿಂತ ಮುಂಡಾಸು ಭಾರ ಎನ್ನುವಂತೆ, ಗ್ಯಾರಂಟಿಯ ಕಿರೀಟದ ಜೊತೆಗೆ ಸಂಭಾಳಿಸಿ ಮುನ್ನಡೆಯುತ್ತಿರುವುದೇ ಕಾಂಗ್ರೆಸ್ ಪಕ್ಷದ ಸದ್ಯದ ಸಾಧನೆ. ಉಚಿತ ಅಕ್ಕಿ, ಉಚಿತ ಬಸ್ ಪ್ರಯಾಣ, ಉಚಿತ ವಿದ್ಯುತ್‌ನ ಬೇಲಿಗಳನ್ನು ಹಾರಿ ತನ್ನ ಕಿರೀಟ ಕೆಳಗುರುಳದಂತೆ ನೋಡಿಕೊಳ್ಳುವಲ್ಲಿ ಯಶಸ್ವಿಯಾಗಿರುವ ನೂತನ ಸರಕಾರ ಇದೀಗ ಗೃಹ ಲಕ್ಷ್ಮಿ ಯೋಜನೆಯನ್ನು ಕೂಡ ಜಾರಿಗೊಳಿಸಿದೆ. ಉಚಿತ ಬಸ್ ಪ್ರಯಾಣ ಸಾರಿಗೆ ವ್ಯವಸ್ಥೆಯನ್ನು ಅಸ್ತವ್ಯಸ್ತಗೊಳಿಸುತ್ತದೆ ಎಂದು ಬಿಜೆಪಿ ಕಾದು ಕುಳಿತಿತ್ತು. ಆದರೆ ಬಿಜೆಪಿಯ ಎಲ್ಲ ನಿರೀಕ್ಷೆಗಳನ್ನು ಮೀರಿ ಅದು ಯಶಸ್ವಿಯಾಯಿತು. ಉಚಿತ ಅಕ್ಕಿ ವಿತರಣೆಗೆ ಕೇಂದ್ರ ಸರಕಾರ ಅಡ್ಡಗಾಲು ಹಾಕಲು ಪ್ರಯತ್ನಿಸಿತು. ಆದರೆ ಅದನ್ನೇ ಕಾಂಗ್ರೆಸ್ ತನಗೆ ಪೂರಕವಾಗಿ ಬಳಸಿಕೊಂಡಿತು. ಬಡವರಿಗೆ ಅಕ್ಕಿ ಕೊಡಲು ಕೇಂದ್ರ ಸರಕಾರ ಅಡ್ಡಿ ಮಾಡುತ್ತಿದೆ ಎಂದು ಜನರ ಮುಂದೆ ಹೋಯಿತು. ಕೇಂದ್ರ ಸರಕಾರವನ್ನು ಕಟಕಟೆಯಲ್ಲಿ ನಿಲ್ಲಿಸಿ ರಾಜ್ಯದ ಬಿಜೆಪಿ ನಾಯಕರಿಗೆ ಇರಿಸುಮುರಿಸು ಉಂಟುಮಾಡಿತು. ಗೃಹಜ್ಯೋತಿಯ ಪ್ರಯೋಜನವೂ ಜನರಿಗೆ ತಲುಪಿದೆ. ‘ಇದೆಲ್ಲ ಸಾಧ್ಯವೆ?’ ಎನ್ನುವ ಅಚ್ಚರಿಯಲ್ಲಿದ್ದಾರೆ ಜನರು. ‘ಉಚಿತ ವಿತರಣೆ’ಯ ಕುರಿತಂತೆ ಮೋದಿ ನೇತೃತ್ವದ ಸರಕಾರ ಈ ವರೆಗೆ ಮಾಡಿರುವ ಪ್ರತಿಪಾದನೆಯನ್ನು ನೂತನ ಸರಕಾರ ಸುಳ್ಳು ಮಾಡಿ ತೋರಿಸಿದೆ. ಈ ಗ್ಯಾರಂಟಿಗಳ ಭವಿಷ್ಯ ಏನೇ ಇರಲಿ, ಸದ್ಯಕ್ಕಂತೂ ರಾಜ್ಯ ಸರಕಾರ ಈ ಯೋಜನೆಗಳ ಮೂಲಕ ಜನಮನವನ್ನು ತಲುಪಿದೆ. ನೂರು ದಿನಗಳ ಆಧಾರದಲ್ಲಿ ಸರಕಾರದ ಸಾಧನೆಗಳನ್ನು ಗುರುತಿಸುವ ಸ್ಥಿತಿ ಇಲ್ಲ. ಆದರೆ ಭವಿಷ್ಯದಲ್ಲಿ ನೂತನ ಸರಕಾರ ಅತ್ಯಂತ ಕಠಿಣ ಸವಾಲುಗಳನ್ನು ಎದುರಿಸಬೇಕಾಗಿದೆ ಎನ್ನುವ ಅಂಶವನ್ನು ಈ ನೂರು ದಿನಗಳು ಸ್ಪಷ್ಟ ಪಡಿಸಿದೆ.
ಬಿಜೆಪಿ ತನ್ನ ಅಧಿಕಾರಾವಧಿಯಲ್ಲಿ ಕುಖ್ಯಾತಿಯನ್ನು ಪಡೆದಿರುವುದು ‘ಶೇ. 40 ಕಮಿಶನ್’ಗಾಗಿ. ಗುತ್ತಿಗೆದಾರನೊಬ್ಬ ಅಂದಿನ ಸಚಿವ ಈಶ್ವರಪ್ಪ ಅವರ ಹೆಸರು ಬರೆದಿಟ್ಟು ಆತ್ಮಹತ್ಯೆ ಮಾಡುವ ಮೂಲಕ ರಾಜ್ಯದ ಭ್ರಷ್ಟಾಚಾರ ರಾಷ್ಟ್ರಮಟ್ಟವನ್ನು ತಲುಪಿತು. ಈ ಭ್ರಷ್ಟಾಚಾರದಲ್ಲಿ ಪ್ರಧಾನಿಯ ಹೆಸರೂ ಕೇಳಿ ಬಂತು. ಗುತ್ತಿಗೆದಾರರು ಸರಕಾರದ ವಿರುದ್ಧ ಬಹಿರಂಗ ಪತ್ರಿಕಾಗೋಷ್ಠಿಗಳನ್ನು ನಡೆಸಿದರು. ಇದೀಗ ಬಿಜೆಪಿಯ ನಾಯಕರು ಅದೇ ಗುತ್ತಿಗೆದಾರರನ್ನು ನೂತನ ಸರಕಾರದ ವಿರುದ್ಧ ಬಳಸಿಕೊಳ್ಳಲು ಯತ್ನಿಸುತ್ತಿದ್ದಾರೆ. ಗ್ಯಾರಂಟಿ ಕಾರಣಗಳಿಂದ ಎದುರಾಗಿರುವ ಆರ್ಥಿಕ ಕೊರತೆಗಳನ್ನು ಸರಕಾರ ಹೇಗೆ ನಿಭಾಯಿಸುತ್ತದೆ ಎನ್ನುವ ಆಧಾರದ ಮೇಲೆ ಮುಂದಿನ ದಿನಗಳು ನಿಂತಿವೆ. ಕೋಮುವಾದಿ ಸಂಘಟನೆಗಳು ಬೀದಿಗಿಳಿದು ದಾಂಧಲೆಗಳನ್ನು ನಡೆಸಲು ಸಿದ್ಧತೆಗಳನ್ನು ನಡೆಸುತ್ತಿವೆ. ಇವನ್ನು ಪರಿಣಾಮಕಾರಿಯಾಗಿ ಎದುರಿಸಲು ಗೃಹ ಇಲಾಖೆಗಳನ್ನು ಸಜ್ಜುಗೊಳಿಸುವುದು ಸರಕಾರದ ಮುಂದಿರುವ ಸವಾಲಾಗಿದೆ. ಮೃದು ಹಿಂದುತ್ವವಾದಿಗಳ ಜೊತೆಗೆ ಸ್ನೇಹ ಸಂಬಂಧವನ್ನು ಹೊಂದಿರುವ ಪರಮೇಶ್ವರ್ ಅವರು ಗೃಹ ಇಲಾಖೆಯನ್ನು ನಿಷ್ಠುರವಾಗಿ ನಿಭಾಯಿಸಬಲ್ಲರೆ ಎನ್ನುವ ಪ್ರಶ್ನೆ ಈಗಾಗಲೇ ಚರ್ಚೆಯಲ್ಲಿದೆ. ನೂರು ದಿನಗಳ ನಡೆಯ ಆಧಾರದಲ್ಲಿ ಸರಕಾರದ ಕುರಿತಂತೆ ನಿರ್ಧಾರಕ್ಕೆ ಬರುವುದು ಅವಸರದ ಮಾತಾಗುತ್ತದೆ. ಆದರೆ ಭವಿಷ್ಯದಲ್ಲಿ ಬಿಜೆಪಿಯ ಚುಕ್ಕಾಣಿ ಆರೆಸ್ಸೆಸ್‌ನೊಳಗಿರುವ ಮುಖಂಡರು ಕೈಗೆತ್ತಿಕೊಂಡಲ್ಲಿ, ಅಮಿತ್ ಶಾ ಅವರು ಕಳೆದ ಚುನಾವಣೆಯಲ್ಲಿ ಜನರಿಗೆ ನೀಡಿದ ಭರವಸೆಯಂತೆ, ರಾಜ್ಯದಲ್ಲಿ ಗಲಭೆಗಳು ನಡೆಯುವ ಸಾಧ್ಯತೆಗಳಿವೆ. ಆದುದರಿಂದ ಕೋಮುಸೂಕ್ಷ್ಮ ಪ್ರದೇಶದಲ್ಲಿ ಯೋಗ್ಯ ಕಾನೂನು ಪಾಲಕರನ್ನು ನೇಮಿಸಲು ಸರಕಾರ ಕಠಿಣ ಕ್ರಮ ತೆಗೆದುಕೊಳ್ಳಬೇಕಾಗಿದೆ.
ಕಾವೇರಿ ವಿವಾದ ಮತ್ತೆ ಭುಗಿಲೆದ್ದಿದೆ. ಕಾವೇರಿ ವಿವಾದದ ಕಾವಿಗೆ ಎಲ್ಲ ಸರಕಾರಗಳೂ ಕಾಲಕಾಲಕ್ಕೆ ಬಲಿಪಶುಗಳಾಗಿವೆ. ಆದುದರಿಂದ, ಕಾಂಗ್ರೆಸ್‌ನ ನೂರು ದಿನಗಳ ಹೆಜ್ಜೆಗಳ ಪ್ರಮಾದಗಳಲ್ಲಿ ಇದನ್ನು ಸೇರಿಸುವಂತಿಲ್ಲ. ಆದರೆ ಸದ್ಯದಲ್ಲಿ ರಾಜ್ಯ ತೀವ್ರ ಮಳೆಯ ಕೊರತೆಯನ್ನು ಎದುರಿಸುತ್ತಿದೆ. ಕಾವೇರಿ ವಿವಾದ ನೂತನ ಸರಕಾರದ ಕುತ್ತಿಗೆಯನ್ನು ಇನ್ನಷ್ಟು ಬಿಗಿಯಾಗಿ ಸುತ್ತಿಕೊಳ್ಳುವುದಕ್ಕೆ ಇದು ಸಾಕು. ಭವಿಷ್ಯದಲ್ಲಿ ಎದುರಾಗುವ ಕುಡಿಯುವ ನೀರಿನ ಕೊರತೆಯನ್ನು ಎದುರಿಸಲು ಮತ್ತು ಅದು ಸೃಷ್ಟಿಸಬಹುದಾದ ಇದರ ಅರಾಜಕತೆಗಳನ್ನು ತಡೆಯಲು ಸರಕಾರ ಈಗಲೇ ಸಿದ್ಧತೆ ನಡೆಸಬೇಕಾಗಿದೆ. ಸಿದ್ದರಾಮಯ್ಯ ಅವರು ಇಡುತ್ತಿರುವ ಹೆಜ್ಜೆಗಳ ಬಗ್ಗೆ ಶ್ಲಾಘನೆಗಳು ವ್ಯಕ್ತವಾಗುತ್ತಿರುವಂತೆಯೇ, ಇತರ ಕೆಲವು ಸಚಿವರ ಕುರಿತಂತೆ ಟೀಕೆಗಳೂ ಎದ್ದಿವೆ. ಭ್ರಷ್ಟಾಚಾರ ನೂತನ ಸರಕಾರವನ್ನೂ ಸುತ್ತಿಕೊಂಡಿದೆ ಎನ್ನುವ ಆರೋಪಗಳು ಕೇಳಿ ಬರುತ್ತಿವೆ. ಕೆಲವು ಗುತ್ತಿಗೆದಾರರು ಕೂಡ ಸಣ್ಣಗೆ ತಮ್ಮ ಆತಂಕ, ಆಕ್ರೋಶವನ್ನು ವ್ಯಕ್ತಪಡಿಸಲು ಶುರು ಹಚ್ಚಿದ್ದಾರೆ. ‘ಬಿಜೆಪಿ ವಿರೋಧ ಪಕ್ಷ ನಾಯಕನನ್ನು ಆಯ್ಕೆ ಮಾಡದೇ ಇರುವುದೇ’ ಕಾಂಗ್ರೆಸ್ ಪಕ್ಷದ ನೂರು ದಿನಗಳ ಸಾಧನೆ ಎಂದು ಬಿಂಬಿಸಲು ಕಾಂಗ್ರೆಸ್ ನಾಯಕರು ಹೊರಟಿದ್ದಾರೆಯೇ ಎಂದೂ ಸಾರ್ವಜನಿಕರು ಕೇಳುವಂತಾಗಿದೆ. ಇದು ಹೀಗೆಯೇ ಮುಂದುವರಿದರೆ ನೂತನ ಸರಕಾರದ ಸದ್ಯದ ಕಮಿಶನ್ ದಂಧೆ ಬಿಜೆಪಿ ಕಾಲದ ಶೇ. ೪೦ನ್ನೂ ದಾಟುವುದಕ್ಕೆ ಹೆಚ್ಚು ಸಮಯ ಬೇಡ.
ನೂರು ದಿನಗಳ ಸರಕಾರದ ಸಾಧನೆಗಳ ಬಗ್ಗೆ ಟೀಕೆ ಮಾಡುವುದಕ್ಕೆ ಮೊದಲು ಬಿಜೆಪಿ ವಿರೋಧ ಪಕ್ಷದ ನಾಯಕನನ್ನು ಮತ್ತು ರಾಜ್ಯಾಧ್ಯಕ್ಷನನ್ನು ಆಯ್ಕೆ ಮಾಡಿಕೊಳ್ಳಬೇಕಾಗಿದೆ.
ದುರ್ಬಲ ವಿರೋಧ ಪಕ್ಷ, ಆಳುವ ಸರಕಾರ ಭ್ರಷ್ಟವಾಗುವುದಕ್ಕೆ ಕಾರಣವಾಗಿಬಿಡುತ್ತದೆ. ಆದುದರಿಂದ, ಸರಕಾರ ದಾರಿ ತಪ್ಪಿದರೆ ಅದರಲ್ಲಿ ವಿರೋಧಪಕ್ಷದ ಪಾಲೂ ಇದೆ ಎನ್ನುವುದನ್ನು ಮರೆಯಬಾರದು. ‘ಆಪರೇಷನ್ ಕಮಲ’ ಕುರಿತ ಲಜ್ಜೆಗೇಡಿ ಹೇಳಿಕೆಗಳನ್ನು ಇನ್ನಾದರೂ ನಿಲ್ಲಿಸಿ, ಬಿಜೆಪಿ ನಾಯಕರು ಸರಕಾರದ ತಪ್ಪು ಒಪ್ಪುಗಳನ್ನು ಗುರುತಿಸಿ ಅದನ್ನು ಸರಿಪಡಿಸುವುದಕ್ಕೆ ಬೇಕಾದ ಆಪರೇಷನ್‌ಗಳನ್ನು ಮಾಡಲು ಮುಂದಾಗಬೇಕು. ಸದ್ಯಕ್ಕೆ ನೂರು ದಿನಗಳಲ್ಲಿ ಕಾಂಗ್ರೆಸ್ ಸರಕಾರ ಅಲ್ಲಲ್ಲಿ ಎಡವಿಯೂ ಮೂಗನ್ನು ಮಣ್ಣಾಗದಂತೆ ನೋಡಿಕೊಂಡಿದೆ ಎಂದರೆ ಅದಕ್ಕೆ ಕಾರಣ ರಾಜ್ಯದಲ್ಲಿ ವಿರೋಧಪಕ್ಷಗಳ ದೀನ ಅವಸ್ಥೆ. ನಾಡಿನ ಜನರು ಸ್ಪಷ್ಟವಾಗಿ ಬಿಜೆಪಿಯನ್ನು ತಿರಸ್ಕರಿಸಿ ಕಾಂಗ್ರೆಸ್‌ನ್ನು ಭರ್ಜರಿ ಬಹುಮತದೊಂದಿಗೆ ಆರಿಸಿದ್ದಾರೆ. ಅದನ್ನು ಗೌರವಿಸುವುದು ಬಿಜೆಪಿಯ ಮೊದಲ ಕರ್ತವ್ಯವಾಗಿದೆ. ಸರಕಾರದ ತಟ್ಟೆಯಲ್ಲಿರುವ ನೊಣದ ಕಡೆಗೆ ಕೈ ತೋರಿಸುವ ಹಕ್ಕನ್ನು ಸಂಪಾದಿಸಿಕೊಳ್ಳುವ ನಿಟ್ಟಿನಲ್ಲಿ ಬಿಜೆಪಿಯು ತನ್ನ ಎಲೆಯಲ್ಲಿ ಬಿದ್ದಿರುವ ಕತ್ತೆಯನ್ನು ಎತ್ತಿ ಹೊರಗೆ ಎಸೆಯುವುದು ಅತ್ಯಗತ್ಯವಾಗಿದೆ.