ಕರ್ಪೂರಿ ಠಾಕೂರ್ಗೆ ಭಾರತ ರತ್ನ ಅರ್ಥಪೂರ್ಣವಾಗಬೇಕಾದರೆ...
Photo : x/@narendramodi
ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ
ಈ ಬಾರಿಯೂ ಕರ್ನಾಟಕದ ಸಿದ್ಧಗಂಗಾ ಸ್ವಾಮೀಜಿಗಳು ಮರಣೋತ್ತರ ಭಾರತ ರತ್ನ ಗೌರವದಿಂದ ವಂಚಿತರಾದರು. ಕರ್ನಾಟಕ ಸರಕಾರ ಪ್ರತೀ ವರ್ಷ ಶಿಫಾರಸು ಮಾಡುತ್ತಲೇ ಬರುತ್ತಿದೆಯಾದರೂ, ಕೇಂದ್ರ ಸರಕಾರ ಅವುಗಳನ್ನು ನಿರ್ಲಕ್ಷಿಸುತ್ತಲೇ ಬರುತ್ತಿದೆ. ಇದೇ ಸಂದರ್ಭದಲ್ಲಿ, ಈ ಬಾರಿ ಹಿಂದುಳಿದ ವರ್ಗಗಳಿಗಾಗಿ ಬದುಕನ್ನು ಕರ್ಪೂರದಂತೆ ತೇದ ಕರ್ಪೂರಿ ಠಾಕೂರರಿಗೆ ಮರಣೋತ್ತರ ಭಾರತರತ್ನ ಪ್ರಶಸ್ತಿ ಸಂದಿರುವುದು ಸಮಾಧಾನ ತರುವ ವಿಷಯವಾಗಿದೆ. ಬ್ರಿಟಿಷರ ವಿರುದ್ಧ ಕ್ವಿಟ್ ಇಂಡಿಯಾ ಚಳವಳಿಯಲ್ಲಿ ಭಾಗವಹಿಸಿದ್ದ ಕರ್ಪೂರಿ ಅವರು ಸ್ವಾತಂತ್ರ್ಯೋತ್ತರ ಭಾರತದಲ್ಲಿ ತಮ್ಮ ರಾಜಕೀಯ ಬದುಕಿನುದ್ದಕ್ಕೂ ದುರ್ಬಲರ ಏಳಿಗೆಗಾಗಿ ಶ್ರಮಿಸಿದವರು. 1977ರಲ್ಲಿ ಬಿಹಾರದ ಮುಖ್ಯಮಂತ್ರಿಯಾಗಿ ಹಿಂದುಳಿದ ವರ್ಗ ಮತ್ತು ಅತಿ ಹಿಂದುಳಿದ ವರ್ಗಗಳಿಗಾಗಿ ಮೀಸಲಾತಿಯನ್ನು ಜಾರಿಗೊಳಿಸಿ ಅಂದಿನ ಜನಸಂಘದ ತೀವ್ರ ವಿರೋಧವನ್ನು ಕಟ್ಟಿಕೊಂಡರು. ಆ ವಿರೋಧ ಅಂತಿಮವಾಗಿ ಸರಕಾರದ ಪತನಕ್ಕೆ ಕಾರಣವಾಯಿತು. ಇದೀಗ ಹಿಂದುಳಿದ ವರ್ಗಗಳಿಗಾಗಿ ಕರ್ಪೂರಿಯವರು ನೀಡಿದ ಕೊಡುಗೆಯನ್ನೇ ಗಮನದಲ್ಲಿಟ್ಟುಕೊಂಡು ಅವರನ್ನು ಭಾರತ ರತ್ನ ಗೌರವಕ್ಕೆ ಆಯ್ಕೆ ಮಾಡಲಾಗಿದೆ. ಈ ಮೂಲಕ ಬಿಹಾರದ ಹಿಂದುಳಿದ ವರ್ಗದ ನಾಯಕರನ್ನು ತನ್ನೆಡೆಗೆ ಸೆಳೆಯುವ ಪರೋಕ್ಷ ರಾಜಕೀಯ ಉದ್ದೇಶ ಕೇಂದ್ರ ಸರಕಾರಕ್ಕಿದೆ ಎಂದು ಕೆಲವರು ವಿಶ್ಲೇಷಿಸುತ್ತಿದ್ದಾರೆ.
ಸಮಾಜವಾದಿ ನಾಯಕನೆಂದು ಗುರುತಿಸಲ್ಪಟ್ಟ ಕರ್ಪೂರಿ ಠಾಕೂರ್ ತುರ್ತು ಪರಿಸ್ಥಿತಿಯ ಹೋರಾಟಗಳ ಬಳಿಕ ಬಿಹಾರದಲ್ಲಿ ಜನಸಂಘದ ಬೆಂಬಲದೊಂದಿಗೆ ಎರಡನೇ ಬಾರಿ ಮುಖ್ಯಮಂತ್ರಿಯಾದಾಗ ಹಿಂದುಳಿದ ವರ್ಗ ಮತ್ತು ಅತಿ ಹಿಂದುಳಿದ ವರ್ಗಗಳಿಗೆ ಶೇ. 26 ಮೀಸಲಾತಿಯನ್ನು ಜಾರಿಗೆ ತಂದರು. ಶೇ. 12 ಹಿಂದುಳಿದ ವರ್ಗ, ಶೇ. 8ರಷ್ಟು ಕಡು ಹಿಂದುಳಿದ ವರ್ಗಗಳಿಗೆ ಅವರು ಮೀಸಲಾತಿಯನ್ನು ಕಲ್ಪಿಸಲು ಪ್ರಯತ್ನಿಸಿದರು. ಇದನ್ನು ಆ ಸಂದರ್ಭದಲ್ಲಿ ಆರೆಸ್ಸೆಸ್ನ ರಾಜಕೀಯ ಮುಖವಾಗಿರುವ ಜನಸಂಘ ತೀವ್ರವಾಗಿ ವಿರೋಧಿಸಿತು. ಮೇಲ್ಜಾತಿಯ ಸಮುದಾಯ ಇದರ ವಿರುದ್ಧ ಬೀದಿಯಲ್ಲಿ ಭಾರೀ ಪ್ರತಿಭಟನೆಗಳನ್ನು ಹಮ್ಮಿಕೊಂಡಿತು. ಸರಕಾರದ ಭಾಗವಾಗಿದ್ದ ಜನಸಂಘದ ಮುಖಂಡರು ಕರ್ಪೂರಿಯ ವಿರುದ್ಧ ಸಂಚುಗಳ ಮೇಲೆ ಸಂಚುಗಳನ್ನು ನಡೆಸಿದರು. ವಿಪರ್ಯಾಸವೆಂದರೆ, ಕರ್ಪೂರಿಯನ್ನು ಅಧಿಕಾರದಿಂದ ಕೆಳಗಿಳಿಸಲು ದಲಿತ ನಾಯಕರು, ಸಮಾಜವಾದಿಗಳೂ ಆಗಿದ್ದ ರಾಮ್ಸುಂದರ್ ದಾಸ್ ಅವರನ್ನು ಜನಸಂಘ ಬಳಸಿಕೊಂಡಿತು. ಮೀಸಲಾತಿಯನ್ನು ಜಾರಿಗೊಳಿಸಿದ ಒಂದೇ ವರ್ಷದಲ್ಲಿ ಕರ್ಪೂರಿ ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಯುವಂತಾಯಿತು. ಕರ್ಪೂರಿಯನ್ನು ಅಂದು ಅಧಿಕಾರದಿಂದ ಕೆಳಗಿಳಿಸಿದ ಪಾಪವನ್ನು ಮರಣೋತ್ತರವಾಗಿ ಭಾರತ ರತ್ನ ನೀಡುವ ಮೂಲಕ ತೊಳೆದುಕೊಳ್ಳಲು ಹೊರಟಿದೆಯೇ ಎಂದು ಆರೆಸ್ಸೆಸನ್ನು ಕೇಳುವಂತಾಗಿದೆ. ಎಲ್ಲಕ್ಕಿಂತ ಮುಖ್ಯವಾಗಿ ಅಂದು ಬಿಹಾರ ರಾಜಕೀಯದಲ್ಲಿ ಜನಸಂಘದ ಜೊತೆಗೆ ಮೈತ್ರಿ ಮಾಡಿಕೊಳ್ಳುವಲ್ಲಿ ಕಪೂರ್ರಿ ಠಾಕೂರ್ ಪಾತ್ರ ದೊಡ್ಡದಿತ್ತು. ಬಹುಶಃ ಇಂದು ಆ ಪಾತ್ರವನ್ನು ಈ ಮೂಲಕ ಮತ್ತೊಮ್ಮೆ ಕೇಂದ್ರ ಸರಕಾರ ಸ್ಮರಿಸಿಕೊಂಡಿದೆ.
ಬಿಹಾರವನ್ನು ಹಿಂದೀಮಯವಾಗಿಸಲು ಕರ್ಪೂರಿ ತನ್ನದೇ ಆದ ಕೊಡುಗೆಗಳನ್ನು ನೀಡಿದ್ದಾರೆ ಎನ್ನುವ ಆರೋಪಗಳಿವೆ. 67ರಲ್ಲಿ ಉಪಮುಖ್ಯಮಂತ್ರಿಯಾಗಿ ಶಿಕ್ಷಣ ಇಲಾಖೆಯ ಚುಕ್ಕಾಣಿ ಕೈಗೆ ಸಿಕ್ಕಿದಾಗ ಅವರು ಬಿಹಾರದಲ್ಲಿ ಇಂಗ್ಲಿಷ್ ವಿರುದ್ಧ ಬಹುದೊಡ್ಡ ಸಮರವನ್ನು ನಡೆಸಿದರು. ಇಡೀ ಬಿಹಾರದ ಎಲ್ಲ ಸರಕಾರಿ ಕಚೇರಿಗಳಿಂದ ಸಂವಹನದ ಭಾಷೆಯಾಗಿ ಇಂಗ್ಲಿಷನ್ನು ಸಂಪೂರ್ಣವಾಗಿ ಕೈ ಬಿಟ್ಟರು. ಅಷ್ಟೇ ಅಲ್ಲ ಶಾಲೆಗಳಲ್ಲೂ ಇಂಗ್ಲಿಷನ್ನು ಐಚ್ಛಿಕ ಭಾಷೆಯಾಗಿಸಿದರು. ಎಷ್ಟರಮಟ್ಟಿಗೆ ಎಂದರೆ ಆ ಅವಧಿಯಲ್ಲಿ ಸೆಕ್ರೆಟರಿಯೇಟ್ನಲ್ಲಿದ್ದ ಎಲ್ಲ ಇಂಗ್ಲಿಷ್ ಟೈಪ್ರೈಟರ್ಗಳು ಕಸದ ಬುಟ್ಟಿ ಸೇರಿದ್ದವು. ಇದರಿಂದಾಗಿ ಶೋಷಿತ ಸಮುದಾಯಕ್ಕೆ ಆಡಳಿತಾತ್ಮಕವಾಗಿ ಕೆಲವು ವಿಷಯಗಳಲ್ಲಿ ಅನುಕೂಲವಾಯಿತಾದರೂ, ಕಲಿಕೆಯಲ್ಲಿ ಇಂಗ್ಲಿಷನ್ನು ಸಂಪೂರ್ಣ ಹೊರಗಿಟ್ಟದ್ದರ ದುಷ್ಪರಿಣಾಮವನ್ನು ಬಿಹಾರದ ತಳಸ್ತರದ ಹಿಂದುಳಿದ ವರ್ಗಗಳು ಈಗ ಅನುಭವಿಸುತ್ತಿವೆ. ಮೇಲ್ಜಾತಿಯ ಜನರು ಇಂಗ್ಲಿಷ್ ಮೂಲಕ ದೇಶ, ವಿದೇಶಗಳಲ್ಲಿ ಅತ್ಯುನ್ನತ ಸ್ಥಾನಗಳನ್ನು ತನ್ನದಾಗಿಸಿಕೊಂಡು ಬೆಳೆದರು. ತಳಸ್ತರದ ಬಿಹಾರಿಗಳು ಕೇವಲ ಹಿಂದಿಯನ್ನು ನೆಚ್ಚಿಕೊಂಡು ಇದ್ದಲ್ಲೇ ಇದ್ದು ಬಿಟ್ಟರು. ಪ್ರಥಮ ಬಾರಿಗೆ ಕಾಂಗ್ರೆಸೇತರ ಸರಕಾರದಲ್ಲಿ ಅತ್ಯುನ್ನತ ಸ್ಥಾನಗಳನ್ನು ತನ್ನದಾಗಿಸಿಕೊಂಡ ಕರ್ಪೂರಿ ಶೋಷಿತ ಸಮುದಾಯಕ್ಕೆ ಬಹಳಷ್ಟು ಒಳಿತುಗಳನ್ನು ಮಾಡಲು ಪ್ರಯತ್ನಿಸಿದರು. ಮಗ್ಗುಲಲ್ಲಿ ಮೇಲ್ಜಾತಿಯ ನೇತೃತ್ವದ ಜನಸಂಘವನ್ನು ಇಟ್ಟುಕೊಂಡೂ ಇದನ್ನು ಭಾಗಶಃ ಅವರು ಸಾಧಿಸಿದರು ಎನ್ನುವುದು ಸಣ್ಣ ಮಾತಲ್ಲ.
ಕರ್ಪೂರಿ ಅವರು ಬದುಕಿದ್ದರೆ ಅವರಿಗೆ ಈಗ ನೂರು ವರ್ಷ. ಈ ಸಂದರ್ಭದಲ್ಲಿ ಅವರನ್ನು ಸ್ಮರಿಸಿಕೊಂಡಿರುವ ಬಿಜೆಪಿ ನೇತೃತ್ವದ ಕೇಂದ್ರ ಸರಕಾರ, ಈ ಮೂಲಕ ಬಿಹಾರದಲ್ಲಿ ಹಿಂದುಳಿದವರ್ಗವನ್ನು ತನ್ನೆಡೆಗೆ ಸೆಳೆದುಕೊಳ್ಳುವ ಪ್ರಯತ್ನವನ್ನು ನಡೆಸುತ್ತಿದೆ. ಮೀಸಲಾತಿಯ ಕುರಿತಂತೆ ಹಿಂದೆ ಇದೇ ಬಿಜೆಪಿಯ ಪೂರ್ವಜರು ಕರ್ಪೂರಿಯ ವಿರುದ್ಧ ತಿರುಗಿ ಬಿದ್ದುದನ್ನು ನಾವು ಪಕ್ಕಕ್ಕಿಡುವ. ಈಗಲಾದರೂ ಬಿಜೆಪಿ ಕೆಳಜಾತಿಗಳ ಪರವಾಗಿ ಇದೆಯೆ? ದುರ್ಬಲ ವರ್ಗಕ್ಕೆ ಮೀಸಲಾತಿಯನ್ನು ಪೂರ್ಣ ಪ್ರಮಾಣದಲ್ಲಿ ಅನುಷ್ಠಾನಗೊಳಿಸುವ ಬಗ್ಗೆ ಸರಕಾರ ಇನ್ನೂ ತನ್ನ ನಿಲುವನ್ನು ಸ್ಪಷ್ಟ ಪಡಿಸಿಲ್ಲ. ಬಿಹಾರ ಸರಕಾರ ಹಮ್ಮಿಕೊಂಡ ಜಾತಿ ಗಣತಿಯು ಈ ದೇಶವನ್ನು ಒಡೆಯುತ್ತದೆ ಎಂದು ಈ ಹಿಂದೆ ಪ್ರಧಾನಿ ಮೋದಿಯವರು ಹೇಳಿಕೆ ನೀಡಿದ್ದರು. ಜಾತಿ ಗಣತಿಯನ್ನು ಬಿಜೆಪಿಯೂ ಸೇರಿದಂತೆ ಕೇಂದ್ರ ಸರಕಾರ ಬಲವಾಗಿ ವಿರೋಧಿಸಿದೆ. ಆದರೆ ಮೀಸಲಾತಿಯನ್ನು ಅರ್ಥಪೂರ್ಣವಾಗಿ ಅನುಷ್ಠಾನಗೊಳಿಸಬೇಕಾದರೆ, ಮೀಸಲಾತಿಯ ಸವಲತ್ತು ಹಿಂದುಳಿದ ವರ್ಗದ ಅರ್ಹ ದುರ್ಬಲರಿಗೆ ತಲುಪಬೇಕಾದರೆ ಜಾತಿ ಗಣತಿ ಅನಿವಾರ್ಯ ಎಂದು ಸ್ವತಃ ಸುಪ್ರೀಂಕೋರ್ಟ್ ಕೂಡ ಅಭಿಪ್ರಾಯ ಪಟ್ಟಿದೆ. ಕರ್ಪೂರಿಯಂತಹ ಹಿಂದುಳಿದ ವರ್ಗದ ನಾಯಕರಿಗೆ ಭಾರತ ರತ್ನವನ್ನು ನೀಡಿ ತನ್ನನ್ನು ತಾನು ಹಿಂದುಳಿದ ವರ್ಗದ ಪರ ಎಂದು ಬಿಂಬಿಸುವ ಪ್ರಯತ್ನವನ್ನು ಕೇಂದ್ರ ಸರಕಾರ ಮಾಡುತ್ತಿದೆ. ನಾಳೆ ಬಿಹಾರದಲ್ಲಿ ಕರ್ಪೂರಿಯ ಬೃಹತ್ ಪ್ರತಿಮೆಯನ್ನೂ ನಿರ್ಮಾಣ ಮಾಡಬಹುದು. ಆದರೆ, ಬಿಹಾರದ ಹಿಂದುಳಿದ ವರ್ಗಕ್ಕೆ ಅದರಿಂದ ಏನು ಲಾಭ? ಈಗಾಗಲೇ ಮೇಲ್ಜಾತಿಯ ಬಡವರಿಗೆ ಶೇ. 10 ಮೀಸಲಾತಿಯನ್ನು ಸರಕಾರ ಘೋಷಿಸಿದೆ. ಬಲಾಢ್ಯ ಜಾತಿಗಳು ಹಿಂದುಳಿದ ವರ್ಗಗಳ ಮೀಸಲಾತಿಯಲ್ಲಿ ಪಾಲುಗಳನ್ನು ಕೇಳುತ್ತಿವೆ. ಹಿಂದುಳಿದ ವರ್ಗದ ಮೀಸಲಾತಿ ಹಂತ ಹಂತವಾಗಿ ದುರ್ಬಲಗೊಳ್ಳುತ್ತಿದೆ. ತಳಸ್ತರದ ಜನರಿಗೆ ವೈಜ್ಞಾನಿಕವಾಗಿ ಸರಕಾರದ ಸವಲತ್ತುಗಳು ತಲುಪಬೇಕಾದರೆ ಸ್ಪಷ್ಟವಾದ ಜಾತಿ ಗಣತಿಯ ಅಗತ್ಯವಿದೆ. ಒಂದೆಡೆ ಕರ್ಪೂರಿಯಂತಹ ನಾಯಕರನ್ನು ಗೌರವಿಸುವಂತೆ ನಟಿಸುತ್ತ ಹಿಂದುಳಿದ ವರ್ಗದ ಬೆನ್ನಿಗೆ ಚೂರಿ ಹಾಕುವ ರಾಜಕೀಯ ತಂತ್ರದ ಭಾಗ ಇದಾಗದಿರಲಿ. ಕರ್ಪೂರಿಗೆ ಭಾರತ ರತ್ನ ನೀಡುವ ಜೊತೆ ಜೊತೆಗೆ ಕೇಂದ್ರ ಸರಕಾರದ ನೇತೃತ್ವದಲ್ಲೇ ದೇಶದ ಜಾತಿ ಗಣತಿ ನಡೆಯಲಿ. ಹಿಂದುಳಿದ ವರ್ಗದಲ್ಲಿ ಅತ್ಯಂತ ದುರ್ಬಲ ಸಮುದಾಯಕ್ಕೆ ಮೀಸಲಾತಿ ಸವಲತ್ತು ತಲುಪುವಂತಾಗಲಿ. ಆಗ ಕರ್ಪೂರಿಗೆ ನೀಡಿದ ಭಾರತರತ್ನ ಅರ್ಥ ಪಡೆದುಕೊಳ್ಳುತ್ತದೆ.