ಜಾಗೃತಿ ಮೂಡಿಸಬೇಕಾದ ಶಾಲೆಗಳೇ ಮುಟ್ಟಿನ ಬಗ್ಗೆ ಅಸ್ಪೃಶ್ಯತೆ ಪಾಲಿಸಿದರೆ?

PC: x.com/htTweets
ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ
ಪೆರಿಯಾರ್ರಂತಹ ಕ್ರಾಂತಿಕಾರಿ ವಿಚಾರವಾದಿಗಳು ಆಗಿ ಹೋಗಿರುವ ತಮಿಳು ನಾಡು, ತಲೆತಲಾಂತರಗಳಿಂದ ಬ್ರಾಹ್ಮಣ್ಯವಾದದ ವಿರುದ್ಧ ಹೋರಾಡುತ್ತಾ ಬಂದಿದೆ. ಸಂಸ್ಕೃತ, ಹಿಂದಿಯ ಸರ್ವಾಧಿಕಾರಕ್ಕೆ ದ್ರಾವಿಡ ಚಳವಳಿಯ ಮೂಲಕ ಉತ್ತರಿಸಿದ ರಾಜ್ಯ ತಮಿಳುನಾಡು. ಶಿಕ್ಷಣ, ಆರೋಗ್ಯ, ಅಭಿವೃದ್ಧಿಗಾಗಿ ಉತ್ತರ ಭಾರತದ ಹಲವು ರಾಜ್ಯಗಳಿಗೆ ತಮಿಳುನಾಡು ಮಾದರಿಯಾಗಿದೆ. ಆದರೆ ಇಂದಿಗೂ ಈ ತಮಿಳುನಾಡಿಗೆ ಜಾತಿ ತಾರತಮ್ಯವನ್ನು ಮೀರುವುದಕ್ಕೆ ಸಾಧ್ಯವಾಗಿಲ್ಲ. ಜಾತಿ ವಾದ, ಅಸ್ಪಶ್ಯತೆಯ ಕಾರಣಗಳಿಗಾಗಿ ತಮಿಳುನಾಡು ಆಗಾಗ ಸುದ್ದಿ ಮಾಡುತ್ತಲೇ ಇರುತ್ತದೆ. ಇಂತಹ ತಮಿಳುನಾಡಿನಲ್ಲಿ ಇದೀಗ ಎಂಟನೆಯ ತರಗತಿಯ ದಲಿತ ವಿದ್ಯಾರ್ಥಿನಿಯೊಬ್ಬಳನ್ನು ಮುಟ್ಟಾಗಿದ್ದಾಳೆ ಎನ್ನುವ ಕಾರಣ ಒಡ್ಡಿ ತರಗತಿಯಿಂದ ಹೊರಗೆ ಪರೀಕ್ಷೆ ಬರೆಸಿದ ಕೃತ್ಯವೊಂದು ಸುದ್ದಿಯಾಗುತ್ತಿದೆ. ಕೊಯಮತ್ತೂರಿನ ಖಾಸಗಿ ಶಾಲೆಯೊಂದು ಮುಟ್ಟಾಗಿದ್ದ ಎಂಟನೆಯ ತರಗತಿಯ ವಿದ್ಯಾರ್ಥಿನಿಯನ್ನು ತರಗತಿಯಿಂದ ಹೊರಹಾಕಿದ್ದು, ಆಕೆ ಅನಿವಾರ್ಯವಾಗಿ ಶಾಲೆಯ ಹೊರಗೆ ಮೆಟ್ಟಲಿನಲ್ಲಿ ಕುಳಿತು ಪರೀಕ್ಷೆ ಬರೆಯುತ್ತಿರುವುದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಇದೀಗ ಅಧಿಕಾರಿಗಳು ಶಾಲಾಡಳಿತದ ವಿರುದ್ಧ ಕ್ರಮ ಕೈಗೊಂಡಿದ್ದು, ಭವಿಷ್ಯದಲ್ಲಿ ಶಾಲೆಗಳಲ್ಲಿ ಇಂತಹ ಘಟನೆ ನಡೆಯದಂತೆ ಶಿಕ್ಷಣ ಇಲಾಖೆ ಸುತ್ತೋಲೆಯನ್ನು ಹೊರಡಿಸಿದೆ.
ಈ ದೇಶದಲ್ಲಿ ಮುಟ್ಟಾದ ಹೆಣ್ಣಿನ ಕುರಿತಂತೆ ಇರುವ ಪೂರ್ವಾಗ್ರಹ ಇಂದು ನಿನ್ನೆಯದಲ್ಲ. ಮುಟ್ಟಾದ ಹೆಣ್ಣನ್ನು ಅಶುಭ ಎಂದು ಹೊರಗಿಡುವುದು, ಆಕೆಗೆ ಯಾವುದೇ ಶುಭಕಾರ್ಯಕ್ರಮಗಳಲ್ಲಿ ಭಾಗವಹಿಸಲು ಅವಕಾಶ ನೀಡದೆ ಇರುವುದು ಇಂದಿಗೂ ಈ ದೇಶದಲ್ಲಿ ನಡೆಯುತ್ತಾ ಬರುತ್ತಿದೆ. ಸಾಕ್ಷರತೆಗಾಗಿ ದೇಶದಲ್ಲೇ ಅಗ್ರಸ್ಥಾನದಲ್ಲಿರುವ ಕೇರಳ ರಾಜ್ಯವು ಕೂಡ ಹೆಣ್ಣಿನ ಮುಟ್ಟಿಗೆ ಸಂಬಂಧಿಸಿದಂತೆ ಮಾಧ್ಯಮಗಳಲ್ಲಿ ಸುದ್ದಿಯಾಯಿತು. ಶಬರಿಮಲೆಯಲ್ಲಿ ಹೆಂಗಸರು ಮುಟ್ಟಾಗುತ್ತಾರೆ ಎನ್ನುವ ಕಾರಣಕ್ಕೇ ಪ್ರವೇಶವನ್ನು ನಿಷೇಧಿಸಲಾಗಿತ್ತು. ಇದರ ವಿರುದ್ಧ ಕೆಲವು ಮಹಿಳಾ ಪರ ಹೋರಾಟಗಾರರು ನ್ಯಾಯಾಲಯದ ಮೆಟ್ಟಿಲೇರಿದರು. ನ್ಯಾಯಾಲಯವೇನೋ ಮಹಿಳೆಯರ ಪರವಾಗಿ ತೀರ್ಪಿತ್ತಿತು. ಆದರೆ, ಇದು ಧಾರ್ಮಿಕ ನಂಬಿಕೆಗೆ ಸಂಬಂಧಿಸಿದ ಭಾವನಾತ್ಮಕ ವಿಷಯವಾಗಿರುವುದರಿಂದ, ನ್ಯಾಯಾಲಯಕ್ಕೂ ಈ ವಿವಾದವನ್ನು ಪೂರ್ತಿಯಾಗಿ ಇತ್ಯರ್ಥಗೊಳಿಸಲು ಸಾಧ್ಯವಾಗಲಿಲ್ಲ. ಮನುಷ್ಯನ ಹುಟ್ಟಿಗೆ ಮುಟ್ಟಾಗುವುದು ಅತ್ಯಗತ್ಯವಾಗಿರುವುದರಿಂದ ಈ ಬಗ್ಗೆ ಧಾರ್ಮಿಕ ವಲಯಗಳಲ್ಲೂ, ಸಾಮಾಜಿಕ ವಲಯಗಳಲ್ಲೂ ಜಾಗೃತಿ ಮೂಡಿಸುವುದೊಂದೇ ಪರಿಹಾರ. ಹಾಗೆಯೇ ಮುಟ್ಟಿನ ಕುರಿತಂತೆ ಇರುವ ಮೌಢ್ಯಗಳನ್ನು ನಿವಾರಿಸಿ, ಅದರ ಹಿಂದಿರುವ ಜೈವಿಕ ಪ್ರಕ್ರಿಯೆಗಳ ಬಗ್ಗೆ ಅರಿವು ಮೂಡಿಸುವುದು ಇಂದಿನ ಅಗತ್ಯವಾಗಿದೆ. ಮತ್ತು ಈ ಅರಿವನ್ನು ನೀಡುವ ಸ್ಥಳ ಶಾಲೆಗಳಾಗಿವೆ. ಅಂತಹ ಶಾಲೆಗಳಲ್ಲೇ ಮುಟ್ಟಿನ ಕುರಿತಂತೆ ಅಜ್ಞಾನಗಳಿದ್ದರೆ, ಶಿಕ್ಷಕರೇ ಮುಟ್ಟಾದ ಬಾಲಕಿಯೊಬ್ಬಳನ್ನು ಶಾಲೆಯಿಂದ ಹೊರಹಾಕುತ್ತಾರೆ ಎಂದಾದರೆ ಸಮಾಜದ ಉಳಿದ ಜನರ ಸ್ಥಿತಿ ಏನಾಗಬೇಕು? ಶಾಲೆಗಳಲ್ಲೇ ಪ್ರವೇಶಗಳು ನಿರಾಕರಿಸುತ್ತವೆ ಎಂದಾದರೆ ದೇವಸ್ಥಾನಗಳಲ್ಲಿ ಮಹಿಳೆಗೆ ಪ್ರವೇಶ ನೀಡಬೇಕು ಎಂದು ಒತ್ತಾಯಿಸುವುದರಲ್ಲಿ ಏನು ಅರ್ಥವಿದೆ?
ಮುಟ್ಟಾದ ಮಹಿಳೆಯರಿಗೆ ಮಾನಸಿಕ ಹಾಗೂ ದೈಹಿಕವಾಗಿ ಆರೈಕೆಗಳು ಬೇಕು ಎನ್ನುವ ಕಾರಣಕ್ಕಾಗಿ ಅವರಿಗೆ ಯಾವುದೇ ಕೆಲಸ ಮಾಡದಂತೆ ಸೂಚಿಸುವುದು ಸರಿ. ಈ ನಿಟ್ಟಿನಲ್ಲಿ ಈ ಹಿಂದೆ ಹಿರಿಯರು ಮಹಿಳೆಯರಿಗೆ ವಿಶ್ರಾಂತಿ ನೀಡಲು ಕೆಲವು ಕ್ರಮಗಳನ್ನು ತೆಗೆದುಕೊಂಡಿರುವ ಸಾಧ್ಯತೆಗಳಿವೆ. ಆದರೆ ಇಂದು ಅದು ಮೌಢ್ಯ ರೂಪವನ್ನು ಪಡೆದಿದೆ. ಮುಟ್ಟಾದ ಮಹಿಳೆ ಅಸ್ಪಶ್ಯಳು ಎಂದು ದೂರವಿಡುವ ಕೆಲಸ ನಡೆಯುತ್ತಿದೆ. ಮೇಲ್ಜಾತಿಯ ಜನರು ವಿದ್ಯಾವಂತರಾಗುತ್ತಿದ್ದಂತೆಯೇ ಮುಟ್ಟಿನ ಬಗ್ಗೆ ಇರುವ ಪೂರ್ವಾಗ್ರಹಗಳನ್ನು ತೊರೆಯುತ್ತಾ ಬಂದಿದ್ದಾರಾದರೂ, ಇಂದಿಗೂ ಗ್ರಾಮೀಣ ಪ್ರದೇಶದ ಮನೆಗಳಲ್ಲಿ ಮುಟ್ಟಾದ ಮಹಿಳೆಯರನ್ನು ಅತ್ಯಂತ ಕೆಟ್ಟದಾಗಿ ನಡೆಸಿಕೊಳ್ಳುತ್ತಾರೆ. ದೇವಸ್ಥಾನ ಪ್ರವೇಶ ಆಚೆಗಿರಲಿ, ಮನೆಯಲ್ಲೇ ಇವರಿಗೆ ಪ್ರವೇಶವಿರುವುದಿಲ್ಲ. ಮುಟ್ಟಾದ ಮಹಿಳೆಯರು ಮನೆಯಿಂದ ಹೊರಗೆ ರಾತ್ರಿಯನ್ನು ಕಳೆಯಬೇಕಾಗುತ್ತದೆ. ಮರದಡಿಯಲ್ಲಿ, ಮನೆಯಿಂದ ದೂರದಲ್ಲಿರುವ ಗುಡಿಸಲಲ್ಲಿ ಹಗಲು ರಾತ್ರಿ ಕಳೆಯಬೇಕಾದ ಸ್ಥಿತಿ ಮಹಿಳೆಯರದ್ದು. ಈ ಸಂದರ್ಭದಲ್ಲಿ ದುಷ್ಕರ್ಮಿಗಳಿಂದ ಲೈಂಗಿಕ ದೌರ್ಜನ್ಯಕ್ಕೀಡಾಗುವುದು, ಪ್ರಾಣಿಗಳಿಂದ ದಾಳಿಗೀಡಾಗುವುದು ಇತ್ಯಾದಿಗಳೂ ನಡೆಯುತ್ತವೆ. ಕಲಬುರ್ಗಿ ಮಠದ ವತಿಯಿಂದ ನಡೆಯುವ ಶಾಲೆಯೊಂದರಲ್ಲಿ ಮುಟ್ಟಾದ ವಿದ್ಯಾರ್ಥಿನಿಯರು ಶಾಲೆಯ ಹೊರಗಡೆ ನಿಂತು ಪಾಠ ಕೇಳಬೇಕಾಗುತ್ತಿತ್ತು. ಇದು ಮಾಧ್ಯಮಗಳಲ್ಲೂ ಸುದ್ದಿಯಾಗಿತ್ತು. ಚಿತ್ರದುರ್ಗ, ತುಮಕೂರು, ಬಳ್ಳಾರಿ, ಹಾಸನ ಮೊದಲಾದೆಡೆ ಕಾಡುಗೊಲ್ಲರ ಹಟ್ಟಿಗಳಲ್ಲಿ ಮುಟ್ಟಾದ ಮಹಿಳೆಯರು ಮನೆಯಿಂದ ಹೊರಗೆ ಬಯಲಲ್ಲಿ, ಮರಗಳ ಅಡಿಯಲ್ಲೇ ಕಾಲ ಕಳೆಯಬೇಕಾಗುತ್ತದೆ. ಇಂದಿಗೂ ಈ ಆಚರಣೆ ಜಾರಿಯಲ್ಲಿದೆಯಾದರೂ, ಜನರ ಧಾರ್ಮಿಕ ನಂಬಿಕೆ ಎನ್ನುವ ಕಾರಣದಿಂದ ಸರಕಾರ, ಕಾನೂನು ಕೂಡ ಅಸಹಾಯಕವಾಗಿವೆ. ತಮಿಳು ನಾಡಿನಲ್ಲಿ ಮುಟ್ಟಾಗಿದ್ದಾಳೆ ಎಂದು ಎಂಟನೇ ತರಗತಿಯ ಬಾಲಕಿಯನ್ನು ಪರೀಕ್ಷೆ ಬರೆಯುತ್ತಿದ್ದ ಸಂದರ್ಭದಲ್ಲಿ ತರಗತಿಯಿಂದ ಹೊರಹಾಕಿದ್ದು ಒಂದು ಕೃತ್ಯವಾದರೆ, ಬಳಿಕ ಆಕೆಯ ಪಾಲಕರಿಂದಲೇ ಅದನ್ನು ಸಮರ್ಥನೆ ಮಾಡಿಸಿರುವುದು ಇನ್ನೊಂದು ಕೃತ್ಯ. ಶಾಲೆಯ ಶಿಕ್ಷಕರ ಕೃತ್ಯವನ್ನು ಆಕೆಯ ಪಾಲಕರು ಕೂಡ ಪರೋಕ್ಷವಾಗಿ ಬೆಂಬಲಿಸಿ ಹೇಳಿಕೆ ನೀಡಿದ್ದರು. ಅಂದರೆ ಮಾನಸಿಕವಾಗಿ ಮುಟ್ಟಿನ ಬಗ್ಗೆ ಇಡೀ ಸಮಾಜವೇ ಮೌಢ್ಯದಲ್ಲಿದೆ ಎನ್ನುವುದು ಇದರಿಂದ ಸ್ಪಷ್ಟವಾಗುತ್ತದೆ. ಈ ನಿಟ್ಟಿನಲ್ಲಿ, ಈ ಕೃತ್ಯಕ್ಕಾಗಿ ಬರೇ ಸಂಬಂಧಪಟ್ಟ ಅಧಿಕಾರಿಗಳ ಮೇಲೆ ಕ್ರಮ ತೆಗೆದುಕೊಂಡರೆ ಸಾಕಾಗುವುದಿಲ್ಲ. ಸಮಾಜದಲ್ಲಿ ಮುಟ್ಟಾದ ಮಹಿಳೆಯರ ಕುರಿತಂತೆ ಸರಕಾರ ಜಾಗೃತಿ ಮೂಡಿಸಲು ಕ್ರಮ ತೆಗೆದುಕೊಳ್ಳುವ ಅಗತ್ಯವಿದೆ.
ಉತ್ತರ ಭಾರತಕ್ಕೆ ಹೋಲಿಸಿದರೆ ದಕ್ಷಿಣ ಭಾರತದಲ್ಲಿ ಜಾತೀಯತೆ ಮತ್ತು ಲಿಂಗತಾರತಮ್ಯ ಕಡಿಮೆ ಪ್ರಮಾಣದಲ್ಲಿದ್ದರೂ, ಮಹಿಳೆಯರ ಕುರಿತಂತೆ ಪುರುಷ ಪ್ರಧಾನ ಮನಸ್ಸು ದಿನದಿಂದ ದಿನಕ್ಕೆ ಸಂಕುಚಿತವಾಗುತ್ತಿದೆ. ಶೈಕ್ಷಣಿಕ ಮತ್ತು ಆರೋಗ್ಯವಲಯದಲ್ಲಿ ಸಾಕಷ್ಟು ಸಾಧನೆಗಳನ್ನು ಮಾಡಿರುವ ಕೇರಳದಲ್ಲಿ ಮನೆಯಲ್ಲೇ ಹೆರಿಗೆ ಮಾಡಿಸುವ ಸಂಪ್ರದಾಯ ಹೆಚ್ಚುತ್ತಿದೆ ಎನ್ನುವ ಆತಂಕಕಾರಿ ವರದಿ ಬೆಳಕಿಗೆ ಬಂದಿದೆ. ಕೇರಳದಲ್ಲಿ ಪ್ರತಿವರ್ಷ 3 ಲಕ್ಷ ಹೆರಿಗೆಗಳು ನಡೆಯುತ್ತವೆ. ಇವುಗಳಲ್ಲಿ 500ಕ್ಕೂ ಅಧಿಕ ಹೆರಿಗೆಗಳು ಮನೆಯಲ್ಲೇ ನಡೆಯುತ್ತಿವೆ. ಈ ಹಿಂದೆ ಬುಡಕಟ್ಟು ಸಮುದಾಯದೊಳಗೆ ಇಂತಹ ಮನೆ ಹೆರಿಗೆಗಳು ನಡೆಯುತ್ತಿದ್ದವು. ಇಂದು ವಿದ್ಯಾವಂತರೇ ಈ ಸಂಪ್ರದಾಯಕ್ಕೆ ಬಲಿಬೀಳುತ್ತಾ, ಮಹಿಳೆ ಮತ್ತು ಮಗುವಿನ ಪ್ರಾಣವನ್ನು ಪಣಕ್ಕಿಡುತ್ತಿದ್ದಾರೆ ಎನ್ನುವ ಅಂಶವನ್ನು ಆರೋಗ್ಯ ಇಲಾಖೆಯ ಅಧಿಕಾರಿಗಳು ಬಹಿರಂಗಪಡಿಸಿದ್ದಾರೆ. ಧಾರ್ಮಿಕ ವ್ಯಕ್ತಿಗಳು, ಆಯುರ್ವೇದ ಚಿಕಿತ್ಸಕರು, ಪ್ರಕೃತಿ ಚಿಕಿತ್ಸಕರು ಇಂತಹ ಹೆರಿಗೆಗಳನ್ನು ಪ್ರೋತ್ಸಾಹಿಸುತ್ತಿದ್ದಾರೆ. ಮಲಪ್ಪುರಂನಲ್ಲಿ ಇಂತಹ ಹೆರಿಗೆಗಳ ಸಂಖ್ಯೆ ಅಧಿಕವಿದೆ ಎಂದು ಕೇರಳದ ಆರೋಗ್ಯ ಇಲಾಖೆ ಹೇಳುತ್ತಿದೆ. ಮುಟ್ಟು ಮತ್ತು ಹೆರಿಗೆ ಒಂದಕ್ಕೊಂದು ಪೂರಕವಾದ ಸಹಜ ಪ್ರಕ್ರಿಯೆಗಳಾಗಿವೆ. ಸೃಷ್ಟಿಕ್ರಿಯೆ ಎನ್ನುವ ಮಹತ್ತರ ಹೊಣೆಗಾರಿಕೆಯನ್ನು ನಿಭಾಯಿಸುವ ವರವನ್ನು ಪ್ರಕೃತಿ ಮಹಿಳೆಗೆ ಕೊಟ್ಟಿದೆ. ಇದಕ್ಕಾಗಿ ಪುರುಷರು ಮಹಿಳೆಗೆ ಋಣಿಯಾಗಬೇಕು. ಈ ಸಂದರ್ಭದಲ್ಲಿ ಆಕೆಗೆ ಮಾನಸಿಕ ಮತ್ತು ದೈಹಿಕ ಆರೈಕೆಗಳನ್ನು ಮಾಡುತ್ತಾ, ಆಕೆಯನ್ನು ಕಾಪಾಡುವುದು, ರಕ್ಷಿಸುವುದು ಪುರುಷನ ಹೊಣೆಗಾರಿಕೆಯಾಗಿದೆ. ಇಂತಹ ಸಂದರ್ಭದಲ್ಲಿ ಮೌಢ್ಯಗಳಿಗೆ ಬಲಿಯಾಗಿ ಆಕೆಯನ್ನು ಅವಮಾನಿಸುವುದು, ಆಕೆಯ ಜೀವವನ್ನು ಅಪಾಯಕ್ಕೆ ತಳ್ಳುವುದು ಎಂದರೆ ಪುರುಷ ತನಗೆ ತಾನೇ ಮಾಡಿಕೊಳ್ಳುವ ಅನ್ಯಾಯವಾಗಿದೆ. ಮುಟ್ಟಾದ ಮಹಿಳೆಯರ ಜೊತೆಗೆ ಕೆಟ್ಟದಾಗಿ ವರ್ತಿಸುವವರ, ಹೆರಿಗೆಯ ಸಂದರ್ಭದಲ್ಲಿ ಮಹಿಳೆಯರ ಆರೋಗ್ಯದ ಬಗ್ಗೆ ನಿರ್ಲಕ್ಷ್ಯವಹಿಸುವವರ ವಿರುದ್ಧ ಅತ್ಯಂತ ಕಠಿಣ ಕ್ರಮವನ್ನು ತೆಗೆದುಕೊಳ್ಳಬೇಕು. ಆಸ್ಪತ್ರೆಗಳ ಸೌಲಭ್ಯವಿದ್ದೂ, ಯಾರದೋ ಮಾತುಗಳಿಗೆ ಬಲಿಬಿದ್ದು ಮನೆಹೆರಿಗೆ ಮಾಡಿಸಿ ಆ ಸಂದರ್ಭದಲ್ಲಿ ಮಹಿಳೆಯ ಅಥವಾ ಮಗುವಿನ ಜೀವಕ್ಕೆ ಯಾವುದೇ ಅಪಾಯವಾದರೆ ಗಂಡ ಮತ್ತು ಆತನ ಕುಟುಂಬದ ವಿರುದ್ಧ ಪೊಲೀಸರು ಕೊಲೆ ಪ್ರಕರಣವನ್ನು ದಾಖಲಿಸಬೇಕು.