2001ರ ಸಂಸತ್ ದಾಳಿಯಲ್ಲಿ ಬಲಿದಾನಗೈದವರಿಗೆ ಅವಮಾನ
Photo: PTI
ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ
22 ವರ್ಷಗಳ ಹಿಂದೆ ಸಂಸತ್ನ ಮೇಲೆ ನಡೆದ ದಾಳಿಯ ಕಹಿಯನ್ನು ದೇಶ ನೆನಸಿಕೊಳ್ಳುತ್ತಿದ್ದ ಹೊತ್ತಿನಲ್ಲೇ, ಡಿ. 13ರಂದು ಇಬ್ಬರು ಸಾಮಾನ್ಯ ಯುವಕರು ಸಂಸತ್ನೊಳಗೆ ನುಗ್ಗಿ, ಈಗಲಾದರೂ ಭದ್ರತೆಯ ಬಗ್ಗೆ ನಮ್ಮ ಸರಕಾರ ಎಷ್ಟು ಕಾಳಜಿ ಹೊಂದಿದೆ ಎನ್ನುವುದನ್ನು ದೇಶಕ್ಕೆ ಮನವರಿಕೆ ಮಾಡಿಸಿ ಬಿಟ್ಟರು. ಪ್ರಾಥಮಿಕ ತನಿಖೆಯಲ್ಲಿ ಯುವಕರಿಗೆ ಯಾವುದೇ ಉಗ್ರವಾದಿ ಸಂಘಟನೆಗಳ ಜೊತೆಗೆ ಸಂಪರ್ಕವಿಲ್ಲದಿರುವುದು ಬೆಳಕಿಗೆ ಬಂದಿದೆ. ಸಾಮಾನ್ಯ ಯುವಕರು ಭದ್ರತೆಯ ದೌರ್ಬಲ್ಯಗಳನ್ನು ಬಳಸಿಕೊಂಡು ಸಂಸತ್ನೊಳಗೆ ನುಗ್ಗಿ ದಾಂಧಲೆ ಎಬ್ಬಿಸಬಹುದಾಗಿದ್ದರೆ ಉಗ್ರಗಾಮಿಗಳ ಕುರಿತಂತೆ ಭರವಸೆಯೇನು? ಸಿಖ್ ಉಗ್ರವಾದಿಯೊಬ್ಬ ದಾಳಿ ನಡೆಸುವ ಬೆದರಿಕೆಯನ್ನು ಒಡ್ಡಿದ ಬಳಿಕವೂ ಸಂಸತ್ನ ಭದ್ರತೆ ಇಷ್ಟು ದುರ್ಬಲವಾಗಿತ್ತು ಎನ್ನುವುದನ್ನು ನಂಬುವುದಕ್ಕೆ ದೇಶಕ್ಕೆ ಕಷ್ಟವಾಗುತ್ತಿದೆ. ಎಲ್ಲಕ್ಕಿಂತ ಮುಖ್ಯವಾಗಿ ಈ ಭದ್ರತಾ ಲೋಪ ಪ್ರಕರಣವನ್ನು ಸರಕಾರ ನಿಭಾಯಿಸಿರುವ ರೀತಿಯೂ ಅತ್ಯಂತ ನಿರಾಶಾದಾಯಕವಾಗಿದೆ. 2001ರಲ್ಲಿ ನಡೆದ ಸಂಸತ್ ದಾಳಿ ಸಂಸತ್ನ ಹೊರಗೆ ನಡೆದಿರುವುದು. ಆದರೆ ಈ ಬಾರಿ ಸಂಸತ್ನ ಒಳಗೆಯೇ ದಾಳಿ ನಡೆದಿದೆ. ಇದು ದೇಶದ ಇತಿಹಾಸದಲ್ಲೇ ಮೊದಲ ಬಾರಿ ಸಂಭವಿಸಿದೆ. ಸಾವು ನೋವು ಸಂಭವಿಸಿಲ್ಲ ಎನ್ನುವ ಒಂದೇ ಕಾರಣಕ್ಕಾಗಿ ಪ್ರಕರಣವನ್ನು ನಾವು ಲಘುವಾಗಿ ತೆಗೆದುಕೊಳ್ಳುವಂತಿಲ್ಲ. ಸಂಸತ್ನೊಳಗೆ ಪ್ರವೇಶಿಸಿದ ದುಷ್ಕರ್ಮಿಗಳನ್ನು ಹಿಡಿದಿರುವುದು ಕೂಡ ಸಂಸದರೇ ಹೊರತು ಭದ್ರತಾ ಸಿಬ್ಬಂದಿಯಲ್ಲ. ಭದ್ರತಾ ಸಿಬ್ಬಂದಿ ಎಲ್ಲ ಅನಾಹುತಗಳು ನಡೆದ ಬಳಿಕ ಕೊನೆಯ ಕ್ಷಣದಲ್ಲಿ ಪ್ರವೇಶಿಸಿದರು. ಆ ಅವಧಿಗೆ ದುಷ್ಕರ್ಮಿಗಳಿಗೆ ಸಂಸದರ ಮೇಲೆ ಯಾವುದೇ ರೀತಿಯ ಹಾನಿಯನ್ನು ಎಸಗುವ ಅವಕಾಶವಿತ್ತು.
ಪ್ರಕರಣದ ಬಗ್ಗೆ ತನಿಖೆಗೆ ಗೃಹ ಸಚಿವಾಲಯ ಆದೇಶ ನೀಡಿದೆ. ತನಿಖೆ ನಡೆಸಲು ಕೇಂದ್ರೀಯ ಮೀಸಲು ಪೊಲೀಸ್ ಪಡೆಗಳ ಮಹಾನಿರ್ದೇಶಕ ಅನೀಶ್ ದಯಾಳ್ ಸಿಂಗ್ ನೇತೃತ್ವದಲ್ಲಿ ಸಮಿತಿಯನ್ನು ರಚಿಸಲಾಗಿದೆ. ಆದರೆ ಅದಕ್ಕೆ ಮೊದಲು, ಭದ್ರತಾ ವೈಫಲ್ಯಕ್ಕಾಗಿ ಕೆಲವು ಪ್ರಮುಖ ತಲೆಗಳು ಉರುಳುವುದು ಅತ್ಯಗತ್ಯವಾಗಿತ್ತು. ಸಂಸತ್ನಲ್ಲಿ ನಡೆದಿರುವ ಅನಾಹುತಕ್ಕಾಗಿ ಮೊದಲು ರಾಜೀನಾಮೆ ನೀಡಬೇಕಾಗಿರುವುದು ಗೃಹ ಸಚಿವರು. ಅದು ಸಾಧ್ಯವಿಲ್ಲ ಎಂದಾದರೆ ಗೃಹ ಇಲಾಖೆಯ ಮುಖ್ಯಸ್ಥರನ್ನು ತಕ್ಷಣಕ್ಕೆ ಅಮಾನತು ಮಾಡಬೇಕಾಗಿತ್ತು. ಆದರೆ ಇಲ್ಲಿ ಕೆಲವು ಭದ್ರತಾ ಸಿಬ್ಬಂದಿಯನ್ನಷ್ಟೇ ಅಮಾನತುಗೊಳಿಸಲಾಗಿದೆ. ಒಂದು ರೀತಿಯಲ್ಲಿ ರಾಜಕಾರಣಿಗಳ ರಾಜಕೀಯ ಚದುರಂಗದಾಟಕ್ಕೆ ಈ ಸಿಬ್ಬಂದಿ ಬಲಿಪಶುಗಳಾಗಿದ್ದಾರೆ. ಇದೇ ಸಂದರ್ಭದಲ್ಲಿ ಆರೋಪಿಗಳು ಸಂಸತ್ನೊಳಗೆ ಪ್ರವೇಶಿಸಲು ಪ್ರಮುಖ ಕಾರಣರಾಗಿರುವ ಬಿಜೆಪಿ ಸಂಸದರ ವಿರುದ್ಧ ಯಾವುದೇ ಕ್ರಮವನ್ನು ತೆಗೆದುಕೊಂಡಿಲ್ಲ. ವಿಪರ್ಯಾಸವೆಂದರೆ, ಸಂಸತ್ದಾಳಿಯ ವಿರುದ್ಧ ಪ್ರತಿಭಟನೆ ನಡೆಸಿರುವ 15 ಸಂಸದರನ್ನು ಅಮಾನತುಗೊಳಿಸಲಾಗಿದೆ. ಸಂಸತ್ದಾಳಿಗೆ ಕಾರಣಕರ್ತರಾದ ರಾಜಕಾರಣಿಗಳನ್ನು ರಕ್ಷಿಸುತ್ತಿರುವುದು ಮಾತ್ರವಲ್ಲ, ದಾಳಿಯನ್ನು ಪ್ರಶ್ನಿಸಿದವರ ಮೇಲೆಯೇ ಸರಕಾರ ಕ್ರಮ ತೆಗೆದುಕೊಳ್ಳಲು ಮುಂದಾಗಿದೆ. ಅದಾನಿಯ ಅಕ್ರಮಗಳ ವಿರುದ್ಧ ಮಾತನಾಡಿದಾಗ, ರಫೇಲ್ ಹಗರಣಗಳ ತನಿಖೆಗೆ ಒತ್ತಾಯಿಸಿದಾಗ ರಾಷ್ಟ್ರೀಯ ಭದ್ರತೆಯ ಕಡೆಗೆ ಕೈ ತೋರಿಸಿದ್ದ ಸರಕಾರಕ್ಕೆ ಸಂಸತ್ನ ಮೇಲೆ ನಡೆದಿರುವ ದಾಳಿ ರಾಷ್ಟ್ರೀಯ ಭದ್ರತೆಯ ವಿಷಯವಾಗಿಲ್ಲ. ಅದಾನಿಯನ್ನು ಪ್ರಶ್ನಿಸಿದವರನ್ನು ಅತ್ಯಾಸಕ್ತಿಯಿಂದ ಸದನದಿಂದ ಹೊರಹಾಕುವ ಸರಕಾರ, ಸಂಸತ್ ಮೇಲೆ ದಾಳಿ ನಡೆಸಲು ಸಹಕರಿಸಿದವರನ್ನು ಮಾತ್ರ ರಕ್ಷಿಸಲು ಮುಂದಾಗಿರುವುದು ದೇಶದ ಪಾಲಿಗೆ ನಿಜಕ್ಕೂ ಆತಂಕಕಾರಿ ವಿಷಯವಾಗಿದೆ.
2001ರಲ್ಲಿ ನಡೆದ ಸಂಸತ್ ದಾಳಿಯ ಬಗ್ಗೆ ಬುಧವಾರ ತಮ್ಮ ವಿಷಾದನೀಯ ಹೇಳಿಕೆಗಳನ್ನು ನೀಡಿರುವ ಪ್ರಧಾನಿ ನರೇಂದ್ರ ಮೋದಿಯವರು, ಈ ಹೊಸ ದಾಳಿಯ ಬಗ್ಗೆ ಈವರೆಗೆ ತುಟಿ ಬಿಚ್ಚಿಲ್ಲ. ಆತಂಕದಲ್ಲಿರುವ ದೇಶಕ್ಕೆ ಪ್ರಧಾನಿಯ ಸ್ಪಷ್ಟನೆ ತುರ್ತಾಗಿ ಬೇಕಾಗಿದೆ. ಆದರೆ ದಾಳಿಯ ಆನಂತರ 48 ಗಂಟೆಗಳಲ್ಲಿ ಯಾವುದೇ ಹೇಳಿಕೆಯನ್ನು ಬಿಡುಗಡೆ ಮಾಡಿಲ್ಲ. ಈ ಹಿಂದೆ ಪುಲ್ವಾಮ ದಾಳಿಯಲ್ಲೂ ಭಾರೀ ಭದ್ರತಾ ಲೋಪಗಳು ಕಂಡು ಬಂದಿದ್ದವು. ಈ ದಾಳಿಯಲ್ಲಿ ದೇಶದ 40ಕ್ಕೂ ಅಧಿಕ ಯೋಧರು ಮೃತಪಟ್ಟಿದ್ದರು. ದಾಳಿಗೆ ಸರಕಾರ ಪಾಕಿಸ್ತಾನವನ್ನು ಹೊಣೆ ಮಾಡಿತ್ತು. ಆದರೆ ದಾಳಿಕೋರರನ್ನು ನಮ್ಮ ದೇಶದೊಳಗೆ ಬಿಟ್ಟುಕೊಟ್ಟವರು ಯಾರು ಎನ್ನುವ ಪ್ರಶ್ನೆಗೆ ಈವರೆಗೆ ಉತ್ತರ ದೊರಕಿಲ್ಲ. ಜಮ್ಮು-ಕಾಶ್ಮೀರದ ಮಾಜಿ ರಾಜ್ಯಪಾಲ ಸತ್ಯಪಾಲ್ ಮಲಿಕ್ ಅವರು ಈ ದಾಳಿಯ ಬಗ್ಗೆ ಶಂಕೆಯನ್ನು ವ್ಯಕ್ತಪಡಿಸಿದ್ದರು. ಚುನಾವಣೆಯ ಹಿನ್ನೆಲೆಯಲ್ಲಿ ಸರಕಾರವೇ ಇಂತಹದೊಂದು ದಾಳಿಗೆ ಅವಕಾಶಕೊಟ್ಟಿತೇ ಎನ್ನುವ ಪ್ರಶ್ನೆಗಳನ್ನು ಹಲವರು ಕೇಳಿದ್ದಾರೆ. ಆ ಪ್ರಶ್ನೆಗಳಿಗೆ ಉತ್ತರಿಸಲು ಸರಕಾರ ಸಂಪೂರ್ಣ ವಿಫಲವಾಗಿದೆ. ಪುಲ್ವಾಮ ದಾಳಿ ದೂರದ ಗಡಿಯಲ್ಲಿ ನಡೆದಿರುವುದು. ಆದರೆ ಇದೀಗ ಸಂಸತ್ನ ಒಳಗೆ ಕಂಡಕಂಡವರೆಲ್ಲ ನುಗ್ಗುವಂತಹ ಸ್ಥಿತಿಗೆ ದೇಶವನ್ನು ಮೋದಿ ತಂದು ನಿಲ್ಲಿಸಿದ್ದಾರೆ ಮತ್ತು ಅದನ್ನು ಪ್ರಶ್ನಿಸಿದವರನ್ನು ಸದನದಿಂದ ಹೊರ ಹಾಕುವ ಸರ್ವಾಧಿಕಾರಿ ಧೋರಣೆಯನ್ನು ಪ್ರದರ್ಶಿಸುತ್ತಿದ್ದಾರೆ.
ಆರೋಪಿಗಳಲ್ಲಿ ಒಂದಿಬ್ಬರು ಪ್ರಧಾನಿ ಮೋದಿಯ ಅಭಿಮಾನಿಯಾಗಿದ್ದರು ಎಂದು ಆರೋಪಿ ಕುಟುಂಬಸ್ಥರೇ ಹೇಳಿಕೆ ನೀಡಿದ್ದಾರೆ. ಒಂದು ಕಾಲದಲ್ಲಿ ಪ್ರಧಾನಿಯ ಅಭಿಮಾನಿಗಳಾದವರು ಇಂದು ಸಂಸತ್ಗೆ ಅಕ್ರಮವಾಗಿ ನುಗ್ಗಿ ‘ಸರ್ವಾಧಿಕಾರಿಗೆ ಧಿಕ್ಕಾರ’ ಎಂದು ಕೂಗುವ ಹಂತಕ್ಕೆ ಬಂದು ತಲುಪಿದ್ದಾರೆ. ತನ್ನನ್ನು ನಂಬಿದ ಯುವಕರಿಗೆ ಪ್ರಧಾನಿ ಮೋದಿ ಏನನ್ನು ನೀಡುತ್ತಿದ್ದಾರೆ ಎನ್ನುವುದನ್ನು ಇದು ಜಗಜ್ಜಾಹೀರುಗೊಳಿಸಿದೆ. ನಿರುದ್ಯೋಗ, ಬೆಲೆಯೇರಿಕೆ ಮೊದಲಾದವು ಈ ದೇಶದ ಯುವಕರನ್ನು ಹತಾಶರನ್ನಾಗಿಸುತ್ತಿದೆ. ಭಯೋತ್ಪಾದಕ ಸಂಘಟನೆಗಳು, ಪ್ರತ್ಯೇಕತಾವಾದಿಗಳಿಂದ ದೇಶದ ಆಂತರಿಕ ಭದ್ರತೆಗೆ ಅಪಾಯ ಎದುರಾಗುವುದು ಹೊಸತೇನೂ ಅಲ್ಲ. ಆದರೆ ಮೋದಿ ಆಡಳಿತ ಈ ದೇಶದ ಅಮಾಯಕ ಯುವಕರನ್ನೆಲ್ಲ ಹತಾಶೆಗೆ ತಳ್ಳಿ ಅವರನ್ನು ಉಗ್ರವಾದಿಗಳು, ಭಯೋತ್ಪಾದಕರು, ದೇಶದ್ರೋಹಿಗಳನ್ನಾಗಿಸಲು ಹೊರಟಿದೆ. ಸ್ವತಃ ಪ್ರಧಾನಿ ಮೋದಿಯ ಹಿಂಬಾಲಕರೇ ಭ್ರಮನಿರಸನಗೊಂಡು ದೇಶದ್ರೋಹಿಗಳಾಗಿ ಬದಲಾಗುತ್ತಿದ್ದಾರೆ ಎನ್ನುವುದನ್ನು ಸಂಸತ್ ದಾಳಿ ಬಹಿರಂಗಪಡಿಸಿದೆ.
ಸಂಸತ್ನ ಮೇಲೆ ದಾಳಿ ನಡೆಸಿದವರ ಹೆಸರು ಅಕ್ರಮ್, ಮುಹಮ್ಮದ್, ಸತ್ಪಾಲ್ ಸಿಂಗ್ ಎಂದಾಗಿದ್ದರೆ ಇಂದು ಬಿಜೆಪಿ ಮತ್ತು ಸಂಘಪರಿವಾರದ ಪ್ರತಿಕ್ರಿಯೆ ಹೇಗಿರುತ್ತಿತ್ತು? ಕೇಂದ್ರ ಸರಕಾರ ಪ್ರಕರಣವನ್ನು ಹೇಗೆ ನಿರ್ವಹಿಸುತ್ತಿತ್ತು? ಆರೋಪಿಗಳು ಸಂಸತ್ ಆವರಣದಲ್ಲಿ ಎನ್ಕೌಂಟರ್ಗೆ ಬಲಿಯಾಗುತ್ತಿದ್ದರು. ಮಾಧ್ಯಮಗಳು ಪುಂಖಾನುಪುಂಖವಾಗಿ ಕತೆಗಳನ್ನು ಕಟ್ಟಿ ಪ್ರಸಾರ ಮಾಡುತ್ತಿದ್ದವು. ಆದರೆ ದಾಳಿ ನಡೆಸಿದವರು ಮತ್ತು ಅದಕ್ಕೆ ಸಹಕರಿಸಿದವರ ಧರ್ಮ, ಪಕ್ಷ ಬೇರೆಯಾಗಿರುವುದರಿಂದಲೇ ಅವರಿಗಿನ್ನೂ ಬಿಜೆಪಿ ಭಯೋತ್ಪಾದಕರ ಪಟ್ಟ ಕಟ್ಟಿಲ್ಲ. ನಮ್ಮ ಸಂಸತ್, ದೇಶದ ಕುರಿತಂತೆ ಬಿಜೆಪಿ ಮತ್ತು ಪ್ರಧಾನಿ ಮೋದಿಯ ಕಾಳಜಿ ಎಲ್ಲಿಯವರೆಗೆ ಎನ್ನುವುದನ್ನು ಇದು ಬಹಿರಂಗಪಡಿಸಿದೆ. ಮೂಗಿನ ಮಟ್ಟಕ್ಕೆ ನೀರು ಬಂದಾಗ ತನ್ನ ಮಗುವನ್ನೇ ಮುಳುಗಿಸಿ ಅದರ ಮೇಲೆ ಕಾಲಿಟ್ಟು ಮೇಲಕ್ಕೆ ಹಾರಿ ಜೀವ ಉಳಿಸಿಕೊಂಡ ಕೋತಿಯಂತೆ, ಬಿಜೆಪಿ ವರ್ತಿಸಿದೆ. ಸಂಸತ್ನ ಮೇಲೆ ಬುಧವಾರ ನಡೆದ ದಾಳಿಯನ್ನು ಕ್ಷುಲ್ಲಕಗೊಳಿಸುವ ಮೂಲಕ, 2001ರ ಸಂಸತ್ ದಾಳಿಯಲ್ಲಿ ಉಗ್ರರನ್ನು ಎದುರಿಸುತ್ತಾ ಹುತಾತ್ಮರಾದ ಅಷ್ಟೂ ಯೋಧರ ಬಲಿದಾನವನ್ನು ಸರಕಾರ ಅವಮಾನಿಸಿದೆ.