ಗೋಮಾಂಸ ಸೇವನೆ ಅಪರಾಧವೆ?
ಸಾಂದರ್ಭಿಕ ಚಿತ್ರ (freepik)
ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ
ಒಂದು ಕಾಲದ ಸಾದತ್ ಹಸನ್ ಮಾಂಟೋ ಅವರ ವಿಡಂಬನೆಗಳು ಇಂದು ವಾಸ್ತವ ರೂಪತಾಳಿ ಮಾಧ್ಯಮಗಳ ಮುಖ ಪುಟ ಸುದ್ದಿಗಳಾಗುತ್ತಿವೆ. ಹರ್ಯಾಣದಲ್ಲಿ ಬೀಫ್ ಸೇವಿಸಿದ ಕಾರಣಕ್ಕೆ ಸಂಘಪರಿವಾರದ ದುಷ್ಕರ್ಮಿಗಳಿಂದ ಹತ್ಯೆಗೀಡಾಗಿದ್ದ ವಲಸೆ ಕಾರ್ಮಿಕನ ಪ್ರಕರಣ, ಇದೀಗ ವಿಡಂಬನೆಯ ರೂಪ ಪಡೆದಿದೆ. ಹರ್ಯಾಣದ ಚರ್ಖಿ ದಾದ್ರಿ ಜೆಲ್ಲೆಯಲ್ಲಿ ಎರಡು ತಿಂಗಳ ಹಿಂದೆ ಕಾರ್ಮಿಕನೊಬ್ಬನನ್ನು ಬೀಫ್ ಸೇವಿಸಿದ ಕಾರಣಕ್ಕಾಗಿ ದುಷ್ಕರ್ಮಿಗಳು ಕೊಂದು ಹಾಕಿದ್ದರು. ಇದೀಗ ಎರಡು ತಿಂಗಳ ಬಳಿಕ ಹತ ಕಾರ್ಮಿಕನ ಮನೆಯಿಂದ ವಶ ಪಡಿಸಿಕೊಳ್ಳಲಾಗಿದ್ದ ಮಾಂಸದ ಸ್ಯಾಂಪಲ್ ದನದ್ದಲ್ಲ ಎಂದು ಪ್ರಯೋಗಾಲಯ ಸ್ಪಷ್ಟ ಪಡಿಸಿದೆಯಂತೆ. ಹತ್ಯೆಗೆ ಕೆಲವು ಗಂಟೆಗಳ ಮುನ್ನ ಪೊಲೀಸರಿಗೆ ಕರೆ ಮಾಡಿದ್ದ ಗುಂಪು, ಆ ಪ್ರದೇಶದಲ್ಲಿರುವ ಜೋಪಡಿಗಳಲ್ಲಿ ಬೀಫ್ ಅಡುಗೆ ಮಾಡಿ ತಿನ್ನಲಾಗುತ್ತಿದೆ ಎಂದು ಆರೋಪಿಸಿತ್ತು. ಪೊಲೀಸರು ಗ್ರಾಮವನ್ನು ತಲುಪುವ ಮುನ್ನವೇ ಗುಂಪು ಕಾರ್ಮಿಕ ಮಲಿಕ್ನನ್ನು ಥಳಿಸಿಕೊಂದು ಹಾಕಿತ್ತು. ಪೊಲೀಸರು ಸ್ಥಳ ಮಹಜರು ನಡೆಸಿ, ಮಾಂಸವನ್ನು ಪರೀಕ್ಷೆಗಾಗಿ ಪ್ರಯೋಗಾಲಯಕ್ಕೆ ಕಳುಹಿಸಿದ್ದರು. ‘ಪ್ರಯೋಗಾಲಯದ ವರದಿಯನ್ನು ನಾವು ಸ್ವೀಕರಿಸಿದ್ದು, ಅದು ದನದ ಮಾಂಸವಲ್ಲ ಎನ್ನುವುದು ದೃಢಪಟ್ಟಿದೆ’ ಎಂದು ಪೊಲೀಸರು ಇದೀಗ ಮಾಧ್ಯಮಗಳಿಗೆ ತಿಳಿಸಿದ್ದಾರೆ. ಈ ಹತ್ಯೆಗೆ ಸಂಬಂಧಿಸಿ ಈಗಾಗಲೇ 10 ಮಂದಿಯನ್ನು ಬಂಧಿಸಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿ ಮುಖ್ಯ ಆರೋಪಿಗಳೆಂದು ಗುರುತಿಸಲಾಗಿರುವ ಇನ್ನೂ 10 ಮಂದಿ ತಲೆಮರೆಸಿಕೊಂಡಿದ್ದಾರೆ.
ನಿಜಕ್ಕೂ ಚರ್ಚೆಯಾಗಬೇಕಾದದ್ದು ಮಾಂಸ ಸೇವಿಸಿದ ಕಾರಣಕ್ಕಾಗಿ ಒಬ್ಬ ಕಾರ್ಮಿಕ ನನ್ನು ಬರ್ಬರವಾಗಿ ಕೊಂದು ಹಾಕಿದ್ದು ಎಷ್ಟು ಸರಿ ಎನ್ನುವುದು? ಈ ದೇಶದಲ್ಲಿ ಬೀಫ್ ಸೇವಿಸುವುದು ತಪ್ಪೆ? ಅವರೇನೂ ಅಲ್ಲಿ ಯಾವುದೇ ಪ್ರಾಣಿಯನ್ನು ಅಕ್ರಮವಾಗಿ ಕೊಂದು, ಅದನ್ನು ಅಡುಗೆ ಮಾಡಿ ತಿಂದಿರಲಿಲ್ಲ. ಹೊರಗಿನಿಂದ ಮಾಂಸ ತಂದು ಬೇಯಿಸಿ ಅದನ್ನು ಸೇವಿಸಿದ್ದಾರೆ. ಈ ದೇಶದಲ್ಲಿ ಆಹಾರದಭಾಗವಾಗಿ ಬೀಫ್ ಸೇವಿಸುವುದು ಅಪರಾಧವಲ್ಲ. ಆದರೂ ಪೊಲೀಸರು ಚರ್ಚೆಯನ್ನು, ತಿಂದಿರುವುದು ಗೋಮಾಂಸವೋ ಅಲ್ಲವೋ ಎನ್ನುವುದರ ಕಡೆಗೆ ತಿರುಗಿಸಿದ್ದಾರೆ. ಇದೀಗ ಮಾಂಸ ಬೀಫ್ ಅಲ್ಲದೇ ಇರುವುದರಿಂದ ಆರೋಪಿಗಳು ಎಸಗಿರುವುದು ತಪ್ಪು ಎಂದು ಪರೋಕ್ಷವಾಗಿ ಹೇಳುತ್ತಿದ್ದಾರೆ. ಒಂದು ವೇಳೆ ಮಾಂಸ ಬೀಫ್ ಆಗಿದ್ದಿದ್ದರೆ ಕೊಲೆಗಾರರು ಎಸಗಿರುವುದು ಸರಿಯಾಗಿ ಬಿಡುತ್ತಿತ್ತೇ? ಪೊಲೀಸರ ಸಮಸ್ಯೆ ಇನ್ನೂ ಪೂರ್ತಿಯಾಗಿ ಪರಿಹಾರವಾಗಿಲ್ಲ. ಯಾಕೆಂದರೆ, ತಿಂದಿರುವುದು ಬೀಫ್ ಅಲ್ಲದೇ ಇರಬಹುದು. ಆದರೆ ದುಷ್ಕರ್ಮಿಗಳು ಕೊಂದಿರುವುದು ‘ಮುಸ್ಲಿಮ್ ಸಮುದಾಯಕ್ಕೆ ಸೇರಿದ ಕಾರ್ಮಿಕರನ್ನೋ ಅಥವಾ ಬೇರೆಯವರನ್ನೋ’ ಎನ್ನುವುದು ಕೂಡ ಸದ್ಯದ ದಿನಗಳಲ್ಲಿ ಬಹಳ ಮುಖ್ಯವಾಗುತ್ತದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ತನಿಖೆ ನಡೆದು, ‘ಕೊಲೆಯಾದ ಸಂತ್ರಸ್ತ ಮುಸ್ಲಿಮನಾಗಿರಲಿಲ್ಲ’ ಎನ್ನುವುದು ಕೂಡ ಪೊಲೀಸರ ತನಿಖೆಯಿಂದ ಬಹಿರಂಗವಾಗಬಹುದು. ಆಗಲೂ ಆರೋಪಿಗಳು ಪೊಲೀಸರ ದೃಷ್ಟಿಯಿಂದ ಅಮಾಯಕರಾಗುವ ಸಾಧ್ಯತೆಗಳನ್ನು ಪೂರ್ತಿಯಾಗಿ ನಿರಾಕರಿಸಲಾಗುವುದಿಲ್ಲ. ‘‘ಶಂಕಿತ ಬೀಫ್ ಸೇವಿಸಿದ ಕಾರ್ಮಿಕ ಮುಸ್ಲಿಮನೆಂದು ತಪ್ಪು ತಿಳಿದು ಆರೋಪಿಗಳು ಕೊಂದಿದ್ದಾರೆ’’ ಎಂದು ಪತ್ರಿಕಾ ಹೇಳಿಕೆ ನೀಡುವ ದಿನಗಳು ದೂರವಿಲ್ಲ.
ಇತ್ತೀಚೆಗೆ ಹರ್ಯಾಣದ ಫರೀದಾಬಾದ್ನಲ್ಲಿ ನಕಲಿ ಗೋರಕ್ಷಕರೆಂದು ಗುರುತಿಸಿಕೊಂಡಿದ್ದ ದುಷ್ಕರ್ಮಿಗಳು ಕಾರೊಂದನ್ನು ಬೆನ್ನಟ್ಟಿ ವಿದ್ಯಾರ್ಥಿಯೊಬ್ಬನನ್ನು ಗುಂಡಿಟ್ಟು ಕೊಂದಿದ್ದರು. ಆದರೆ ಬಳಿಕ ಕೊಲೆಯಾದಾತನ ಹೆಸರು ‘ಆರ್ಯನ್ ಮಿಶ್ರಾ’ ಎನ್ನುವುದು ಬೆಳಕಿಗೆ ಬಂತು. ಈ ಸಂದರ್ಭದಲ್ಲಿ ‘‘ಕಾರಿನಲ್ಲಿದ್ದಾತ ಮುಸ್ಲಿಮ್ ಎಂದು ತಿಳಿದು ಗುಂಡು ಹಾರಿಸಿದ್ದೆ’’ ಎಂದು ಕೊಲೆ ಆರೋಪಿ ಪಶ್ಚಾತ್ತಾಪ ಪಟ್ಟಿದ್ದನಂತೆ. ಅವನ ಪ್ರಕಾರ, ಅಲ್ಲಿ ಮಿಶ್ರಾ ಬದಲಿಗೆ, ಶರೀಫ್ ಇದ್ದಿದ್ದರೆ ಅವನು ಮಾಡಿರುವುದು ಸರಿ. ಕಾರಿನಲ್ಲಿ ಗೋಮಾಂಸ ಅಥವಾ ಗೋವುಗಳು ಇರುವುದು ಅವರಿಗೆ ಮುಖ್ಯವಲ್ಲ. ಆ ಕಾರಿನಲ್ಲಿರುವವನ ಹೆಸರು ಒಂದು ನಿರ್ದಿಷ್ಟ ಸಮುದಾಯಕ್ಕೆ ಸೇರಿದ್ದರೆ ಆತ ಮಾಡಿರುವ ಕೃತ್ಯ ಸಕ್ರಮವಾಗಿ ಬಿಡುತ್ತದೆ. ಪಶ್ಚಾತ್ತಾಪ ಪಡುವ ಅಗತ್ಯವೂ ಇರುವುದಿಲ್ಲ. ಈ ಘಟನೆಯಲ್ಲಿ ಮೃತನ ಹೆಸರು ಆರ್ಯನ್ ಮಿಶ್ರಾ ಇದ್ದ ಕಾರಣಕ್ಕೇ ಆರೋಪಿಗಳನ್ನು ತಕ್ಷಣವೇ ಬಂಧಿಸಿ ಅವರ ಮೇಲೆ ಪ್ರಕರಣವನ್ನು ದಾಖಲಿಸಲಾಯಿತು. ಒಂದು ವೇಳೆ ಆತ ಬೇರೆ ಧರ್ಮಕ್ಕೆ ಸೇರಿದವನಾಗಿದ್ದರೆ, ಪೊಲೀಸರು ಇಷ್ಟೊಂದು ಆಸಕ್ತಿಯಿಂದ ಆರೋಪಿಗಳ ಮೇಲೆ ಕ್ರಮ ತೆಗೆದುಕೊಳ್ಳುತ್ತಿರಲಿಲ್ಲವೇನೋ?.
ಕಾರ್ಮಿಕ ಮಾಂಸ ಸೇವಿಸಿದ ಪ್ರಕರಣವೂ ಇದಕ್ಕಿಂತ ಭಿನ್ನವಾಗಿಯೇನೂ ಇಲ್ಲ. ಕಾರ್ಮಿಕ ಮುಸ್ಲಿಮ್ ಸಮುದಾಯಕ್ಕೆ ಸೇರಿದವನಾಗಿರುವುದರಿಂದ ಅವನು ಯಾವ ಮಾಂಸ ಸೇವಿಸಿದರೂ ದುಷ್ಕರ್ಮಿಗಳ ಪಾಲಿಗೆ ಅದು ಬೀಫ್ ಮಾತ್ರ ಆಗಿರುತ್ತದೆ. ಯಾಕೆಂದರೆ ಅವರಿಗೆ ಅವರು ಏನನ್ನು ಸೇವಿಸಿದ್ದಾರೆ ಎನ್ನುವುದಲ್ಲ, ಸೇವಿಸಿದವರು ಯಾವ ಧರ್ಮಕ್ಕೆ ಸೇರಿದ್ದಾರೆ ಎನ್ನುವುದು ಮುಖ್ಯವಾಗಿರುತ್ತದೆ. ಜೋಪಡ ಪಟ್ಟಿಯಲ್ಲಿ ಮನುಷ್ಯರು ಹೊಟ್ಟೆ ತುಂಬಾ ಊಟ ಮಾಡುವುದೇ ದೊಡ್ಡ ವಿಷಯ. ಹೀಗಿರುವಾಗ, ಅವರು ತಿಂದ ಮಾಂಸ ಯಾವ ಪ್ರಾಣಿಯದ್ದು ಎಂದು ತನಿಖೆ ನಡೆಸಿ, ‘ಬೀಫ್ ತಿಂದಿಲ್ಲ’ ಎಂದು ಮಾಧ್ಯಮಗಳ ಮುಂದೆ ಘೋಷಿಸುವ ಪೊಲೀಸರು ಹೊಟ್ಟೆಗೆ ಅನ್ನ ತಿನ್ನುತ್ತಾರೆ ಎನ್ನುವುದನ್ನು ನಂಬಲು ಸಾಧ್ಯವೆ? ಈ ದೇಶದಲ್ಲಿ ಅಕ್ರಮವಾಗಿ ಜಾನುವಾರುಗಳನ್ನು ಕೊಲ್ಲುವುದು ತಪ್ಪೇ ಹೊರತು, ಗೋಮಾಂಸವನ್ನು ಸೇವಿಸುವುದು ತಪ್ಪು ಎಂದು ಯಾವ ಕಾನೂನೂ ಹೇಳುವುದಿಲ್ಲ. ವಿಪರ್ಯಾಸವೆಂದರೆ, ಈ ದೇಶ ಇಂದಿಗೂ ಗೋಮಾಂಸವನ್ನು ರಫ್ತು ಮಾಡುವುದರಲ್ಲಿ ಅಗ್ರ ಸ್ಥಾನದಲ್ಲಿದೆ. ಬಡ ಕೂಲಿ ಕಾರ್ಮಿಕನನ್ನು ಗೋಮಾಂಸ ಸೇವಿಸಿದ ಆರೋಪದಲ್ಲಿ ಕೊಂದು ಹಾಕುವ ದುಷ್ಕರ್ಮಿಗಳಿಗೆ ಇದು ಗೊತ್ತಿಲ್ಲ ಎಂದಲ್ಲ. ಇಲ್ಲಿ ವಿಷಯ ಗೋಮಾಂಸವಲ್ಲ. ಒಂದು ನಿರ್ದಿಷ್ಟ ಸಮುದಾಯದ ಮೇಲಿರುವ ದ್ವೇಷವೇ ಕೊಲೆಗೆ ಕಾರಣ ಮತ್ತು ಗೋಮಾಂಸದ ಹೆಸರಿನಲ್ಲಿ ನಡೆಯುತ್ತಿರುವ ಎಲ್ಲ ದಾಳಿಗಳೂ ಒಂದು ನಿರ್ದಿಷ್ಟ ಸಮುದಾಯದ ಮೇಲೆ ದಾಳಿ ನಡೆಸಲು ಇರುವ ಕುಂಟು ನೆಪಗಳಷ್ಟೇ.
ಭಾರತದ ಹಸಿವಿನ ಸೂಚ್ಯಂಕ ಅತ್ಯಂತ ಕಳವಳಕಾರಿಯಾಗಿದೆ ಎಂದು ಇತ್ತೀಚಿನ ವರದಿ ಹೇಳುತ್ತಿದೆ. ಅಪೌಷ್ಟಿಕತೆ ಭಾರತದಲ್ಲಿ ಹೆಚ್ಚುತ್ತಿದೆ. ಭಾರತದಲ್ಲಿ 23.4 ಕೋಟಿ ಕಡುಬಡವರಿದ್ದಾರೆ ಎನ್ನುವ ಅಂಶವನ್ನು ವಿಶ್ವಸಂಸ್ಥೆ ಬಹಿರಂಗಪಡಿಸಿದೆ. ಅಪೌಷ್ಟಿಕತೆಯ ಕಾರಣದಿಂದ ಹರಡುವ ಕ್ಷಯದಂತಹ ರೋಗಗಳು ಭಾರತದಲ್ಲಿ ಹೆಚ್ಚುತ್ತಿವೆ. ಇಂದು ಭಾರತ ಚರ್ಚಿಸಬೇಕಾದದ್ದು ಈ ವಿಷಯದ ಕುರಿತಂತೆ. ಭಾರತದಲ್ಲಿ ಹಸಿವಿನ ಕಾರಣದಿಂದ ಸಾಯುತ್ತಿರುವವರ ಸಂಖ್ಯೆಗಳು ಸುದ್ದಿಯಾಗಬೇಕು. ಆದರೆ ದುರದೃಷ್ಟವಶಾತ್, ಹಸಿವನ್ನು ಇಂಗಿಸುವುದಕ್ಕೆ ಆಹಾರ ಸೇವಿಸಿದ ಕಾರಣಕ್ಕೇ ಈ ದೇಶದಲ್ಲಿ ಹತ್ಯೆಗಳು ನಡೆಯುತ್ತಿವೆ. ಉಳಿದೆಲ್ಲ ದೇಶಗಳು ತಮ್ಮ ತಮ್ಮ ಆಹಾರದಲ್ಲಿರುವ ಪೌಷ್ಟಿಕಾಂಶ, ಪ್ರೊಟೀನ್ಗಳನ್ನು ಪರೀಕ್ಷೆ ಮಾಡುತ್ತಿದ್ದರೆ ಭಾರತದಲ್ಲಿ ಸೇವಿಸಿದ ಮಾಂಸ ಗೋಮಾಂಸವೋ ಅಲ್ಲವೋ ಎನ್ನುವ ಪರೀಕ್ಷೆ ನಡೆಯುತ್ತಿದೆ. ಇಲ್ಲಿ ಅನುಪಯುಕ್ತ ಗೋವುಗಳನ್ನು ಸಾಕುವುದಕ್ಕೆ ಗೋಶಾಲೆಗಳಿವೆ ಮತ್ತು ಇವುಗಳಿಗಾಗಿ ಸರಕಾರ ಪ್ರತಿವರ್ಷ ಸಾವಿರಾರು ಕೋಟಿ ರೂಪಾಯಿಯನ್ನು ವೆಚ್ಚ ಮಾಡುತ್ತದೆ. ಇದೇ ಸಂದರ್ಭದಲ್ಲಿ ಕಡುಬಡವರಿಗೆ ನೀಡುವ ಉಚಿತ ಅಕ್ಕಿಯನ್ನು ನೀಡುವ ಬಗ್ಗೆ ಪ್ರಶ್ನೆಗಳು ಏಳುತ್ತವೆ. ಚುನಾವಣೆಯಲ್ಲಿ ಬಡವರಿಗೆ ಉಚಿತಘೋಷಣೆಗಳನ್ನು ಮಾಡಿದರೆ, ನ್ಯಾಯಾಲಯವೇ ನೋಟಿಸ್ ಜಾರಿ ಮಾಡುತ್ತದೆ. ಈ ದೇಶದಲ್ಲಿ ಜಾನುವಾರು ಹತ್ಯೆ ನಿಯಂತ್ರಣ ಕಾಯ್ದೆಗಳನ್ನು ಮಾಡಿರುವುದು ಗೋವುಗಳ ರಕ್ಷಣೆಗಾಗಿ ಅಲ್ಲ. ಬದಲಿಗೆ ಚುನಾವಣೆಯ ಸಂದರ್ಭದಲ್ಲಿ ದ್ವೇಷ ರಾಜಕಾರಣಗಳನ್ನು ಮಾಡಲು ರಾಜಕೀಯ ಪಕ್ಷಗಳಿಗೆ ಸುಲಭವಾಗಲಿ ಎನ್ನುವ ಕಾರಣಕ್ಕೆ. ಜಾನುವಾರು ಹತ್ಯೆ ನಿಯಂತ್ರಣ ಕಾಯ್ದೆಗಳನ್ನು ಹಿಂದೆಗೆಯದೇ ಈ ಅಮಾಯಕರ ಸರಣಿ ಹತ್ಯೆಗಳನ್ನು ತಡೆಯಲು ಸಾಧ್ಯವೇ ಇಲ್ಲ. ಯಾಕೆಂದರೆ, ಈ ಕಾಯ್ದೆ ಅಮಾಯಕರ ಹತ್ಯೆ ನಡೆಸಲು ದುಷ್ಕರ್ಮಿಗಳಿಗೆ ನೀಡಿರುವ ಪರೋಕ್ಷ ಪರವಾನಿಗೆಯಾಗಿದೆ. ದಾದ್ರಿಯಲ್ಲಿ ಕಾರ್ಮಿಕರು ತಿಂದದ್ದು ಗೋಮಾಂಸವಲ್ಲ ಎನ್ನುವುದು ಪ್ರಯೋಗಾಲಯದಲ್ಲಿ ಸಾಬೀತಾಗಿದೆ. ಆದರೆ ದುಷ್ಕರ್ಮಿಗಳು ತಿಂದ ಮನುಷ್ಯನ ಮಾಂಸದ ಬಗ್ಗೆ ಈ ಪ್ರಯೋಗಾಲಯ ಮೌನವಾಗಿದೆ.