ಗೋಡ್ಸೆವಾದಿಗಳನ್ನು ಪೋಷಿಸುತ್ತಾ ಖಾಲಿಸ್ತಾನಿಗಳನ್ನು ಮಟ್ಟ ಹಾಕಲು ಸಾಧ್ಯವೆ?
ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ
ಸುಮಾರು 4,000 ಕೋಟಿ ರೂ.ಗೂ ಅಧಿಕ ವೆಚ್ಚದಲ್ಲಿ ಹಮ್ಮಿಕೊಂಡ ಜಿ 20 ಸಮಾವೇಶದಲ್ಲಿ ಭಾರತದ ಕೆಲವು ಗಂಭೀರ ಸಮಸ್ಯೆಗಳು ಮುನ್ನೆಲೆಗೆ ಬಂದಿದ್ದರೂ ಸಭೆಯ ಉದ್ದೇಶ ಸಾರ್ಥಕವಾಗಿ ಬಿಡುತ್ತಿತ್ತು. ದೇಶದೊಳಗೆ ಎಗ್ಗಿಲ್ಲದೆ ನಡೆಯುತ್ತಿರುವ ಮಾನವ ಹಕ್ಕು ದಮನಗಳು ಈ ಸಂದರ್ಭದಲ್ಲಿ ವಿಶ್ವದ ಗಮನ ಸೆಳೆಯ ಬಹುದು ಎಂದು ಜನರು ನಿರೀಕ್ಷಿಸಿದ್ದರು. ವಿಶ್ವನಾಯಕರು ಜೊತೆಯಾಗಿ ಪತ್ರಿಕಾಗೋಷ್ಠಿ ನಡೆಸುವ ಸಂದರ್ಭದಲ್ಲಾದರೂ ಪ್ರಧಾನಿ ಮೋದಿಯನ್ನು ಮುಖಾಮುಖಿಯಾಗುವ ಭಾಗ್ಯ ಈ ದೇಶದ ಪತ್ರಕರ್ತರಿಗೆ ಸಿಗಬಹುದು ಎಂದು ಭಾವಿಸಲಾಗಿತ್ತು. ಆದರೆ ಅಂತಹ ಯಾವ ಪವಾಡಗಳು ಜಿ 20 ಸಂದರ್ಭದಲ್ಲಿ ನಡೆಯಲಿಲ್ಲ. ಉಕ್ರೇನ್ ವಿರುದ್ಧದ ಯುದ್ಧಕ್ಕೆ ನೀಡಿದ ಆದ್ಯತೆ, ಈ ದೇಶದೊಳಗಿನ ಮೂಲಭೂತವಾದ, ಕೋಮುವಾದಗಳಿಗೆ ವಿಶ್ವ ನಾಯಕರು ನೀಡಲಿಲ್ಲ. ಭಾರತಕ್ಕೂ ಅದು ಇಷ್ಟವಿರಲಿಲ್ಲವೇನೋ. ಆದರೆ ಇವುಗಳ ನಡುವೆಯೂ ಖಾಲಿಸ್ತಾನ್ ಉಗ್ರವಾದಿಗಳಿಗೆ ಆಶ್ರಯ ನೀಡುತ್ತಿರುವ ಕಾರಣಕ್ಕಾಗಿ ಭಾರತವು ಕೆನಡಾದ ಪ್ರಧಾನಿಯನ್ನು ತರಾಟೆಗೆ ತೆಗೆದುಕೊಂಡಿತು ಎನ್ನುವ ಸುದ್ದಿ ಮಾಧ್ಯಮಗಳಲ್ಲಿ ಹರಿದಾಡಿದವು. ‘ಕೆನಡಾ ಪ್ರಧಾನಿಯನ್ನು ಮೋದಿಯವರು ಆತ್ಮೀಯವಾಗಿ ಸ್ವಾಗತಿಸಲಿಲ್ಲ, ಜೊತೆಗೆ ಖಾಲಿಸ್ತಾನಿಗಳಿಗೆ ಆಶ್ರಯ ನೀಡುತ್ತಿರುವುದರ ಬಗ್ಗೆ ಪ್ರಧಾನಿ ಮೋದಿಯವರು ಆತಂಕ ವ್ಯಕ್ತಪಡಿಸಿದ್ದರು. ಇದು ಕೆನಡಾ ಪ್ರಧಾನಿಗೆ ತೀವ್ರ ಇರಿಸು ಮುರಿಸು ಉಂಟು ಮಾಡಿತ್ತು’ ಎಂಬಿತ್ಯಾದಿ ವದಂತಿಗಳು ಮಾಧ್ಯಮಗಳಲ್ಲಿ ಚರ್ಚೆಗೊಳಗಾದವು. ಈ ಬಗ್ಗೆ ಭಾರತ ಯಾವುದೇ ಸ್ಪಷ್ಟ ಹೇಳಿಕೆಯನ್ನು ಈವರೆಗೆ ನೀಡಿಲ್ಲ.
ಖಾಲಿಸ್ತಾನಿ ಉಗ್ರವಾದಿಗಳಿಗೆ ಕೆನಡಾ ಆಶ್ರಯ ನೀಡುತ್ತಿದೆಯಾದರೆ ಅದು ಖಂಡನೀಯ. ಅಷ್ಟೇ ಅಲ್ಲ, ಅದರ ವಿರುದ್ಧ ಭಾರತವು ಕೆನಡಾದ ಜೊತೆಗೆ ಮಾತನಾಡಿದೆ ಎಂದಾದರೆ ಸ್ವಾಗತಾರ್ಹ. ಖಾಲಿಸ್ತಾನಿ ಉಗ್ರವಾದಿಗಳ ಜೊತೆಗೆ ಮೃದು ಧೋರಣೆಯನ್ನು ತಳೆದ ಯುವಕರಿಗೆ, ಕೆಲವು ಸಂಘಟನೆಗಳಿಗೆ ಕೆನಡಾ ಹಲವು ವರ್ಷಗಳಿಂದ ಆಶ್ರಯ ನೀಡಿರುವುದು ಸುಳ್ಳಲ್ಲ ಮತ್ತು ಇದನ್ನು ಕೆನಡಾ ಪ್ರಧಾನಿ ‘ನಮ್ಮ ಆಂತರಿಕ ವಿಷಯ’ ಎಂದು ಸಮರ್ಥಿಸಿಕೊಳ್ಳುತ್ತಾ ಬಂದಿದ್ದಾರೆ. ಆದುದರಿಂದ ಕೆನಡಾವನ್ನು ಭಾರತ ಖಂಡಿಸುವುದು ಅತ್ಯಗತ್ಯ. ಉಗ್ರವಾದಿಗಳಿಗೆ ಆಶ್ರಯ ನೀಡುತ್ತಿರುವುದರ ವಿರುದ್ಧ ಜಿ 20 ಸಭೆಯ ಸಂದರ್ಭದಲ್ಲಿ ಭಾರತಕ್ಕೆ ಕೆನಡಾದ ಜೊತೆಗೆ ಮಾತನಾಡಲು ಸಾಧ್ಯವಾಗುತ್ತದೆ ಎಂದಾದರೆ ಉಳಿದ ದೇಶಗಳು ಕೂಡ ಭಾರತದಲ್ಲಿ ಬೆಳೆಯುತ್ತಿರುವ ಧಾರ್ಮಿಕ ಉಗ್ರ ವಾದಗಳ ಕುರಿತು ತಮ್ಮ ಆತಂಕ ವ್ಯಕ್ತಪಡಿಸಬಹುದಾಗಿದೆ. ‘‘ಭಾರತದಲ್ಲಿ ಪ್ರಜಾಪ್ರಭುತ್ವ ಅಪಾಯದಲ್ಲಿದೆ’’ ಎನ್ನುವುದು ಈಗಾಗಲೇ ಪ್ರಧಾನಿ ಮೋದಿಯ ಉಪಸ್ಥಿತಿಯ ಸಂದರ್ಭದಲ್ಲೇ ಅಮೆರಿಕದಲ್ಲಿ ಚರ್ಚೆಯಾಗಿದೆ. ಅಮೆರಿಕದ ಮಾಜಿ ಅಧ್ಯಕ್ಷ ಬರಾಕ್ ಒಬಾಮ ಕೂಡ ಭಾರತದಲ್ಲಿ ಹೆಚ್ಚುತ್ತಿರುವ ಮಾನವ ಹಕ್ಕು ದಮನಗಳ ವಿರುದ್ಧ ತಮ್ಮ ಆತಂಕವನ್ನು ವ್ಯಕ್ತಪಡಿಸಿದ್ದಾರೆ. ಅಮೆರಿಕದ ನಾಯಕರ ಆತಂಕಕ್ಕೆ ಭಾರತ ಸರಕಾರ ತೀಕ್ಷ್ಣವಾಗಿ ಪ್ರತಿಕ್ರಿಯಿಸಿತ್ತು. ‘‘ಪ್ರಜಾಪ್ರಭುತ್ವದ ಕುರಿತಂತೆ ಭಾರತಕ್ಕೆ ಉಪದೇಶ ನೀಡುವ ಅಗತ್ಯವಿಲ್ಲ’’ ಎಂದು ಕಿಡಿ ಕಾರಿತ್ತು. ಭಾರತದಲ್ಲಿ ಬೆಳೆಯುತ್ತಿರುವ ಉಗ್ರ ವಾದವನ್ನು ಪ್ರಶ್ನಿಸುವುದು ಭಾರತದ ಆಂತರಿಕ ವಿಷಯದಲ್ಲಿ ಹಸ್ತಕ್ಷೇಪ ಎಂದು ಸರಕಾರ ಭಾವಿಸುವುದಾದರೆ, ಇತರ ದೇಶಗಳಲ್ಲಿ ತಲೆಯೆತ್ತುತ್ತಿರುವ ಉಗ್ರವಾದದ ಕುರಿತಂತೆ ಭಾರತ ಪ್ರತಿಕ್ರಿಯಿಸುವುದು ಎಷ್ಟು ಸರಿ? ಎನ್ನುವ ಪ್ರಶ್ನೆ ಉದ್ಭವಿಸುತ್ತದೆ.
ಖಾಲಿಸ್ತಾನಿಗಳ ಮೇಲಿರುವ ಆರೋಪ ಅವರು ಪಂಜಾಬನ್ನು ‘ಪ್ರತ್ಯೇಕ ಸಿಖ್ ರಾಷ್ಟ್ರ’ವಾಗಿಸಲು ಹೊರಟಿದ್ದಾರೆ ಎನ್ನುವುದು. ಇದು ದೇಶದ್ರೋಹ ಎನ್ನುವುದರಲ್ಲಿ ಎರಡು ಮಾತಿಲ್ಲ. ಭಿಂದ್ರನ್ ವಾಲೆ ನೇತೃತ್ವದಲ್ಲಿ ಈ ಹೋರಾಟ ಯಾವ ಹಂತಕ್ಕೆ ತಲುಪಿತು ಮತ್ತು ಯಾವೆಲ್ಲ ದುರಂತಗಳಿಗೆ ಕಾರಣವಾಯಿತು ಎನ್ನುವ ರಕ್ತಸಿಕ್ತ ಇತಿಹಾಸ ನಮ್ಮ ಮುಂದಿದೆ. ಭಿಂದ್ರನ್ ವಾಲೆ ಸಾವಿನೊಂದಿಗೆ ತಣ್ಣಗಾಗಿದ್ದ ಪ್ರತ್ಯೇಕತಾವಾದ ಮತ್ತೆ ಪಂಜಾಬ್‌ನಲ್ಲಿ ಮೊಳಕೆವೊಡೆದಿದೆ. ಇದನ್ನು ಚಿಗುರಲ್ಲೇ ಚಿವುಟದಿದ್ದರೆ ಇನ್ನೊಂದು ಮಹಾ ದುರಂತಕ್ಕೆ ಕಾರಣವಾದೀತು. ಆದರೆ ಈ ದೇಶದಲ್ಲಿ ಖಾಲಿಸ್ತಾನಿಗಳು ಮತ್ತೆ ತಲೆಯೆತ್ತುವುದಕ್ಕೆ ಸರಕಾರದ ಕೊಡುಗೆಯೇನೂ ಕಡಿಮೆ ಇಲ್ಲ. ಇಂದು ದೇಶಾದ್ಯಂತ ಗೋಡ್ಸೆವಾದಿಗಳ ಗುಂಪು ‘ಹಿಂದೂ ರಾಷ್ಟ್ರ’ದ ಬಗ್ಗೆ ಬಹಿರಂಗವಾಗಿ ಮಾತನಾಡುತ್ತಿದೆ. ಭಾರತವನ್ನು ಹಿಂದೂರಾಷ್ಟ್ರವನ್ನಾಗಿಸುತ್ತೇವೆ ಎನ್ನುವವರ ಜೊತೆಗೆ ಸರಕಾರದೊಳಗಿರುವವರು ಸಾರ್ವಜನಿಕವಾಗಿ ವೇದಿಕೆಯನ್ನು ಹಂಚಿಕೊಳ್ಳುತ್ತಿದ್ದಾರೆ. ಪಂಜಾಬನ್ನು ಪ್ರತ್ಯೇಕ ಸಿಖ್ ದೇಶವನ್ನಾಗಿಸುತ್ತೇವೆ ಎನ್ನುವುದು ದೇಶದ್ರೋಹವಾದರೆ, ಇಡೀ ದೇಶವನ್ನು ಹಿಂದೂರಾಷ್ಟ್ರವನ್ನಾಗಿಸುತ್ತೇವೆ ಎಂದು ಹೇಳುವುದು ಕೂಡ ದೇಶದ್ರೋಹವೇ ಅಲ್ಲವೆ? ಒಂದೆಡೆ ಸರಕಾರವೇ ದೇಶದೊಳಗೆ ದೇಶದ್ರೋಹಿಗಳಿಗೆ ಕುಮ್ಮಕ್ಕು ನೀಡುತ್ತಾ, ದೂರದ ಕೆನಡಾ ದೇಶಕ್ಕೆ ‘ಉಗ್ರವಾದ’ದ ಬಗ್ಗೆ ಉಪದೇಶವನ್ನು ನೀಡುವುದರಿಂದ ಸಮಸ್ಯೆಯನ್ನು ಪರಿಹರಿಸಲು ಸಾಧ್ಯವೆ?
ಇಷ್ಟಕ್ಕೂ ಈ ದೇಶದಲ್ಲಿ ಸತ್ತು ಹೋಗಿರುವ ಭಿಂದ್ರನ್‌ವಾಲೆ, ಅಫ್ಝಲ್‌ಗುರು ಮೊದಲಾದ ಉಗ್ರರನ್ನು ಎಬ್ಬಿಸುವ ಕೆಲಸವನ್ನು ಮಾಡುತ್ತಿರುವವರು ಯಾರು? ಪ್ರತ್ಯೇಕ ಹಿಂದೂರಾಷ್ಟ್ರವನ್ನು ಪ್ರತಿಪಾದಿಸುತ್ತಾ ಗಾಂಧೀಜಿಯನ್ನು ಕೊಂದು ಗಲ್ಲಿಗೇರಿದ ಸ್ವಾತಂತ್ರ್ಯೋತ್ತರ ಭಾರತದ ಪ್ರಪ್ರಥಮ ಭಯೋತ್ಪಾದಕ ನಾಥೂರಾಂ ಗೋಡ್ಸೆಗೆ ಮರು ಜೀವ ಕೊಡುವ ಶಕ್ತಿಗಳು ಒಂದನ್ನು ಸ್ಪಷ್ಟವಾಗಿ ತಿಳಿದುಕೊಳ್ಳಬೇಕು. ಗೋಡ್ಸೆಗೆ ಜೀವ ನೀಡುವಾಗ ಆತನ ಜೊತೆ ಜೊತೆಗೆ ಖಾಲಿಸ್ತಾನ್ ವಾದಿ ಭಿಂದ್ರನ್ ವಾಲೆ, ಕಾಶ್ಮೀರದ ಪ್ರತ್ಯೇಕತಾವಾದಿ ಅಫ್ಝಲ್‌ಗುರುವಿನಂತಹ ಉಗ್ರರೂ ಜೀವ ಪಡೆಯುತ್ತಾರೆ. ಗೋಡ್ಸೆವಾದಿಗಳನ್ನು ಸಮರ್ಥಿಸುತ್ತಾ ಖಾಲಿಸ್ತಾನ್‌ವಾದಿಗಳನ್ನು ಖಂಡಿಸುವುದಕ್ಕೆ ಸಾಧ್ಯವಿಲ್ಲ. ದೇಶದ ಹಿತಾಸಕ್ತಿಗಾಗಿ ಇವೆರಡನ್ನೂ ಸಮಾನವಾಗಿ ಖಂಡಿಸಬೇಕು. ಆದರೆ ದುರದೃಷ್ಟವಶಾತ್, ಉಗ್ರವಾದದ ಆರೋಪವನ್ನು ಹೊತ್ತ ಮಹಿಳೆಯೊಬ್ಬಳಿಗೆ ಪಕ್ಷದಿಂದ ಟಿಕೆಟ್ ನೀಡಿ, ಆಕೆಗೆ ಸಂಸತ್ತಿನ ಆಶ್ರಯ ನೀಡಿದ ಸರಕಾರವೇ ಜಾಗತಿಕ ಭಯೋತ್ಪಾದನೆಗಳ ಬಗ್ಗೆ ತನ್ನ ಆತಂಕವನ್ನು ವ್ಯಕ್ತಪಡಿಸುತ್ತಿದೆ.
ಇದೇ ಸಂದರ್ಭದಲ್ಲಿ, ‘ಹೊಸದಿಲ್ಲಿಯಲ್ಲಿ ನಡೆದ ಜಿ ೨೦ ಶೃಂಗಸಭೆಯ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿಯ ಜೊತೆಗೆ, ಪತ್ರಿಕಾ ಸ್ವಾತಂತ್ರ್ಯ ಮತ್ತು ಮಾನವ ಹಕ್ಕುಗಳನ್ನು ಗೌರವಿಸುವ ವಿಷಯವನ್ನು ಚರ್ಚಿಸಿದ್ದೇನೆ’ ಎಂದು ಜೋ ಬೈಡನ್ ತಿಳಿಸಿದ್ದಾರೆ. ಆದರೆ ಸರಕಾರ ಈ ಬಗ್ಗೆ ಯಾವುದೇ ಸ್ಪಷ್ಟೀಕರಣ ಅಥವಾ ಪ್ರತಿ ಹೇಳಿಕೆಗಳನ್ನು ನೀಡಿಲ್ಲ. ಖಾಲಿಸ್ತಾನಿಗಳಿಗೆ ಆಶ್ರಯ ನೀಡುವುದರ ಬಗ್ಗೆ ಭಾರತ ಕೆನಡಾದ ಜೊತೆಗೆ ಮಾತನಾಡಿರುವುದು ಎಷ್ಟು ಮುಖ್ಯವೋ, ಭಾರತದಲ್ಲಿ ನಡೆಯುತ್ತಿರುವ ಮಾನವಹಕ್ಕು ದಮನಗಳ ಬಗ್ಗೆ ಅಮೆರಿಕ ಮಾಡಿರುವ ಪ್ರಸ್ತಾಪವೂ ಅಷ್ಟೇ ಮುಖ್ಯ. ಇದರ ಜೊತೆಜೊತೆಗೆ ‘ಭಾರತದಲ್ಲಿ ಧಾರ್ಮಿಕ ಸ್ವಾತಂತ್ರ್ಯದ ಕುರಿತು ಮುಂದಿನ ವಾರ ವಿಚಾರಣೆ ನಡೆಸುವುದಾಗಿ’ ಅಂತರ್‌ರಾಷ್ಟ್ರೀಯ ಧಾರ್ಮಿಕ ಸ್ವಾತಂತ್ರ್ಯಕ್ಕಾಗಿನ ಅಮೆರಿಕದ ಸಮಿತಿ (ಯುಎಸ್‌ಸಿಐಆರ್‌ಎಫ್) ಘೋಷಿಸಿದೆ. ಮತಾಂತರ ವಿರೋಧಿ ಕಾಯ್ದೆ, ಗೋಹತ್ಯಾ ಕಾಯ್ದೆ, ಎನ್‌ಆರ್‌ಸಿ ಮೊದಲಾದ ಕಾಯ್ದೆಗಳು ಹೇಗೆ ಧಾರ್ಮಿಕ ಹಕ್ಕುಗಳ ದಮನವನ್ನು ಗುರಿಯಾಗಿಸಿಕೊಂಡಿವೆ ಎನ್ನುವುದರ ಬಗ್ಗೆಯೂ ಸಮಿತಿ ವಿಚಾರಣೆ ನಡೆಸಲಿದೆ. ಭಯೋತ್ಪಾದನೆ ಮತ್ತು ಉಗ್ರವಾದದ ಕುರಿತಂತೆ ಭಾರತದ ದ್ವಂದ್ವ ನಿಲುವಿನಿಂದಾಗಿ ಹೇಗೆ ಜಾಗತಿಕವಾಗಿ ದೇಶ ತನ್ನ ವರ್ಚಸ್ಸನ್ನು ಕಳೆದುಕೊಳ್ಳುತ್ತಿದೆ ಮತ್ತು ಅದು ಇತರ ದೇಶಗಳ ಕಣ್ಗಾವಲಿಗೆ ಒಳಗಾಗುತ್ತಿದೆ ಎನ್ನುವುದನ್ನು ಇದು ಹೇಳುತ್ತಿದೆ. ಭಯೋತ್ಪಾದನೆಯ ಬಗ್ಗೆ ಸರಕಾರ ಇತರ ದೇಶಗಳಿಗೆ ಉಪದೇಶಗಳನ್ನು ನೀಡುವ ಮೊದಲು, ತನ್ನ ಪಾದ ಬುಡದಲ್ಲಿ ಬೆಳೆಯುತ್ತಿರುವ ಉಗ್ರವಾದದ ಬಗ್ಗೆ ಜಾಗೃತವಾಗಬೇಕಾಗಿದೆ. ಭಯೋತ್ಪಾದನೆ, ಉಗ್ರವಾದವನ್ನು ಸಾಕಿ ಬೆಳೆಸಿದ ಪಾಕಿಸ್ತಾನ ಈಗಾಗಲೇ ಅದಕ್ಕೆ ಸಾಕಷ್ಟು ಬೆಲೆ ತೆತ್ತಿದೆ. ಈ ನಿಟ್ಟಿನಲ್ಲಿ ಪಾಕಿಸ್ತಾನದ ದುರಂತ ನಮಗೆ ಪಾಠವಾಗಬೇಕೇ ಹೊರತು, ಮಾದರಿಯಾಗಬಾರದು.