ಪತ್ರಿಕಾ ಧರ್ಮ ಪಾಲಿಸುವುದು ದೇಶದ್ರೋಹದ ಕೃತ್ಯವೆ?
‘ಕತ್ತಿ ಪರದೇಶಿಯಾದರೆ ಮಾತ್ರ ನೋವೆ? ನಮ್ಮವರೇ ಹದ ಹಾಕಿ ತಿವಿದರದು ಹೂವೆ?’ ದೇಶದ್ರೋಹದ ಕಾಯ್ದೆಯ ವಿಷಯದಲ್ಲಿ ಕುವೆಂಪು ಅವರ ಮೇಲಿನ ಸಾಲು ಅಕ್ಷರಶಃ ನಿಜವಾಗಿದೆ. ಬ್ರಿಟಿಷರು ಬಿಟ್ಟು ಹೋದ ದೇಶದ್ರೋಹದ ಕಾಯ್ದೆಯನ್ನು ಬದಲಿಸಿ ಅದಕ್ಕೆ ಸ್ವದೇಶಿ ರೂಪವನ್ನು ಕೊಡಲಾಗಿದೆ. ಪರದೇಶಿಗಳು ಬಿಟ್ಟು ಹೋದ ಕತ್ತಿಯನ್ನು ನಮ್ಮವರೇ ನಮ್ಮವರ ಎದೆಗೆ ಹಾಕಿ ತಿವಿಯುತ್ತಿದ್ದಾರೆ. ಸಾಮಾಜಿಕ ಹೋರಾಟಗಾರರು, ಪತ್ರಕರ್ತರಿಗಾಗಿಯೇ ಈ ದೇಶದ್ರೋಹಿ ಕಾನೂನನ್ನು ಉಳಿಸಿಕೊಳ್ಳಲಾಗಿದೆ ಎನ್ನುವ ಆರೋಪಗಳು ಕೇಳಿ ಬರುತ್ತಿವೆ. ಉಳಿದಂತೆ ದೇಶಕ್ಕೆ ಬಾಂಬಿಟ್ಟ ಆರೋಪಗಳನ್ನು ಎದುರಿಸುತ್ತಿರುವವರಿಗೆ ಚುನಾವಣೆಯಲ್ಲಿ ಟಿಕೆಟ್ ನೀಡಿ ಅವರನ್ನು ಸಂಸತ್‌ನೊಳಗೆ ತಂದು ಕೂರಿಸಲಾಗಿದೆ. ಕಳೆದ ಹತ್ತು ವರ್ಷಗಳಿಂದೀಚೆಗೆ ದೇಶದ್ರೋಹದ ಆರೋಪದಲ್ಲಿ ಬಂಧಿತರಾಗಿರುವ ಪತ್ರಕರ್ತರು, ಸಾಮಾಜಿಕ ಹೋರಾಟಗಾರರ ಸಂಖ್ಯೆ ದೊಡ್ಡದು. ಇದೀಗ ‘ನ್ಯೂಸ್ ಕ್ಲಿಕ್’ ವೆಬ್ ಪೋರ್ಟಲ್ ಸಂಪಾದಕರ ಬಂಧನ ಮತ್ತೆ ‘ದೇಶದ್ರೋಹ’ದ ವ್ಯಾಖ್ಯಾನದ ಚರ್ಚೆಯನ್ನು ಮುನ್ನೆಲೆಗೆ ತಂದಿದೆ.
ಬ್ರಿಟಿಷರ ಕಾಲದಲ್ಲಿ ಅವರ ಸರ್ವಾಧಿಕಾರವನ್ನು, ಶೋಷಣೆಯನ್ನು ಪ್ರಶ್ನಿಸಿದ ಪತ್ರಿಕೆಗಳ ಮೇಲೆ ದೇಶದ್ರೋಹದ ಕಾಯ್ದೆಯನ್ನು ದಾಖಲಿಸಿ ಅವರನ್ನು ಬಂಧಿಸುವುದು ಸಹಜವಾಗಿತ್ತು. ಯಾಕೆಂದರೆ, ಬ್ರಿಟಿಷ್ ಸರಕಾರ ಭಾರತದ ಜನರನ್ನು ಪ್ರತಿನಿಧಿಸುತ್ತಿರಲಿಲ್ಲ. ಅದು ದೂರದ ಇಂಗ್ಲೆಂಡ್ ರಾಣಿಯನ್ನು ಪ್ರತಿನಿಧಿಸುತ್ತಿತ್ತು. ಆದರೆ ಕಳೆದ ಹತ್ತು ವರ್ಷಗಳಿಂದ ನಾವೇ ಆರಿಸಿದ ನಮ್ಮದೇ ಸರಕಾರದ ಭ್ರಷ್ಟಾಚಾರಗಳನ್ನು, ಜನವಿರೋಧಿ ನೀತಿಗಳನ್ನು ಪ್ರಶ್ನಿಸಿದರೆ ಅದನ್ನು ದೇಶದ ವಿರುದ್ಧ ನಡೆಸುವ ಸಂಚು ಎಂದು ಭಾವಿಸಿ ಪ್ರಶ್ನಿಸಿದವರ ಮೇಲೆ ಮೊಕದ್ದಮೆಗಳನ್ನು ದಾಖಲಿಸಲಾಗುತ್ತಿದೆ. ತಾವೇ ಆರಿಸಿದ ಸರಕಾರದ ಅಕ್ರಮಗಳನ್ನು ಪ್ರಶ್ನಿಸುವ ಹಕ್ಕುಗಳನ್ನು ದೇಶದ್ರೋಹ ಕಾನೂನನ್ನು ಮುಂದಿಟ್ಟು ಕಿತ್ತುಕೊಳ್ಳುವ ಪ್ರಯತ್ನ ನಡೆಯುತ್ತಿದೆ. ಸರಕಾರೇತರ ಸಂಸ್ಥೆಗಳು ವಿದೇಶಗಳಿಂದ ದುಡ್ಡು ಪಡೆದುಕೊಂಡು ದೇಶದ ಅಭಿವೃದ್ಧಿಗೆ ಅಡ್ಡಗಾಲು ಹಾಕುತ್ತಿವೆ ಎಂದು ಮೊದಲು ಆರೋಪಿಸಿ ಹಲವು ಪರಿಸರ ಪರ ಸಂಘಟನೆಗಳ ಮೇಲೆ ಸರಕಾರ ದಾಳಿ ನಡೆಸಿತು. ಅವುಗಳಿಗೆ ಬರುವ ವಿದೇಶಿ ನೆರವುಗಳಿಗೆ ಕಾನೂನುಗಳ ತೊಡಕು ತಂದು ಕಾರ್ಯಾಚರಿಸದಂತೆ ನೋಡಿಕೊಂಡಿತು. ಕಾರ್ಪೊರೇಟ್ ಪರವಾದ ನೀತಿಗಳನ್ನು ಜಾರಿಗೊಳಿಸುವ ಮೊದಲು, ಜನರನ್ನು ಜಾಗೃತಗೊಳಿಸುವ ಇಂತಹ ಸರಕಾರೇತರಸಂಸ್ಥೆಗಳ ಕಾರ್ಯಕರ್ತರನ್ನು ಹಂತಹಂತವಾಗಿ ಮಟ್ಟ ಹಾಕಿತು.
ಇದರ ಬೆನ್ನಿಗೇ ಹಲವು ಸಾಮಾಜಿಕ ಕಾರ್ಯಕರ್ತರನ್ನು ದೇಶದ್ರೋಹದ ಹೆಸರಿನಲ್ಲಿ ಬಂಧಿಸಿತು. ಇವರ ತಲೆಗೆ ಅರ್ಬನ್ ನಕ್ಸಲ್ ಎನ್ನುವ ಮುಳ್ಳಿನ ಕಿರೀಟವನ್ನು ಇಟ್ಟಿತು. ಪ್ರಧಾನಿ ಮೋದಿ ಹತ್ಯೆ ಸಂಚಿನ ಆರೋಪವನ್ನೂ ಈ ಕಾರ್ಯಕರ್ತರ ಮೇಲೆ ಹೊರಿಸಲಾಗಿದೆ. ಹತ್ಯೆ ಕುರಿತಂತೆ ಈಮೇಲ್‌ಗಳಲ್ಲಿ ಸಂದೇಶಗಳನ್ನು ಕಳುಹಿಸಿದ್ದಾರೆ ಎನ್ನುವ ಆರೋಪಗಳನ್ನೂ ಮಾಡಿದೆ. ಆದರೆ ಸಾಮಾಜಿಕ ಕಾರ್ಯಕರ್ತರ ಈಮೇಲ್‌ಗಳ ಡೇಟಾಗಳನ್ನು ತಿರುಚಲಾಗಿದೆ ಎನ್ನುವ ಅಂಶಗಳನ್ನು ಬಳಿಕ ಮಾಧ್ಯಮಗಳು ಬಹಿರಂಗಪಡಿಸಿದವು. ‘ನ್ಯೂಸ್ ಕ್ಲಿಕ್’ ಮೇಲೆ ದಾಳಿ ನಡೆಸುವ ಸಂದರ್ಭದಲ್ಲೂ ಇದೇ ತಂತ್ರವನ್ನು ಸರಕಾರ ನೆಚ್ಚಿಕೊಂಡಿದೆ. ಸದ್ಯಕ್ಕೆ ನ್ಯೂಸ್ ಕ್ಲಿಕ್ ಮೇಲಿನ ಅತಿ ದೊಡ್ಡ ಆರೋಪ, ಅದು ಚೀನಾದಿಂದ ದೇಣಿಗೆಯನ್ನು ಸ್ವೀಕರಿಸಿದೆ ಎನ್ನುವುದು. ಎರಡನೆಯದಾಗಿ, ಕಾಶ್ಮೀರ ಮತ್ತು ಅರುಣಾಚಲ ಪ್ರದೇಶ ಭಾರತದ ಭಾಗವಲ್ಲ ಎಂದು ಬಿಂಬಿಸಲು ಅಮೆರಿಕದ ಉದ್ಯಮಿಯ ಜೊತೆಗೆ ಈಮೇಲ್ ವ್ಯವಹಾರ ನಡೆಸಿದೆ ಎಂದು ಆರೋಪ ಹೊರಿಸಲಾಗಿದೆ. ಆದರೆ ಅದಕ್ಕೆ ಪೂರಕವಾಗಿರುವ ಯಾವುದೇ ದಾಖಲೆಗಳು ಬಹಿರಂಗವಾಗಿಲ್ಲ. ನ್ಯೂಯಾರ್ಕ್ ಟೈಮ್ಸ್‌ನಲ್ಲಿ ಕಳೆದ ಆಗಸ್ಟ್‌ನಲ್ಲಿ ಪ್ರಕಟವಾದ ಒಂದು ವರದಿಯನ್ನು ತಮ್ಮ ದಾಳಿಗೆ ಪೊಲೀಸರು ಪೂರಕವಾಗಿ ಬಳಸಿಕೊಂಡಿದ್ದಾರೆ. ತಮ್ಮ ವಿರುದ್ಧದ ಆರೋಪಗಳನ್ನು ಸಾಬೀತು ಪಡಿಸಲು ಕೇಂದ್ರ ಸರಕಾರ ವಿಫಲವಾಗಿದೆ ಎಂದು ನ್ಯೂಸ್ ಕ್ಲಿಕ್ ಸುದ್ದಿ ಜಾಲ ತಾಣ ಬುಧವಾರ ಸ್ಪಷ್ಟಪಡಿಸಿದೆ. ಬರೇ ಅನುಮಾನ, ಶಂಕೆಗಳನ್ನು ಮುಂದಿಟ್ಟುಕೊಂಡು ನ್ಯೂಸ್ ಕ್ಲಿಕ್‌ನ ಮುಖ್ಯಸ್ಥರಾಗಿರುವ ಪುರಕಾಯಸ್ಥ ಮತ್ತು ಅಮಿತ್ ಚಕ್ರವರ್ತಿ ಅವರನ್ನು ಬಂಧಿಸಲಾಗಿದೆ ಎಂದು ಅದು ಆರೋಪಿಸಿದೆ. ಮುಖ್ಯಸಂಪಾದಕ ಪುರಕಾಯಸ್ಥಗೆ ಏಳು ದಿನಗಳ ಪೊಲೀಸ್ ಕಸ್ಟಡಿಯನ್ನು ನೀಡಲಾಗಿದೆ. ದೇಶದ್ರೋಹದ ಹೆಸರಿನಲ್ಲಿ ಈ ಹಿಂದೆ ಬಂಧಿಸಲ್ಪಟ್ಟ ಸಾಮಾಜಿಕ ಕಾರ್ಯಕರ್ತರು ಮತ್ತು ಪತ್ರಕರ್ತರ ಗತಿಯನ್ನು ನೋಡಿದವರಿಗೆ ಇದು ಅರ್ಥವಾಗಿ ಬಿಡುತ್ತದೆ. ವಿಚಾರಣೆಯ ಹೆಸರಿನಲ್ಲಿ ಪತ್ರಕರ್ತರನ್ನು ಜೈಲಿನೊಳಗಿಟ್ಟು ಮಾನಸಿಕವಾಗಿ ದೌರ್ಜನ್ಯಕ್ಕೀಡು ಮಾಡುವುದೇ ಈ ದಾಳಿಯ ಅಂತಿಮ ಗುರಿ. ೪ ಲಕ್ಷಕ್ಕೂ ಅಧಿಕ ಈಮೇಲ್‌ಗಳನ್ನು ತನಿಖೆ ಮಾಡಬೇಕಾಗಿದೆ ಎಂದು ಪೊಲೀಸರು ಹೇಳುತ್ತಿದ್ದಾರೆ. ಇದರ ಅರ್ಥ, ತನಿಖೆ, ವಿಚಾರಣೆಯ ಹೆಸರಿನಲ್ಲಿ ಪತ್ರಕರ್ತರನ್ನು ಜೈಲಿನಲ್ಲಿಟ್ಟು ಕೊಳೆಸುವುದು. ತಮ್ಮ ನಿರಪರಾಧಿತ್ವವನ್ನು ಪತ್ರಕರ್ತರು ಸಾಬೀತು ಪಡಿಸಿ ಬಿಡುಗಡೆಗೊಳ್ಳುವ ಹೊತ್ತಿಗೆ ಅವರು ತಾವು ಮಾಡದ ತಪ್ಪಿಗೆ ಶಿಕ್ಷೆ ಅನುಭವಿಸಿ ಮುಗಿದಿರುತ್ತದೆ.
ತಮಾಷೆಯೆಂದರೆ, ನ್ಯೂಸ್ ಕ್ಲಿಕ್ ದೇಶದ್ರೋಹ ಕೃತ್ಯಗಳಲ್ಲಿ ಇನ್ನೂ ಹಲವು ವಿಷಯಗಳು ಸೇರಿಕೊಂಡಿವೆ. ಅದರಲ್ಲಿ, ೨೦೧೯ರ ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಚುನಾವಣೆಯ ಪ್ರಕ್ರಿಯೆಯನ್ನೇ ಅದು ನಾಶಪಡಿಸುವುದಕ್ಕೆ ಯತ್ನಿಸಿತ್ತಂತೆ. ಈ ಚುನಾವಣೆಯ ಸಂದರ್ಭದಲ್ಲಿ ಕೇಂದ್ರ ಸರಕಾರದ ಜನವಿರೋಧಿ ಕೃತ್ಯಗಳ ಕುರಿತ ಹತ್ತು ಹಲವು ವಿಶೇಷ ವರದಿಗಳನ್ನು ವೆಬ್‌ಸೈಟ್ ಪ್ರಕಟಿಸಿತ್ತು. ಇವೆಲ್ಲವೂ ಪೊಲೀಸರ ಪಾಲಿಗೆ ಚುನಾವಣಾ ಪ್ರಕ್ರಿಯೆಯನ್ನು ನಾಶಪಡಿಸುವ ಸಂಚಿನಂತೆ ಕಂಡು ಬಂದಿದೆ. ಕೊರೋನ ಕಾಲದಲ್ಲಿ ಕೇಂದ್ರ ಸರಕಾರದ ವೈಫಲ್ಯಗಳನ್ನು, ಅಕ್ರಮಗಳನ್ನು ಈ ವೆಬ್‌ಸೈಟ್ ಬಯಲಿಗೆಳೆದಿತ್ತು. ಆದರೆ ಪೊಲೀಸರ ಪಾಲಿಗೆ ಇವೆಲ್ಲವೂ ದೇಶದ್ರೋಹದ ಚಟುವಟಿಕೆಗಳಾಗಿ ಕಂಡಿದೆ. ಕೊರೋನ ಕಾಲದಲ್ಲಿ ಸರಕಾರದ ವೈಫಲ್ಯ ಅಂತರ್‌ರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಾಗಿತ್ತು. ಗಂಗಾನದಿಯಲ್ಲಿ ತೇಲಿದ ನೂರಾರು ಹೆಣಗಳೇ ಸರಕಾರದ ಅಕ್ರಮಗಳನ್ನು ಜಗತ್ತಿಗೆ ಜಾಹೀರುಗೊಳಿಸಿತ್ತು. ನ್ಯೂಸ್ ಕ್ಲಿಕ್ ಇವೆಲ್ಲವನ್ನೂ ವರದಿ ಮಾಡಿರುವುದು ದೇಶದ ಮೇಲಿನ ಪ್ರೀತಿಯಿಂದ. ಈ ವರದಿಗಳ ಆಧಾರದಲ್ಲಿ ಸರಕಾರಿ ಸಂಸ್ಥೆಗಳ ವಿರುದ್ಧ ದಾಳಿ, ತನಿಖೆ ನಡೆಯಬೇಕಾಗಿತ್ತು. ಅಕ್ರಮಗಳಲ್ಲಿ ಪಾಲುದಾರರಾಗಿರುವ ರಾಜಕೀಯ ನಾಯಕರ ಮೇಲೆ ಪ್ರಕರಣ ದಾಖಲಾಗಬೇಕಾಗಿತ್ತು. ದುರದೃಷ್ಟವಶಾತ್ ಸರಕಾರದ ಮುಖದ ವಿಕಾರಗಳನ್ನು ತೋರಿಸಿದ ಕನ್ನಡಿಯೇ ಆರೋಪಿ ಸ್ಥಾನದಲ್ಲಿ ನಿಂತಿದೆ.
ಅದಾನಿ ಸಂಸ್ಥೆಗಳ ವಂಚನೆಯ ಬಗ್ಗೆ ಅಂತರ್‌ರಾಷ್ಟ್ರೀಯ ಮಟ್ಟದಲ್ಲಿ ಆರೋಪಗಳು ಕೇಳಿ ಬಂದಿವೆಯಾದರೂ ಈವರೆಗೆ ಅದರ ಯಾವುದೇ ಸಂಸ್ಥೆಗಳ ಮೇಲೆ ದಾಳಿಗಳು ನಡೆದಿಲ್ಲ. ರಫೇಲ್ ಹಗರಣದ ಕುರಿತಂತೆ ದೇಶದ ಹಿರಿಯ ಪತ್ರಕರ್ತರು ಆರೋಪಗಳನ್ನು ಮಾಡಿದಾಗಲೂ ಒಪ್ಪಂದದಲ್ಲಿ ಭಾಗಿಯಾದ ಅಂಬಾನಿ ಸಂಸ್ಥೆಗಳ ಮೇಲೆ ದಾಳಿಗಳು ನಡೆದಿಲ್ಲ. ಸಾಮಾಜಿಕ ಹೋರಾಟಗಳನ್ನು ನಡೆಸುವ ಸಂಸ್ಥೆಗಳಿಗೆ ವಿದೇಶಿ ಹಣ ಬರುತ್ತವೆ ಎಂದು ಆರೋಪಿಸಿ ಪದೇ ಪದೇ ದಾಳಿಗಳನ್ನು ನಡೆಸುತ್ತಿರುವ ಕೇಂದ್ರ ಸರಕಾರ, ಆರೆಸ್ಸೆಸ್ ಸೇರಿದಂತೆ ಸಂಘಪರಿವಾರದ ವಿವಿಧ ಸಂಘಟನೆಗಳಿಗೆ ಬರುವ ಹಣದ ಮೂಲದ ವಿರುದ್ಧ ಈವರೆಗೆ ಯಾವುದೇ ತನಿಖೆಗಳನ್ನು ಮಾಡಿಲ್ಲ. ಕೇಸರಿ ಭಯೋತ್ಪಾದನೆಗಳು ದೇಶದಲ್ಲಿ ತಲೆಯೆತ್ತಿದ್ದು ಅವುಗಳಿಗೆ ನಿಗೂಢ ರೀತಿಯಲ್ಲಿ ಹಣ ಹರಿದು ಬರುತ್ತಿದೆ ಎನ್ನುವ ಆರೋಪಗಳಿಗೆ ಕೇಂದ್ರ ಸರಕಾರ ಕಿವುಡಾಗಿದೆ. ಅಷ್ಟೇ ಅಲ್ಲ, ಸರಕಾರದೊಳಗಿರುವ ಗಣ್ಯರೇ ಕೇಸರಿ ಸಂಘಟನೆಗಳ ಬೆನ್ನಿಗೆ ನಿಂತಿದ್ದಾರೆ. ಲಡಾಖ್‌ನಲ್ಲಿ ದಾಂಧಲೆಗಳನ್ನು ನಡೆಸುತ್ತಿರುವುದು ನ್ಯೂಸ್‌ಕ್ಲಿಕ್ ಮಾಧ್ಯಮದ ಪತ್ರಕರ್ತರಲ್ಲ, ಚೀನಾ ಸೈನಿಕರು. ಅವರನ್ನು ನಮ್ಮ ಗಡಿಯೊಳಗೆ ಬಿಟ್ಟವರು ಅಪರಾಧಿಗಳೇ ಹೊರತು, ಅದನ್ನು ಬಹಿರಂಗ ಪಡಿಸಿದ ಮಾಧ್ಯಮಗಳಲ್ಲ. ಭೂಪಟಗಳ ವಿಷಯದಲ್ಲಿ ಚೀನಾದ ಕಿಡಿಗೇಡಿತನಗಳಿಗೆ ಸಮರ್ಥವಾಗಿ ಉತ್ತರಿಸಲಾಗದೆ ದೇಶದ ಪುಟ್ಟ ಮಾಧ್ಯಮಗಳ ವಿರುದ್ಧ ಗದೆಯನ್ನು ಬೀಸುವ ಮೂಲಕ ಕೇಂದ್ರ ಸರಕಾರ ಮುಖ ಉಳಿಸಿಕೊಳ್ಳಲು ನೋಡುತ್ತಿದೆ.