ವಿಶ್ವಸಂಸ್ಥೆಯ ಸುಧಾರಣೆ ಸಾಧ್ಯವೇ?
PC: x.com/UN
ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ
ಹಳ್ಳಿಗಳಲ್ಲಿ ಗದ್ದೆಗಳನ್ನು ರಕ್ಷಿಸಲು ಬೆರ್ಚ್ಚಪ್ಪನನ್ನು ನಿಲ್ಲಿಸುವುದು ಸಾಮಾನ್ಯ. ಇವುಗಳಿಗೆ ಬೆದರಿ ಹಕ್ಕಿಗಳು ತಾವಾಗಿ ಸುಳಿಯದೇ ಇದ್ದರೆ ಸರಿ. ಆದರೆ ಹೆಚ್ಚಿನ ಸಂದರ್ಭದಲ್ಲಿ ಈ ಬೆರ್ಚ್ಚಪ್ಪನ ತಲೆಯ ಮೇಲೆಯೇ ಹಕ್ಕಿಗಳು ಬಂದು ಕುಳಿತು ಹಿಕ್ಕೆ ಹಾಕುತ್ತಿರುತ್ತವೆ. ಕೆಟ್ಟ ದೃಷ್ಟಿ ಬೀಳದಿರಲಿ ಎನ್ನುವ ಕಾರಣಕ್ಕೂ ಈ ಬೆರ್ಚ್ಚಪ್ಪಗಳನ್ನು ಬೇರೆ ಬೇರೆ ರೂಪಗಳಲ್ಲಿ ಜನರು ಬಳಸುತ್ತಾ ಬಂದಿದ್ದಾರೆ. ಸದ್ಯಕ್ಕೆ ಜಗತ್ತು ಮೂರನೇ ಮಹಾಯುದ್ಧದ ಕಡೆಗೆ ದಾಪುಗಾಲಿಡುತ್ತಿರುವ ಸಂದರ್ಭದಲ್ಲಿ ವಿಶ್ವಸಂಸ್ಥೆ ಈ ಬೆರ್ಚಪ್ಪನ ಪಾತ್ರಕ್ಕೆ ಸೀಮಿತವಾಗುತ್ತಿರುವುದು ನಿಜಕ್ಕೂ ಆತಂಕಕಾರಿಯಾಗಿದೆ. ಅಮೆರಿಕ ಮತ್ತು ಯುರೋಪ್ ರಾಷ್ಟ್ರಗಳ ಮುಂದೆ ವಿಶ್ವಸಂಸ್ಥೆಯ ಯಾವುದೇ ಎಚ್ಚರಿಕೆಗಳು, ಕಳವಳಗಳು ಬರೇ ಆಕ್ರಂದನದಂತೆ ಕೇಳುತ್ತಿವೆ. ಈ ಕಾರಣದಿಂದಲೇ ವಿಶ್ವ ಸಂಸ್ಥೆಯಲ್ಲಿ ಸುಧಾರಣೆಯಾಗಬೇಕು ಎನ್ನುವ ಕೂಗು ಬಲ ಪಡೆಯುತ್ತಿದೆ.
ಜಾಗತಿಕ ನೆಲೆಯಲ್ಲಿ ಶಾಂತಿ ಮತ್ತು ಭದ್ರತೆಯನ್ನು ಕಾಯ್ದುಕೊಳ್ಳುವ ಮಹೋನ್ನತ ಜವಾಬ್ದಾರಿ ಹೊತ್ತಿರುವ ವಿಶ್ವಸಂಸ್ಥೆಗೆ ತನ್ನ ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸಲು ಸಾಧ್ಯವಾಗುತ್ತಿಲ್ಲ ಎನ್ನುವುದು ಜಗಜ್ಜಾಹೀರಾಗಿದೆ. ಅದಕ್ಕೆ ಬೇಕಾಗುವಷ್ಟು ಸಂಪನ್ಮೂಲವಾಗಲಿ, ಸಾಧನಗಳಾಗಲಿ ಅದರ ಬಳಿ ಇಲ್ಲ ಎನ್ನುವುದು ಅದರ ಸ್ಥಾಪನೆಯ ದಿನದಿಂದಲೇ ಸಾಬೀತಾಗಿದೆ. ಪರಿಣಾಮವಾಗಿ ಅದು ಅಮೆರಿಕದಂತಹ ದೇಶದ ಸಂಪನ್ಮೂಲಗಳನ್ನು ಅವಲಂಬಿತವಾಗಿದೆ. ಈ ಶ್ರೀಮಂತ ದೇಶಗಳ ಮುಂದೆ ವಿಶ್ವಸಂಸ್ಥೆ ಹಲ್ಲಿಲ್ಲದ ಹುಲಿ. ಬರೇ ಘರ್ಜನೆಗಷ್ಟೇ ಸೀಮಿತ. ಉಕ್ರೇನ್ ವಿರುದ್ಧ ರಶ್ಯ ಮಾಡುತ್ತಿರುವ ಯುದ್ಧ, ಅದರಿಂದ ಉದ್ಭವಿಸಿರುವ ಪರಮಾಣು ಉದ್ವಿಗ್ನತೆ ಮತ್ತು ಫೆಲೆಸ್ತೀನ್ ಮೇಲೆ ಇಸ್ರೇಲ್ ನಡೆಸುತ್ತಿರುವ ಭೀಕರ ಬಾಂಬ್ ದಾಳಿಗಳು ವಿಶ್ವಸಂಸ್ಥೆಯ ಮಿತಿಗಳನ್ನು ಮತ್ತೊಮ್ಮೆ ಜಾಹೀರು ಮಾಡಿವೆ.
ಜಾಗತಿಕ ಶಾಂತಿಯನ್ನು ಕಾಯ್ದುಕೊಳ್ಳುವ ಹೊಣೆಯನ್ನು ವಿಶ್ವಸಂಸ್ಥೆಯ ಘಟಕವಾದ ಭದ್ರತಾ ಮಂಡಳಿ ಹೊತ್ತಿದೆ. ಆದರೆ, ಜಾಗತಿಕ ಬಿಕ್ಕಟ್ಟುಗಳನ್ನು ಪರಿಣಾಮಕಾರಿಯಾಗಿ ನಿಭಾಯಿಸಲು ವಿಫಲವಾಗಿದೆ ಎಂಬ ಟೀಕೆಗಳನ್ನು ಅದು ಎದುರಿಸುತ್ತಿದೆ. ಹಾಗಾಗಿ, ಭದ್ರತಾ ಮಂಡಳಿಯ ಪ್ರಾತಿನಿಧ್ಯ ಮತ್ತು ನ್ಯಾಯಪರತೆಯನ್ನು ಹೆಚ್ಚಿಸಲು ಅದಕ್ಕೆ ಸುಧಾರಣೆಗಳನ್ನು ತರಬೇಕು ಎಂಬ ಬಡ ಮತ್ತು ಹಿಂದುಳಿದ ದೇಶಗಳ ದೀರ್ಘಕಾಲೀನ ಕರೆಗಳು ಈಗ ಮತ್ತೆ ಮುನ್ನೆಲೆಗೆ ಬಂದಿವೆ.ಆದರೆ, ಭದ್ರತಾ ಮಂಡಳಿಯ ಪ್ರಾತಿನಿಧ್ಯ ಹೆಚ್ಚಬೇಕು ಎಂಬ ವಿಷಯದಲ್ಲಿ ಸಹಮತವಿದ್ದರೂ, ಅಗತ್ಯವಿರುವ ಸುಧಾರಣೆಗಳ ಸ್ವರೂಪದ ಬಗ್ಗೆ ಆ ದೇಶಗಳ ನಡುವೆ ಒಮ್ಮತವಿಲ್ಲ.
ಬ್ರೆಝಿಲ್, ಜರ್ಮನಿ, ಭಾರತ ಮತ್ತು ಜಪಾನ್ ದೇಶಗಳನ್ನು ಒಳಗೊಂಡ ಜಿ4 ದೇಶಗಳು, ಆಫ್ರಿಕಾ ಒಕ್ಕೂಟ, ಅಭಿವೃದ್ಧಿಶೀಲ ದೇಶಗಳ ಎಲ್.69 ಗುಂಪು ಹಾಗೂ ಇಟಲಿ, ಪಾಕಿಸ್ತಾನ, ಮೆಕ್ಸಿಕೊ ಮತ್ತು ದಕ್ಷಿಣ ಕೊರಿಯಾ ಮುಂತಾದ ದೇಶಗಳ ನೇತೃತ್ವದ ಯುನೈಟಿಂಗ್ ಫಾರ್ ಕನ್ಸೆನ್ಸಸ್ ಗುಂಪು ಭದ್ರತಾ ಮಂಡಳಿಯ ಸುಧಾರಣೆಗೆ ಸಲಹೆಗಳನ್ನು ನೀಡಿವೆ. ಭದ್ರತಾ ಮಂಡಳಿಯ ಸುಧಾರಣೆ ಎಂದರೆ, ಸದಸ್ಯತ್ವವನ್ನು ಇತರ ದೇಶಗಳಿಗೆ ವಿಸ್ತರಿಸುವುದು ಮಾತ್ರವಲ್ಲ, ನ್ಯಾಯಪರತೆ, ಪ್ರಾತಿನಿಧ್ಯ ಮತ್ತು ಉತ್ತರದಾಯಿತ್ವ ಮುಂತಾದ ತತ್ವಗಳನ್ನು ಅಳವಡಿಸಿಕೊಳ್ಳಲು ಸಂಸ್ಥೆಯನ್ನು ಪುನರ್ರೂಪಿಸುವುದೂ ಆಗಿದೆ. ಅಂತರ್ರಾಷ್ಟ್ರೀಯ ಸಮುದಾಯವನ್ನು ತಳಸ್ತರದಲ್ಲಿ ಪ್ರತಿನಿಧಿಸುವ ಸುಧಾರಿತ ಭದ್ರತಾ ಮಂಡಳಿಯೊಂದು ಹೆಚ್ಚು ಪರಿಣಾಮಕಾರಿಯಾಗಿ ಶಾಂತಿಯನ್ನು ಎತ್ತಿಹಿಡಿಯಬಲ್ಲದು, ಜಾಗತಿಕ ಬೆದರಿಕೆಗಳನ್ನು ನಿಭಾಯಿಸಬಲ್ಲದು ಮತ್ತು ಜಾಗತಿಕ ಆಡಳಿತದಲ್ಲಿ ವಿಶ್ವಸಂಸ್ಥೆಯ ಪಾತ್ರವನ್ನು ಬಲವಾಗಿ ಸ್ಥಾಪಿಸಬಲ್ಲದು.
1946ರಲ್ಲಿ ಸ್ಥಾಪನೆಯಾದ ವಿಶ್ವಸಂಸ್ಥೆ ಭದ್ರತಾ ಮಂಡಳಿಯಲ್ಲಿ ಐದು ಖಾಯಂ ಸದಸ್ಯರಿದ್ದಾರೆ- ಅಮೆರಿಕ, ಬ್ರಿಟನ್, ಫ್ರಾನ್ಸ್, ರಶ್ಯ ಮತ್ತು ಚೀನಾ. ಈ ದೇಶಗಳಿಗೆ ವೀಟೊ ಅಧಿಕಾರವಿದೆ. ಮಂಡಳಿಯಲ್ಲಿ 10 ತಾತ್ಕಾಲಿಕ ಸದಸ್ಯ ದೇಶಗಳಿವೆ. ಅವುಗಳನ್ನು ಎರಡು ವರ್ಷಗಳ ಅವಧಿಗೆ ಆರಿಸಲಾಗುತ್ತದೆ.ಇವು ಹಾಲಿ ಅಂತರ್ರಾಷ್ಟ್ರೀಯ ಸಮುದಾಯವನ್ನು ಪ್ರತಿನಿಧಿಸುವುದಿಲ್ಲ ಎಂಬ ಟೀಕೆಗಳಿವೆ. ವಿಶ್ವಸಂಸ್ಥೆಯ ಸದಸ್ಯರ ಪೈಕಿ ಹೆಚ್ಚಿನ ದೇಶಗಳು ಆಫ್ರಿಕಾ, ಏಶ್ಯ ಮತ್ತು ಲ್ಯಾಟಿನ್ ಅಮೆರಿಕದ ದೇಶಗಳಾದರೂ ಆ ಖಂಡಗಳಿಗೆ ಪ್ರಾತಿನಿಧ್ಯ ತೀರಾ ಕಡಿಮೆ ಇದೆ. ಇದು ಜಾಗತಿಕ ಸವಾಲುಗಳನ್ನು ನಿಭಾಯಿಸುವಲ್ಲಿ ಭದ್ರತಾ ಮಂಡಳಿಯ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತ್ತಿದೆ.
ಐದು ದೇಶಗಳು ಹೊಂದಿರುವ ವೀಟೊ ಅಧಿಕಾರವು ಟೀಕೆಗಳ ಕೇಂದ್ರ ಬಿಂದುವಾಗಿದೆ. ತಮ್ಮ ರಾಷ್ಟ್ರೀಯ ಹಿತಾಸಕ್ತಿಗಳಿಗಾಗಿ ವೀಟೊ ಅಧಿಕಾರದ ಏಕಪಕ್ಷೀಯ ಬಳಕೆಯಿಂದಾಗಿ ಭದ್ರತಾ ಮಂಡಳಿಗೆ ಜಾಗತಿಕ ದರ್ಜೆಯ ನಿರ್ಧಾರಗಳನ್ನು ತೆಗೆದುಕೊಳ್ಳಲು ಸಾಧ್ಯವಾಗುತ್ತಿಲ್ಲ. ಬಲಿಷ್ಟ ರಾಷ್ಟ್ರಗಳು ದುರ್ಬಲ ದೇಶಗಳ ಮೇಲೆ ದಾಳಿ ನಡೆಸಿದಾಗ ಮಧ್ಯಪ್ರವೇಶ ಮಾಡಲು ವಿಶ್ವಸಂಸ್ಥೆಗೆ ಸಾಧ್ಯವಾಗುತ್ತಿಲ್ಲ. ಉಕ್ರೇನ್ನಲ್ಲಿನ ತನ್ನ ಕೃತ್ಯಗಳನ್ನು ಖಂಡಿಸುವ ಭದ್ರತಾ ಮಂಡಳಿಯ ನಿರ್ಣಯಗಳಿಗೆ ರಶ್ಯ ವೀಟೊ ಚಲಾಯಿಸಿದ ಪರಿಣಾಮ, ಭದ್ರತಾ ಮಂಡಳಿ ಅಸಹಾಯಕವಾಯಿತು. ಅದೇ ರೀತಿ, ಇಸ್ರೇಲನ್ನು ಖಂಡಿಸುವ ಭದ್ರತಾ ಮಂಡಳಿಯ ನಿರ್ಣಯಗಳಿಗೆ ಅಮೆರಿಕವು ಐತಿಹಾಸಿಕವಾಗಿ ವೀಟೊ ಚಲಾಯಿಸುತ್ತಾ ಬಂದಿದೆ. ಇದು ಇಸ್ರೇಲ್-ಫೆಲೆಸ್ತೀನ್ ಸಂಘರ್ಷವನ್ನು ನಿವಾರಿಸುವ ಪ್ರಯತ್ನಗಳಿಗೆ ಅಡ್ಡಿಯಾಗಿದೆ.ಮಹತ್ವದ ನಿರ್ಧಾರಗಳನ್ನು ತೆಗೆದುಕೊಳ್ಳುವ ಪ್ರಕ್ರಿಯೆಗಳಿಂದ ಜಗತ್ತಿನ ದೊಡ್ಡ ಭಾಗವನ್ನು ಹೊರಗಿಟ್ಟರೆ, ಅದು ಸಮಗ್ರ ಪರಿಹಾರಗಳನ್ನು ರೂಪಿಸುವ ಭದ್ರತಾ ಮಂಡಳಿಯ ಸಾಮರ್ಥ್ಯವನ್ನು ಸಹಜವಾಗಿಯೇ ಕ್ಷೀಣಿಸುತ್ತದೆ.
ಬ್ರೆಝಿಲ್, ಜರ್ಮನಿ, ಭಾರತ ಮತ್ತು ಜಪಾನ್ ದೇಶಗಳನ್ನು ಒಳಗೊಂಡ ಜಿ4 ಗುಂಪು ಖಾಯಂ ಮತ್ತು ತಾತ್ಕಾಲಿಕ ಎರಡೂ ಸ್ಥಾನಗಳಲ್ಲಿ ವಿಸ್ತರಣೆಯಾಗಬೇಕೆಂದು ಹೇಳುತ್ತದೆ. ಖಾಯಂ ಸದಸ್ಯತ್ವಕ್ಕೆ ತಾವೇ ಅಭ್ಯರ್ಥಿಗಳು ಎಂದು ಆ ದೇಶಗಳು ಹೇಳುತ್ತವೆ. ಆದರೆ, ಆ ದೇಶಗಳ ಪ್ರಾದೇಶಿಕ ಎದುರಾಳಿಗಳು ಮತ್ತು ಇತರ ಸದಸ್ಯ ದೇಶಗಳು ಅವುಗಳ ಪ್ರಸ್ತಾವವನ್ನು ವಿರೋಧಿಸುತ್ತವೆ. ಅಧಿಕಾರ ಸಮತೋಲನದಲ್ಲಿ ಏರುಪೇರು ಆಗಬಹುದು ಎನ್ನುವುದು ಎದುರಾಳಿ ದೇಶಗಳ ಆತಂಕವಾಗಿದೆ.
ಆಫ್ರಿಕಾದ ದೇಶಗಳಿಗೆ ವೀಟೊ ಅಧಿಕಾರ ಇರುವ ಎರಡು ಖಾಯಂ ಸ್ಥಾನಗಳು ಮತ್ತು ಐದು ತಾತ್ಕಾಲಿಕ ಸ್ಥಾನಗಳು ಬೇಕೆಂದು ಆಫ್ರಿಕನ್ ಯೂನಿಯನ್ ಹೇಳುತ್ತದೆ. ಆಫ್ರಿಕಾ, ಲ್ಯಾಟಿನ್ ಅಮೆರಿಕ ಮತ್ತು ಕೆರಿಬಿಯನ್, ಏಶ್ಯ ಮತ್ತು ಪೆಸಿಫಿಕ್ನ ಅಭಿವೃದ್ಧಿಶೀಲ ದೇಶಗಳನ್ನು ಪ್ರತಿನಿಧಿಸುವ ಎಲ್.69 ಗುಂಪು, ಖಾಯಂ ಮತ್ತು ತಾತ್ಕಾಲಿಕ ಎರಡು ಸದಸ್ಯತ್ವಗಳನ್ನು ವಿಸ್ತರಿಸಬೇಕು ಹಾಗೂ ಸಣ್ಣ ದ್ವೀಪ ರಾಷ್ಟ್ರಗಳು ಮತ್ತು ಕಡಿಮೆ ಪ್ರಾತಿನಿಧ್ಯ ಇರುವ ದೇಶಗಳಿಗೆ ಹೆಚ್ಚಿನ ಪ್ರಾತಿನಿಧ್ಯ ಒದಗಿಸಬೇಕು ಎಂದು ಒತ್ತಾಯಿಸಿದೆ. ಇದಕ್ಕೆ ವ್ಯತಿರಿಕ್ತವಾಗಿ ಇಟಲಿ, ಪಾಕಿಸ್ತಾನ, ಮೆಕ್ಸಿಕೊ ಮತ್ತು ದಕ್ಷಿಣ ಕೊರಿಯಾಗಳ ನೇತೃತ್ವದ ಗುಂಪು ಖಾಯಂ ಸದಸ್ಯತ್ವದ ವಿಸ್ತರಣೆಯನ್ನೇ ವಿರೋಧಿಸುತ್ತದೆ. ಬದಲಿಗೆ, ತಾತ್ಕಾಲಿಕ ಸದಸ್ಯ ಸ್ಥಾನಗಳ ಸಂಖ್ಯೆಯನ್ನು ಹೆಚ್ಚಿಸಬೇಕು ಹಾಗೂ ಈ ಸಂಖ್ಯೆಯನ್ನು ಈಗಿನ 10ರಿಂದ 20ಕ್ಕೆ ಹೆಚ್ಚಿಸಬೇಕು ಎಂದು ಅವು ವಾದಿಸುತ್ತವೆ.
ಆದರೆ ಇದು ಸುಲಭವಿದೆಯೇ? ಭದ್ರತಾ ಮಂಡಳಿಯ ಸುಧಾರಣೆಯ ವಿಷಯದಲ್ಲಿ, ಜಗತ್ತಿನ ಹಿಂದುಳಿದ ಮತ್ತು ಬಡ ದೇಶಗಳ ನಡುವಿನ ಆಂತರಿಕ ಭಿನ್ನಾಭಿಪ್ರಾಯಗಳು ಇರುವಂತೆಯೇ, ತಮ್ಮ ಏಕಾಧಿಪತ್ಯವನ್ನು ಬಿಟ್ಟುಕೊಡಲು ಹಾಲಿ ಐದು ಖಾಯಂ ಸದಸ್ಯ ದೇಶಗಳೂ ತಯಾರಿಲ್ಲ. ಯಥಾ ಸ್ಥಿತಿಯನ್ನು ಮುಂದುವರಿಸಿಕೊಂಡು ಹೋಗಬೇಕೆಂದು ಹೇಳುವುದಕ್ಕೆ ಪ್ರತೀ ಖಾಯಂ ಸದಸ್ಯ ದೇಶಕ್ಕೆ ತನ್ನದೇ ಆದ ಕಾರಣಗಳಿವೆ. ಅದೂ ಅಲ್ಲದೆ, ವಿಶ್ವಸಂಸ್ಥೆಯ ಒಡಂಬಡಿಕೆಗೆ ಯಾವುದೇ ಸುಧಾರಣೆಯನ್ನು ತರಬೇಕಾದರೂ ಆ ದೇಶಗಳ ಸರ್ವಾನುಮತದ ಒಪ್ಪಿಗೆ ಅಗತ್ಯ.
ಜಾಗತಿಕ ರಾಜಕೀಯದ ಅಸ್ಥಿರತೆಗಳ ನಡುವೆಯೇ, ವಿಶ್ವಸಂಸ್ಥೆಯು ತನ್ನ 80ನೇ ವಾರ್ಷಿಕ ದಿನದತ್ತ ಕಾಲಿರಿಸುತ್ತಿದ್ದು, ಭದ್ರತಾ ಸಮಿತಿಯ ಸುಧಾರಣೆಯು ಹಿಂದೆಂದಿಗಿಂತಲೂ ಇಂದು ಹೆಚ್ಚು ಅಗತ್ಯವಾಗಿದೆ. ಸರ್ವರ ಪ್ರಾತಿನಿಧ್ಯ ಮತ್ತು ನ್ಯಾಯಪರತೆಯು ಕೇವಲ ನೈತಿಕ ಆಶಯಗಳಾಗಿ ಉಳಿಯದೆ, ಪರಿಣಾಮಕಾರಿ ಜಾಗತಿಕ ಆಡಳಿತಕ್ಕೆ ಪ್ರಾಯೋಗಿಕ ಅಗತ್ಯಗಳಾಗಬೇಕು ಎನ್ನುವುದನ್ನು ಅಂತರ್ರಾಷ್ಟ್ರೀಯ ಸಮುದಾಯವು ಕಂಡುಕೊಳ್ಳಬೇಕಾಗಿದೆ. ಇಲ್ಲವಾದರೆ ವಿಶ್ವಸಂಸ್ಥೆಗೆ ಪರ್ಯಾಯವಾದ ಮಾರ್ಗಗಳನ್ನು ದುರ್ಬಲ ರಾಷ್ಟ್ರಗಳು ಹುಡುಕಿಕೊಳ್ಳಬೇಕಾಗುತ್ತದೆ. ಇದು ಮತ್ತೆ ವಿಶ್ವವನ್ನು ಎರಡಾಗಿ ವಿಂಗಡಿಸಿ, ಇನ್ನೊಂದು ಮಹಾಯುದ್ಧಕ್ಕೆ ಕಾರಣವಾಗುವ ಅಪಾಯಗಳನ್ನು ನಿರಾಕರಿಸುವಂತಿಲ್ಲ.