ಈ ವಿದಾಯ ನ್ಯಾಯವೇ?
ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಎರಡು ಬಾರಿ ಚಿನ್ನ, ವಿಶ್ವ ಕುಸ್ತಿ ಚಾಂಪಿಯನ್‌ಶಿಪ್‌ನಲ್ಲಿ ಕಂಚು, ಏಷ್ಯನ್‌ಗೇಮ್ಸ್‌ನಲ್ಲಿ ಚಿನ್ನ ಪಡೆದು ಈ ದೇಶಕ್ಕೆ ಅಂತರ್‌ರಾಷ್ಟ್ರೀಯ ಮಟ್ಟದಲ್ಲಿ ಹೆಸರು ತಂದಿದ್ದ ಕುಸ್ತಿಪಟು ವಿನೇಶ್ ಫೋಗಟ್ ದೇಶದ ಮಹಿಳೆಯರಿಗೆ ಕ್ರೀಡಾ ಕ್ಷೇತ್ರದಲ್ಲಿ ಸ್ಫೂರ್ತಿಯಾಗಿದ್ದರು. ಆದರೆ ಅವರು ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಫೈನಲ್‌ವರೆಗೂ ತಲುಪಿ 100 ಗ್ರಾಂ ತೂಕ ಹೆಚ್ಚಳವಾದ ಕಾರಣಕ್ಕಾಗಿ ಅನರ್ಹಗೊಂಡ ಎರಡು ದಿನಗಳ ಬಳಿಕ ಇದೀಗ ಕುಸ್ತಿ ಅಖಾಡದಿಂದ ನಿವೃತ್ತಿಯನ್ನು ಘೋಷಿಸಿದಿದ್ದಾರೆ. ಈ ಬಗ್ಗೆ ಭಾವನಾತ್ಮಕ ಸಂದೇಶವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ‘‘ಕುಸ್ತಿ ನನ್ನ ವಿರುದ್ಧ ಗೆದ್ದಿದೆ. ನಾನು ಸೋತಿದ್ದೇನೆ. ನನ್ನನ್ನು ಕ್ಷಮಿಸಿ ಬಿಡಿ. ನಿಮ್ಮ ಕನಸು, ನನ್ನ ಧೈರ್ಯ ನುಚ್ಚು ನೂರಾಗಿದೆ. ಈಗ ನನಗೆ ಹೆಚ್ಚು ಶಕ್ತಿ ಇಲ್ಲ. ನನ್ನನ್ನು ಕ್ಷಮಿಸಿದ್ದಕ್ಕೆ ನಿಮಗೆಲ್ಲರಿಗೂ ನಾನು ಋಣಿಯಾಗಿದ್ದೇನೆ’’ ಎಂದು ಅವರು ತನ್ನ ವಿದಾಯದ ಮಾತಿನಲ್ಲಿ ಕಣ್ಣೀರುಗರೆದಿದ್ದಾರೆ. ಒಲಿಂಪಿಕ್ಸ್‌ನಲ್ಲಿ ಆಕೆಗೆ ಬೆಳ್ಳಿ ಪದಕ ಖಚಿತವಾಗಿತ್ತು. ಚಿನ್ನದ ಪದಕ ಇನ್ನೇನು ಕೈಗೆಟಕುವ ಹಂತದಲ್ಲಿತ್ತು. ಆದರೆ ಭಾರತದ ಕೆಟ್ಟ ಕ್ರೀಡಾ ರಾಜಕಾರಣ ಆಕೆಗೆ ಸಿಗಬೇಕಾಗಿದ್ದ ಚಿನ್ನದ ಪದಕವನ್ನು ಮಾತ್ರವಲ್ಲ, ಸಿಕ್ಕಿದ್ದ ಬೆಳ್ಳಿ ಪದಕವನ್ನೂ ಕಿತ್ತುಕೊಂಡು ಭಾರತದ ವಿರುದ್ಧವೇ ವಿಜಯೋತ್ಸವ ಆಚರಿಸಿತು. ವಿನೇಶ್ ಫೋಗಟ್ ಅವರು ನಿವೃತ್ತಿಯನ್ನು ಘೋಷಿಸಿದರು ಎನ್ನುವುದಕ್ಕಿಂತ ಅವರಿಂದ ಬಲವಂತವಾಗಿ ವಿದಾಯವನ್ನು ಹೇಳಿಸಲಾಯಿತು
ಯಾವುದೇ ಕ್ರೀಡಾಳುಗಳು ತಮ್ಮ ಗುರಿಯನ್ನು ಸಾಧಿಸಿದ ಸಂತೃಪ್ತಿಯಲ್ಲಿ ವಿದಾಯ ಹೇಳಬೇಕು. ತಾನು ಮಾಡಿದ ಸಾಧನೆಗಾಗಿ ದೇಶ ಕೊಟ್ಟ ಅಪಾರ ಅಭಿಮಾನವನ್ನು ಅವರು ತಮ್ಮ ಉಳಿದ ದಿನಗಳಲ್ಲಿ ನೆನೆದುಕೊಳ್ಳುವಂತಿರಬೇಕು. ಕ್ರಿಕೆಟ್‌ನ ಹಲವಾರು ತಾರೆಯರು ತಮ್ಮ ಕ್ರೀಡಾ ಬದುಕಿನ ಕೊನೆಯಲ್ಲಿ ಇಂತಹ ಅದ್ದೂರಿ ವಿದಾಯವನ್ನು ಹೇಳಿದ್ದಾರೆ. ಕ್ರಿಕೆಟ್ ತಾರೆಯರು ಬದುಕಿನುದ್ದಕ್ಕೂ ಹಣ, ಪ್ರಸಿದ್ಧಿಯನ್ನು ಮಾಡಿ, ಸೆಲೆಬ್ರಿಟಿಗಳಾಗಿ ನಿವೃತ್ತಿ ಬದುಕಿನಲ್ಲಿ ರಾಜ್ಯಸಭಾ ಸದಸ್ಯ ಸ್ಥಾನವನ್ನು ಪಡೆಯುತ್ತಾರೆ. ನಿವೃತ್ತರಾದ ಬಳಿಕವೂ ಕ್ರೀಡೆಯೊಳಗೆ ಬೇರೆ ಬೇರೆ ಹುದ್ದೆಗಳನ್ನು ಅನುಭವಿಸುತ್ತಲೇ ಇರುತ್ತಾರೆ. ವಿಪರ್ಯಾಸವೆಂದರೆ, ಭಾರತದಲ್ಲಿ ಅತ್ಲೆಟಿಕ್‌ನಲ್ಲಿ ಸಾಧನೆ ಮಾಡುವವರ ಸಂಖ್ಯೆಯೇ ಬೆರಳೆಣಿಕೆ. ಕ್ರಿಕೆಟ್‌ಗೆ ಸುರಿಯುವ ಹಣಕ್ಕೆ ಹೋಲಿಸಿದರೆ ಅತ್ಲೀಟ್‌ಗಳಿಗಾಗಿ ಒದಗಿಸುವ ಅನುದಾನಗಳು ತೀರಾ ಅಲ್ಪ. ಸರಕಾರದ ಪ್ರೋತ್ಸಾಹಕ್ಕಿಂತ ವೈಯಕ್ತಿಕ ಸಾಧನೆಗಳಿಂದ ಮೇಲೆ ಬಂದ ಕ್ರೀಡಾಳುಗಳೇ ಅಧಿಕ. ಇವರಲ್ಲಿ ಬೆರಳೆಣಿಕೆಯ ಮಂದಿ ಒಲಿಂಪಿಕ್ಸ್‌ವರೆಗೆ ತಲುಪುತ್ತಾರೆ. ಊಟ, ವಸತಿಗಳ ಕೊರತೆಗಳನ್ನುಎದುರಿಸುತ್ತಲೇ ಅವರು ಪಂದ್ಯಗಳಲ್ಲಿ ಭಾಗವಹಿಸಬೇಕಾಗುತ್ತದೆ. ಹಲವು ಎಡರು ತೊಡರುಗಳ ಮಧ್ಯೆ ಸಾಧನೆಗೈದು ವಿಶ್ವ ಮಟ್ಟದಲ್ಲಿ ಚಿನ್ನ, ಬೆಳ್ಳಿ, ಕಂಚು ಪದಕಗಳನ್ನು ಪಡೆದರೂ, ಅವರಿಗೆ ನೀಡಬೇಕಾದ ಗೌರವ, ಪ್ರೋತ್ಸಾಹಗಳನ್ನು ನೀಡುವಲ್ಲಿ ಸರಕಾರ ವಿಫಲವಾಗುತ್ತಿದೆ. ಸದ್ಯದ ದಿನಗಳಲ್ಲಿ, ಪ್ರೋತ್ಸಾಹ ನೀಡದಿದ್ದರೂ ಪರವಾಗಿಲ್ಲ, ಸರಕಾರ ಅವರ ಸಾಧನೆಗಳ ಹಾದಿಯಲ್ಲಿ ಮುಳ್ಳಾಗದಿರಲಿ ಎನ್ನುವುದೇ ಕ್ರೀಡಾಸಕ್ತರ ಆಶಯವಾಗಿದೆ. ದುರಂತವೆಂದರೆ, ಅತ್ಲೀಟ್‌ಗಳು ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಿದ ತಪ್ಪಿಗಾಗಿ ಬಲವಂತವಾಗಿ ನಿವೃತ್ತಿಯನ್ನು ಘೋಷಿಸುವ ಸನ್ನಿವೇಶ ಈ ದೇಶದಲ್ಲಿ ಸೃಷ್ಟಿಯಾಗುತ್ತಿದೆ.
ವಿನೇಶ್ ಮಾತ್ರವಲ್ಲ, ಈ ಹಿಂದೆ, ಸಾಕ್ಷಿ ಮಲಿಕ್ ಕೂಡ ಮಾಧ್ಯಮಗಳ ಮುಂದೆ ಕಣ್ಣೀರು ಹಾಕುತ್ತಾ ಕುಸ್ತಿಗೆ ವಿದಾಯ ಹೇಳಿದ್ದರು. ಕುಸ್ತಿಯಲ್ಲಿ ಸಾಧಿಸಬೇಕಾದುದನ್ನೆಲ್ಲ ಸಾಧಿಸಿ, ತನ್ನ ಕನಸು ನನಸಾದ ಸಂತೃಪ್ತಿಯಿಂದ ವಿದಾಯ ಹೇಳುವ ಭಾಗ್ಯ ಆಕೆಗೂ ಬರಲಿಲ್ಲ. ಭಾರತೀಯ ಕುಸ್ತಿ ಒಕ್ಕೂಟದೊಳಗಿನ ಅಕ್ರಮಗಳು ಮತ್ತು ಮಹಿಳಾ ಕುಸ್ತಿ ಪಟುಗಳ ಮೇಲೆ ನಡೆಯುತ್ತಿರುವ ದೌರ್ಜನ್ಯಗಳ ವಿರುದ್ಧ ನಡೆಸಿದ ಸುದೀರ್ಘ ಹೋರಾಟದಿಂದ ಕುಂದಿ ಹೋಗಿ, ಅಂತಿಮವಾಗಿ ಪ್ರತಿಭಟನೆಯ ರೂಪದಲ್ಲಿ ಅವರು ಕುಸ್ತಿಗೆ ನಿವೃತ್ತಿಯನ್ನು ಘೋಷಿಸಿದರು. ತನ್ನ ಶೂವನ್ನು ಮಾಧ್ಯಮಗಳ ಮುಂದಿಟ್ಟು, ತನ್ನ ಸೋಲನ್ನು ಅವರು ಒಪ್ಪಿಕೊಂಡರು. ಅವರನ್ನು ಸೋಲಿಸಿದ್ದು ಎದುರಾಳಿ ಆಟಗಾರರಲ್ಲ. ಆಕೆಗೆ ಬೆಂಬಲ ನೀಡಿ ಅಂತರ್‌ರಾಷ್ಟ್ರೀಯ ಮಟ್ಟದಲ್ಲಿ ಪ್ರೋತ್ಸಾಹ ನೀಡಬೇಕಾಗಿದ್ದ ಕುಸ್ತಿ ಒಕ್ಕೂಟವೇ ಆಕೆಯನ್ನು ಸೋಲಿಸಿ, ನಿವೃತ್ತಿಯನ್ನು ಘೋಷಿಸುವಂತೆ ಮಾಡಿತು. ಇಂತಹ ವಿದಾಯಗಳು ಇತರ ಅತ್ಲೀಟ್‌ಗಳ ಮೇಲೆ ಅತ್ಯಂತ ಕೆಟ್ಟ ಪರಿಣಾಮವನ್ನು ಬೀರುತ್ತದೆ. ಮುಖ್ಯವಾಗಿ ಮಹಿಳಾ ಅತ್ಲೀಟ್‌ಗಳ ಮೇಲೆ. ಮನೆ, ಕುಟುಂಬ, ಸಮಾಜ ಇವೆಲ್ಲವನ್ನು ಎದುರಿಸಿ ಪುರುಷ ಪ್ರಧಾನ ಕ್ರೀಡೆ ಎಂದೇ ಗುರುತಿಸಲ್ಪಡುವ ಕುಸ್ತಿಯಂತಹ ಕ್ರೀಡೆಯಲ್ಲಿ ಭಾಗವಹಿಸುವಾಗ ಮಹಿಳೆ ಇಷ್ಟೆಲ್ಲ ಅಡೆತಡೆಗಳನ್ನು ಎದುರಿಸಬೇಕಾಗುತ್ತದೆ ಎಂದರೆ ಭಾರತದಂತಹ ದೇಶದಲ್ಲಿ ಯಾವ ಹೆಣ್ಣಾದರೂ ಈ ಕ್ಷೇತ್ರಕ್ಕೆ ಕಾಲಿಡಲು ಸಾಧ್ಯವೆ? ಸಾಧನೆ ಮಾಡಿದ ಕ್ರೀಡಾಳುಗಳನ್ನು ಸನ್ಮಾನಿಸಬೇಕಾಗಿದ್ದ ರಾಜಕೀಯ ನಾಯಕರೇ ಆಕೆಯ ಸೆರಗಿಗೆ ಕೈ ಹಾಕಿದರೆ? ಅದನ್ನು ಪ್ರಶ್ನಿಸಿದ ಕ್ರೀಡಾಳುಗಳನ್ನು ದಮನಿಸಲು ಯತ್ನಿಸಿದರೆ? ಸರಕಾರ ಮಹಿಳಾ ಕ್ರೀಡಾಳುಗಳ ಪರವಾಗಿ ನಿಲ್ಲದೆ, ದೌರ್ಜನ್ಯವೆಸಗಿದ ರಾಜಕಾರಣಿಗೆ ಬೆಂಬಲವಾಗಿ ನಿಂತರೆ? ಕ್ರೀಡಾಂಗಣದಲ್ಲಿ ತಯಾರಿ ನಡೆಸಬೇಕಾಗಿದ್ದ ಮಹಿಳೆಯರು ನ್ಯಾಯಕ್ಕಾಗಿ ಬೀದಿಯಲ್ಲಿ ಪೊಲೀಸರ ಲಾಠಿ ಏಟುಗಳನ್ನು ತಿನ್ನಬೇಕಾದ ಸ್ಥಿತಿ ಎದುರಾದರೆ? ಇವುಗಳೆಲ್ಲ ಕ್ರೀಡಾ ಕ್ಷೇತ್ರವನ್ನು ಆರಿಸಿಕೊಳ್ಳಲು ಬಯಸುವ ಇತರ ತರುಣಿಯರಿಗೆ ಯಾವ ಸಂದೇಶವನ್ನು ನೀಡಬಹುದು? ಇಂತಹ ವಾತಾವರಣದಲ್ಲಿ ಹೊಸ ಅತ್ಲೀಟ್‌ಗಳು ಹುಟ್ಟಲು ಸಾಧ್ಯವೆ? ಹುಟ್ಟಿದರೂ ಅವರು ಒಲಿಂಪಿಕ್ಸ್‌ನ ಚಿನ್ನಪಡೆಯುವುದು ಸಾಧ್ಯವೆ?
ವಿನೇಶ್ ಫೋಗಟ್ ಅವರು ಕುಸ್ತಿಗೆ ವಿದಾಯ ಹೇಳಿದರೂ, ಅವರು ಕ್ರೀಡಾ ವಲಯದೊಳಗೆ ಉಳಿಸಿ ಹೋಗಿರುವ ಮೌಲ್ಯಗಳು ಸದಾ ಎಲ್ಲ ಕ್ರೀಡಾಳುಗಳಿಗೂ ಮಾದರಿಯಾಗಬೇಕಾಗಿದೆ. ಮುಖ್ಯವಾಗಿ ಆಕೆ ಪುರುಷಪ್ರಧಾನವಾಗಿದ್ದ ಕುಸ್ತಿಯನ್ನು ಆಯ್ಕೆ ಮಾಡಿ ಅದರಲ್ಲಿ ವಿಶ್ವಮಟ್ಟದಲ್ಲಿ ಭಾರತಕ್ಕೆ ಪದಕಗಳನ್ನು ಗೆದ್ದುಕೊಟ್ಟರು. ಇದೇ ಸಂದರ್ಭದಲ್ಲಿ ಮಹಿಳಾ ಕುಸ್ತಿ ಪಟುಗಳ ಮೇಲೆ ರಾಜಕಾರಣಿಯೊಬ್ಬ ದೌರ್ಜನ್ಯವೆಸಗಿದಾಗ ಅದರ ವಿರುದ್ಧ ಪ್ರತಿಭಟನೆ ವ್ಯಕ್ತಪಡಿಸಿ, ಉಳಿದ ಕ್ರೀಡಾಳುಗಳಿಗೆ ನೈತಿಕ ಸ್ಥೈರ್ಯ ನೀಡಿದರು. ಯಾವುದೇ ಬೆದರಿಕೆಗಳಿಗೆ ಮಣಿಯದೆ ತಮ್ಮ ಆತ್ಮಾಭಿಮಾನವನ್ನು ಕಾಪಾಡಿಕೊಂಡು ದೇಶದ ಎಲ್ಲ ಮಹಿಳೆಯರಿಗೆ ಸ್ಫೂರ್ತಿಯಾದರು. ಇದೇ ಸಂದರ್ಭದಲ್ಲಿ ಆಕೆಯನ್ನು 53 ಕೆಜಿಯಲ್ಲಿ ಅನರ್ಹಗೊಳಿಸಿದಾಗ, ಹಟ ಬಿಡದೆ 50 ಕೆಜಿ ವಿಭಾಗದಲ್ಲಿ ಶತ ಪ್ರಯತ್ನ ನಡೆಸಿ ಒಲಿಂಪಿಕ್ಸ್‌ನಲ್ಲಿ ಅರ್ಹತೆಯನ್ನು ಪಡೆದರು. ದೇಶದ ಕೆಟ್ಟ ಕ್ರೀಡಾ ವ್ಯವಸ್ಥೆಗೆ ಸವಾಲು ಹಾಕುವಂತೆ ಬೆಳ್ಳಿಯನ್ನು ಖಚಿತ ಪಡಿಸಿದರು. ಫೈನಲ್‌ನಲ್ಲಿ ಆಕೆ 100 ಗ್ರಾಂ ತೂಕ ಹೆಚ್ಚಿ ರುವ ಕಾರಣಕ್ಕೆ ಅನರ್ಹಗೊಂಡರು. ಆದರೆ ಆ ನೂರು ಗ್ರಾಂ ತೂಕ ಈ ದೇಶದ ಮಹಿಳೆಯರ ಆತ್ಮಾಭಿಮಾನದ ಸಂಕೇತವಾಗಿ ಇದೀಗ ಬಿಂಬಿತವಾಗುತ್ತಿದೆ. ತನ್ನ ಆತ್ಮಾಭಿಮಾನವನ್ನು ಬಲಿಕೊಟ್ಟು ಪಡೆದುಕೊಳ್ಳುವ ಚಿನ್ನದ ಪದಕವನ್ನು ವಿನೇಶ್ ಪರೋಕ್ಷವಾಗಿ ತಿರಸ್ಕರಿಸಿದ್ದಾರೆ. ಆ ಮೂಲಕ, ವಿನೇಶ್ ಚಿನ್ನಕ್ಕಿಂತಲೂ ಬೆಲೆಬಾಳುವ ಪದಕವನ್ನು ಗೆದ್ದು ದೇಶಕ್ಕೆ ಮಾದರಿಯಾಗಿದ್ದಾರೆ.