ಇದೇನಾ ಪ್ರಧಾನಿ ಮೋದಿಯ ಬಂಡವಾಳ ಹೂಡಿಕೆ !?
Photo: PTI
ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ
ಪ್ರಧಾನಿಯಾಗಿ ಮೋದಿಯವರು ‘ಬಂಡವಾಳ ಹೂಡಿಕೆ’ಗಾಗಿ ದೇಶ ವಿದೇಶಗಳ ಪ್ರವಾಸ ಮಾಡಿದ್ದರು. ಭಾರತದಲ್ಲಿ ಬಂಡವಾಳ ಹೂಡಲು ಬೃಹತ್ ಉದ್ಯಮಿಗಳಿಗೆ ಕರೆ ಕೊಡುತ್ತಲೇ ಬರುತ್ತಿದ್ದಾರೆ. ಆದರೆ ಭಾರತದಲ್ಲಿ ಹೆಚ್ಚುತ್ತಿರುವ ಕೋಮು ಹಿಂಸೆ, ದಂಗೆ, ಗಲಭೆ, ಹದಗೆಡುತ್ತಿರುವ ಕಾನೂನು ಸುವ್ಯವಸ್ಥೆ, ದುರ್ಬಲವಾಗುತ್ತಿರುವ ಪ್ರಜಾಸತ್ತೆ ಇವೆಲ್ಲ ಕಾರಣಗಳಿಂದ ಬಂಡವಾಳ ಹೂಡಿಕೆಯಲ್ಲಿ ವಿದೇಶಿ ಉದ್ಯಮಿಗಳು ವಿಶೇಷ ಆಸಕ್ತಿಯನ್ನು ತೋರಿಸಿರಲಿಲ್ಲ. ಇದೇ ಸಂದರ್ಭದಲ್ಲಿ ಭಾರತದಲ್ಲಿ ‘ರಾಜಕೀಯವೇ ಅತ್ಯಂತ ಲಾಭದಾಯಕ ಉದ್ಯಮ’ ಎಂದು ಉದ್ಯಮಿಗಳು ಭಾವಿಸಿರುವಂತಿದೆ. ಇದೀಗ ಬಹಿರಂಗಗೊಂಡಿರುವ ‘ಚುನಾವಣಾ ಬಾಂಡ್’ ಅಂಕಿ-ಸಂಕಿಗಳು, ಭಾರತದಲ್ಲಿ ಉದ್ಯಮಿಗಳು ರಾಜಕೀಯ ಪಕ್ಷಗಳ ಮೇಲೆ, ಅದರಲ್ಲೂ ಅಧಿಕಾರದಲ್ಲಿರುವ ಬಿಜೆಪಿಯ ಮೇಲೆ ಅತ್ಯಧಿಕ ಬಂಡವಾಳ ಹೂಡಿಕೆ ಮಾಡಿರುವುದು ಬೆಳಕಿಗೆ ಬರುತ್ತಿವೆ. ನೋಟು ನಿಷೇಧ, ಲಾಕ್ಡೌನ್ಗಳು ಆರ್ಥಿಕ ಕ್ಷೇತ್ರಗಳ ಮೇಲೆ ಭಾರೀ ದುಷ್ಪರಿಣಾಮಗಳನ್ನು ಬೀರಿದ್ದರೂ, ಈ ಅವಧಿಯಲ್ಲಿ ಬೃಹತ್ ಉದ್ಯಮಿಗಳು ರಾಜಕೀಯ ಪಕ್ಷವೊಂದಕ್ಕೆ ದೇಣಿಗೆಯ ರೂಪದಲ್ಲಿ ಭಾರೀ ಹಣವನ್ನು ಹೂಡಿಕೆ ಮಾಡಿದ್ದಾರೆ. ನೋಟು ನಿಷೇಧ ಘೋಷಣೆಯಾದ ಸಂದರ್ಭದಲ್ಲಿ ದೇಶದೊಳಗಿದ್ದ ಕಪ್ಪುಹಣ ದೇಶದ ಖಜಾನೆ ಸೇರದೆ, ಎಲ್ಲಿ ಹೋಯಿತು ಎಂದು ಹುಡುಕುತ್ತಿರುವವರಿಗೂ ಎಸ್ಬಿಐ ಬಿಡುಗಡೆ ಮಾಡಿರುವ ಚುನಾವಣಾ ಬಾಂಡ್ನಲ್ಲಿ ಉತ್ತರಗಳಿರಬಹುದು.
ಚುನಾವಣಾ ದೇಣಿಗೆಯ ಹೆಸರಿನಲ್ಲಿ ಬೃಹತ್ ಉದ್ಯಮಿಗಳು ರಾಜಕೀಯ ಪಕ್ಷವೊಂದಕ್ಕೆ ಸಾವಿರಾರು ಕೋಟಿ ರೂಪಾಯಿಗಳನ್ನು ಲಾಭವಿಲ್ಲದೆ ಹೂಡಿಕೆ ಮಾಡುವುದಿಲ್ಲ. ರಾಜಕೀಯ ಪಕ್ಷಗಳು ಈ ದೇಶಕ್ಕೆ ಸಲ್ಲಿಸುತ್ತಿರುವ ಸೇವೆಯನ್ನು ಗಮನಿಸಿ ಅವರು ಇದಕ್ಕೆ ಬಂಡವಾಳವನ್ನು ಹೂಡಿಲ್ಲ. ಈ ಹೂಡಿಗೆ ಮೊತ್ತ ಮೊದಲ ಕಾರಣ, ಸರಕಾರದಿಂದ ಗರಿಷ್ಠ ಲಾಭವನ್ನು ತನ್ನದಾಗಿಸಿಕೊಳ್ಳುವುದು. ಇದನ್ನು ಚುನಾವಣಾ ಬಾಂಡ್ ಎನ್ನುವ ಸುಂದರ ಹೆಸರಿನಿಂದ ಕರೆದು ಸರಕಾರ ತನ್ನ ಅಕ್ರಮಗಳನ್ನು ಮುಚ್ಚಿಡುತ್ತಾ ಬಂದಿತ್ತು. ಎರಡನೆಯದಾಗಿ, ಇದು ಸರಕಾರ ತನಗೆ ಕಿರುಕುಳ ನೀಡಬಾರದು ಎನ್ನುವ ಕಾರಣಕ್ಕಾಗಿ ನೀಡುವ ಲಂಚ ಅಥವಾ ಹಫ್ತಾ. ಬಿಜೆಪಿಗೆ ದೇಣಿಗೆ ನೀಡಿರುವ ಹಲವು ಸಂಸ್ಥೆಗಳು ಸರಕಾರದಿಂದ ಹಲವು ಪ್ರಯೋಜನಗಳನ್ನು ಪಡೆದಿವೆ ಮಾತ್ರವಲ್ಲ, ಸುಮಾರು 14 ಕಂಪೆನಿಗಳು ಕೇಂದ್ರ ಸರಕಾರದ ನಿಯಂತ್ರಣದಲ್ಲಿರುವ ತನಿಖಾ ಸಂಸ್ಥೆಗಳಿಂದ ಪದೇ ಪದೇ ದಾಳಿಗೊಳಗಾಗಿದ್ದವು ಎನ್ನುವುದು ಮಾಧ್ಯಮಗಳ ಮೂಲಕ ಬಹಿರಂಗವಾಗಿವೆ. ಅಂದರೆ, ತನಿಖಾ ಸಂಸ್ಥೆಗಳ ಮೂಲಕ ತಮಗೆ ಕಿರುಕುಳ ನೀಡಬಾರದು ಎಂದು ಈ ಕಂಪೆನಿಗಳು ಬಿಜೆಪಿಗೆ ದೇಣಿಗೆಯನ್ನು ನೀಡಿವೆ. ತಮ್ಮ ಅಕ್ರಮಗಳನ್ನು ಮುಚ್ಚಿಡುವುದಕ್ಕಾಗಿ ನೀಡಿರುವ ಪರೋಕ್ಷ ಲಂಚ ಇದಾಗಿದೆ. ಇದೇ ಸಂದರ್ಭದಲ್ಲಿ ತನ್ನ ಪಕ್ಷಕ್ಕೆ ದೇಣಿಗೆಯನ್ನು ನೀಡದೆ, ವಿರೋಧಿಗಳಿಗೆ ದೇಣಿಗೆಯನ್ನು ನೀಡಿದ ಉದ್ಯಮಿಗಳಿಗೆ ಬೆದರಿಕೆ ಹಾಕುವುದಕ್ಕಾಗಿಯೂ ತನಿಖಾ ಸಂಸ್ಥೆಗಳನ್ನು ಕೇಂದ್ರ ಸರಕಾರ ಬಳಸಿಕೊಂಡಿದೆ ಎನ್ನುವ ಆರೋಪಗಳು ಕೇಳಿ ಬರುತ್ತಿವೆ. ಹಲವು ಕಂಪೆನಿಗಳು ತನಿಖಾ ಸಂಸ್ಥೆಗಳ ದಾಳಿಗಳ ಬಳಿಕ ಸರಕಾರಕ್ಕೆ ಪರೋಕ್ಷ ದೇಣಿಗೆಯನ್ನು ನೀಡಿವೆ ಮತ್ತು ಇದನ್ನು ಪಕ್ಷ ಹಾರ್ದಿಕವಾಗಿ ಸ್ವೀಕರಿಸಿದೆ.
ದೇಣಿಗೆ ನೀಡಿರುವ ಕಂಪೆನಿಗಳ ಹತ್ತು ಹಲವು ಹೆಗ್ಗಳಿಕೆಗಳನ್ನು ನಾವಿಲ್ಲಿ ಗುರುತಿಸಬೇಕು. ದೇಣಿಗೆ ನೀಡಿರುವ ಕಂಪೆನಿಗಳಲ್ಲಿ ಅಗ್ರ ಸ್ಥಾನದಲ್ಲಿರುವುದು ಫ್ಯೂಚರ್ ಗೇಮಿಂಗ್ ಪ್ರೈವೇಟ್ ಲಿಮಿಟೆಡ್. 1,368 ಕೋಟಿ ರೂಪಾಯಿಯ ಬಾಂಡನ್ನು ಈ ಸಂಸ್ಥೆ ಖರೀದಿಸಿದೆ. ಇದರ ಮಾಲಕ ಸ್ಯಾಂಟಿಯಾಗೊ ಮಾರ್ಟಿನ್ ಲಾಟರಿ ಕಿಂಗ್ ಎಂದೇ ಗುರುತಿಸಲ್ಪಡುತ್ತಿರುವವರು. ಅಕ್ರಮ ಲಾಟರಿಗಳಿಗಾಗಿಯೇ ಹಲವು ಬಾರಿ ತನಿಖಾ ಸಂಸ್ಥೆಗಳಿಂದ ದಾಳಿಗೊಳಗಾಗಿರುವ ಈತನ ಹಣದ ಋಣದಲ್ಲಿ ಈ ದೇಶದ ರಾಜಕೀಯ ಪಕ್ಷಗಳಿವೆ ಎಂದಾದರೆ, ಅವುಗಳ ನೇತೃತ್ವದಲ್ಲಿ ರಚನೆಯಾಗುವ ಸರಕಾರ, ಈ ದೇಶವನ್ನು ಯಾವ ಕಡೆಗೆ ಮುನ್ನಡೆಸಬಹುದು ಎನ್ನುವುದನ್ನು ನಾವು ಚಿಂತಿಸಬೇಕಾಗಿದೆ. ಈತನಿಂದ ಯಾವ ಪಕ್ಷ ಹೆಚ್ಚು ಪ್ರಯೋಜನಗಳನ್ನು ಪಡೆದಿದೆ ಎನ್ನುವುದರ ವಿಸ್ತೃತ ತನಿಖೆಯೊಂದು ನಡೆಯುವ ಅಗತ್ಯವನ್ನು ಈತನ ಹಿನ್ನೆಲೆಯೇ ಹೇಳುತ್ತದೆ. ಉತ್ತರ ಕಾಶಿಯಲ್ಲಿ ಸುರಂಗ ನಿರ್ಮಾಣದ ಭಾಗವಾಗಿದ್ದ ನವಯುಗ ಕಂಪೆನಿಯು 55 ಕೋಟಿ ರೂಪಾಯಿ ಬಾಂಡನ್ನು ಖರೀದಿಸಿದೆ. ತೆರಿಗೆಕಳ್ಳತನ ಆರೋಪಗಳನ್ನು ಎದುರಿಸುತ್ತಿರುವ ಈ ಕಂಪೆನಿ, ಉತ್ತರ ಕಾಶಿಯ ಸುರಂಗ ದುರಂತದ ಬಳಿಕವೂ ಯಾವುದೇ ಕ್ರಮಗಳನ್ನು ಎದುರಿಸದೇ ಬಚಾವಾಗಲು ಹೇಗೆ ಸಾಧ್ಯವಾಯಿತು ಎನ್ನುವುದನ್ನು ನಾವು ಚುನಾವಣಾ ಬಾಂಡ್ ಹಿನ್ನೆಲೆಯಲ್ಲಿ ಚಿಂತಿಸಬೇಕಾಗಿದೆ. ಚುನಾವಣಾ ಬಾಂಡ್ಗಳನ್ನು ಖರೀದಿಸಿದ ಕಂಪೆನಿಗಳ ಪೈಕಿ, 14 ಕಂಪೆನಿಗಳು ತನಿಖಾ ಸಂಸ್ಥೆಗಳಿಂದ ದಾಳಿಗೊಳಗಾಗಿದ್ದವು. ವಿಪರ್ಯಾಸವೆಂದರೆ, ದೇಣಿಗೆ ನೀಡಿರುವ ಅಗ್ರ 15 ಕಂಪೆನಿಗಳಲ್ಲಿ 3 ಕಂಪೆನಿಗಳು ಒಂದೇ ವಿಳಾಸವನ್ನು ಹೊಂದಿವೆ. ಅಂದರೆ ದೇಣಿಗೆ ನೀಡಿರುವ ಕಂಪೆನಿಗಳಲ್ಲಿ ಬೇನಾಮಿ ಹೆಸರಿನ ಕಂಪೆನಿಗಳೂ ಇವೆ ಎನ್ನುವುದು ಇದರಿಂದ ಬಹಿರಂಗವಾಗುತ್ತದೆ. ಮೂರನೆಯ ಅತಿ ದೊಡ್ಡ ದೇಣಿಗೆದಾರ ಸಂಸ್ಥೆಯೆಂದು ಗುರುತಿಸಲ್ಪಟ್ಟಿರುವ ಕಂಪೆನಿಯೊಂದಿಗೆ ರಿಲಯನ್ಸ್ ಸಂಬಂಧವನ್ನು ಹೊಂದಿದೆ. ಅತಿ ಹೆಚ್ಚು ದೇಣಿಗೆಯನ್ನು ನೀಡಿದ ಕಂಪೆನಿಗಳಲ್ಲಿ ಎರಡನೇ ಸ್ಥಾನದಲ್ಲಿ ಮೇಘಾ ಇಂಜಿನಿಯರಿಂಗ್ ಆ್ಯಂಡ್ ಇನ್ಫ್ರಾಸ್ಟ್ರಕ್ಚರ್ ಲಿ.ಗುರುತಿಸಿಕೊಂಡಿದೆ. ಹೈದರಾಬಾದ್ ಮೂಲದ ಈ ಕಂಪೆನಿ ಸರಕಾರಿ ಮೂಲದ ಹಲವು ಯೋಜನೆಗಳ ಗುತ್ತಿಗೆಗಳನ್ನು ತನ್ನದಾಗಿಸಿಕೊಂಡಿರುವುದು ಕಾಕತಾಳೀಯವಲ್ಲ. ಆರೋಗ್ಯ, ಔಷಧ ಕ್ಷೇತ್ರದ 30 ಕಂಪೆನಿಗಳಿಂದ 900 ಕೋಟಿ ರೂ. ಚುನಾವಣಾ ಬಾಂಡ್ ಖರೀದಿಯಾಗಿದೆ. ಹೀಗಿರುವಾಗ, ದೇಣಿಗೆಯ ಮೂಲಕ ಅವುಗಳು ಪಡೆದುಕೊಂಡದ್ದು ಮತ್ತು ಮುಚ್ಚಿಟ್ಟದ್ದು ಏನು ಎನ್ನುವುದು ಬಹಿರಂಗವಾಗಬೇಡವೆ?
ನೋಟು ನಿಷೇಧವನ್ನು ಈ ದೇಶ ಕಂಡ ಅತಿ ದೊಡ್ಡ ಅಕ್ರಮ ಎಂದು ಹಲವು ಆರ್ಥಿಕ ತಜ್ಞರು ಕರೆದಿದ್ದರು. ಈ ಸಂದರ್ಭದಲ್ಲಿ ಕಪ್ಪು ಹಣವನ್ನು ಬಿಳಿಯಾಗಿಸಿಕೊಂಡು ಕೆಲವು ರಾಜಕೀಯ ಪಕ್ಷಗಳು ತಮ್ಮ ತಿಜೋರಿಯನ್ನು ತುಂಬಿಸಿಕೊಂಡಿವೆ ಎನ್ನುವ ಆರೋಪಗಳು ಕೇಳಿ ಬಂದಿದ್ದವು. ಕೊರೋನ ಹೆಸರಿನಲ್ಲೂ ರಾಜಕೀಯ ಪಕ್ಷಗಳು ಕೋಟ್ಯಂತರ ರೂಪಾಯಿಯ ಅಕ್ರಮಗಳನ್ನು ನಡೆಸಿರುವುದು ಬಹಿರಂಗವಾಗಿದ್ದವು. ಕೊರೋನ ಕಾಲದಲ್ಲಿ ಬಡವರು ಇನ್ನಷ್ಟು ಬಡವರಾದರು. ಹಲವು ಸಣ್ಣ ಪುಟ್ಟ ಉದ್ಯಮಗಳು ಮುಚ್ಚಿದವು. ಆದರೆ ಇದೇ ಸಂದರ್ಭದಲ್ಲಿ ಬೆರಳೆಣಿಕೆಯ ಕಾರ್ಪೊರೇಟ್ ಸಂಸ್ಥೆಗಳು ಏಕಾಏಕಿ ಶ್ರೀಮಂತವಾದವು. ಅದಾನಿ, ಅಂಬಾನಿಗಳು ವಿಶ್ವದಲ್ಲೇ ಶ್ರೀಮಂತರಾಗಿ ಗುರುತಿಸಿಕೊಂಡದ್ದು ಈ ಅವಧಿಯಲ್ಲಿ. ಇದೀಗ ಚುನಾವಣಾ ಬಾಂಡ್ ಅಕ್ರಮಗಳು ಹೇಗೆ ರಾಜಕೀಯ ಪಕ್ಷಗಳು ಬೃಹತ್ ಉದ್ಯಮಿಗಳನ್ನು ತಮ್ಮ ಖಜಾನೆ ತುಂಬಿಸಲು ಬಳಸಿಕೊಂಡವು ಎನ್ನುವುದನ್ನು ನೋಡುತ್ತಿದ್ದೇವೆ. ಈ ರಾಜಕೀಯ ಪಕ್ಷಗಳಿಂದ ಬೃಹತ್ ಉದ್ಯಮಿಗಳು ಪಡೆದುಕೊಂಡದ್ದು ಏನು ಎನ್ನುವುದು ಕೂಡ ದೇಶಕ್ಕೆ ತಿಳಿಯಬೇಕಾಗಿದೆ. ಎಸ್ಬಿಐ ಪೂರ್ಣ ಪ್ರಮಾಣದಲ್ಲಿ ದಾಖಲೆಗಳನ್ನು ಇನ್ನೂ ಒದಗಿಸಿಲ್ಲ. ಕಂಪೆನಿಗಳು ಯಾವ ಯಾವ ಪಕ್ಷಗಳಿಗೆ ಎಷ್ಟೆಷ್ಟು ನೀಡಿವೆ ಮತ್ತು ಅವುಗಳು ಅದರಿಂದ ಪಡೆದ ಲಾಭಗಳೆಷ್ಟು. ಮುಚ್ಚಿಟ್ಟ ಅಕ್ರಮಗಳೆಷ್ಟು ಎನ್ನುವುದನ್ನು ಸ್ವತಂತ್ರ ತನಿಖಾ ಸಂಸ್ಥೆ ತನಿಖೆಗೊಳಪಡಿಸಬೇಕಾಗಿದೆ. ಉದ್ಯಮಿಗಳ ವೇಷದಲ್ಲಿರುವ ರಾಜಕಾರಣಿಗಳು ಮತ್ತು ರಾಜಕಾರಣಿಗಳ ವೇಷದಲ್ಲಿರುವ ಉದ್ಯಮಿಗಳ ಬಂಡವಾಳ ಈ ಮೂಲಕ ಬಹಿರಂಗವಾಗಬೇಕಾಗಿದೆ. ರಾಜಕೀಯ ಪಕ್ಷಗಳು ಮತ್ತು ಉದ್ಯಮಿಗಳ ನಡುವಿನ ‘ಬಾಂಡ್’ಗಳ ಹಿಂದಿರುವ ಕರಾಳ ಸಂಗತಿಗಳ ಮೇಲೆ ಈ ದೇಶದ ಭವಿಷ್ಯ ನಿಂತಿರುವುದರಿಂದ, ಮುಂದಿನ ಲೋಕಸಭಾ ಚುನಾವಣೆಯಲ್ಲಿ ಎಲ್ಲ ರಾಜಕೀಯ ಪಕ್ಷಗಳ ಪ್ರಣಾಳಿಕೆಯಲ್ಲಿ ಈ ಬಗ್ಗೆ ಸ್ವತಂತ್ರ ತನಿಖಾ ಸಂಸ್ಥೆಯಿಂದ ತನಿಖೆ ನಡೆಸುವುದನ್ನು ಘೋಷಿಸಬೇಕು.