ತನಿಖೆಯ ದಾರಿ ತಪ್ಪಿಸುತ್ತಿದ್ದಾರೆಯೇ ಕೇಂದ್ರ ಸಚಿವ ಕುಮಾರಸ್ವಾಮಿ?
PC: fb.com
ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ
ಸಿದ್ದರಾಮಯ್ಯ ವಿರುದ್ದ ಈ.ಡಿ. ಈಸಿಐಆರ್ ದಾಖಲಿಸಿದ ಬೆನ್ನಿಗೇ ಅವರ ಪತ್ನಿ ಸಪಾರ್ವತಿ ಅವರು ತನ್ನ ಹೆಸರಿನಲ್ಲಿರುವ ಮುಡಾ ನಿವೇಶನಗಳನ್ನು ಹಿಂದಿರುಗಿಸಲು ನಿರ್ಧರಿಸಿದ್ದಾರೆ. ಮುಡಾ ನಿವೇಶನಗಳನ್ನು ಅಕ್ರಮ ದಾರಿಯಲ್ಲಿ ಪಡೆಯಲಾಗಿದೆಯೇ ಮತ್ತು ಈ ಅಕ್ರಮದಲ್ಲಿ ಸಿದ್ದರಾಮಯ್ಯ ಅವರ ಪಾಲಿದೆಯೇ ಎನ್ನುವುದು ತನಿಖೆಯಾಗುವ ಮುನ್ನವೇ ಸಿದ್ದರಾಮಯ್ಯ ಅವರ ಪತ್ನಿ ನಿವೇಶನಗಳನ್ನು ಹಿಂದಿರುಗಿಸಿರುವುದನ್ನು ಹಲವರು ಸಮರ್ಥಿಸಿಕೊಂಡಿದ್ದರೆ, ಇನ್ನು ಕೆಲವರು ಪ್ರಶ್ನಿಸಿದ್ದಾರೆ. ನಿವೇಶನಗಳನ್ನು ಮರಳಿಸಿರುವುದರಿಂದಾಗಿ ಆರೋಪಗಳನ್ನು ಪರೋಕ್ಷವಾಗಿ ಸಮರ್ಥಿಸಿದಂತಾಗಿದೆ ಎಂದು ವಿರೋಧ ಪಕ್ಷಗಳು ಸಂಭ್ರಮಿಸುತ್ತಿದ್ದರೆ, ಸಾರ್ವಜನಿಕ ಬದುಕಿನಲ್ಲಿ ಯಾವ ರೀತಿಯಲ್ಲೂ ಗುರುತಿಸಿಕೊಳ್ಳದ ಸಿದ್ದರಾಮಯ್ಯ ಅವರ ಪತ್ನಿಯನ್ನು ಈ ಪ್ರಕರಣದಲ್ಲಿ ಎಳೆದು ತಂದಿರುವುದನ್ನು ಹಲವರು ಪ್ರಶ್ನಿಸುತ್ತಿದ್ದಾರೆ. ಸಹಸ್ರಾರು ಕೋಟಿ ರೂಪಾಯಿಯ ಹಗರಣಗಳನ್ನು ಮಾಡಿ ಅದನ್ನು ದಕ್ಕಿಸಿಕೊಂಡವರೇ ರಾಜಕೀಯದೊಳಗೆ ಮಿಂಚುತ್ತಿರುವಾಗ, ವಿರೋಧ ಪಕ್ಷಗಳಿಗೆ ಆಹಾರವಾಗಿದ್ದ ಮುಡಾ ನಿವೇಶನಗಳನ್ನು ಮರಳಿಸುವ ಮೂಲಕ ಸಿದ್ದರಾಮಯ್ಯ ಪತ್ನಿ ಸರಿಯಾದ ತೀರ್ಮಾನವನ್ನು ತೆಗೆದುಕೊಂಡಿದ್ದಾರೆ ಎಂದು ಹಲವರು ಶ್ಲಾಘಿಸುತ್ತಿದ್ದಾರೆ. ಇದೇ ತೀರ್ಮಾನವನ್ನು ಆರೋಪ ಕೇಳಿ ಬಂದ ಆರಂಭದಲ್ಲೇ ತೆಗೆದುಕೊಂಡಿದ್ದರೆ ಪರಿಣಾಮಕಾರಿಯಾಗಿರುತ್ತಿತ್ತು ಮತ್ತು ವಿರೋಧಿಗಳ ಬಾಯಿಯನ್ನು ಮುಚ್ಚಿಸಬಹುದಾಗಿತ್ತು ಎಂದು ಕಾಂಗ್ರೆಸ್ನೊಳಗಿರುವ ಕೆಲವು ನಾಯಕರು ಒಳಗಿಂದೊಳಗೆ ಅಭಿಪ್ರಾಯ ಪಡುತ್ತಾರೆ. ಅದೇ ಹೊತ್ತಿಗೆ ಬಿಜೆಪಿಯ ಶಾಸಕರೇ, ಬಿಜೆಪಿಯ ಆರೋಪಗಳನ್ನು ತಳ್ಳಿ ಹಾಕುತ್ತಿದ್ದಾರೆ. ''ಬಿಜೆಪಿ ನೇತೃತ್ವದ ಸರಕಾರ ಅಸ್ತಿತ್ವದಲ್ಲಿದ್ದಾಗ ಮುಡಾ ನಿವೇಶನಗಳನ್ನು ಮುಖ್ಯಮಂತ್ರಿ ಪತ್ನಿಗೆ ನೀಡಲಾಗಿತ್ತು. ಆದುದರಿಂದ ಪರೋಕ್ಷವಾಗಿ ಈ ಅಕ್ರಮದಲ್ಲಿ ಬಿಜೆಪಿಯೂ ಭಾಗಿಯಾದಂತಾಗಿದೆ. ಇಷ್ಟಕ್ಕೂ ನಿವೇಶನಗಳನ್ನು ಸಿದ್ದರಾಮಯ್ಯ ಅವರ ಪತ್ನಿ ಮಾತ್ರ ಪಡೆದಿರುವುದಲ್ಲ. ಇನ್ನೂ ಹಲವರು ಪಡೆದಿದ್ದಾರೆ. ಅವರೆಲ್ಲರಿಂದ ನಿವೇಶನಗಳನ್ನು ಕಿತ್ತುಕೊಳ್ಳುತ್ತಾರೆಯೇ? ಬಿಜೆಪಿ ಆರೋಪದಲ್ಲಿ ಹುರುಳಿಲ್ಲ'' ಎಂದು ಬಿಜೆಪಿ ಶಾಸಕರೊಬ್ಬರು ಮಾಧ್ಯಮಗಳ ಮುಂದೆ ಹೇಳಿಕೆ ನೀಡಿದ್ದಾರೆ. ಇವೆಲ್ಲದರ ನಡುವೆ, ಕೇಂದ್ರ ಸಚಿವ ಕುಮಾರಸ್ವಾಮಿ ಮಾತ್ರ, ನಿವೇಶನಗಳನ್ನು ಮರಳಿ ಪಡೆದ ಮುಡಾದ ವಿರುದ್ಧವೇ ಆರೋಪಗಳನ್ನು ಮಾಡಿದ್ದಾರೆ. ಈ ಮೂಲಕ ಹಗರಣವನ್ನು ಮುಚ್ಚಿ ಹಾಕಲು ಪ್ರಯತ್ನಿಸುತ್ತಿದ್ದಾರೆ. ಸಾಕ್ಷ್ಯ ನಾಶಕ್ಕೆ ಷಡ್ಯಂತ್ರ ನಡೆದಿದೆ ಎಂದೆಲ್ಲ ದೂರಿದ್ದಾರೆ.
ಸ್ವತಃ ಕೋಟ್ಯಂತರ ಬೆಲೆಬಾಳುವ ಗಣಿ ಹಗರಣದಲ್ಲಿ ತನಿಖೆ ಎದುರಿಸುತ್ತಿರುವ ಕೇಂದ್ರ ಸಚಿವ ಕುಮಾರಸ್ವಾಮಿಯವರ ಇತ್ತೀಚಿನ ವರ್ತನೆ, ಹೇಳಿಕೆಗಳನ್ನು ನೋಡಿದರೆ ಅವರು ತೀವ್ರ ಹತಾಶೆಯಲ್ಲಿದ್ದಾರೆ. ಇನ್ನೂ ತನಿಖೆಯೇ ಪೂರ್ತಿಯಾಗದ ಒಂದು ಪ್ರಕರಣದಲ್ಲಿ ಇಷ್ಟೆಲ್ಲ ಪ್ರಮಾದಗಳನ್ನು ಹುಡುಕುವ ಕುಮಾರಸ್ವಾಮಿಯವರು, ತನ್ನ ಹಗರಣಗಳನ್ನು ತನಿಖೆ ನಡೆಸುತ್ತಿರುವ ಅಧಿಕಾರಿಗಳ ಜೊತೆಗೆ ವರ್ತಿಸುತ್ತಿರುವ ವರ್ತನೆ ಇದೀಗ ಪ್ರಶ್ನೆಗೊಳಗಾಗಿದೆ. ತನಿಖೆಗೆ ಸಹಕರಿಸುತ್ತಿಲ್ಲ ಮಾತ್ರವಲ್ಲ, ತನಿಖಾಧಿಕಾರಿಯ ಜೊತೆಗೆ ಸಹಕರಿಸದೇ ಅಧಿಕಾರಿಯ ವಿರುದ್ದವೇ ಆರೋಪಗಳನ್ನು ಮಾಡಲು ಶುರು ಹಚ್ಚಿದ್ದಾರೆ. ಅಷ್ಟೇ ಅಲ್ಲ, ತನ್ನ ಸಚಿವ ಸ್ಥಾನವನ್ನು ಬಳಸಿಕೊಂಡು ತನಿಖೆಯ ಮೇಲೆ ಪ್ರಭಾವ ಬೀರಲು ಮುಂದಾಗಿದ್ದಾರೆ. ಸಂಡೂರಿನ ಶ್ರೀ ಸಾಯಿ ವೆಂಕಟೇಶ್ವರ ಮಿನರಲ್ಸ್ಗೆ ಸಂಬಂಧಿಸಿದ ಗಣಿಗಾರಿಕೆ ಪ್ರಕರಣಕ್ಕೆ ಸಂಬಂಧಿಸಿ ಅವರನ್ನು ವಿಚಾರಣೆಗೆ ಒಳಪಡಿಸಲು ಸಿಟ್ ಈಗಾಗಲೇ ರಾಜ್ಯಪಾಲರ ಅನುಮತಿಯನ್ನು ಕೇಳಿದೆ. ಸಿಟ್ ರಾಜ್ಯಪಾಲರ ಅನುಮತಿ ಕೇಳಿರುವುದು ಮಾಧ್ಯಮಗಳಿಗೆ ಬಹಿರಂಗವಾಗಿರುವುದನ್ನೇ ಒಂದು ಹಗರಣವೆಂದು ಬಿಂಬಿಸಲು ಹೊರಟು ಕುಮಾರಸ್ವಾಮಿ ನಗೆಪಾಟಲಿಗೀಡಾಗಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಜ್ಯಪಾಲರ ಪಕ್ಷಪಾತವನ್ನು ಪ್ರಶ್ನಿಸಿದ್ದಾರೆಯೇ ಹೊರತು, ತನ್ನ ವಿರುದ್ಧ ತನಿಖೆ ನಡೆಯಬಾರದು ಎಂದು ಯಾವತ್ತೂ ಹೇಳಿಲ್ಲ, 'ತನಿಖೆಯಾಗಲಿ, ಆರೋಪ ಸಾಬೀತಾದರೆ ರಾಜೀನಾಮೆ ನೀಡಲು ಸಿದ್ದ' ಎಂದು ಅವರು ಈಗಾಗಲೇ ಮಾಧ್ಯಮಗಳ ಮುಂದೆ ಸ್ಪಷ್ಟಪಡಿಸಿದ್ದಾರೆ. ತನಿಖೆ ನಡೆಸುತ್ತಿರುವ ಅಧಿಕಾರಿಗಳ ಮೇಲೆ ಯಾವತ್ತೂ ವೈಯಕ್ತಿಕ ಟೀಕೆಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಮಾಡಿಲ್ಲ. ಆದರೆ, ಕುಮಾರಸ್ವಾಮಿ ತನ್ನ ಹಗರಣಗಳನ್ನು ತನಿಖೆ ನಡೆಸುತ್ತಿರುವ ಎಡಿಜಿಪಿ ವಿರುದ್ದ ವೈಯಕ್ತಿಕ ದಾಳಿಗಳನ್ನು ನಡೆಸುತ್ತಿದ್ದಾರೆ. ನೇರವಾಗಿ ಅವರಿಗೆ ಬೆದರಿಕೆಗಳನ್ನು ಒಡ್ಡುತ್ತಿದ್ದಾರೆ. ತನಿಖೆಗೆ ಅಡ್ಡಿಯನ್ನುಂಟು ಮಾಡುತ್ತಿದ್ದಾರೆ. ತನ್ನ ಸಚಿವ ಸ್ಥಾನವನ್ನು ದುರುಪಯೋಗ ಪಡಿಸಿಕೊಂಡು, ಎಡಿಜಿಪಿ ವಿರುದ್ಧ ಕ್ರಮ ಕೈಗೊಳ್ಳಲು ಕೇಂದ್ರ ಸರಕಾರಕ್ಕೆ ಒತ್ತಡವನ್ನು ಹಾಕುತ್ತಿದ್ದಾರೆ. ತಾನು ಪಡೆದ ನಿವೇಶನವನ್ನು ಮರಳಿಸಿರುವುದರಿಂದ ಸಿದ್ದರಾಮಯ್ಯ ಆರೋಪ ಸಾಬೀತಾದಂತೆ ಆಗುವುದಿಲ್ಲ. ಆದರೆ ತನಿಖೆ ನಡೆಸುತ್ತಿರುವ ಅಧಿಕಾರಿಗಳನ್ನು ಆರೋಪಿ ಸ್ಥಾನದಲ್ಲಿರುವ ಕೇಂದ್ರ ಸಚಿವರು ಬೆದರಿಸಿದರೆ, ತನಿಖಾಧಿಕಾರಿಯ ವಿರುದ್ಧ ಸುಳ್ಳು ಆರೋಪಗಳನ್ನು ಮಾಡಿದರೆ, ಅವರ ವಿರುದ್ದ ಕೇಂದ್ರ ಸಚಿವರಿಗೆ ಗುಟ್ಟಾಗಿ ಪತ್ರಗಳನ್ನು ಬರೆದರೆ ಪರೋಕ್ಷವಾಗಿ ತನ್ನ ಮೇಲಿರುವ ಆರೋಪಗಳನ್ನು ಪರೋಕ್ಷವಾಗಿ ಒಪ್ಪಿಕೊಂಡಂತಾಗುತ್ತದೆ. ತನಿಖೆಗೆ ಸಚಿವ ಕುಮಾರಸ್ವಾಮಿ ಹೆದರಿರುವುದು ಇದರಿಂದ ಬಹಿರಂಗವಾಗುತ್ತದೆ. ಇಷ್ಟಕ್ಕೂ ತನಿಖಾಧಿಕಾರಿಯ ಮೇಲೆ ಕುಮಾರಸ್ವಾಮಿ ಮಾಡುತ್ತಿರುವ ಆರೋಪಗಳಲ್ಲಿ ಎಳ್ಳಷ್ಟಾದರೂ ಸತ್ಯಾಂಶವಿದೆಯೇ ಎಂದರೆ ಅದೂ ಇಲ್ಲ.
ಮುಖ್ಯವಾಗಿ, 'ಎಡಿಜಿಪಿ ಭ್ರಷ್ಟ ಅಧಿಕಾರಿ. ಒಬ್ಬ ಬ್ಲ್ಯಾಕ್ಮೇಲರ್, ಕ್ರಿಮಿನಲ್. ಅವರ ಕೈಕೆಳಗೆ ಕೆಲಸ ಮಾಡುವ ಇನ್ ಸೆಕ್ಟರ್ಗೆ 20 ಕೋಟಿ ರೂಪಾಯಿ ಬೇಡಿಕೆಯಿಟ್ಟು ಸಿಕ್ಕಿ ಬಿದ್ದಿದ್ದಾರೆ'' ಎಂದೆಲ್ಲ ಅವರು ಆರೋಪಿಸಿದ್ದಾರೆ. ಆದರೆ ಇವುಗಳಿಗೆ ಅವರ ಬಳಿ ಯಾವುದೇ ದಾಖಲೆ ಇಲ್ಲ. ಈ ಆರೋಪಗಳಿಗಾಗಿ ಕೇಂದ್ರ ಸಚಿವ ಕುಮಾರಸ್ವಾಮಿಯ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲಿಸುತ್ತೇನೆ ಎಂದು ಎಡಿಜಿಪಿ ಚಂದ್ರಶೇಖರ್ ಈಗಾಗಲೇ ಎಚ್ಚರಿಸಿದ್ದಾರೆ. ಇಷ್ಟ ಕ್ಕೂ, ಎಡಿಜಿಪಿ ಚಂದ್ರಶೇಖರ್ 20 ಕೋಟಿ ರೂಪಾಯಿ ಬೇಡಿಕೆಯಿಟ್ಟಿದ್ದಾರೆ ಎಂದು ಆರೋಪಿಸಿರುವುದು ಒಬ್ಬ ಇನ್ಸ್ಪೆಕ್ಟರ್, ಆತನ ಹೆಸರು ಕಿಶೋರ್ ಕುಮಾರ್. ಆದರೆ ಈ ಪ್ರಕರಣವನ್ನು ವಿಚಾರಣೆ ನಡೆಸಿದ ಕೋರ್ಟ್ ಆರೋಪವನ್ನು ತಳ್ಳಿ ಹಾಕಿದೆ. ಸುಪ್ರೀಂಕೋರ್ಟ್ನಲ್ಲಿ ಸುಳ್ಳು ಸಾಕ್ಷ್ಯ ಹೇಳಿದ ಆರೋಪ ಹೊತ್ತಿರುವ ಇನ್ಸ್ಪೆಕ್ಟರ್ ಹೇಳಿಕೆಯ ಆಧಾರದಲ್ಲಿ ಕುಮರಾಸ್ವಾಮಿ ಅವರು ಲೋಕಾಯುಕ್ತ ಮುಖ್ಯಸ್ಥರ ಮೇಲೆ ದಾಳಿ ನಡೆಸುವುದು ಎಷ್ಟು ಸರಿ? ಆರೋಪವನ್ನು ಸ್ವತಃ ನ್ಯಾಯಾಲಯವೇ ತಳ್ಳಿ ಹಾಕಿರುವಾಗ, ಮತ್ತೆ ಅದನ್ನು ಪ್ರಸ್ತಾಪಿಸುವ ಅಗತ್ಯವಿದೆಯೆ? ತನ್ನನ್ನು ಸಮರ್ಥಿಸಿಕೊಳ್ಳಲು ಒಬ್ಬ ಅಮಾನತುಗೊಂಡ ಇನ್ಸ್ಪೆಕ್ಟರ್ನನ್ನು ಬಳಸಿಕೊಳ್ಳಲು ಮುಂದಾಗಿರುವುದೇ ಸಚಿವ ಕುಮಾರಸ್ವಾಮಿಯವರ ಹತಾಶೆ, ಆತಂಕಗಳನ್ನು ಹೇಳುತ್ತದೆ. ನಕಲಿ ಮಾರಾಟ ಪತ್ರಗಳನ್ನು ಸೃಷ್ಟಿಸಿ ಪಿಎಸಿಎಲ್ ಭೂಮಿಯನ್ನು ಅಕ್ರಮವಾಗಿ ಮಾರಾಟ ಮಾಡಿದ ಆರೋಪಗಳನ್ನು ಹೊತ್ತಿರುವ, ನೂರಾರು ಕೋಟಿ ರೂಪಾಯಿ ವಂಚನೆಯ ಆರೋಪಗಳನ್ನು ಹೊಂದಿರುವ
ಇನ್ಸ್ಪೆಕ್ಟರ್ ಜೊತೆಗೆ ಕೇಂದ್ರ ಸಚಿವ ಕುಮಾರಸ್ವಾಮಿಗೆ ಇರುವ ಅನೈತಿಕ ಸಂಬಂಧವನ್ನು ಇದು ಹೇಳುತ್ತದೆ. ಈ ಮೂಲಕ ಆ ಇನ್ಸ್ಪೆಕ್ಟರ್ನ ಮೇಲಿರುವ ಆರೋಪಗಳಲ್ಲೂ ಸಚಿವ ಕುಮಾರಸ್ವಾಮಿ ಪಾಲು ಬೇಡಿದಂತಾಗಿದೆ. ರಾಜಕಾರಣಿಗಳು ಪೊಲೀಸ್ ಅಧಿಕಾರಿಗಳಿಗೆ ಮಾನಸಿಕವಾಗಿ ಚಿತ್ರಹಿಂಸೆ ನೀಡಿ ಅವರ ನೈತಿಕ ಶಕ್ತಿಯನ್ನು ಕುಗ್ಗಿಸುತ್ತಿರುವುದು ಇತ್ತೀಚಿನ ದಿನಗಳಲ್ಲಿ ಮಾಧ್ಯಮಗಳಲ್ಲಿ ಸುದ್ದಿಯಾಗುತ್ತಿವೆ. ಈ ಹಿಂದೆಯೂ ಹಲವು ಅಧಿಕಾರಿಗಳು ರಾಜಕಾರಣಿಗಳ ಒತ್ತಡಗಳನ್ನು ತಾಳಿಕೊಳ್ಳಲಾಗದೆ ಆತ್ಮಹತ್ಯೆ ಮಾಡಿಕೊಂಡ ಉದಾಹರಣೆಗಳಿವೆ. ಇತ್ತೀಚೆಗೆ ವಾಲ್ಮೀಕಿ ಅಭಿವೃದ್ಧಿ ನಿಗಮಕ್ಕೆ ಸಂಬಂಧಿಸಿದ ಹಗರಣದಲ್ಲೂ ಅಮಾಯಕ ಅಧಿಕಾರಿಯೊಬ್ಬರು ಪ್ರಾಣ ಕಳೆದುಕೊಳ್ಳಬೇಕಾಯಿತು. ಹೀಗಿರುವಾಗ, ಕೇಂದ್ರದಲ್ಲಿ ಅತ್ಯುನ್ನತ ಸ್ಥಾನವನ್ನು ಹೊಂದಿರುವ ಕುಮಾರಸ್ವಾಮಿಯವರು ತನ್ನ ಹಗರಣಗಳನ್ನು ತನಿಖೆ ನಡೆಸುತ್ತಿರುವ ಹಿರಿಯ ಅಧಿಕಾರಿಗೆ ಬೆದರಿಕೆ ಒಡ್ಡುವುದು, ಸಾರ್ವಜನಿಕವಾಗಿ ಅವರ ಮಾನಹಾನಿ ಮಾಡುವುದು ಎಷ್ಟು ಸರಿ? ಇದೇ ಸಂದರ್ಭದಲ್ಲಿ ಎಡಿಜಿಪಿ ಚಂದ್ರಶೇಖರ್ ಅವರು ಕೇಂದ್ರ ಸಚಿವ ಕುಮಾರಸ್ವಾಮಿಯವರನ್ನು ಪರೋಕ್ಷವಾಗಿ ಹಂದಿಗೆ ಹೋಲಿಸಿರುವುದು ಮಾಧ್ಯಮಗಳಲ್ಲಿ ಸುದ್ದಿಯಾಗಿದೆ. ಕುಮಾರಸ್ವಾಮಿಯವರು ಒಬ್ಬ ಜನಪ್ರತಿನಿಧಿ. ಅಷ್ಟೇ ಅಲ್ಲ, ಕೇಂದ್ರ ಸರಕಾರದ ಭಾಗವಾಗಿ ಕೆಲಸ ಮಾಡುತ್ತಿದ್ದಾರೆ. ಅವರ ವಿರುದ್ಧ ತನಿಖೆ ನಡೆಸುವ ಮಹತ್ತರ ಜವಾಬ್ದಾರಿಯನ್ನು ಚಂದ್ರಶೇಖರ್ ಅವರಿಗೆ ವಹಿಸಲಾಗಿದೆ. ಇಂತಹ ಸಂದರ್ಭದಲ್ಲಿ, ಈ ತನಿಖೆ ವೈಯಕ್ತಿಕವಾಗದಂತೆ ನೋಡಿಕೊಳ್ಳುವುದು ಬಹಳ ಮುಖ್ಯವಾಗಿದೆ. ಅಧಿಕಾರಿಯಾಗಿ ಜನಪ್ರತಿನಿಧಿಯೊಬ್ಬರಿಗೆ ಪರೋಕ್ಷವಾಗಿ 'ಹಂದಿ' ಎನ್ನುವ ಪದ ಬಳಸಿರುವುದು ಎಡಿಜಿಪಿ ಸ್ಥಾನಕ್ಕೆ ಯಾವ ರೀತಿಯಲ್ಲೂ ಶೋಭೆಯಲ್ಲ. ಇಂತಹ ಪದಬಳಕೆ ಪರೋಕ್ಷವಾಗಿ ಆರೋಪಿ ಸ್ಥಾನದಲ್ಲಿರುವ ಕುಮಾರಸ್ವಾಮಿಯವರಿಗೇ ಅನುಕೂಲಕರವಾಗಿ ಪರಿಣಮಿಸಬಹುದು. ಆದುದರಿಂದ, ತನಿಖೆಯ ವಿಶ್ವಾಸಾರ್ಹತೆಯನ್ನು ಉಳಿಸಿಕೊಳ್ಳುವಲ್ಲಿ ತನಗೂ ಹೊಣೆಗಾರಿಕೆಗಳಿವೆ ಎನ್ನುವುದನ್ನು ನೆನಪಿನಲ್ಲಿಡುತ್ತಾ ಚಂದ್ರಶೇಖರ್ ಅವರು ಮುಂದುವರಿಯಬೇಕಾಗಿದೆ. ಕುಮಾರಸ್ವಾಮಿಯವರು ಯಾವುದೇ ಆರೋಪಗಳನ್ನು ಮಾಡಿದರೂ ಅದನ್ನು ನ್ಯಾಯಾಲಯದಲ್ಲಿ ಪ್ರಶ್ನಿಸಬೇಕೇ ಹೊರತು, ಮಾಧ್ಯಮಗಳ ಮುಂದೆ ರಣಾರಂಪ ಮಾಡುವುದರಿಂದ ಪರೋಕ್ಷವಾಗಿ ಅವರು ನಡೆಸುತ್ತಿರುವ ತನಿಖೆಗೆ ಹಿನ್ನಡೆಯಾಗಬಹುದು.