ಜನವರಿ 22 ಆತ್ಮವಿಮರ್ಶೆಯ ದಿನ!
ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ
ಜನವರಿ 22 ಎಂದಾಕ್ಷಣ ದೇಶ ಪಾಪಪ್ರಜ್ಞೆಯಿಂದ ತಲೆತಗ್ಗಿಸುತ್ತದೆ. 1999 ಜನವರಿ 22ರಂದು ಸಮಾಜಸೇವಕ ಪಾದ್ರಿ ಗ್ರಹಾಂ ಸ್ಟೈನ್ಸ್ ಮತ್ತು ಆತನ ಇಬ್ಬರು ಮಕ್ಕಳನ್ನು ಸಂಘಪರಿವಾರ ಸಂಘಟನೆಗೆ ಸೇರಿದ ಕ್ರಿಮಿನಲ್ ಗಳ ಗುಂಪು ಜೀವಂತ ಸುಟ್ಟು ಹಾಕಿತು. ದಾರಾಸಿಂಗ್ ಎಂಬ ಸಂಘಪರಿವಾರ ಮುಖಂಡ ಮತ್ತು ಆತನ ಸಹಚರರು ಈ ಕೃತ್ಯವನ್ನು ಎಸಗಿದ್ದರು. ಪಾದ್ರಿ ಗ್ರಹಾಂ ಸ್ಟೈನ್ ಮತಾಂತರ ಮಾಡುತ್ತಿದ್ದ ಎನ್ನುವ ಕಾರಣವನ್ನು ಮುಂದಿಟ್ಟುಕೊಂಡು ಈ ಕ್ರೌರ್ಯವನ್ನು ಎಸಗಿದ್ದರು. ಆತನ ಜೊತೆಗಿದ್ದ ಮಕ್ಕಳಲ್ಲಿ ಮಗ ತಿಮೋತಿ 7 ವರ್ಷದವನಾಗಿದ್ದರೆ, ಫಿಲಿಪ್ ಗೆ 10 ವರ್ಷ. ಈ ಭೀಕರ ಕಗ್ಗೊಲೆಗೆ ವಿಶ್ವವೇ ಬೆಚ್ಚಿ ಬಿತ್ತು. ಈ ಕೃತ್ಯದ ಬಳಿಕ ಆರೋಪಿ ಸುಮಾರು ಒಂದು ವರ್ಷ ತಲೆ ಮರೆಸಿಕೊಂಡಿದ್ದ. ಕೊನೆಗೂ ಆರೋಪಿಯನ್ನು ಬಂಧಿಸಲಾಯಿತು. ಇದಕ್ಕೂ ಮೊದಲು ಗೋರಕ್ಷಕ ದಳದ ಮುಖಂಡನಾಗಿ ದಾರಾಸಿಂಗ್ ಹಲವು ಕ್ರಿಮಿನಲ್ ಕೃತ್ಯಗಳನ್ನು ಎಸಗಿದ್ದ. ಈತ ಮನುಷ್ಯ ವೇಷದಲ್ಲಿ ಓಡಾಡುತ್ತಿದ್ದ ಮೃಗವೇ ಆಗಿ ಮಾರ್ಪಟ್ಟಿದ್ದ. 1998ರಲ್ಲಿ ಒಡಿಶಾದ ಜಾನುವಾರು ಸಾಗಾಟದ ವಾಹನವೊಂದನ್ನು ತಡೆದು ಅದನ್ನು ದರೋಡೆಗೈದದ್ದಷ್ಟೇ ಅಲ್ಲದೆ, ಲಾರಿಯಲ್ಲಿದ್ದ ಸಹಾಯಕ ಶೇಕ್ ರೆಹಮಾನ್ನನ್ನು ಥಳಿಸಿ ಕೊಂದಿದ್ದ. 1999ರಲ್ಲಿ ಅರುಳ್ ದಾಸ್ ಎನ್ನುವ ಕ್ರಿಶ್ಚಿಯನ್ ಪಾದ್ರಿಯನ್ನು ಬಾಣದಿಂದ ಹೊಡೆದು ಚಿತ್ರ ಹಿಂಸೆ ನೀಡಿ ಕೊಂದು ಹಾಕಿದ್ದ. ಈ ಸಂದರ್ಭದಲ್ಲೇ ಈತನನ್ನು ಬಂಧಿಸಿದ್ದಿದ್ದರೆ ಗ್ರಹಾಂಸ್ಟೈನ್ಸ್ ಮತ್ತು ಆತನ ಮಕ್ಕಳ ಬರ್ಬರ ಹತ್ಯೆ ನಡೆಯುತ್ತಿರಲಿಲ್ಲವೇನೋ. ಆದರೆ ಈತನಿಗೆ ರಾಜಕೀಯ ಶಕ್ತಿಗಳ ಬೆಂಬಲವಿತ್ತು. ಬಿಜೆಪಿಯ ಸಕ್ರಿಯ ಸದಸ್ಯನಾಗಿದ್ದ ಈತ ಸಂಘಪರಿವಾರದ ಬೇರೆ ಬೇರೆ ಸಹ ಸಂಘಟನೆಗಳಲ್ಲಿ ಗುರುತಿಸಿಕೊಂಡಿದ್ದ. ಚುನಾವಣಾ ಪ್ರಚಾರದಲ್ಲೂ ಈತನನ್ನು ರಾಜಕೀಯ ವ್ಯಕ್ತಿಗಳು ಬಳಸಿಕೊಳ್ಳುತ್ತಿದ್ದರು. ಗ್ರಹಾಂಸ್ಟೈನ್ಸ್ ಪರಿವಾರದ ಹತ್ಯೆ ಅಂತರ್ರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಾದ ಕಾರಣ ಮತ್ತು ಮಾನವ ಹಕ್ಕು ಸಂಘಟನೆಗಳು ಭಾರೀ ಒತ್ತಡಗಳನ್ನು ಹಾಕಿದ ಪರಿಣಾಮವಾಗಿ ಈತನನ್ನು ಬಂಧಿಸುವುದು ಪೊಲೀಸರಿಗೆ ಅನಿವಾರ್ಯವಾಯಿತು. ಜನವರಿ 2000ರಲ್ಲಿ ಈತನ ಬಂಧನವಾಯಿತು. ಸಿಬಿಐ ಈತನಿಗೆ ಮರಣದಂಡನೆಯನ್ನು ಅಪೇಕ್ಷಿಸಿತ್ತಾದರೂ, ನ್ಯಾಯಾಲಯ ಜೀವವಾಧಿ ಶಿಕ್ಷೆಯನ್ನು ನೀಡಿತು.
ಗ್ರಹಾಂ ಸ್ಟೈನ್ಸ್ ಮತ್ತು ಆತನ ಮಕ್ಕಳನ್ನು ಧರ್ಮದ ಹೆಸರಿನಲ್ಲಿ ಕೊಂದು ಹಾಕಲಾಯಿತು. ಪಾದ್ರಿ ಗ್ರಹಾಂ ಸ್ಟೈನ್ಸ್ 1965ರಲ್ಲಿ ಭಾರತಕ್ಕೆ ಬಂದಿದ್ದರು. ತನ್ನ ಬದುಕಿನುದ್ದಕ್ಕೂ ಒಡಿಶಾದ ಬುಡಕಟ್ಟು ಸಮುದಾಯದ ಜನರ ಸೇವೆ ಮಾಡಿದರು. ಮುಖ್ಯವಾಗಿ ಕುಷ್ಠ ರೋಗಗಳಿಂದ ನರಳುತ್ತಿದ್ದ ಜನರಿಗೆ ಅವರು ನೆರವಾದರು. ಸರಕಾರದಿಂದ ಆಗ ತೀವ್ರ ನಿರ್ಲಕ್ಷ್ಯವನ್ನು ಎದುರಿಸುತ್ತಿದ್ದ ಬುಡಕಟ್ಟು ಸಮುದಾಯದ ಜನರ ಶಿಕ್ಷಣ, ಆರೋಗ್ಯಕ್ಕಾಗಿ ಅವರು ಮತ್ತು ಅವರ ತಂಡ ದುಡಿಯಿತು. ಗ್ರಹಾಂ ಸ್ಟೈನ್ಸ್ ಮತ್ತು ಅವರ ತಂಡದ ಹಿಂದೆ ಕ್ರಿಶ್ಚಿಯನ್ ಮಿಷನರಿಗಳಿದ್ದಾರೆ ಎನ್ನುವುದರಲ್ಲಿ ಎರಡು ಮಾತಿಲ್ಲ. ಆದರೆ ತನ್ನ ಧರ್ಮದ ಮೌಲ್ಯಗಳನ್ನು ಸೇವೆಯ ಮೂಲಕ ಆ ಬುಡಕಟ್ಟು ಸಮುದಾಯಕ್ಕೆ ಅವರು ತಲುಪಿಸುವ ಪ್ರಯತ್ನವನ್ನು ಮಾಡಿದರು. ಇದೇ ಸಂದರ್ಭದಲ್ಲಿ ದಾರಾಸಿಂಗ್ ಕೂಡ ಒಂದು ಧರ್ಮ ಪ್ರತಿಪಾದಿಸುವ ಮೌಲ್ಯಗಳ ಪ್ರತಿನಿಧಿಯಾಗಿದ್ದಾನೆ. ಆತ ಬಜರಂಗದಳ ಮತ್ತು ವಿಶ್ವ ಹಿಂದೂ ಪರಿಷತ್ನ ಸಕ್ರಿಯ ಸದಸ್ಯನಾಗಿದ್ದ. ಆರೆಸ್ಸೆಸ್ ಶಾಖೆಗಳಲ್ಲೂ ಭಾಗವಹಿಸಿದ್ದ. ಗೋ ಸುರಕ್ಷಾ ಸಮಿತಿಯ ಸದಸ್ಯ ಮಾತ್ರವಲ್ಲ, 1998ರಲ್ಲಿ ನಡೆದ ಚುನಾವಣೆಯಲ್ಲಿ ಬಿಜೆಪಿಗಾಗಿ ಹಗಲು ರಾತ್ರಿ ದುಡಿದಿದ್ದ. ಆತ ಸಂಘಪರಿವಾರದ ಹಿಂದುತ್ವದ ಕಾಲಾಳುವಾಗಿದ್ದ. ಒಬ್ಬ ತನ್ನ ಧರ್ಮದ ಆಶಯಗಳನ್ನು ಬುಡಕಟ್ಟು ಜನರ ಸೇವೆಯಲ್ಲಿ ಕಂಡುಕೊಂಡಿದ್ದರೆ, ಇನ್ನೊಬ್ಬನಿಗೆ ಧರ್ಮವೆಂದರೆ ಹಲ್ಲೆ, ದರೋಡೆ, ಕೊಲೆಗಳಾಗಿದ್ದವು. ಒಂದೇ ಒಂದು ಗೋವುಗಳನ್ನು ಪಾಲನೆ ಮಾಡದ ಈತ ಗೋ ಸುರಕ್ಷಾ ಸಮಿತಿಯ ಮೂಲಕ ಕ್ರಿಮಿನಲ್ ಚಟುವಟಿಕೆಗಳನ್ನು ನಡೆಸುತ್ತಿದ್ದ. ಗ್ರಹಾಂಸ್ಟೈನ್ಸ್ ಮತ್ತು ಆತನ ತಂಡ ಮನುಷ್ಯರ ಸೇವೆಯಲ್ಲಿ ದೇವರನ್ನು ಹುಡುಕುತ್ತಿದ್ದರೆ, ಗೋವುಗಳಲ್ಲಿ ದೇವರನ್ನು ಕಂಡುಕೊಂಡ ಈತ ಅದರ ರಕ್ಷಣೆಗಾಗಿ ಮನುಷ್ಯರನ್ನೇ ಕೊಲ್ಲುತ್ತಿದ್ದ. ಇದು ಈತನನ್ನು ಅಂತಿಮವಾಗಿ ಒಬ್ಬ ಪಾದ್ರಿಯನ್ನಷ್ಟೇ ಅಲ್ಲ, ಯಾವುದೇ ಧರ್ಮ ರಾಜಕೀಯದ ಅರಿವಿಲ್ಲದ ಮುಗ್ಧ ಇಬ್ಬರು ಮಕ್ಕಳನ್ನು ಜೀವಂತ ಸುಟ್ಟು ಹಾಕುವ ಬಂತಕ್ಕೆ ತಲುಪಿಸಿತು. ಅಂತಿಮವಾಗಿ ಆತ ನಂಬಿದ ಸಿದ್ಧಾಂತ ಆತನನ್ನು ರಾಕ್ಷಸನನ್ನಾಗಿಸಿತು. ಕಟ್ಟ ಕಡೆಗೆ ಜೈಲು ಪಾಲು ಮಾಡಿತು.
ದಾರಾಸಿಂಗ್ ಅನಕ್ಷರಸ್ಥನಾಗಿರಲಿಲ್ಲ. ಕಲಾ ಪದವೀಧರನಾಗಿದ್ದ ಮಾತ್ರವಲ್ಲ, ಹಿಂದಿ ಭಾಷೆಯಲ್ಲಿ ಪರಿಣತನಾಗಿದ್ದ. ಒಡಿಶಾದ ಒಂದು ಶಾಲೆಯಲ್ಲಿ ಕೆಲ ಕಾಲ ಹಿಂದಿ ಶಿಕ್ಷಕನಾಗಿ ಕೆಲಸ ಮಾಡಿದ್ದ. ಧರ್ಮ ಒಬ್ಬ ಮನುಷ್ಯನನ್ನು ಯಾವ ದಿಕ್ಕಿಗೆ ಬೇಕಾದರೂ ಕೊಂಡೊಯ್ಯಬಹುದು ಎನ್ನುವುದಕ್ಕೆ ಈತ ಉದಾಹರಣೆಯಾಗಿದ್ದ. ಸ್ವಾಮಿ ವಿವೇಕಾನಂದ, ಮಹಾತ್ಮಾಗಾಂಧಿ, ನಾರಾಯಣಗುರುವಿನಂತಹ ಸಂತರ ಹಿಂದೂ ಧರ್ಮ ಇವನಿಗೆ ಆದರ್ಶವಾಗಿದ್ದರೆ ಇಂದು ಈತನೂ ಒಡಿಶಾದ ಬುಡಕಟ್ಟು ಸಮುದಾಯದ ನಡುವೆ ಒಬ್ಬ ಮಹಾತ್ಮನಾಗಿ ಬೆಳೆಯುತ್ತಿದ್ದ. ಅವರ ಸೇವೆಯ ಮೂಲಕ ನಿಜವಾದ ಹಿಂದೂ ಧರ್ಮೀಯನಾಗಿ ಗುರುತಿಸಲ್ಪಡುತ್ತಿದ್ದ. ದುರದೃಷ್ಟವಶಾತ್ ಈತ ಬಜರಂಗದಳ, ಆರೆಸ್ಸೆಸ್ನ ಹಿಂದುತ್ವದ ಕಾಲಾಳುವಾದ. ಹಿಂದೂ ಧರ್ಮದ ಹೆಸರಿನಲ್ಲಿ ಅವರು ಈತನಲ್ಲಿ ದ್ವೇಷ, ಹಿಂಸೆಯನ್ನು ಬಿತ್ತಿದರು. ಮನುಷ್ಯನಾಗಿ ಎತ್ತರಕ್ಕೆ ಬೆಳೆಯಬಹುದಾಗಿದ್ದ ಈತನೊಳಗೆ ಮೃಗತ್ವವನ್ನು ತುಂಬಿದರು. ಗೋರಕ್ಷಣೆಯ ಹೆಸರಿನಲ್ಲಿ ಮನುಷ್ಯರನ್ನು ಕೊಂದು ಹಾಕುವ ಮನಸ್ಥಿತಿಯನ್ನು ಬಿತ್ತಿದ್ದರು. ಸ್ವಾಮಿ ವಿವೇಕಾನಂದರನ್ನು ಈತ ಆದರ್ಶವಾಗಿ ತೆಗೆದುಕೊಂಡಿದ್ದರೆ ‘‘ಗೋವಿನ ಜೀವಕ್ಕಿಂತ ಮನುಷ್ಯನ ಜೀವ ದೊಡ್ಡದು’’ ಎನ್ನುವ ಮೌಲ್ಯವನ್ನು ತನ್ನೊಳಗೆ ಇಳಿಸಿಕೊಳ್ಳುತ್ತಿದ್ದ. ದೇಶ ಬರದಿಂದ ತತ್ತರಿಸುತ್ತಿರುವಾಗ ಗೋರಕ್ಷಣೆಗಾಗಿ ಹಣ ಸಂಗ್ರಹಿಸಲು ಬಂದ ಬ್ರಾಹ್ಮಣ ಗುಂಪಿಗೆ ಛೀಮಾರಿ ಹಾಕಿದ ಮಹಾನ್ ಸಂತ ಸ್ವಾಮಿ ವಿವೇಕಾನಂದರು. ಆದರೆ ಅವರ ಸಿದ್ಧಾಂತಕ್ಕೆ ಬೆನ್ನು ಹಾಕಿ, ಗೋಳ್ವಾಲ್ಕರ್, ಹೆಡಗೇವಾರ್ ಸಿದ್ಧಾಂತಕ್ಕೆ ಮುಖಮಾಡಿದ ಪರಿಣಾಮವಾಗಿ ಈತನಿಗೆ ಮನುಷ್ಯನಿಗಿಂತ ಗೋವು ಮಿಗಿಲೆನಿಸಿತು. ಇಷ್ಟಕ್ಕೂ ಗೋವನ್ನು ದೇವರೆಂದು ಈತ ಪೂಜಿಸುತ್ತಿದ್ದರೆ ಗೋಸಾಕಣೆಯಲ್ಲಾದರೂ ತನ್ನನ್ನು ತೊಡಗಿಸಿಕೊಳ್ಳುತ್ತಿದ್ದ. ಈತನಿಗೆ ಗೋವಿಗಿಂತ ಮುಖ್ಯವಾಗಿ ಗೋವಿನ ಹೆಸರಿನಲ್ಲಿ ನಡೆಸುವ ಹಿಂಸೆಯೇ ಇಷ್ಟವಾಯಿತು. ಕೊನೆಕೊನೆಗೇ ಆ ಹಿಂಸೆಯನ್ನೇ ಈತ ಧರ್ಮವೆಂದು ನಂಬಿದ್ದ. ಅಥವಾ ಆತನಿಗೆ ಅದನ್ನು ನಂಬಿಸುವಲ್ಲಿ ಸಂಘಪರಿವಾರ ಯಶಸ್ವಿಯಾಗಿತ್ತು.
ಜನವರಿ 22 ಸಕಲ ಭಾರತೀಯರಿಗೆ ಆತ್ಮವಿಮರ್ಶೆಯ, ಪಾಪನಿವೇದನೆಯ ದಿನವಾಗಬೇಕು. ಅಂದು ಧರ್ಮದ ಹೆಸರಲ್ಲಿ ಕುಷ್ಠ ರೋಗಿಗಳ ಸೇವೆಯೇ ಧರ್ಮವೆಂದು ಭಾವಿಸಿದ ಒಬ್ಬ ಸಂತನನ್ನು ಮತ್ತು ಆತನ ಮುಗ್ಧ ಮಕ್ಕಳನ್ನು ಧರ್ಮದ ಹೆಸರಲ್ಲೇ ಕೊಂದು ಹಾಕಲಾಯಿತು ಮತ್ತು ಆ ಕಗ್ಗೊಲೆಯ ಕಳಂಕವನ್ನು ಕೊಲೆಗಾರು ಹಿಂದೂ ಧರ್ಮಕ್ಕೆ ಅಂಟಿಸಿದ್ದರು. ಧರ್ಮ ಮನುಷ್ಯನನ್ನು ಮಹಾತ್ಮನಾಗಿಯೂ ಮಾಡಬಹುದು ಕೆಲವೊಮ್ಮೆ ಮೃಗವಾಗಿಸಲೂ ಬಹುದು. ಈ ದಿನ ನಾವು ನಮಗೇ ಕೇಳಿ ಕೊಳ್ಳಬೇಕಾದುದು, ನಮಗೆ ಎಂತಹ ಧರ್ಮ ಬೇಕು? ವಿವೇಕಾನಂದರ ಧರ್ಮವೋ ಅಥವಾ ದಾರಾಸಿಂಗ್ನ ಧರ್ಮವೋ? ಗಾಂಧೀಜಿಯ ರಾಮ ನಮಗೆ ಆದರ್ಶವಾಗಬೇಕೋ ಅಥವಾ ಗೋಡ್ಸೆಯ ರಾಮ ಆದರ್ಶವಾಗಬೇಕೋ? ಗೋವುಗಳ ರಕ್ಷಣೆಯ ಹೆಸರಿನಲ್ಲಿ ಮನುಷ್ಯರನ್ನು ಕೊಲ್ಲುವ ಮೌಲ್ಯ ಬೇಕೋ ಅಥವಾ ಧರ್ಮದ ಹೆಸರಿನಲ್ಲಿ ಕುಷ್ಠರೋಗಿಗಳನ್ನು ಸೇವೆ ಮಾಡುವ ಮೌಲ್ಯಗಳು ಬೇಕೋ? ಎಂತಹ ಧರ್ಮದ ಮೂಲಕ ನಾವು ಭಾರತದ ಭವಿಷ್ಯವನ್ನು ರೂಪಿಸಬೇಕು ಎನ್ನುವುದನ್ನು ಚಿಂತಿಸಲು ಜನವರಿ 22 ಒಂದು ನೆಪವಾಗಲಿ.