ಡಿಕೆಶಿ ಹಂಬಲ, ಜೆಡಿಎಸ್ ಬೆಂಬಲ!
ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ
‘ಪಕ್ಷದೊಳಗಿರುವ ಭಿನ್ನಾಭಿಪ್ರಾಯ ಅಥವಾ ಇತರ ವಿಷಯಗಳನ್ನು ಸಾರ್ವಜನಿಕವಾಗಿ ಚರ್ಚಿಸಬೇಡಿ’ ಎಂದು ಕಾಂಗ್ರೆಸ್ ವರಿಷ್ಠರು ಎಚ್ಚರಿಕೆ ನೀಡಿದ ಬೆನ್ನಿಗೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ‘‘ಮುಂದಿನ ಐದು ವರ್ಷ ನಾನೇ ಮುಖ್ಯಮಂತ್ರಿ’’ ಎಂದು ಸಾರ್ವಜನಿಕವಾಗಿ ಘೋಷಿಸಿಕೊಂಡಿದ್ದಾರೆ. ಮುಖ್ಯಮಂತ್ರಿಯ ಈ ಹೇಳಿಕೆ ರಾಜ್ಯ ಕಾಂಗ್ರೆಸ್‌ನ ನಾಯಕರಿಗೆ ನುಂಗಲಾರದ ತುತ್ತಾಗಿದೆ. ಈ ಹೇಳಿಕೆಗೆ ಕೆಲವು ಕಾಂಗ್ರೆಸ್ ನಾಯಕರಿಂದ ಪ್ರತಿಕ್ರಿಯೆಯೂ ಹೊರ ಬಿದ್ದಿದೆ. ಅದರಲ್ಲಿ ಮುಖ್ಯವಾಗಿ ಸಚಿವ ಪ್ರಿಯಾಂಕ್ ಖರ್ಗೆ ‘‘ವರಿಷ್ಠರು ಸೂಚನೆ ನೀಡಿದರೆ ನಾನು ಮುಖ್ಯಮಂತ್ರಿಯಾಗಲು ಸಿದ್ಧ’’ ಎಂದಿದ್ದಾರೆ. ಇದು ಪರೋಕ್ಷವಾಗಿ ಸಿದ್ದರಾಮಯ್ಯ ಪೂರ್ಣಾವಧಿ ಮುಖ್ಯಮಂತ್ರಿಯಲ್ಲ ಎನ್ನುವುದನ್ನು ಧ್ವನಿಸುತ್ತದೆ. ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ‘‘ಸಾರ್ವಜನಿಕ ಹೇಳಿಕೆ’’ ನೀಡುವುದರ ವಿರುದ್ಧ ಇನ್ನಷ್ಟು ಖಡಕ್ ಮಾತುಗಳನ್ನಾಡಿದ್ದಾರೆ. ಇಷ್ಟಾದರೂ ಸಿದ್ದರಾಮಯ್ಯ ಅವರೇ ಪೂರ್ಣಾವಧಿ ಮುಖ್ಯಮಂತ್ರಿಯಾಗಿ ಮುಂದುವರಿಯುತ್ತಾರೆ ಎಂದು ಹೇಳಿಕೆ ನೀಡಿಲ್ಲ. ಬಿಜೆಪಿಯ ನಾಯಕರು ಪದೇ ಪದೇ ಕಾಂಗ್ರೆಸ್ ಶಾಸಕರಿಗೆ ನೀಡುತ್ತಿರುವ ಆಮಿಷಗಳ ಹೊರತಾಗಿಯೂ ಸರಕಾರ ಗಟ್ಟಿಯಾಗಿಯೇ ನಿಂತಿದೆ. ಸದ್ಯಕ್ಕಂತೂ ಸರಕಾರವನ್ನು ಬೀಳಿಸುವ ಬಿಜೆಪಿ ಅಥವಾ ಜೆಡಿಎಸ್‌ನ ಯಾವುದೇ ಪ್ರಯತ್ನ ಫಲಕೊಡುವ ಲಕ್ಷಣಗಳು ಕಾಣುತ್ತಿಲ್ಲ. ಅಂತಹ ಪ್ರಯತ್ನ ಬಿಜೆಪಿ ಮತ್ತು ಜೆಡಿಎಸ್ ನಾಯಕರನ್ನೇ ನಗೆಪಾಟಲಿಗೀಡು ಮಾಡಬಹುದು. ಆದರೆ ಅದರ ಅರ್ಥ ಕಾಂಗ್ರೆಸ್‌ನಲ್ಲಿ ಭಿನ್ನಮತ ಸುಳ್ಳು ಎಂದಲ್ಲ. ಎಲ್ಲಿಯವರೆಗೆ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಅಧಿಕೃತವಾಗಿ ಕಣಕ್ಕಿಳಿಯುವುದಿಲ್ಲವೋ ಅಲ್ಲಿಯವರೆಗೆ ಎಲ್ಲವೂ ಕಾಂಗ್ರೆಸ್‌ನೊಳಗೆ ಸರಿಯಾಗಿಯೇ ಇರುತ್ತದೆ.
ಇದೇ ಸಂದರ್ಭದಲ್ಲಿ ‘‘ಡಿ.ಕೆ. ಶಿವಕುಮಾರ್ ಮುಖ್ಯಮಂತ್ರಿಯಾಗುವುದಾದರೆ ಜೆಡಿಎಸ್ ಬೆಂಬಲ ನೀಡುತ್ತದೆ’’ ಎಂದು ಎಚ್.ಡಿ. ಕುಮಾರಸ್ವಾಮಿ ಘೋಷಿಸಿದ್ದಾರೆ. ಕುಮಾರಸ್ವಾಮಿಯವರ ಸದ್ಯದ ಸ್ಥಿತಿ ದಯನೀಯವಾಗಿದೆ. ಸರಕುಗಳ ಜೊತೆಗೆ ಸಂತೆಯಿಂದ ಸಂತೆಗೆ ಅಲೆಯುವ ಸರಕು ವ್ಯಾಪಾರಿಯಂತೆ ಅವರು ಬೆರಳೆಣಿಕೆಯ ಶಾಸಕರನ್ನು ಹಿಡಿದುಕೊಂಡು ಪಕ್ಷದಿಂದ ಪಕ್ಷಕ್ಕೆ ‘‘ಶಾಸಕರು ಬೇಕೆ, ಶಾಸಕರು ಬೇಕೆ....’’ ಎಂದು ಅಲೆಯುತ್ತಿದ್ದಾರೆ. ಈ ಹಿಂದೆ ಕಾಂಗ್ರೆಸ್ ಬಹುಮತ ಪಡೆಯದೇ ಅನಿವಾರ್ಯವಾಗಿ ಜೆಡಿಎಸ್ ಮೈತ್ರಿಯೊಂದಿಗೆ ಸರಕಾರ ರಚಿಸುವಂತಹ ಸನ್ನಿವೇಶ ಸೃಷ್ಟಿಯಾಗಿತ್ತು. ಬಿಜೆಪಿಯನ್ನು ಅಧಿಕಾರದಿಂದ ಹೊರಗಿಡುವುದು ಅಂದಿನ ಕಾಂಗ್ರೆಸ್‌ವರಿಷ್ಠರ ಗುರಿಯಾಗಿತ್ತು. ಕಾಂಗ್ರೆಸ್‌ಗಿಂತ ತೀರಾ ಕಡಿಮೆ ಸ್ಥಾನಗಳನ್ನು ಹೊಂದಿದ್ದರೂ ಇದೇ ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ್ದರು. ತಾನು ಮುಖ್ಯಮಂತ್ರಿಯಾಗಲು ಬೆಂಬಲ ನೀಡಿದ್ದ ಕಾಂಗ್ರೆಸ್ ಜೊತೆಗೆ ‘ಕೊಡು ಕೊಳ್ಳುವಿಕೆಯ’ ನೀತಿಯನ್ನು ಅನುಸರಿಸಿದ್ದರೆ ಅಂದು ಬಿಜೆಪಿ ಆಪರೇಷನ್ ಕಮಲ ಮಾಡಿ ಮೈತ್ರಿ ಸರಕಾರವನ್ನು ಉರುಳಿಸುವ ಸ್ಥಿತಿ ಸೃಷ್ಟಿಯಾಗುತ್ತಿರಲಿಲ್ಲ. ಕಾಂಗ್ರೆಸ್‌ನ ಅಸಹಾಯಕತೆಯನ್ನು ಬಳಸಿಕೊಂಡು ಕುಮಾರಸ್ವಾಮಿ ಪೂರ್ಣಾವಧಿ ಮುಖ್ಯಮಂತ್ರಿಯಾಗಲು ಹೊರಟದ್ದು ಅಂತಿಮವಾಗಿ ಸರಕಾರವೇ ಬೀಳುವುದಕ್ಕೆ ಕಾರಣವಾಯಿತು. ಇದೀಗ ಕುಮಾರಸ್ವಾಮಿಯವರು ಬಹುಮತ ಪಡೆದು ಸುಭದ್ರವಾಗಿರುವ ಸರಕಾರವೊಂದಕ್ಕೆ ಅನಗತ್ಯ ‘ಬೆಂಬಲ’ದ ಪ್ರಸ್ತಾವವನ್ನು ಮುಂದಿಟ್ಟಿದ್ದಾರೆ. ಡಿಕೆಶಿಯನ್ನು ಮುಖ್ಯಮಂತ್ರಿ ಮಾಡುವುದಕ್ಕಿಂತ, ಸಿದ್ದರಾಮಯ್ಯರನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸುವುದು ಅವರ ಗುರಿಯಾಗಿದೆ.
ಡಿಕೆಶಿ ಮುಖ್ಯಮಂತ್ರಿಯಾಗುವುದಾದರೆ ಜೆಡಿಎಸ್ ಬೆಂಬಲ ನೀಡುತ್ತದೆ ಎಂದು ಕುಮಾರಸ್ವಾಮಿ ಘೋಷಿಸುವ ಮೊದಲು, ಎಷ್ಟು ಜೆಡಿಎಸ್ ಶಾಸಕರು ಜೆಡಿಎಸ್‌ನೊಳಗೆ ಇನ್ನೂ ಇದ್ದಾರೆ ಎನ್ನುವುದನ್ನೊಮ್ಮೆ ಖಚಿತಪಡಿಸಿಕೊಳ್ಳುವ ಅಗತ್ಯವಿದೆ. ಬಿಜೆಪಿಯೊಂದಿಗೆ ಮೈತ್ರಿಯನ್ನು ಘೋಷಿಸಿದ ಬಳಿಕ ಜೆಡಿಎಸ್ ಸ್ವತಃ ಭಿನ್ನಮತಗಳ ಗೂಡಾಗಿದೆ. ಹಲವು ಹಿರಿಯ ನಾಯಕರು ಜೆಡಿಎಸ್‌ನ ನಿರ್ಧಾರದ ಜೊತೆಗೆ ಅಂತರವನ್ನು ಕಾಪಾಡಿಕೊಂಡಿದ್ದಾರೆ. ಇದೇ ಸಂದರ್ಭದಲ್ಲಿ ಜೆಡಿಎಸ್‌ನೊಳಗಿರುವ ಅಳಿದುಳಿದ ಶಾಸಕರು ಜೆಡಿಎಸ್ ತೊರೆದು ಬಿಜೆಪಿಯೊಳಗೆ ಲೀನವಾಗಲು ಮಾನಸಿಕವಾಗಿ ಸಿದ್ಧತೆ ನಡೆಸುತ್ತಿದ್ದಾರೆ. ಕಾಂಗ್ರೆಸ್ ಸರಕಾರ ‘ಆಪರೇಷನ್ ಕಮಲ’ಕ್ಕೆ ಬಲಿಯಾಗುವ ಮುಂಚೆಯೇ ಜೆಡಿಎಸ್ ಬಿಜೆಪಿಯ ಆಪರೇಷನ್‌ಗೆ ಬಲಿಯಾಗಿದೆ. ಲೋಕಸಭಾ ಚುನಾವಣೆಯ ಹೊತ್ತಿಗೆ ಕುಮಾರಸ್ವಾಮಿ ಅವರ ಜೊತೆಗಿರುವ ಶಾಸಕರು ಬಹಿರಂಗವಾಗಿ ಬಿಜೆಪಿಯೊಳಗೆ ಗುರುತಿಸಿಕೊಳ್ಳುವ ಸಾಧ್ಯತೆಗಳಿವೆ. ಸದ್ಯಕ್ಕೆ ಕಾಂಗ್ರೆಸ್‌ನ ಬಗ್ಗೆ ತಲೆಕೆಡಿಸಿಕೊಳ್ಳದೇ ತನ್ನದೇ ಪಕ್ಷದೊಳಗಿರುವ ಶಾಸಕರು ತನಗೆಷ್ಟು ಬೆಂಬಲ ನೀಡುತ್ತಾರೆ ಎನ್ನುವುದರ ಬಗ್ಗೆ ಕುಮಾರ ಸ್ವಾಮಿ ತಲೆಕೆಡಿಸಿಕೊಳ್ಳುವ ಅಗತ್ಯವಿದೆ. ಈಗಾಗಲೇ ಬಿಜೆಪಿಯೊಂದಿಗೆ ನಿಖಾ ಮಾಡಿಕೊಂಡಿದ್ದೇನೆ ಎಂದು ಘೋಷಿಸಿಕೊಂಡಿರುವ ಕುಮಾರಸ್ವಾಮಿ ಅವರು, ಡಿಕೆಶಿಗೆ ಬೆಂಬಲ ನೀಡಲು ಬಿಜೆಪಿ ಸಮ್ಮತಿ ನೀಡುತ್ತದೆಯೇ ಎನ್ನುವ ಪ್ರಶ್ನೆಯೂ ಎದುರಾಗುತ್ತದೆ. ಅಮಿತ್ ಶಾ ಜೊತೆಗೆ ತಾಳಿ ಕಟ್ಟಿಸಿಕೊಂಡು ಡಿಕೆಶಿ ಜೊತೆಗೆ ಪ್ರಸ್ತ ಮಾಡಿಕೊಳ್ಳಲು ಸಿದ್ಧನಿದ್ದೇನೆ ಎನ್ನುವ ‘ರಾಜಕಾರಣ’ ಕುಮಾರಸ್ವಾಮಿಗೆ ಹೇಳಿ ಮಾಡಿಸಿರುವುದೇ ಆಗಿದೆ. ಆದರೆ ಇದನ್ನು ಸದ್ಯಕ್ಕಂತೂ ಕಾಂಗ್ರೆಸ್ ಗಂಭೀರವಾಗಿ ತೆಗೆದುಕೊಂಡಂತಿಲ್ಲ.
ಹಾಗೆಂದು ಈ ಪ್ರಸ್ತಾವ ತೀರಾ ನಿರ್ಲಕ್ಷಿಸುವಂತಹದೂ ಅಲ್ಲ. ಜೆಡಿಎಸ್ ಬೆಂಬಲ ಕೊಟ್ಟರೂ, ಕೊಡದೇ ಇದ್ದರೂ, ಕಾಂಗ್ರೆಸ್‌ನೊಳಗೆ ಡಿಕೆಶಿ-ಸಿದ್ದರಾಮಯ್ಯ ನಡುವಿನ ಬಿರುಕನ್ನು ನಿರಾಕರಿಸುವಂತಿಲ್ಲ. ಸದ್ಯಕ್ಕೆ ಅದು ಅಗೋಚರವಾಗಿದ್ದರೂ, ಇನ್ನೆರಡು ವರ್ಷಗಳಲ್ಲಿ ಆ ಬಿರುಕು ಸ್ಪಷ್ಟವಾಗುತ್ತಾ ಹೋಗುತ್ತದೆ. ‘‘ಮುಖ್ಯಮಂತ್ರಿ ಸ್ಥಾನ ಈಗ ಇಲ್ಲದೇ ಇದ್ದರೆ ಇನ್ನೆಂದಿಗೂ ಇಲ್ಲ’’ ಎನ್ನುವಂತಹ ಮನಸ್ಥಿತಿಯಲ್ಲಿದ್ದಾರೆ ಡಿ.ಕೆ.ಶಿವಕುಮಾರ್. ಸರಕಾರ ರಚನೆಯ ಸಂದರ್ಭದಲ್ಲೇ ಡಿ.ಕೆ. ಶಿವಕುಮಾರ್ ವರಿಷ್ಠರಿಗೆ ಗರಿಷ್ಠ ಮಟ್ಟದಲ್ಲಿ ಒತ್ತಡಗಳನ್ನು ಹೇರಿದ್ದರು. ಭವಿಷ್ಯದಲ್ಲಿ ಮುಖ್ಯಮಂತ್ರಿ ಹುದ್ದೆಯ ಹಂಚಿಕೆಯಾಗದೇ ಇದ್ದರೆ, ಅವರು ಸುಮ್ಮನಿರುವ ಸಾಧ್ಯತೆಗಳು ಕಡಿಮೆ. ಆ ಸಂದರ್ಭವನ್ನು ಬಳಸಿಕೊಳ್ಳಲು ಬಿಜೆಪಿ ಮತ್ತು ಜೆಡಿಎಸ್ ಕೂಡಾ ಕಾಯುತ್ತಿದೆ. ಬಿಜೆಪಿಯಲ್ಲಿ ಪಕ್ಷದ ವರಿಷ್ಠರೊಂದಿಗೆ ಯಡಿಯೂರಪ್ಪ ಅವರ ಸಂಬಂಧ ಈಗಾಗಲೇ ಹಳಸಿದೆ. ನಾಳೆ ಬಿಜೆಪಿಯಿಂದ ಯಡಿಯೂರಪ್ಪ ಅವರ ನೇತೃತ್ವದಲ್ಲಿ ಒಂದು ಗುಂಪು ಸಿಡಿದು ಡಿಕೆಶಿಯ ಗುಂಪಿನ ಜೊತೆಗೆ ಕೈ ಜೋಡಿಸಿದ್ದೇ ಆದರೆ ಜೆಡಿಎಸ್ ಎನ್ನುವ ಹಳಸಿದ ಅನ್ನ ಪ್ರಯೋಜನಕ್ಕೆ ಬೀಳುವ ಸಾಧ್ಯತೆಗಳಿವೆ. ಡಿಕೆಶಿ-ಯಡಿಯೂರಪ್ಪ- ಕುಮಾರಸ್ವಾಮಿ ಈ ಮೂವರು ಅತೃಪ್ತರ ಗುಂಪು ಜೊತೆ ಸೇರಿ ಹೊಸದಾಗಿ ಪ್ರಾದೇಶಿಕ ಪಕ್ಷವೊಂದನ್ನು ಕಟ್ಟಿಕೊಂಡರೂ ಅಚ್ಚರಿಯಿಲ್ಲ. ಈ ಹಿನ್ನೆಲೆಯಲ್ಲಿ, ಸದ್ಯ ಸಣ್ಣಗೆ ಹೊಗೆಯಾಡುತ್ತಿರುವ ಭಿನ್ನಮತಗಳನ್ನು ಅಲ್ಲಿಗೆ ತಣಿಸುವುದಕ್ಕೆ ಕಾಂಗ್ರೆಸ್ ವರಿಷ್ಠರು ಈಗಲೇ ಮುಂದಡಿಯಿಡಬೇಕಾಗಿದೆ.
ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ನೇತೃತ್ವದ ಸರಕಾರ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುತ್ತಿದೆ ಎನ್ನುವುದರಲ್ಲಿ ಎರಡು ಮಾತಿಲ್ಲ. ಗ್ಯಾರಂಟಿಗಳ ಹುಲಿ ಸವಾರಿ ಸದ್ಯಕ್ಕಂತೂ ಸುಗಮವಾಗಿ ಸಾಗುತ್ತಿದೆ. ಆದರೆ ಅಕ್ಕಪಕ್ಕದಲ್ಲಿರುವ ಅತೃಪ್ತ ಹಸಿದ ಹುಲಿಗಳು ಬಹುಕಾಲ ಸುಮ್ಮಗಿರುವುದಿಲ್ಲ. ಅದರ ಹಸಿವನ್ನು ಇಂಗಿಸಲು ವಿಫಲವಾದರೆ, ರಿಂಗ್ ಮಾಸ್ಟರ್‌ನ ಮೇಲೆಯೇ ಎರಗಿ ಬಿಡಬಹುದು. ಮುಖ್ಯಮಂತ್ರಿ ಸಿದ್ದರಾಮಯ್ಯ ‘ಮುಂದಿನ ಐದು ವರ್ಷ ನಾನೇ ಮುಖ್ಯಮಂತ್ರಿ’ ಎಂದು ಹೇಳಿಕೆ ನೀಡಿದ ಬೆನ್ನಿಗೇ ಕುಮಾರಸ್ವಾಮಿ ‘ಡಿಕೆಶಿಗೆ ಬೆಂಬಲ ನೀಡಲು ಸಿದ್ಧ’ ಎನ್ನುವ ಘೋಷಣೆ ಮಾಡಿರುವುದು ಆಕಸ್ಮಿಕವಲ್ಲ. ಅದು ಡಿಕೆಶಿಯವರಿಗೆ ನೀಡಿರುವ ಪರೋಕ್ಷ ಆಹ್ವಾನ. ಕುಮಾರಸ್ವಾಮಿಯವರ ಈ ಬೆಂಬಲವನ್ನು ಕಟು ಮಾತುಗಳಿಂದ ಡಿಕೆಶಿ ತಿರಸ್ಕರಿಸಿಲ್ಲ. ‘‘ಮೊದಲು ಎನ್‌ಡಿಎಯಿಂದ ಹೊರ ಬನ್ನಿ’’ ಎಂದು ಕುಮಾರಸ್ವಾಮಿಗೆ ಸವಾಲು ಹಾಕಿದ್ದಾರೆ. ಕುಮಾರಸ್ವಾಮಿ ಎನ್‌ಡಿಎಯಿಂದ ಹೊರಬಂದು, ಯಡಿಯೂರಪ್ಪ ಬಿಜೆಪಿಯಿಂದ ಹೊರಬಂದರೆ, ಡಿಕೆಶಿ ಕಾಂಗ್ರೆಸ್‌ನಿಂದ ಹೊರಬಂದು ಮುಖ್ಯಮಂತ್ರಿಯಾಗಲು ಸಿದ್ಧರಿದ್ದಾರೆಯೆ? ಎನ್ನುವ ಪ್ರಶ್ನೆಗೆ ಕಾಲವೇ ಉತ್ತರಿಸಬೇಕು.