ಕೇರಳ ಸ್ಫೋಟ: ನಾಗರಿಕರ ವೇಷದಲ್ಲಿರುವ ಭಯೋತ್ಪಾದಕರು?
Photo: PTI
ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ
ಕೇರಳದ ಕೊಚ್ಚಿ ನಗರ ಸಮೀಪ ಕ್ರೈಸ್ತ ಧಾರ್ಮಿಕ ಪಂಗಡವೊಂದರ ಪ್ರಾರ್ಥನಾ ಸಭೆಯಲ್ಲಿ ನಡೆದ ಸ್ಫೋಟ ಕೆಲವು ದಿನಗಳಿಂದ ಮಾಧ್ಯಮಗಳಲ್ಲಿ ಸದ್ದು ಮಾಡುತ್ತಿದೆ. ಈ ಸ್ಫೋಟದಲ್ಲಿ ಮೂವರು ಮೃತಪಟ್ಟಿದ್ದು, ೫೦ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ. ಕ್ರೈಸ್ತ ಧಾರ್ಮಿಕ ಪಂಗಡಗಳ ಪ್ರಾರ್ಥನಾ ಸಭೆಗಳ ಮೇಲೆ ದಾಳಿಗಳು ನಡೆಯುತ್ತಿರುವುದು ಹೊಸದೇನೂ ಅಲ್ಲ. ಕೇರಳ ಮಾತ್ರವಲ್ಲ, ದೇಶಾದ್ಯಂತ ಸಂಘಪರಿವಾರದ ಉಗ್ರವಾದಿಗಳ ದಾಳಿಗಳ ಕಾರಣಗಳಿಗಾಗಿಯೇ ಚರ್ಚ್ಗಳು ಸುದ್ದಿಯಲ್ಲಿವೆ. ಕರ್ನಾಟಕವೂ ಒಂದು ಕಾಲದಲ್ಲಿ ಕ್ರೈಸ್ತ ಧಾರ್ಮಿಕ ಸ್ಥಳಗಳ ಮೇಲಿನ ದಾಳಿಗಳಿಗಿ ರಾಷ್ಟ್ರಮಟ್ಟದಲ್ಲಿ ಕುಖ್ಯಾತಿಯನ್ನು ಪಡೆದಿತ್ತು. ಆದರೆ ಇದೇ ಮೊದಲ ಬಾರಿಗೆ ಕೇರಳದಲ್ಲಿ ಕ್ರೈಸ್ತರ ಪ್ರಾರ್ಥನಾ ಸಭೆಯಲ್ಲಿ ಬಾಂಬ್ ಸ್ಫೋಟ ಸಂಭವಿಸಿದೆ. ಸ್ಫೋಟ ಪ್ರಕರಣಗಳಲ್ಲಿ ಆರೆಸ್ಸೆಸ್ ಕಾರ್ಯಕರ್ತರು ಪದೇ ಪದೇ ಗುರುತಿಸಲ್ಪಟ್ಟಿರುವ ಕಾರಣಕ್ಕಾಗಿ ಕೇರಳದಲ್ಲಿ ನಡೆದಿರುವ ಈ ಚರ್ಚ್ ದಾಳಿಯಲ್ಲಿ ಸಂಘಪರಿವಾರದ ಕೈವಾಡವನ್ನು ಕಾನೂನು ಇಲಾಖೆ ಶಂಕಿಸಿತ್ತು. ಈ ಹಿಂದೆ, ಬಾಂಬ್ ತಯಾರಿಯ ಸಂದರ್ಭದಲ್ಲಿ ಹಲವು ಆರೆಸ್ಸೆಸ್ ಕಾರ್ಯಕರ್ತರು ಮೃತಪಟ್ಟಿರುವ ಬಗ್ಗೆ ಪ್ರಕರಣಗಳು ದಾಖಲಾಗಿರುವುದರಿಂದ, ಸ್ಫೋಟದಲ್ಲಿ ಆರೆಸ್ಸೆಸ್ ಅಥವಾ ಸಂಘಪರಿವಾರ ಕಾರ್ಯಕರ್ತರ ಪಾತ್ರವನ್ನು ನಿರಾಕರಿಸುವಂತೆಯೂ ಇರಲಿಲ್ಲ. ಇದೇ ಸಂದರ್ಭದಲ್ಲಿ, ಇತರ ಮೂಲಭೂತವಾದಿ ಸಂಘಟನೆಗಳ ಪಾತ್ರಗಳ ಬಗ್ಗೆಯೂ ಅನುಮಾನಗಳು ವ್ಯಕ್ತವಾಗಿದ್ದವು. ಆದರೆ ಎಲ್ಲ ಊಹಾಪೋಹಗಳು ತಲೆಕೆಳಗಾಗುವಂತೆ, ಪ್ರಕರಣದಲ್ಲಿ ಕ್ರೈಸ್ತ ಧರ್ಮೀಯನೆಂದು ಗುರುತಿಸಿಕೊಂಡ ವ್ಯಕ್ತಿ ಭಾಗಿಯಾಗಿರುವುದು ಕೃತ್ಯ ನಡೆದ ಕೆಲವೇ ಗಂಟೆಗಳಲ್ಲಿ ಬೆಳಕಿಗೆ ಬಂತು. ಕೊಚ್ಚಿ ನಿವಾಸಿಯಾಗಿರುವ ಡೊಮಿನಿಕ್ ಎಂಬಾತ ಕೃತ್ಯ ಎಸಗಿರುವುದು ತಾನು ಎನ್ನುವುದನ್ನು ಪೊಲೀಸರ ಮುಂದೆ ಒಪ್ಪಿಕೊಂಡ. ‘ಯಹೋವನಾ ಸಾಕ್ಷಿಗಳು’ ಪಂಗಡದ ಜೊತೆಗೆ ಈತನಿಗೆ ಭಿನ್ನಾಭಿಪ್ರಾಯವಿರುವುದೇ ಸ್ಫೋಟ ನಡೆಸುವುದಕ್ಕೆ ಕಾರಣ ಎಂದು ಹೇಳಿಕೊಂಡಿದ್ದಾನೆ.
ಸೈದ್ಧಾಂತಿಕ ಭಿನ್ನಾಭಿಪ್ರಾಯ ಕೆಲವೊಮ್ಮೆ ಸಂಘರ್ಷಕ್ಕೆ ಕಾರಣವಾಗುವುದಿದೆ. ಇಂತಹದೇ ಭಿನ್ನಾಭಿಪ್ರಾಯಗಳ ಕಾರಣವನ್ನು ಮುಂದಿಟ್ಟು ಕ್ರೈಸ್ತ ಪ್ರಾರ್ಥನಾಸಭೆಗಳಿಗೆ ಸಂಘಪರಿವಾರ ಈ ಹಿಂದೆ ದಾಂಧಲೆ ನಡೆಸಿವೆಯಾದರೂ, ಈ ರೀತಿಯ ಸ್ಫೋಟ ಕೃತ್ಯಗಳನ್ನು ಎಸಗಿರಲಿಲ್ಲ. ಸ್ಫೋಟದಂತಹ ಬೀಕರ ಕೃತ್ಯವನ್ನು ಏಕಾಂಗಿಯಾಗಿ ಎಸಗುವುದು ಸುಲಭವಿಲ್ಲ? ಇಡೀ ಪ್ರಕರಣವನ್ನು ಈತನೊಬ್ಬನ ತಲೆಗೆ ಕಟ್ಟಿ ಮುಗಿಸಿ ಬಿಡುವ ಪ್ರಯತ್ನ ಇದೇ ಸಂದರ್ಭದಲ್ಲಿ ನಡೆಯುತ್ತಿದೆ. ನೂರಾರು ಜನರನ್ನು ಕೊಂದು ಹಾಕುವ ಮೂಲಕ ಒಂದು ವಿಚಾರಧಾರೆಯನ್ನು ವಿರೋಧಿಸುವಂತಹ ದೇಶದ್ರೋಹಿ ಕೃತ್ಯದ ಹಿಂದೆ ಇನ್ನಷ್ಟು ಜನರು ಪಾಲುಗೊಂಡಿರುವ ಎಲ್ಲ ಸಾಧ್ಯತೆಗಳಿವೆ. ಆದುದರಿಂದ ಈ ಕೃತ್ಯಕ್ಕೆ ಈತನನ್ನು ಪ್ರೇರೇಪಿಸಿದ ಸಂಘಟನೆಯ ಮೂಲವನ್ನು ಪತ್ತೆ ಹಚ್ಚುವುದು ಕೇರಳ ರಾಜ್ಯದ ಭವಿಷ್ಯದ ಹಿತದೃಷ್ಟಿಯಿಂದ ಅತ್ಯಗತ್ಯವಾಗಿದೆ. ಬಾಂಬ್ ತಯಾರಿ, ಅದಕ್ಕೆ ಬೇಕಾದ ಹಣ ಪೂರೈಕೆ ಇತ್ಯಾದಿಗಳ ಹಿಂದೆ ಯಾವುದಾದರೂ ಶಕ್ತಿಗಳು ಇವೆಯೇ ಎನ್ನುವುದು ಗಂಭೀರವಾದ ತನಿಖೆಯಿಂದಷ್ಟೇ ಬೆಳಕಿಗೆ ಬರಬಹುದು. ಕೇರಳದ ಕಾನೂನು ಸುವ್ಯವಸ್ಥೆಯನ್ನು ಕೆಡಿಸುವುದಕ್ಕಾಗಿಯೂ ಈತನನ್ನು ಬಳಸಿಕೊಂಡಿರುವ ಸಾಧ್ಯತೆಗಳಿವೆ.
ವಿಪರ್ಯಾಸವೆಂದರೆ ಸ್ಫೋಟ ನಡೆದ ತಕ್ಷಣ ಮಾಧ್ಯಮಗಳು, ರಾಜಕಾರಣಿಗಳು ತನಿಖೆಯ ದಾರಿ ತಪ್ಪಿಸುವ ಪ್ರಯತ್ನವನ್ನು ನಡೆಸಿದರು. ಸ್ಫೋಟದ ಬೆನ್ನಿಗೇ ಅದರ ಹೊಣೆಗಾರಿಕೆಯನ್ನು ನಿರ್ದಿಷ್ಟ ಸಮುದಾಯದ ತಲೆಗೆ ಕಟ್ಟಲು ಮುಂದಾದರು. ಅವರಿಗೆ ಆರೋಪಿಯ ಬಂಧನಕ್ಕಿಂತಲೂ, ಆತ ಒಂದು ನಿರ್ದಿಷ್ಟ ಸಮುದಾಯಕ್ಕೆ ಸೇರಿರುವುದು ಅತ್ಯಗತ್ಯವಾಗಿತ್ತು. ‘ಮುಸ್ಲಿಮ್ ಉಗ್ರವಾದಿ ಸಂಘಟನೆಗಳೇ ಈ ಕೃತ್ಯವನ್ನು ಎಸಗಿವೆ’ ಎಂಬಂತಹ ಸ್ಟೇಟಸ್ಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿಯತೊಡಗಿದವು. ಟಿವಿ ಮಾಧ್ಯಮಗಳೂ ಇಂತಹ ಪೂರ್ವಾಗ್ರಹ ಪೀಡಿತ ವರದಿಗಳನ್ನು ಪ್ರಸಾರ ಮಾಡುವ ಮೂಲಕ ಒಂದು ಸಮುದಾಯದ ವಿರುದ್ಧ ಜನರನ್ನು ಎತ್ತಿಕಟ್ಟತೊಡಗಿತು. ಕರ್ನಾಟಕದಲ್ಲಿ ಒಂದು ಟಿವಿಯಂತೂ ಟೋಪಿ, ಗಡ್ಡಧಾರಿ ವ್ಯಕ್ತಿಯ ಭಾವಚಿತ್ರವನ್ನು ಪ್ರಸಾರ ಮಾಡಿ, ಆತನನ್ನೇ ಆರೋಪಿಯೆಂದು ಘೋಷಿಸಿತು. ನಿಜವಾದ ಆರೋಪಿ ಶರಣಾಗತನಾದ ಬಳಿಕವೂ ಈ ಕೃತ್ಯವನ್ನು ಕೆಲವು ಟಿವಿ ಮಾಧ್ಯಮಗಳು ಮುಂದುವರಿಸಿದವು. ಅವರಿಗೆ ಕೃತ್ಯವೆಸಗಿದ ಆರೋಪಿಯ ಬಂಧನಕ್ಕಿಂತ, ಒಂದು ನಿರ್ದಿಷ್ಟ ಸಮುದಾಯದ ಜನರನ್ನು ಉಗ್ರ ವಾದಿಗಳೆಂದು ಬಿಂಬಿಸಬೇಕಾಗಿತ್ತು. ಈ ಸ್ಫೋಟ ಪ್ರಕರಣವನ್ನು ಮುಂದಿಟ್ಟುಕೊಂಡು ನಾಡಿನ ಶಾಂತಿ ನೆಮ್ಮದಿಯನ್ನು ಇನ್ನಷ್ಟು ಕೆಡಿಸಬೇಕು ಎನ್ನುವ ದುರುದ್ದೇಶವನ್ನು ಈ ಟಿವಿ ಮಾಧ್ಯಮಗಳು ಹೊಂದಿದ್ದವು.
ಈ ಸಂದರ್ಭದಲ್ಲಿ ಪ್ರಬುದ್ಧತೆಯನ್ನು ಪ್ರದರ್ಶಿಸಿ, ಮಾಧ್ಯಮಗಳಿಗೆ ವಿವೇಕದ ಪಾಠ ಹೇಳುವುದು ಸರಕಾರದ ಕರ್ತವ್ಯವಾಗಿತ್ತು. ಆದರೆ, ಕೇಂದ್ರ ಸರಕಾರವೇ ಮಾಧ್ಯಮಗಳ ಈ ದ್ವೇಷ ಅಭಿಯಾನದಲ್ಲಿ ಕೈ ಜೋಡಿಸಿತ್ತು. ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್ ಅವರು ಟ್ವೀಟ್ ಒಂದರಲ್ಲಿ ಪ್ರಕರಣಕ್ಕೆ ಹಮಾಸ್ ಕಾರಣವೆನ್ನುವ ರೀತಿಯಲ್ಲಿ ಬರೆದಿದ್ದರು. ಅಷ್ಟೇ ಅಲ್ಲ, ಕೇರಳ ಸರಕಾರ ಈ ಹಮಾಸ್ ಕಾರ್ಯಕರ್ತರಿಗೆ ಬೆಂಬಲವನ್ನು ನೀಡುತ್ತಿದೆ ಎಂದು ಆರೋಪಿಸಿದ್ದರು. ಅವರ ಹೇಳಿಕೆಯ ವಿರುದ್ಧ ಸ್ವತಃ ಮುಖ್ಯಮಂತ್ರಿ ಪಿಣರಾಯಿ ಅವರೇ ಪ್ರಕರಣವನ್ನು ದಾಖಲಿಸಿದ್ದಾರೆ. ಕೇಂದ್ರ ಸಚಿವರು ತಮ್ಮ ಟ್ವೀಟ್ ಮೂಲಕ ಸಮಾಜದ ಶಾಂತಿ ಸುವ್ಯವಸ್ಥೆಯನ್ನು ಕೆಡಿಸಲು ಯತ್ನಿಸಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ. ಇತ್ತ ಕರ್ನಾಟಕದಲ್ಲಿ ಬಿಜೆಪಿಯ ನಾಯಕರೆಂದು ಕರೆಸಿಕೊಂಡಿರುವ ಮಾಜಿ ಐಪಿಎಸ್ ಅಧಿಕಾರಿ ಭಾಸ್ಕರ್ ರಾವ್ ಅವರು ಟ್ವೀಟ್ ಒಂದರಲ್ಲಿ ‘‘ದೇಶದಲ್ಲಿ ಬಾಂಬ್ ಸ್ಫೋಟಗಳಿಗೆ ದೀರ್ಘ ವಿರಾಮವಿತ್ತು. ಕಾಂಗ್ರೆಸ್ ಮತ್ತು ಸಿಪಿಎಂನಿಂದಾದ ದಶಕಗಳ ಕಾಲದ ಓಲೈಕೆ ರಾಜಕಾರಣವು ಮುಸ್ಲಿಮರನ್ನು ಅವಿದ್ಯಾವಂತರನ್ನಾಗಿ, ಹಿಂದುಳಿದವರನ್ನಾಗಿ ಮತ್ತು ಅಪರಾಧಿಗಳನ್ನಾಗಿ ಮಾಡಿದೆ. ಪರಿಣಾಮವಾಗಿ ನಾವು ಭಯೋತ್ಪಾದನೆಯನ್ನು ಮನೆಬಾಗಿಲಿಗೆ ಆಹ್ವಾನಿಸಿದ್ದೇವೆ. ಈ ಜನರು ಮುಖ್ಯವಾಹಿನಿಗೆ ಬರಲು ಯಾವಾಗ ಯೋಚಿಸುತ್ತಾರೆ...?’’ ಎಂದು ಬರೆದಿದ್ದರು. ತನಿಖೆಗೆ ಮುನ್ನವೇ ಭಾಸ್ಕರ್ ರಾವ್ ಅವರು, ಆರೋಪಿ ಯಾರು, ಅವರು ಯಾವ ಸಮುದಾಯಕ್ಕೆ ಸೇರಿದ್ದಾರೆ ಮತ್ತು ಅವರು ಸ್ಫೋಟ ನಡೆಸಲು ಕಾರಣವೇನು ಎನ್ನುವುದನ್ನು ಒಂದೇ ಸಾಲಿನಲ್ಲಿ ಬರೆದು ಮುಗಿಸಿದ್ದರು. ನಿಜವಾದ ಆರೋಪಿ ಯಾರು ಎನ್ನುವುದು ಬಯಲಾದ ಬಳಿಕವೂ ಇವರು ತಮ್ಮ ಪೋಸ್ಟನ್ನು ಅಳಿಸಿರಲಿಲ್ಲ. ದೂರದ ಕೇರಳದಲ್ಲಿ ಸ್ಫೋಟ ನಡೆದಾಕ್ಷಣ ತನ್ನ ತೀರ್ಪನ್ನು ಘೋಷಿಸಿದ್ದ ಈ ಮಾಜಿ ಪೊಲೀಸ್ ಅಧಿಕಾರಿಯು ಅಧಿಕಾರದಲ್ಲಿರುವಾಗ ನಡೆಸಿರುವ ತನಿಖೆಗಳು ಎಷ್ಟು ಪೂರ್ವಾಗ್ರಹ ಪೀಡಿತವಾಗಿದ್ದಿರಬಹುದು? ಈ ಪೂರ್ವಾಗ್ರಹ ಪೀಡಿತ ಮನಸ್ಸು ನಡೆಸಿರುವ ತನಿಖೆಗಳಿಗೆ ಬಲಿಯಾಗಿ ಅದೆಷ್ಟು ಅಮಾಯಕರು ಜೈಲು ಸೇರಿರಬಹುದು? ಕೇಂದ್ರ ಸಚಿವ ರಾಜೀವ್ ಚಂದ್ರ ಶೇಖರ್ ನೀಡಿರುವ ಹೇಳಿಕೆಗೆ ಖುದ್ದು ಕೇರಳದ ಮುಖಮಂತ್ರಿಯೇ ಪ್ರತಿಕ್ರಿಯಿಸಿ, ಅವರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಆದರೆ ಈ ಮಾಜಿ ಐಪಿಎಸ್ ಅಧಿಕಾರಿಯ ಟ್ವೀಟ್ನ ವಿರುದ್ಧ ಕರ್ನಾಟಕ ಸರಕಾರ ಮೌನವಾಗಿದೆ. ಕಾಂಗ್ರೆಸ್ನ ಓಲೈಕೆ ರಾಜಕಾರಣವೇ ಕೇರಳದ ಸ್ಫೋಟಕ್ಕೆ ಕಾರಣ ಎನ್ನುವುದಕ್ಕೆ ಸಿದ್ದರಾಮಯ್ಯ ಸರಕಾರ ಈ ಮೂಲಕ ಸಮ್ಮತಿಯನ್ನು ಘೋಷಿಸಿದೆ. ಇಲ್ಲದೇ ಇದ್ದರೆ ಇಷ್ಟು ಹೊತ್ತಿಗೆ ಭಾಸ್ಕರ್ ರಾವ್ ಮೇಲೆ ಪೊಲೀಸರು ಸ್ವಯಂ ಪ್ರಕರಣ ದಾಖಲಿಸುತ್ತಿದ್ದರು.
ಪ್ರಾರ್ಥನಾ ಸಭೆಯಲ್ಲಿ ಸ್ಫೋಟ ನಡೆಸಿದ್ದ ಉಗ್ರ ಪೊಲೀಸರಿಗೆ ಶರಣಾಗಿ, ತನ್ನ ತಪ್ಪನ್ನು ಒಪ್ಪಿಕೊಂಡಿದ್ದಾನೆ. ಆದರೆ ಈ ಶರಣಾಗತ ಉಗ್ರನನ್ನು ಬಳಸಿಕೊಂಡು ನಾಡಿನ ಶಾಂತಿ, ಸುವ್ಯವಸ್ಥೆಯನ್ನು ಕೆಡಿಸಲು ಯತ್ನಿಸಿದ್ದ ರಾಜಕಾರಣಿಗಳು, ಮಾಜಿ ಪೊಲೀಸ್ ಅಧಿಕಾರಿ, ಮಾಧ್ಯಮ ಪ್ರತಿನಿಧಿಗಳು ತಮ್ಮ ತಪ್ಪನ್ನು ಇನ್ನೂ ಒಪ್ಪಿಕೊಂಡಿಲ್ಲ, ಕನಿಷ್ಠ ಕ್ಷಮೆಯಾಚನೆಯನ್ನೂ ಮಾಡಿಲ್ಲ. ಈ ಮೂಲಕ ಸ್ಫೋಟ ನಡೆಸಿದ ಉಗ್ರನಿಗಿಂತಲೂ ಹೆಚ್ಚು ಅಪಾಯಕಾರಿ ಉಗ್ರರು ಯಾರು ಎನ್ನುವುದು ಬಟಾಬಯಲಾದಂತಾಗಿದೆ. ಸ್ಪೋಟ ನಡೆಸಿದ ಭಯೋತ್ಪಾದಕನನ್ನು ಮಟ್ಟ ಹಾಕಿದಂತೆಯೇ, ಈ ನಾಗರಿಕರ ವೇಷದಲ್ಲಿರುವ ಭಯ ಉತ್ಪಾದಕರನ್ನು ಮಟ್ಟ ಹಾಕುವುದು ಕೂದ ಶಾಂತಿ ಸುವ್ಯವಸ್ಥೆಯ ದೃಷ್ಟಿಯಿಂದ ಅತ್ಯಗತ್ಯವಾಗಿದೆ.