ಮಣಿಪುರದಲ್ಲಿ ಕಳೆದು ಹೋದ ದೇಶದ ಮಾನವನ್ನು ಉಡುಪಿಯಲ್ಲಿ ಹುಡುಕುತ್ತಿರುವ ಖುಷ್ಬೂ
ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ
ಉಡುಪಿಯ ಅದೊಂದು ಕಾಲೇಜಿನಲ್ಲಿ ಮೂವರು ಹುಡುಗಿಯರು ತನ್ನ ಸಹಪಾಠಿಯ ಫೋಟೋವೊಂದನ್ನು ಆಕೆಯ ಅನುಮತಿ ಇಲ್ಲದೆ ತೆಗೆದಿದ್ದಾರೆ. ತಕ್ಷಣ ಆಕೆ ಅದಕ್ಕೆ ಆಕ್ಷೇಪಿಸಿದ್ದಾರೆ. ಅವರು ಆ ಫೋಟೊವನ್ನು ಮೊಬೈಲ್ನಿಂದ ಅಲ್ಲೇ ಅಳಿಸಿ ಹಾಕಿದ್ದಾರೆ. ಚಕಮಕಿ ಅಲ್ಲಿಗೇ ಮುಗಿದು ಹೋಗಿದೆ. ಸಾಧಾರಣವಾಗಿ ವಿದ್ಯಾರ್ಥಿಗಳು ಪರಸ್ಪರ ಮೊಬೈಲ್ನಲ್ಲಿ ಪೋಟೊಗಳನ್ನು ತೆಗೆದುಕೊಳ್ಳುವುದು, ಬಳಿಕ ಅದನ್ನು ಅಳಿಸಿ ಹಾಕುವುದು ಇತ್ಯಾದಿಗಳು ಕ್ಯಾಂಪಸ್ನೊಳಗೆ ಸಾಮಾನ್ಯ. ಇಲ್ಲಿ ವಿದ್ಯಾರ್ಥಿನಿಯ ಸಹಮತ ವಿಲ್ಲದೆ ಫೋಟೊ ತೆಗೆದಿರುವುದು ಅಕ್ಷಮ್ಯ. ಆದರೆ ಫೋಟೊವನ್ನು ಎಲ್ಲೂ ವೈರಲ್ ಮಾಡದೆ ಅಲ್ಲೇ ಡಿಲೀಟ್ ಮಾಡಿರುವುದರಿಂದ ಪ್ರಕರಣ ಕಾಲೇಜಿನೊಳಗೆ ಮುಗಿದು ಹೋಗಿತ್ತು. ವಿದ್ಯಾರ್ಥಿನಿಯಾಗಲಿ, ವಿದ್ಯಾರ್ಥಿನಿಯರ ಪೋಷಕರಾಗಲಿ ಈ ಘಟನೆಯ ಬಗ್ಗೆ ಈವರೆಗೆ ದೂರು ನೀಡಿಲ್ಲ. ಪ್ರಕರಣ ಮುಗಿದಿರುವುದರಿಂದ ಕಾಲೇಜಿನ ಆಡಳಿತ ಮಂಡಳಿಯೂ ಈ ಬಗ್ಗೆ ಯಾವುದೇ ದೂರನ್ನು ಸಲ್ಲಿಸಿರಲಿಲ್ಲ. ಎಲ್ಲಕ್ಕಿಂತ ಮುಖ್ಯವಾಗಿ ವಿದ್ಯಾರ್ಥಿನಿಯರು ಯಾವ ಭಂಗಿಯ ಫೋಟೊ ತೆಗೆದಿದ್ದಾರೆ ಎನ್ನುವ ಬಗ್ಗೆಯೂ ಯಾರಲ್ಲೂ ಮಾಹಿತಿಯಿಲ್ಲ. ಆದರೆ ಬಿಜೆಪಿ ಮತ್ತು ಸಂಘಪರಿವಾರ ಮಾತ್ರ ಇದನ್ನು ಹಿಂದೂ ಮಹಿಳೆಯ ಮೇಲೆ ನಡೆದ ಭಾರೀ ಸಂಚು ಮತ್ತು ದೌರ್ಜನ್ಯವೆಂದು ಬಿಂಬಿಸಲು ಹೊರಟು ನಗೆಪಾಟಲಿಗೀಡಾಗಿದೆ.
ಪ್ರಕರಣದಿಂದ ಒಂದು ಸ್ಪಷ್ಟವಾಗಿದೆ. ಹಿಂದುತ್ವದ ಹೆಸರಿನಲ್ಲಿ ಕರಾವಳಿಗೆ ಬೆಂಕಿ ಹಚ್ಚಲು ಸದ್ಯಕ್ಕೆ ಬಿಜೆಪಿ, ಸಂಘಪರಿವಾರದ ಬಳಿ ವಿಷಯಗಳೇ ಇಲ್ಲ. ಅದಕ್ಕಾಗಿ ಸ್ವಯಂ ವಿವಾದವೊಂದನ್ನು ಸೃಷ್ಟಿಸಿ ಕರಾವಳಿಗೆ ಬೆಂಕಿ ಹಚ್ಚುವುದಕ್ಕೆ ಪ್ರಯತ್ನಿಸುತ್ತಿದೆ. ಬಿಜೆಪಿ ರಾಜಕೀಯವಾಗಿ ಎಂತಹ ದಾರಿದ್ರ ಸ್ಥಿತಿಯಲ್ಲಿದೆ ಎನ್ನುವುದಕ್ಕೆ, ಈ ಪ್ರಕರಣವನ್ನೇ ರಾಷ್ಟ್ರೀಯ ವಿಷಯವಾಗಿಸಿಕೊಂಡು ಬೀದಿಯಲ್ಲಿ ಪ್ರತಿಭಟನೆ ಮಾಡುತ್ತಿರುವುದು ಸಾಕ್ಷಿ. ಇದೇ ಸಂದರ್ಭದಲ್ಲಿ ರಶ್ಮಿ ಸಾಮಂತ್ ಎಂಬಾಕೆ ಸಾಮಾಜಿಕ ಜಾಲತಾಣಗಳಲ್ಲಿ ‘‘ಶೌಚಾಲಯದೊಳಗೆ ಹಿಡನ್ ಕ್ಯಾಮರಾ ಇಟ್ಟು ನೂರಾರು ಹೆಣ್ಣು ಮಕ್ಕಳನ್ನು ಚಿತ್ರೀಕರಿಸಲಾಗಿದೆ’’ ಎಂದು ಸುಳ್ಳನ್ನು ಹರಡಿದಳು. ಸಾಮಾಜಿಕ ಜಾಲತಾಣದಲ್ಲಿ ದ್ವೇಷ ಹರಡಿದ ಕಾರಣಕ್ಕಾಗಿ ಈ ಹಿಂದೆ ಆಕ್ಸ್ ಫರ್ಡ್ ವಿದ್ಯಾರ್ಥಿ ಸಂಘದಿಂದ ಹೊರದಬ್ಬಲ್ಪಟ್ಟ ಹೆಗ್ಗಳಿಕೆಯನ್ನು ಈಕೆ ಹೊಂದಿದ್ದಾಳೆ. ಉಡುಪಿಯ ಪ್ರಕರಣದಲ್ಲಿ ಇವಳು ಹರಡಿದ ಹಸಿ ಸುಳ್ಳಿನಿಂದಾಗಿ ಪ್ರಕರಣ ಏಕಾಏಕಿ ರಾಷ್ಟ್ರಮಟ್ಟದಲ್ಲಿ ರೆಕ್ಕೆ ಪುಕ್ಕ ಪಡೆದುಕೊಂಡಿತು. ಇತ್ತೀಚೆಗಷ್ಟೇ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯನವರು ‘‘ಸಾಮಾಜಿಕ ಜಾಲತಾಣಗಳಲ್ಲಿ ದ್ವೇಷವನ್ನು ಹರಡುವ, ಸುಳ್ಳನ್ನು ಹರಡಿ ಶಾಂತಿಕೆಡಿಸುವವರ ವಿರುದ್ಧ ಪೊಲೀಸರು ಸ್ವಯಂ ಕೇಸು ದಾಖಲಿಸಿ ತನಿಖೆ ಮಾಡುತ್ತಾರೆ’’ ಎಂದು ಭರವಸೆ ನೀಡಿದ್ದರು. ಅವರ ಮೇಲೆ ಕಠಿಣ ಕ್ರಮ ತೆಗೆದುಕೊಳ್ಳಲಾಗುವ ಎಚ್ಚರಿಕೆಯನ್ನೂ ನೀಡಿದ್ದರು. ಹಸಿಸುಳ್ಳೊಂದನ್ನು ಹರಡಿ ಕರಾವಳಿಗೆ ಬೆಂಕಿ ಹಚ್ಚಲು ಹೊರಟ ಈ ರಶ್ಮಿ ಸಾಮಂತ್ ವಿರುದ್ಧ ಈವರೆಗೆ ಪೊಲೀಸರು ಯಾವುದೇ ಪ್ರಕರಣವನ್ನು ದಾಖಲಿಸಿಲ್ಲ. ಇದೇ ಸಂದರ್ಭದಲ್ಲಿ ಸಂಘಪರಿವಾರದ ಒತ್ತಡಕ್ಕೆ ಮಣಿದು ಕಾಲೇಜಿನ ವಿದ್ಯಾರ್ಥಿನಿಯರ ವಿರುದ್ಧ ಪೊಲೀಸರು ಸ್ವಯಂ ಕೇಸು ದಾಖಲಿಸಿ ತನಿಖೆ ಮಾಡಲು ಹೊರಟಿದ್ದಾರೆ. ಯಾವುದೇ ದಾಖಲೆಗಳಿಲ್ಲದ, ಸಂತ್ರಸ್ತರ ಅಧಿಕೃತ ದೂರೂ ಇಲ್ಲದ, ಸಾಕ್ಷಗಳಿಲ್ಲದ ಪ್ರಕರಣವೊಂದಕ್ಕೆ ಸಂಬಂಧಿಸಿ ಮೂವರು ವಿದ್ಯಾರ್ಥಿಗಳನ್ನು ಕಾಲೇಜಿನಿಂದ ಈಗಾಗಲೇ ಅಮಾನತುಗೊಳಿಸಲಾಗಿದೆ. ಅದು ಅವರಿಗೆ ನೀಡಬಹುದಾದ ಗರಿಷ್ಠ ಮಟ್ಟದ ಶಿಕ್ಷೆಯಾಗಿದೆ. ಇದೇ ಸಂದರ್ಭದಲ್ಲಿ ರಾಷ್ಟ್ರಮಟ್ಟದಲ್ಲಿ ಸಾಮಾಜಿಕ ಜಾಲತಾಣದಲ್ಲಿ ಸುಳ್ಳನ್ನು ಹರಡಿ ಸಮಾಜದ ಶಾಂತಿ ಕೆಡಿಸಿದ ಮಹಿಳೆಯ ವಿರುದ್ಧ ಕ್ರಮ ತೆಗೆದುಕೊಳ್ಳಲು ಕಾನೂನು ಸುವ್ಯವಸ್ಥೆ ವಿಫಲವಾಗಿದೆ.
ಈ ರಶ್ಮಿ ಸಾಮಂತ್ ನ ಟ್ವೀಟ್ ಅನ್ನು ನಂಬಿ ಉಡುಪಿಗೆ ಧಾವಿಸಿ ಬಂದ ರಾಷ್ಟ್ರೀಯ ಮಹಿಳಾ ಆಯೋಗದ ಸದಸ್ಯೆ ಖುಷ್ಬೂ ಅವರ ಸ್ಥಿತಿಯಂತೂ ಚಿಂತಾಜನಕವಾಗಿದೆ. ಸಂತ್ರಸ್ತ ಮಹಿಳೆಗೆ ನ್ಯಾಯ ನೀಡಲೆಂದು ಉಡುಪಿಯಲ್ಲಿ ಸಂತ್ರಸ್ತ ವಿದ್ಯಾರ್ಥಿನಿಯನ್ನು ಹುಡುಕಿ ಆಕೆ ನಿರಾಶರಾಗಿದ್ದಾರೆ. ಉಡುಪಿಯಲ್ಲಿ ಸಂತ್ರಸ್ತರಾಗಿರುವವರು ಸಂಘಪರಿವಾರ ಮತ್ತು ಬಿಜೆಪಿಯ ಜನರು ಎನ್ನುವುದು ಅವರಿಗೆ ತಡವಾಗಿ ಅರ್ಥವಾದಂತಿದೆ. ‘‘ಶೌಚಾಲಯದಲ್ಲಿ ಹಿಡನ್ ಕ್ಯಾಮರಾ ಇರಲಿಲ್ಲ, ಕೇವಲ ವದಂತಿ’’ ಎಂದು ಖುಷ್ಬೂ ಮಾಧ್ಯಮಗಳ ಮುಂದೆ ಈಗಾಗಲೇ ಸ್ಪಷ್ಟನೆ ನೀಡಿದ್ದಾರೆ. ಇದು ವದಂತಿ ಎಂದ ಮೇಲೆ, ಈ ವದಂತಿಯನ್ನು ಹರಡಿದವರು ಯಾರು? ಅಂತಹ ವದಂತಿಗಳನ್ನು ಹರಡಿ ಸಮಾಜದ ದಾರಿ ತಪ್ಪಿಸಿದವರಿಗೆ ಶಿಕ್ಷೆಯಾಗಬೇಡವೆ? ವದಂತಿ ಹರಡಿದ ತರುಣಿಯ ಮೇಲೆ ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಖುಷ್ಬೂ ಒಬ್ಬ ಮಹಿಳಾ ಆಯೋಗದ ಪ್ರತಿನಿಧಿಯಾಗಿ ಪೊಲೀಸರನ್ನು ಒತ್ತಾಯಿಸಬೇಕಾಗಿತ್ತು. ಆದರೆ ಅಂತಹ ಯಾವ ಬೇಡಿಕೆಯೂ ಅವರ ಬಾಯಿಂದ ಹೊರಬಿದ್ದಿಲ್ಲ. ‘‘ತನಿಖೆ ನಡೆಯುತ್ತಿದೆ. ತನಿಖೆಯಾದ ಬಳಿಕ ಪೂರ್ತಿ ವಿವರಗಳನ್ನು ಬಹಿರಂಗ ಪಡಿಸುತ್ತೇನೆ’’ ಎಂದು ಮಾಧ್ಯಮಗಳ ಮುಂದೆ ಹೇಳಿಕೆ ನೀಡಿ ಅವರು ಮುಖ ಉಳಿಸಿಕೊಳ್ಳುವ ಪ್ರಯತ್ನ ನಡೆಸಿದ್ದಾರೆ.
ಕರಾವಳಿಯಲ್ಲಿ ಕಾಲೇಜಿನ ವಿದ್ಯಾರ್ಥಿನಿಯರ ಶೌಚಾಲಯದಲ್ಲಿ ಹಿಡನ್ ಕ್ಯಾಮರಾ ಇಟ್ಟ ಪ್ರಕರಣ ನಡೆದೇ ಇಲ್ಲ ಎಂದಲ್ಲ. ಈ ಹಿಂದೆ 2016ರಲ್ಲಿ ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ಇಂತಹ ಪ್ರಕರಣವೊಂದು ನಡೆದಿತ್ತು. ಆದರೆ ಆ ಸಂದರ್ಭದಲ್ಲಿ ಯಾವ ಮಹಿಳಾ ಆಯೋಗಕ್ಕೂ ಅದು ಮಹತ್ವದ ವಿಷಯ ಅನ್ನಿಸಿರಲಿಲ್ಲ. ಯಾಕೆಂದರೆ, ಆ ಪ್ರಕರಣದಲ್ಲಿ ಸಿಕ್ಕಿ ಹಾಕಿಕೊಂಡ ಆರೋಪಿ ಸ್ವತಃ ಸಂಘಪರಿವಾರ ಹಿನ್ನೆಲೆಯಿರುವ ವಿದ್ಯಾರ್ಥಿಯಾಗಿದ್ದ. ಬಂಧಿಸಿದ ಮರುದಿನವೇ ಆತನಿಗೆ ನ್ಯಾಯಾಲಯ ಜಾಮೀನು ನೀಡಿತ್ತು. ಈತನ ವಿರುದ್ಧ ಯಾವುದೇ ಪ್ರತಿಭಟನೆಯನ್ನು ಬಿಜೆಪಿಯಾಗಲಿ, ಸಂಘಪರಿವಾರವಾಗಲಿ ಹಮ್ಮಿಕೊಂಡಿರಲಿಲ್ಲ. ಕೆಲವು ದಿನಗಳ ಹಿಂದೆ ಶಿವಮೊಗ್ಗದ ಎಬಿವಿಪಿ ಮುಖಂಡನೊಬ್ಬ ಹಿಂದೂ ಯುವತಿಯರ ಅಶ್ಲೀಲ ಪೋಟೊಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಾಕಿ ಅವರನ್ನು ಬ್ಲಾಕ್ ಮೇಲ್ ಮಾಡಿರುವ ಪ್ರಕರಣ ಬೆಳಕಿಗೆ ಬಂದಿತ್ತು. ಈ ಹಿನ್ನೆಲೆಯಲ್ಲಿ ಖುಷ್ಬೂ ಅವರು ಉಡುಪಿಯಿಂದ ನೇರವಾಗಿ ತೀರ್ಥಹಳ್ಳಿಗೆ ಹೋಗಿ ಸಂತ್ರಸ್ತ ಹುಡುಗಿಯರಿಗೆ ನ್ಯಾಯ ಕೊಡಿಸುವ ಪ್ರಯತ್ನವನ್ನಾದರೂ ಮಾಡಿದ್ದಿದ್ದರೆ ದೂರದ ದಿಲ್ಲಿಯಿಂದ ಬಂದುದಕ್ಕೆ ಸಾರ್ಥಕವಾಗುತ್ತಿತ್ತು. ಮಣಿಪುರದಲ್ಲಿ ಮಹಿಳೆಯರನ್ನು ಸಾರ್ವಜನಿಕವಾಗಿ ಬೆತ್ತಲೆ ಮೆರವಣಿಗೆ ಮಾಡಿರುವ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಭಾರತದ ಮಾನವನ್ನು ವಿಶ್ವದ ಮುಂದೆ ಹರಾಜಿಗಿಟ್ಟಿದೆ. ಮಣಿಪುರಕ್ಕೆ ಧಾವಿಸಿ ಅಲ್ಲಿನ ಮಹಿಳೆಯರ ಕಷ್ಟ ಗಳನ್ನು ಆಲಿಸಿ ಅವರಿಗೆ ನ್ಯಾಯ ನೀಡಬೇಕಾಗಿರುವ ಖುಷ್ಬೂ ಉಡುಪಿಗೆ ಬಂದು ಇಲ್ಲದ ವೀಡಿಯೊ, ಪೋಟೊಗಳನ್ನು ಹುಡುಕಿ ಮಹಿಳೆಯರಿಗೆ ನ್ಯಾಯ ನೀಡಲು ಹೊರಟಿದ್ದಾರೆ. ಒಂದು ರೀತಿಯಲ್ಲಿ ಮಣಿಪುರದಲ್ಲಿ ಕಳೆದುಹೋಗಿರುವ ದೇಶದ ಮಾನವನ್ನು ಅವರು ಉಡುಪಿಯಲ್ಲಿ ಹುಡುಕುತ್ತಿದ್ದಾರೆ.