ಜೆಡಿಎಸ್ ದುರಂತದಿಂದ ಕಲಿಯಬೇಕಾದ ಪಾಠಗಳು
Photo: X/ hd_kumaraswamy/media
ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ
ಕರ್ನಾಟಕದ ನೆಲ, ಜಲದ ಹಿತಾಸಕ್ತಿಯನ್ನೇ ಪ್ರಣಾಳಿಕೆಯಾಗಿಸಿಕೊಂಡು ಪ್ರಾದೇಶಿಕ ಪಕ್ಷವಾಗಿ ಬೆಳೆಯುವ ಎಲ್ಲಾ ಅವಕಾಶಗಳನ್ನು ಕೈ ಚೆಲ್ಲಿ, ಸಮಯ ಸಾಧಕತನ ರಾಜಕಾರಣವನ್ನು ನೆಚ್ಚಿಕೊಂಡು ಇದೀಗ ಅವಸಾನದ ಅಂಚಿಗೆ ಬಂದು ನಿಂತಿದೆ ಜಾತ್ಯತೀತ ಜನತಾದಳ. ರಾಮಕೃಷ್ಣ ಹೆಗಡೆ, ಜೆ.ಎಚ್. ಪಟೇಲ್ರಂತಹ ಮುತ್ಸದ್ದಿ ನಾಯಕರೊಂದಿಗೆ ಗುದ್ದಾಡಿ ತನ್ನ ಪಾಲಿನ ಜನತಾದಳವನ್ನು ಹರಿದುಕೊಂಡು ಅದರಲ್ಲಿ ಉತ್ತು, ಬಿತ್ತಿ ಬೆಳೆದವರು ಮಣ್ಣಿನ ಮಗ ದೇವೇಗೌಡರು. ರೈತರ ಹಿತಾಸಕ್ತಿಗಳ ಬಗ್ಗೆ ಮಾತನಾಡುತ್ತ ಪಕ್ಷವನ್ನು ಬಲಾಢ್ಯಗೊಳಿಸಿದರು. ವಿಪರ್ಯಾಸವೆಂದರೆ, ಜೆಡಿಎಸ್ ಕೊನೆಗೂ ಪ್ರಾದೇಶಿಕ ಪಕ್ಷದ ಗುಣಲಕ್ಷಣಗಳನ್ನು ಉಳಿಸಿಕೊಳ್ಳಲಿಲ್ಲ. ಇದೇ ಸಂದರ್ಭದಲ್ಲಿ ರಾಷ್ಟ್ರೀಯ ಪಕ್ಷವೆನ್ನುವ ಗುರುತನ್ನೂ ಬೆಳೆಸಿಕೊಳ್ಳಲಿಲ್ಲ. ಜೆಡಿಎಸ್ ಚುಕ್ಕಾಣಿ ಕುಮಾರ ಸ್ವಾಮಿಯ ಕೈಗೆ ಬದಲಾದಂತೆ ಜಾತ್ಯತೀತವೆನ್ನುವ ಪದದ ಕುರಿತಂತೆಯೂ ಕೀಳರಿಮೆಯನ್ನು ಅನುಭವಿಸತೊಡಗಿತು. ಇಂದು ಜೆಡಿಎಸ್ ಪಕ್ಷ ತನ್ನೆಲ್ಲ ಸ್ವಂತಿಕೆಗಳನ್ನು ಕಳೆದುಕೊಂಡು ಅರ್ಧ ಕಾಂಗ್ರೆಸ್ನಲ್ಲೂ, ಅರ್ಧ ಬಿಜೆಪಿಯಲ್ಲೂ ವಿಲೀನವಾಗುವ ಸ್ಥಿತಿಗೆ ಬಂದು ನಿಂತಿದೆ. ಪ್ರಜ್ವಲ್ನ ಲೈಂಗಿಕ ಹಗರಣಗಳು ಜೆಡಿಎಸ್ನ ಶವಪೆಟ್ಟಿಗೆಗೆ ಹೊಡೆಯುವ ಕೊನೆಯ ಮೊಳೆಗಳಾಗುವ ಸಾಧ್ಯತೆಗಳಿವೆ. ಬಿಜೆಪಿ ಮತ್ತು ಕಾಂಗ್ರೆಸ್ ಎನ್ನುವ ರಾಷ್ಟ್ರೀಯ ಪಕ್ಷಗಳ ನಡುವೆ ಕರ್ನಾಟಕ ತನ್ನ ಸ್ಥಳೀಯ ಹಿತಾಸಕ್ತಿಯನ್ನು ಕಾಪಾಡುವ ಹೊಸ ಪ್ರಾದೇಶಿಕ ಪಕ್ಷವೊಂದರ ನಿರೀಕ್ಷೆಯಲ್ಲಿದೆ.
ಜಾತ್ಯತೀತ ಎನ್ನುವ ರುಬ್ಬುಕಲ್ಲನ್ನು ಕುತ್ತಿಗೆಗೆ ಕಟ್ಟಿಕೊಂಡು ಮುಂದೆ ನಡೆದರೆ, ಎಂದಿಗೂ ಮುಖ್ಯಮಂತ್ರಿಯಾಗುವುದು ಸಾಧ್ಯವಿಲ್ಲ ಎನ್ನುವುದನ್ನು ಅರ್ಥ ಮಾಡಿಕೊಂಡು, ಮೌಲ್ಯಗಳನ್ನು, ಬದ್ಧತೆಗಳನ್ನು ಗಾಳಿಗೆ ತೂರಿ ನಾಡನ್ನೇ ಮುಜುಗರಕ್ಕೆ ತಳ್ಳುವ ಹೊಸಬಗೆಯ ರಾಜಕೀಯವನ್ನು ಕುಮಾರಸ್ವಾಮಿ ಪರಿಚಯಿಸಿದರು. ಮಾಜಿ ಪ್ರಧಾನಿ ದೇವೇಗೌಡರೂ ಮಗನ ಸಮಯ ಸಾಧಕ ರಾಜಕಾರಣಕ್ಕೆ ‘ಮೂಕ ವಿಸ್ಮಿತ’ರಾದರು. ‘ಬಹುಮತ’ ಪಡೆದ ಮೈತ್ರಿ ಪಕ್ಷದ ನಾಯಕನೇ ಮುಖ್ಯಮಂತ್ರಿಯಾಗಬೇಕು ಎನ್ನುವ ನಿಯಮಕ್ಕೆ ಬದ್ಧನಾದರೆ ಮೈತ್ರಿ ಸರಕಾರದಲ್ಲಿ ‘ಉಪಮುಖ್ಯಮಂತ್ರಿ’ ಸ್ಥಾನಕ್ಕಷ್ಟೇ ಸೀಮಿತವಾಗಬೇಕಾಗುತ್ತದೆ ಎನ್ನುವುದನ್ನು ಅರ್ಥ ಮಾಡಿಕೊಂಡು, ಪಕ್ಷವನ್ನು ಒಡೆದಂತೆ ಮಾಡಿ, ಬಿಜೆಪಿ ನಮಗೆ ಅಸ್ಪಶ್ಯವಲ್ಲ ಎನ್ನುವುದನ್ನು ಕಾಂಗ್ರೆಸ್ಗೆ ಮನದಟ್ಟು ಮಾಡಿದರು. ಆ ಮೂಲಕ ಕಡಿಮೆ ಸ್ಥಾನಗಳನ್ನು ಹೊಂದಿದ್ದರೂ, ಚುನಾವಣೋತ್ತರ ಮೈತ್ರಿ ಮೂಲಕ ಬಿಜೆಪಿ, ಕಾಂಗ್ರೆಸ್ ಎರಡರ ಬೆಂಬಲ ಪಡೆದು ಎರಡು ಬಾರಿ ಮುಖ್ಯಮಂತ್ರಿಯಾಗಿ ದಾಖಲೆ ನಿರ್ಮಿಸಿದರು. ನಾಡಿನ ಜನತೆಗೆ ಒಂದು ಹಂತದವರೆಗೆ ಬಿಜೆಪಿ-ಕಾಂಗ್ರೆಸ್ ನಡುವೆ ಒಂದು ಪರ್ಯಾಯ ಶಕ್ತಿಯಾಗಿ ಜೆಡಿಎಸ್ ಕಂಡದ್ದು ಸುಳ್ಳಲ್ಲ. ಆದರೆ ಕಟ್ಟಕಡೆಗೆ ಮುಖ್ಯಮಂತ್ರಿ ಕುರ್ಚಿ ಏರುವುದನ್ನೇ ಮೌಲ್ಯವಾಗಿಸಿಕೊಂಡು, ಅಧಿಕಾರಕ್ಕಾಗಿ ಯಾವ ಹಂತಕ್ಕೆ ಬೇಕಾದರೂ ತಲುಪಬಲ್ಲೆ ಎನ್ನುವುದನ್ನು ಕುಮಾರಸ್ವಾಮಿ ಸಾಬೀತು ಪಡಿಸಿದಂತೆಯೇ ಅವರಲ್ಲಿ ಜನರು ನಂಬಿಕೆ ಕಳೆದುಕೊಳ್ಳತೊಡಗಿದರು. ಕಳೆದ ವಿಧಾನಸಭಾ ಚುನಾವಣೆಯ ಫಲಿತಾಂಶದಲ್ಲಿ, ಪಕ್ಷ ಜನರಿಂದ ದೂರವಾಗುತ್ತಿರುವುದು ಕುಮಾರ ಸ್ವಾಮಿಯೂ ಮನಗಂಡರು. ಈ ಕಾರಣದಿಂದಲೇ, ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್ನ ಅಳಿದುಳಿದ ಮೌಲ್ಯಗಳನ್ನು ಬಿಜೆಪಿಗೆ ಒತ್ತೆಯಿಟ್ಟು ತನ್ನ ರಾಜಕೀಯ ಅಸ್ತಿತ್ವವನ್ನು ಉಳಿಸುವ ವ್ಯರ್ಥ ಪ್ರಯತ್ನದಲ್ಲಿದ್ದಾರೆ.
ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್ ಹಿಡಿತದಲ್ಲಿರುವ ಒಕ್ಕಲಿಗ ಕೋಟೆಯೊಳಗೆ ನುಗ್ಗುವ ಒಂದೇ ಒಂದು ಉದ್ದೇಶದಿಂದ ಬಿಜೆಪಿ ಕುಮಾರಸ್ವಾಮಿಯ ಜೊತೆಗೆ ಮೈತ್ರಿ ಮಾಡಲು ಒಪ್ಪಿಕೊಂಡಿತು. ಅದಾಗಲೇ ಆರೆಸ್ಸೆಸ್ ಜೊತೆಗೆ ಮೃದುವಾಗಿ ಗುರುತಿಸಿಕೊಂಡಿರುವ ಒಕ್ಕಲಿಗ ಸಮುದಾಯದ ಒಂದು ಗುಂಪನ್ನು ಪೂರ್ಣ ಪ್ರಮಾಣದಲ್ಲಿ ತನ್ನದಾಗಿಸುವ ಅಜೆಂಡಾವನ್ನು ಬಿಜೆಪಿ ಹೊಂದಿದೆ. ಮಂಡ್ಯವೂ ಸೇರಿದಂತೆ ಒಕ್ಕಲಿಗ ಸಮುದಾಯ ಪ್ರಬಲವಾಗಿರುವ ಭಾಗದಲ್ಲಿ ಸಂಘಪರಿವಾರ ಈಗಾಗಲೇ ಜೆಡಿಎಸ್ನ್ನು ಬಳಸಿಕೊಂಡು ಬಲವಾಗಿ ಬೇರಿಳಿಸ ತೊಡಗಿದೆ. ಈ ಮೈತ್ರಿಯ ಉದ್ದೇಶವೇ ಹಂತ ಹಂತವಾಗಿ ಜೆಡಿಎಸ್ನ್ನು ಆಪೋಷನ ತೆಗೆದುಕೊಳ್ಳುವುದು. ಈ ಹಿಂದೆ ಕಾಂಗ್ರೆಸ್-ಜೆಡಿಎಸ್ ಚುನಾವಣಾ ಪೂರ್ವ ಮೈತ್ರಿ ಮಾಡಿಕೊಂಡಾಗ ಅದು ನಿರೀಕ್ಷಿತ ಫಲವನ್ನು ನೀಡಿರಲಿಲ್ಲ. ಮೈತ್ರಿಯ ನಡುವೆಯೂ ಎರಡೂ ಪಕ್ಷಗಳು ಪರಸ್ಪರ ಬೆನ್ನಿಗೆ ಇರಿದುಕೊಂಡವು. ಆದರೆ ಈ ಬಾರಿ ಬಿಜೆಪಿಯ ಜೊತೆಗಿನ ಮೈತ್ರಿಯಲ್ಲಿ ಜೆಡಿಎಸ್ ತನ್ನ ಸ್ವಂತಿಕೆಯನ್ನು ಸಂಪೂರ್ಣವಾಗಿ ಬಿಜೆಪಿಗೆ ತೆತ್ತುಕೊಂಡಿದೆ. ಈ ಹಿಂದೆ ಜೆಡಿಎಸ್ ಬೆನ್ನಿಗಿದ್ದ ಜಾತ್ಯತೀತ ಮತಗಳು ಈ ಬಾರಿ ನೇರವಾಗಿ ಕಾಂಗ್ರೆಸ್ಗೆ ಬೀಳಲಿವೆ. ಬಿಜೆಪಿ ಜೊತೆಗಿನ ಜೆಡಿಎಸ್ ಮೈತ್ರಿಯಿಂದ ಕಾಂಗ್ರೆಸ್ಗೆ ಚುನಾವಣೆಯಲ್ಲಿ ಲಾಭವೇ ಆಗಲಿದೆ. ಆದರೆ ಲೋಕಸಭಾ ಚುನಾವಣೆಯ ಕೊನೆಗೆ ಜೆಡಿಎಸ್ ತಾನೆಲ್ಲಿದ್ದೇನೆ ಎನ್ನುವುದನ್ನು ಸ್ಪಷ್ಟಪಡಿಸಿಕೊಳ್ಳುವುದು ಕಷ್ಟವಾಗಬಹುದು.
ಅಧಿಕಾರಕ್ಕಾಗಿ ಕುಮಾರಸ್ವಾಮಿ ನಡೆಸಿದ ಅನೈತಿಕ ಮೈತ್ರಿ ರಾಜಕಾರಣ ಯಾವುದೇ ಪ್ರಜ್ವಲ್ ಲೈಂಗಿಕ ಹಗರಣಗಳಿಗಿಂತ ಕಡಿಮೆಯಿಲ್ಲ. ಇದೀಗ ಪ್ರಜ್ವಲ್ ಹಗರಣ ಜೆಡಿಎಸ್ನ್ನು ಸಂಪೂರ್ಣ ಜರ್ಜರಿತಗೊಳಿಸಿದೆ. ಕಾರ್ಯಕರ್ತರು ಜೆಡಿಎಸ್ ನಾಯಕರೊಂದಿಗೆ ಗುರುತಿಸಿಕೊಳ್ಳಲು ತೀವ್ರ ಮುಜುಗರ ಪಡುತ್ತಿದ್ದಾರೆ. ತಂದೆ-ಮಕ್ಕಳ ರಾಜಕೀಯದಿಂದ ರೋಸಿಹೋಗಿರುವ ಅಳಿದುಳಿದ ಶಾಸಕರೂ ಲೋಕಸಭಾ ಚುನಾವಣೆಯ ಫಲಿತಾಂಶವನ್ನು ಎದುರು ನೋಡುತ್ತಿದ್ದಾರೆ. ಜೆಡಿಎಸ್ ಗುರುತಿಸಿಕೊಂಡಿರುವುದು, ಅಸ್ತಿತ್ವ ಉಳಿಸಿಕೊಂಡಿರುವುದು ಜಾತಿ ಮತ್ತು ಕುಟುಂಬ ರಾಜಕಾರಣಕ್ಕಾಗಿ . ಇದೀಗ ಕುಟುಂಬವನ್ನು ಪೆನ್ಡ್ರೈವ್ಗೂ, ಜಾತಿ ಗುರುತನ್ನು ಆರೆಸ್ಸೆಸ್ಗೂ ಒತ್ತೆಯಿಟ್ಟಿರುವ ಜೆಡಿಎಸ್ ಅಕ್ಷರಶಃ ಬೀದಿಗೆ ಬಿದ್ದಿದೆ. ಪ್ರಜ್ವಲ್ ಲೈಂಗಿಕ ಹಗರಣದಲ್ಲಿ ಕುಟುಂಬವೂ ಒಡೆದು ಚೂರಾಗಿದೆ. ‘ತನಗೂ ರೇವಣ್ಣ ಕುಟುಂಬಕ್ಕೂ ಸಂಬಂಧವಿಲ್ಲ. ನಾವು ಬೇರೆ ಬೇರೆ’ ಎಂದು ಕುಮಾರಸ್ವಾಮಿ ಬಹಿರಂಗವಾಗಿಯೇ ಹೇಳಿಕೆಯನ್ನು ನೀಡಿದ್ದಾರೆ. ಪ್ರಜ್ವಲ್ ಮತ್ತು ಆತನ ತಂದೆಯನ್ನು ಕುಮಾರಸ್ವಾಮಿ ಕೈ ಬಿಟ್ಟಿದ್ದಾರೆ. ದೇವೇಗೌಡರು ಆರೋಪಗಳ ಶರಶಯ್ಯೆಯಲ್ಲಿ ಮೂಕವಾಗಿ ಮಲಗಿದ್ದಾರೆ. ಲೋಕಸಭಾ ಚುನಾವಣೆಯಲ್ಲಿ ಪ್ರಜ್ವಲ್ ಏನಾದರೂ ಗೆದ್ದು ಬಿಟ್ಟರೆ ಅದನ್ನೇ ಮುಂದಿಟ್ಟುಕೊಂಡು ಹೋದ ಮಾನವನ್ನು ಉಳಿಸಿಕೊಳ್ಳಲು ಜೆಡಿಎಸ್ ನಾಯಕರು ಯತ್ನಿಸಬಹುದು. ಪ್ರಜ್ವಲ್ ಚುನಾವಣೆಯಲ್ಲಿ ಹೀನಾಯವಾಗಿ ಸೋತರೆ, ಆತ ಶಾಶ್ವತವಾಗಿ ವಿದೇಶದಲ್ಲೇ ತಲೆಮರೆಸಿಕೊಂಡು ಇರಬೇಕಾದ ಸ್ಥಿತಿ ನಿರ್ಮಾಣವಾಗಬಹುದು. ಈಗಾಗಲೇ ಹಲವು ಭ್ರಷ್ಟರನ್ನು ವಿದೇಶಕ್ಕೆ ರವಾನಿಸಿ ಅವರು ಜೈಲು ಪಾಲಾಗದಂತೆ ಕಾಪಾಡಿರುವ ಬಿಜೆಪಿಯ ಕೇಂದ್ರ ವರಿಷ್ಠರು ಪ್ರಜ್ವಲ್ ವಿಷಯದಲ್ಲೂ ಅಭಯವನ್ನು ನೀಡಿ ಮೈತ್ರಿಯ ಮೌಲ್ಯವನ್ನು ಎತ್ತಿ ಹಿಡಿಯಬಹುದು. ಕುಮಾರಸ್ವಾಮಿ ಚುನಾವಣೆಯಲ್ಲಿ ಗೆದ್ದರೆ, ಎನ್ಡಿಎ ನೇತೃತ್ವದ ಸರಕಾರದಲ್ಲಿ ಕೇಂದ್ರ ಸಚಿವರಾಗುವ ಸಾಧ್ಯತೆಯಿದೆ. ಜೆಡಿಎಸ್ನ್ನು ತಕ್ಕಡಿಯಲ್ಲಿಟ್ಟು ತೂಗಿ ಅದರ ಬೆಲೆಯನ್ನು ಆ ಮೂಲಕ ಬಿಜೆಪಿ ಸಂದಾಯ ಮಾಡಿದಂತಾಗಬಹುದು.
ಈಗಾಗಲೇ ಪ್ರಜ್ವಲ್ ಲೈಂಗಿಕ ಹಗರಣದಲ್ಲಿ ಬಿಜೆಪಿ ಅಂತರವನ್ನು ಕಾಯ್ದುಗೊಂಡಿದೆ. ಮುಂದಿನ ದಿನಗಳಲ್ಲಿ ಜೆಡಿಎಸ್ ಕಾರ್ಯಕರ್ತರು ಮತ್ತು ಕೆಲವು ನಾಯಕರು ಸಾಮೂಹಿಕವಾಗಿ ಬಿಜೆಪಿಯಲ್ಲಿ ವಿಲೀನರಾಗುವ ಸೂಚನೆಗಳು ಕಾಣುತ್ತಿವೆ. ಜಾತ್ಯತೀತ ಮೌಲ್ಯಗಳ ಜೊತೆಗೆ ನಂಬಿಕೆಯಿರುವ, ಸಿದ್ದರಾಮಯ್ಯನ ಆಪ್ತರು ಕಾಂಗ್ರೆಸ್ಗೆ ಸೇರ್ಪಡೆಯಾಗಬಹುದು. ಅಲ್ಲಿಗೆ ಜೆಡಿಎಸ್ ಕತೆ ದುರಂತದ ಮುಕ್ತಾಯ ಕಾಣಬಹುದು. ಜಾತಿ ರಾಜಕಾರಣ, ಕುಟುಂಬ ರಾಜಕಾರಣವನ್ನು ಬಳಸಿಕೊಂಡು ಪಕ್ಷವನ್ನು ಎಲ್ಲಿಯವರೆಗೆ ಕೊಂಡೊಯ್ಯಬಹುದು ಎನ್ನುವುದಕ್ಕೆ ಉತ್ತರವಾಗಿ ಜೆಡಿಎಸ್ನ ಅವಸಾನ ನಮ್ಮ ಕಣ್ಣಮುಂದಿದೆ. ದೇವೇಗೌಡರ ಹಿರಿತನ, ಮುತ್ಸದ್ದಿತನವನ್ನು ಬಳಸಿಕೊಂಡು, ಕುಮಾರಸ್ವಾಮಿಯ ಸಮಯಸಾಧಕ ರಾಜಕಾರಣದಿಂದ ಪಾಠವನ್ನು ಕಲಿತುಕೊಂಡು ಜಾತಿ, ಧರ್ಮಗಳನ್ನು ಮೀರಿ ಕನ್ನಡದ ನೆಲ, ಜಲವನ್ನು ಅಸ್ಮಿತೆಯಾಗಿಸಿಕೊಂಡು ಹೊಸತೊಂದು ಪ್ರಾದೇಶಿಕ ಪಕ್ಷಕ್ಕೆ ಚಾಲನೆ ನೀಡಲು ಇದು ಸರಿಯಾದ ಸಮಯವಾಗಿದೆ.