ಶಿಕ್ಷಣ ಭಾಗ್ಯವೂ ಸರಕಾರದ ಗ್ಯಾರಂಟಿಗಳಲ್ಲಿ ಒಂದಾಗಲಿ
ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ
ಗ್ಯಾರಂಟಿಗಳ ಕಾರಣಕ್ಕಾಗಿ ಕರ್ನಾಟಕ ದೇಶದಲ್ಲೇ ಸುದ್ದಿ ಮಾಡುತ್ತಿದೆ. ಕರ್ನಾಟಕ ಜಾರಿಗೆ ತಂದಿರುವ ಶಕ್ತಿ, ಅನ್ನ ಭಾಗ್ಯ, ಗೃಹ ಲಕ್ಷ್ಮಿ ಯೋಜನೆಗಳು ದೇಶದ ಇತರ ರಾಜ್ಯಗಳನ್ನು ಆಕರ್ಷಿಸುತ್ತಿವೆ. ಮಹಿಳೆಯರ ಸ್ವಾಭಿಮಾನದ ಬದುಕಿಗೆ ಈ ಯೋಜನೆಗಳು ಶಕ್ತಿ ತುಂಬಿವೆ. ಕೇಂದ್ರ ಸರಕಾರದ ಅಸಹಕಾರಗಳಿಂದ ಧೃತಿಗೆಡದೆ ನೂತನ ಸರಕಾರ ಜನಪ್ರಿಯ ಯೋಜನೆಗಳ ಯಶಸ್ಸಿಗೆ ಶಕ್ತಿಮೀರಿ ಶ್ರಮಿಸುತ್ತಿದೆ. ಇದೇ ಸಂದರ್ಭದಲ್ಲಿ ಕೊರೋನೋತ್ತರ ದಿನಗಳಿಂದ ಕುಸಿದು ಕೂತಿರುವ ರಾಜ್ಯದ ಶಿಕ್ಷಣ ವ್ಯವಸ್ಥೆಯನ್ನು ಎತ್ತಿ ನಿಲ್ಲಿಸುವ ಮಹತ್ವದ ಹೊಣೆಗಾರಿಕೆಯೂ ನೂತನ ಸರಕಾರದ ಮೇಲಿದೆ. ಅಪೌಷ್ಟಿಕತೆ ನಾಡಿನ ಭವಿಷ್ಯಕ್ಕೆ ಎಷ್ಟರಮಟ್ಟಿಗೆ ಮಾರಕವೋ, ಅನಕ್ಷರತೆಯೂ ಅಷ್ಟೇ ಮಾರಕವಾಗಿದೆ. ಆಹಾರದ ಹಕ್ಕು ಮತ್ತು ಶಿಕ್ಷಣದ ಹಕ್ಕು ಒಂದೇ ನಾಣ್ಯದ ಎರಡು ಮುಖಗಳು. ನಾಡನ್ನು ಅಭಿವೃದ್ಧಿಯ ಕಡೆಗೆ ಮುನ್ನಡೆಸಬಲ್ಲ ಎರಡು ಪ್ರಧಾನ ಸ್ತಂಭಗಳು ಇವು. ಕೊರೋನೋತ್ತರ ದಿನಗಳಲ್ಲಿ ದೇಶಾದ್ಯಂತ ಈ ಎರಡೂ ಸ್ತಂಭಗಳು ದುರ್ಬಲಗೊಂಡವು. ಜನರನ್ನು ಅಪೌಷ್ಟಿಕತೆಯಿಂದ ಮೇಲೆತ್ತುವ ಉದ್ದೇಶವನ್ನು ಹೊತ್ತು ಈಗಾಗಲೇ ಅನ್ನಭಾಗ್ಯದಂತಹ ಕಾರ್ಯಕ್ರಮಗಳನ್ನು ಸರಕಾರ ಘೋಷಿಸಿದೆ. ಶಾಲೆಗಳಲ್ಲಿ ಬಿಸಿಯೂಟ, ಮೊಟ್ಟೆಗಳನ್ನು ನೀಡುವುದಕ್ಕೂ ಕ್ರಮ ತೆಗೆದುಕೊಂಡಿದೆ. ಆದರೆ ಜನಸಾಮಾನ್ಯರಿಗೆ ಶಿಕ್ಷಣದ ಗ್ಯಾರಂಟಿಯನ್ನು ನೀಡುವ ಸರಕಾರಿ ಶಾಲೆಗಳನ್ನು ಮೇಲೆತ್ತುವ ಬಗ್ಗೆ ಇನ್ನೂ ಗಂಭೀರವಾಗಿ ಸರಕಾರ ಯೋಚಿಸಿದಂತಿಲ್ಲ.
ಸಿದ್ದರಾಮಯ್ಯ ನೇತೃತ್ವದ ಸರಕಾರ ಅಧಿಕಾರಕ್ಕೆ ಬಂದ ಬೆನ್ನಿಗೇ ನೂತನ ಶಿಕ್ಷಣ ನೀತಿ ಮತ್ತು ಪಠ್ಯ ಪುಸ್ತಕಗಳ ತಿರುಚುವಿಕೆಯ ವಿರುದ್ಧ ಕಠಿಣ ನಿಲುವುಗಳನ್ನು ತೆಗೆದುಕೊಂಡಿದೆ. ಇದು ಒಟ್ಟು ಶಿಕ್ಷಣದ ಬೌದ್ಧಿಕ ಒಳ ಸಂರಚನೆಗಳಿಗೆ ಸಂಬಂಧಿಸಿದ್ದು. ಇದೇ ಸಂದರ್ಭದಲ್ಲಿ, ಸಂವಿಧಾನ ನೀಡಿರುವ ಮೂಲಭೂತ ಶಿಕ್ಷಣದ ಹಕ್ಕನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಲೆಂದೇ ಅಸ್ತಿತ್ವಕ್ಕೆ ಬಂದಿರುವ ರಾಜ್ಯದಲ್ಲಿರುವ ಸಾವಿರಾರು ಸರಕಾರಿ ಶಾಲೆಗಳನ್ನು ಉಳಿಸಿ ಬೆಳೆಸಿದು ಅದಕ್ಕಿಂತಲೂ ಮುಖ್ಯವಾಗಿದೆ. ಸರಕಾರಿ ಶಾಲೆಗಳನ್ನು ಉಳಿಸಿದ ಬಳಿಕ, ಅಲ್ಲಿ ಏನನ್ನು ಬೋಧಿಸಬೇಕು ಎನ್ನುವುದು ಚರ್ಚೆಯಾಗಬೇಕಾಗಿದೆ. ಆದರೆ ದೇಶದಲ್ಲಿ ನೂತನ ಶಿಕ್ಷಣ ನೀತಿಯ ಪರ-ವಿರೋಧ ಗದ್ದಲಗಳ ನಡುವೆ ಈ ದೇಶದ ಬಡವರು ಮತ್ತು ಶೋಷಿತ ಸಮುದಾಯಕ್ಕೆ ಶಿಕ್ಷಣದ ಹಾಲನ್ನು ಉಣಿಸಿ ಪೊರೆಯುತ್ತಿರುವ ಲಕ್ಷಾಂತರ ಸರಕಾರಿ ಶಾಲೆಗಳು ಮುಚ್ಚುತ್ತಿರುವುದು ಮರೆಗೆ ಸರಿಯುತ್ತಿದೆ. ಇಂದು ಮಹಿಳೆಯರ ಹಕ್ಕುಗಳಿಗಾಗಿ, ಬಡಜನರ ಆಹಾರಕ್ಕಾಗಿ ಗ್ಯಾರಂಟಿಗಳನ್ನು ಘೋಷಿಸಿರುವ ರಾಜ್ಯಸರಕಾರ ಬಡವರ ಮಕ್ಕಳ ಶಿಕ್ಷಣದ ಗ್ಯಾರಂಟಿಗಳನ್ನು ಎತ್ತಿ ಹಿಡಿಯುವ ಹಿನ್ನೆಲೆಯಲ್ಲಿ ಮುಚ್ಚುತ್ತಿರುವ ಸರಕಾರಿ ಶಾಲೆಗಳ ಕಡೆಗೆ ತನ್ನ ಗಮನವನ್ನು ಹರಿಸಬೇಕಾಗಿದೆ. ಈಗಾಗಲೇ ಕಳೆದ ಒಂದು ದಶಕದಲ್ಲಿ ರಾಜ್ಯದಲ್ಲಿ ಮೂರು ಸಾವಿರಕ್ಕೂ ಅಧಿಕ ಸರಕಾರಿ ಶಾಲೆಗಳನ್ನು ಮುಚ್ಚಲಾಗಿದೆ. ಹೀಗೆ ಮುಚ್ಚಿರುವ ಶಾಲೆಗಳು ಮತ್ತೆ ತೆರೆಯುವ ಸಾಧ್ಯತೆಗಳು ತೀರಾ ಕಡಿಮೆ. ಆದರೆ ಮುಚ್ಚುವುದಕ್ಕಾಗಿ ಸಿದ್ಧತೆ ನಡೆಸುತ್ತಿರುವ ಸಾವಿರಾರು ಶಾಲೆಗಳನ್ನು ಉಳಿಸುವ ದಾರಿಯೊಂದನ್ನು ಕಂಡುಕೊಳ್ಳಲು ಸರಕಾರಕ್ಕೆ ಇನ್ನೂ ಅವಕಾಶವಿದೆ. ಇಲ್ಲವಾದರೆ ಮುಂದಿನ ದಿನಗಳಲ್ಲಿ ಬಡವರ ಮಕ್ಕಳು, ಶೋಷಿತ ಸಮುದಾಯದ ಮಕ್ಕಳು ಶಾಲೆ ತೊರೆದು ಶಾಶ್ವತವಾಗಿ ಇನ್ನೊಬ್ಬರ ಹಟ್ಟಿಯಲ್ಲಿ ಜೀತ ಮಾಡಬೇಕಾಗುತ್ತದೆ. ಅಥವಾ ಖಾಸಗಿ ಶಾಲೆಗಳ ಶುಲ್ಕ ಪಾವತಿಸುವುದಕ್ಕಾಗಿ ಚೆನ್ನೈಯ ತಾಯಿಯೊಬ್ಬಳು ಮಾಡಿದಂತೆ ಬಡವರ ಮಕ್ಕಳ ಪೋಷಕರು ತಮ್ಮ ಪ್ರಾಣವನ್ನು ಒತ್ತೆಯಿಡಬೇಕಾಗುತ್ತದೆ.
ಕರ್ನಾಟಕದಲ್ಲಿ ಕೊರೋನ ಮತ್ತು ಲಾಕ್‌ಡೌನ್ ಸಂದರ್ಭದಲ್ಲಿ ಸಾವಿರಾರು ಮಕ್ಕಳು ಶಾಲೆ ತೊರೆದಿದ್ದಾರೆ. ಇವರನ್ನು ಮರಳಿ ಶಾಲೆಗೆ ಸೇರಿಸುವ ಬಗ್ಗೆ ಯಾವೊಂದು ಕ್ರಮವನ್ನು ತೆಗೆದುಕೊಳ್ಳದ ಅಂದಿನ ಸರಕಾರ ಅನಗತ್ಯ ಹಿಜಾಬ್ ಮತ್ತು ಪಠ್ಯ ಪುಸ್ತಕ ಪರಿಷ್ಕರಣೆಯ ಹೆಸರಿನಲ್ಲಿ ಶಾಲೆಗಳನ್ನು, ಶಿಕ್ಷಣ ವ್ಯವಸ್ಥೆಯನ್ನು ಅಧ್ವಾನಗೊಳಿಸಿತು. ಕೊರೋನೋತ್ತರ ದಿನಗಳಲ್ಲಿ ವಿದ್ಯಾರ್ಥಿಗಳೇ ಇಲ್ಲದ ಶಾಲೆಗಳ ಸಂಖ್ಯೆ ಇನ್ನಷ್ಟು ಹೆಚ್ಚಿವೆ. ಇದೇ ಸಂದರ್ಭದಲ್ಲಿ ಇನ್ನೊಂದೆಡೆ ಸರಕಾರಿ ಶಾಲೆಗಳು ಶಿಕ್ಷಕರ ಕೊರತೆಗಳನ್ನು ಎದುರಿಸುತ್ತಿವೆ. ನೂತನ ಶಿಕ್ಷಣ ಸಚಿವರ ಹೇಳಿಕೆಯಂತೆ ಈ ರಾಜ್ಯದಲ್ಲಿ 3,000ಕ್ಕೂ ಅಧಿಕ ಸರಕಾರಿ ಶಾಲೆಗಳು 10ಕ್ಕಿಂತಲೂ ಕಡಿಮೆ ವಿದ್ಯಾರ್ಥಿಗಳನ್ನು ಹೊಂದಿವೆ. ಕೆಲವು ಶಾಲೆಗಳಂತೂ ಶೂನ್ಯ ದಾಖಲಾತಿಯನ್ನು ಹೊಂದಿವೆೆ ಎನ್ನುವುದು ಅಂಕಿಅಂಶಗಳಿಂದ ಬಯಲಾಗಿದೆ. ಶಿಕ್ಷಣ ಸಚಿವರ ಕ್ಷೇತ್ರವಾಗಿರುವ ಸೊರಬದಲ್ಲೇ 52 ಶಾಲೆಗಳಲ್ಲಿ ಶಿಕ್ಷಕರೇ ಇಲ್ಲ. ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಪ್ರತಿನಿಧಿಸುವ ಕನಕಪುರ ತಾಲೂಕಿನಲ್ಲಿ 72 ಸರಕಾರಿ ಶಾಲೆಗಳಲ್ಲಿ ಶಿಕ್ಷಕರಿಲ್ಲ. ರಾಜ್ಯದಲ್ಲಿರುವ 6,000ಕ್ಕೂ ಅಧಿಕ ಸರಕಾರಿ ಶಾಲೆಗಳು ಏಕ ಶಿಕ್ಷಕರನ್ನು ಹೊಂದಿವೆ. ತೀರಾ ಗುಡ್ಡಗಾಡು ಪ್ರದೇಶಗಳ ಶಾಲೆಗಳಿಗೆ ತೆರಳಲು ಶಿಕ್ಷಕರು ಸಿದ್ಧರಿಲ್ಲ ಎನ್ನುವುದು ಬೆಳಕಿಗೆ ಬಂದಿದೆ. ಶಿಕ್ಷಕರೇ ಇಲ್ಲದ ಶಾಲೆಗಳಲ್ಲಿ ವಿದ್ಯಾರ್ಥಿಗಳಿಲ್ಲ ಎಂದು ದೂರುವುದರಲ್ಲಿ ಏನು ಅರ್ಥವಿದೆ? ಒಟ್ಟಿನಲ್ಲಿ ರಾಜ್ಯದಲ್ಲಿರುವ ಸರಕಾರಿ ಶಾಲೆಗಳು ‘ಶಿಕ್ಷಕರಿಲ್ಲ ಎನ್ನುವ ಕಾರಣಕ್ಕಾಗಿ ವಿದ್ಯಾರ್ಥಿಗಳಿಲ್ಲ’ ‘ವಿದ್ಯಾರ್ಥಿಗಳಿಲ್ಲ ಎನ್ನುವ ಕಾರಣಕ್ಕೆ ಶಿಕ್ಷಕರಿಲ್ಲ’ ಎನ್ನುವ ವಿರೋಧಾಭಾಸಗಳಿಂದ ನರಳುತ್ತಿವೆ.
ಈಗಾಗಲೇ ಸುಮಾರು 3,000ಕ್ಕೂ ಅಧಿಕ ಶಾಲೆಗಳು ಮುಚ್ಚಲ್ಪಟ್ಟಿದ್ದರೆ, 10ಕ್ಕಿಂತಲೂ ಕಡಿಮೆ ವಿದ್ಯಾರ್ಥಿಗಳಿದ್ದಾರೆ ಎನ್ನುವ ನೆಪವೊಡ್ಡಿ ಇನ್ನೂ 3,000 ಶಾಲೆಗಳನ್ನು ಮುಚ್ಚಿಸುವ ಸಂಚು ನಡೆಯುತ್ತಿದೆ. ಮೊದಲು ಶಾಲೆಗಳಲ್ಲಿರುವ ವಿದ್ಯಾರ್ಥಿಗಳ ಸಂಖ್ಯೆಯನ್ನು ಇಳಿಸುವುದಕ್ಕೆ ಗರಿಷ್ಠ ಪ್ರಯತ್ನಗಳು ನಡೆಯುತ್ತವೆ. ಶಿಕ್ಷಕರ ಕೊರತೆ, ಮೂಲಭೂತ ಸೌಲಭ್ಯಗಳ ಕೊರತೆ, ಬಡತನ ಇವೆಲ್ಲವುಗಳ ಕಾರಣದಿಂದ ಬಡವರನ್ನು ಶಾಲೆಗಳಿಂದ ದೂರ ಮಾಡಲಾಗುತ್ತದೆ. ಮಧ್ಯಮ ಅಥವಾ ಕೆಳ ಮಧ್ಯಮ ವರ್ಗದ ಜನರು ಅನಿವಾರ್ಯವಾಗಿ ಸರಕಾರಿ ಶಾಲೆಗಳನ್ನು ತೊರೆಯುವಂತೆ ಒತ್ತಡ ಹೇರಲಾಗುತ್ತದೆ. ಬಳಿಕ ವಿದ್ಯಾರ್ಥಿಗಳ ಕೊರತೆಯಿದೆ ಎಂದು ಶಾಲೆಗಳನ್ನು ಮುಚ್ಚಿಸುವ ಪ್ರಕ್ರಿಯೆ ಆರಂಭವಾಗುತ್ತವೆ. ವಿದ್ಯಾರ್ಥಿಗಳಿಲ್ಲ ಎನ್ನುವುದು ಶಾಲೆಗಳನ್ನು ಮುಚ್ಚಿಸುವುದಕ್ಕೆ ಸಕಾರಣವೆಂದು ಸರಕಾರ ಯಾವ ಕಾರಣಕ್ಕೂ ಭಾವಿಸಬಾರದು. ಸರಕಾರಿ ಶಾಲೆಗಳಿಗೆ ವಿದ್ಯಾರ್ಥಿಗಳ ಸಂಖ್ಯೆಯಲ್ಲಿ ಯಾಕೆ ಇಳಿಮುಖವಾಗುತ್ತಿದೆ ಎನ್ನುವುದರ ಕಡೆಗೆ ಸರಕಾರ ಗಮನ ಹರಿಸಬೇಕು. ಇಂದು ಯಾರೋ ಒಬ್ಬ ಸಣ್ಣ ಉದ್ಯಮಿ ನಡೆಸುವ ಖಾಸಗಿ ಶಾಲೆ ವಿದ್ಯಾರ್ಥಿಗಳಿಂದ ತುಂಬಿ ತುಳುಕುತ್ತಿರುತ್ತವೆ. ಸರಕಾರ ಒಬ್ಬ ಶಿಕ್ಷಕನಿಗೆ ಎಷ್ಟು ವೇತನ ನೀಡುತ್ತದೆಯೋ ಅದರ ಅರ್ಧ ವೇತನವನ್ನೂ ಆ ಉದ್ಯಮಿ ತನ್ನ ಶಾಲೆಯ ಶಿಕ್ಷಕರಿಗೆ ನೀಡುವುದಿಲ್ಲ. ಸರಕಾರ ನೀಡುವ ಯಾವ ಸೌಲಭ್ಯಗಳೂ ಆ ಖಾಸಗಿ ಶಾಲೆಗಳ ಶಿಕ್ಷಕರಿಗೆ ದೊರಕುವುದಿಲ್ಲ. ಇಷ್ಟಾದರೂ ಅಲ್ಲಿ ಸಮಯಕ್ಕೆ ಸರಿಯಾಗಿ ಶಿಕ್ಷಕ ಹಾಜರಾಗುತ್ತಾನೆ. ಶಾಲೆಗಳಲ್ಲಿ ಉತ್ತಮ ಗುಣಮಟ್ಟದ ಶಿಕ್ಷಣ ದೊರಕುತ್ತದೆ. ವಿದ್ಯಾರ್ಥಿಗಳ ಸಂಖ್ಯೆ ಯಥೇಚ್ಛವಾಗಿರುತ್ತದೆ. ಒಂದು ಸರಕಾರ ತನ್ನ ಬಜೆಟ್‌ನಲ್ಲಿ ಸಾವಿರಾರು ಕೋಟಿ ರೂ. ಮೀಸಲಿಟ್ಟರೂ ಒಬ್ಬ ಸಾಮಾನ್ಯ ಉದ್ಯಮಿ ನಡೆಸುವ ಶಾಲೆಗೆ ಸರಕಾರಿ ಶಾಲೆಗಳನ್ನು ಸರಿಗಟ್ಟಿಸುವಂತೆ ಬೆಳೆಸುವುದಕ್ಕೆ ಯಾಕೆ ಸಾಧ್ಯವಾಗುತ್ತಿಲ್ಲ? ಸದ್ಯಕ್ಕೆ ಎಲ್ಲದಕ್ಕೂ ಇಂಗ್ಲಿಷ್ ಮಾಧ್ಯಮವನ್ನೇ ಕಾರಣವಾಗಿಸಲಾಗುತ್ತದೆ. ಒಂದು ವೇಳೆ ಇಂಗ್ಲಿಷ್ ಮಾಧ್ಯಮದಿಂದಲೇ ಸರಕಾರಿ ಶಾಲೆಗಳು ಉಳಿಯುತ್ತವೆ ಎಂದಾದರೆ ಶಾಲೆಗಳನ್ನು ಶಾಶ್ವತವಾಗಿ ಮುಚ್ಚಿಸುವುದಕ್ಕಿಂತ ಅದನ್ನು ಇಂಗ್ಲಿಷ್ ಮಾಧ್ಯಮ ಶಾಲೆಗಳಾಗಿ ಬದಲಿಸಿ ಬಡವರ ಮಕ್ಕಳಿಗೆ ಅವಕಾಶ ನೀಡುವುದು ವಾಸಿ. ಯಾಕೆಂದರೆ, ಸರಕಾರಿ ಶಾಲೆಗಳಲ್ಲಿ ಯಾವ ಮಾಧ್ಯಮದಲ್ಲಿ ಶಿಕ್ಷಣ ನೀಡಬೇಕು ಎನ್ನುವುದಕ್ಕಿಂತ, ಆ ಶಾಲೆಗಳು ಉಳಿಯುವುದು ಮುಖ್ಯ. ಎಲ್ಲರಿಗೂ ಶಿಕ್ಷಣದ ಹಕ್ಕನ್ನು ದೊರಕಿಸಿಕೊಡುವ ನಿಟ್ಟಿನಲ್ಲಿ ಸರಕಾರಿ ಶಾಲೆಗಳನ್ನು ನಿರ್ಮಿಸಲಾಗಿದೆ. ಆದುದರಿಂದ, ಇಂಗ್ಲಿಷ್ ಮಾಧ್ಯಮಗಳ ಮೂಲಕವಾದರೂ ಬಡವರಿಗೆ ಅವರ ಶಿಕ್ಷಣದ ಹಕ್ಕನ್ನು ದೊರಕಿಸಿ ಕೊಡುವುದು ಸರಕಾರದ ಹೊಣೆಗಾರಿಕೆ. ಎಲ್ಲ ಶಾಲೆಗಳಿಗೆ ಮೂಲಭೂತ ಸೌಕರ್ಯಗಳನ್ನು ಒದಗಿಸಿ, ಅರ್ಹ ಶಿಕ್ಷಕರನ್ನು ನೇಮಿಸಿ ಅವುಗಳನ್ನು ಖಾಸಗಿ ಶಾಲೆಗಳಿಗೆ ಸರಿಸಮವಾಗಿ ಬೆಳೆಸುವ ಮಹತ್ತರ ಸವಾಲನ್ನು ಸರಕಾರ ಸ್ವೀಕರಿಸಬೇಕು. ಸಾಧ್ಯವಾದರೆ ಇಂಗ್ಲಿಷ್-ಕನ್ನಡ ಜೊತೆ ಜೊತೆಯಾಗಿ ಕಲಿಸುವುದಕ್ಕೆ ಯೋಜನೆಗಳನ್ನು ರೂಪಿಸಬೇಕು. ಸಾಲಸೋಲ ಮಾಡಿ ತಮ್ಮ ಮಕ್ಕಳನ್ನು ಖಾಸಗಿ ಶಾಲೆಗಳಿಗೆ ಸೇರಿಸಿರುವ ಪೋಷಕರು ಮತ್ತೆ ಸರಕಾರಿ ಶಾಲೆಗಳ ಕಡೆಗೆ ತಿರುಗಿ ನೋಡುವಂತೆ ಮಾಡಬೇಕು. ಸರ ಕಾರಿ ಶಾಲೆಗಳು ಮುಚ್ಚಿದ ಕಾರಣಕ್ಕಾಗಿ ಶಾಲೆ ತೊರೆದು ಉಳ್ಳವರ ಹಟ್ಟಿಗಳಲ್ಲಿ ಕೆಲಸ ಮಾಡುವ ಮಕ್ಕಳನ್ನು ಗುರುತಿಸಿ ಮತ್ತೆ ಶಾಲೆಗೆ ಮರಳುವಂತೆ ಮಾಡಬೇಕು.