ಶಿಕ್ಷಣ ವಿದ್ಯಾರ್ಥಿಗಳ ಭವಿಷ್ಯ ರೂಪಿಸುವಂತಿರಲಿ
Photo: freepik
ಮಕ್ಕಳಿಗೆ ಮಾತೃಭಾಷೆಯಲ್ಲಿ ಶಿಕ್ಷಣವನ್ನು ನೀಡುವುದು ಅತ್ಯಗತ್ಯ ಎಂದು ಶಿಕ್ಷಣ ತಜ್ಞರು ಹಲವು ದಶಕಗಳಿಂದ ಆಗ್ರಹಿಸುತ್ತಾ ಬರುತ್ತಿದ್ದಾರೆ. ಆದರೆ ಸದ್ಯದ ದಿನಗಳಲ್ಲಿ ಸ್ಥಳೀಯ ಭಾಷೆಗಳನ್ನೇ ತನ್ನದಾಗಿಸುವಲ್ಲಿ ವಿದ್ಯಾರ್ಥಿಗಳು ಹಿನ್ನೆಡೆಯನ್ನು ಅನುಭವಿಸುತ್ತಿದ್ದಾರೆ. ಇತ್ತೀಚೆಗೆ ಬಿಡುಗಡೆಗೊಂಡಿರುವ ಶಿಕ್ಷಣ ಸ್ಥಿತಿಗತಿಯ ವಾರ್ಷಿಕ ವರದಿ (ಎಎಸ್ಇಆರ್) ಶಾಲೆಗಳಲ್ಲಿ ಪ್ರಾದೇಶಿಕ ಅಥವಾ ಸ್ಥಳೀಯ ಭಾಷೆಗಳ ಕಲಿಕೆಯ ಗುಣಮಟ್ಟದ ಮೇಲೆ ಬೆಳಕು ಚೆಲ್ಲಿದೆ. ಕೊರೋನೋತ್ತರ ದಿನಗಳ ಬಳಿಕ ಗ್ರಾಮೀಣ ಪ್ರದೇಶಗಳಲ್ಲಿ ಕಲಿಕೆಯ ಗುಣಮಟ್ಟ ಇಳಿಕೆಯಾಗಿರುವುದನ್ನು ವರದಿ ಹೇಳುತ್ತಿದೆ. ಎರಡನೇ ತರಗತಿಯ ಪಠ್ಯವನ್ನು ನಿರರ್ಗಳವಾಗಿ ಓದಲು ಶೇ. ೨೫ರಷ್ಟು ಮೂರನೆಯ ತರಗತಿಯ ಮಕ್ಕಳು ವಿಫಲರಾಗಿದ್ದಾರೆ ಎನ್ನುವ ಅಂಶವನ್ನು ಸಮೀಕ್ಷೆ ಬಹಿರಂಗಪಡಿಸಿದೆ. ಅಂಕಗಣಿತದ ವಿಚಾರಕ್ಕೆ ಬಂದರೆ ಐದನೇ ತರಗತಿಯ ವಿದ್ಯಾರ್ಥಿಗಳ ಪೈಕಿ ಶೇ. ೧೩ರಷ್ಟು ಮಂದಿ ಮಾತ್ರ ಭಾಗಿಸುವ ಲೆಕ್ಕ ಮಾಡಬಲ್ಲರು. ಎಂಟನೇ ತರಗತಿಯ ವಿದ್ಯಾರ್ಥಿಗಳಲ್ಲಿ ಇಂಗ್ಲಿಷ್ ವಾಕ್ಯ ಓದುವ ಸಾಮರ್ಥ್ಯ ಇರುವ ವಿದ್ಯಾರ್ಥಿಗಳ ಪ್ರಮಾಣ ಶೇ. ೪೮ಕ್ಕೆ ಕುಸಿದಿದೆ. ಶೇ. ೨೦ರಷ್ಟು ವಿದ್ಯಾರ್ಥಿಗಳಿಗೆ ಕಲಿಕೆಯ ಬಳಿಕ ತಾನು ಏನಾಗಬೇಕು ಎನ್ನುವುದರ ಬಗ್ಗೆಯೇ ಸ್ಪಷ್ಟ ಅರಿವಿಲ್ಲ. ಅವರಿಗೆ ಭವಿಷ್ಯದ ಬಗ್ಗೆ ಯಾವುದೇ ಗೊತ್ತು ಗುರಿಯಿಲ್ಲ. ವಿದ್ಯಾರ್ಥಿಗಳಲ್ಲಿ ಕನಸುಗಳನ್ನು ಬಿತ್ತುವಲ್ಲಿ ಶಿಕ್ಷಣ ಕ್ಷೇತ್ರ ವಿಫಲವಾಗುತ್ತಿರುವ ಅಂಶಗಳನ್ನು ವರದಿ ಹೇಳುತ್ತಿದೆ. ವೃತ್ತಿಪರ ತರಬೇತಿಯಲ್ಲಿ ಶಿಕ್ಷಣ ಬಹಳಷ್ಟು ಹಿಂದೆ ಉಳಿದಿದೆ. ಇವರೆಲ್ಲರೂ ನಿರುದ್ಯೋಗಿ ಯುವಕರಾಗಿ ಭವಿಷ್ಯದಲ್ಲಿ ಈ ದೇಶವನ್ನು ಕಾಡಲಿದ್ದಾರೆ ಎನ್ನುವುದರಲ್ಲಿ ಎರಡು ಮಾತಿಲ್ಲ. ಶಿಕ್ಷಣ ವ್ಯವಸ್ಥೆ ಯುವಕರ ಭವಿಷ್ಯವನ್ನು ರೂಪಿಸುವ ಬದಲು, ಕೆಡಿಸುತ್ತಿದೆಯೇ ಎನ್ನುವ ಆತಂಕವನ್ನು ಪರೋಕ್ಷವಾಗಿ ಈ ವರದಿ ವ್ಯಕ್ತಪಡಿಸುತ್ತದೆ.
ಗ್ರಾಮೀಣ ಪ್ರದೇಶದ ದುರ್ಬಲ ಶಿಕ್ಷಣ ವ್ಯವಸ್ಥೆಯ ಬುಡ, ಕೊರೋನ ಕಾಲದಲ್ಲಿ ಸಂಪೂರ್ಣ ಅಲುಗಾಡಿತು. ಅದಾಗಲೇ ಗುಣಮಟ್ಟದ ಸಮಸ್ಯೆಗಳಿಂದ ನರಳುತ್ತಿದ್ದ ಶಿಕ್ಷಣ ಕೊರೋನ ಕಾರಣದಿಂದ ಸಂಪೂರ್ಣ ಕಳಪೆಯಾಯಿತು. ಶಿಕ್ಷಣ ಕ್ಷೇತ್ರಕ್ಕೆ ಏಕಾಏಕಿ ಪ್ರವೇಶ ಮಾಡಿದ ಆನ್ಲೈನ್ ಪಾಠ ಶಿಕ್ಷಣ ವ್ಯವಸ್ಥೆಯನ್ನು ಛಿದ್ರಗೊಳಿಸಿತು. ಖಾಸಗಿ ಶಾಲೆ- ಸರಕಾರಿ ಶಾಲೆ ಎಂದು ಶಿಕ್ಷಣದಲ್ಲಿ ಬಹುದೊಡ್ಡ ಅಂತರವೊಂದು ಸಮಾಜದಲ್ಲಿ ಅದಾಗಲೇ ಅಸ್ತಿತ್ವದಲ್ಲಿತ್ತು. ಕನ್ನಡ ಮಾಧ್ಯಮಶಾಲೆ- ಇಂಗ್ಲಿಷ್ ಮಾಧ್ಯಮ ಶಾಲೆಯಾಗಿಯೂ ಇದನ್ನು ಗುರುತಿಸಲಾಗುತ್ತಿತ್ತು. ಕನ್ನಡ ಮಾಧ್ಯಮ ಶಾಲೆಗಳಲ್ಲಿ ಕಲಿತವರಿಗಿಂತ ಇಂಗ್ಲಿಷ್ ಮಾಧ್ಯಮ ಶಾಲೆಗಳಲ್ಲಿ ಕಲಿತವರು ಹೆಚ್ಚು ಅವಕಾಶಗಳನ್ನು ತಮ್ಮದಾಗಿಸಿಕೊಳ್ಳುತ್ತಿದ್ದಾರೆ ಎನ್ನುವ ಅಸಮಾಧಾನ ಕೊರೋನಕ್ಕೆ ಮೊದಲೇ ಶಿಕ್ಷಣ ವ್ಯವಸ್ಥೆಯನ್ನು ಕಾಡುತ್ತಿತ್ತು. ನಗರ ಪ್ರದೇಶ- ಗ್ರಾಮೀಣ ಪ್ರದೇಶಗಳ ನಡುವೆಯೂ ಶಿಕ್ಷಣಕ್ಕೆ ಸಂಬಂಧಿಸಿ ಮೂಲಭೂತ ಸವಲತ್ತುಗಳಲ್ಲಿ ಅಸಮಾನತೆಯಿತ್ತು. ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಂದ ಹೆಚ್ಚು ಮೂಲಭೂತ ಸೌಲಭ್ಯಗಳನ್ನು ನಗರ ಪ್ರದೇಶದ ವಿದ್ಯಾರ್ಥಿಗಳು ತಮ್ಮದಾಗಿಸಿಕೊಂಡಿದ್ದರು. ಕಲಿಕೆಯಲ್ಲಿ ಮುಂದುವರಿಯಲು ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗಿಂತ ಹೆಚ್ಚು ಸೌಲಭ್ಯಗಳು ನಗರದ ವಿದ್ಯಾರ್ಥಿಗಳಿಗೆ ಇದ್ದವು. ಕೊರೋನ ಕಾಲದಲ್ಲಿ ಏಕಾಏಕಿ ಜಾರಿಗೊಂಡ ‘ಆನ್ಲೈನ್’ ಶಿಕ್ಷಣ ಈ ಅಸಮಾನತೆಯನ್ನು ಇನ್ನಷ್ಟು ಅಗಾಧಗೊಳಿಸಿತು.
ಪೋಷಕರ ಬಳಿಯೇ ಸ್ಮಾರ್ಟ್ ಪೋನ್ಗಳು ಇಲ್ಲದೇ ಇರುವಾಗ ಮಕ್ಕಳ ಕಲಿಕೆಗಾಗಿ ಸ್ಮಾರ್ಟ್ ಪೋನ್ಗಳನ್ನು ಒದಗಿಸುವುದಾದರೂ ಹೇಗೆ ಸಾಧ್ಯ? ಕೊರೋನ ಕಾಲದಲ್ಲಿ ಶಿಕ್ಷಣ ವ್ಯವಸ್ಥೆಯು ‘ಸ್ಮಾರ್ಟ್ ಫೋನ್ ಇದ್ದವರು-ಇಲ್ಲದವರು’ ಎಂದು ಇಬ್ಭಾಗವಾಯಿತು. ಸ್ಮಾರ್ಟ್ಪೋನ್ ಇದ್ದವರು ಆನ್ಲೈನ್ ಶಿಕ್ಷಣದಲ್ಲಿ ಮುಂದುವರಿಯಲು ಸಾಧ್ಯವಾಯಿತು. ಇಲ್ಲದ ಪ್ರತಿಭಾವಂತ ವಿದ್ಯಾರ್ಥಿಗಳು ಶಾಲಾ ಪಠ್ಯ ವ್ಯವಸ್ಥೆಯಿಂದ ಹೊರಗುಳಿಯಬೇಕಾಯಿತು. ವಿಪರ್ಯಾಸವೆಂದರೆ, ಗ್ರಾಮೀಣ ಪ್ರದೇಶದಲ್ಲಿ ಸ್ಮಾರ್ಟ್ ಪೋನ್ ಇದ್ದರೂ, ಇಂಟರ್ನೆಟ್ ಸಂರ್ಪಕದ ಕೊರತೆಗಳಿಂದಲೂ ವಿದ್ಯಾರ್ಥಿಗಳು ಕಲಿಕೆಯಿಂದ ವಂಚಿತರಾದರು. ಸ್ಮಾರ್ಟ್ ಫೋನ್ ಹೊಂದಿದ ವಿದ್ಯಾರ್ಥಿಗಳು ಸಂಪರ್ಕಕ್ಕಾಗಿ ಬೆಟ್ಟ, ಗುಡ್ಡ, ಮರಗಳನ್ನು ಹತ್ತಿ ಪಠ್ಯ ಆಲಿಸುವ ದೃಶ್ಯಗಳು ಮಾಧ್ಯಮಗಳಲ್ಲಿ ಕಾಣಿಸಿಕೊಳ್ಳತೊಡಗಿದವು. ಮನೆಯಲ್ಲಿ ಮೂವರು ವಿದ್ಯಾರ್ಥಿಗಳಿದ್ದರೆ ಎಲ್ಲರೂ ಒಂದು ಮೊಬೈಲ್ನಿಂದಲೇ ಆನ್ಲೈನ್ ಶಿಕ್ಷಣದಲ್ಲಿ ಭಾಗಿಯಾಗುವುದು ಅಸಾಧ್ಯವಾಗಿತ್ತು. ಆಗ ವಿದ್ಯಾರ್ಥಿನಿಯರು ಕಲಿಕೆಯಿಂದ ಹೊರತಳ್ಳಲ್ಪಟ್ಟರು. ಇದೇ ಸಂದರ್ಭದಲ್ಲಿ ಬಡವರು ಆರ್ಥಿಕ ಮುಗ್ಗಟ್ಟಿನ ಕಾರಣದಿಂದ ವಿದ್ಯಾರ್ಥಿಗಳನ್ನು ದುಡಿಮೆಗೆ ಹಚ್ಚಿದರು. ಕೊರೋನ ಮುಗಿದ ಬಳಿಕ ಇವರನ್ನೆಲ್ಲ ಮತ್ತೆ ಶಾಲೆಗೆ ಕರೆತರುವಲ್ಲಿ ಶಿಕ್ಷಣ ಇಲಾಖೆ ಪೂರ್ಣ ಪ್ರಮಾಣದಲ್ಲಿ ಯಶಸ್ವಿಯಾಗಿಲ್ಲ. ಈ ಕಾರಣಕ್ಕಾಗಿ ಹೈಕೋರ್ಟ್ ಕೂಡ ಸರಕಾರವನ್ನು ತರಾಟೆಗೆ ತೆಗೆದುಕೊಂಡಿದೆ. ಕುಸಿದು ಬಿದ್ದಿದ್ದ ಶಿಕ್ಷಣ ವ್ಯವಸ್ಥೆಯನ್ನು ಎತ್ತಿ ನಿಲ್ಲಿಸಬೇಕಾಗಿದ್ದ ಅಂದಿನ ಬಿಜೆಪಿ ಸರಕಾರ, ಹಿಜಾಬ್, ಪಠ್ಯ ಪುಸ್ತಕ ಬದಲಾವಣೆ ಇತ್ಯಾದಿಗಳ ಮೂಲಕ ಇನ್ನಷ್ಟು ಗಬ್ಬೆಬ್ಬಿಸಿತ್ತು.
ಎಎಸ್ಇಆರ್ ವರದಿಯು ಕರ್ನಾಟಕದಲ್ಲಿ ಕನ್ನಡ ಮಾಧ್ಯಮ ಕಲಿಕೆಯ ಗುಣಮಟ್ಟ ಮತ್ತು ಸರಕಾರಿ ಶಾಲೆಗಳ ಗುಣಮಟ್ಟ ಎರಡಕ್ಕೂ ಕನ್ನಡಿ ಹಿಡಿದಿದೆ. ಇದೇ ಸಂದರ್ಭದಲ್ಲಿ ಇಂಗ್ಲಿಷ್ ಮಾಧ್ಯಮದಲ್ಲಿ ಓದಿದ ವಿದ್ಯಾರ್ಥಿಗಳ ಕನ್ನಡದ ಬಗ್ಗೆ ಚರ್ಚಿಸುವ ಅಗತ್ಯವೇ ಇಲ್ಲ. ಕನ್ನಡ ಮಾಧ್ಯಮದಲ್ಲಿ ಕಲಿತ ಪಿಯುಸಿ ವಿದ್ಯಾರ್ಥಿಯೊಬ್ಬ ಹೇಗೆ ಒಂದು ವಾಕ್ಯವನ್ನು ಇಂಗ್ಲಿಷ್ನಲ್ಲಿ ಬರೆಯಲು ಒದ್ದಾಡುತ್ತಾನೆಯೋ ಅದೇ ರೀತಿಯಲ್ಲಿ, ಇಂಗ್ಲಿಷ್ ಮಾಧ್ಯಮದಲ್ಲಿ ಕಲಿತ ಪಿಯುಸಿ ವಿದ್ಯಾರ್ಥಿಯೊಬ್ಬ ಕನ್ನಡದಲ್ಲಿ ಒಂದು ವಾಕ್ಯವನ್ನು ಬರೆಯಲು ತಿಣುಕಾಡುವ ಸ್ಥಿತಿ ರಾಜ್ಯದಲ್ಲಿದೆ. ಇಂಗ್ಲಿಷ್ ಮಾಧ್ಯಮಗಳಲ್ಲಿ ಕನ್ನಡವನ್ನು ಒಂದು ಪಠ್ಯವಾಗಿ ಕಲಿಸುತ್ತಾರಾದರೂ, ಅದನ್ನು ಕಲಿಸುವ ಶಿಕ್ಷಕರು ಮತ್ತು ಕಲಿಯುವ ವಿದ್ಯಾರ್ಥಿಗಳ ಸ್ಥಿತಿ ಚಿಂತಾಜನಕವಾಗಿದೆ. ಕರ್ನಾಟಕದಲ್ಲಿ ‘ಮಾತೃ ಭಾಷೆಯಲ್ಲಿ ಶಿಕ್ಷಣ’ ಎನ್ನುವುದು ಹತ್ತು ಹಲವು ತೊಡಕುಗಳಿಂದ ಕೂಡಿದೆ. ಮುಖ್ಯವಾಗಿ ಇಲ್ಲಿ ಕೊಂಕಣಿ, ತುಳು, ಬ್ಯಾರಿ, ಉರ್ದು, ಮರಾಠಿ ಮಾತೃ ಭಾಷಿಗರೇ ಹೆಚ್ಚು. ಇವರೆಲ್ಲರೂ ಕನ್ನಡವನ್ನು ಕಲಿಯುವುದು ಶಾಲೆಯ ಮೆಟ್ಟಿಲು ಹತ್ತಿದ ಬಳಿಕ. ಕನ್ನಡ ಮಾಧ್ಯಮದಲ್ಲಿ ಇವರು ಕಲಿತರೆ ಕನ್ನಡವನ್ನು ಸರಾಗವಾಗಿ ತಮ್ಮದಾಗಿಸಿಕೊಳ್ಳ ಬಲ್ಲರು. ಈ ಸಂದರ್ಭದಲ್ಲಿ ಸಹಜವಾಗಿಯೇ ಇಂಗ್ಲಿಷ್ನಲ್ಲಿ ಹಿಂದುಳಿಯುತ್ತಾರೆ. ಕನ್ನಡ ಅನ್ನಕೊಡುವ ಭಾಷೆಯಾಗಿ ವಿಫಲವಾಗುತ್ತಿದೆ ಎನ್ನುವ ಕಾರಣಕ್ಕಾಗಿ ಕನ್ನಡೇತರ ಮನೆ ಭಾಷಿಗರು ತಮ್ಮ ಮಕ್ಕಳನ್ನು ಇಂಗ್ಲಿಷ್ ಮಾಧ್ಯಮಕ್ಕೆ ಸೇರಿಸುತ್ತಿದ್ದಾರೆ. ಪರಿಣಾಮವಾಗಿ ಇವರು ಕನ್ನಡ ಕಲಿಕೆಯಲ್ಲಿ ತೀವ್ರ ಹಿನ್ನಡೆ ಅನುಭವಿಸುವಂತಾಗುತ್ತದೆ. ಇದೇ ಸಂದರ್ಭದಲ್ಲಿ ಕನ್ನಡ ಮಾತೃ ಭಾಷೆಯ ಶಿಕ್ಷಣದ ಗುಣಮಟ್ಟವೂ ಕಳಪೆಯಾಗಿರುವುದನ್ನು ಎಎಸ್ಇಆರ್ ಹೇಳುತ್ತಿದೆ. ಕನ್ನಡ ಮಾಧ್ಯಮ- ಇಂಗ್ಲಿಷ್ ಮಾಧ್ಯಮ ಇವುಗಳ ನಡುವೆ ಸಮನ್ವಯ ಸಾಧಿಸುವುದು ಕರ್ನಾಟಕದಂತಹ ವೈವಿಧ್ಯ ಭಾಷೆಗಳುಳ್ಳ ರಾಜ್ಯಕ್ಕೆ ಅನಿವಾರ್ಯವಾಗಿದೆ. ಈ ಹಿನ್ನೆಲೆಯಲ್ಲಿ ‘ದ್ವಿ ಭಾಷಾ ಮಾಧ್ಯಮ’ದ ಬಗ್ಗೆ ಕರ್ನಾಟಕ ಚಿಂತಿಸುತ್ತಿರುವುದು ಶ್ಲಾಘನೀಯ. ಇದೇ ಸಂದರ್ಭದಲ್ಲಿ ಯಾವ ಮಾಧ್ಯಮಗಳಲ್ಲೇ ಕಲಿಸಲಿ, ಕಲಿಕೆಯ ಗುಣಮಟ್ಟವನ್ನು ಹೆಚ್ಚಿ ಸುವ ಅಗತ್ಯವನ್ನೂ ವರದಿ ಸ್ಪಷ್ಟಪಡಿಸಿದೆ. ಮುಖ್ಯವಾಗಿ ನಮ್ಮ ಕಲಿಕೆ, ವಿದ್ಯಾರ್ಥಿಗಳ ಸೃಜನಶೀಲತೆಯನ್ನು ಮುರುಟಿಸುವಂತಿರದೇ ಅರಳಿಸುವಂತಿರಬೇಕು. ಜೊತೆಗೆ, ಅವರಲ್ಲಿ ಕನಸುಗಳನ್ನು ಬಿತ್ತಬೇಕು. ಅವರೊಳಗಿನ ಸ್ವಂತಿಕೆಯನ್ನು ಅದು ಗುರುತಿಸಿ, ಭವಿಷ್ಯದ ಬಗ್ಗೆ ಅವರೊಳಗೆ ಆತ್ಮವಿಶ್ವಾಸವನ್ನು ಮೂಡಿಸಬೇಕು. ಶಾಲೆಯೆನ್ನುವುದು ನಿರುದ್ಯೋಗಿ ಯುವಕರನ್ನು ಸೃಷ್ಟಿಸುವ ಕಾರ್ಖಾನೆಯಾಗದೆ, ಕಲಿಕೆಯ ಹಂತದಲ್ಲೇ ವೃತ್ತಿಪರ ತರಬೇತಿಗಳನ್ನು ಪಡೆದು ದೇಶದ ಆಸ್ತಿಯಾಗಿ ಅವರನ್ನು ಬದಲಾಗಬೇಕು. ಈ ನಿಟ್ಟಿನಲ್ಲಿ ಕ್ರಮ ತೆಗೆದುಕೊಳ್ಳುವುದಕ್ಕೆ ಎಎಸ್ಇಆರ್ ವರದಿ ಸರಕಾರಕ್ಕೆ ಮಾರ್ಗದರ್ಶನವಾಗಲಿ.