ವಾಲ್ಮೀಕಿಯ ಹುತ್ತವನ್ನು ಅಗೆಯುವ ಕೆಲಸವಾಗಲಿ
ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ
ಲೋಕಸಭಾ ಚುನಾವಣೆಯ ಫಲಿತಾಂಶ ಹೊರ ಬಿದ್ದ ಎರಡೇ ದಿನಗಳಲ್ಲಿ ರಾಜ್ಯ ಸರಕಾರದ ಒಂದು ವಿಕೆಟ್ ಬಿದ್ದಿದೆ. ಒಂದು ವರ್ಷದ ಯಶಸ್ವೀ ಸಂಭ್ರಮದಲ್ಲಿರುವ ಸಿದ್ದರಾಮಯ್ಯ ನೇತೃತ್ವದ ಸರಕಾರದ ಪಾಲಿಗೆ ಇದು ದೊಡ್ಡ ಹಿನ್ನಡೆ. ವಿಧಾನಸಭಾ ಚುನಾವಣೆಯ ಭರ್ಜರಿ ಗೆಲುವಿನ ಕನವರಿಕೆಯಿಂದ ಇನ್ನೂ ಹೊರಬರದಿರುವ ಸರಕಾರವನ್ನು ಎಚ್ಚರಿಸಲು ಲೋಕಸಭಾ ಚುನಾವಣಾ ಫಲಿತಾಂಶ ಸಣ್ಣದೊಂದು ಚುಚ್ಚು ಮದ್ದು ನೀಡಿತ್ತು. ಕಳೆದ ಬಾರಿಯ ಲೋಕಸಭಾ ಚುನಾವಣೆಗೆ ಹೋಲಿಸಿದರೆ ಈ ಬಾರಿ ಕಾಂಗ್ರೆಸ್ ಬಹಳಷ್ಟು ಸಾಧನೆಯನ್ನು ಮಾಡಿದೆಯಾದರೂ, ತನ್ನದೇ ಸರಕಾರವಿದ್ದೂ ಲೋಕಸಭಾ ಚುನಾವಣೆಯಲ್ಲಿ ಹೆಚ್ಚಿ ನ ಸ್ಥಾನಗಳನ್ನು ಪಡೆದುಕೊಳ್ಳುವ ಅವಕಾಶವನ್ನು ಸರಕಾರ ಕೈ ಚೆಲ್ಲಿಕೊಂಡಿತು. ಇದರ ಬೆನ್ನಿಗೇ, ಕರ್ನಾಟಕ ಮಹರ್ಷಿ ವಾಲ್ಮೀಕಿ ಅಭಿವೃದ್ಧ್ಧಿ ನಿಗಮದಲ್ಲಿ ನಡೆದಿದೆ ಎನ್ನಲಾಗಿರುವ ಹಗರಣಗಳ ಹೊಣೆ ಹೊತ್ತು ಪರಿಶಿಷ್ಟ ಪಂಗಡಗಳ ಕಲ್ಯಾಣ ಸಚಿವ ಬಿ. ನಾಗೇಂದ್ರ ಅವರು ರಾಜೀನಾಮೆ ನೀಡಬೇಕಾಯಿತು. ದಲಿತ ಮತ್ತು ಶೋಷಿತ ಸಮುದಾಯಗಳ ಅಭಿವೃದ್ಧಿಯ ಹೆಸರಿನಲ್ಲಿ ಅಧಿಕಾರ ಹಿಡಿದಿರುವ ಸಿದ್ದರಾಮಯ್ಯ ಸರಕಾರ ಇದೀಗ ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ನಡೆದಿರುವ ಹಗರಣದಿಂದಾಗಿ ತೀವ್ರ ಮುಜುಗರಕ್ಕೆ ಒಳಗಾಗಿದೆ. ನಿಗಮದ ಅಧೀಕ್ಷಕ ಚಂದ್ರಶೇಖರ್ ಅವರು ನಿಗಮದೊಳಗಿರುವ ಹಿರಿಯ ಅಧಿಕಾರಿಗಳ ಕಿರುಕುಳದಿಂದ ಆತ್ಮಹತ್ಯೆ ಮಾಡಿಕೊಂಡ ದಿನದಿಂದ ಪ್ರಕರಣ ಬೇರೆ ಬೇರೆ ತಿರುವುಗಳನ್ನು ಪಡೆದುಕೊಂಡಿದೆ. ನಿಗಮದೊಳಗೆ ನಡೆದಿರುವ ಭಾರೀ ಅವ್ಯವಹಾರವೊಂದು ಬೆಳಕಿಗೆ ಬಂದಿರುವುದು ಮಾತ್ರವಲ್ಲ, ಇದರಲ್ಲಿ ಸಚಿವ ನಾಗೇಂದ್ರ ಅವರ ಕೈವಾಡವಿದೆ ಎನ್ನುವ ಆರೋಪ ರೆಕ್ಕೆ ಪುಕ್ಕಗಳನ್ನು ಪಡೆದುಕೊಂಡಿದೆ. ಇದೀಗ ಸಚಿವರು ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡುವ ಮೂಲಕ, ತನಿಖೆಯ ಹಾದಿಯನ್ನು ಸುಗಮಗೊಳಿಸಿದ್ದಾರೆ.
ಪರಿಶಿಷ್ಟ ಪಂಗಡದ ಅಭಿವೃದ್ಧಿಗೆ ವಿಶೇಷ ಆದ್ಯತೆ ನೀಡುವ ಹಿನ್ನೆಲೆಯಲ್ಲಿ 2006-07ರಲ್ಲಿ ವಾಲ್ಮೀಕಿಯ ಹೆಸರಿನಲ್ಲಿ ಅಭಿವೃದ್ಧಿ ನಿಗಮವನ್ನು ಸ್ಥಾಪಿಸಲಾಗಿತ್ತು. ಅರಣ್ಯ ವಾಸಿ ಬುಡಕಟ್ಟು ಸಮುದಾಯವೂ ಸೇರಿದಂತೆ ಹಲವು ಶೋಷಿತ ಸಮುದಾಯವನ್ನು ಹಂತ ಹಂತವಾಗಿ ಈ ಅಭಿವೃದ್ಧಿ ನಿಗಮದ ವ್ಯಾಪ್ತಿಯೊಳಗೆ ಸೇರಿಸಿ ಅವರ ಕಲ್ಯಾಣಕ್ಕಾಗಿ ಸರಕಾರ ಕಾರ್ಯಕ್ರಮಗಳನ್ನು ಹಾಕಿಕೊಂಡು ಬರಲಾಗುತ್ತಿದೆ. ವಿಪರ್ಯಾಸವೆಂದರೆ ಇದೀಗ ಸಿದ್ದರಾಮಯ್ಯ ಅಧಿಕಾರಾವಧಿಯಲ್ಲಿ ಈ ನಿಗಮ, ತಪ್ಪು ಕಾರಣಕ್ಕಾಗಿ ಸುದ್ದಿಯಲ್ಲಿದೆ. ಸುಮಾರು 94 ಕೋಟಿ ಗೂ ಅಧಿಕ ಹಣವನ್ನು ಈ ನಿಗಮದಿಂದ ಅಕ್ರಮವಾಗಿ ವರ್ಗಾವಣೆ ಮಾಡಲಾಗಿದೆ ಎನ್ನುವ ಆರೋಪವನ್ನು ನಿಗಮದ ಮುಖ್ಯಸ್ಥರು ಹೊತ್ತುಕೊಂಡಿದ್ದಾರೆ. ಅಧಿಕಾರಿಯ ಆತ್ಮಹತ್ಯೆಯ ಬಳಿಕ ಅಕ್ರಮ ಹಣ ವರ್ಗಾವಣೆ ಪ್ರಕರಣ ಮುನ್ನೆಲೆಗೆ ಬರುತ್ತಿದ್ದಂತೆಯೇ ಸರಕಾರ ತನಿಖೆಗೆ ಸಿಟ್ ರಚನೆ ಮಾಡಿದೆ. ಈ ಸಂಬಂಧ ಹಲವು ಬ್ಯಾಂಕ್ ಸಿಬ್ಬಂದಿಯನ್ನು ಸಿಟ್ ವಶಕ್ಕೆ ತೆಗೆದುಕೊಂಡಿದೆ. ಸಚಿವರ ಆಪ್ತರನ್ನು ವಿಚಾರಣೆ ನಡೆಸಲಾಗುತ್ತಿದೆ. ಈ ಹಿನ್ನೆಲೆಯಲ್ಲಿಯೇ ಸಚಿವರು ಅನಿವಾರ್ಯವಾಗಿ ರಾಜೀನಾಮೆಯನ್ನು ನೀಡಬೇಕಾಯಿತು.
ಹಗರಣಕ್ಕೆ ಸಂಬಂಧಿಸಿ ಈಗಾಗಲೇ ಒಬ್ಬ ಸರಕಾರಿ ಅಧಿಕಾರಿ ಆತ್ಮಹತ್ಯೆ ಮಾಡಿಕೊಂಡಿರುವುದು ಮತ್ತು ಹಣ ವರ್ಗಾವಣೆಯು ಮೇಲ್ನೋಟಕ್ಕೆ ಸಾಬೀತಾಗಿರುವುದರಿಂದ ಸಚಿವರು ರಾಜೀನಾಮೆ ನೀಡುವುದು ಅನಿವಾರ್ಯವಾಗಿದೆ. ಈ ಮೂಲಕ ಅವರು ಸರಕಾರವನ್ನು ಬಹುದೊಡ್ಡ ಇಕ್ಕಟ್ಟಿನಿಂದ ಪಾರು ಮಾಡಿದ್ದಾರೆ. ಈ ಹಿಂದೆ ಬೊಮ್ಮಾಯಿ ನೇತೃತ್ವದ ಬಿಜೆಪಿ ಸರಕಾರದಲ್ಲಿ ಅಂದಿನ ಸಚಿವ ಈಶ್ವರಪ್ಪ ಅವರ ರಾಜೀನಾಮೆ ಪ್ರಕರಣವನ್ನು ಇದು ನೆನಪಿಸುತ್ತದೆ. ಶೇ. 40 ಲಂಚ ಅಂದಿನ ಸರಕಾರವನ್ನು ಯಾವ ಮಟ್ಟಿಗೆ ಗಬ್ಬೆಬ್ಬಿಸಿತ್ತು ಎಂದರೆ, ಗುತ್ತಿಗೆದಾರರು ಸಂಘಟಿತರಾಗಿ ಬೀದಿಗಿಳಿದು ಸರಕಾರದ ವಿರುದ್ಧ ಪ್ರತಿಭಟನೆ ನಡೆಸಿದ್ದರು. ಇದೇ ಸಂದರ್ಭದಲ್ಲಿ ಗುತ್ತಿಗೆದಾರನೊಬ್ಬ ಅಂದಿನ ಸಚಿವ ಈಶ್ವರಪ್ಪ ಹೆಸರನ್ನು ಬರೆದು ಆತ್ಮಹತ್ಯೆ ಮಾಡಿಕೊಂಡ. ಪ್ರಕರಣ ಯಾವ ಮಟ್ಟಕ್ಕೆ ಬೆಳೆಯಿತು ಎಂದರೆ, ಕೊನೆಗೆ ಈಶ್ವರಪ್ಪ ರಾಜೀನಾಮೆ ನೀಡುವುದು ಅನಿವಾರ್ಯವಾಯಿತು. ಈ ಸಂದರ್ಭದಲ್ಲಿ ಇಡೀ ಸರಕಾರದ ಮೇಲೆಯೇ ಗುತ್ತಿಗೆದಾರರ ಸಂಘ ಲಂಚದ ಆರೋಪವನ್ನು ಮಾಡಿತ್ತು. ಆದರೆ, ಇದಕ್ಕಾಗಿ ಅಂದಿನ ಮುಖ್ಯಮಂತ್ರಿ ಬೊಮ್ಮಾಯಿಯವರೇನೂ ರಾಜೀನಾಮೆ ನೀಡಿರಲಿಲ್ಲ. ಹೀಗಿರುವಾಗ, ಇದೀಗ ವಾಲ್ಮೀಕಿ ನಿಗಮದೊಳಗೆ ನಡೆದಿರುವ ಹಗರಣಕ್ಕಾಗಿ ಇಡೀ ಸರಕಾರವನ್ನು ಹೊಣೆ ಮಾಡಿ ಸಿದ್ದರಾಮಯ್ಯ ಅವರು ರಾಜೀನಾಮೆ ನೀಡಬೇಕು ಎಂದು ಬಿಜೆಪಿ ಒತ್ತಾಯಿಸುವುದಕ್ಕೆ ಯಾವ ಅರ್ಥವೂ ಇಲ್ಲ. ಹಣ ವರ್ಗಾವಣೆಯಲ್ಲಿ ಸರಕಾರ ನೇರವಾಗಿ ಪಾಲುಗೊಂಡಿದೆ ಎಂದು ಬಿಜೆಪಿ ಆರೋಪಿಸುತ್ತಿದೆ. ಯಾರೆಲ್ಲ ಹಗರಣದಲ್ಲಿ ಶಾಮೀಲಾಗಿದ್ದಾರೆ ಎನ್ನುವುದು ತನಿಖೆಯಿಂದ ಬಹಿರಂಗವಾಗಬೇಕೇ ಹೊರತು, ಬಿಜೆಪಿ ಸ್ವಯಂ ಆರೋಪಿಗಳನ್ನು ಘೋಷಿಸುವಂತಿಲ್ಲ. ತನಿಖೆಯಲ್ಲಿ ಸರಕಾರದ ಪಾತ್ರ ಸಾಬೀತಾದರೆ, ಮುಖ್ಯಮಂತ್ರಿ ರಾಜೀನಾಮೆಗೆ ಒತ್ತಾಯಿಸುವುದು ನ್ಯಾಯವಾಗಿದೆ.
ಇಷ್ಟಕ್ಕೂ ನಿಗಮವೊಂದು ಹಣವನ್ನು ಅಕ್ರಮವಾಗಿ ವರ್ಗಾವಣೆ ಮಾಡಿ ದುರುಪಯೋಗ ಪಡಿಸಿಕೊಂಡ ಆರೋಪ ಕೇಳಿ ಬರುತ್ತಿರುವುದು ಇದೇ ಮೊದಲೇನಲ್ಲ. ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ಮಾತ್ರವಲ್ಲ, ಇತರ ನಿಗಮಗಳಲ್ಲೂ ಇಂತಹ ಅಕ್ರಮಗಳು ನಡೆಯುತ್ತಿರುವ ಆರೋಪಗಳು ಕೇಳಿ ಬರುತ್ತಲೇ ಇವೆ. ರಾಜಕಾರಣಿಗಳು, ಉನ್ನತ ಅಧಿಕಾರಿಗಳ ನಿರ್ದೇಶನದ ಮೇರೆಗೆ ನಡೆಯುವ ಹಣ ವರ್ಗಾವಣೆಯ ಈ ಹಗರಣದಲ್ಲಿ ಅಂತಿಮವಾಗಿ ಕೆಳ ವರ್ಗದ ಅಧಿಕಾರಿಗಳು ಬಲಿಪಶುಗಳಾಗಬೇಕಾಗುತ್ತವೆ. ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ನಡೆದಿರುವ ಬೇನಾಮಿ ಹೆಸರಿನ ಬ್ಯಾಂಕ್ ಖಾತೆಗಳ ಹಣ ವರ್ಗಾವಣೆ ಅಂತಿಮವಾಗಿ ತನ್ನ ಕುತ್ತಿಗೆಗೆೆ ಬರಬಹುದೆಂಬ ಆತಂಕದಲ್ಲೇ ಅಧಿಕಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗುತ್ತಿದೆ. ಇಂತಹ ಅಕ್ರಮ ಹಣ ವರ್ಗಾವಣೆಗಳು ಕೇವಲ ವಾಲ್ಮೀಕಿ ಅಭಿವೃದ್ಧಿ ನಿಗಮಕ್ಕಷ್ಟೇ ಸೀಮಿತವಾದುದಲ್ಲ. ತನಿಖೆ ಸರಿಯಾದ ದಿಕ್ಕಿನಲ್ಲಿ ನಡೆದರೆ, ಬಿಜೆಪಿಯ ಸರಕಾರದ ಅವಧಿಯಲ್ಲಿ ನಡೆದಿರುವ ಹಗರಣಗಳೂ ಹೊರಬರುವ ಸಾಧ್ಯತೆಗಳಿವೆ. ಸರಕಾರದ ವಿವಿಧ ಲೆಕ್ಕ ಶೀರ್ಷಿಕೆಗಳಲ್ಲಿರುವ ಖಾಸಗಿ ಖಾತೆಗಳಿಗೆ ಅಕ್ರಮವಾಗಿ ವರ್ಗಾವಣೆಯಾಗುವುದು ಮಾತ್ರವಲ್ಲ, ಸರಕಾರದ ಹಣವನ್ನು ಹವಾಲ ವ್ಯವಹಾರಗಳಿಗೂ ದುರ್ಬಳಕೆ ಮಾಡಿಕೊಳ್ಳಲಾಗುತ್ತದೆ ಎನ್ನುವ ಆರೋಪ ಬಿಜೆಪಿ ಸರಕಾರದಲ್ಲಿ ಕೇಳಿ ಬಂದಿತ್ತು. ಹಲವು ಬ್ಯಾಂಕ್ ಅಧಿಕಾರಿಗಳೂ ಇದರಲ್ಲಿ ಶಾಮೀಲಾಗಿದ್ದಾರೆ ಎನ್ನುವ ಆರೋಪಗಳಿದ್ದವು. 2021ರಲ್ಲಿ ರಾಜ್ಯ ಸರಕಾರದ ಮುಖ್ಯ ಕಾರ್ಯದರ್ಶಿಗಳಿಗೆ ಸಬ್ ರಿಜಿಸ್ಟ್ರಾರ್ ಚೆಲುವರಾಜು ಅವರು ಬರೆದಿರುವ ಪತ್ರ ಈ ಆರೋಪವನ್ನು ಮಾಡಿತ್ತು. ಸರಕಾರಿ ಹಣದಲ್ಲಿ ಅಕ್ರಮ ವ್ಯವಹಾರ ನಿರ್ವಹಣೆ ಮಾಡುವ ವ್ಯವಸ್ಥಿತ ಜಾಲವೊಂದು ಕಾರ್ಯಾಚರಿಸುತ್ತಿರುವುದರ ಬಗ್ಗೆ ಅವರು ಎಚ್ಚರಿಸಿದ್ದರು. ಆದರೆ ಅಂದಿನ ಸರಕಾರ ಇದನ್ನು ಗಂಭೀರವಾಗಿ ತೆಗೆದುಕೊಂಡಿರಲಿಲ್ಲ.
ಆದುದರಿಂದ, ಈ ತನಿಖೆ ವಾಲ್ಮೀಕಿ ಅಭಿವೃದ್ಧಿ ನಿಗಮದ ಒಬ್ಬ ಅಧಿಕಾರಿಯ ಆತ್ಮಹತ್ಯೆಯನ್ನು ಕೇಂದ್ರವಾಗಿಟ್ಟು ಮಾತ್ರ ನಡೆಯಬಾರದು. ಇತರ ನಿಗಮಗಳಲ್ಲಿ ನಡೆದಿರುವ ಅಕ್ರಮ ಹಣ ವರ್ಗಾವಣೆಗಳ ಬಗ್ಗೆಯೂ ತನಿಖೆಯಾಗಲಿ. ಈ ಹಿಂದಿನ ಸರಕಾರಗಳ ಅವಧಿಯಲ್ಲಿ ನಿಗಮಗಳಲ್ಲಿ ನಡೆದಿರುವ ದುಡ್ಡಿನ ಗೋಲ್‌ಮಾಲ್‌ಗಳೆಷ್ಟು ಎನ್ನುವುದೂ ಬಹಿರಂಗವಾಗಲಿ. ವಿವಿಧ ನಿಗಮಗಳಲ್ಲಿ ಅಭಿವೃದ್ಧ್ದಿಗಾಗಿ ಮೀಸಲಿಟ್ಟ ಹಣ ಯೋಗ್ಯ ರೀತಿಯಲ್ಲಿ ವೆಚ್ಚವಾಗದೇ ಇರುವ ಕಾರಣಗಳೂ ಇದರಿಂದ ಸ್ಪಷ್ಟವಾಗಬಹುದು. ದಲಿತರು, ಅಲ್ಪಸಂಖ್ಯಾತರ ಏಳಿಗೆಗಾಗಿ ಮೀಸಲಿಟ್ಟಿರುವ ಹಣ ನಿಗಮದೊಳಗಿರುವ ತಿಮಿಂಗಿಲಗಳ ಹೊಟ್ಟೆ ಸೇರಿದ್ದರೆ ಆ ಹೊಟ್ಟೆಯನ್ನು ಬಗಿದು, ಹಣವನ್ನು ಮತ್ತೆ ಜನತೆಯ ಕಲ್ಯಾಣಕ್ಕೆ ಮೀಸಲಿಡುವುದು ಸಿದ್ದರಾಮಯ್ಯ ನೇತೃತ್ವದ ಸರಕಾರದ ಕರ್ತವ್ಯವಾಗಿದೆ.