ಬಿಪಿಎಲ್ ಕಾರ್ಡ್ ಬಡವರ ಅಕ್ಷಯ ಪಾತ್ರೆಯಾಗಲಿ
ಸಾಂದರ್ಭಿಕ ಚಿತ್ರ
ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ
ಬಿಪಿಎಲ್ ಕಾರ್ಡುಗಳನ್ನು ಸರಕಾರ ಹಂಚಿರುವುದು ಬಡವರಿಗಾಗಿ ಅಲ್ಲ. ಬಡವರಿಗಿಂತಲೂ ಕೆಳಹಂತದವರಿಗೆ. ಈ ಕಾರ್ಡ್ಗಳ ಉದ್ದೇಶ, ಮನುಷ್ಯನ ಬದುಕುವ ಕನಿಷ್ಠ ಹಕ್ಕುಗಳನ್ನು ರಕ್ಷಿಸುವುದು. ಮುಖ್ಯವಾಗಿ, ಆಹಾರವಿಲ್ಲದೆ ಸಾಯದಂತೆ ನೋಡಿಕೊಳ್ಳುವುದಷ್ಟೇ ಇದರ ಗುರಿ ಎನ್ನುವುದು ಮೇಲ್ನೋಟಕ್ಕೆ ಸ್ಪಷ್ಟವಾಗುತ್ತದೆ. ವಿಪರ್ಯಾಸವೆಂದರೆ, ಇಂದು ಸರಕಾರ ತನ್ನ ಹಲವು ಯೋಜನೆಗಳನ್ನು ಬಡವರಿಗಾಗಿ ಘೋಷಿಸಿದೆ. ಕೇಂದ್ರ ಮತ್ತು ರಾಜ್ಯ ಸರಕಾರಗಳು ಬಡವರಿಗಾಗಿ ಜಾರಿಗೊಳಿಸಿರುವ ಹಲವು ಸೌಲಭ್ಯಗಳನ್ನು ಪಡೆಯಬೇಕಾದರೆ ಬಿಪಿಎಲ್ ಕಾರ್ಡ್ಗಳು ಅತ್ಯಗತ್ಯ ಎಂದು ನಿಯಮಗಳು ಹೇಳುತ್ತಿವೆೆ. ಅಂದರೆ ಸರಕಾರ ಈ ದೇಶದಲ್ಲಿ ಬಡವರಿಗಿಂತಲೂ ಕೆಳಮಟ್ಟದವರಿಗಾಗಿ ಯೋಜನೆಗಳನ್ನು ಘೋಷಿಸಿದೆಯೇ ಹೊರತು, ಬಡವರಿಗಾಗಿ ಅಲ್ಲ. ಪರಿಣಾಮವಾಗಿ ದೇಶದ ಬಡವರು ಸರಕಾರದ ಯೋಜನೆಗಳನ್ನು ತನ್ನದಾಗಿಸಿಕೊಳ್ಳಲು ವಿಫಲರಾಗುತ್ತಿದ್ದಾರೆ. ಬಡತನವನ್ನು ಅಳಿಸುವುದಕ್ಕೆ ತನ್ನಿಂದ ಸಾಧ್ಯವಿಲ್ಲ ಎಂದು ಅರಿತಿರುವ ಸರಕಾರ ಬಡತನವನ್ನು ಇಲ್ಲವಾಗಿಸಲು ಹೊಸ ತಂತ್ರವನ್ನು ಅನುಸರಿಸುತ್ತಾ ಬಂದಿದೆ. ಪರಿಣಾಮವಾಗಿ, ಬಡತನವನ್ನು ಅಳೆಯುವ ಮಾನದಂಡಗಳೇ ಬದಲಾಯಿತು. ತಾನೇ ನಿರ್ಧರಿಸಿದ ಮಾನದಂಡಗಳನ್ನು ಮುಂದಿಟ್ಟುಕೊಂಡು ದೇಶದಲ್ಲಿ ಬಡವರ ಸಂಖ್ಯೆ ಇಳಿಮುಖವಾಗಿದೆ ಎಂದು ಘೋಷಿಸ ತೊಡಗಿತು. ಇತ್ತೀಚೆಗೆ ನೀತಿ ಆಯೋಗ ಇದರ ಆಧಾರದಲ್ಲೇ, ದೇಶದಲ್ಲಿ ಬಡತನದ ಮಟ್ಟ ಶೇ. 5ಕ್ಕೆ ಇಳಿದಿದೆ ಎಂದು ಹೇಳಿತು.
ಭಾರತದಲ್ಲಿ ಬಡತನದ ಸಮಸ್ಯೆಯನ್ನು ನಿವಾರಿಸಲು ಸುರೇಶ್ ತೆಂಡುಲ್ಕರ್ ಸಮಿತಿಯನ್ನು 2004ರಲ್ಲಿ ನೇಮಿಸಲಾಯಿತು. ಸುಮಾರು ಒಂದು ವರ್ಷದ ಸಮೀಕ್ಷೆಯ ಬಳಿಕ ಈ ಸಮಿತಿ ಬಡವನೆಂದು ಘೋಷಿಸಲು ಇರುವ ಮಾನದಂಡವನ್ನು ಬದಲಿಸಿತು. ಪರಿಣಾಮವಾಗಿ, ನಗರ ಪ್ರದೇಶಗಳಲ್ಲಿ ದಿನಕ್ಕೆ 32 ರೂಪಾಯಿ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ದಿನಕ್ಕೆ 28 ರೂಪಾಯಿಗಳಿಗಿಂತ ಕಡಿಮೆ ಆದಾಯ ಹೊಂದಿರುವವರನ್ನು ಕಡು ಬಡವರು ಎಂದು ಘೋಷಿಸಲಾಯಿತು. ಇದರ ಆಧಾರದಲ್ಲೇ 2012ರಲ್ಲಿ ಯೋಜನಾ ಆಯೋಗದ ಮುಖ್ಯಸ್ಥ ಮೊಂಟೆಕ್ ಅಹ್ಲುವಾಲಿಯಾ ಅವರು 2004-05ರಲ್ಲಿ ಶೇ. 37ರಷ್ಟಿದ್ದ ಭಾರತದ ಬಡತನದ ಪ್ರಮಾಣವು 2011-12ರ ಹೊತ್ತಿಗೆ ಶೇ. 22ಕ್ಕೆ ಇಳಿದಿದೆ ಎಂದು ಪ್ರಕಟಿಸಿದ್ದರು. ತೆಂಡುಲ್ಕರ್ ಸಮಿತಿಯ ಮಾನದಂಡ ಈ ಹಿಂದೆಯೂ ತೀವ್ರ ಟೀಕೆಗೆ ಒಳಗಾಗಿತ್ತು. 2012ರಲ್ಲಿ ಯುಪಿಎ ಸರಕಾರ ಬಡವರ ಸಂಖ್ಯೆ ಇಳಿಕೆಯಾಗಿದೆ ಎಂದು ಹೇಳಿದಾಗ ಅದರ ವಿರುದ್ಧ ವಿರೋಧ ಪಕ್ಷಗಳು ತೀವ್ರ ಟೀಕೆಗಳನ್ನು ಮಾಡಿದ್ದವು. ತೆಂಡುಲ್ಕರ್ ಸಮಿತಿಯ ಮಾನದಂಡವನ್ನು ತಿರಸ್ಕರಿಸಬೇಕು ಎನ್ನುವ ವ್ಯಾಪಕ ಒತ್ತಡಗಳು ಕೇಳಿ ಬಂದವು. ಆ ಒತ್ತಡಕ್ಕೆ ಮಣಿದು ಆರ್ಬಿಐ ಮಾಜಿ ಗವರ್ನರ್ ರಂಗರಾಜನ್ ಅವರ ನೇತೃತ್ವದಲ್ಲಿ ಹೊಸ ಸಮಿತಿಯನ್ನು ನೇಮಿಸಲಾಯಿತು. ಬಿಪಿಎಲ್ಗೆ ಹೊಸ ಮಾನದಂಡವನ್ನು ನಿರ್ಣಯಿಸಿತು. ರಂಗರಾಜನ್ ಸಮಿತಿಯ ಪ್ರಕಾರ ಗ್ರಾಮೀಣ ಪ್ರದೇಶದಲ್ಲಿ ದಿನಕ್ಕೆ 32 ರೂಪಾಯಿ ಖರ್ಚು ಮಾಡುವವರು ಹಾಗೂ ಪಟ್ಟಣ, ನಗರಗಳಲ್ಲಿ 47 ರೂಪಾಯಿಗಳಿಗಿಂತ ಹೆಚ್ಚು ಖರ್ಚು ಮಾಡುವವರು ಬಡವರಲ್ಲ. ಆದರೆ ಸಮಿತಿಯ ಈ ನಿರ್ಣಯವೂ ಸಾಕಷ್ಟು ಟೀಕೆಗಳಿಗೆ ಕಾರಣವಾದವು. ಒಂದೆಡೆ ಕೇಂದ್ರ ಸರಕಾರ ಬಡವರ ಸಂಖ್ಯೆ ಇಳಿಕೆಯಾಗಿದೆ ಎಂದು ಹೇಳುತ್ತಿರುವಾಗ, ಕರ್ನಾಟಕದಲ್ಲಿ ಮಾತ್ರ ಯಾಕೆ ಬಿಪಿಎಲ್ ಕಾರ್ಡ್ದಾರರ ಸಂಖ್ಯೆ ಹೆಚ್ಚಿದೆ ಎಂದು ಇದೀಗ ರಾಜ್ಯ ಸರಕಾರ ತಲೆಕೆಡಿಸಿಕೊಳ್ಳುತ್ತಿದೆ. ಆದುದರಿಂದಲೇ, ಅದು ರಾಜ್ಯದಲ್ಲಿ ಅಕ್ರಮ ಬಿಪಿಎಲ್ ಕಾರ್ಡ್ ಗಳನ್ನು ರದ್ದುಗೊಳಿಸಲು ಕಠಿಣ ಕ್ರಮಗಳನ್ನು ಕೈಗೊಳ್ಳಲು ಮುಂದಾಗಿದೆ.
ರಾಜ್ಯದಲ್ಲಿ ಅಕ್ರಮ ಬಿಪಿಎಲ್ ಕಾರ್ಡ್ಗಳು ಇಲ್ಲ ಎಂದಲ್ಲ. ಅವುಗಳು ರದ್ದಾಗದೇ ಇದ್ದರೆ, ಸವಲತ್ತುಗಳು ಅರ್ಹರಿಗೆ ಪರಿಣಾಮಕಾರಿಯಾಗಿ ತಲುಪುವುದು ಅಸಾಧ್ಯ. ರಾಜ್ಯದಲ್ಲಿ ಶೇ. 72ರಷ್ಟು ಮಂದಿಯ ಕೈಯಲ್ಲಿ ಬಿಪಿಎಲ್ ಕಾರ್ಡ್ಗಳಿವೆ ಎಂದು ಮೂಲಗಳು ತಿಳಿಸುತ್ತವೆ. ಹಿಂದಿನ ಸರಕಾರದ ಅವಧಿಯಲ್ಲಿ ಹೊಸದಾಗಿ ಪಡಿತರ ಚೀಟಿ ಪಡೆಯಲು ಸಲ್ಲಿಕೆಯಾಗಿದ್ದ 2.95 ಲಕ್ಷ ಅರ್ಜಿಗಳನ್ನು ಪರಿಷ್ಕರಿಸಿದಾಗ 2.38 ಲಕ್ಷ ಅರ್ಜಿಗಳು ಬಿಪಿಎಲ್ ವ್ಯಾಪಿಗೆ ಬಂದಿವೆ. 2011ರ ಜನಗಣತಿ ಪ್ರಕಾರ ರಾಜ್ಯದಲ್ಲಿ 6.10 ಕೋಟಿ ಜನರಿದ್ದು, 4.42 ಕೋಟಿ ಜನರು ಬಿಪಿಎಲ್ ಕಾರ್ಡ್ ಸವಲತ್ತುಗಳನ್ನು ತನ್ನದಾಗಿಸಿಕೊಳ್ಳುತ್ತಿದ್ದಾರೆ ಎಂದು ವರದಿ ಹೇಳುತ್ತದೆ. ಅಂದರೆ ರಾಜ್ಯದಲ್ಲಿ ಶೇ. 72ರಷ್ಟು ಜನರು ಬಡತನ ರೇಖೆಗಿಂತ ಕೆಳಗಿದ್ದಾರೆ ಎನ್ನುವುದನ್ನು ಇದು ತೋರಿಸುತ್ತದೆ. ನೀತಿ ಆಯೋಗದ ಪ್ರಕಾರ ರಾಜ್ಯದಲ್ಲಿ ಶೇ. 13.16ರಷ್ಟು ಜನ ಮಾತ್ರ ಬಡತನ ರೇಖೆಗಿಂತ ಕೆಳಗಿದ್ದಾರೆ. ಇದರ ಆಧಾರದಲ್ಲಿ ರಾಜ್ಯದಲ್ಲಿ ಅಕ್ರಮ ಬಿಪಿಎಲ್ ಕಾರ್ಡ್ಗಳಿವೆ ಎಂದು ಸರಕಾರ ನಿರ್ಧರಿಸಿದ್ದು, ಜನರ ಕಾರ್ಡ್ಗಳನ್ನು ಕಿತ್ತುಹಾಕಲು ಈಗಾಗಲೇ ಕ್ರಮ ತೆಗೆದುಕೊಂಡಿದೆ. ಈಗಾಗಲೇ, ಬಿಪಿಎಲ್ ಕಾರ್ಡ್ಗಳಿಂದ ಸವಲತ್ತುಗಳನ್ನು ಪಡೆಯುತ್ತಿರುವ ಹಲವು ಬಡವರು ಇದೀಗ ಕಾರ್ಡ್ಗಳು ರದ್ದಾಗುವ ಆತಂಕದಲ್ಲಿದ್ದಾರೆ.
ವಾರ್ಷಿಕವಾಗಿ 1.20 ಲಕ್ಷ ರೂ.ಗಳ ಒಳಗೆ ಆದಾಯವಿರುವವರು ಬಿಪಿಎಲ್ ಕಾರ್ಡ್ಗಳನ್ನು ಪಡೆಯುವ ಅರ್ಹತೆಯನ್ನು ಹೊಂದಿರುತ್ತಾರೆ. ಇಷ್ಟೇ ಅಲ್ಲ ಖಾಸಗಿ ವಾಹನ ಹೊಂದಿರುವುದು ಸೇರಿದಂತೆ ಹಲವು ನಿಯಮಗಳು ಬಿಪಿಎಲ್ ಕಾರ್ಡ್ಗಳನ್ನು ಹೊಂದಲು ತಡೆಯಾಗಿದೆ. ಅನೇಕ ಸಂದರ್ಭದಲ್ಲಿ ಖಾಸಗಿ ವಾಹನದ ಮೂಲಕವೇ ವಾರ್ಷಿಕವಾಗಿ 1.20 ಲಕ್ಷ ರೂಪಾಯಿ ಆದಾಯವನ್ನು ತನ್ನದಾಗಿಸಿಕೊಳ್ಳುತ್ತಿರುವವರು, ಬಿಪಿಎಲ್ ಕಾರ್ಡ್ಗಾಗಿ ತನ್ನ ಬದುಕಿನ ಆಧಾರಸ್ತಂಭವಾಗಿರುವ ವಾಹನವನ್ನು ತ್ಯಜಿಸಬೇಕಾಗಿದೆ. ಬಿಪಿಎಲ್ ಕಾರ್ಡ್ಗಳನ್ನು ತ್ಯಜಿಸುವುದು ಎಂದರೆ, ಬರೇ ಅಕ್ಕಿ, ಗೋಧಿಗಳನ್ನು ಮಾತ್ರವಲ್ಲ, ಸರಕಾರ ಜಾರಿಗೊಳಿಸಿರುವ ಆಯುಷ್ಮಾನ್ ಯೋಜನೆ ಸೇರಿದಂತೆ ಹಲವು ನೆರವುಗಳನ್ನು ಕಳೆದುಕೊಳ್ಳಬೇಕಾಗುತ್ತದೆ. ನಿಯಮಗಳಂತೆಯೇ ಕಾರ್ಡ್ಗಳನ್ನು ರದ್ದುಗೊಳಿಸುತ್ತಾ ಹೋದರೆ, ಸರಕಾರ ಬಡವರಿಗಾಗಿ ಜಾರಿಗೊಳಿಸಿರುವ ಹಲವು ಯೋಜನೆಗಳು ಬಡವರಿಗೆ ತಲುಪುವುದೇ ಅಸಾಧ್ಯವಾಗಿ ಬಿಡುತ್ತದೆ. ಬಿಪಿಎಲ್ ಕಾರ್ಡ್ಗಳು ಬಡವರಿಗಲ್ಲ ಎಂದಾದರೆ, ಕನಿಷ್ಠ ಎಪಿಎಲ್ ಕಾರ್ಡ್ ಗಳಿಗಾದರೂ ಬಡವರಿಗೆ ಸಿಗುವ ಸೌಲಭ್ಯಗಳನ್ನು ಒದಗಿಸುವ ಭರವಸೆಯನ್ನು ಸರಕಾರ ನೀಡಬೇಕಾಗಿದೆ. ಬಿಪಿಎಲ್ ಮತ್ತು ಎಪಿಎಲ್ ಕಾರ್ಡ್ ಗಳ ನಡುವಿರುವ ಅಂತರವನ್ನು ತೆಳುಗೊಳಿಸಿ, ಬಿಪಿಎಲ್ ಮಾನದಂಡಗಳಿಂದ ಹೊರಗಿರುವ ಅರ್ಹ ಬಡವರಿಗೆ ಬಿಪಿಎಲ್ನ ಶೇ. 90ರಷ್ಟು ಸೌಲಭ್ಯಗಳಾದರೂ ದೊರಕುವಂತೆ ಸರಕಾರ ಮಾಡಬೇಕು.
ಈಗಾಗಲೇ ಸರಕಾರ ಜಾರಿಗೊಳಿಸಿರುವ ಗ್ಯಾರಂಟಿಗಳು ತಳಮಟ್ಟದಲ್ಲಿ ಎಲ್ಲರನ್ನೂ ತಲುಪದೇ ಇದ್ದರೂ, ಶೇ. 60ಕ್ಕೂ ಅಧಿಕ ಅರ್ಹ ಫಲಾನುಭವಿಗಳು ಪ್ರಯೋಜನಗಳನ್ನು ಪಡೆಯುತ್ತಿದ್ದಾರೆ ಮಾತ್ರವಲ್ಲ, ಜನರು ಸರಕಾರದ ಯೋಜನೆಗಳನ್ನು ಸ್ವಾಗತಿಸುತ್ತಿದ್ದಾರೆ. ಇದೇ ಸಂದರ್ಭದಲ್ಲಿ ಗ್ಯಾರಂಟಿಗಳಿಂದಾಗಿ ಸರಕಾರಕ್ಕೆ ಆರ್ಥಿಕ ಹೊರೆ ಅಧಿಕವಾಗಿದ್ದು, ಆ ಹೊರೆಯನ್ನು ಹಗುರಗೊಳಿಸಲು ಪ್ರಯತ್ನಿಸುತ್ತಿದೆ. ನಾಳೆ ಈ ಗ್ಯಾರಂಟಿಗಳನ್ನು ಕೇವಲ ಬಿಪಿಎಲ್ ಕಾರ್ಡ್ದಾರರಿಗೆ ಮಾತ್ರ ಸೀಮಿತಗೊಳಿಸಿದರೆ, ಈ ನಾಡಿನ ಕೋಟ್ಯಂತರ ಬಡವರು ಸರಕಾರದ ಗ್ಯಾರಂಟಿಗಳಿಂದ ದೂರ ಉಳಿಯಲಿದ್ದಾರೆ. ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ ಎನ್ನುವ ಸ್ಥಿತಿ ಇವರದಾಗಬಾರದು. ಆದುದರಿಂದ, ಯಾವ ಕಾರಣಕ್ಕೂ ಗ್ಯಾರಂಟಿಗಳನ್ನು ಬಿಪಿಎಲ್ ಕಾರ್ಡ್ದಾರರಿಗಷ್ಟೇ ಸೀಮಿತಗೊಳಿಸುವ ನಿರ್ಧಾರಕ್ಕೆ ಸರಕಾರ ಬರಬಾರದು. ಇದೇ ಸಂದರ್ಭದಲ್ಲಿ ಮೇಲ್ಮಧ್ಯಮ ವರ್ಗ ಬಿಪಿಎಲ್ ಕಾರ್ಡ್ ಹೊಂದಿದ್ದರೆ ಅದರ ಮೇಲೆ ಕ್ರಮ ಕೈಗೊಳ್ಳಲಿ. ಆದರೆ ಬಡವರ ಕೈಯಿಂದ ಬಿಪಿಎಲ್ ಕಾರ್ಡ್ನ್ನು ಕಿತ್ತುಕೊಳ್ಳುವ ಕೆಲಸ ಸರಕಾರ ಮಾಡಬಾರದು. ಬಿಪಿಎಲ್ ಕಾರ್ಡ್ ಎನ್ನುವುದು ಬಡವರ ಪಾಲಿಗೆ ಅಕ್ಷಯ ಪಾತ್ರೆ. ಆ ಪಾತ್ರೆ ಯಾವತ್ತೂ ಕ್ಷಯ ಪೀಡಿತವಾಗದಿರಲಿ.