ಲಕ್ಷದ್ವೀಪದ ಟೀಕೆ, ಆಕ್ರೋಶಗಳು ಪ್ರಧಾನಿ ಮೋದಿಯನ್ನು ತಟ್ಟಲಿ
Photo: twitter.com/Ankit_Journo
ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ
ಭಾರತದ ಪ್ರಧಾನಿ ಮೋದಿಯವರನ್ನು ಮಾಲ್ದೀವ್ಸ್ನ ಕೆಲವು ಸಚಿವರು ಸಾಮಾಜಿಕ ಜಾಲತಾಣಗಳಲ್ಲಿ ವ್ಯಂಗ್ಯ ಮಾಡಿರುವುದು ಒಂದು ವಲಯವನ್ನು ಆಕ್ರೋಶಕ್ಕೀಡು ಮಾಡಿದೆ. ಪ್ರಧಾನಿ ಮೋದಿಯವರು ಇತ್ತೀಚೆಗೆ ಲಕ್ಷದ್ವೀಪಕ್ಕೆ ಭೇಟಿ ನೀಡಿದ್ದರು. ಅಲ್ಲಿನ ಪ್ರವಾಸೋದ್ಯಮ ಅಭಿವೃದ್ಧಿ ಯೋಜನೆಗಳನ್ನು ಉದ್ಘಾಟಿಸುತ್ತಾ ‘ಮಾಲ್ದೀವ್ಸ್ ನಂತಹ ದ್ವೀಪಕ್ಕೆ ಹೋಗುವ ಬದಲು ಇಲ್ಲಿಗೆ ಯಾಕೆ ಬರಬಾರದು?’ ಎಂಬ ಅರ್ಥ ಬರುವ ಹೇಳಿಕೆಯನ್ನು ನೀಡಿದ್ದರು. ಮಾಲ್ದೀವ್ಸ್ ಜೊತೆಗೆ ಲಕ್ಷದ್ವೀಪವನ್ನು ಹೋಲಿಸಿದ್ದು ಉದ್ದೇಶ ಪೂರ್ವಕ ಎಂದು ತಪ್ಪು ತಿಳಿದುಕೊಂಡ ಅಲ್ಲಿನ ರಾಜಕೀಯ ನಾಯಕರು ಪ್ರಧಾನಿ ಮೋದಿಯವರನ್ನು ಪ್ರತಿಯಾಗಿ ಕುಟುಕಿದ್ದಾರೆ. ಅವರನ್ನು ‘ವಿದೂಷಕ’ ಎಂದು ತಮಾಷೆ ಮಾಡಿದ್ದಲ್ಲದೆ ‘ಇಸ್ರೇಲ್ನ ಕೈಗೊಂಬೆ’ ಎಂದೂ ಅಣಕವಾಡಿದ್ದಾರೆ. ಅಣಕವಾಡಿದವರು ಅಲ್ಲಿ ನ ಸರಕಾರದ ಭಾಗವಾಗಿರುವುದರಿಂದ ಸಹಜವಾಗಿಯೇ ಅದನ್ನು ಮಾಲ್ದೀವ್ಸ್ ಸರಕಾರದ ಅಧಿಕೃತ ಪ್ರತಿಕ್ರಿಯೆಯೆಂದು ಭಾವಿಸಿ ಭಾರತದ ಒಂದು ಗುಂಪು ಪ್ರತಿದಾಳಿ ಮಾಡಿತು. ಮಾಲ್ದೀವ್ಸ್ ವಿರುದ್ಧ ಹೇಳಿಕೆಗಳನ್ನು ನೀಡಿತು. ಇದರಲ್ಲಿ ಚಿತ್ರನಟರ ಸಹಿತ ಕೆಲವು ಸೆಲೆಬ್ರಿಟಿಗಳು ಸೇರಿರುವುದರಿಂದ ಈ ಟೀಕೆ ಮಹತ್ವವನ್ನು ಪಡೆದುಕೊಂಡಿತು. ಪ್ರವಾಸೋದ್ಯಮವನ್ನೇ ನೆಚ್ಚಿಕೊಂಡಿರುವ ಮಾಲ್ದೀವ್ಸ್ ಆರಂಭದಲ್ಲಿ ತನ್ನ ಸಚಿವರ ಹೇಳಿಕೆಯ ಜೊತೆಗೆ ಅಂತರ ಕಾಯ್ದುಕೊಂಡಿತಾದರೂ, ವಿವಾದ ಉಲ್ಬಣಗೊಳ್ಳುತ್ತಿದ್ದಂತೆಯೇ ತಕ್ಷಣದ ಹಾನಿಯನ್ನು ತಡೆಯುವುದಕ್ಕಾಗಿ ಹೇಳಿಕೆ ನೀಡಿದ ಸಚಿವರನ್ನು ಅಮಾನತುಗೊಳಿಸಿತು. ಭಾರತ ಸರಕಾರವೂ ಈ ಟೀಕೆ, ವ್ಯಂಗ್ಯವನ್ನು ಬಹಳ ಗಂಭೀರವಾಗಿ ತೆಗೆದುಕೊಂಡಿದೆ. ಮೋದಿಯ ವಿರುದ್ಧದ ಟೀಕೆಗಾಗಿ ಮಾಲ್ದೀವ್ಸ್ ರಾಯಭಾರಿಯನ್ನು ಕರೆಸಿಕೊಂಡ ಕೇಂದ್ರ ಸರಕಾರವು ತನ್ನ ಕಳವಳವನ್ನು ವ್ಯಕ್ತಪಡಿಸಿದೆ.
ಪ್ರಧಾನಿ ಮೋದಿಯವರ ಹೇಳಿಕೆ ಮತ್ತು ಆ ಬಳಿಕ ನಡೆದ ಬೆಳವಣಿಗೆಗಳೆಲ್ಲ ಆಕಸ್ಮಿಕವಲ್ಲ. ಮಾಲ್ದೀವ್ಸ್ ಮತ್ತು ಭಾರತದ ನಡುವೆ ಕೆಲವು ತಿಂಗಳಿಂದ ಮುಸುಕಿನ ಗುದ್ದಾಟದ ರೂಪದಲ್ಲಿ ಹೇಳಿಕೆ, ಪ್ರತಿ ಹೇಳಿಕೆಗಳು ಹೊರ ಬೀಳುತ್ತಲೇ ಇವೆ. ಮುಖ್ಯವಾಗಿ, 2023 ನವೆಂಬರ್ನಲ್ಲಿ ನೂತನ ಅಧ್ಯಕ್ಷ ಮುಹಮ್ಮದ್ ಮುಯಿಝ್ಝು ಪ್ರಮಾಣ ವಚನ ಸ್ವೀಕರಿಸಿದ ಸಂದರ್ಭದಲ್ಲಿ ಭಾರತಕ್ಕೆ ಮುಜುಗರ ತರುವ ಭಾಷಣವನ್ನು ಮಾಡಿದ್ದರು. ‘‘ದ್ವೀಪ ಸಮೂಹದ ರಾಷ್ಟ್ರವಾಗಿರುವ ಮಾಲ್ದೀವ್ಸ್ ನ ಸ್ವಾತಂತ್ರ್ಯ ಮತ್ತು ಸಾರ್ವಭೌಮತೆಯನ್ನು ಕಾಪಾಡುವ ಹಿನ್ನೆಲೆಯಲ್ಲಿ ಯಾವುದೇ ರಾಷ್ಟ್ರದ ಮಿಲಿಟರಿ ಶಕ್ತಿಯನ್ನು ದೇಶದಲ್ಲಿ ಉಳಿಯಲು ಬಿಡುವುದಿಲ್ಲ’’ ಎಂದು ಅವರು ಹೇಳಿದ್ದರು. ಇದು ಪರೋಕ್ಷವಾಗಿ ಭಾರತದ ವಿರುದ್ಧ ನೀಡಿದ ಹೇಳಿಕೆಯಾಗಿತ್ತು. ಅಷ್ಟೇ ಅಲ್ಲ, ಇದರ ಬೆನ್ನಿಗೇ ಕೇಂದ್ರ ಸಚಿವ ಕಿರಣ್ ರಿಜಿಜು ಅವರ ಜೊತೆಗೆ ಸಭೆ ನಡೆಸಿದ್ದ ಮಾಲ್ದೀವ್ಸ್ ಅಧ್ಯಕ್ಷ ಮುಯಿಝ್ಝು, ತನ್ನ ಸೇನಾ ಸಿಬ್ಬಂದಿಯನ್ನು ವಾಪಸ್ ಕರೆಸಿಕೊಳ್ಳುವಂತೆ ಮನವಿ ಮಾಡಿದ್ದರು. ಮಾಲ್ದೀವ್ಸ್ನ್ನು ಮನವೊಲಿಸಲು ಭಾರತ ತನ್ನ ಪ್ರಯತ್ನ ಮುಂದುವರಿಸಿದೆ. ಮಾಲ್ದೀವ್ಸ್ ಸಾಗರ ಪ್ರದೇಶದಲ್ಲಿ ಭಾರತದ ಸೇನಾ ಸಿಬ್ಬಂದಿ, ಭಾರತ ಪ್ರಾಯೋಜಿತ ರೇಡಾರ್ಗಳು ಹಾಗೂ ಸರ್ವೇಕ್ಷಣಾ ಯುದ್ಧ ವಿಮಾನಗಳನ್ನು ನಿರ್ವಹಣೆ ಮಾಡುತ್ತಾರೆ. ಭಾರತದ ಯುದ್ಧ ನೌಕೆಗಳೂ ಇಲ್ಲಿ ಪಹರೆ ಕಾಯುತ್ತವೆ. ನೂತನ ಅಧ್ಯಕ್ಷರು ಚೀನಾ ಜೊತೆಗೆ ಒಲವು ಹೊಂದಿದವರಾಗಿರುವುದರಿಂದ, ಭಾರತದ ಸೇನೆಯ ಕುರಿತಂತೆ ಅಸಮ್ಮತಿಯನ್ನು ಹೊಂದಿದ್ದಾರೆ ಎಂದು ಭಾರತ ಭಾವಿಸುತ್ತಿದೆ. ಆದುದರಿಂದ, ಲಕ್ಷದ್ವೀಪ ಭೇಟಿಯ ಸಂದರ್ಭದಲ್ಲಿ ಪ್ರಧಾನಿ ಮೋದಿ ‘ಮಾಲ್ದೀವ್ಸ್ಗೆ ಪರ್ಯಾಯವಾಗಿ ಲಕ್ಷದ್ವೀಪ’ವನ್ನು ಆರಿಸಲು ನೀಡಿದ ಹೇಳಿಕೆ ರಾಜಕೀಯ ಬಣ್ಣವನ್ನು ಪಡೆದುಕೊಂಡಿದೆ. ಪ್ರಧಾನಿ ಮೋದಿಯವರು ಇದನ್ನು ಉದ್ದೇಶಪೂರ್ವಕವಾಗಿ ಆಡಿದ್ದಾರೆ ಎಂದು ಅಪಾರ್ಥ ಮಾಡಿಕೊಂಡ ಅಲ್ಲಿನ ರಾಜಕೀಯ ನಾಯಕರು ಪರೋಕ್ಷವಾಗಿ ಮೋದಿಯ ವಿರುದ್ಧ ವ್ಯಂಗ್ಯವಾಡಿದ್ದಾರೆ. ಪ್ರಧಾನಿ ಮೋದಿಯವರ ರಾಜಕೀಯ ನಿಲುವಿನ ಬಗ್ಗೆ ಮಾಲ್ದೀವ್ಸ್ ರಾಜಕೀಯ ನಾಯಕರು ಮಾಡಿರುವ ಟೀಕೆಯನ್ನು ವೈಯಕ್ತಿಕವಾಗಿ ತೆಗೆದುಕೊಳ್ಳುವ ಅಗತ್ಯವಿತ್ತೇ? ಎನ್ನುವ ಪ್ರಶ್ನೆಯೂ ಇದರ ಜೊತೆಗೆ ಎದ್ದಿದೆ. ಭಾರತದ ಇಂತಹ ಬೇಜವಾಬ್ದಾರಿ ಹೇಳಿಕೆಗಳು, ನಿಲುವುಗಳು ಹಲವು ದೇಶಗಳ ಜೊತೆಗೆ ಸಂಬಂಧವನ್ನು ಹಳಸುವಂತೆ ಮಾಡಿವೆೆ. ಈ ಹಿನ್ನೆಲೆಯಲ್ಲಿ ಮಾಲ್ದೀವ್ಸ್ ಎನ್ನುವ ಪುಟ್ಟ ದ್ವೀಪದ ಜೊತೆಗೆ ಭಾರತದ ವರ್ತನೆ ಅತಿಯಾಗಿದೆ ಎಂದು ರಾಜಕೀಯ ವಿಶ್ಲೇಷಕರು ಅಭಿಪ್ರಾಯ ಪಡುತ್ತಾರೆ.
ಇಂದು ಪ್ರಧಾನಿ ಮೋದಿ ಮಾಲ್ದೀವ್ಸ್ ತನ್ನ ಬಗ್ಗೆ ಏನು ಹೇಳುತ್ತಿದೆ ಎನ್ನುವುದರ ಕಡೆಗೆ ಕಿವಿ ಗೊಡುವುದನ್ನು ಬಿಟ್ಟು, ಲಕ್ಷದ್ವೀಪದ ನಾಯಕರು, ಜನತೆ ತನ್ನ ಬಗ್ಗೆ ಏನು ಮಾತನಾಡುತ್ತಿದ್ದಾರೆ ಎನ್ನುವುದರ ಬಗ್ಗೆ ಗಮನ ನೀಡಬೇಕು. ಲಕ್ಷದ್ವೀಪದ ಚುಕ್ಕಾಣಿಯನ್ನು ಪ್ರವಾಸೋದ್ಯಮದ ಹೆಸರಿನಲ್ಲಿ ಕಾರ್ಪೊರೇಟ್ ದನಿಗಳ ಕೈಗೆ ಒಪ್ಪಿಸಲು ಕಳೆದ ನಾಲ್ಕೈದು ವರ್ಷಗಳಿಂದ ಕೇಂದ್ರ ಸರಕಾರ ಯೋಜನೆ ರೂಪಿಸುತ್ತಿದೆ. ಇದರ ವಿರುದ್ಧ ಲಕ್ಷದ್ವೀಪದ ಜನರು ಕೆಲವು ವರ್ಷಗಳಿಂದ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಪ್ರಫುಲ್ ಪಟೇಲ್ ಲಕ್ಷದ್ವೀಪದ ಉಸ್ತುವಾರಿ ನಿರ್ವಹಣಾಧಿಕಾರಿಯಾಗಿ ಅಧಿಕಾರ ವಹಿಸಿಕೊಂಡ ಬಳಿಕ ಲಕ್ಷದ್ವೀಪದ ಜನರು ಕೇಂದ್ರ ಸರಕಾರದ ವಿರುದ್ಧ ಭಾರೀ ಅಸಮಾಧಾನವನ್ನು ಹೊಂದಿದ್ದಾರೆ. ಲಕ್ಷದ್ವೀಪ ಅತ್ಯಂತ ಕಡಿಮೆ ಅಪರಾಧ ಪ್ರಕರಣಗಳಿಗಾಗಿ ದೇಶದಲ್ಲಿ ಗುರುತಿಸಿಕೊಂಡಿದೆ. ಅಲ್ಲಿನ ಜನರ ಅಗತ್ಯವಲ್ಲದೇ ಇದ್ದರೂ, ಸುಧಾರಣೆಯ ಹೆಸರಿನಲ್ಲಿ, ಗೂಂಡಾಕಾಯ್ದೆಯನ್ನು ಜಾರಿಗೊಳಿಸಿತು. ಕ್ರಿಮಿನಲ್ ಕಾನೂನುಗಳನ್ನು ಬಿಗಿಗೊಳಿಸಿತು. ಲಕ್ಷದ್ವೀಪ ಅಭಿವೃದ್ಧಿ ಪ್ರಾಧಿಕಾರ ಕರಡು, ಅಭಿವೃದ್ಧಿಯ ಹೆಸರಿನಲ್ಲಿ ಅಲ್ಲಿನ ಜನರನ್ನು ಒಕ್ಕಲೆಬ್ಬಿಸಲು ಅಧಿಕಾರವನ್ನು ನೀಡುತ್ತದೆ. ಆಸ್ತಿ ಹೊಂದುವ, ಉಳಿಸಿಕೊಳ್ಳುವ ದ್ವೀಪದ ಹಕ್ಕಿನ ಮೇಲೆ ಕೇಂದ್ರ ಸರಕಾರ ಹಸ್ತಕ್ಷೇಪ ನಡೆಸಿದೆ. ಲಕ್ಷದ್ವೀಪದಲ್ಲಿ ಮದ್ಯ ಮಾರಾಟ ನಿಷೇಧವಿತ್ತು. ಪ್ರವಾಸೋದ್ಯಮದ ಹೆಸರಿನಲ್ಲಿ ಲಕ್ಷದ್ವೀಪದಲ್ಲಿ ಮದ್ಯದ ಹೊಳೆಯನ್ನು ಹರಿಸಲು ಯೋಜನೆಯನ್ನು ರೂಪಿಸಿದೆ. ಅಷ್ಟೇ ಅಲ್ಲ, ನಿಸರ್ಗದ ಜೊತೆಗೆ ಅವಿನಾಭಾವ ಸಂಬಂಧವನ್ನು ಹೊಂದಿದ ಅವರ ಬದುಕಿಗೆ ಧರ್ಮದ ಹೆಸರಿನಲ್ಲಿ, ಜಾತಿಯ ಹೆಸರಿನಲ್ಲಿ ವಿಷವಿಕ್ಕಿದೆ. ಗೋಮಾಂಸ ನಿಷೇಧವನ್ನು ಮೊದಲು ಪ್ರಸ್ತಾವ ಮಾಡಿತು. ಅಲ್ಲಿನ ಮಧ್ಯಾಹ್ನದ ಊಟದ ವೇಳೆ ಮಕ್ಕಳಿಗೆ ನೀಡಲಾಗುತ್ತಿರುವ ಮಾಂಸಾಹಾರಕ್ಕೆ ನಿಷೇಧ ಹೇರಲು ಹೊರಟಿತು. ಸರಕಾರದ ಸರ್ವಾಧಿಕಾರಿ ನಿರ್ಧಾರಗಳ ವಿರುದ್ಧ ಲಕ್ಷದ್ವೀಪದ ಜನರು ಹಲವು ಬಾರಿ ಬೀದಿಗಿಳಿದು ಪ್ರತಿಭಟನೆ ಸಲ್ಲಿಸಿದ್ದಾರೆ. ವಿದೇಶಿಯರನ್ನು ಲಕ್ಷದ್ವೀಪಕ್ಕೆ ಆಹ್ವಾನಿಸುವ ನೆಪದಲ್ಲಿ, ಲಕ್ಷದ್ವೀಪದ ಜನರನ್ನು ಅಲ್ಲಿಂದ ಸ್ಥಳಾಂತರಿಸುವ ಪ್ರಯತ್ನವೊಂದು ನಡೆಯುತ್ತಿದೆ ಎನ್ನುವ ಭೀತಿ ಆ ದ್ವೀಪದ ಜನರದ್ದಾಗಿದೆ. ಮಾಲ್ದೀವ್ಸ್ನ ಟೀಕೆ, ವ್ಯಂಗ್ಯಕ್ಕಿಂತ, ಲಕ್ಷದ್ವೀಪದ ಜನರ ಆಕ್ರೋಶವನ್ನು, ಟೀಕೆಗಳನ್ನು ಕೇಂದ್ರ ಸರಕಾರ ಗಂಭೀರವಾಗಿ ತೆಗೆದುಕೊಳ್ಳಬೇಕಾಗಿದೆ. ಪ್ರವಾಸೋದ್ಯಮದ ಹೆಸರಿನಲ್ಲಿ ಸ್ಥಳೀಯರ ಬದುಕಿನ ಜೊತೆಗೆ ಚೆಲ್ಲಾಟವಾಡದಂತೆ ನೋಡಿಕೊಳ್ಳುವುದು ಪ್ರಧಾನಿ ಮೋದಿಯವರ ಕರ್ತವ್ಯವಾಗಿದೆ. ಇದೇ ಸಂದರ್ಭದಲ್ಲಿ ಮಾಲ್ದೀವ್ಸ್ನಂತಹ ಪುಟ್ಟ ದೇಶದೊಂದಿಗೆ ಭಾರತದ ವರ್ತನೆಯನ್ನು ವಿಶ್ವ ಗಮನಿಸುತ್ತಿದೆ ಎನ್ನುವ ಅರಿವು ನಮ್ಮನ್ನಾಳುವವರಿಗೂ ಇರಬೇಕು. ಮಾಲ್ದೀವ್ಸ್ ಜೊತೆಗೆ ಸಂಬಂಧ ಬಿಗಡಾಯಿಸಿದಂತೆ ಅದರ ಲಾಭವನ್ನು ಚೀನಾ ತನ್ನದಾಗಿಸಿಕೊಳ್ಳುತ್ತದೆ. ನೆರೆ ದೇಶಗಳಿಗೆ ಸಂಬಂಧಿಸಿದ ಹೇಳಿಕೆಗಳನ್ನು ನೀಡುವಾಗ ನಾಲಗೆ ಜಾರದಂತೆ ಪ್ರಧಾನಿ ಮೋದಿ ಜಾಗರೂಕತೆ ವಹಿಸಬೇಕಾಗಿದೆ.