ಜೈ ಕಿಸಾನ್ ಘೋಷಣೆಗೆ ಸರಕಾರ ಕಿವಿಯಾಗಲಿ
Photo: PTI
ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ
ಬೆಂಬಲ ಬೆಲೆಯೂ ಸೇರಿದಂತೆ ಹಲವು ಬೇಡಿಕೆಗಳನ್ನು ಮುಂದಿಟ್ಟು ದೇಶದ ಡಿಹರ್ಯಾಣ-ಪಂಜಾಬ್ ಗಡಿಯಲ್ಲಿ ರೈತರು ನಡೆಸುತ್ತಿರುವ ಪ್ರತಿಭಟನೆ ಮತ್ತೆ ತೀವ್ರ ಸ್ವರೂಪವನ್ನು ಪಡೆದುಕೊಂಡಿದೆ. ಒಂದೆಡೆ ರೈತರ ಬೇಡಿಕೆಯನ್ನು ಮನ್ನಿಸುತ್ತೇವೆ ಎನ್ನುತ್ತಲೇ ಸರಕಾರ ಬೆನ್ನ ಹಿಂದೆ ರೈತರ ಮೇಲೆ ಗುಂಡು ಹಾರಿಸಿದೆ. ಹರ್ಯಾಣ ಪೊಲೀಸರು ಹಾರಿಸಿದ ಗುಂಡಿಗೆ ಒಬ್ಬ ಯುವ ರೈತ ಮೃತಪಟ್ಟಿದ್ದಾರೆ. ನೂರಾರು ಪ್ರತಿಭಟನಾಕಾರರು ಗಾಯಗೊಂಡಿದ್ದಾರೆ. ರಬ್ಬರ್ ಗುಂಡು ಹಾರಿಸಿದ್ದೇವೆ ಎಂದು ಪೊಲೀಸರು ಹೇಳುತ್ತಿದ್ದಾರೆ. ಗುಂಡು ರೈತನ ತಲೆಯನ್ನು ಪ್ರವೇಶಿಸಿದೆ. ಇದರ ಬೆನ್ನಿಗೇ ಅಶ್ರುವಾಯು ಮತ್ತು ಲಾಠಿಚಾರ್ಜ್ಗಳನ್ನು ನಡೆಸಿದ್ದಾರೆ. ಶಾಂತವಾಗಿ ನಡೆಯುತ್ತಿರುವ ಚಳವಳಿಯನ್ನು ಪ್ರಚೋದಿಸಿ ಅವರನ್ನು ಹಿಂಸೆಗಿಳಿಯುವಂತೆ ಪೊಲೀಸರು ಪ್ರಯತ್ನಿಸುತ್ತಿದ್ದಾರೆಯೇ ಎನ್ನುವ ಅನುಮಾನ ಕಾಡುತ್ತದೆ. ಪಂಜಾಬ್ ಪೊಲೀಸರು ಹೇಳುವಂತೆ, ಹರ್ಯಾಣದ ಪೊಲೀಸರು ಅನಗತ್ಯವಾಗಿ ಮಧ್ಯ ಪ್ರವೇಶಿಸಿ ರೈತರ ಕಡೆಗೆ ಗುಂಡು ಹಾರಿಸಿದ್ದಾರೆ. ಉಭಯ ರಾಜ್ಯಗಳ ಪೊಲೀಸರ ನಡುವೆ ಸಮನ್ವಯದ ಕೊರತೆ ಕೂಡ ಈ ಮೂಲಕ ಬೆಳಕಿಗೆ ಬಂದಿದೆ. ಪಂಜಾಬ್ ಪೊಲೀಸರು ರೈತರ ಪರವಾಗಿ ಮೃದು ನೀತಿ ಅನುಸರಿಸುತ್ತಿದ್ದರೆ, ಹರ್ಯಾಣದ ಪೊಲೀಸರು ಉದ್ದೇಶಪೂರ್ವಕವಾಗಿ ಪ್ರತಿಭಟನಾಕಾರರ ಮೇಲೆ ದೌರ್ಜನ್ಯಗಳನ್ನು ಎಸಗುವ ಆರೋಪಗಳು ಕೇಳಿ ಬರುತ್ತಿವೆ. ಎಂದಿನಂತೆಯೇ ಹೋರಾಟಗಾರರನ್ನು ಭಯೋತ್ಪಾದಕರು, ಖಾಲಿಸ್ತಾನಿಯರು ಎಂದೆಲ್ಲ ಕರೆದು ಹೋರಾಟವನ್ನು ಮಟ್ಟ ಹಾಕಲು ಸರಕಾರ ಪ್ರಯತ್ನಿಸುತ್ತಿದೆ. ಇದು ನಿಜಕ್ಕೂ ಆಘಾತಕಾರಿ. ಒಂದು ಕಾಲದಲ್ಲಿ ಲಾಲ್ ಬಹದ್ದೂರ್ ಶಾಸ್ತ್ರಿ ‘ಜೈ ಜವಾನ್-ಜೈ ಕಿಸಾನ್’ ಎಂಬ ಘೋಷ ವಾಕ್ಯದಡಿಯಲ್ಲಿ ದೇಶ ಮುನ್ನಡಿಯಿಡಬೇಕು ಎಂದು ಬಯಸಿದ್ದರು. ಇಂದು ಸೈನಿಕರನ್ನು ರೈತರ ವಿರುದ್ಧ ಬಳಸಿ ಅವರ ಹೋರಾಟವನ್ನು ದಮನಿಸಲು ಸರಕಾರ ಮುಂದಾಗಿದೆ. ರೈತರ ದಮನವೆಂದರೆ ಅಂತಿಮವಾಗಿ ಈ ದೇಶದ ಆರ್ಥಿಕತೆಯ ದಮನವೆನ್ನುವುದನ್ನು ಅರಿತ ಎಲ್ಲರೂ ಒಂದಾಗಿ ದೇಶದ ರೈತರ ಪರವಾಗಿ ನಿಲ್ಲು ವ ಸಮಯ ಬಂದಿದೆ.
ರಾಮಮಂದಿರವನ್ನು ಮುಂದಿಟ್ಟುಕೊಂಡು ತನ್ನನ್ನು ತಾನು ಹಿಂದೂಪರವೆಂದು ಘೋಷಿಸಿಕೊಳ್ಳುತ್ತಿರುವ ಕೇಂದ್ರ ಸರಕಾರ ಪಂಜಾಬ್-ಹರ್ಯಾಣ ಗಡಿಯಲ್ಲಿ ಬೀಡು ಬಿಟ್ಟಿರುವ ರೈತರಲ್ಲಿ ಬಹುಸಂಖ್ಯಾತರು ಹಿಂದೂಗಳು ಎನ್ನುವುದನ್ನು ಮರೆಯಬಾರದು. ಮಂದಿರಗಳು ಅನ್ನವನ್ನು ಕೊಡುವುದಿಲ್ಲ. ರೈತರು ಉತ್ತು ಬಿತ್ತಿದರೆ ಮಾತ್ರ ದೇಶದ ಆಹಾರ ಭದ್ರತೆಯನ್ನು ಉಳಿಸಿಕೊಳ್ಳಬಹುದು. ರೈತರ ಹಿತಾಸಕ್ತಿಗಳನ್ನು ಕಾರ್ಪೊರೇಟ್ ಶಕ್ತಿಗಳ ಕೈಗೆ ಒಪ್ಪಿಸಿದರೆ ಮುಂದೊಂದು ದಿನ ತುತ್ತು ಅನ್ನಕ್ಕಾಗಿ ದೇಶದ ಜನರು ಅದಾನಿ, ಅಂಬಾನಿಗಳ ಕಡೆಗೆ ಕೈಚಾಚಬೇಕಾದಂತಹ ದೈನೇಸಿ ಸ್ಥಿತಿ ನಿರ್ಮಾಣವಾಗಬಹುದು. ಈ ನಿಟ್ಟಿನಲ್ಲಿ ರೈತರ ಬೇಡಿಕೆಗಳು ಈ ದೇಶದ ಬೇಡಿಕೆಗಳು ಕೂಡ ಆಗಿವೆ. ಈ ನಿಟ್ಟಿನಲ್ಲಿ ರೈತರ ಎಲ್ಲ ಬೇಡಿಕೆಗಳಿಗೆ ತೆರೆದ ಮನಸ್ಸಿನಿಂದ ಸ್ಪಂದಿಸುವುದು ಸರಕಾರದ ಕರ್ತವ್ಯವಾಗಿದೆ. ಆದರೆ ಸರಕಾರ ಗೋಲಿಬಾರ್, ಲಾಠಿಚಾರ್ಜ್ ಮೂಲಕ ರೈತರ ಪ್ರತಿಭಟನೆಯನ್ನು ದಮನಿಸಲು ಮುಂದಾಗಿದೆ.
‘ಬೆಂಬಲ ಬೆಲೆಯನ್ನು ನಿಗದಿ ಪಡಿಸಲು ಸಿದ್ಧ. ಆದರೆ ರಾತ್ರೋ ರಾತ್ರಿ ಕಾನೂನನ್ನು ಜಾರಿಗೆ ತರಲು ಸಾಧ್ಯವಿಲ್ಲ’ ಎಂದು ಸರಕಾರ ಹೇಳುತ್ತಿದೆ. ಆದರೆ ಈ ಪ್ರತಿಭಟನೆ ರಾತ್ರೋರಾತ್ರಿ ನಡೆದಿರುವುದು ಅಲ್ಲ. ಸರಕಾರ ಜಾರಿಗೆ ತರಲು ಉದ್ದೇಶಿದ್ದ ಮೂರು ಕೃಷಿ ಕಾಯ್ದೆಗಳ ವಿರುದ್ಧ ಸುಮಾರು ಒಂದು ವರ್ಷಗಳ ಕಾಲ ದೇಶದ ರೈತರು ಪ್ರತಿಭಟನೆ ನಡೆಸಿರುವುದನ್ನು ಪ್ರಧಾನಿ ಮೋದಿಯವರು ಮರೆತಿದ್ದಾರೆ. ಪ್ರತಿಭಟನೆಯನ್ನು ಬಗ್ಗು ಬಡಿಯಲು ಸಾಮ, ದಾನ, ಭೇದ, ದಂಡ ಹೀಗೆ ಹಲವು ಪ್ರಯೋಗಗಳನ್ನು ಸರಕಾರ ಮಾಡಿತ್ತು. ಆದರೆ ರೈತರು ಮಣಿಯಲಿಲ್ಲ. ಅವರನ್ನು ಉಗ್ರರು ಎಂದು ಬಿಂಬಿಸಿ ಜೈಲಿಗೆ ತಳ್ಳುವ ಪ್ರಯತ್ನಿಸಿತು. ಹೊಸದಿಲ್ಲಿಯಲ್ಲಿ ರೈತರು ಮತ್ತು ಸರಕಾರದ ನಡುವೆ ಸಂಘರ್ಷ ತಾರಕಕ್ಕೇರಿತು. ರೈತರು ಮಣಿಯುವವರು ಅಲ್ಲ ಎಂದು ಗೊತ್ತಾದ ಬಳಿಕ ಪ್ರಧಾನಿ ಮೋದಿಯವರು ಮಾತುಕತೆಗೆ ಮುಂದಾದರು. ಕೃಷಿ ನೀತಿಗಳನ್ನು ಹಿಂದೆಗೆದರು. ಈ ಸಂದರ್ಭದಲ್ಲಿ ಬೆಂಬಲ ಬೆಲೆ ನಿಗದಿಗೆ ಒಂದು ಸಮಿತಿಯನ್ನು ರಚಿಸಲಾಯಿತು. ಬೆಂಬಲ ಬೆಲೆಯನ್ನು ನಿಧರ್ರಿಸಿ ಈ ಬಗ್ಗೆ ವರದಿಯನ್ನು ಕೊಡುವುದು ಸಮಿತಿಯ ಗುರಿಯಾಗಿತ್ತು. ಆದರೆ ಸರಕಾರದ ನೀತಿಗಳ ಪರ ಒಲವುಳ್ಳವರೇ ಸಮಿತಿಯೊಳಗಿದ್ದ ಪರಿಣಾಮ ಕಳೆದೆರಡು ವರ್ಷಗಳಿಂದ ಸಮಿತಿ ವ್ಯರ್ಥ ಕಾಲ ಹರಣ ಮಾಡಿತು. ರೈತರು ಇದೀಗ ಮತ್ತೆ ಬೀದಿಗಿಳಿದಿರುವ ಸಂದರ್ಭದಲ್ಲಿ, ಬೆಂಬಲ ಬೆಲೆಯ ಬಗ್ಗೆ ಸರಕಾರ ಯೋಚಿಸುತ್ತಿದೆ. ಕಳೆದ ರವಿವಾರ ಸರಕಾರ ರೈತರ ಜೊತೆಗೆ ಬೆಂಬಲ ಬೆಲೆಯ ಕುರಿತಂತೆ ಮಾತುಕತೆ ನಡೆಸಿತಾದರೂ ಅದು ಕಾಟಾಚಾರದ ಮಾತುಕತೆಯಾಗಿತ್ತು. ಹತ್ತಿ, ಮೆಕ್ಕೆಜೋಳ, ತೊಗರಿ, ಮಸೂರ, ಉದ್ದು ಹೀಗೆ ಐದು ಬೆಳೆಯನ್ನು ಐದು ವರ್ಷಗಳ ಅವಧಿಗೆ ಖರೀದಿಸುವ ಪ್ರಸ್ತಾವವನ್ನು ಮುಂದಿಟ್ಟಿದೆ. ಇದು ರೈತರ ಸಮಸ್ಯೆಗಳಿಗೆ ಸಮಗ್ರ ಪರಿಹಾರವನ್ನು ನೀಡುವುದಿಲ್ಲ ಎನ್ನುವುದು ಸರಕಾರಕ್ಕೂ ಗೊತ್ತಿದೆ. ಎಲ್ಲ 23 ಬೆಳೆಗಳಿಗೆ ನ್ಯಾಯ ಸಮಸಮ್ಮತ ಬೆಂಬಲ ಬೆಲೆಯನ್ನು ನೀಡಬೇಕು. ಬರೇ ಐದು ವರ್ಷಗಳಿಗೆ ಇದು ಸೀಮಿತವಾಗಬಾರದು ಎನ್ನುವುದು ರೈತರ ಆಗ್ರಹವಾಗಿದೆ.
ಕಾರ್ಪೊರೇಟ್ ದೊರೆಗಳಿಗೆ ತೆರಿಗೆ ವಿನಾಯಿತಿಯೂ ಸೇರಿದಂತೆ ಸಾವಿರಾರು ಕೋಟಿ ರೂಪಾಯಿಗಳ ಸವಲತ್ತುಗಳನ್ನು ನೀಡುತ್ತಿರುವ ಸರಕಾರ ರೈತರ ಪರವಾಗಿ ಕಾನೂನು ಜಾರಿಗೊಳಿಸುವ ಸಂದರ್ಭದಲ್ಲಿ ಹಿಂಜರಿಯುತ್ತಿರುವುದು ಯಾಕೆ ಎನ್ನುವುದು ಗುಟ್ಟಾಗಿಯೇನೂ ಉಳಿದಿಲ್ಲ. ದೇಶದ ಕೃಷಿ ವ್ಯವಸ್ಥೆಯನ್ನು ಹಂತ ಹಂತವಾಗಿ ಕಾರ್ಪೊರೇಟೀಕರಣಗೊಳಿಸಲು ಸರಕಾರ ಮುಂದಾಗಿದೆ. ಈ ಹಿನ್ನೆಲೆಯಲ್ಲಿ ಮೂರು ಕೃಷಿ ನೀತಿಗಳನ್ನು ಜಾರಿಗೊಳಿಸಲು ಮುಂದಾಗಿತ್ತು. ಸರಕಾರದ ಹುನ್ನಾರವನ್ನು ಅರಿತ ರೈತರು ಸಾಮೂಹಿಕವಾಗಿ ಬೀದಿಗಿಳಿದರು. ಅಂತಿಮವಾಗಿ ಸರಕಾರ ಕೃಷಿ ನೀತಿಗಳನ್ನು ಹಿಂದಕ್ಕೆ ಪಡೆಯುವ ಸೂಚನೆಯನ್ನು ನೀಡಿತು. ಆದರೆ ಅದೇನೂ ಶಾಶ್ವತ ನಿರ್ಧಾರವಾಗಿರಲಿಲ್ಲ. ರೈತರನ್ನು ತಕ್ಷಣಕ್ಕೆ ಸಮಾಧಾನಿಸುವ ಉದ್ದೇಶವನ್ನಷ್ಟೇ ಅದು ಹೊಂದಿತ್ತು. ಮತ್ತೆ ಹಿಂಬಾಗಿಲಲ್ಲಿ ಕೃಷಿ ನೀತಿಯನ್ನು ಜಾರಿಗೆ ತರುವುದು ಮತ್ತು, ರೈತರ ಬೆಳೆಯ ಬೆಲೆ ನಿರ್ಧಾರವನ್ನು ಕಾರ್ಪೊರೇಟ್ ಶಕ್ತಿಗಳ ಕೈಗೆ ನೀಡುವುದು ಸರಕಾರದ ಉದ್ದೇಶ. ಇದೀಗ ಬೆಂಬಲ ಬೆಲೆ ಜಾರಿಗೆ ಪೂರ್ಣವಾಗಿ ಒಪ್ಪಿಕೊಂಡದ್ದೇ ಆದರೆ ಮುಂದಿನ ದಿನಗಳಲ್ಲಿ ಸರಕಾರ ಇಕ್ಕಟ್ಟಿಗೆ ಸಿಲುಕಿಕೊಳ್ಳುತ್ತದೆ. ಕಾರ್ಪೊರೇಟ್ ಶಕ್ತಿಗಳಿಗೆ ರೈತರ ಮೇಲೆ ನಿಯಂತ್ರಣ ಕಷ್ಟ ಸಾಧ್ಯವಾಗುತ್ತದೆ. ಆದುದರಿಂದಲೇ, ಸರಕಾರ ಬೆಂಬಲ ಬೆಲೆಯ ವಿಷಯದಲ್ಲಿ ಮಾತುಕತೆ ನಡೆಸಿದಂತೆ ನಟಿಸುತ್ತಿದೆಯೇ ಹೊರತು, ಪೂರ್ಣ ಮನಸ್ಸಿನಿಂದ ರೈತರ ಬೇಡಿಕೆಗಳಿಗೆ ಕಿವಿಯಾಗಲು ಸಿದ್ಧವಿಲ್ಲ.
ಹಿಂದಿನ ರೈತ ಚಳವಳಿಯ ಸಂದರ್ಭದಲ್ಲಿ ಸರಕಾರ ಮಾಡಿದ ತಪ್ಪುಗಳಿಂದಾಗಿ ಆದ ಅನಾಹುತಗಳನ್ನು ಸ್ಮರಿಸಿಕೊಂಡು ಈ ಬಾರಿ ಪ್ರಧಾನಿ ಮೋದಿಯವರು ಹೆಜ್ಜೆ ಮುಂದಿಡಬೇಕು. ಈಗಾಗಲೇ ಸರಕಾರದ ತಪ್ಪು ನಡೆಯಿಂದಾಗಿ ರೈತನೊಬ್ಬ ಮೃತಪಟ್ಟಿದ್ದಾರೆ. ನೂರಾರು ರೈತರು ಗಾಯಗೊಂಡಿದ್ದಾರೆ. ಇದು ರೈತರನ್ನು ರೊಚ್ಚಿಗೆಬ್ಬಿಸಿದೆ ಮಾತ್ರವಲ್ಲ ಹೋರಾಟಕ್ಕೆ ಇನ್ನಷ್ಟು ಕಾವು ನೀಡಿದೆ. ದೇಶಾದ್ಯಂತ ಬೇರೆ ಬೇರೆ ಸಂಘಟನೆಗಳು ರೈತರ ಬೇಡಿಕೆಗಳಿಗೆ ಕೈ ಜೋಡಿಸುತ್ತಿವೆ. ಕರ್ನಾಟಕ ಸರಕಾರ ರೈತರ ಬೇಡಿಕೆಯನ್ನು ಈಡೇರಿಸಲು ಆಗ್ರಹಿಸಿ ವಿಧಾನಸಭೆಯಲ್ಲಿ ನಿರ್ಣಯವನ್ನು ಅಂಗೀಕರಿಸಿದೆ. ಇತರ ರಾಜ್ಯ ಸರಕಾರಗಳೂ ರೈತರ ಪರವಾಗಿ ನಿರ್ಣಯಗಳನ್ನು ತೆಗೆದುಕೊಳ್ಳಲು ಮುಂದಾಗಿವೆ. ಪರಿಸ್ಥಿತಿ ಕೈ ಮೀರುವ ಮೊದಲು ಸರಕಾರ ಎಚ್ಚೆತ್ತುಕೊಳ್ಳಬೇಕು. ರೈತರಿಲ್ಲದೆ ಸರಕಾರವೂ ಇಲ್ಲ, ದೇಶವೂ ಇಲ್ಲ ಎನ್ನುವ ವಾಸ್ತವವನ್ನು ಅರ್ಥ ಮಾಡಿಕೊಳ್ಳಬೇಕು. ಅವರ ಬೇಡಿಕೆಗಳನ್ನು ಈಡೇರಿಸುವುದು ತನ್ನ ಕರ್ತವ್ಯ ಎಂದು ಬಗೆದು ಅಹವಾಲುಗಳಿಗೆ ಸರಕಾರ ಕಿವಿಯಾಗಬೇಕು. ರೈತ ವಿರೋಧಿ ಸರಕಾರ ಅಂತಿಮವಾಗಿ ದೇಶವಿರೋಧಿ ಸರಕಾರವೂ ಹೌದು ಎನ್ನುವುದನ್ನು ಪ್ರಧಾನಿ ಮೋದಿ ಮರೆಯಬಾರದು.