ತುರ್ತು ಪರಿಸ್ಥಿತಿಯ ಕನ್ನಡಿಯಲ್ಲಿ ಪ್ರಧಾನಿ ಮುಖ ನೋಡಿಕೊಳ್ಳಲಿ
ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ
‘ತುರ್ತು ಪರಿಸ್ಥಿತಿಯನ್ನು ಹೇರಿದ್ದವರಿಗೆ ನಮ್ಮ ಸಂವಿಧಾನದಮೇಲಿನ ತಮ್ಮ ಪ್ರೀತಿಯನ್ನು ಹೇಳಿಕೊಳ್ಳುವ ಯಾವುದೇ ಹಕ್ಕು ಇಲ್ಲ. ಇವರು ಹಲವು ಸಂದರ್ಭಗಳಲ್ಲಿ 356ನೇ ವಿಧಿಯನ್ನು ಹೇರಿದ್ದ,ಪತ್ರಿಕಾ ಸ್ವಾತಂತ್ರ್ಯವನ್ನು ನಾಶಗೊಳಿಸಲು ಮಸೂದೆಯನ್ನು ತಂದಿದ್ದ ಮತ್ತು ಒಕ್ಕೂಟವಾದವನ್ನು ನಾಶಗೊಳಿಸಿ ಸಂವಿಧಾನದ ಪ್ರತಿಯೊಂದೂ ಅಂಶವನ್ನು ಉಲ್ಲಂಘಿಸಿದ್ದ ಅದೇ ಜನರಾಗಿದ್ದಾರೆ’ ತುರ್ತು ಪರಿಸ್ಥಿತಿಯ 49ನೇ ‘ಸಂಭ್ರಮ’ವನ್ನು ಪ್ರಧಾನಿ ಮೋದಿಯವರು ಮೇಲಿನ ಹೇಳಿಕೆಯ ಮೂಲಕ ಆಚರಿಸಿಕೊಂಡಿದ್ದಾರೆ. ಕಾಂಗ್ರೆಸನ್ನು ತೀರಾ ಮುಜುಗರಕ್ಕೆ ಸಿಲುಕಿಸಲು ಇದೊಂದು ಅಪರೂಪದ ಅವಕಾಶವಾಗಿರುವುದರಿಂದ, ಬಿಜೆಪಿ ಪ್ರತಿ ವರ್ಷ ತುರ್ತು ಪರಿಸ್ಥಿತಿ ಹೇರಿದ ದಿನವನ್ನು ಸಂಭ್ರಮದಂತೆ ಆಚರಿಸುತ್ತಾ ಬರುತ್ತಿದೆ. ಇದಕ್ಕೆ ಹೊರತು ಪಡಿಸಿ, ಈ ದೇಶದ ಪ್ರಜಾಸತ್ತೆ, ಅಭಿವ್ಯಕ್ತಿ ಸ್ವಾತಂತ್ರ್ಯದ ಪ್ರೀತಿಯಿಂದ ಬಿಜೆಪಿ ತುರ್ತು ಪರಿಸ್ಥಿತಿಯನ್ನು ನೆನಪಿಸಿಕೊಳ್ಳುತ್ತಿಲ್ಲ ಎನ್ನುವುದು ದೇಶಕ್ಕೂ ಚೆನ್ನಾಗಿ ಗೊತ್ತಿದೆ. ಕಳೆದ ಶತಮಾನದ 70ರ ದಶಕದಲ್ಲಿ ಇಂದಿರಾಗಾಂಧಿ ಈ ಪ್ರಜಾಸತ್ತೆಯನ್ನು ಅಧಿಕೃತವಾಗಿ ಅಮಾನತಿನಲ್ಲಿಟ್ಟು ದೇಶದ ಮೇಲೆ ತುರ್ತು ಪರಿಸ್ಥಿತಿಯನ್ನು ಹೇರಿದ್ದರೆ, ಪ್ರಧಾನಿ ನರೇಂದ್ರ ಮೋದಿಯವರು ಪ್ರಜಾಸತ್ತೆಯ ಮುಖವಾಡದಲ್ಲೇ ಹಲವು ಬಾರಿ ಈ ದೇಶದ ಮೇಲೆ ಅಘೋಷಿತ ತುರ್ತು ಪರಿಸ್ಥಿತಿಯನ್ನು ಹೇರುತ್ತಾ ಬಂದಿದ್ದಾರೆ.
ಇಂದಿರಾಗಾಂಧಿ ಹೇರಿದ ತುರ್ತು ಪರಿಸ್ಥಿತಿಯನ್ನು ದೇಶ ಸಮರ್ಥವಾಗಿ ಎದುರಿಸಿತ್ತು. ಈ ಸಂದರ್ಭದಲ್ಲಿ ನೂರಾರು ರಾಜಕೀಯ ನಾಯಕರು ಜೈಲು ಸೇರಿದ್ದರು. ಆದರೆ ತುರ್ತು ಪರಿಸ್ಥಿತಿಯ ವಿರುದ್ಧ ಅವರು ನಡೆಸಿದ ಹೋರಾಟ ಅಂತಿಮವಾಗಿ, ಅವರನ್ನು ದೇಶದ ರಾಜಕೀಯದ ಕೇಂದ್ರ ಸ್ಥಾನದಲ್ಲಿ ತಂದು ನಿಲ್ಲಿಸಿತು. ಸುಮಾರು 20 ತಿಂಗಳ ತುರ್ತು ಪರಿಸ್ಥಿತಿ ಈ ದೇಶದ ಜನತೆಯ ಹಲವು ಹಕ್ಕುಗಳನ್ನು ನಿಯಂತ್ರಿಸಿತ್ತೇನೋ ನಿಜ. ಪತ್ರಕರ್ತರು ತಮ್ಮ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಕಳೆದುಕೊಂಡಿದ್ದರು. ರಾಜಕೀಯ ನಾಯಕರು, ಇಂದಿರಾ ಸರಕಾರದ ವಿರುದ್ಧ ಸಾರ್ವಜನಿಕವಾಗಿ ಟೀಕಿಸುವಂತಿರಲಿಲ್ಲ. ಇದು ಈ ದೇಶದ ಮೇಲ್‌ಸ್ತರದ ಜನರನ್ನು ಕಾಡಿದಷ್ಟು ಬಡವರನ್ನು ಕಾಡಲಿಲ್ಲ. ಆದರೆ ಇದೇ ಸಂದರ್ಭದಲ್ಲಿ, ತುರ್ತು ಪರಿಸ್ಥಿತಿಯ ಲಾಭವನ್ನು ಪಡೆದು ಭೂಸುಧಾರಣೆ ಕಾಯ್ದೆಯನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಲು ಕೆಲವು ನಾಯಕರು ಪ್ರಯತ್ನಿಸಿದರು. ಈ ದೇಶದ ಜಮೀನ್ದಾರರಿಗೆ ಮೂಗುದಾರ ಹಾಕಲು ಈ ಸಂದರ್ಭವನ್ನು ಬಳಸಿಕೊಳ್ಳಲಾಯಿತು. ಸಂಜಯ್ ಗಾಂಧಿಯ ನೇತೃತ್ವದಲ್ಲಿ ಹಲವು ಪ್ರಮಾದಗಳೂ ನಡೆದವು. ತುರ್ತುಪರಿಸ್ಥಿತಿಯ ದಿನಗಳು ಈ ದೇಶಕ್ಕೆ ಎಂದಿಗೂ ಒಂದು ಅತ್ಯುತ್ತಮ ಪಾಠವಾಗಿದೆ. ಸಂವಿಧಾನಕ್ಕಿಂತ ಮೇಲೆ ಎನ್ನುವ ಅಮಲು ರಾಜಕೀಯ ನಾಯಕನೊಬ್ಬನ ತಲೆಗೇರಿದರೆ ಅದರ ಪರಿಣಾಮ ಏನಾಗಬಹುದು ಎನ್ನುವುದಕ್ಕೆ ತುರ್ತು ಪರಿಸ್ಥಿತಿ ಅತ್ಯುತ್ತಮ ಉದಾಹರಣೆ. ವಿಪರ್ಯಾಸವೆಂದರೆ, ಕಳೆದ 10 ವರ್ಷಗಳ ಮೋದಿ ಆಡಳಿತದಲ್ಲಿ ತುರ್ತು ಪರಿಸ್ಥಿತಿಯ ಸಕಲ ಲಕ್ಷಣಗಳಿದ್ದವು. ಪ್ರಜಾಸತ್ತೆಯ ಹೆಸರಿನಲ್ಲೇ ಈ ಅವಧಿಯಲ್ಲಿ ಸಂವಿಧಾನದ ಬೆನ್ನಿಗೆ ಹಲವು ಬಾರಿ ಚೂರಿ ಹಾಕಲಾಗಿದೆ. ಬಹುಶಃ ಇಂದಿರಾಗಾಂಧಿಯ ಘೋಷಿತ ತುರ್ತು ಪರಿಸ್ಥಿತಿಗಿಂತ ಈ ಅಘೋಷಿತ ತುರ್ತು ಪರಿಸ್ಥಿತಿಯೇ ಹೆಚ್ಚು ಭಯಾನಕವಾಗಿತ್ತು.
ತುರ್ತು ಪರಿಸ್ಥಿತಿಯನ್ನು ಖಂಡಿಸುತ್ತಾ ಪ್ರಧಾನಿ ಮೋದಿಯವರು ಪತ್ರಿಕಾಸ್ವಾತಂತ್ರ್ಯದ ಬಗ್ಗೆ ಮಾತನಾಡಿದ್ದಾರೆ. ಆದರೆ ಕಳೆದ ಹತ್ತು ವರ್ಷಗಳಲ್ಲಿ ದೇಶದ ಪತ್ರಿಕಾ ಸ್ವಾತಂತ್ರ್ಯದ ಗತಿ ಹೇಗಿತ್ತು? ವಿಶ್ವ ಪತ್ರಿಕಾ ಸ್ವಾತಂತ್ರ್ಯದ ಸೂಚ್ಯಂಕದಲ್ಲಿ ಭಾರತ ಕಳೆದ ಹತ್ತು ವರ್ಷಗಳಲ್ಲಿ ಅತ್ಯಂತ ಕಳಪೆ ಸಾಧನೆಯನ್ನು ಮಾಡಿದೆ. 2022ರಲ್ಲಿ ಇದು 150ಕ್ಕೆ ಇಳಿದಿತ್ತು. 2023ರಲ್ಲಿ ಪತ್ರಿಕಾ ಸ್ವಾತಂತ್ರ್ಯದ ಸೂಚ್ಯಂಕ 161ಕ್ಕೆ ತಲುಪಿದೆ. ವಿಶ್ವ ಪ್ರಜಾಪ್ರಭುತ್ವದ ಸೂಚ್ಯಂಕದಲ್ಲೂ ಭಾರತ ವರ್ಷದಿಂದ ವರ್ಷಕ್ಕೆ ಕಳಪೆ ಸಾಧನೆ ಮಾಡುತ್ತಿದೆ. 2019ರಲ್ಲಿ ಇದು ದಾಖಲೆಯ 10 ಸ್ಥಾನ ಕುಸಿತ ಕಂಡಿತು. ಭಾರತದ ಪ್ರಜಾಪ್ರಭುತ್ವ ಅತ್ಯಂತ ದೋಷ ಪೂರಿತ ಪ್ರಜಾಪ್ರಭುತ್ವವಾಗಿ ವಿಶ್ವದಲ್ಲಿ ಗುರುತಿಸಲ್ಪಡುತ್ತಿದೆ. ಕಳೆದ ಹತ್ತು ವರ್ಷಗಳಲ್ಲಿ ದೇಶದ ಪತ್ರಿಕಾ ಸ್ವಾತಂತ್ರ್ಯ ಬೇರೆ ಬೇರೆ ರೀತಿಯಲ್ಲಿ ದಮನವಾಗಿದೆ. ಒಂದೆಡೆ ಮಾಧ್ಯಮಗಳು ಖರೀದಿಸಲ್ಪಡುತ್ತಿದೆ. ಪರಿಣಾಮವಾಗಿ ಇಂದು ಸರಕಾರದ ವಿರುದ್ಧ ಧ್ವನಿಯೆತ್ತುವ ಮಾಧ್ಯಮಗಳೇ ಇಲ್ಲ ಎನ್ನುವಂತಾಗಿದೆ. ಈ ಮೂಲಕ ಇಂದು ತನ್ನೆಲ್ಲ ಅಕ್ರಮಗಳನ್ನು ಜನರಿಂದ ಸರಕಾರ ಮುಚ್ಚಿಡುತ್ತಿದೆ. ಸರಕಾರದ ವಿರುದ್ಧ ಮಾತನಾಡುವ ಮಾಧ್ಯಮಗಳನ್ನು ಬೆದರಿಸಲಾಗುತ್ತಿದೆ. ಯಾವುದೇ ತುರ್ತು ಪರಿಸ್ಥಿತಿ ಜಾರಿಯಲ್ಲಿಲ್ಲದೇ ಇದ್ದರೂ ನೂರಾರು ಪತ್ರಕರ್ತರು ಸರಕಾರದಿಂದ ಪ್ರಕರಣಗಳನ್ನು ಎದುರಿಸುತ್ತಿದ್ದಾರೆ. ಹಲವರು ಮಾಡದ ತಪ್ಪಿಗಾಗಿ ಜೈಲುವಾಸ ಅನುಭವಿಸುತ್ತಿದ್ದಾರೆ. ನೂರಾರು ಸಾಮಾಜಿಕ ಹೋರಾಟಗಾರರು ಜೈಲಿನಲ್ಲಿದ್ದಾರೆ. ಜನಸಾಮಾನ್ಯರ ಪರವಾಗಿ ಮಾತನಾಡುತ್ತಿದ್ದ ಕಾರಣಕ್ಕಾಗಿ ಫಾದರ್ ಸ್ಟ್ಯಾನ್ ಸ್ವಾಮಿಯವರು ವಿಚಾರಣೆ ಎದುರಿಸುತ್ತಲೇ ಜೈಲಿನಲ್ಲೇ ಮೃತಪಟ್ಟರು. ತೀವ್ರ ಅನಾರೋಗ್ಯ ಎದುರಿಸುತ್ತಿದ್ದರೂ ಅವರಿಗೆ ಸೂಕ್ತ ಚಿಕಿತ್ಸೆ ಸಿಗಲಿಲ್ಲ. ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ಹೇಗೆ ಪ್ರತಿಭಟಿಸಿದ ವಿದ್ಯಾರ್ಥಿಗಳ ಮೇಲೆ ದಮನಗಳು ನಡೆದವೋ, ಮೋದಿ ಆಡಳಿತದಲ್ಲೂ ಜೆಎನ್‌ಯು, ಅಲಿಗಡ ಮೊದಲಾದ ವಿಶ್ವವಿದ್ಯಾನಿಲಯದ ವಿದ್ಯಾರ್ಥಿಗಳು ಮತ್ತು ವಿದ್ಯಾರ್ಥಿ ನಾಯಕರ ಮೇಲೆ ಭಾರೀ ದೌರ್ಜನ್ಯಗಳು ನಡೆದವು. ಸರಕಾರದ ವಿರುದ್ಧ ಧ್ವನಿಯೆತ್ತಿದ್ದ ಹಲವು ಜೆಎನ್‌ಯು ವಿದ್ಯಾರ್ಥಿಗಳು ಇನ್ನೂ ಜೈಲಿನಲ್ಲಿ ಕಾಲ ಕಳೆಯುತ್ತಿದ್ದಾರೆ . ಅವರ ಪಾಲಿಗೆ ತುರ್ತು ಪರಿಸ್ಥಿತಿ ಇನ್ನೂ ಮುಗಿದಿಲ್ಲ.
ಇಂದಿರಾಗಾಂಧಿಯ ತುರ್ತು ಪರಿಸ್ಥಿತಿಯಲ್ಲಿ ತಮ್ಮದೇ ಹಣಕ್ಕಾಗಿ ಯಾರೂ ಬ್ಯಾಂಕಿನಲ್ಲಿ ಕ್ಯೂನಿಲ್ಲಬೇಕಾದ ಸ್ಥಿತಿ ನಿರ್ಮಾಣವಾಗಿರಲಿಲ್ಲ. ಲಾಕ್‌ಡೌನ್ ಹೆಸರಿನಲ್ಲಿ ವಲಸೆ ಕಾರ್ಮಿಕರ ಮಾರಣ ಹೋಮ ನಡೆದಿರುವುದು ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ಅಲ್ಲ. ಸರಕಾರದ ತಪ್ಪು ನಿರ್ಧಾರಗಳಿಂದಾಗಿ ಜಾರಿಗೊಂಡ ಲಾಕ್‌ಡೌನ್ ಈ ದೇಶದ ಬಡ ಮತ್ತು ಮಧ್ಯಮ ವರ್ಗಕ್ಕೆ ಮಾಡಿದ ಹಾನಿ ತುರ್ತು ಪರಿಸ್ಥಿತಿ ಮಾಡಿರಲಿಲ್ಲ. ಲಸಿಕೆಯ ಹೆಸರಿನಲ್ಲಿ ನಡೆದ ಕೋಟ್ಯಂತರ ರೂಪಾಯಿ ಅಕ್ರಮಗಳು ಇಂದಿಗೂ ಜನಸಾಮಾನ್ಯರ ಬದುಕನ್ನು ಕಂಗೆಡಿಸುತ್ತಲೇ ಇವೆ. ತುರ್ತು ಪರಿಸ್ಥಿತಿ ಒಕ್ಕೂಟ ವ್ಯವಸ್ಥೆಯ ಮೇಲೆ ಭಾರೀ ಪರಿಣಾಮ ಬೀರಿತು ಎನ್ನುತ್ತಿದ್ದಾರೆ ಪ್ರಧಾನಿ ಮೋದಿ. ಕಳೆದ ಐದು ವರ್ಷಗಳಿಂದ ಹಲವು ರಾಜ್ಯಗಳು ಕೇಂದ್ರದ ವಿರುದ್ಧ ನ್ಯಾಯಾಲಯದ ಮೆಟ್ಟಿಲನ್ನೇರಿವೆ. ಕೇಂದ್ರ ಸರಕಾರ ಒಕ್ಕೂಟ ವ್ಯವಸ್ಥೆಯನ್ನು ದುರ್ಬಲಗೊಳಿಸುತ್ತಿದೆ ಎನ್ನುವ ಆರೋಪ ವ್ಯಾಪಕವಾಗಿ ಕೇಳಿ ಬರುತ್ತಿದೆ. ಕರ್ನಾಟಕ, ಕೇರಳ, ತಮಿಳು ನಾಡು, ಪಶ್ಚಿಮ ಬಂಗಾಳದಂತಹ ರಾಜ್ಯಗಳು ತಮ್ಮ ಹಕ್ಕುಗಳಿಗಾಗಿ ಕೇಂದ್ರದ ವಿರುದ್ಧ ಭಾರೀ ಸಂಘರ್ಷವನ್ನು ನಡೆಸಬೇಕಾಗಿ ಬಂದಿದೆ.
ಕಾಶ್ಮೀರ ಸೇನೆಯ ಕೋವಿಯ ತುದಿಯಿಂದ ಆಳಲ್ಪಡುತ್ತಿದೆ. ಅಲ್ಲಿಯ ಪಂಡಿತರೂ ಕೇಂದ್ರ ಸರಕಾರದ ವಿರುದ್ಧ ಆಕ್ರೋಶವನ್ನು ವ್ಯಕ್ತಪಡಿಸುತ್ತಿದ್ದಾರೆ. ಲಡಾಖ್‌ನ ಜನತೆ ತಮ್ಮ ಹಕ್ಕುಗಳಿಗಾಗಿ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದಾರೆ. ಮಣಿಪುರದಲ್ಲಿ ನಡೆಯುತ್ತಿರುವ ಹಿಂಸೆಯನ್ನು ತುರ್ತು ಪರಿಸ್ಥಿತಿ ಕಾಲಘಟ್ಟಕ್ಕೆ ಹೋಲಿಸುವಂತೆಯೇ ಇಲ್ಲ. ಮಹಿಳೆಯರನ್ನು ಬೆತ್ತಲೆ ಗೊಳಿಸಿ ಮೆರವಣಿಗೆ ನಡೆಸಲಾಯಿತು. ಅವರ ಮೇಲೆ ಸಾಮೂಹಿಕ ಅತ್ಯಾಚಾರಗಳು ನಡೆದವು. ಆದರೆ ಪ್ರಧಾನಿ ಮೋದಿಯವರು ಒಮ್ಮೆಯೂ ಮಣಿಪುರಕ್ಕೆ ಭೇಟಿ ನೀಡಲಿಲ್ಲ. ಸುಮಾರು ಒಂದು ವರ್ಷಗಳ ಕಾಲ ರೈತರು ಬೀದಿಗಿಳಿದು ಪ್ರತಿಭಟನೆ ನಡೆಸಿರುವುದು ಇಂದಿರಾಗಾಂಧಿಯ ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ಅಲ್ಲ. ತುರ್ತುಪರಿಸ್ಥಿತಿಯ ಕಾಲದಲ್ಲಿ ಜಮೀನ್ದಾರರ ಭೂಮಿಯನ್ನು ರೈತರಿಗೆ ಕಿತ್ತುಕೊಡಲಾಯಿತಾದರೆ, ಅಘೋಷಿತ ತುರ್ತು ಪರಿಸ್ಥಿತಿಯ ಈ ದಿನಗಳಲ್ಲಿ ರೈತರ ಭೂಮಿಯನ್ನು ಕಾರ್ಪೊರೇಟ್ ಜಮೀನ್ದಾರರಿಗೆ ನೀಡಲಾಗುತ್ತಿದೆ. ಇದನ್ನು ಪ್ರಶ್ನಿಸಿದವರನ್ನು ಅರ್ಬನ್ ನಕ್ಸಲ್ ಎಂದು ಜೈಲಿಗೆ ತಳ್ಳಲಾಗುತ್ತಿದೆ. ತುರ್ತು ಪರಿಸ್ಥಿತಿಯ ಕನ್ನಡಿಯಲ್ಲಿ ಪ್ರಧಾನಿಯವರು ಮುಖ ನೋಡಿಕೊಂಡರೆ ಅವರಿಗೆ ಅವರದೇ ಮುಖ ಅಲ್ಲಿ ಕಂಡರೆ ಅದರಲ್ಲಿ ಅಚ್ಚರಿಯೇನೂ ಇಲ್ಲ. ಇಂದಿರಾಗಾಂಧಿಯ ತುರ್ತು ಪರಿಸ್ಥಿತಿಗಿಂತಲೂ ಅಪಾಯಕಾರಿಯಾಗಿದೆ ಪ್ರಧಾನಿ ಮೋದಿಯವರ ಅಘೋಷಿತ ತುರ್ತು ಪರಿಸ್ಥಿತಿ. ತುರ್ತು ಪರಿಸ್ಥಿತಿಯ ಕನ್ನಡಿಯಲ್ಲಿ ತನ್ನ ಮುಖದ ವಿಕಾರಗಳನ್ನು ತಿದ್ದಿಕೊಳ್ಳುವ ಪ್ರಯತ್ನವನ್ನಾದರೂ ಮೋದಿಯವರು ಈ ಬಾರಿ ಮಾಡುತ್ತಾರೆ ಎಂದು ಭಾವಿಸೋಣ.