ಗೊಲ್ಲರಹಟ್ಟಿಯಲ್ಲಿ ನಡೆದ ಕ್ರಾಂತಿ ಅಗ್ರಹಾರಗಳಲ್ಲೂ ನಡೆಯಲಿ
ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ
‘ಜಾತಿ ಅಸಮಾನತೆ ಈಗ ಎಲ್ಲಿದೆ?’ ಎಂದು ಕೇಳುವವರ ಮುಖಕ್ಕೆ ಬಾರಿಸುವಂತೆ ಗೊಲ್ಲರ ಹಟ್ಟಿಯಲ್ಲಿ ಬೀದಿಯಲ್ಲಿ ನಿಂತು ‘‘ನಾನಿಲ್ಲಿದ್ದೇನೆ’’ ಎಂದು ಜಾತೀಯತೆ ಕೂಗಿ ಹೇಳಿದೆ. ಎಲ್ಲೋ ದೂರದ ತಮಿಳು ನಾಡು ಅಥವಾ ಉತ್ತರ ಪ್ರದೇಶದಲ್ಲಿ ಗದ್ದಲ ಎಬ್ಬಿಸುತ್ತಿದ್ದ ಅಸ್ಪಶ್ಯತೆಯ ಕೃತ್ಯಗಳು ರಾಜ್ಯದಲ್ಲೂ ಸುದ್ದಿಯಾಗುತ್ತಿವೆೆ. ಈ ಹಿಂದೆ ಕೋಲಾರದಲ್ಲಿ ದೇವರ ಕೋಲು ಮುಟ್ಟಿದ್ದಕ್ಕೆ ಮೇಲ್‌ಜಾತಿಯ ಜನರು ದಲಿತ ಹುಡುಗನಿಗೆ ಹಲ್ಲೆ ನಡೆಸಿ ದಂಡ ಹಾಕಿರುವುದು ಮಾಧ್ಯಮಗಳಲ್ಲಿ ಸುದ್ದಿಯಾಯಿತು. ಇದಾದ ಬಳಿಕ ಚಾಮರಾಜನಗರದಲ್ಲಿ ದಲಿತರು ನೀರು ಮುಟ್ಟಿದರು ಎನ್ನುವ ಕಾರಣಕ್ಕೆ ಇಡೀ ನೀರಿನ ಟ್ಯಾಂಕನ್ನೇ ಖಾಲಿ ಮಾಡಿದ ಪ್ರಕರಣವೊಂದು ನಡೆಯಿತು. ಇದೀಗ ಚಿಕ್ಕಮಗಳೂರಿನ ಗೊಲ್ಲರ ಹಟ್ಟಿಯು ಜಾತೀಯತೆಯ ಕಾರಣಕ್ಕಾಗಿ ಸುದ್ದಿಯಲ್ಲಿದೆ. ದಲಿತ ಕಾರ್ಮಿಕನೊಬ್ಬ ತಮ್ಮ ಬಡಾವಣೆಗೆ ಕಾಲಿಟ್ಟ ಎಂದು ಆರೋಪಿಸಿ ಗೊಲ್ಲ ಸಮುದಾಯದ ಯುವಕರು ಆತನ ಮೇಲೆ ಹಲ್ಲೆ ನಡೆಸಿದ್ದಾರೆ. ಇದು ಸಹಜವಾಗಿಯೇ ದಲಿತ ಮುಖಂಡರ ಆಕ್ರೋಶಕ್ಕೆ ಕಾರಣವಾಗಿದೆ. ಇದರ ಜೊತೆಗೆ ಗೊಲ್ಲರಹಟ್ಟಿಯಲ್ಲಿ ಜಾತೀಯತೆ ಬೇರೆ ಬೇರೆ ರೂಪಗಳಲ್ಲಿ ಇನ್ನೂ ಆಚರಣೆಯಲ್ಲಿರುವುದು ಬೆಳಕಿಗೆ ಬಂದಿದೆ. ಇವುಗಳನ್ನು ವಿರೋಧಿಸಿ ದಲಿತ ಮುಖಂಡರು ಸಂಘಟಿತರಾಗಿ ಗೊಲ್ಲರ ಹಟ್ಟಿ ಬೀದಿಯಲ್ಲಿ ಪಾದಯಾತ್ರೆ ನಡೆಸಿದ್ದಲ್ಲದೆ, ಅಲ್ಲಿನ ದೇವಸ್ಥಾನಗಳಿಗೂ ಪ್ರವೇಶಿಸಿ ಜಾತಿ ಅಸಮಾನತೆಯ ಆಚರಣೆಯನ್ನು ಖಂಡಿಸಿದ್ದಾರೆ.
ವಿಪರ್ಯಾಸದ ಸಂಗತಿಯೆಂದರೆ ಇಲ್ಲಿ ಜಾತಿ ಆಚರಣೆ ನಡೆಸಿದವರು ಕೂಡ ಶೋಷಿತ ಸಮುದಾಯಕ್ಕೆ ಒಳಪಟ್ಟವರು. ಗೊಲ್ಲರ ಹಟ್ಟಿ ಯಾವುದೋ ಬ್ರಾಹ್ಮಣರು ಅಥವಾ ಬಲಾಢ್ಯ ಶೂದ್ರ ವರ್ಗ ವಾಸಿಸುವ ಹಟ್ಟಿಯಲ್ಲ. ಅಲೆಮಾರಿ ಸಮುದಾಯವಾಗಿ ಗುರುತಿಸಲ್ಪಟ್ಟಿರುವ ಈ ಜಾತಿಯು ಮೀಸಲಾತಿಯ ಸೌಲಭ್ಯಗಳನ್ನು ತನ್ನದಾಗಿಸಿಕೊಂಡು ಸಮಾಜದಲ್ಲಿ ತಲೆಯೆತ್ತಿ ನಿಲ್ಲಲು ಪ್ರಯತ್ನಿಸುತ್ತಿದೆ. ಇಂತಹ ಸಮಾಜವನ್ನು ಮೌಢ್ಯ ಮತ್ತು ಜಾತೀಯತೆಯ ಕೂಪಕ್ಕೆ ತಳ್ಳಲಾಗಿದೆ. ಸ್ವತಃ ಈ ಜಾತಿಯ ಜನರಿಗೆ ಮೇಲ್‌ಜಾತಿಯ ಬಲಾಢ್ಯರು ದೇವಸ್ಥಾನ ಪ್ರವೇಶಕ್ಕೆ ಅವಕಾಶ ನೀಡುವುದಿಲ್ಲ. ಸಮಾಜದಲ್ಲಿ ತಮ್ಮ ಮೀಸಲಾತಿ ಹಕ್ಕುಗಳನ್ನು ಕಿತ್ತುಕೊಳ್ಳುವ ಪ್ರಯತ್ನ ನಡೆಯುತ್ತಿದೆ ಎನ್ನುವ ಅಸಮಾಧಾನ ಸ್ವತಃ ಈ ಸಮುದಾಯಕ್ಕಿದೆ. ಹೀಗಿರುವಾಗ ತಮಗಿಂತ ಕೆಳಜಾತಿಯ ಜನರು ಈ ಸಮಾಜದಲ್ಲಿ ಅನುಭವಿಸುವ ಅಸ್ಪಶ್ಯತೆಯ ಬಗ್ಗೆ ಇವರಿಗೆ ಅರಿವಿರಬೇಕಾಗಿತ್ತು. ಒಂದು ವೇಳೆ ಅರಿವಿಲ್ಲದೇ ಇದ್ದರೆ ಇವರಿಗೆ ಅರಿವು ಮಾಡಿಕೊಡುವ ಕೆಲಸ ಈ ಸಮುದಾಯದ ಮುಖಂಡರಿಂದ ನಡೆಯಬೇಕಾಗಿತ್ತು. ದುರದೃಷ್ಟವಶಾತ್ ಇವರಲ್ಲಿ ಈ ಬಗ್ಗೆ ಜಾಗೃತಿಯನ್ನು ಮೂಡಿಸಬೇಕಾಗಿದ್ದ ಸ್ವಾಮೀಜಿಗಳು ಕೂಡ ಜಾತೀಯತೆಗೆ ಬೆಂಬಲವಾಗಿ ನಿಂತಿದ್ದಾರೆ. ಜಾತಿ ಬಿಟ್ಟರೂ ಬಿಡದಂತೆ ಹೇಗೆ ನಮ್ಮ ಸಮಾಜವನ್ನು ಸುತ್ತುವರಿದಿದೆ ಎನ್ನುವುದನ್ನು ಅರ್ಥಮಾಡಿಕೊಳ್ಳುವುದಕ್ಕೆ ಗೊಲ್ಲರಹಟ್ಟಿ ಪ್ರಕರಣದಿಂದ ನಮಗೆ ಸಾಧ್ಯವಾಗಬೇಕು.
ಮೌಢ್ಯ ಮತ್ತು ಜಾತೀಯತೆಯ ಕಾರಣಕ್ಕಾಗಿ ಗೊಲ್ಲರ ಹಟ್ಟಿ ಈ ಹಿಂದೆಯೂ ಸುದ್ದಿ ಮಾಡಿತ್ತು. ಮೂರು ವರ್ಷಗಳ ಹಿಂದೆ ಪಾವಗಡದ ಪೆಮ್ಮನ ಹಳ್ಳಿಯ ಗೊಲ್ಲರ ಹಟ್ಟಿಗೆ ಚಿತ್ರದುರ್ಗದ ಸಂಸದ ಎ. ನಾರಾಯಣ ಸ್ವಾಮಿಯವರು ಪ್ರವೇಶಿಸಿದಾಗ ಅದಕ್ಕೆ ಅಲ್ಲಿನ ಜನರು ಆಕ್ಷೇಪ ವ್ಯಕ್ತಪಡಿಸಿದ್ದರು. ಸಂಸದ ನಾರಾಯಣ ಸ್ವಾಮಿ ಅವರು ಪರಿಶಿಷ್ಟ ಸಮುದಾಯಕ್ಕೆ ಸೇರಿರುವುದೇ ಅವರ ಸಮಸ್ಯೆಯಾಗಿತ್ತು. ದಲಿತರು ಹಟ್ಟಿ ಪ್ರವೇಶಿಸಿದರೆ ದೈವಗಳಾಗಿರುವ ಜುಂಜಪ್ಪ ಮತ್ತು ಕ್ಯಾತಪ್ಪರಿಗೆ ಅಪಚಾರವಾಗುತ್ತದೆ ಎನ್ನುವುದು ಅವರ ನಂಬಿಕೆ. ಈ ಸಂದರ್ಭದಲ್ಲಿ ಸಂಸದರು ಗೊಲ್ಲರಹಟ್ಟಿಯ ಜನರನ್ನು ಮನವೊಲಿಸುವ ಪ್ರಯತ್ನ ನಡೆಸಿದರಾದರೂ ಅದರಲ್ಲಿ ಯಶಸ್ವಿಯಾಗಲಿಲ್ಲ. ಅಧಿಕಾರ ಬಳಸಿದರೆ ಪರಿಸ್ಥಿತಿ ಉದ್ವಿಗ್ನಗೊಳ್ಳಬಹುದು ಎಂದು ಅನಿವಾರ್ಯವಾಗಿ ಹಟ್ಟಿ ಪ್ರವೇಶಿಸದೆ ವಾಪಸಾಗಿದ್ದರು. ಒಬ್ಬ ಸಂಸದನ ಸ್ಥಿತಿಯೇ ಹೀಗಾದ ಮೇಲೆ ಇತರ ಜನಸಾಮಾನ್ಯರ ಸ್ಥಿತಿಯೇನಾಗಬಹುದು. ಜಾತಿ ಅಸ್ಪಶ್ಯತೆ ಮಾತ್ರವಲ್ಲ, ಇನ್ನೂ ಹತ್ತು ಹಲವು ಮೌಢ್ಯಗಳು ಈ ಹಟ್ಟಿಯನ್ನು ಆವರಿಸಿಕೊಂಡಿವೆ. ಮಹಿಳೆಯರನ್ನು ಮುಟ್ಟು ಮತ್ತು ಹೆರಿಗೆಯ ಸಂದರ್ಭದಲ್ಲಿ ಹಟ್ಟಿಯ ಹೊರಗೆ ಕೂರಿಸುವುದು, ದೇವರಿಗೆ ಮೈಲಿಗೆ ಆಗುತ್ತದೆ ಎನ್ನುವ ಕಾರಣಕ್ಕೆ ಶೌಚಾಲಯ ಕಟ್ಟಿಸದೇ ಇರುವುದು ಇತ್ಯಾದಿ ಪ್ರಕರಣಗಳೂ ಈ ಗೊಲ್ಲರ ಹಟ್ಟಿಯಿಂದ ವರದಿಯಾಗಿವೆ. ಜಾತೀಯತೆ, ಅಸ್ಪಶ್ಯತೆ ಮತ್ತು ಮೌಢ್ಯ ಒಂದಕ್ಕೊಂದು ಬೆಸೆದು ಕೊಂಡು ಗೊಲ್ಲರ ಹಟ್ಟಿಯನ್ನು ಅಭಿವೃದ್ಧಿಗೆ ತೆರೆಯದಂತೆ ನೋಡಿಕೊಂಡಿದೆ. ತಮ್ಮ ನಂಬಿಕೆ, ಆಚರಣೆ, ಮೌಢ್ಯಗಳಿಗಾಗಿ ಸ್ವತಃ ಈ ಸಮುದಾಯದ ಜನರೇ ಬೆಲೆ ತೆರುತ್ತಿದ್ದಾರೆ. ಇವುಗಳಿಂದ ಇತರ ಜಾತಿಗಳಿಗೆ ಬಿಡುಗಡೆ ನೀಡುವುದು ಪಕ್ಕಕ್ಕಿರಲಿ, ಗೊಲ್ಲ ಸಮುದಾಯಕ್ಕೇ ಈ ನಂಬಿಕೆ, ಆಚರಣೆಗಳಿಂದ ಬಿಡುಗಡೆಯನ್ನು ನೀಡಬೇಕಾಗಿರುವುದು ಇಂದಿನ ಅಗತ್ಯ.
ಇದೇ ಸಂದರ್ಭದಲ್ಲಿ ಈ ಹಟ್ಟಿಯ ಜನರು ತಮಗಿಂತ ಕೆಳಜಾತಿಯ ಜನರೊಂದಿಗೆ ಪ್ರದರ್ಶಿಸುತ್ತಿರುವ ಅಸ್ಪಶ್ಯತೆ ಪ್ರಶ್ನಾರ್ಹವಾಗಿದೆ. ಅದರ ವಿರುದ್ಧ ಪ್ರತಿಭಟಿಸುವ ಸರ್ವ ಹಕ್ಕು ದಲಿತರಿಗಿದೆ. ಈ ನಿಟ್ಟಿನಲ್ಲಿ ದಲಿತರು ಸಂಘಟಿತರಾಗಿ ಚಿಕ್ಕಮಗಳೂರಿನ ಗೊಲ್ಲರ ಹಟ್ಟಿಯ ಅಸ್ಪಶ್ಯತೆಯನ್ನು ವಿರೋಧಿಸಿದ್ದಾರೆ. ಅಧಿಕಾರಿಗಳ ಸಭೆ ಕರೆದದ್ದು ಮಾತ್ರವಲ್ಲ, ಅವರ ಬೆಂಬಲವನ್ನು ಪಡೆದುಕೊಂಡು ಗೊಲ್ಲರ ಹಟ್ಟಿ ಬೀದಿಯಲ್ಲಿ ಪಾದಯಾತ್ರೆ ನಡೆಸಿ ನಾವು ಕೂಡ ನಿಮ್ಮಂತೆಯೇ ಮನುಷ್ಯರು ಎನ್ನುವುದನ್ನು ಅವರಿಗೆ ಸ್ಪಷ್ಟ ಪಡಿಸಿದ್ದಾರೆ. ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ, ಗ್ರಾಮದಲ್ಲಿದ್ದ ಕಂಬದ ರಂಗನಾಥ ಸ್ವಾಮಿ ದೇವಾಲಯದ ಬೀಗ ಒಡೆದು ಅದನ್ನು ಪ್ರವೇಶಿಸಿದರು. ದಲಿತರು ಪ್ರವೇಶಿಸುತ್ತಾರೆ ಎನ್ನುವ ಕಾರಣಕ್ಕೆ ದೇವಾಲಯಕ್ಕೆ ಬೀಗ ಜಡಿಯಲಾಗಿತ್ತು. ಆದರೆ ಮುಖಂಡರು ದೇವಸ್ಥಾನದ ಬೀಗವನ್ನು ಒಡೆದು ಒಳ ಪ್ರವೇಶಿಸಿ ದೇವರ ದರ್ಶನವನ್ನು ಪಡೆದರು. ಇದೇ ಸಂದರ್ಭದಲ್ಲಿ ದಲಿತರು ದೇವಸ್ಥಾನ ಪ್ರವೇಶಿಸಿರುವುದಕ್ಕೆ ಯಾದವ ಮಹಾ ಸಂಸ್ಥಾನದ ಪೀಠಾಧ್ಯಕ್ಷರೆಂದು ಕರೆಸಿಕೊಂಡ ಶ್ರೀ ಕೃಷ್ಣ ಯಾದವಾನಂದ ಸ್ವಾಮೀಜಿಯವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ ಎಂದು ವರದಿಯಾಗಿದೆ. ದೇವಸ್ಥಾನಕ್ಕೆ ಕೆಲವು ಸಂಪ್ರದಾಯಗಳಿವೆ. ಅವುಗಳನ್ನು ಪಾಲಿಸುವುದು ಅಗತ್ಯ ಎಂದಿದ್ದಾರೆ. ದೇವಸ್ಥಾನದ ಪೂಜೆ, ಪುನಸ್ಕಾರ ಸಂದರ್ಭದಲ್ಲಿ ಸಂಪ್ರದಾಯವನ್ನು ಪಾಲಿಸುವುದರ ಬಗ್ಗೆ ಯಾರ ಆಕ್ಷೇಪವೂ ಇಲ್ಲ. ಆದರೆ ದೇವಸ್ಥಾನದಲ್ಲಿ ದೇವರ ಮುಂದೆ ಒಂದು ಸಮುದಾಯ ಮೇಲು, ಇನ್ನೊಂದು ಸಮುದಾಯ ಕೀಳು ಎಂಬ ಆಚರಣೆ ಸಂಪ್ರದಾಯವಾಗುವುದಿಲ್ಲ. ಅದನ್ನು ಅಸ್ಪಶ್ಯತೆ ಎಂದು ಕರೆಯಲಾಗುತ್ತದೆ. ಅದನ್ನು ಸಮುದಾಯದೊಳಗಿಂದ ತೊಲಗಿಸುವ ಹೊಣೆಗಾರಿಕೆ ಸ್ವಾಮೀಜಿಗಳದ್ದು ಕೂಡ. ಜನರ ಮೌಢ್ಯದ ಜೊತೆಗೆ ಸ್ವಾಮೀಜಿಗಳು ಯಾವ ಕಾರಣಕ್ಕೂ ನಿಲ್ಲಬಾರದು. ಈ ನಿಟ್ಟಿನಲ್ಲಿ ಹಿಂದೂ ಧರ್ಮದೊಳಗಿರುವ ಜಾತೀಯತೆಯನ್ನು ತೊಲಗಿಸಲು ಹಗಲು ರಾತ್ರಿ ಶ್ರಮಿಸಿದ ವಿವೇಕಾನಂದ, ನಾರಾಯಣ ಗುರುಗಳಂತಹ ಸ್ವಾಮೀಜಿಗಳು ಇವರಿಗೆ ಆದರ್ಶವಾಗಬೇಕು.
ಕೆಳಜಾತಿಯಲ್ಲಿರುವ ಇಂತಹ ಅಸ್ಪಶ್ಯತೆ ಆಚರಣೆಗಳು ಬೇಗ ಸಮಾಜದ ಗಮನ ಸೆಳೆಯುತ್ತವೆ. ಇದೇ ಸಂದರ್ಭದಲ್ಲಿ ಮೇಲ್‌ಜಾತಿ ಎಂದು ಕರೆಸಿಕೊಂಡ ಸಮುದಾಯದ ಜನರ ನಡುವೆ ಆಚರಣೆಯಲ್ಲಿರುವ ಜಾತೀಯತೆ, ಅಸ್ಪಶ್ಯತೆ, ಭೇದಭಾವವನ್ನು ಸಂಸ್ಕೃತಿಯ ಹೆಸರಿನಲ್ಲಿ ಪೋಷಿಸಲಾಗುತ್ತಿದೆ. ಮಡೆಸ್ನಾನ ವಿರುದ್ಧ ಶೂದ್ರ ಸಮುದಾಯ ಧ್ವನಿಯೆತ್ತಿದಾಗ ಬ್ರಾಹ್ಮಣ ಸಮುದಾಯದ ಸ್ವಾಮೀಜಿಗಳೇ ಮಡೆಸ್ನಾನದ ಪರವಾಗಿ ನಿಂತರು. ಇಂದಿಗೂ ಹೆಚ್ಚಿನ ದೇವಸ್ಥಾನಗಳಲ್ಲಿ ಪಂಕ್ತಿ ಭೇದಗಳಿವೆ. ಬ್ರಾಹ್ಮಣರು, ಶೂದ್ರರು, ದಲಿತರು ಒಂದೇ ಪಂಕ್ತಿಯಲ್ಲಿ ಕೂತು ಊಟ ಮಾಡುವ ವ್ಯವಸ್ಥೆ ಅಲ್ಲಿಲ್ಲ. ಮೇಲ್ ವರ್ಗದಲ್ಲಿರುವ ಇಂತಹ ಅಸಮಾನತೆಗಳು ಇಲ್ಲವಾದಾಗ, ಸಹಜವಾಗಿಯೇ ಕೆಳಜಾತಿಯ ಜನರು ಅದನ್ನು ತಮಗೆ ಮಾದರಿಯಾಗಿಸಿಕೊಂಡು ತಮ್ಮ ಸಮಾಜದಲ್ಲಿರುವ ಅಸಮಾನತೆಯನ್ನು ಇಲ್ಲವಾಗಿಸಲು ಮುಂದಾಗುತ್ತಾರೆ. ಯಾಕೆಂದರೆ, ಸಮಾಜದಲ್ಲಿ ಈ ಸಂಪ್ರದಾಯ, ಆಚರಣೆಯ ಬೀಜ ಬಿತ್ತಿರುವುದು ಇದೇ ಮೇಲ್‌ಜಾತಿಯ ಜನರೇ ಆಗಿದ್ದಾರೆ. ರಾಜಕೀಯ ಸಂದರ್ಭದಲ್ಲಿ ದಲಿತರು ಸೇರಿದಂತೆ ಎಲ್ಲ ಸಮುದಾಯವನ್ನು ‘ಹಿಂದೂ- ಒಂದು’ ಎಂದು ಕರೆದು, ಪೂಜೆ, ಪುನಸ್ಕಾರ, ಊಟದ ಸಂದರ್ಭದಲ್ಲಿ ದಲಿತರು-ಶೂದ್ರರು- ಬ್ರಾಹ್ಮಣರು ಎಂದು ಭೇದ ಮಾಡುವುದು ಎಷ್ಟು ಸರಿ? ಗೊಲ್ಲರಹಟ್ಟಿಯಲ್ಲಿ ನಡೆದ ಕ್ರಾಂತಿ ಅಗ್ರಹಾರದ ದೇವಸ್ಥಾನಗಳಲ್ಲೂ ನಡೆದಾಗ ಸಮಾಜ ಬದಲಾವಣೆಯ ಕಡೆಗೆ ಹೆಜ್ಜೆಯಿಟ್ಟೀತು.