ಡೆಂಗಿಯನ್ನು ಇನ್ನಷ್ಟು ಭೀಕರವಾಗಿಸದಿರೋಣ
ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ
ಜೂ ನ್-ಜುಲೈ ತಿಂಗಳ ಮಳೆಗಾಲದ ಜೊತೆ ಜೊತೆಗೇ ಹಲವು ಕಾಯಿಲೆಗಳನ್ನು ಹೊತ್ತುಕೊಂಡು ಬರುತ್ತವೆ. ಈ ಬಾರಿ ರಾಜ್ಯವು ಡೆಂಗಿ ಕಾಯಿಲೆಗಾಗಿ ಸುದ್ದಿಯಲ್ಲಿದೆ. ಈ ಹಿಂದೆಯೂ ಹಲವು ಬಾರಿ ಡೆಂಗಿ ಜ್ವರ ಜನಸಾಮಾನ್ಯರನ್ನು ಸುದೀರ್ಘ ಕಾಲ ಕಾಡಿತ್ತು. ರಾಜ್ಯದಲ್ಲಿ ಈ ವರ್ಷ ಇಲ್ಲಿಯವರೆಗೆ 7,840 ಪ್ರಕರಣಗಳು ಪತ್ತೆಯಾಗಿವೆ ಎಂದು ವೈದ್ಯಕೀಯ ಮೂಲಗಳು ತಿಳಿಸಿವೆ. ಡೆಂಗಿಯಿಂದ ಈಗಾಗಲೇ 7 ಮಂದಿ ಸತ್ತಿದ್ದಾರೆ. ಜನತೆ ಸಣ್ಣ ಪುಟ್ಟ ಜ್ವರಗಳಿಗೂ ಅಂಜಿ ಆಸ್ಪತ್ರೆಗಳಿಗೆ ಧಾವಿಸುವಂತಾಗಿದೆ. ನಿರ್ಲಕ್ಷ ಕೆಲವೊಮ್ಮೆ ರೋಗಿಯನ್ನು ಗಂಭೀರ ಸ್ಥಿತಿಗೆ ತಲುಪಿಸಬಹುದು. ಈ ಹಿನ್ನೆಲೆಯಲ್ಲಿ, ಆಸ್ಪತ್ರೆಗಳಲ್ಲಿ ಡೆಂಗಿ ಪರೀಕ್ಷೆಗಾಗಿ ಸವಲತ್ತುಗಳನ್ನು ಹೆಚ್ಚಿಸುವುದಕ್ಕೆಸರಕಾರ ಹೆಣಗಾಡುತ್ತಿದೆ. ಬುಧವಾರ ರಾಜ್ಯಾದ್ಯಂತ 293 ಮಂದಿಗೆ ಡೆಂಗಿ ದೃಢವಾಗಿದೆ. 100 ಮಂದಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಗ್ರಾಮೀಣ ಮತ್ತು ನಗರ ಪ್ರದೇಶಗಳೆನ್ನುವ ವ್ಯತ್ಯಾಸವಿಲ್ಲದೆಯೇ ಜ್ವರ ಹರಡುತ್ತಿದೆ. ಡೆಂಗಿ ತಡೆಗೆ ಟಾಸ್ಕ್ ಫೋರ್ಸ್ ರಚನೆ ಮಾಡಲಾಗಿದೆ ಎಂದು ಮುಖ್ಯಮಂತ್ರಿ ಹೇಳಿದ್ದಾರಾದರೂ, ಸೊಳ್ಳೆಗಳು ಈ ಟಾಸ್ಕ್ ಫೋರ್ಸ್ಗೆ ಅಂಜಿದಂತೆ ಕಾಣುತ್ತಿಲ್ಲ. ಹರಡುತ್ತಿರುವ ಜ್ವರದ ಕುರಿತಂತೆ ಹೈಕೋರ್ಟ್ ಕೂಡ ಕಳವಳ ವ್ಯಕ್ತಪಡಿಸಿದ್ದು, ಆರೋಗ್ಯ ಇಲಾಖೆಗೆ ಚುಚ್ಚು ಮದ್ದು ನೀಡಿದೆ.
ಡೆಂಗಿ ಜ್ವರಕ್ಕಿಂತಲೂ ವೇಗವಾಗಿ ಹರಡುತ್ತಿರುವ ವದಂತಿಗಳು ಮತ್ತು ಆತಂಕಗಳು ಕೊರೋನ ಕಾಲವನ್ನು ನೆನಪಿಸುತ್ತಿದೆ. ಡೆಂಗಿಗೆ ಹೋಲಿಸಿದರೆ ಕೊರೋನ ಮಾರಣಾಂತಿಕ ಕಾಯಿಲೆಯೇನೂ ಅಲ್ಲ. ಕೊರೋನ ಅತ್ಯಂತ ವೇಗವಾಗಿ ಹರಡುವ ಸಾಂಕ್ರಾಮಿಕ ಕಾಯಿಲೆ. ಅದು ಸೊಳ್ಳೆಯೊಂದಿಗೆ ನಂಟನ್ನು ಹೊಂದಿಲ್ಲ. ವಿದೇಶಗಳಿಂದ ಆಮದಾಗಿ ಬಂದಿರುವ ಕೊರೋನವನ್ನು ಸರಿಯಾದ ರೀತಿಯಲ್ಲಿ ನಿಭಾಯಿಸಿದ್ದರೆ ಭಾರತದ ಪಾಲಿಗೆ ಪಾಶ್ಚಿಮಾತ್ಯ ದೇಶಗಳನ್ನು ಕಾಡಿದಷ್ಟು ಅಪಾಯಕಾರಿ ಆಗುತ್ತಿರಲಿಲ್ಲ. ಕೊರೋನವನ್ನು ಎದುರಿಸುವ ಸಂದರ್ಭದಲ್ಲಿ ಸರಕಾರ ತಳೆದ ಕೆಲವು ದ್ವಂದ್ವ ನಿಲುವುಗಳು, ಸರಕಾರ ಅನುಸರಿಸಿದ ತಪ್ಪು ನಡೆಗಳು ಕೊರೋನವನ್ನು ಭೀಕರವಾಗಿಸಿತು. ಎಲ್ಲಕ್ಕಿಂತಲೂ ಹೆಚ್ಚಾಗಿ, ನಮ್ಮ ಆಸ್ಪತ್ರೆಗಳಲ್ಲಿನ ಮೂಲಭೂತ ಸೌಲಭ್ಯಗಳ ಕೊರತೆ ಕೊರೋನವನ್ನು ಇನ್ನಷ್ಟು ಭೀಕರವಾಗಿಸಿತು. ಕೊರೋನ ಕಾಲದಲ್ಲಿ ಕೊರೋನ ಕಾಯಿಲೆಯಿಂದ ಸತ್ತವರಿಗಿಂತ ಇತರ ಕಾಯಿಲೆಗಳಿಂದ ಸತ್ತವರೇ ಅಧಿಕ. ಕ್ಷಯ, ಕ್ಯಾನ್ಸರ್, ಎಚ್ಐವಿ, ಕಿಡ್ನಿ ವೈಫಲ್ಯ, ಅಂಗಾಂಗ ಹಾನಿ ಮೊದಲಾದ ಕಾಯಿಲೆಗಳಿಂದ ನರಳುತ್ತಿದ್ದವರೆಲ್ಲ ಸೂಕ್ತ ಚಿಕಿತ್ಸೆ ಸಿಗದೇ ಮೃತಪಟ್ಟರು. ಆದರೆ ಹೀಗೆ ಮೃತಪಟ್ಟವರನ್ನೆಲ್ಲ ಕೊರೋನ ಖಾತೆಗೆ ಸೇರಿಸಲಾಯಿತು. ಕೊರೋನ ಲಕ್ಷಣಗಳು ಕಂಡು ಬಂದರೂ ಅದು ಬಂದಷ್ಟೇ ವೇಗವಾಗಿ ಕಾಣೆಯಾಗಿ ಬಿಡುತ್ತಿತ್ತು. ಆದರೆ ಕಾರ್ಪೊರೇಟ್ ಆಸ್ಪತ್ರೆಗಳು ಜನಸಾಮಾನ್ಯರನ್ನು ದಾರಿ ತಪ್ಪಿಸಿತು. ಇದೇ ಸಂದರ್ಭದಲ್ಲಿ ದೇಶಾದ್ಯಂತ ವಿಧಿಸಲಾದ ಲಾಕ್ಡೌನ್ಗಳು ಜನರನ್ನು ಹಸಿವು ಮತ್ತು ಇನ್ನಿತರ ಖಿನ್ನತೆಗಳಿಗೆ ತಳ್ಳಿತು. ಸಾವುಗಳು ಸಂಭವಿಸಲು ಲಾಕ್ಡೌನ್ನ ಪಾತ್ರವೂ ಬಹಳಷ್ಟಿದೆ. ಕೊರೋನ ಸಂದರ್ಭದಲ್ಲಿ ಮಾಡಿದ ತಪ್ಪುಗಳನ್ನು ಮುಂದುವರಿಸಿದರೆ ಡೆಂಗಿ ಜ್ವರವನ್ನು ಕೂಡ ಭೀಕರವಾಗಿಸಲು ವ್ಯವಸ್ಥೆಗೆ ಸಾಧ್ಯವಿದೆ.
ಮುಖ್ಯವಾಗಿ ಬೆಂಕಿ ಹಬ್ಬಿದ ಬಳಿಕ ನೀರಿಗಾಗಿ ಬಾವಿ ತೋಡುವ ಬದಲು, ನಮ್ಮ ಸರಕಾರಿ ಆಸ್ಪತ್ರೆಗಳನ್ನು ಗಟ್ಟಿಯಾಗಿಸಿದ್ದರೆ ಇಂತಹ ಸಂದರ್ಭದಲ್ಲಿ ಹಾಹಾಕಾರ ಮಾಡುವ ಸ್ಥಿತಿ ಖಂಡಿತ ನಿರ್ಮಾಣವಾಗುವುದಿಲ್ಲ. ಕೊರೋನಾದಿಂದ ಸರಕಾರ ಪಾಠಗಳನ್ನು ಕಲಿತು ಸಾಂಕ್ರಾಮಿಕ ರೋಗಗಳನ್ನು, ಡೆಂಗಿಯಂತಹ ಮಾರಣಾಂತಿಕ ಕಾಯಿಲೆಗಳನ್ನು ಎದುರಿಸಲು ನಮ್ಮ ಸರಕಾರಿ ಆಸ್ಪತ್ರೆಗಳನ್ನು ಸಿದ್ಧಗೊಳಿಸಬೇಕಾಗಿತ್ತು. ಡೆಂಗಿ ಈ ಹಿಂದೆಯೂ ಜನರನ್ನು ಕಾಡಿದೆ. ಅದು ನಮಗೆ ಅಪರಿಚಿತ ಕಾಯಿಲೆಯೇನೂ ಅಲ್ಲ. ಮುಖ್ಯವಾಗಿ ಮುಂಜಾಗ್ರತೆ ವಹಿಸಿದರೆ ತಡೆಯಲು ಕಷ್ಟವೂ ಇಲ್ಲ. ಕೊರೋನ ಬಂದಾಗ ಸರಕಾರ ಹಾಕಿದಂತೆ ಜನಸಾಮಾನ್ಯರಿಗೆ ಲಾಕ್ಡೌನ್ ವಿಧಿಸುವ ಅಗತ್ಯವಿಲ್ಲ. ಸೊಳ್ಳೆಗಳು ಸರಕಾರದ ಲಾಕ್ಡೌನ್ ಆದೇಶಗಳಿಗೆ ಕಿಮ್ಮತ್ತು ನೀಡುವುದೂ ಇಲ್ಲ. ಎಲ್ಲ ಪಂಚಾಯತ್ ವ್ಯಾಪ್ತಿಯಲ್ಲಿ ಸೊಳ್ಳೆಗಳ ವಿರುದ್ಧ ಕಟ್ಟು ನಿಟ್ಟಿನ ಕಾರ್ಯಾಚರಣೆಗೆ ಆದೇಶ ನೀಡಿದ್ದರೆ, ಇದೀಗ ಟಾಸ್ಕ್ಪೋರ್ಸ್ ರಚನೆ ಮಾಡಿ ಡೆಂಗಿಯನ್ನು ಎದುರಿಸುವ ಅನಿವಾರ್ಯ ಸ್ಥಿತಿ ಸೃಷ್ಟಿಯಾಗುತ್ತಿರಲಿಲ್ಲ. ಡೆಂಗಿ ಪರೀಕ್ಷೆಯ ಸಂದರ್ಭದಲ್ಲಿ ಕೆಲವು ಆಸ್ಪತ್ರೆಗಳು ತಕ್ಷಣ ಸ್ಪಂದಿಸದ ಕಾರಣದಿಂದ ಪರಿಸ್ಥಿತಿ ಬಿಗಡಾಯಿಸಿದ ಉದಾಹರಣೆಗಳಿವೆ. ಡೆಂಗಿ ಪರೀಕ್ಷೆಯನ್ನು ಶೀಘ್ರವಾಗಿ ನಡೆಸಿ, ಪ್ರಕರಣವನ್ನು ಗುರುತಿಸದೇ ಇದ್ದರೆ, ಜ್ವರ ಉಲ್ಬಣಿಸಬಹುದು. ಹಲವೆಡೆ ಇದುವೇ ಸಂಭವಿಸಿದೆ. ತಡರಾತ್ರಿ ಆಸ್ಪತ್ರೆಗೆ ದಾಖಲಾದರೆ ಅವರನ್ನು ಪರೀಕ್ಷಿಸಲು ತಕ್ಷಣದ ಸೌಲಭ್ಯಗಳಿಲ್ಲದೆ ರೋಗಿಗಳು ಮರಳಿದ ಉದಾಹರಣೆಗಳಿವೆ. ಕಾರ್ಪೊರೇಟ್ ಆಸ್ಪತ್ರೆಗಳು ಸಂದರ್ಭದ ಲಾಭವನ್ನು ಪಡೆಯಲು ತುದಿಗಾಲಿನಲ್ಲಿ ನಿಂತಿವೆ. ಗ್ರಾಮೀಣ ಪ್ರದೇಶದಲ್ಲಿ ಸರಕಾರಿ ಆಸ್ಪತ್ರೆಗಳು ಅಸಹಾಯಕತೆಯನ್ನು ವ್ಯಕ್ತಪಡಿಸುತ್ತಿವೆ.
ಇದೇ ಸಂದರ್ಭದಲ್ಲಿ ಡೆಂಗಿಯ ಬೆನ್ನಿಗೇ ಆಯುರ್ವೇದ, ಹಳ್ಳಿ ಮದ್ದು ಹೆಸರಿನಲ್ಲಿ ವೈದ್ಯರು ಅಣಬೆಗಳಂತೆ ಹುಟ್ಟಿಕೊಳ್ಳುತ್ತಿದ್ದಾರೆ. ಈ ಹಿಂದೆ ಕೊರೋನ ಕಾಲದಲ್ಲೂ ಇಂತಹ ವೈದ್ಯರು ಗಲ್ಲಿ ಗಲ್ಲಿಗಳಲ್ಲಿ ಹುಟ್ಟಿಕೊಂಡಿದ್ದರು. ಪತಂಜಲಿಯಂತಹ ಸಂಸ್ಥೆಯೂ ಕೊರೋನಕ್ಕೆ ಔಷಧಿಯನ್ನು ಘೋಷಿಸಿ ಅಂತರ್ರಾಷ್ಟ್ರೀಯ ಮಟ್ಟದಲ್ಲಿ ಛೀಮಾರಿಯನ್ನು ಎದುರಿಸಿತ್ತು. ಇದೀಗ ಡೆಂಗಿಗೆ ಪಪ್ಪಾಯಿ ಎಲೆಯ ರಸ, ಡ್ರಾಗನ್ಫ್ರುಟ್ ಸೇರಿದಂತೆ ಬೇರೆ ಬೇರೆ ಹಣ್ಣು, ಎಲೆಗಳಿಂದ ರಕ್ತಕಣಗಳನ್ನು ಹೆಚ್ಚಿಸಬಹುದು ಎಂಬಂತಹ ಸಲಹೆಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ಇಂತಹ ಸಲಹೆಗಳನ್ನು ನಂಬಿ ಮನೆ ಔಷಧಿಗಳನ್ನು ಮಾಡಿ ಅಪಾಯವನ್ನು ಮೈಮೇಲೆ ಎಳೆದುಕೊಂಡವರು ಹಲವರಿದ್ದಾರೆ. ಆದುದರಿಂದ, ಹಳ್ಳಿ ಮದ್ದು, ಆಯುರ್ವೇದದ ಹೆಸರಿನಲ್ಲಿ ನೀಡುವ ಔಷಧಿಗಳ ಬಗ್ಗೆ ಜನರಲ್ಲಿ ವೈದ್ಯರು ಜಾಗೃತಿಯನ್ನು ಮೂಡಿಸುವ ಅಗತ್ಯವಿದೆ. ಇಂತಹ ಔಷಧಿಗಳನ್ನು ಸೇವಿಸಿ ಡೆಂಗಿಯನ್ನು ವಾಸಿ ಮಾಡುವುದಿರಲಿ, ಕಿಡ್ನಿಗೆ ಹಾನಿ ಮಾಡಿಕೊಂಡು ಜೀವನಪರ್ಯಂತ ರೋಗಿಯಾಗಿ ಬದುಕಬೇಕಾಗುತ್ತದೆ. ಯಾರಾದರೂ ಸಾಮಾಜಿಕ ಜಾಲತಾಣಗಳ ಮೂಲಕ ಇಂತಹ ಔಷಧಿಗಳ ಸಲಹೆ ನೀಡಿದರೆ ಅವರ ಮೇಲೆ ಕ್ರಮ ತೆಗೆದುಕೊಳ್ಳಬೇಕಾಗಿದೆ. ಹಾಗೆಯೇ ಸೊಳ್ಳೆಗಳನ್ನು ನಿಯಂತ್ರಿಸುವುದು, ಶುಚಿತ್ವವನ್ನು ಕಾಪಾಡುವುದು ಡೆಂಗಿಯನ್ನು ಎದುರಿಸುವ ಮೊದಲ ಹೆಜ್ಜೆಯಾಗಿದೆ. ಸರಕಾರ ಗ್ರಾಮಪಂಚಾಯತ್ ಮಟ್ಟದಲ್ಲಿ ಇದಕ್ಕೆ ಕಠಿಣ ಕ್ರಮಗಳನ್ನು ತೆಗೆದುಕೊಳ್ಳಬೇಕು. ಜೊತೆಗೆ ಸಂದರ್ಭದ ಲಾಭ ಪಡೆಯಲು ಹೊಂಚು ಹಾಕುವ ಆಸ್ಪತ್ರೆಗಳ ಮೇಲೆಯೂ ಆರೋಗ್ಯ ಇಲಾಖೆ ಒಂದು ಕಣ್ಣನ್ನು ಇಡಬೇಕು. ಸಾಧಾರಣವಾಗಿ ಡೆಂಗಿಯಂತಹ ಕಾಯಿಲೆಗಳನ್ನು ಇನ್ನಷ್ಟು ಭೀಕರವಾಗಿಸುವುದರಿಂದ ಇಂತಹ ಆಸ್ಪತ್ರೆಗಳಿಗೆ ಹೆಚ್ಚುಲಾಭಗಳಿವೆ. ಇಂತಹ ಆಸ್ಪತ್ರೆಗಳು ಡೆಂಗಿ ಹಬ್ಬಿಸುವ ಸೊಳ್ಳೆಗಳಿಗಿಂತಲೂ ಅಪಾಯಕಾರಿಯಾಗಿವೆ.