ಸಾಹಿತ್ಯ ಸಮ್ಮೇಳನಗಳಲ್ಲಿ ಆಹಾರ ಸಂಸ್ಕೃತಿಯನ್ನು ಗೌರವಿಸೋಣ
PC: fb.com
ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ
ಸಕ್ಕರೆಯ ನಾಡು ಎಂದು ಖ್ಯಾತಿವೆತ್ತ ಮಂಡ್ಯದಲ್ಲಿ ಡಿಸೆಂಬರ್ 19ರಿಂದ 22ರವರೆಗೆ ಅಖಿಲ ಭಾರತ ಸಾಹಿತ್ಯ ಸಮ್ಮೇಳನ ನಡೆಯಲಿದೆ. ಅದಕ್ಕಾಗಿ ಭಾರೀ ಸಿದ್ಧತೆಗಳು ನಡೆಯುತ್ತಿವೆ. ಇವುಗಳ ನಡುವೆಯೇ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರು ಹೊರಡಿಸಿರುವ ಒಂದು ಪ್ರಕಟಣೆಯು ಮಂಡ್ಯ ಮಾತ್ರವಲ್ಲ ಇಡೀ ಕರ್ನಾಟಕದ ವೈವಿಧ್ಯಮಯ ಆಹಾರ ಸಂಸ್ಕೃತಿಯನ್ನು ಅವಮಾನಿಸಿದ್ದು, ಈ ಪ್ರಕಟಣೆಯ ವಿರುದ್ಧ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದೆ. ಪುಸ್ತಕ ಮತ್ತು ವಾಣಿಜ್ಯ ಮಳಿಗೆಗಳಲ್ಲಿ ‘ಮಾಂಸಾಹಾರ, ಮದ್ಯ ಮತ್ತು ತಂಬಾಕು ಮಾರಾಟವನ್ನು ನಿಷೇಧಿಸಲಾಗಿದೆ’ ಎಂದು ಕನ್ನಡ ಸಾಹಿತ್ಯ ಪರಿಷತ್ ನಿಯಮಾವಳಿಯ ಪ್ರಕಟಣೆಯೊಂದನ್ನು ಹೊರಡಿಸಿದೆ. ಮದ್ಯ ಮತ್ತು ತಂಬಾಕು ಆಹಾರದ ಸಾಲಿನಲ್ಲಿ ಬರುವುದಿಲ್ಲ. ಮದ್ಯ ಅಮಲು ಪದಾರ್ಥವಾಗಿದ್ದು ಅದು ಮನುಷ್ಯನ ವಿವೇಕವನ್ನು ಅಮಾನತಿನಲ್ಲಿರಿಸುವ ಶಕ್ತಿಯನ್ನು ಹೊಂದಿದೆ. ತಂಬಾಕು ಕೂಡ ಆರೋಗ್ಯಕ್ಕೆ ಹಾನಿಕರವಾಗಿದೆ. ನಮ್ಮ ಶಾಸನ ಕೂಡ ತಂಬಾಕು, ಮದ್ಯ ಆರೋಗ್ಯಕ್ಕೆ ಹಾನಿಕರ ಎಂದು ಹೇಳುತ್ತಾ ಬರುತ್ತಿದೆ. ಆದರೆ ಕನ್ನಡ ಸಾಹಿತ್ಯ ಪರಿಷತ್ ಇವೆರಡರ ಜೊತೆಗೆ ಜನಸಾಮಾನ್ಯರು ದಿನನಿತ್ಯ ಸೇವಿಸುವ ಪೌಷ್ಟಿಕ ಮಾಂಸಾಹಾರವನ್ನು ಸೇರಿಸಿರುವುದು ವಿವಾದಕ್ಕೆ ಕಾರಣವಾಗಿದೆ. ಮಾಂಸಾಹಾರ ಈ ನಾಡಿನ ಬಹುಜನರ ಬದುಕನ್ನು ಶತಮಾನಗಳಿಂದ ಪೊರೆಯುತ್ತಾ ಬರುತ್ತಿದೆ. ಹೀಗಿರುವಾಗ ವಾಣಿಜ್ಯ ಮಳಿಗೆಗಳಲ್ಲಿ ಮಾಂಸಾಹಾರವನ್ನು ನಿಷೇಧಿಸಿರುವುದರ ಉದ್ದೇಶವೇನು? ಎನ್ನುವ ಪ್ರಶ್ನೆಯನ್ನು ಸಾಹಿತ್ಯಾಭಿಮಾನಿಗಳು ಕೇಳ ತೊಡಗಿದ್ದಾರೆ. ಈ ಪ್ರಶ್ನೆ ನಿಧಾನಕ್ಕೆ ಸಾಹಿತ್ಯ ಸಮ್ಮೇಳನದ ಊಟೋಪಚಾರದಲ್ಲಿ ಮಾಂಸಾಹಾರ ಯಾಕಿಲ್ಲ? ಎನ್ನುವ ಚರ್ಚೆಯನ್ನು ಹುಟ್ಟಿಸಿ ಹಾಕಿದೆ. ಕನ್ನಡ ಸಾಹಿತ್ಯ ಪರಿಷತ್ ತನ್ನ ನಿಯಮಾವಳಿಯಲ್ಲಿ ತಂಬಾಕು, ಮದ್ಯದಂತಹ ದುಶ್ಚಟಗಳ ಜೊತೆಗೆ ಮಾಂಸಾಹಾರವನ್ನು ಸೇರಿಸುವ ಕಿಡಿಗೇಡಿತನವನ್ನು ಪ್ರದರ್ಶಿಸದೇ ಇದ್ದಿದ್ದರೆ ಸಾಹಿತ್ಯ ಸಮ್ಮೇಳನದಲ್ಲಿ ಮಾಂಸಾಹಾರ ಯಾಕಿಲ್ಲ ಎನ್ನುವ ಪ್ರಶ್ನೆ ಇಷ್ಟು ತೀವ್ರ ರೂಪ ಪಡೆಯುತ್ತಿರಲಿಲ್ಲವೇನೋ.
ಮಂಡ್ಯದಲ್ಲಿ ನಡೆಯುವ ಸಾಹಿತ್ಯ ಸಮ್ಮೇಳನದ ಬಗೆ ಬಗೆಯ ಭಕ್ಷ್ಯ ಭೋಜನಗಳ ವಿವರಗಳನ್ನು ಈಗಾಗಲೇ ಕನ್ನಡ ಸಾಹಿತ್ಯ ಪರಿಷತ್ ಮಾಧ್ಯಮಗಳಿಗೆ ಬಿಡುಗಡೆ ಮಾಡಿದೆ. ಸಾಹಿತ್ಯ ಗೋಷ್ಠಿಗಳ ಬಗೆಗಿನ ವಿವರಗಳಿಗಿಂತ ಮೊದಲೇ ಮಾಧ್ಯಮಗಳು, ಊಟೋಪಚಾರಗಳ ಐಟಂಗಳ ಕುರಿತಂತೆ ವಿವರಗಳನ್ನು ‘ವಿಶೇಷ ವರದಿ’ಯ ರೂಪದಲ್ಲಿ ಪ್ರಕಟಿಸುತ್ತಿವೆೆ. ಆದರೆ ಈ ವಿವರಗಳಲ್ಲಿ ಮಿಶ್ರಾಹಾರಿಗಳ ಪ್ರೀತಿಯ ಖಾದ್ಯವಾಗಿರುವ ಮೀನು, ಕೋಳಿ, ಮೊಟ್ಟೆಗಳು ಯಾಕಿಲ್ಲ ಎನ್ನುವ ಪ್ರಶ್ನೆ, ಸಾಹಿತ್ಯ ಗೋಷ್ಠಿಯಷ್ಟೇ ಮಹತ್ವವನ್ನು ಪಡೆದಿದೆ. ಸಾಹಿತ್ಯಾಭಿಮಾನಿಗಳು ‘ಊಟದಲ್ಲಿ ಮಾಂಸಾಹಾರ ಯಾಕಿಲ್ಲ?’ ಎನ್ನುವ ಪ್ರಶ್ನೆ ಎತ್ತುತ್ತಿದ್ದ ಹಾಗಿಯೇ, ಸಾಹಿತ್ಯ ಸಮ್ಮೇಳನದಲ್ಲಿ ಊಟಕ್ಕೆ ಯಾಕೆ ಮಹತ್ವ ನೀಡುತ್ತೀರಿ? ಸಾಹಿತ್ಯ ಮುಖ್ಯವೋ, ಊಟ ಮುಖ್ಯವೋ? ಎನ್ನುವ ಮರು ಪ್ರಶ್ನೆಯ ಮೂಲಕ ಅದನ್ನು ದಮನಿಸುವ ಪ್ರಯತ್ನಗಳನ್ನು ಕೆಲವರು ಮಾಡುತ್ತಿದ್ದಾರೆ. ವೈವಿಧ್ಯಮಯ ಆಹಾರ ಬಹುಸಂಸ್ಕೃತಿಯ ಹೆಗ್ಗಳಿಕೆಗಳಲ್ಲಿ ಒಂದಾಗಿದೆ. ಆಹಾರವನ್ನು, ಆಹಾರವನ್ನು ಬೆಳೆಯುವ ರೈತರನ್ನು ಬದಿಗಿಟ್ಟು ಸಂಸ್ಕೃತಿಯನ್ನು ಚರ್ಚಿಸಲು ಸಾಧ್ಯವಿಲ್ಲ. ಆಹಾರ ಅದರಲ್ಲೂ ಮೀನು, ಕೋಳಿ, ಕುರಿ ಮೊದಲಾದ ಆಹಾರಗಳು ಈ ನಾಡಿನ ಧರ್ಮ, ಸಂಸ್ಕೃತಿ, ಆಚರಣೆಗಳೊಂದಿಗೆ ಅವಿನಾಭಾವವಾಗಿ ಬೆರೆದಿರುವಂತಹದು. ಆಹಾರ ಸಂಸ್ಕೃತಿಗೆ ಬೇರೆ ಬೇರೆ ರೀತಿಯ ಆರ್ಥಿಕ, ಸಾಮಾಜಿಕ ಆಯಾಮಗಳಿರುವುದನ್ನು ಹಲವು ಸಂಶೋಧಕರು ಗುರುತಿಸಿದ್ದಾರೆ. ಸಾಧಾರಣವಾಗಿ ಈ ನಾಡಿನ ಕೃಷಿ ಮೇಳ, ಯುವ ಮೇಳ ಸೇರಿದಂತೆ ಎಲ್ಲ ಬಗೆಯ ಸಮ್ಮೇಳನಗಳಲ್ಲೂ ಮಿಶ್ರಾಹಾರ ಅಂದರೆ ಮಾಂಸಾಹಾರ ಮತ್ತು ಸಸ್ಯಾಹಾರಕ್ಕೆ ಆದ್ಯತೆಯನ್ನು ನೀಡುತ್ತಾ ಬರಲಾಗಿದೆ. ಆದರೆ ಸಾಹಿತ್ಯ ಸಮ್ಮೇಳನಗಳ ಮೇಲೆ ಮಾತ್ರ ಕಡ್ಡಾಯ ಸಸ್ಯಾಹಾರವನ್ನು ಹೇರುತ್ತಾ ಬರಲಾಗಿದೆ ಯಾಕೆ? ಮಡಿ ಮೈಲಿಗೆಗಳನ್ನು ಮೀರಿ ವೈಚಾರಿಕತೆಯನ್ನು ಹರಡಬೇಕಾಗಿರುವ ಸಾಹಿತ್ಯ ಸಮ್ಮೇಳನದಲ್ಲೇ ಯಾಕೆ ಆಹಾರದ ಕುರಿತಂತೆ ಈ ಮಡಿ ಮೈಲಿಗೆ ಎನ್ನುವ ಪ್ರಶ್ನೆ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರ ಕಿಡಿಗೇಡಿತನದಿಂದಾಗಿ ಇನ್ನಷ್ಟು ಬಲ ಪಡೆದುಕೊಂಡಿದೆ.
ನಮ್ಮ ನಡುವೆ ಆಹಾರದ ಕುರಿತಂತೆ ಈಗಲೂ ಮೇಲರಿಮೆ ಮತ್ತು ಕೀಳರಿಮೆಗಳು ‘ಪಂಕ್ತಿ ಭೇದ’ ರೂಪದಲ್ಲಿ ಅಸ್ತಿತ್ವದಲ್ಲಿದೆ. ದೇವಸ್ಥಾನಗಳಲ್ಲಿ ಬ್ರಾಹ್ಮಣರ ಪಂಕ್ತಿ ಶೂದ್ರರಿಂದ ಪ್ರತ್ಯೇಕವಾಗಿರುವುದೇ ಶೂದ್ರರು ಮಾಂಸಾಹಾರವನ್ನು ಸೇವಿಸುತ್ತಾರೆ ಎನ್ನುವ ಕಾರಣಕ್ಕೆ. ದೇವಸ್ಥಾನಗಳಲ್ಲಿ ಬಡಿಸುವುದು ಸಸ್ಯಾಹಾರವೇ ಆಗಿದ್ದರೂ, ಮಾಂಸವನ್ನು ಸೇವಿಸುವವರು ಕೀಳು ಎನ್ನುವ ಮನಸ್ಥಿತಿಯಿಂದ ಅವರಿಗೆ ಬೇರೆಯೇ ಪಂಕ್ತಿಯನ್ನು ಹಾಕಲಾಗುತ್ತದೆ. ಅಂದರೆ ಸಸ್ಯಾಹಾರ ಸೇವಿಸುವ ಸಂದರ್ಭದಲ್ಲೂ ಶೂದ್ರರ ಜೊತೆಗೆ ಕುಳಿತು ಊಟ ಮಾಡುವ ಅವಕಾಶವಿಲ್ಲ. ದೇವಸ್ಥಾನದಲ್ಲಿರುವ ಈ ಆಹಾರ ಭೇದ ಸಾಹಿತ್ಯ ಸಮ್ಮೇಳನಗಳಲ್ಲೂ ಯಾಕಿರಬೇಕು? ಎನ್ನುವ ಪ್ರಶ್ನೆ ನ್ಯಾಯಯುತವಾದುದೇ ಆಗಿದೆ. ಈ ಹಿಂದೆ ಶಾಲೆಗಳಲ್ಲಿ ಬಿಸಿಯೂಟ ಘೋಷಣೆಯಾದಾಗ, ಇದೇ ಆಹಾರ ರಾಜಕೀಯದ ಭಾಗವಾಗಿ ಹಲವರು ಆ ಯೋಜನೆಯನ್ನು ವಿರೋಧಿಸಿದರು. ದಲಿತ ಮಹಿಳೆ ಬಿಸಿಯೂಟ ಅಡುಗೆ ಸಿದ್ಧ ಪಡಿಸುತ್ತಾಳೆ ಎಂದು ಕೆಲವು ಶಾಲೆಗಳಲ್ಲಿ ಬಿಸಿಯೂಟವನ್ನು ವಿರೋಧಿಸಿದ್ದಿದೆ. ಕೆಳಜಾತಿಯ ಮಕ್ಕಳ ಜೊತೆಗೆ ಕೂತು ಮೇಲ್ಜಾತಿಯ ಮಕ್ಕಳು ಉಣ್ಣ ಬೇಕಾಗುತ್ತದೆ ಎಂದೂ ಹಲವರು ಶಾಲೆಗಳಲ್ಲಿ ಬಿಸಿಯೂಟವನ್ನು ವಿರೋಧಿಸಿದ್ದರು. ವಿದ್ಯೆ ಕಲಿಯುವ ಜಾಗದಲ್ಲಿ ಬಿಸಿಯೂಟದ ವ್ಯವಸ್ಥೆಯ ಅಗತ್ಯವಿದೆಯೆ? ಎಂಬ ಜಾಣ ಪ್ರಶ್ನೆಯ ಮೂಲಕ, ಬಿಸಿಯೂಟಕ್ಕೆ ಆಕ್ಷೇಪ ಪಡಿಸಿದವರೂ ಇದ್ದಾರೆ. ಬಡ ಮಕ್ಕಳಿಗೆ ಊಟವನ್ನು ನೀಡುವ ಉದ್ದೇಶವನ್ನಷ್ಟೇ ಈ ಯೋಜನೆ ಹೊಂದಿರಲಿಲ್ಲ. ಎಲ್ಲ ಜಾತಿ, ಧರ್ಮ, ವರ್ಗದ ವಿದ್ಯಾರ್ಥಿಗಳು ಒಂದೇ ಪಂಕ್ತಿಯಲ್ಲಿ ಕೂತು ಜೊತೆ ಜೊತೆಯಾಗಿ ಸೋದರರಂತೆ ಉಣ್ಣುವ ಮೂಲಕ, ಪಂಕ್ತಿ ಭೇದ ರಹಿತ ಸಮಾಜವನ್ನು ಕಟ್ಟುವ ಮಹತ್ವದ ಉದ್ದೇಶ ಈ ಯೋಜನೆಯ ಹಿಂದಿದೆ. ವಿದ್ಯಾರ್ಥಿಗಳ ಮನಸ್ಸಿನಲ್ಲಿರುವ ಜಾತಿ ಕಂದರಗಳನ್ನು ಮುಚ್ಚುವ ನಿಟ್ಟಿನಲ್ಲಿ ಇದು ಮಹತ್ವದ ಕೆಲಸವನ್ನು ಮಾಡುತ್ತಾ ಬರುತ್ತಿದೆ. ಬಿಸಿಯೂಟದ ಜೊತೆ ಜೊತೆಗೆ ಮೊಟ್ಟೆಯನ್ನು ಕೊಡುವ ಮೂಲಕ, ಪೌಷ್ಟಿಕಾಂಶಭರಿತ ಆಹಾರವನ್ನು ವಿದ್ಯಾರ್ಥಿಗಳಿಗೆ ಒದಗಿಸಲಾಯಿತು. ಜೊತೆಗೆ ಮಾಂಸಾಹಾರದ ಕುರಿತಂತೆ ಇರುವ ಪೂರ್ವಾಗ್ರಹವನ್ನು ವಿದ್ಯಾರ್ಥಿ ದೆಸೆಯಲ್ಲೇ ಅಳಿಸುವ ಕೆಲಸವೂ ನಡೆಯಿತು. ಹೀಗೆ ಶಾಲೆಗಳಲ್ಲಿ ಒಂದಾಗಿ ಜೊತೆ ಜೊತೆಗೆ ಬಿಸಿಯೂಟವನ್ನು ಸೇವಿಸಿದವರು ಭವಿಷ್ಯದಲ್ಲಿ ಸಾಹಿತ್ಯ ಸಮ್ಮೇಳನದಂತಹ ಸಮಾವೇಶಗಳಲ್ಲಿ ಮಾಂಸಾಹಾರಕ್ಕೆ ಆಕ್ಷೇಪ ವ್ಯಕ್ತಪಡಿಸಲಾರರು.
ಕನ್ನಡ ಸಾಹಿತ್ಯ ಸಮ್ಮೇಳನಗಳಲ್ಲೂ ಮಾಂಸಾಹಾರವನ್ನು ಸೇರ್ಪಡಿಸುವ ಮೂಲಕ ಬಹುಸಂಖ್ಯಾತರ ಆಹಾರ ಸಂಸ್ಕೃತಿಯನ್ನು ಗೌರವಿಸುವುದನ್ನು ನಾವು ಕಲಿತು, ಇತರರಿಗೂ ಕಲಿಸಬೇಕಾಗಿದೆ. ಇಂದು ಕನ್ನಡ ಸಾಹಿತ್ಯ ಬಹಳಷ್ಟು ಎತ್ತರಕ್ಕೇರಿದೆ ಎನ್ನುವುದು ನಿಜವೇ ಆಗಿದ್ದರೂ, ಆಹಾರದ ವಿಷಯದಲ್ಲಿ ಸಾಹಿತಿಗಳ ಅಸಹಿಷ್ಣುತೆಯನ್ನು ಗಮನಿಸಿದರೆ ಇವರಿಗಿಂತ, ಜೊತೆಯಾಗಿ ‘ಬಿಸಿಯೂಟ’ ಉಣ್ಣುವ ಮಕ್ಕಳೇ ವಾಸಿ ಎನ್ನುವಂತಾಗಿದೆ. ತಮ್ಮ ತಮ್ಮ ಆಹಾರ ಸಂಸ್ಕೃತಿಯನ್ನು ಪಾಲಿಸುತ್ತಾ, ಇತರರ ಆಹಾರ ಸಂಸ್ಕೃತಿಯನ್ನು ಗೌರವಿಸುವ ಮನಸ್ಥಿತಿ ಸಾಹಿತಿಗಳಲ್ಲಿ, ಶಿಕ್ಷಿತರೆನಿಸಿಕೊಂಡವರಲ್ಲೇ ಕಾಣಿಸುತ್ತಿಲ್ಲ. ತನ್ನ ಸಂಸ್ಕೃತಿಯ ಆಹಾರವನ್ನು ತಾನು ಸೇವಿಸುತ್ತಾ, ಇನ್ನೊಬ್ಬರ ಆಹಾರವನ್ನು ಗೌರವಿಸಿ ಜೊತೆ ಜೊತೆಯಾಗಿ ಒಂದೇ ಪಂಕ್ತಿಯಲ್ಲಿ ಒಟ್ಟಾಗಿ ಸೋದರರಂತೆ ಉಣ್ಣುವುದನ್ನು ಸಾಹಿತ್ಯ ಸಮ್ಮೇಳನಗಳು ಶಿಕ್ಷಿತರೆನ್ನಿಸಿಕೊಂಡವರಿಗೆ ಕಲಿಸುವುದು ಇಂದಿನ ಅಗತ್ಯವಾಗಿದೆ. ಆಹಾರದ ಹೆಸರಿನಲ್ಲಿ ನಡೆಯುತ್ತಿರುವ ರಾಜಕೀಯಗಳನ್ನು, ಶೋಷಣೆಗಳನ್ನು, ದೌರ್ಜನ್ಯಗಳನ್ನು ತಡೆದು ಸೌಹಾರ್ದ ಸಮಾಜ ನಿರ್ಮಿಸಲು ಸಾಹಿತ್ಯ ಸಮ್ಮೇಳನ ಈ ಅವಕಾಶವನ್ನು ಬಳಸಿಕೊಳ್ಳಬೇಕು.