ಆರೋಗ್ಯಕ್ಕಾಗಿ ಶ್ರೀಸಾಮಾನ್ಯ ತೆರಬೇಕಾದ ದುಬಾರಿ ತೆರಿಗೆ!
ಸಾಂದರ್ಭಿಕ ಚಿತ್ರ (NDTV)
ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ
ಉತ್ತರ ಪ್ರದೇಶದ ಬರ್ವಾ ಪಟ್ಟಿಯ ದಿನಗೂಲಿ ನೌಕರನೊಬ್ಬ, ಆಸ್ಪತ್ರೆಯ ಶುಲ್ಕವನ್ನು ಪಾವತಿಸಲು ಸಾಧ್ಯವಾಗದೆ ತನ್ನ ಪುತ್ರನನ್ನೇ ಮಾರಾಟ ಮಾಡಿದ ಹೃದಯವಿದ್ರಾವಕ ಘಟನೆಯೊಂದು ಮಾಧ್ಯಮಗಳಲ್ಲಿ ಸುದ್ದಿಯಾಗಿದೆ. ದಿನಗೂಲಿ ನೌಕರ ಹರೀಶ್ ಪಾಟೀಲ್ ತನ್ನ ಪತ್ನಿಯನ್ನು ಹೆರಿಗೆಗಾಗಿ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದ. ಆದರೆ ಆತನಿಗೆ ಆಸ್ಪತ್ರೆಯ ದುಬಾರಿ ಶುಲ್ಕ ಪಾವತಿಸಲು ಸಾಧ್ಯವಾಗಲಿಲ್ಲ. ಇದರಿಂದ ಆಸ್ಪತ್ರೆಯ ಸಿಬ್ಬಂದಿ ಆತನ ಪತ್ನಿ ಮತ್ತು ನವಜಾತ ಶಿಶುವನ್ನು ಬಿಡುಗಡೆ ಮಾಡಲು ನಿರಾಕರಿಸಿದರು. ಉಪಾಯಗಾಣದೆ ಹರೀಶ್ ತನ್ನ ಮೂರು ವರ್ಷದ ಪುತ್ರನನ್ನು ಕೆಲವು ಸಾವಿರ ರೂಪಾಯಿಗಳಿಗೆ ಕುಟುಂಬವೊಂದಕ್ಕೆ ಮಾರಾಟ ಮಾಡಿದ. ಈ ಮಾರಾಟ ಪ್ರಕ್ರಿಯೆ ಬಹಿರಂಗವಾಗುತ್ತಿದ್ದಂತೆಯೇ ಚುರುಕಾದ ಅಧಿಕಾರಿಗಳು, ಹಣ ನೀಡಿ ಅಕ್ರಮವಾಗಿ ದತ್ತು ತೆಗೆದುಕೊಂಡ ಕುಟುಂಬವನ್ನು, ಮಧ್ಯಸ್ಥಿಕೆ ವಹಿಸಿದ ವೈದ್ಯನನ್ನು ಬಂಧಿಸಿದ್ದಾರೆ. ಇಲ್ಲಿ ಮಗುವನ್ನು ದತ್ತು ಪಡೆದ ಕುಟುಂಬವಷ್ಟೇ ಅಪರಾಧಿಯೆ? ಒಬ್ಬ ದಿನಗೂಲಿ ನೌಕರ ತನ್ನ ಮಗುವನ್ನೇ ಮಾರಾಟ ಮಾಡುವಂತಹ ದೀನ ಸ್ಥಿತಿಗೆ ನೂಕಿದ ಆಸ್ಪತ್ರೆಯೂ ಅಪರಾಧಿಯಲ್ಲವೆ? ಈ ಸಂದರ್ಭದಲ್ಲಿ ‘ಖಾಸಗಿ ಆಸ್ಪತ್ರೆಗೆ ಹೋಗುವ ಅಗತ್ಯ ಏನಿತ್ತು?’ ಎನ್ನುವ ಪ್ರಶ್ನೆಯನ್ನು ಹಲವರು ಕೇಳಬಹುದು. ಕೈಯಲ್ಲಿ ಕಾಸಿಲ್ಲದಿದ್ದರೂ ಖಾಸಗಿ ಆಸ್ಪತ್ರೆಗೆ ಹೋಗುವಂತಹ ಅನಿವಾರ್ಯ ಸ್ಥಿತಿಗೆ ಅವನನ್ನು ದೂಡಿರುವುದು ಯಾವುದು? ಎನ್ನುವುದು ಕೂಡ ಮುಖ್ಯವಾಗುತ್ತದೆ. ಇದೇ ಸಂದರ್ಭದಲ್ಲಿ ಅವನನ್ನು ಅಂತಹ ಸ್ಥಿತಿಗೆ ತಳ್ಳಿದ ಕೇಂದ್ರ ಸರಕಾರದ ಜಿಎಸ್ಟಿ ತೆರಿಗೆಯ ಪಾಲು ಎಷ್ಟು ಎನ್ನುವುದು ಚರ್ಚೆಯಾಗಬೇಕಾಗಿದೆ.
ಕಳೆದ ಕೊರೋನ ಕಾಲದಲ್ಲಿ ಖಾಸಗಿ ಆಸ್ಪತ್ರೆಗಳು ಹೇಗೆ ಜನಸಾಮಾನ್ಯರನ್ನು ಲೂಟಿ ಮಾಡಿತು ಎನ್ನುವುದನ್ನು ನಾವು ನೋಡಿದ್ದೇವೆ. ನಮ್ಮ ಆರೋಗ್ಯ ವ್ಯವಸ್ಥೆ ಎಷ್ಟು ಕುಲಗೆಟ್ಟು ಹೋಗಿದೆ ಎನ್ನುವುದನ್ನು ಅದು ಬಹಿರಂಗ ಪಡಿಸಿತು. ಆಸ್ಪತ್ರೆಗೆ ದಾಖಲಿಸಿದ ರೋಗಿಗಳಿಗೆ ಬರೇ ಡೋಲೋ ಮಾತ್ರೆ ಕೊಟ್ಟು ಲಕ್ಷಾಂತರ ರೂಪಾಯಿ ಬಿಲ್ ಮಾಡಿತು. ಈ ಸಂದರ್ಭದಲ್ಲಿ ಹಲವರು ತಮ್ಮ ಮನೆ, ಜಮೀನು ಮಾರಿ ಆಸ್ಪತ್ರೆ ಬಿಲ್ ಪಾವತಿಸಬೇಕಾದ ಸ್ಥಿತಿ ನಿರ್ಮಾಣವಾಯಿತು. ಹಲವರು ಆಸ್ಪತ್ರೆಯಿಂದ ಬಿಡುಗಡೆಯಾಗುವುದಕ್ಕೆ ಯಾರ್ಯಾರದೋ ಕೈ ಕಾಲು ಹಿಡಿಯಬೇಕಾಯಿತು. ಬಡವರ ಗೋಳನ್ನು ಕೇಳುವವರೇ ಇದ್ದಿರಲಿಲ್ಲ. ಇಂತಹ ಸಂದರ್ಭದಲ್ಲಿ ಜನರನ್ನು ಕಾಪಾಡಬೇಕಾಗಿದ್ದು ಸಾರ್ವಜನಿಕ ಆರೋಗ್ಯ ವ್ಯವಸ್ಥೆ. ಆದರೆ ಪ್ರಮುಖ ನಗರ ಪ್ರದೇಶಗಳನ್ನು ಹೊರತು ಪಡಿಸಿದರೆ, ಈ ದೇಶದ ಸರಕಾರಿ ಆಸ್ಪತ್ರೆಗಳ ಸ್ಥಿತಿ ರೋಗಿಗಳ ಸ್ಥಿತಿಗಿಂತ ಕೆಳ ಮಟ್ಟದಲ್ಲಿತ್ತು. ಭಾರತದಲ್ಲಿ ಅತಿ ಹೆಚ್ಚು ಸಾವು ನೋವುಗಳು ಸಂಭವಿಸಲು ಈ ದೇಶದ ಸರಕಾರಿ ಆಸ್ಪತ್ರೆಗಳ ದೈನೇಸಿ ಸ್ಥಿತಿ ಮತ್ತು ಖಾಸಗಿ ಆಸ್ಪತ್ರೆಗಳ ಲಾಭಕೋರ ಮನಸ್ಥಿತಿ ಕಾರಣವಾಗಿತ್ತು. ಇದೇ ಸಂದರ್ಭದಲ್ಲಿ ‘ಹುಚ್ಚಿಯ ಮದುವೆಯಲ್ಲಿ ಉಂಡವನೇ ಜಾಣ’ ಎಂಬಂತೆ, ಸ್ವದೇಶಿ ಹೆಸರಿನಲ್ಲಿ ಪತಂಜಲಿಯಂತಹ ಸಂಸ್ಥೆಗಳು ಸರಕಾರದ ಕೋಟಿ ಗಟ್ಟಲೆ ಹಣವನ್ನು ಲೂಟಿ ಮಾಡಿತು. ಕೊರೋನದ ಕಾಲದಲ್ಲಾದ ನಾಶ ನಷ್ಟದಿಂದಲಾದರೂ ಪಾಠ ಕಲಿತು, ಈ ದೇಶದ ಆರೋಗ್ಯ ವ್ಯವಸ್ಥೆಯನ್ನು ಮೇಲೆತ್ತಲು ಸರಕಾರ ಗಂಭೀರ ಕ್ರಮಗಳನ್ನು ತೆಗೆದುಕೊಳ್ಳುವುದು ಅಗತ್ಯವಿತ್ತು.
ಸಾರ್ವಜನಿಕ ಆಸ್ಪತ್ರೆಗಳನ್ನು ಮೇಲೆತ್ತುವ ಮೂಲಕ ಆರೋಗ್ಯವಂತ ಭಾರತವನ್ನು ಕಟ್ಟುವುದು ಸರಕಾರದ ಮುಂದಿರುವ ಮೊದಲ ಆದ್ಯತೆಯಾಗಬೇಕಾಗಿತ್ತು ಅಥವಾ ಖಾಸಗಿ ಆಸ್ಪತ್ರೆಗಳಲ್ಲಿ ಜನಸಾಮಾನ್ಯರು ಚಿಕಿತ್ಸೆ ಪಡೆಯುವಂತಹ ಅವಕಾಶವನ್ನು ವಿಸ್ತಾರ ಮಾಡಿಕೊಡಬೇಕಾಗಿತ್ತು. ಇಂತಹ ಸಂದರ್ಭದಲ್ಲಿ ಮಧ್ಯಮ ವರ್ಗಕ್ಕೆ ಅತಿ ದೊಡ್ಡ ಆಶಾಕಿರಣ ಆರೋಗ್ಯ ವಿಮೆ. ಆಯುಷ್ಮಾನ್ ಭಾರತದ ಬಗ್ಗೆ ಕೇಂದ್ರ ಸರಕಾರ ಭಾರೀ ಪ್ರಚಾರ ಮಾಡಿತಾದರೂ, ಅದು ಇಡೀ ಭಾರತದ ಜನರನ್ನು ಒಳಗೊಳ್ಳುವಲ್ಲಿ ವಿಫಲವಾಗಿದೆ. ಈ ಯೋಜನೆ ಜಾರಿಗೆ ಬರುವ ಮೊದಲೇ ಕರ್ನಾಟಕವೂ ಸೇರಿದಂತೆ ಹಲವು ರಾಜ್ಯಗಳು ಆರೋಗ್ಯ ವಿಮೆಗೆ ಆದ್ಯತೆಯನ್ನು ನೀಡಿತ್ತು. ಇದೀಗ, ತೆರಿಗೆ ಸಂಗ್ರಹಿಸುವ ವಿಷಯದಲ್ಲಿ ಸರಕಾರ ಯಾವ ಮಟ್ಟವನ್ನು ತಲುಪಿದೆ ಎಂದರೆ, ಆರೋಗ್ಯ ವಿಮೆಯ ಕಂತುಗಳ ಮೇಲೆಯೂ ಶೇ. 18ರಷ್ಟು ಜಿಎಸ್ಟಿ ತೆರಿಗೆ ವಿಧಿಸಿ, ಕಂತುಗಳನ್ನು ದುಬಾರಿಗೊಳಿಸಿದೆ. ಪರಿಣಾಮವಾಗಿ ಜನರು ಆರೋಗ್ಯ ವಿಮೆಗಳಿಂದ ದೂರವಾಗುತ್ತಿದ್ದಾರೆ. ಇದು ಅಂತಿಮವಾಗಿ ಜನರ ಆರೋಗ್ಯದ ಮೇಲೆ ಅತ್ಯಂತ ಕೆಟ್ಟ ಪರಿಣಾಮಗಳನ್ನು ಬೀರುತ್ತಿದೆ. 2023-24ರ ಹಣಕಾಸು ವರ್ಷದಲ್ಲಿ ಆರೋಗ್ಯ ವಿಮೆಯ ಮೇಲಿನ ಕಂತುಗಳಿಂದ ಸರಕಾರ 8,262 ಕೋಟಿ ರೂಪಾಯಿ ಜಿಎಸ್ಟಿ ಸಂಗ್ರಹಿಸಿದೆ. ಮರು ವಿಮೆಯ ಕಂತುಗಳ ಮೇಲಿನ ಜಿಎಸ್ಟಿ ತೆರಿಗೆಯಿಂದ 1,484 ಕೋಟಿ ರೂಪಾಯಿ ಸಂಗ್ರಹಿಸಿದೆ. ಜನಸಾಮಾನ್ಯರು ತಮ್ಮ ಆರೋಗ್ಯದ ಮೇಲಿನ ಕಾಳಜಿಗಾಗಿ ಕಟ್ಟುತ್ತಿರುವ ವಿಮಾ ಕಂತುಗಳಿಂದ ದೋಚಿದ ಈ ತೆರಿಗೆ ಸಂಗ್ರಹಕ್ಕಾಗಿ ಸರಕಾರ ಕನಿಷ್ಠ ನಾಚಿಕೆಯೂ ಇಲ್ಲದೆ ಅದನ್ನೊಂದು ಸಾಧನೆಯಾಗಿ ಕೊಚ್ಚಿಕೊಳ್ಳುತ್ತಿದೆ. ಈ ಜಿಎಸ್ಟಿ ಹೇರಿಕೆಯಿಂದ ಹಿರಿಯ ನಾಗರಿಕರೂ ತೀವ್ರ ಬಾಧಿತರಾಗಿದ್ದಾರೆ. ಈ ತೆರಿಗೆ ಸಂಗ್ರಹದ ವಿರುದ್ಧ ಈಗಾಗಲೇ ವಿಮಾ ನೌಕರರ ಸಂಘ ಸೇರಿದಂತೆ ವಿವಿಧ ಸಂಘಟನೆಗಳು ಧ್ವನಿಯೆತ್ತಿವೆ. ಕೇಂದ್ರ ಸಚಿವ ನಿತಿನ್ ಗಡ್ಕರಿಯವರೇ ಈ ಬಗ್ಗೆ ವಿತ್ತ ಸಚಿವರಿಗೆ ಪತ್ರವನ್ನು ಬರೆದಿದ್ದಾರೆ. ವಿವಿಧ ರಾಜ್ಯಗಳ ಸಚಿವರೂ ಈ ತೆರಿಗೆಯನ್ನು ಹಿಂದೆಗೆದು ವಿಮಾ ಕಂತುಗಳು ದುಬಾರಿಯಾಗುವುದನ್ನು ತಡೆಯಬೇಕು ಎಂದು ಒತ್ತಾಯಿಸಿದ್ದಾರೆ.
ಜಿಎಸ್ಟಿ ಮಂಡಳಿಯ 54ನೇ ಸಭೆ ಸೋಮವಾರದಿಂದ ಆರಂಭವಾಗಲಿದೆ. ಈ ಸಭೆಯಲ್ಲಿ ಆರೋಗ್ಯ ವಿಮೆಯ ಮೇಲೆ ವಿಧಿಸಲಾಗಿರುವ ತೆರಿಗೆ ಪ್ರಮುಖ ವಿಷಯವಾಗಲಿದೆ ಎಂದು ನಂಬಲಾಗಿದೆ. ಆದರೆ, ತೆರಿಗೆ ರೂಪದಲ್ಲಿ ಜನರ ರಕ್ತ ಹೀರಲು ಸಿಕ್ಕಿರುವ ಅವಕಾಶವನ್ನು ಸರಕಾರ ಅಷ್ಟು ಸುಲಭದಲ್ಲಿ ಬಿಟ್ಟು ಕೊಡುವ ಸಾಧ್ಯತೆಗಳು ಕಾಣುತ್ತಿಲ್ಲ. ಸಾಧಾರಣವಾಗಿ ದುಬಾರಿ ಹೇರಿಕೆ ಮಾಡಿ ಜನರ ಪ್ರತಿಕ್ರಿಯೆಗೆ ತಕ್ಕಂತೆ ಹಿಂದಕ್ಕೆ ಅಥವಾ ಮುಂದಕ್ಕೆ ಹೆಜ್ಜೆಯಿಡುವುದು ಹಿಂದಿನಿಂದಲೂ ಮೋದಿ ಸರಕಾರದ ತಂತ್ರವಾಗಿದೆ. ಮಂಡಳಿಯಲ್ಲಿ ಪೂರ್ಣವಾಗಿ ತೆರಿಗೆಯನ್ನು ಹಿಂದೆಗೆಯುವ ಬದಲು, ಹಿರಿಯ ನಾಗರಿಕರಂತಹ ಕೆಲವು ವರ್ಗಗಳ ಮೇಲಿನ ತೆರಿಗೆಗಳನ್ನು ಹಿಂದೆಗೆದು ಅದನ್ನೇ ತನ್ನ ಸರಕಾರ ಜನರಿಗೆ ಮಹದುಪಕಾರವೆಂದು ಬಿಂಬಿಸಿಕೊಳ್ಳುವ ಸಾಧ್ಯತೆಗಳು ಇಲ್ಲದಿಲ್ಲ. ಜೀವ ವಿಮಾ ಪ್ರೀಮಿಯಂಗಳ ಮೇಲೆ ತೆರಿಗೆ ವಿಧಿಸುವುದು ಎಂದರೆ, ಜನರ ಅನಿಶ್ಚಿತ ಬದುಕಿನ ಮೇಲೆಯೇ ತೆರಿಗೆ ವಿಧಿಸಿ ಅದರ ಮೂಲಕ ಹಣ ಸಂಗ್ರಹಿಸಿದಂತೆ ಎಂದು ಕೇಂದ್ರ ಸಚಿವ ನಿತಿನ್ ಗಡ್ಕರಿಯವರೇ ವಿತ್ತ ಸಚಿವರಿಗೆ ಬರೆದ ಪತ್ರದಲ್ಲಿ ತಿಳಿಸಿದ್ದಾರೆ. ಜನರ ಪ್ರಾಣ ಮತ್ತು ಆರೋಗ್ಯ ಸರಕಾರದ ಹೊಣೆಗಾರಿಕೆಯಾಗಿದೆ. ಜನಸಾಮಾನ್ಯರು ತಮ್ಮ ಪ್ರಾಣ ಮತ್ತು ಆರೋಗ್ಯದ ಮೇಲಿನ ಚಿಂತೆಯಿಂದ, ವಿಮಾ ಹಣವನ್ನು ಕಟ್ಟುತ್ತಾರೆ. ಅನೇಕ ಸಂದರ್ಭದಲ್ಲಿ ಈ ವಿಮಾ ಹಣ ಅವರಿಗೆ ದೊರಕ ಬೇಕು ಎಂದೇನಿಲ್ಲ. ಕನಿಷ್ಠ ಆ ವಿಮೆಯ ಮೇಲೆ ಯಾವುದೇ ತೆರಿಗೆ ವಿಧಿಸದೆ ಜನರ ಆರೋಗ್ಯ ಮತ್ತು ಪ್ರಾಣದ ಬಗ್ಗೆ ಕಾಳಜಿ ವಹಿಸುವುದು ಸರಕಾರದ ಹೊಣೆಗಾರಿಕೆಯಾಗಿದೆ. ಜನರ ಭಯ, ಆತಂಕವನ್ನೇ ಬಂಡವಾಳವಾಗಿಸಿಕೊಂಡು ಅದರ ಮೇಲೆ ತೆರಿಗೆ ವಿಧಿಸುವುದು ಅತ್ಯಂತ ಅಮಾನವೀಯವಾಗಿದೆ. ಈ ಬಾರಿ ಜಿಎಸ್ಟಿ ಸಭೆಯು ಆರೋಗ್ಯ ವಿಮೆಯ ಮೇಲಿರುವ ಶೇ. 18 ತೆರಿಗೆಯನ್ನು ಪೂರ್ಣವಾಗಿ ಹಿಂದೆಗೆಯಬೇಕು. ಆಸ್ಪತ್ರೆಯ ಬಿಲ್ ಕಟ್ಟಲಾಗದೆ ಮಗುವನ್ನು ಮಾರಿದ ದಿನಗೂಲಿ ನೌಕರನ ವಿಷಯ ಹಣಕಾಸು ಸಚಿವೆಗೆ ತಿಳಿದರೆ, ಮಾರಾಟ ಮಾಡಿದ ಮಗುವಿನ ಮೇಲೆ ಎಷ್ಟು ಜಿಎಸ್ಟಿ ತೆರಿಗೆ ವಿಧಿಸಬಹುದು ಎಂದು ಅವರು ಯೋಚಿಸದೇ ಇದ್ದರೆ ಅದುವೇ ದೇಶದ ಪುಣ್ಯ ಎಂದು ಭಾವಿಸಬೇಕಾದ ವರ್ತಮಾನದಲ್ಲ್ ನಾವಿದ್ದೇವೆ.