ಮೋದಿ ವಿರುದ್ಧ ಜನಾದೇಶ
ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ
ಪ್ರಧಾನಿ ಮೋದಿಯವರ ಧ್ಯಾನವನ್ನು ಭಂಗಗೊಳಿಸುವಂತಹ ಜನಾದೇಶವೊಂದು ಹೊರಬಿದ್ದಿದೆ. ತನ್ನನ್ನು ತಾನು ದೇವರೆಂದು ಮಾಧ್ಯಮಗಳ ಮುಂದೆ ಸ್ವಯಂ ಘೋಷಿಸಿಕೊಂಡ ಮೋದಿಯವರಿಗೆ ನೀವು ನಮ್ಮಂತಹ ಸಾಮಾನ್ಯ ಮನುಷ್ಯರೇ ಆಗಿದ್ದೀರಿ ಎನ್ನುವುದನ್ನು ಮತದಾರರು ನೆನಪಿಸಿಕೊಟ್ಟಿದ್ದಾರೆ. ಬಿಜೆಪಿ ಸ್ವತಂತ್ರವಾಗಿ ಅಧಿಕಾರ ಹಿಡಿಯುವ ಸಾಮರ್ಥ್ಯವನ್ನು ಈ ಬಾರಿ ಕಳೆದುಕೊಂಡಿದೆ. ಮಿತ್ರ ಪಕ್ಷಗಳಿಗೆ ತಲೆ ಬಾಗಲೇ ಬೇಕಾದ ಸ್ಥಿತಿಯನ್ನು ಮೋದಿ ಮತ್ತು ಅಮಿತ್ ಶಾ ಅವರಿಗೆ ದೇಶದ ಜನತೆ ನಿರ್ಮಾಣ ಮಾಡಿದ್ದಾರೆ. ಇದನ್ನು ಆಡಳಿತ ವಿರೋಧಿ, ಬಿಜೆಪಿ ವಿರೋಧಿ ಜನಾದೇಶ ಎನ್ನುವುದಕ್ಕಿಂತ ಮೋದಿ ವಿರೋಧಿ ಜನಾದೇಶ ಎನ್ನುವುದೇ ಹೆಚ್ಚು ಸರಿ. ಪ್ರಧಾನಿ ಮೋದಿಯವರ ಆರ್ಥಿಕ ನೀತಿ, ದ್ವೇಷ ರಾಜಕಾರಣಗಳಿಗೆ ಶ್ರೀಸಾಮಾನ್ಯರು ನೀಡಿದ ಉತ್ತರ ಇದಾಗಿದೆ. ಹಿಂದುತ್ವ ಸಂಘಟನೆಗಳು, ತಳಮಟ್ಟದ ಕಾರ್ಯಕರ್ತರ ಪಡೆ, ಅಪಾರ ಹಣ, ಕಾರ್ಪೊರೇಟ್ ದೊರೆಗಳು, ಹಿಂದೂ-ಮುಸ್ಲಿಮ್ ದ್ವೇಷ ರಾಜಕಾರಣ, ರಾಮಮಂದಿರ, ಮಾಧ್ಯಮಗಳು, ತನಿಖಾ ಸಂಸ್ಥೆಗಳು ಇವೆಲ್ಲವನ್ನು ಜೊತೆಗಿಟ್ಟುಕೊಂಡು ಚುನಾವಣೆಯನ್ನು ಎದುರಿಸಿದ ಮೋದಿ ತಂಡಕ್ಕೆ ಇಂಡಿಯಾ ಮೈತ್ರಿ ಸಮರ್ಥವಾಗಿಯೇ ಉತ್ತರಿಸಿದೆ. ಎನ್ಡಿಎ ಗೆದ್ದರೂ ಪ್ರಧಾನಿ ಮೋದಿಯವರು ಮಂಕಾಗಿದ್ದಾರೆ. ಇಂಡಿಯಾ ಸೋತಿದೆಯಾದರೂ, ಹೊಸ ಹೋರಾಟಕ್ಕೆ ಸಜ್ಜಾಗಲು ಈ ಬಾರಿಯ ಫಲಿತಾಂಶ ಇನ್ನಷ್ಟು ಸ್ಫೂರ್ತಿಯನ್ನು ನೀಡಿದೆ.
ಚುನಾವಣೆ ಘೋಷಣೆಯ ಎರಡು ಹಂತಗಳು ಮುಗಿಯುತ್ತಿದ್ದಂತೆಯೇ ನರೇಂದ್ರ ಮೋದಿಯವರ ಮೂಗಿಗೆ ಸೋಲಿನ ವಾಸನೆ ಬಡಿದಿತ್ತು. ಪರಿಣಾಮವಾಗಿ ಒಬ್ಬ ಪ್ರಧಾನಿಯಾಗಿ ಆಡಬಾರದ ಮಾತುಗಳನ್ನು ಸಾರ್ವಜನಿಕ ವೇದಿಕೆಗಳಲ್ಲಿ ಆಡತೊಡಗಿದರು. ಹಿಂದೂ-ಮುಸ್ಲಿಮ್ ಎಂದು ಬಹಿರಂಗವಾಗಿ ಮೂರನೇ ದರ್ಜೆಯ ಭಾಷೆಯಲ್ಲಿ ಮಾತನಾಡ ತೊಡಗಿದರು. ಈ ಬಾರಿಯ ಫಲಿತಾಂಶ ಪರೋಕ್ಷವಾಗಿ ಆ ದ್ವೇಷ ಭಾಷಣಕ್ಕೆ ಮತದಾರರು ಕೊಟ್ಟ ಉತ್ತರ ಎನ್ನುವುದರಲ್ಲಿ ಎರಡು ಮಾತಿಲ್ಲ. ‘ರಾಮಮಂದಿರ’ವನ್ನೇ ಪಕ್ಷದ ಸಾಧನೆಯೆಂದು ಬಿಂಬಿಸಿ ಅದರ ಹೆಸರಿನಲ್ಲೂ ಪ್ರಧಾನಿ ಮೋದಿಯವರು ಮತ ಯಾಚಿಸಿದರು. ವಿಪರ್ಯಾಸವೆಂದರೆ, ಅಯೋಧ್ಯೆಯಲ್ಲೇ ಬಿಜೆಪಿ ನೆಲೆ ಕಳೆದುಕೊಂಡಿತು. ಉತ್ತರ ಪ್ರದೇಶದಲ್ಲಿ ಹೀನಾಯ ಸೋಲನುಭವಿಸಿತು. ಉತ್ತರ ಪ್ರದೇಶದಲ್ಲಿ ಆದಿತ್ಯನಾಥ್ ಸರಕಾರ ಅನುಸರಿಸುತ್ತಿರುವ ದ್ವೇಷ ರಾಜಕೀಯಕ್ಕೂ ಇದು ತಪರಾಕಿಯಾಗಿದೆ. ಮಹಾರಾಷ್ಟ್ರದಲ್ಲೂ ಬಿಜೆಪಿ ಹಿನ್ನಡೆ ಅನುಭವಿಸಿದೆ. 400 ಸ್ಥಾನಗಳನ್ನು ಪಡೆಯುವ ಮೂಲಕ ಸಂವಿಧಾನವನ್ನೇ ಬದಲಾಯಿಸುತ್ತೇನೆ ಎನ್ನುವ ಅದರ ಉದ್ಧಟತನಕ್ಕೂ ಈ ಚುನಾವಣೆಯಲ್ಲಿ ಪೆಟ್ಟು ಬಿದ್ದಿದೆ. ಹಿಂದುತ್ವದ ರಾಜಕೀಯಕ್ಕೆ ಈ ಬಾರಿ ಸಣ್ಣದೊಂದು ಹಿನ್ನಡೆಯಾಗಿದೆ. ಹಾಗೆಂದು ಅದು ಪೂರ್ಣ ಪ್ರಮಾಣದ ಹಿನ್ನಡೆ ಅಲ್ಲ ಎನ್ನುವುದನ್ನು ನಾವು ಮರೆಯಬಾರದು. ಉತ್ತರ ಪ್ರದೇಶದಲ್ಲಿ ಕಳೆದುಕೊಂಡದ್ದನ್ನು ಅದು ಹಲವು ರಾಜ್ಯಗಳಲ್ಲಿ ಮರಳಿ ಪಡೆದಿದೆ. ದಿಲ್ಲಿಯನ್ನು ಬಿಜೆಪಿ ಸಂಪೂರ್ಣ ಗುಡಿಸಿ ಹಾಕಿದೆ. ಕೇಜ್ರಿವಾಲ್ರನ್ನು ಬೋನಿನಲ್ಲಿಟ್ಟು ಬಿಜೆಪಿ ದಿಲ್ಲಿಯನ್ನು ಗೆದ್ದುಕೊಂಡಿತು. ಆಪ್ ಭ್ರಷ್ಟಾಚಾರ, ಪಕ್ಷದೊಳಗಿನ ಗೊಂದಲ, ಕೇಜ್ರಿವಾಲ್ರ ದುರಹಂಕಾರ ಇವೆಲ್ಲವೂ ಬಿಜೆಪಿಗೆ ವರವಾಯಿತು. ಈಶಾನ್ಯ ಭಾರತದಲ್ಲಿ ಬಿಜೆಪಿ ಬಲವಾಗಿ ಬೇರೂರಿದೆಯಾದರೂ ಮಣಿಪುರದಲ್ಲಿ ಅದು ಎಡವಿದೆ. ಮಣಿಪುರಕ್ಕೆ ಬಿಜೆಪಿ ಮಾಡಿದ ಅನ್ಯಾಯಕ್ಕೆ ಹೋಲಿಸಿದರೆ ಇದು ಏನೇನೂ ಅಲ್ಲ.
ದಕ್ಷಿಣ ಭಾರತ ಬಿಜೆಪಿಗೆ ದೊಡ್ಡ ಮಟ್ಟದಲ್ಲಿ ಸಹಕರಿಸಿಲ್ಲವಾದರೂ, ಆಂಧ್ರ, ತೆಲಂಗಾಣದಲ್ಲಿ ಅದು ಸಾಧಿಸಿದ ಸಾಧನೆಯನ್ನು ನಿರ್ಲಕ್ಷಿಸುವಂತಿಲ್ಲ. ಎಲ್ಲಕ್ಕಿಂತ ಮುಖ್ಯವಾಗಿ, ಕೇರಳದಲ್ಲಿ ಅದು ತನ್ನ ಖಾತೆಯನ್ನು ತೆರೆದಿದೆ. ಇದು ದಕ್ಷಿಣ ಭಾರತದ ಮಟ್ಟಿಗೆ ಒಳ್ಳೆಯ ಸೂಚನೆಯಲ್ಲ. ಕರ್ನಾಟಕದಲ್ಲಿ ವಿಧಾನಸಭಾ ಚುನಾವಣೆಯ ಫಲಿತಾಂಶದ ಕನವರಿಕೆಯಲ್ಲೇ ಕಾಂಗ್ರೆಸ್ ಈ ಬಾರಿ ಲೋಕಸಭಾ ಚುನಾವಣೆಯನ್ನು ಎದುರಿಸಿತು. ಗ್ಯಾರಂಟಿ ಯೋಜನೆಗಳು ಈ ಬಾರಿ ಕಾಂಗ್ರೆಸ್ಗೆ ಭಾರೀ ಗೆಲುವನ್ನು ತಂದುಕೊಡಬಹುದು ಎಂದು ನಂಬಲಾಗಿತ್ತು. ಆದರೆ ನಿರೀಕ್ಷಿಸಿದ ಸ್ಥಾನವನ್ನು ಪಡೆದುಕೊಳ್ಳಲು ಕಾಂಗ್ರೆಸ್ಗೆ ಸಾಧ್ಯವಾಗಲಿಲ್ಲ. ಕಳೆದ ಬಾರಿ ಕಾಂಗ್ರೆಸ್ ಪಕ್ಷ ಪಡೆದ ಸ್ಥಾನಗಳಿಗೆ ಹೋಲಿಸಿದರೆ ಈ ಬಾರಿಯ ಸಾಧನೆ ದೊಡ್ಡದೆಂದೇ ಭಾವಿಸಬೇಕು. ಒಂದು ಸ್ಥಾನದಿಂದ ಅದು 9 ಸ್ಥಾನಕ್ಕೆ ಜಿಗಿದಿದೆ. ಒಂದಿಷ್ಟು ತಳಮಟ್ಟದಲ್ಲಿ ಪ್ರಾಮಾಣಿಕವಾಗಿ ಕೆಲಸ ಮಾಡಿದ್ದಿದ್ದರೆ, ಗ್ಯಾರಂಟಿ ಯೋಜನೆಗಳನ್ನು ಮತಗಳಾಗಿಸಿ ಪರಿವರ್ತಿಸಲು ತಳಸ್ತರದಲ್ಲಿ ಶ್ರಮಿಸಿದ್ದಿದ್ದರೆ ಕರ್ನಾಟಕದಲ್ಲಿ ಇನ್ನಷ್ಟು ಸ್ಥಾನಗಳನ್ನು ಪಡೆಯುವ ಅವಕಾಶ ಕಾಂಗ್ರೆಸ್ಗಿತ್ತು. ಕರ್ನಾಟಕದ ಪಾಲಿಗೆ ಒಂದು ಸಮಾಧಾನದ ವಿಷಯವೆಂದರೆ, ಹಾಸನದಲ್ಲಿ ಪ್ರಜ್ವಲ್ ರೇವಣ್ಣ ಸೋತಿರುವುದು. ಆತ ಗೆದ್ದಿದ್ದರೆ ಆ ಗೆಲುವನ್ನೇ ಗುರಾಣಿಯಾಗಿಟ್ಟುಕೊಂಡು, ಆರೋಪಗಳಿಂದ ನುಣುಚಿಕೊಳ್ಳುತ್ತಿದ್ದ. ಹಾಸನದ ಮತದಾರರು ಪ್ರಜ್ವಲ್ನನ್ನು ಸೋಲಿಸಿ ಕರ್ನಾಟಕದ ಮಹಿಳೆಯರ ಘನತೆಯನ್ನು ಎತ್ತಿ ಹಿಡಿದರು. ಮೋದಿಯ ಜೊತೆ ಜೊತೆಗೇ ಮಾಧ್ಯಮಗಳನ್ನು ಮತದಾರ ಸೋಲಿಸಿದ್ದಾನೆ. ಸರಕಾರದ ಜನವಿರೋಧಿ ನೀತಿಗಳನ್ನು, ಅಕ್ರಮಗಳನ್ನು ಯಾವತ್ತೂ ಚರ್ಚಿಸದೇ ಚುನಾವಣೆಯುದ್ದಕ್ಕೂ ಪ್ರಧಾನಿ ಮೋದಿಗೆ ಕೊಡೆ ಹಿಡಿದ ಮಾಧ್ಯಮಗಳು ಚುನಾವಣೋತ್ತರ ಸಮೀಕ್ಷೆಯ ಮೂಲಕ ಸ್ವಯಂ ಫಲಿತಾಂಶವನ್ನೂ ಘೋಷಿಸಿದ್ದವು. ಚುನಾವಣೋತ್ತರ ಸಮೀಕ್ಷೆಗಳು ಎನ್ಡಿಎಗೆ 400 ಸ್ಥಾನಗಳನ್ನು ಕೊಟ್ಟು ಬಿಟ್ಟಿದ್ದವು. ಮತದಾರರನ್ನು ಸಂಪೂರ್ಣ ನಿರ್ಲಕ್ಷಿಸಿ ಪರೋಕ್ಷವಾಗಿ ಮಾಧ್ಯಮಗಳೂ ಮೋದಿಯಂತೆಯೇ ತಮ್ಮನ್ನು ತಾವು ‘ದೇವರೆಂದು’ ಘೋಷಿಸಿಕೊಂಡಿದ್ದರು. ಈ ಮಾಧ್ಯಮ ದೇವರುಗಳ ಸ್ಥಾನ ಎಲ್ಲಿ ಎನ್ನುವುದನ್ನು ಮತದಾರ ಫಲಿತಾಂಶದಲ್ಲಿ ತೋರಿಸಿಕೊಟ್ಟಿದ್ದಾನೆ.
ಬಹುಮತ ಇಲ್ಲದೇ ಇದ್ದರೂ ಇಂಡಿಯಾ ಮೈತ್ರಿಕೂಟವು ನಿತೀಶ್ ಕುಮಾರ್, ಚಂದ್ರಬಾಬು ನಾಯ್ಡುರಂತಹ ಕೆಲವು ನಾಯಕರ ಜೊತೆಗೆ ಮಾತುಕತೆ ನಡೆಸಿ ಅಧಿಕಾರ ಹಿಡಿಯುವ ಪ್ರಯತ್ನ ನಡೆಸುತ್ತಿದೆ. ಇದು ನಿಜಕ್ಕೂ ಅಪಾಯಕಾರಿ ನಡೆಯಾಗಿದೆ. ಇಂಡಿಯಾ ಮೈತ್ರಿ ಕೂಟ ತನ್ನ ಹೋರಾಟ ಇಲ್ಲಿಗೆ ಮುಗಿಯಿತು ಎಂದು ನಿರ್ಧರಿಸದೇ, ವಿರೋಧ ಪಕ್ಷದಲ್ಲಿದ್ದುಕೊಂಡು ಬಿಜೆಪಿಯ ವಿರುದ್ಧ ತನ್ನ ಸಂಘಟಿತ ಹೋರಾಟವನ್ನು ಮುಂದುವರಿಸಬೇಕಾಗಿದೆ. ಈಗಿನ ಗೆಲುವನ್ನು ಮುಂದಿನ ಹೋರಾಟಕ್ಕೆ ಅದು ಸಮರ್ಥವಾಗಿ ಬಳಸಿಕೊಳ್ಳಬೇಕು. ಇಂಡಿಯಾ ಅಧಿಕಾರ ಹಿಡಿಯದೇ ಇರಬಹುದು, ಆದರೆ ಎನ್ಡಿಎ ಒಳಗೆ ಮುಖ್ಯವಾಗಿ ಬಿಜೆಪಿಯೊಳಗೆ ಇದು ಬಹಳಷ್ಟು ತಲ್ಲಣಗಳನ್ನು ಸೃಷ್ಟಿಸಲಿದೆ. ಮುಖ್ಯವಾಗಿ ಮೋದಿ, ಅಮಿತ್ ಶಾ ಅವರಿಗೆ ಬಿಜೆಪಿಯೊಳಗೆ ಮೂಗುದಾರ ಬೀಳಲಿದೆ. ಫಲಿತಾಂಶ ಹೊರ ಬಿದ್ದ ಬೆನ್ನಿಗೇ ನಿತೀಶ್ ಕುಮಾರ್ ಕುರಿತಂತೆ ವದಂತಿಗಳು ಹಬ್ಬಿವೆ. ಉಪ ಪ್ರಧಾನಿ ಹುದ್ದೆಗೆ ಅವರು ಪ್ರಸ್ತಾವ ಇಟ್ಟಿದ್ದಾರೆ ಎನ್ನುವ ಮಾತುಗಳಿವೆ. ಈ ಚರ್ಚೆ ಅಂತಿಮವಾಗಿ ಪ್ರಧಾನಿ ಸ್ಥಾನದಿಂದ ನರೇಂದ್ರ ಮೋದಿಯವರನ್ನು ಬದಿಗೆ ಸರಿಸುವಂತೆ ಮಾಡಿದರೆ ಅಚ್ಚರಿಯಿಲ್ಲ. ಎನ್ಡಿಎ ಒಳಗೆ ಪ್ರಧಾನಿ ಮೋದಿ ಮತ್ತು ಅಮಿತ್ ಶಾ ಅವರ ಕುರಿತಂತೆ ಸಾಕಷ್ಟು ಅಸಮಾಧಾನಗಳಿವೆ. ಅದನ್ನು ಹೊರ ಹಾಕುವ ಸಮಯಕ್ಕಾಗಿ ಕಾಯುತ್ತಿರುವವರು ಹಲವರಿದ್ದಾರೆ. ಎನ್ಡಿಎಯೇ ಪ್ರಧಾನಿಯ ಆಯ್ಕೆಯನ್ನು ಮಾಡುತ್ತದೆ ಎಂದಾದರೆ ನಿತಿನ್ ಗಡ್ಕರಿ ಹೆಸರು ಮುನ್ನೆಲೆಗೆ ಬರುವ ಸಾಧ್ಯತೆಗಳಿವೆ. ಹಾಗಾದಲ್ಲಿ ದಿಲ್ಲಿಯಲ್ಲಿ ಗುಜರಾತಿಗಳ ಪ್ರಾಬಲ್ಯ ಕೊನೆಯಾದಂತೆಯೇ ಸರಿ. ಕನಿಷ್ಠ ಈ ಫಲಿತಾಂಶ ಪ್ರಧಾನಿ ಸ್ಥಾನದಿಂದ ಮೋದಿಯನ್ನು ಕೆಳಗಿಳಿಸಿದರೂ ಅದು ಇಂಡಿಯಾ ಮೈತ್ರಿ ಕೂಟದ ಅತಿ ದೊಡ್ಡ ಗೆಲುವಾಗಿದೆ.