ಪೊಲೀಸ್ ವ್ಯವಸ್ಥೆಗೆ ಸವಾಲು ಹಾಕಿದ ಮಂಗಳೂರಿನ ಬ್ಯಾಂಕ್ ದರೋಡೆ

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ
ಮೊದಲೆಲ್ಲ ಬ್ಯಾಂಕುಗಳಿಂದ ದರೋಡೆಕೋರರು ದರೋಡೆ ಮಾಡುತ್ತಿದ್ದರೆ, ಕಳೆದ ಒಂದು ದಶಕದಿಂದ ಬ್ಯಾಂಕ್‌ಗಳೇ ಗ್ರಾಹಕರನ್ನು ದರೋಡೆ ಮಾಡುತ್ತಿವೆ. ಒಂದು ಕಾಲದಲ್ಲಿ ಕಳ್ಳರು ಭಾರೀ ಕಷ್ಟಪಟ್ಟು ಬ್ಯಾಂಕುಗಳನ್ನು ಮುರಿದು ದರೋಡೆ ಮಾಡುತ್ತಿದ್ದರೆ, ಇಂದು ಬ್ಯಾಂಕುಗಳು ಕಾನೂನುಗಳ ನೆರವಿನಿಂದಲೇ ಬಗೆ ಬಗೆಯ ದಂಡಗಳನ್ನು ಹಾಕುತ್ತಾ ಗ್ರಾಹಕರನ್ನು ಹಾಡಹಗಲೇ ಲೂಟಿ ಮಾಡುತ್ತವೆ. ಬೃಹತ್ ಕಾರ್ಪೊರೇಟ್ ಉದ್ಯಮಿಗಳು ಬ್ಯಾಂಕುಗಳಿಂದ ಕೋಟಿ ಕೋಟಿ ರೂ. ಸಾಲ ಪಡೆದು ಅವುಗಳಿಗೆ ವಂಚಿಸಿ ವಿದೇಶದಲ್ಲಿ ತಲೆಮರೆಸಿಕೊಂಡರೆ, ಅವರು ಲೂಟಿ ಮಾಡಿದ ಹಣವನ್ನು ಬ್ಯಾಂಕ್‌ಗಳು ಬಡಗ್ರಾಹಕರಿಂದ ತುಂಬಿಸಿಕೊಳ್ಳಲು ಪ್ರಯತ್ನಿಸುತ್ತಿವೆ. ಉದ್ಯಮಿಗಳಿಗೆ ನೀಡಿದ ಪರೋಕ್ಷ ಸಾಲ ಮನ್ನಾ ಅಥವಾ ರೈಟ್ ಆಫ್ ಕೊಡುಗೆಗಳಿಂದ ನಷ್ಟದಲ್ಲಿದ್ದ ಬ್ಯಾಂಕ್‌ಗಳನ್ನು ಉಳಿಸುವುದಕ್ಕಾಗಿ ಕರ್ನಾಟಕವು ಇಲ್ಲಿ ಹುಟ್ಟಿ ಬೆಳೆದ ಹಲವು ಬ್ಯಾಂಕುಗಳನ್ನು ಬಲಿಕೊಡಬೇಕಾಯಿತು. ಒಂದು ರೀತಿಯಲ್ಲಿ ಬ್ಯಾಂಕುಗಳನ್ನು ಬ್ಯಾಂಕುಗಳೇ ದೋಚಿದವು. ರೈತರು, ಸಣ್ಣ ಪುಟ್ಟ ಉದ್ಯಮಿಗಳು ಸೇರಿ ಕಟ್ಟಿದ ಕರಾವಳಿಯ ಹಲವು ಬ್ಯಾಂಕುಗಳು ಉತ್ತರ ಭಾರತದ ಬ್ಯಾಂಕ್‌ಗಳ ತಲೆಬರಹದೊಂದಿಗೆ ಹೊಸ ರೂಪವನ್ನು ಪಡೆದವು. ಇನ್ನು ಕೆಲವು ವರ್ಷಗಳು ಕಳೆದರೆ, ಕರ್ನಾಟಕದ ಹೆಮ್ಮೆಯಾಗಿದ್ದ ಮೈಸೂರು ಬ್ಯಾಂಕ್, ವಿಜಯಬ್ಯಾಂಕ್, ಕಾರ್ಪೊರೇಷನ್ ಬ್ಯಾಂಕ್, ಸಿಂಡಿಕೇಟ್ ಬ್ಯಾಂಕ್ ಜನಮಾನಸದಿಂದ ಸಂಪೂರ್ಣ ಅಳಿಸಿಹೋಗಲಿದೆ. ಬ್ಯಾಂಕುಗಳ ಸಂಪೂರ್ಣ ಖಾಸಗೀಕರಣದತ್ತ ಇಡುತ್ತಿರುವ ಹೆಜ್ಜೆಗಳೆಲ್ಲವು ದರೋಡೆಗಳ ಬೇರೆ ಬೇರೆ ಮುಖಗಳೇ ಆಗಿವೆ.
ನರೇಂದ್ರ ಮೋದಿಯ ಭಾರತದಲ್ಲಿ ದರೋಡೆಗಳು ಕೂಡ ಡಿಜಿಟಲೀಕರಣಗೊಂಡಿವೆ. ಈ ಹಿಂದೆಲ್ಲ ಬ್ಯಾಂಕುಗಳ ತಿಜೋರಿ ಮುರಿದು ಹಣ ದೋಚಬೇಕಾಗುತ್ತಿತ್ತು. ಈಗ, ಎಲ್ಲೋ ದೂರದಲ್ಲಿ ಕೂತು ಯಾವುದೋ ಗ್ರಾಹಕನೊಬ್ಬನ ಖಾತೆಗೆ ನುಗ್ಗಿ ಲಕ್ಷಾಂತರ ರೂಪಾಯಿ ದರೋಡೆ ಮಾಡಬಹುದಾಗಿದೆ. ಹಲವು ಬ್ಯಾಂಕ್ ಖಾತೆಗಳಿಗೆ ನುಗ್ಗಿ ಪ್ರತಿ ದಿನ ಕೋಟ್ಯಂತರ ರೂಪಾಯಿಗಳನ್ನು ದುಷ್ಕರ್ಮಿಗಳು ದರೋಡೆ ಮಾಡುತ್ತಾರಾದರೂ, ಪೊಲೀಸ್ ಇಲಾಖೆ ಅಸಹಾಯಕವಾಗಿದೆ. ಈ ಹಿಂದೆಲ್ಲ ತಿಜೋರಿ ಮುರಿದು ಬ್ಯಾಂಕ್ ದರೋಡೆ ನಡೆದರೆ ಅದರ ಹೊಣೆಯನ್ನು ಬ್ಯಾಂಕ್‌ಗಳು ಹೊತ್ತುಕೊಳ್ಳುತ್ತಿತ್ತು. ಡಿಜಿಟಲ್ ವಂಚನೆಯ ಮೂಲಕ ನಡೆಯುವ ದರೋಡೆಗಳಿಗೆ ಗ್ರಾಹಕರೇ ಹೊಣೆ. ಬ್ಯಾಂಕುಗಳನ್ನು ಆರೋಪಿ ಸ್ಥಾನದಲ್ಲಿ ನಿಲ್ಲಿಸುವಂತಿಲ್ಲ. ಪೊಲೀಸ್ ಇಲಾಖೆಗೆ ಅಪರಾಧಿಗಳನ್ನು ಪತ್ತೆ ಹಚ್ಚಿ, ಕಳವಾದ ಹಣವನ್ನು ಹುಡುಕಿಕೊಡುವ ಹೊಣೆಗಾರಿಕೆಯೂ ಇಲ್ಲ. ವಿದ್ಯಾವಂತರೇ ಈ ಡಿಜಿಟಲ್ ವಂಚನೆಗಳಿಗೆ ಬಲಿಯಾಗುತ್ತಿರುವಾಗ, ಗ್ರಾಮೀಣ ಪ್ರದೇಶದಲ್ಲಿರುವ ಬಡ ಗ್ರಾಹಕರ ಸ್ಥಿತಿ ಏನಾಗಬೇಕು? ಬುದ್ಧಿವಂತರ ಜಿಲ್ಲೆಯೆಂದು ಗುರುತಿಸಿಕೊಂಡಿರುವ ದಕ್ಷಿಣ ಕನ್ನಡವೂ ಕೂಡ ಇಂತಹ ಡಿಜಿಟಲ್ ವಂಚನೆಗಳಿಗಾಗಿ ಪ್ರತಿ ದಿನ ಸುದ್ದಿಯಾಗುತ್ತಿದೆ. ಇದೇ ಹೊತ್ತಿಗೆ, ಇಲ್ಲಿನ ಸಹಕಾರಿ ಬ್ಯಾಂಕ್‌ನಲ್ಲಿ ಹಾಡಹಗಲೇ ದರೋಡೆಯೊಂದು ನಡೆದಿದ್ದು ರಾಜ್ಯವನ್ನು ತಲ್ಲಣಿಸುವಂತೆ ಮಾಡಿದೆ.
ಡಿಜಿಟಲ್ ದರೋಡೆಗಳು ಹೆಚ್ಚಾದ ದಿನಗಳಿಂದ, ಬ್ಯಾಂಕ್‌ಗಳ ನೇರ ದರೋಡೆಗಳು ಬಹಳಷ್ಟು ಕಡಿಮೆಯಾಗಿತ್ತು. ಎಲ್ಲೋ ಬಿಹಾರ, ಉತ್ತರ ಪ್ರದೇಶದಂತಹ ರಾಜ್ಯಗಳಲ್ಲಿಯಷ್ಟೇ ಹಾಡಹಗಲೇ ದರೋಡೆಕೋರರು ಬ್ಯಾಂಕ್‌ಗಳಿಗೆ ನುಗ್ಗಿ ಪಿಸ್ತೂಲ್ ತೋರಿಸಿ ದರೋಡೆ ನಡೆಸುವ ಘಟನೆಗಳು ವರದಿಯಾಗುತ್ತಿದ್ದವು. ಆದರೆ, ಇತ್ತೀಚೆಗೆ ದಕ್ಷಿಣ ಕನ್ನಡಜಿಲ್ಲೆಯಲ್ಲಿ ಬಿಹಾರ, ಉತ್ತರಪ್ರದೇಶಗಳಲ್ಲಿ ನಡೆಯುವ ರೀತಿಯ ಸಿನಿಮೀಯ ಮಾದರಿಯ ಅಪರಾಧ ಪ್ರಕರಣಗಳು ಹೆಚ್ಚುತ್ತಿವೆ. ಕೆಲವು ದಿನಗಳ ಹಿಂದೆ, ದಕ್ಷಿಣ ಕನ್ನಡ ಜಿಲ್ಲೆಯ ವಿಟ್ಲ ಸಮೀಪದ ಉದ್ಯಮಿಯೊಬ್ಬರ ಮನೆಗೆ ಈ.ಡಿ. ಅಧಿಕಾರಿಗಳು ಎಂದು ಹೇಳಿಕೊಂಡು ನುಗ್ಗಿದ ದರೋಡೆಕೋರರು ಹಲವು ಗಂಟೆಗಳು ಆ ಮನೆಯಲ್ಲಿ ಉಳಿದು, ಕೋಟ್ಯಂತರ ರೂಪಾಯಿಯನ್ನು ದೋಚಿಕೊಂಡು ಹೋಗಿದ್ದರು. ಆ ಘಟನೆ ನಡೆದು ಹದಿನೈದು ದಿನಗಳಲ್ಲಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ದಕ್ಷಿಣ ಕನ್ನಡ ಜಿಲ್ಲೆಯ ಪ್ರವಾಸದಲ್ಲಿದ್ದಾಗಲೇ ಮಂಗಳೂರಿನ ಕೋಟೆಕಾರ್ ಸಹಕಾರಿ ಬ್ಯಾಂಕಿಗೆ ಮಧ್ಯಾಹ್ನದ ಹೊತ್ತಿಗೆ ಶಸ್ತ್ರಾಸ್ತ್ರಗಳ ಜೊತೆಗೆ ನುಗ್ಗಿದ ದುಷ್ಕರ್ಮಿಗಳು ಕೋಟ್ಯಂತರ ರೂಪಾಯಿಯನ್ನು ದೋಚಿಕೊಂಡು ಹೋಗಿದ್ದಾರೆ. ಈವರೆಗೆ ಕೋಮುಗಲಭೆಗಳಿಗಾಗಿ ಮಂಗಳೂರು ರಾಜ್ಯ ಮಟ್ಟದಲ್ಲಿ ಸುದ್ದಿ ಮಾಡುತ್ತಿತ್ತು. ಇದೀಗ ಇತರ ಅಪರಾಧಗಳಲ್ಲೂ ತಾನು ಮುಂದಿದ್ದೇನೆ ಎಂದು ಘೋಷಿಸಿಕೊಳ್ಳುತ್ತಿದೆ.
ಮಂಗಳೂರಿನ ತಲಪಾಡಿ ಸಮೀಪದ ಕೋಟೆಕಾರ್ ಸಹಕಾರಿ ಬ್ಯಾಂಕನ್ನು ಶುಕ್ರವಾರ ಮಧ್ಯಾಹ್ನದ ಹೊತ್ತಿಗೆ ಕಾರೊಂದರಲ್ಲಿ ಬಂದ ಆರು ಜನರ ತಂಡ ಪಿಸ್ತೂಲ್, ತಲವಾರು ಸಹಿತ ಮಾರಕಾಸ್ತ್ರಗಳೊಂದಿಗೆ ದರೋಡೆಗೈದಿದೆ. 4 ಕೋಟಿಗೂ ಅಧಿಕ ಹಣ ಮತ್ತು ಚಿನ್ನಾಭರಣಗಳನ್ನು ತಂಡ ದರೋಡೆ ಮಾಡಿದ್ದು, ಪೊಲೀಸರು ಅಥವಾ ನಾಗರಿಕರ ಯಾವುದೇ ಭಯವಿಲ್ಲದೆ ಕಾರಿನಲ್ಲಿ ಪರಾರಿಯಾಗಿದ್ದಾರೆ. ಸುಮಾರು ಆರು ವರ್ಷಗಳ ಹಿಂದೆ, ಇದೇ ಬ್ಯಾಂಕ್‌ನ್ನು ಕಳ್ಳರು ಇದೇ ಮಾದರಿಯಲ್ಲಿ ಹಾಡ ಹಗಲೇ ದರೋಡೆ ಮಾಡಿದ್ದರು. ಅಂದಿನ ದರೋಡೆಗೆ ಸಂಬಂಧಿಸಿ ಅಪರಾಧಿಗಳನ್ನು ಬಂಧಿಸಲಾಗಿತ್ತು ಮಾತ್ರವಲ್ಲ, ಕೃತ್ಯದಲ್ಲಿ ಸಹಕಾರಿ ಬ್ಯಾಂಕಿನ ವ್ಯಕ್ತಿಗಳೇ ಶಾಮೀಲಾಗಿರುವುದು ಬೆಳಕಿಗೆ ಬಂದಿತ್ತು. ಈ ಬಾರಿಯ ದರೋಡೆಯಲ್ಲೂ ಬ್ಯಾಂಕಿನೊಳಗಿನ ಶಕ್ತಿಗಳು ಶಾಮೀಲಾಗಿರುವ ಬಗ್ಗೆ ಕೆಲವರು ಅನುಮಾನ ವ್ಯಕ್ತ ಪಡಿಸುತ್ತಿದ್ದಾರೆ. ಮುಖ್ಯವಾಗಿ, ಇದೊಂದು ಪೂರ್ವಯೋಜಿತ ಕೃತ್ಯ ಎಂದು ಶಂಕಿಸಲಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಜಿಲ್ಲೆಗೆ ಆಗಮಿಸುವ ಸಂದರ್ಭದಲ್ಲಿ ದುಷ್ಕರ್ಮಿಗಳು ಕಳವು ಯೋಜನೆಯನ್ನು ರೂಪಿಸಿದ್ದಾರೆ. ಪೊಲೀಸರೆಲ್ಲ ಮುಖ್ಯಮಂತ್ರಿಗೆ ಸಂಬಂಧಿಸಿದ ಕಾರ್ಯಕ್ರಮಗಳ ಭದ್ರತೆಗೆ ಆದ್ಯತೆ ನೀಡುವುದರಿಂದಾಗಿ, ನಗರದ ಒಳಭಾಗದಲ್ಲಿರುವ ಈ ಬ್ಯಾಂಕ್ ಇರುವ ಪ್ರದೇಶಗಳಲ್ಲಿ ಬಿಗಿ ಭದ್ರತೆ ಇರಲಾರದು ಎಂದು ದುಷ್ಕರ್ಮಿಗಳು ದರೋಡೆಗೆ ಶುಕ್ರವಾರದ ದಿನವನ್ನು ಆರಿಸಿದ್ದಾರೆ. ಈ ಹಿಂದೆ ಇದೇ ಬ್ಯಾಂಕ್‌ನಲ್ಲಿ ನಡೆದ ದರೋಡೆಯು ಶುಕ್ರವಾರ ಮಧ್ಯಾಹ್ನದ ಹೊತ್ತಿಗೇ ನಡೆದಿತ್ತು ಎನ್ನುವುದು ಗಮನಾರ್ಹ.
ಇತ್ತೀಚಿನ ದಿನಗಳಲ್ಲಿ ಸಹಕಾರಿ ಬ್ಯಾಂಕ್‌ಗಳೇ ದರೋಡೆಕೋರರ ಗುರಿಯಾಗುತ್ತಿರುವುದು ಆಕಸ್ಮಿಕ ಖಂಡಿತಾ ಅಲ್ಲ. ದೊಡ್ಡ, ರಾಷ್ಟ್ರೀಕೃತ ಬ್ಯಾಂಕ್‌ಗಳೆಲ್ಲ ಆಧುನಿಕ ಭದ್ರತೆಗಳನ್ನು ಅಳವಡಿಸಿಕೊಂಡಿವೆ. ಅಷ್ಟೇ ಅಲ್ಲ, ಅವುಗಳನ್ನೆಲ್ಲ ಬೃಹತ್ ಉದ್ಯಮಿಗಳೇ ಸಾಲದ ಹೆಸರಿನಲ್ಲಿ ದರೋಡೆ ಮಾಡುತ್ತಿರುವುದರಿಂದ, ಗ್ರಾಮೀಣ ಜನರ ಹಣದಿಂದ ಹುಲುಸಾಗಿರುವ ಸಹಕಾರಿ ಬ್ಯಾಂಕ್‌ಗಳ ಮೇಲೆ ದರೋಡೆ ಕೋರರ ಕಣ್ಣು ಬಿದ್ದಿದೆ. ಸಹಕಾರಿ ಬ್ಯಾಂಕ್‌ಗಳನ್ನು ನಿಯಂತ್ರಣಕ್ಕೆ ತೆಗೆದುಕೊಳ್ಳುವುದು ಹೇಗೆ ಎನ್ನುವ ಬಗ್ಗೆ ಕೇಂದ್ರ ಸರಕಾರವು ಯೋಚಿಸುತ್ತಿದೆ ಮಾತ್ರವಲ್ಲ ಅದಕ್ಕಾಗಿ ಯೋಜನೆಗಳನ್ನು ಹಾಕುತ್ತಿದೆ. ಇವುಗಳ ನಡುವೆ, ಸಹಕಾರಿ ಬ್ಯಾಂಕ್‌ಗಳು ಹಲವು ಹಗರಣಗಳಿಗಾಗಿ ಸುದ್ದಿಯಲ್ಲಿವೆ. ಇತ್ತೀಚೆಗೆ ಬಂಟ್ವಾಳದ ಸಮಾಜಸೇವಾ ಸಹಕಾರಿ ಬ್ಯಾಂಕ್‌ನ ಪಡೀಲ್ ಶಾಖೆಯಲ್ಲಿ ನಕಲಿ ಚಿನ್ನದ ಆಧಾರದಲ್ಲಿ ವ್ಯಕ್ತಿಯೊಬ್ಬನಿಗೆ ಸುಮಾರು 2 ಕೋಟಿ ರೂಪಾಯಿ ಸಾಲ ನೀಡಿರುವುದು ಬಹಿರಂಗವಾಗಿತ್ತು ಮತ್ತು ಬ್ಯಾಂಕಿನ ಅಧಿಕಾರಿಗಳೂ ಇದರಲ್ಲಿ ಶಾಮೀಲಾಗಿದ್ದರು. ಈ ವಂಚನೆ ಯಾವುದೇ ದರೋಡೆಗಿಂತ ಕಡಿಮೆಯಿರಲಿಲ್ಲ. ಇಂತಹ ವಂಚನೆಗಳು ಹಲವು ಬ್ಯಾಂಕುಗಳಲ್ಲಿ ನಡೆದಿದ್ದು, ಸರಿಯಾದ ತನಿಖೆಗಳು ನಡೆದದ್ದೇ ಆದರೆ ಇನ್ನಷ್ಟು ಪ್ರಕರಣಗಳು ಬಹಿರಂಗವಾಗಬಹುದಾಗಿದೆ. 2015ರಲ್ಲಿ ಮಂಗಳೂರಿನ ಕಿನ್ನಿಗೋಳಿ ಸಮೀಪದ ಎಸ್.ಕೆ. ಗೋಲ್ಡ್‌ಸ್ಮಿತ್ ಎನ್ನುವ ಸಹಕಾರಿ ಬ್ಯಾಂಕ್‌ಗೂ ಕಳ್ಳರು ನುಗ್ಗಿ ಸುಮಾರು 5 ಕೋಟಿ ರೂಪಾಯಿಯನ್ನು ದರೋಡೆ ಮಾಡಿದ್ದರು. ಸಹಕಾರಿ ಬ್ಯಾಂಕ್‌ಗಳಲ್ಲಿ ನಡೆಯುವ ದರೋಡೆಯ ನೇರ ಸಂತ್ರಸ್ತರು ನಮ್ಮ ರೈತರು ಮತ್ತು ಸ್ಥಳೀಯ ವ್ಯಾಪಾರಿಗಳಾಗಿದ್ದಾರೆ. ಸಹಕಾರಿ ಬ್ಯಾಂಕ್‌ಗಳನ್ನು ಮುಳುಗಿಸಲು ಒಳಗಿನ ಶಕ್ತಿಗಳಿಂದಲೇ ಹಲವು ಪ್ರಯತ್ನಗಳು ನಡೆಯುತ್ತಿದ್ದು ಆ ಪ್ರಯತ್ನಗಳ ಭಾಗವಾಗಿಯೇ ಇಂತಹ ದರೋಡೆಗಳು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹೆಚ್ಚುತ್ತಿವೆ. ಅನೇಕ ಸಂದರ್ಭದಲ್ಲಿ ಸಹಕಾರಿ ಬ್ಯಾಂಕ್‌ಗಳೊಳಗಿರುವ ಅಕ್ರಮಗಳನ್ನು, ಅವ್ಯವಹಾರಗಳನ್ನು ಮುಚ್ಚಿ ಹಾಕುವುದಕ್ಕಾಗಿಯೇ ಇಂತಹ ದರೋಡೆಗಳನ್ನು ಸೃಷ್ಟಿಸಲಾಗುತ್ತದೆ.
ಶಿಕ್ಷಣ ಸಂಸ್ಥೆಗಳಿಗಾಗಿ, ಉದ್ಯಮಗಳಿಗಾಗಿ, ಬ್ಯಾಂಕ್‌ಗಳಿಗಾಗಿ, ಸಹಕಾರ ಸಂಸ್ಥೆಗಳಿಗಾಗಿ ಹೆಸರುವಾಸಿಯಾಗಿರುವ ದಕ್ಷಿಣ ಕನ್ನಡ ಜಿಲ್ಲೆ ಇದೀಗ ದರೋಡೆಗಳಿಗೆ ಕುಖ್ಯಾತಿಯಾಗುತ್ತಿರುವುದು ಆತಂಕಕಾರಿಯಾಗಿದೆ. ಸ್ಮಾರ್ಟ್‌ಸಿಟಿಯಾಗಿ ದೇಶದ ಗಮನ ಸೆಳೆಯಬೇಕಾಗಿರುವ ಮಂಗಳೂರಿಗೆ ಇಂತಹ ದರೋಡೆಗಳು ಕಳಂಕ ತರುವುದರಲ್ಲಿ ಅನುಮಾನವಿಲ್ಲ. ಆದುದರಿಂದ, ಗೃಹ ಸಚಿವರು ಎಚ್ಚೆತ್ತುಕೊಳ್ಳಬೇಕಾಗಿದೆ ಮಾತ್ರವಲ್ಲ, ಅಪರಾಧಗಳಿಗಾಗಿ ಸುದ್ದಿಯಾಗುತ್ತಿರುವ ಮಂಗಳೂರಿನಲ್ಲಿ ಕಾನೂನು ಸುವ್ಯವಸ್ಥೆಯನ್ನು ಬಲಪಡಿಸಬೇಕು. ಬರೇ ಎಚ್ಚರಿಕೆಗಳನ್ನು ನೀಡುವುದರಿಂದ ನಮ್ಮನ್ನು ಸುಮ್ಮನಿರಿಸಲು ಸಾಧ್ಯವಿಲ್ಲ ಎಂದು ದುಷ್ಕರ್ಮಿಗಳು ಗೃಹ ಸಚಿವರಿಗೆ ನೇರ ಸವಾಲನ್ನು ಹಾಕಿದ್ದಾರೆ. ಆ ಸವಾಲಿಗೆ ಸೂಕ್ತ ರೀತಿಯಲ್ಲಿ ಉತ್ತರಿಸಿ ಗೃಹ ಇಲಾಖೆ ತನ್ನ ಮಾನವನ್ನು ಉಳಿಸಿಕೊಳ್ಳಬೇಕಾಗಿದೆ.