ನಾಪತ್ತೆಯಾದ ಕಾನೂನು ಸುವ್ಯವಸ್ಥೆ!

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ
ಕರಾವಳಿಗೆ ಮತ್ತೆ ಬೆಂಕಿ ಹಚ್ಚಲು ಕೆಲವು ರಾಜಕೀಯ ಶಕ್ತಿಗಳು ಹೆಣಗಳನ್ನು ಹುಡುಕುತ್ತಿವೆ. ಮಂಗಳೂರಿನ ದಿಗಂತ್ ಎಂಬ ವಿದ್ಯಾರ್ಥಿಯ ನಾಪತ್ತೆ ಪ್ರಕರಣದಲ್ಲಿ ‘ಹೆಣ ಬಿದ್ದೇ ಬಿಟ್ಟಿತು’ ಎಂದು ಸಂಭ್ರಮಿಸಿ, ಪ್ರತಿಭಟನೆಯ ಹೆಸರಿನಲ್ಲಿ ಮಂಗಳೂರಿನ ಶಾಂತಿ, ನೆಮ್ಮದಿಯನ್ನು ಕೆಡಿಸಲು ಗರಿಷ್ಠ ಪ್ರಯತ್ನ ನಡೆಸಿದ ಕೆಲವು ರಾಜಕೀಯ ನಾಯಕರು ಇದೀಗ ಬೇಸ್ತು ಬಿದ್ದಿದ್ದಾರೆ. ಈ ನಾಪತ್ತೆ ಪ್ರಕರಣಕ್ಕೆ ಸಂಬಂಧಿಸಿ ಕಳೆದ ಹದಿನೈದು ದಿನಗಳಿಂದ ನಡೆಯುತ್ತಿರುವ ರಾಜಕೀಯ ಡೊಂಬರಾಟಗಳಿಗೆ ಕೊನೆಗೂ ತೆರೆ ಬಿದ್ದಿದೆ. ವಿದ್ಯಾರ್ಥಿಯ ನಾಪತ್ತೆಯ ಬಗ್ಗೆ ತಾವೇ ಕತೆ ಕಟ್ಟಿ, ಅದರ ಹಿಂದೆ ಒಂದು ನಿರ್ದಿಷ್ಟ ಸಮುದಾಯದ ಪಾತ್ರದ ಬಗ್ಗೆ ಸಂಶಯ ವ್ಯಕ್ತಪಡಿಸುತ್ತಾ ಪ್ರಕರಣವನ್ನು ರಾಜ್ಯಮಟ್ಟದಲ್ಲಿ ಸುದ್ದಿ ಮಾಡಿದ್ದ ಸ್ಥಳೀಯ ಶಾಸಕರು, ಬಿಜೆಪಿ ಮುಖಂಡರು, ಸಂಘಪರಿವಾರ ಕಾರ್ಯಕರ್ತರು ಇದೀಗ ತಲೆಮರೆಸಿಕೊಂಡು ಓಡಾಡುತ್ತಿದ್ದಾರೆ.
ಇತ್ತೀಚಿನ ದಿನಗಳಲ್ಲಿ ಮಂಗಳೂರಿನ ಶಾಲಾ, ಕಾಲೇಜುಗಳು ಡ್ರಗ್ಸ್ , ಗಾಂಜಾ ಕಾರಣಗಳಿಗಾಗಿ ಹೆಚ್ಚು ಸುದ್ದಿಯಲ್ಲಿವೆ. ಕೆಲವು ಸಾಮಾಜಿಕ ಸಂಘಟನೆಗಳು ಈ ಬಗ್ಗೆ ಜಾಗೃತಿ ಮೂಡಿಸುವ ಕೆಲಸಗಳನ್ನು ಮಾಡುತ್ತಿವೆ. ಆದರೆ ಇದರ ಬಗ್ಗೆ ಯಾವುದೇ ರಾಜಕಾರಣಿಗಳು ಬೀದಿಗೆ ಬಂದು ಪ್ರತಿಭಟನೆ ನಡೆಸಿ, ವಿದ್ಯಾರ್ಥಿಗಳ ಭವಿಷ್ಯದ ಬಗ್ಗೆ ಕಾಳಜಿ ವ್ಯಕ್ತಪಡಿಸಿದ ಉದಾಹರಣೆಗಳಿಲ್ಲ. ಆದರೆ ದಿಗಂತ್ ನಾಪತ್ತೆಯಾದದ್ದೇ ಈ ಜಿಲ್ಲೆಯ ಕೆಲವು ನಾಯಕರಲ್ಲಿ ಇದ್ದಕ್ಕಿದ್ದಂತೆಯೇ ವಿದ್ಯಾರ್ಥಿಗಳ ಬಗ್ಗೆ ಭಾರೀ ಕಾಳಜಿ ಉಕ್ಕಿ ಹರಿಯಿತು. ಕಳೆದ ಫೆಬ್ರವರಿ 25ರಂದು ಸ್ಥಳೀಯ ಫರಂಗಿ ಪೇಟೆ ಸಮೀಪದ ವಿದ್ಯಾರ್ಥಿ ದಿಗಂತ್ ಎಂಬಾತ ನಾಪತ್ತೆಯಾಗಿದ್ದ. ಮಂಗಳೂರಿನಲ್ಲಿ ವಿದ್ಯಾರ್ಥಿಗಳು ನಾಪತ್ತೆಯಾಗುವುದು ಹೊಸತೇನೂ ಅಲ್ಲ. ಕಳೆದ ಫೆಬ್ರವರಿ ತಿಂಗಳಲ್ಲೇ ಮಂಗಳೂರಿನ ಬಜ್ಪೆ ವಲಯದ ಮೂಡುಪೆರಾರ ಗ್ರಾಮದ ಪ್ಯಾರ ಮೆಡಿಕಲ್ ವಿದ್ಯಾರ್ಥಿ ನಿತಿನ್ ಬೆಳ್ಚಡ ಎಂಬಾತ ನಾಪತ್ತೆಯಾಗಿದ್ದ. ಕಳೆದ ವರ್ಷ ಶಿರ್ವ ಕಟ್ಟಿಂಗೇರಿ ಗ್ರಾಮದ ಕಾಲೇಜು ವಿದ್ಯಾರ್ಥಿ ಧನುಷ್ ಜಿ. ಎಂಬಾತ ಏಕಾಏಕಿ ನಾಪತ್ತೆಯಾಗಿದ್ದ. ಪ್ರತಿವರ್ಷ ಪರೀಕ್ಷೆಗಳು ಘೋಷಣೆಯಾಗುವಾಗ, ಫಲಿತಾಂಶ ಪ್ರಕಟವಾಗುವಾಗ ವಿದ್ಯಾರ್ಥಿಗಳು ನಾಪತ್ತೆಯಾಗುವುದು ಅಥವಾ ಆತ್ಮಹತ್ಯೆ ಮಾಡಿಕೊಳ್ಳುವುದು ಸಾಮಾನ್ಯ ಬೆಳವಣಿಗೆಯೇನೋ ಎಂಬಂತೆ ಪತ್ರಿಕೆಗಳಲ್ಲಿ ಸಣ್ಣ ಪುಟ್ಟ ಹನಿ ಸುದ್ದಿಯಾಗಿ ಪ್ರಕಟಗೊಳ್ಳುತ್ತಿರುತ್ತವೆ. ಆದರೆ ಫೆಬ್ರವರಿ 25ರಂದು ನಾಪತ್ತೆಯಾಗಿದ್ದ ದಿಗಂತ್‌ನ ವಿಷಯದಲ್ಲಿ ಹಾಗಾಗಲಿಲ್ಲ. ಫರಂಗಿಪೇಟೆ ಒಂದು ನಿರ್ದಿಷ್ಟ ಸಮುದಾಯ ಬಹುಸಂಖ್ಯಾತವಾಗಿರುವ ಪ್ರದೇಶವಾಗಿರುವುದರಿಂದ, ಈ ನಾಪತ್ತೆಯ ಹಿಂದೆ ಭಾರೀ ಸಂಚುಗಳನ್ನು, ಭಯೋತ್ಪಾದಕರ ಕೈವಾಡವನ್ನು ಸ್ಥಳೀಯ ಸಂಘಪರಿವಾರ ಮುಖಂಡರು ಮತ್ತು ಬಿಜೆಪಿ ನಾಯಕರು ಕಂಡುಕೊಂಡು ಬಿಟ್ಟರು. ದಿಗಂತ್‌ನ ಕೊಲೆಯಾಗಿದೆಯೆಂದು, ಇದರ ಹಿಂದೆ ಸ್ಥಳೀಯ ಮುಸ್ಲಿಮರ ಕೈವಾಡವಿದೆ ಎಂದು ನೇರವಾಗಿಯೂ, ಪರೋಕ್ಷವಾಗಿಯೂ ಪ್ರತಿಭಟನೆಗಳ ಹೆಸರಿನಲ್ಲಿ ಆರೋಪಗಳನ್ನು ಮಾಡತೊಡಗಿದರು. ಸಾರ್ವಜನಿಕ ಪ್ರತಿಭಟನೆಯ ಹೆಸರಿನಲ್ಲಿ ಒಂದು ಸಮುದಾಯದ ವಿರುದ್ಧ ಇನ್ನೊಂದು ಸಮುದಾಯವನ್ನು ಎತ್ತಿಕಟ್ಟುವ ಪ್ರಯತ್ನ ನಡೆಸಿದರು.
ಒಂದು ಮಾಮೂಲಿ ನಾಪತ್ತೆ ಪ್ರಕರಣ, ಸಂಘಪರಿವಾರ ನಾಯಕರ ಕಾರಣದಿಂದಾಗಿ ವಿಧಾನಸಭೆಯಲ್ಲೂ ಸುದ್ದಿ ಮಾಡಿತು. ಇವರ ಗದ್ದಲಗಳು ಎಷ್ಟು ತೀವ್ರವಾಗಿತ್ತು ಎಂದರೆ, ಸ್ಪೀಕರ್ ಅವರು ಸ್ವತಃ ಮುತುವರ್ಜಿ ವಹಿಸಿ ನಾಪತ್ತೆಯ ಬಗ್ಗೆ ಕಳವಳ ವ್ಯಕ್ತಪಡಿಸಬೇಕಾಯಿತು. ಗಂಭೀರ ತನಿಖೆ ನಡೆಸುವುದಾಗಿಯೂ ಸದನದಲ್ಲಿ ಭರವಸೆಯನ್ನು ನೀಡಿದರು. ಹುಡುಕಾಟದ ಸಂದರ್ಭದಲ್ಲಿ ವಿದ್ಯಾರ್ಥಿಯ ಚಪ್ಪಲಿಯೊಂದು ಪತ್ತೆಯಾಗಿದ್ದು, ಅದರಲ್ಲಿ ರಕ್ತದ ಕಲೆ ಇದೆ ಎಂದು ಕೂಡ ಮಾಧ್ಯಮಗಳು ವರದಿ ಮಾಡಿರುವುದು ಈ ಸಂಘಪರಿವಾರ ನಾಯಕರ ಉತ್ಸಾಹವನ್ನು ಇಮ್ಮಡಿಗೊಳಿಸಿತು. ಈ ಜಿಲ್ಲೆಯ ರಾಜಕೀಯ ನಾಯಕರ ತಲೆಯೊಳಗಿರುವುದು ಮೆದುಳಲ್ಲ ಸೆಗಣಿ ಎನ್ನುವುದು ನಾಪತ್ತೆಯಾಗಲು ಯೋಜನೆ ರೂಪಿಸಿದ್ದ ವಿದ್ಯಾರ್ಥಿಗೂ ಗೊತ್ತಿರಬೇಕು. ಅದಕ್ಕಾಗಿಯೇ, ಅವರಿಗೆ ಆಹಾರವಾಗಿ ಒಂದು ಚಪ್ಪಲಿಯನ್ನು ಬಿಟ್ಟು ಹೋಗಿದ್ದ. ನಿಜಕ್ಕೂ ಆತ ಬಿಟ್ಟು ಹೋದ ಚಪ್ಪಲಿಯಿಂದ ಸ್ಥಳೀಯ ಸಂಘಪರಿವಾರ ನಾಯಕರು ತಮಗೆ ತಾವೇ ಹೊಡೆಸಿಕೊಂಡಂತಾಗಿದೆ. ಪ್ರತಿಭಟನೆಯ ಮೂಲಕ, ಬಿಜೆಪಿ ಮತ್ತು ಸಂಘಪರಿವಾರ ತನಿಖೆಯ ದಾರಿ ತಪ್ಪಿಸಲು ಗರಿಷ್ಠ ಮಟ್ಟದಲ್ಲಿ ಯತ್ನಿಸಿತು. ಪೊಲೀಸರು ತನಿಖೆಗೆ ಅವಕಾಶ ನೀಡುವ ಮೊದಲೇ, ನೀವು ಈ ದಾರಿಯಲ್ಲಿ ತನಿಖೆ ಮಾಡಿ ಎಂದು ಪರೋಕ್ಷವಾಗಿ ಅವರು ಒತ್ತಡ ಹೇರಿದ್ದರು. ಅಂದರೆ, ಅವರಿಗೆ ವಿದ್ಯಾರ್ಥಿಯನ್ನು ಪತ್ತೆ ಮಾಡುವುದಕ್ಕಿಂತಲೂ ನಾಪತ್ತೆಯಾಗಿರುವ ವಿದ್ಯಾರ್ಥಿಯ ಹೆಸರಿನಲ್ಲಿ ಒಂದಿಷ್ಟು ಮನೆಗಳಿಗೆ ಬೆಂಕಿ ಹಚ್ಚಬೇಕಾಗಿತ್ತು.
ತನಿಖೆಯ ದಾರಿ ತಪ್ಪಿಸಿ, ತಮಗೆ ಬೇಕಾದಂತೆ ಪ್ರಕರಣವನ್ನು ತಿರುಚುವ ಸಂಘಪರಿವಾರದ ಕೃತ್ಯ ಕರಾವಳಿಗೆ ಹೊಸದೇನೂ ಅಲ್ಲ. ಈ ಹಿಂದೆ ಕರಾವಳಿಯಲ್ಲಿ ಸಂಘಪರಿವಾರ ಕಾರ್ಯಕರ್ತ ಕಾರ್ತಿಕ್ ರಾಜ್ ಎಂಬಾತನ ಕೊಲೆಯಾದಾಗಲೂ ಸಂಘಪರಿವಾರ ಅದರಲ್ಲಿ ನಿರ್ದಿಷ್ಟ ಸಮುದಾಯದ ಪಾತ್ರವಿದೆಯೆಂದು ಬೀದಿಗಿಳಿದು ಹೋರಾಟ ನಡೆಸಿತ್ತು. ಅಷ್ಟೇ ಅಲ್ಲ, ಅಂದಿನ ಸಂಸದರು ಉಳ್ಳಾಲ ಪೊಲೀಸ್ ಠಾಣೆಯ ಮುಂದೆ ನಡೆದ ಪ್ರತಿಭಟನೆಯ ವೇಳೆಯಲ್ಲಿ ‘‘ಆರೋಪಿಯನ್ನು ತಕ್ಷಣ ಪತ್ತೆ ಹಚ್ಚದೇ ಇದ್ದರೆ, ದಕ್ಷಿಣ ಕನ್ನಡಕ್ಕೆ ಬೆಂಕಿ ಹಚ್ಚಲು ನಮಗೆ ಗೊತ್ತಿದೆ’’ ಎಂದು ಬಹಿರಂಗವಾಗಿ ಕಾನೂನು ವ್ಯವಸ್ಥೆಗೆ ಬೆದರಿಕೆಯೊಡ್ಡಿದ್ದರು. ಆದರೆ ತನಿಖೆ ಮುಗಿದಾಗ ಕಾರ್ತಿಕ್ ರಾಜ್‌ನನ್ನು ಕುಟುಂಬಸ್ಥರೇ ಸಾಯಿಸಿರುವುದು ಬೆಳಕಿಗೆ ಬಂತು. ಸಂಘಪರಿವಾರ ನಾಯಕರ ಉದ್ದೇಶ ತನಿಖೆಯ ದಾರಿ ತಪ್ಪಿಸುವುದು ಮತ್ತು ನಿಜವಾದ ಆರೋಪಿಗಳನ್ನು ರಕ್ಷಿಸುವುದಾಗಿತ್ತು. ಅಷ್ಟೇ ಅಲ್ಲ, ಕಾರ್ತಿಕ್ ರಾಜ್‌ನ ಹೆಣವನ್ನು ಮುಂದಿಟ್ಟುಕೊಂಡು ದಕ್ಷಿಣ ಕನ್ನಡ ಜಿಲ್ಲೆಗೆ ಬೆಂಕಿ ಹಚ್ಚಿ ಇನ್ನಷ್ಟು ಹೆಣಗಳನ್ನು ಬೀಳಿಸುವುದಕ್ಕೆ ಸಂಚು ಹೂಡಿತ್ತು. ದಿಗಂತ್ ನಾಪತ್ತೆಯ ಸಂದರ್ಭದಲ್ಲಿ ಸಂಘಪರಿವಾರದ ವರ್ತನೆ ಇದಕ್ಕಿಂತ ಭಿನ್ನವಾಗಿಯೇನೂ ಇರಲಿಲ್ಲ. ದಿಗಂತ್ ನಾಪತ್ತೆ ಪ್ರಕರಣವನ್ನು ಸ್ವಯಂ ಸಂಘಪರಿವಾರ ನಾಯಕರು ಮಂಗಳೂರಿಗೆ ಬೆಂಕಿ ಹಚ್ಚುವುದಕ್ಕಾಗಿಯೇ ಸೃಷ್ಟಿ ಮಾಡಿದರೋ ಎನ್ನುವ ಅನುಮಾನಗಳು ಇದೀಗ ಜನರನ್ನು ಕಾಡುತ್ತಿವೆ. ಆದುದರಿಂದ ನಾಪತ್ತೆ ಪ್ರಕರಣ ಇನ್ನಷ್ಟು ತನಿಖೆಗೊಳಪಡಬೇಕಾಗಿದೆ. ಎಲ್ಲಕ್ಕಿಂತ ಮುಖ್ಯವಾಗಿ ನಾಪತ್ತೆ ಪ್ರಕರಣವನ್ನು ಮುಂದಿಟ್ಟು ಸಮಾಜದ ಶಾಂತಿ, ನೆಮ್ಮದಿಯನ್ನು ಕೆಡಿಸಲು ಮುಂದಾದ ಸಂಘಪರಿವಾರ ನಾಯಕರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಬೇಕಾಗಿದೆ. ಆದರೆ, ಈವರೆಗೆ ಪೊಲೀಸರು ಯಾವುದೇ ಕ್ರಮ ತೆಗೆದುಕೊಂಡಿಲ್ಲ.
ಮೈಸೂರಿನಲ್ಲಿ ಪೊಲೀಸ್ ಠಾಣೆಯ ಮುಂದೆ ಪ್ರತಿಭಟನೆ ನಡೆಸಿದ ಗುಂಪಿನ ವಿರುದ್ಧ ಪ್ರಕರಣ ದಾಖಲಿಸಿ ಅವರನ್ನು ಜೈಲಿಗೆ ತಳ್ಳಲು ನಮ್ಮ ಗೃಹ ಸಚಿವರಿಗೆ ಸಾಧ್ಯವಾಗುತ್ತದೆಯಾದರೆ, ನಾಪತ್ತೆಯಾದ ವಿದ್ಯಾರ್ಥಿಯನ್ನು ಮುಂದಿಟ್ಟುಕೊಂಡು ಉದ್ವಿಗ್ನಕಾರಿ ಭಾಷಣಗಳನ್ನು ಮಾಡಿ ಸಮಾಜದ ಶಾಂತಿ ಕೆಡಿಸಲು ಮುಂದಾದ ಸಂಘಪರಿವಾರದ ನಾಯಕರ ಮೇಲೆ ಪ್ರಕರಣ ದಾಖಲಿಸಲು ಯಾಕೆ ಸಾಧ್ಯವಾಗುತ್ತಿಲ್ಲ ಎಂದು ಸಾರ್ವಜನಿಕರು ಪ್ರಶ್ನಿಸುತ್ತಿದ್ದಾರೆ. ದಿಗಂತ್ ನಾಪತ್ತೆ ಪ್ರಕರಣದಲ್ಲಿ ತೀವ್ರ ಮುಖಭಂಗವಾಗುತ್ತಿದ್ದಂತೆಯೇ ಜನರ ಗಮನವನ್ನು ಬೇರೆಡೆ ಸೆಳೆಯಲೋಸುಗ, ಕೊರಗಜ್ಜನ ಹೆಸರಿನಲ್ಲಿ ಸಮಾವೇಶ ನಡೆಸಿ, ಆ ಸಭೆಗೆ ಸುಳ್ಳುಗಳಿಗಾಗಿ ಕುಖ್ಯಾತನಾಗಿರುವ ವ್ಯಕ್ತಿಯೊಬ್ಬನನ್ನು ಕರೆಸಿ ಉದ್ವಿಗ್ನಕಾರಿ ಭಾಷಣವನ್ನು ಮಾಡಿಸಿದ್ದಾರೆ.ಈತ ಅನ್ಯಧರ್ಮೀಯ ಹೆಣ್ಣು ಮಕ್ಕಳನ್ನು ಪ್ರೀತಿಸುವ ನಾಟಕವಾಡಿ ಅವರನ್ನು ಮದುವೆಯಾಗಲು ಕರೆ ನೀಡಿದ್ದಾನೆ. ನಾಪತ್ತೆ ಪ್ರಕರಣಕ್ಕೆ ಸಂಬಂಧಿಸಿ ಸದನಲ್ಲಿ ಕಳವಳ, ಆತಂಕ ವ್ಯಕ್ತಪಡಿಸಿದ ಸ್ಪೀಕರ್ ಅವರಿಗಾಗಲಿ, ಗೃಹ ಸಚಿವ ಪರಮೇಶ್ವರ್ ಅವರಿಗಾಗಲಿ ಈ ಭಾಷಣ ಸಮಾಜವನ್ನು ಒಡೆಯುವ ಕೃತ್ಯವಾಗಿ ಕಂಡಿಲ್ಲ. ಇಲ್ಲವಾದರೆ, ಇಷ್ಟು ಹೊತ್ತಿಗೆ ಈತನ ಮೇಲೆ ಪ್ರಕರಣ ದಾಖಲಾಗಿ ಬಿಡುತ್ತಿತ್ತು. ನಾಪತ್ತೆಯಾಗಿರುವ ವಿದ್ಯಾರ್ಥಿಯನ್ನೇನೋ ಪತ್ತೆ ಮಾಡಲಾಗಿದೆ, ಆದರೆ ಸಮಾಜದ ಶಾಂತಿ ಕೆಡಿಸಲು ಸಂಚು ನಡೆಸುತ್ತಿರುವ ದುಷ್ಕರ್ಮಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕಾದ ಕಾನೂನು ಸುವ್ಯವಸ್ಥೆಯನ್ನು ಪತ್ತೆ ಮಾಡುವವರು ಯಾರು ? ಎನ್ನುವ ಪ್ರಶ್ನೆಗೆ ಇನ್ನೂ ಉತ್ತರ ದೊರಕಿಲ್ಲ.