ಆನೆಗಳ ದುರ್ಬಳಕೆಗೆ ಬೇಕು ಅಂಕುಶ
PC: fb.com
ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ
ತಮಿಳುನಾಡಿನ ತಿರುಚೆಂಡೂರ್ ಮುರುಗನ್ ದೇವಸ್ಥಾನಕ್ಕೆ ಸೇರಿದ ಆನೆಯೊಂದು ತನ್ನ ಮಾವುತ ಮತ್ತು ಆತನ ಸಂಬಂಧಿಯನ್ನು ಬರ್ಬರವಾಗಿ ತುಳಿದು ಕೊಂದಿದೆ. ಇದು ದೇವಸ್ಥಾನಕ್ಕೆ ಸೇರಿದ ಆನೆಯಾಗಿದ್ದು, ಮಾವುತ 20 ವರ್ಷಗಳಿಂದ ಇದನ್ನು ನಿಯಂತ್ರಿಸುತ್ತಾ ಬಂದಿದ್ದ. ಆದರೆ ಇಂದು ಆನೆ ಸಂಯಮ ಕಳೆದುಕೊಂಡು ಆತನನ್ನು ಮತ್ತು ಆತನ ಸಂಬಂಧಿಯನ್ನು ತುಳಿದು ಕೊಂದು, ಭಾರೀ ದಾಂಧಲೆಯನ್ನು ಎಸಗಿದೆ. ಮೇಲ್ನೋಟಕ್ಕೆ ಆನೆ ಖಳನಾಯಕನ ಸ್ಥಾನದಲ್ಲಿ ನಿಂತಿದೆ. ಆದರೆ ಕಾಡಿನಲ್ಲಿ ಸ್ವತಂತ್ರ ಬದುಕನ್ನು ಅನುಭವಿಸಬೇಕಾದ ಆನೆಯನ್ನು ತನ್ನ ವೈಯಕ್ತಿಕ ಹಿತಾಸಕ್ತಿಗಾಗಿ ದುರ್ಬಳಕೆ ಮಾಡುತ್ತಾ ಬರುವ ಮನುಷ್ಯನ ಪಾತ್ರವೂ ಈ ದುರಂತಗಳ ಹಿಂದೆ ಇದೆ ಎನ್ನುವುದನ್ನು ನಾವು ಮರೆಯಬಾರದು. ಆನೆ-ಮನುಷ್ಯನ ನಡುವಿನ ಸಂಘರ್ಷಕ್ಕೆ ಸುದೀರ್ಘ ಇತಿಹಾಸವಿದೆ. ಅರಣ್ಯ ಪ್ರದೇಶ ಕೃಷಿ ಭೂಮಿಯಾಗಿ ಪರಿವರ್ತನೆಯಾದ ದಿನದಿಂದ ಈ ಸಂಘರ್ಷಗಳು ತೀವ್ರ ಸ್ವರೂಪವನ್ನು ಪಡೆದಿವೆ. ಕರ್ನಾಟಕದಲ್ಲೂ ರೈತರ ಕೃಷಿ ಭೂಮಿಯ ಮೇಲೆ ಆನೆಗಳು ನಡೆಸುವ ದಾಳಿ, ದಾಂಧಲೆಗಳು, ಜೀವಹಾನಿಗಳು ಮಾಧ್ಯಮಗಳಲ್ಲಿ ಆಗಾಗ ಸುದ್ದಿಯಾಗುತ್ತಿರುತ್ತವೆ. ಆಗಲೂ ಖಳನ ಸ್ಥಾನದಲ್ಲಿ ಆನೆಯನ್ನೇ ನಿಲ್ಲಿಸುತ್ತೇವೆ. ಮನುಷ್ಯ ಇಲ್ಲಿ ಸಂತ್ರಸ್ತ.
ಮೊದಲು ಮನುಷ್ಯ ಆನೆಗಳ ವಾಸಸ್ಥಾನದ ಮೇಲೆ ದಾಳಿ ಮಾಡಿ ಅವುಗಳನ್ನು ಅರಣ್ಯದಿಂದ ದೂರ ಓಡಿಸಿದ. ಅವುಗಳು ಆರಾಮವಾಗಿ ಬದುಕುತ್ತಿದ್ದ ಕಾಡನ್ನು ವಶಕ್ಕೆ ತೆಗೆದುಕೊಂಡು ಅವುಗಳನ್ನು ಕೃಷಿ ಭೂಮಿಯಾಗಿ ಪರಿವರ್ತಿಸಿದ. ದಾರಿ ತಪ್ಪಿದ ಆನೆಗಳು ಮತ್ತೆ ತಮ್ಮ ಹಳೆಯ ಕಾಡನ್ನು ಹುಡುಕುತ್ತಾ ಬಂದಾಗ ಮನುಷ್ಯ-ಆನೆಗಳ ನಡುವೆ ಸಂಘರ್ಷಗಳು ನಡೆಯುತ್ತವೆ. ಕಾಡುಗಳು ಕಡಿಮೆಯಾದಂತೆಲ್ಲ ಆನೆಗಳು ಎಲ್ಲಿಗೆ ಹೋಗಬೇಕು? ಒಂದೆಡೆ ಕಾಡುಗಳ್ಳರು, ಮಗದೊಂದೆಡೆ ಅರಣ್ಯ ಭೂಮಿಯ ಇಳಿಕೆ, ವಿದ್ಯುತ್ ಬೇಲಿಗಳು, ಕಾಡುಗಳ ಸಮೀಪದಲ್ಲೇ ಹಾದು ಹೋಗುವ ರೈಲು ಹಳಿಗಳು ಹೀಗೆ ಆನೆಗಳನ್ನು ಬಲಿತೆಗೆದುಕೊಳ್ಳಲು ನೂರಾರು ಖೆಡ್ಡಾಗಳು ಆಧುನಿಕ ದಿನಗಳಲ್ಲಿ ನಿರ್ಮಾಣವಾಗಿವೆ. ಇವೆಲ್ಲದರ ಪರಿಣಾಮವಾಗಿ ಆನೆಗಳ ಸಂಖ್ಯೆ ಗಣನೀಯವಾಗಿ ಇಳಿಕೆಯಾಗುತ್ತಿವೆ. ಹೀಗೆ ಇಳಿಕೆಯಾಗುತ್ತಾ ಹೋದರೆ, ಆನೆಗಳಿಗೂ ಡೈನೋಸಾರ್ಗಳ ಸ್ಥಿತಿ ಒದಗಬಹುದು ಎಂದು ಇತ್ತೀಚೆಗೆ ಕೇರಳ ಹೈಕೋರ್ಟ್ ಕಳವಳ ವ್ಯಕ್ತಪಡಿಸಿತ್ತು. ಇಂತಹ ಸಂದರ್ಭದಲ್ಲಿ, ಧರ್ಮದ ಹೆಸರಿನಲ್ಲಿ, ಆಚರಣೆಗಳ ಹೆಸರಿನಲ್ಲಿ ಆನೆಗಳನ್ನು ಬಳಸಿಕೊಳ್ಳುವುದು ಎಷ್ಟು ಸರಿ ಎನ್ನುವುದು ಚರ್ಚೆಗೆ ಬರಬೇಕಾಗಿದೆ.
ಇತ್ತೀಚೆಗಷ್ಟೇ ದಿಲ್ಲಿ ಹೈಕೋರ್ಟ್ ‘‘ಹಬ್ಬಗಳ ಹೆಸರಿನಲ್ಲಿ ಪಟಾಕಿಗಳನ್ನು ಸುಡುವುದು ಸರಿಯಲ್ಲ’’ ಎಂದು ಸ್ಪಷ್ಟ ಧ್ವನಿಯಲ್ಲಿ ಹೇಳಿತ್ತು. ಯಾವುದೇ ಧರ್ಮ ಪರಿಸರ ಮಾಲಿನ್ಯವನ್ನು ಪ್ರೋತ್ಸಾಹಿಸುವುದಿಲ್ಲ. ಹಬ್ಬದ ಹೆಸರಿನಲ್ಲಿ ಪಟಾಕಿಗಳನ್ನು ಸುಟ್ಟು ಮಾಲಿನ್ಯವನ್ನು ಸೃಷ್ಟಿಸುವುದು ಹಬ್ಬದ ಮೌಲ್ಯಗಳಿಗೆ ಕುಂದುಂಟು ಮಾಡಿದಂತಾಗುತ್ತದೆ ಎಂದು ಸುಪ್ರೀಂಕೋರ್ಟ್ ಎಚ್ಚರಿಸಿತ್ತು. ಇದರ ಬೆನ್ನಿಗೇ ಕೇರಳ ಹೈಕೋರ್ಟ್ ಆನೆಗಳ ದುರ್ಬಳಕೆಯ ಬಗ್ಗೆ ಕಳವಳ ವ್ಯಕ್ತಪಡಿಸಿದೆ. ‘‘ಯಾವುದೇ ಹಬ್ಬಗಳಲ್ಲಿ ಆನೆ ಬಳಸುವುದನ್ನು ಯಾವ ಧರ್ಮವೂ ಕಡ್ಡಾಯಗೊಳಿಸಿಲ್ಲ’’ ಎಂದು ಅದು ಹೇಳಿದೆ. ಹಬ್ಬಗಳಲ್ಲಿ ಬಳಸುವುದಕ್ಕಾಗಿ ದೇವಸ್ಥಾನಗಳಲ್ಲಿ ಆನೆಗಳನ್ನು ಸಾಕುವುದನ್ನು ಅದು ಕಟು ಶಬ್ದಗಳಲ್ಲಿ ಖಂಡಿಸಿದೆ.ಸಾಕುವ ಹೆಸರಿನಲ್ಲಿ ಆನೆಗಳಿಗೆ ಚಿತ್ರ ಹಿಂಸೆ ನೀಡುವುದನ್ನು ‘ನಾಝಿ ನಿರ್ನಾಮ ಶಿಬಿರ’ಗಳಿಗೆ ಕೋರ್ಟ್ ಹೋಲಿಸಿದೆ. ಪ್ರಾಣಿಗಳ ಹಕ್ಕುಗಳ ರಕ್ಷಣೆಯಲ್ಲಿ ಸರಕಾರದ ನಿಷ್ಕ್ರಿಯತೆಗೆ ಸಂಬಂಧಿಸಿದ ಸ್ವಯಂ ಪ್ರೇರಿತ ಅರ್ಜಿ ವಿಚಾರಣೆಯ ಸಂದರ್ಭದಲ್ಲಿ ಮಾತನಾಡಿದ ಹೈಕೋರ್ಟ್ ವಿಭಾಗೀಯ ಪೀಠ, ಕಳೆದ ಏಳು ವರ್ಷಗಳಲ್ಲಿ ಕೇರಳ ರಾಜ್ಯದಲ್ಲಿ ಸೆರೆಯಲ್ಲಿದ್ದ ಶೇ. 33ರಷ್ಟು ಆನೆಗಳು ಸಾವನ್ನಪ್ಪಿವೆ ಎಂದು ಕಳವಳ ವ್ಯಕ್ತಪಡಿಸಿವೆ.
ಮನುಷ್ಯ ತನ್ನ ಬದುಕನ್ನು ಸುಗಮವಾಗಿಸುವ ಪ್ರಯತ್ನದಲ್ಲಿ ಆನೆಗಳನ್ನು ಬಲಿಕೊಡುತ್ತಲೇ ಬರುತ್ತಿದ್ದಾನೆ. ಒಂದೆಡೆ ಆನೆಗಳ ನಿವಾಸವಾಗಿರುವ ಅರಣ್ಯಗಳನ್ನು ಒತ್ತುವರಿ ಮಾಡಿ ಅದನ್ನು ಕೃಷಿ ಭೂಮಿಯಾಗಿ ಬದಲಾಯಿಸಿ ಅವುಗಳ ಆಶ್ರಯ ಕಿತ್ತುಕೊಂಡಿದ್ದಾನೆ. ಇನ್ನೊಂದೆಡೆ ಬೃಹತ್ ಕಾಮಗಾರಿಗಳ ಸಂದರ್ಭದಲ್ಲಿ ಆನೆಗಳನ್ನು ಪಳಗಿಸಿ ಅದಕ್ಕಾಗಿ ಬಳಸುತ್ತಾ ಬಂದಿದ್ದಾನೆ. ಇಷ್ಟೆಲ್ಲ ಮಾಡಿದ ಬಳಿಕವೂ ಆತ ಸುಮ್ಮನಾಗಿಲ್ಲ. ತನ್ನ ಹಬ್ಬ, ಆಚರಣೆ, ಮನರಂಜನೆಗಾಗಿಯೂ ಆನೆಗಳನ್ನು ದುರ್ಬಳಕೆ ಮಾಡುತ್ತಿದ್ದಾನೆ. ಆನೆ ಜನವಸತಿ ಪ್ರದೇಶದಲ್ಲಿ ಸಾಕುವಂತಹ ಪ್ರಾಣಿ ಅಲ್ಲ. ಅದನ್ನೆಷ್ಟೇ ಪಳಗಿಸಿದರೂ, ಯಾವತ್ತಾದರೂ ಅದು ಹುಚ್ಚೆದ್ದು ಬಿಟ್ಟರೆ ಅಪಾರ ಸಾವುನೋವುಗಳಿಗೆ ಕಾರಣವಾಗಿ ಬಿಡಬಹುದು. ಕೇರಳ, ತಮಿಳುನಾಡು, ಕರ್ನಾಟಕದಲ್ಲಿ ಈ ಹಿಂದೆಯೂ ಆನೆಗಳು ದೇವಸ್ಥಾನದಲ್ಲಿ, ಉತ್ಸವಗಳಲ್ಲಿ ದಾಂಧಲೆಗಳನ್ನು ಮಾಡಿರುವ ಉದಾಹರಣೆಗಳಿವೆ. ಕರ್ನಾಟಕದ ನಾಡಹಬ್ಬವಾಗಿರುವ ದಸರಾದಲ್ಲಿ ‘ಜಂಬೂ ಸವಾರಿ’ಯನ್ನು ನೋಡಲು ಸಹಸ್ರಾರು ಜನರು ನೆರೆಯುತ್ತಾರೆ. ಜಂಬೂ ಸವಾರಿಗೆ ಆನೆಗಳನ್ನು ಬಳಸುವ ಬಗ್ಗೆ ಈಗಾಗಲೇ ಹಲವು ಸಾಮಾಜಿಕ ಸಂಘಟನೆಗಳು ಆಕ್ಷೇಪ ವ್ಯಕ್ತಪಡಿಸಿವೆ. ಒಂದು ವೇಳೆ ಸಾವಿರಾರು ಜನರು ನೆರೆದಿರುವ ದಸರಾದಲ್ಲಿ ಆಕಸ್ಮಿಕವಾಗಿ ಆನೆಯೊಂದು ಮದವೇರಿ ದಾಂಧಲೆ ಎಸಗಿದರೆ ಸಂಭವಿಸುವ ಕಾಲ್ತುಳಿತಕ್ಕ್ಕೆ ನೂರಾರು ಜನರು ಬಲಿಯಾಗಬಹುದು. ಹೀಗಿರುವಾಗ, ಇಂತಹ ಉತ್ಸವಗಳಲ್ಲಿ ಆನೆಗಳನ್ನು ಬಳಸುವುದಕ್ಕೆ ಪ್ರೋತ್ಸಾಹ ನೀಡುವುದು ಎಷ್ಟು ಸರಿ? ಹಲವು ಉತ್ಸವಗಳಲ್ಲಿ ಪಟಾಕಿಗಳು ಎಸಗಿರುವ ಹಾನಿಗಳನ್ನು, ನಾಶ, ನಷ್ಟಗಳನ್ನು ನಾವು ನೋಡಿದ್ದೇವೆ. ಹಾಗೆ ನೋಡಿದರೆ ಉತ್ಸವಗಳಲ್ಲಿ ಆನೆಗಳನ್ನು ಬಳಸುವುದು ಕೂಡ ಪಟಾಕಿ ಸ್ಫೋಟಕಗಳನ್ನು ಬಳಸುವಷ್ಟೇ ಅಪಾಯಕಾರಿಯಾಗಿದೆ.
ಇಂದು ಕರಡಿ ಆಡಿಸುವವನಿಗೆ, ಕೋತಿ ಆಡಿಸುವವನಿಗೆ ವನ್ಯ ಜೀವಿ ಕಾಯ್ದೆ ಅನ್ವಯವಾಗುತ್ತದೆ. ಅರಣ್ಯಾಧಿಕಾರಿಗಳು ಅವರನ್ನು ಬಂಧಿಸಿ ಜೈಲಿಗೆ ತಳ್ಳಬಹುದು. ಆದರೆ ಈ ಉತ್ಸವ, ಜಾತ್ರೆಯ ಹೆಸರಿನಲ್ಲಿ ಆನೆ ಆಡಿಸುವ ಗಣ್ಯರ ವಿರುದ್ಧ ನಮ್ಮ ಕಾಯ್ದೆಗಳು ನಿಶ್ಶಕ್ತವಾಗಿವೆ. ಆನೆಯನ್ನು ಭಾರತದ ಅಸ್ಮಿತೆಯಾಗಿ ನಾವು ಗುರುತಿಸುತ್ತೇವೆ. ಪುರಾಣಗಳಲ್ಲೂ ಆನೆಗಳಿಗೆ ಮಹತ್ವದ ಸ್ಥಾನವಿದೆ. ಹಾಗೆಯೇ ಈ ಬೃಹತ್ ಜೀವಿ ಬೇರೆ ಬೇರೆ ಕಾರಣಗಳಿಂದ ಅಳಿವಿನ ಅಂಚಿನಲ್ಲಿದೆ. ಹೀಗಿರುವಾಗ, ಸಾಕುವ ಹೆಸರಿನಲ್ಲಿ ಸರಪಳಿಯಲ್ಲಿ ಬಂಧಿಸಿಡುವುದು, ಸರಿಯಾದ ಆಹಾರ ಉಪಚಾರಗಳಿಲ್ಲದೆ ಅದು ಹಿಂಸೆ ಅನುಭವಿಸುವುದು ಮನುಷ್ಯನಿಗೆ ಘನತೆ ತರುವ ವಿಷಯವಲ್ಲ.ಈ ನಿಟ್ಟಿನಲ್ಲಿ ಆನೆಗಳ ಬಳಕೆಯ ಸಂದರ್ಭದಲ್ಲಿ ಅನುಸರಿಸಬೇಕಾದ ಕೇರಳ ಹೈಕೋರ್ಟ್ ಮಾರ್ಗ ಸೂಚಿಗಳು ಇಡೀ ದೇಶಕ್ಕೆ ಅನ್ವಯವಾಗಬೇಕು. ಆನೆಗಳಿಗೆ ಎರಡು ಪ್ರದರ್ಶನಗಳ ನಡುವೆ ಮೂರು ದಿನಗಳಿಗಿಂತ ಕಡಿಮೆಯಿಲ್ಲದೆ ವಿಶ್ರಾಂತಿಯನ್ನು ನೀಡಬೇಕು, ಆನೆಗಳನ್ನು ಕಟ್ಟಿ ಹಾಕುವ ಸ್ಥಳ ಸ್ವಚ್ಛವಾಗಿರಬೇಕು ಮತ್ತು ಆ ಸ್ಥಳವು ವಿಶಾಲವಾಗಿರಬೇಕು. ಆನೆಗಳ ಪ್ರದರ್ಶನ ಅಥವಾ ಮೆರವಣಿಗೆ ವೇಳೆ ಸಾಕಷ್ಟು ಸ್ಥಳಾವಕಾಶ ಇರಬೇಕು. ಲಭ್ಯವಿರುವ ಸ್ಥಳದ ಆಧಾರದ ಮೇಲೆ ಎಷ್ಟು ಆನೆಗಳನ್ನು ಮೆರವಣಿಗೆ ನಡೆಸಬಹುದು ಎಂದು ನಿರ್ಧರಿಸಬೇಕು. ಆನೆಗಳನ್ನು ಹಗಲಿನಲ್ಲಿ ಸಾರ್ವಜನಿಕ ರಸ್ತೆಗಳಲ್ಲಿ ಮೆರವಣಿಗೆ ಮಾಡಬಾರದು ಇತ್ಯಾದಿಗಳು ಪ್ರಮುಖ ಮಾರ್ಗಸೂಚಿಗಳಲ್ಲಿ ಸೇರಿವೆ. ಭಾರತದಲ್ಲಿ ಆನೆಗಳ ಮೇಲೆ ನಡೆಯುತ್ತಿರುವ ಬರ್ಬರ ದೌರ್ಜನ್ಯಗಳು ಈಗಾಗಲೇ ಅಂತರ್ರಾಷ್ಟ್ರೀಯ ಮಟ್ಟದಲ್ಲಿ ಚರ್ಚೆಯಾಗಿದೆ. ಈ ನಿಟ್ಟಿನಲ್ಲಿ ಆನೆಗಳನ್ನು ಯಾವುದೇ ಉತ್ಸವದಲ್ಲಿ, ಜಾತ್ರೆಗಳಲ್ಲಿ ಬಳಸುವುದನ್ನು, ದೇವಸ್ಥಾನಗಳಲ್ಲಿ ಆನೆಗಳನ್ನು ಸಾಕುವುದನ್ನು ಶಾಶ್ವತವಾಗಿ ನಿಷೇಧಿಸುವುದು ಇಂದಿನ ಅತ್ಯಗತ್ಯವಾಗಿದೆ. ಕರಡಿ ಆಡಿಸುವವರಿಗೊಂದು ನ್ಯಾಯ, ಆನೆ ಆಡಿಸುವವರಿಗೊಂದು ನ್ಯಾಯ ಖಂಡಿತ ಸರಿಯಲ್ಲ.