ಉಕ್ರೇನ್‌ನನ್ನು ಆತಂಕಕ್ಕೆ ತಳ್ಳಿದ ಮೋದಿ-ಪುಟಿನ್ ಆಲಿಂಗನ
ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ
ಉಕ್ರೇನ್‌ನಲ್ಲಿ ರಶ್ಯ ಎಸಗುತ್ತಿರುವ ಯುದ್ಧಾಪರಾಧಗಳು ಚರ್ಚೆಯಲ್ಲಿರುವ ಹೊತ್ತಿಗೇ ಪ್ರಧಾನಿ ಮೋದಿಯವರು ರಶ್ಯಕ್ಕೆ ಭೇಟಿ ನೀಡಿದ್ದಾರೆ. ಉಕ್ರೇನ್‌ನ ನಾಗರಿಕರ ರಕ್ತದಿಂದ ಕಳಂಕಿತರಾಗಿರುವ ವ್ಲಾದಿಮಿರ್ ಪುಟಿನ್‌ನವರನ್ನು ಹಾರ್ದಿಕವಾಗಿ ತಬ್ಬಿಕೊಂಡ ಮೋದಿಯವರು, ಯುದ್ಧ, ಭಯೋತ್ಪಾದನೆಗಳಿಂದ ಸಂಭವಿಸುವ ಜೀವಹಾನಿಗಳ ವಿರುದ್ಧ ತೀವ್ರ ಕಾಳಜಿಯನ್ನು ವ್ಯಕ್ತಪಡಿಸಿದ್ದಾರೆ. ಉಕ್ರೇನ್‌ನಲ್ಲಿ ನಡೆಯುತ್ತಿರುವ ಸಾವುನೋವುಗಳನ್ನು ಪ್ರಜ್ಞಾಪೂರ್ವಕವಾಗಿ ಬದಿಗಿಟ್ಟಿರುವ ಪ್ರಧಾನಿ ಮೋದಿಯವರು ರಶ್ಯದಲ್ಲಿ ನಡೆದ ಭಯೋತ್ಪಾದನಾ ಸ್ಫೋಟಗಳಿಗೆ ಮಿಡಿದಿದ್ದಾರೆ. ಭಾರತ ಮತ್ತು ರಶ್ಯದ ನಡುವಿನ ಸುದೀರ್ಘ ಸ್ನೇಹ ಸಂಬಂಧವನ್ನು ಸ್ಮರಿಸಿರುವ ಅವರು, ಭಾರತದ ಅಭಿವೃದ್ಧಿಯಲ್ಲಿ ರಶ್ಯದ ಪಾತ್ರವನ್ನು ಉಲ್ಲೇಖಿಸಿದ್ದಾರೆ. ಈ ಭೇಟಿಯನ್ನು ಸಹಜವಾಗಿಯೇ ಉಕ್ರೇನ್ ಖಂಡಿಸಿದೆ. ಭಾರೀ ಕ್ಷಿಪಣಿ ದಾಳಿಯ ಮೂಲಕ 37 ಉಕ್ರೇನ್ ನಾಗರಿಕರನ್ನು ರಶ್ಯ ಕೊಂದು ಹಾಕಿದ ದಿನವೇ ಭಾರತದ ಪ್ರಧಾನಿ ನರೇಂದ್ರ ಮೋದಿಯವರು, ರಶ್ಯದ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಅವರನ್ನು ತಬ್ಬಿಕೊಂಡಿರುವುದು ಆಘಾತಕಾರಿ ಎಂದು ಉಕ್ರೇನ್ ಅಧ್ಯಕ್ಷ ವ್ಲಾದಿಮಿರ್ ಝೆಲೆನ್‌ಸ್ಕಿ ಹೇಳಿಕೆ ನೀಡಿದ್ದಾರೆ. ‘‘ವಿಶ್ವದ ಅತಿ ದೊಡ್ಡ ಪ್ರಜಾಪ್ರಭುತ್ವದ ನಾಯಕ ವಿಶ್ವದ ರಕ್ತಸಿಕ್ತ ಅಪರಾಧಿಯನ್ನು ಮಾಸ್ಕೊದಲ್ಲಿ ತಬ್ಬಿಕೊಂಡಿರುವುದು ಶಾಂತಿಯ ಪ್ರಯತ್ನಗಳಿಗೆ ಭಾರೀ ನಿರಾಶೆ ಮತ್ತು ಮಾರಕ ಹೊಡೆತವಾಗಿದೆ’’ ಎಂದು ಅವರು ಕಳವಳ ವ್ಯಕ್ತಪಡಿಸಿದ್ದಾರೆ. ಅವರ ಆತಂಕ, ಆಘಾತ ಅತ್ಯಂತ ಸಹಜವೇ ಆಗಿದೆ. ಉಕ್ರೇನ್ ಮೇಲೆ ನಡೆದಿರುವ ದಾಳಿಗಳನ್ನು ಭಾರತ ಪದೇ ಪದೇ ಖಂಡಿಸಿದೆ ಮಾತ್ರವಲ್ಲ, ಯುದ್ಧ ನಿಲ್ಲಿಸುವುದಕ್ಕೆ ಹಲವು ಬಾರಿ ಕರೆಗಳನ್ನು ನೀಡಿದೆ. ಉಕ್ರೇನ್‌ನ ನೋವುಗಳಿಗೆ ಸ್ಪಂದಿಸುತ್ತಾ ಬಂದಿದೆ. ಇವುಗಳ ನಡುವೆಯೇ ಇದೀಗ ರಶ್ಯದ ಅಧ್ಯಕ್ಷರ ಜೊತೆಗೆ ಮೋದಿಯವರ ಆತ್ಮೀಯ ಭೇಟಿ ರಶ್ಯ ಎಸಗುತ್ತಿರುವ ಕೃತ್ಯಕ್ಕೆ ಸಮರ್ಥನೆಯನ್ನು ನೀಡಿದಂತಾಗಿದೆ ಎಂದು ಅವರು ಭಾವಿಸಿದರೆ ಅದರಲ್ಲಿ ತಪ್ಪೇನೂ ಇಲ್ಲ.
ಆದರೆ ಭಾರತ ಮತ್ತು ರಶ್ಯ ನಡುವಿನ ಸಂಬಂಧ ಇಂದು ನಿನ್ನೆಯದಲ್ಲ. ಇದೇ ಸಂದರ್ಭದಲ್ಲಿ ರಶ್ಯದ ಜೊತೆಗಿನ ಸಂಬಂಧದಲ್ಲಿ ಮೊದಲ ಆತ್ಮೀಯತೆ ಉಳಿದೂ ಇಲ್ಲ.ಅಮೆರಿಕದ ಜೊತೆಗಿನ ಮೈತ್ರಿ ರಶ್ಯ ಜೊತೆಗಿನ ಸಂಬಂಧಕ್ಕೆ ಎಂದೋ ಹುಳಿ ಹಿಂಡಿದೆ. ಇವೆಲ್ಲದರ ನಡುವೆ ಭಾರತ ಮತ್ತು ರಶ್ಯ ಕೆಲವು ನಿರ್ದಿಷ್ಟ ವಿಷಯಗಳಲ್ಲಿ ಪರಸ್ಪರರನ್ನು ಅವಲಂಬಿಸಿದೆ. ಆದುದರಿಂದಲೇ, ರಶ್ಯದ ಜೊತೆಗಿನ ಸಂಬಂಧವನ್ನು ಒಟ್ಟಾರೆಯಾಗಿ ನಿರಾಕರಿಸುವುದು ಭಾರತಕ್ಕೆ ಅಸಾಧ್ಯ. ಹಾಗಾದಲ್ಲಿ ಅದು ಭಾರತದ ಆರ್ಥಿಕತೆಯ ಮೇಲೆ ಬೇರೆ ಬೇರೆ ದುಷ್ಪರಿಣಾಮಗಳನ್ನು ಬೀರುವ ಸಾಧ್ಯತೆಗಳಿವೆ. ಇಂಧನ ಹಾಗೂ ಇತರ ಕ್ಷೇತ್ರಗಳಲ್ಲಿ ಭಾರತ ಹೊಂದಿರುವ ದ್ವಿಪಕ್ಷೀಯ ಸಂಬಂಧವನ್ನು ಇತರ ದೇಶಗಳು ಗೌರವಿಸುವುದು ಅನಿವಾರ್ಯ. ಅವುಗಳನ್ನು ಬಲಿಕೊಟ್ಟು ಉಕ್ರೇನ್ ಸಾವು ನೋವುಗಳ ಬಗ್ಗೆ ಮಾತನಾಡುವುದಾಗಲಿ, ರಶ್ಯದ ಯುದ್ಧ ದಾಹದ ವಿರುದ್ಧ ಹೆಜ್ಜೆಯಿಡುವುದಾಗಲಿ ಭಾರತದಿಂದ ಸಾಧ್ಯವಿಲ್ಲ. ರಕ್ಷಣಾ ಮತ್ತು ಇಂಧನ ಕ್ಷೇತ್ರಗಳ ಆಮದಿಗೆ ಸಂಬಂಧಿಸಿ ಭಾರತ ರಶ್ಯವನ್ನು ಅವಲಂಬಿಸಿದೆ. ಇದು ಉಕ್ರೇನ್‌ಗೂ ಗೊತ್ತಿಲ್ಲದೇ ಇರುವುದಲ್ಲ. ಆದುದರಿಂದ, ಉಕ್ರೇನ್‌ನಂತಹ ದೇಶಗಳಿಗೆ ಭಾರತದಂತಹ ದೇಶಗಳು ನೀಡುವ ಬೆಂಬಲಕ್ಕೆ ಕೆಲವು ಮಿತಿಗಳಿವೆ. ಯುದ್ಧ, ನಾಗರಿಕರ ಮೇಲೆ ನಡೆಯುವ ಹಿಂಸಾಚಾರಗಳ ಬಗ್ಗೆ ತನ್ನ ಅಸಮ್ಮತಿಯನ್ನು ವ್ಯಕ್ತಪಡಿಸುತ್ತಲೇ ರಶ್ಯ ಜೊತೆಗಿರುವ ದ್ವಿಪಕ್ಷೀಯ ಸಂಬಂಧಗಳನ್ನು ಉಳಿಸಿಕೊಳ್ಳುವುದು ಭಾರತಕ್ಕೆ ಅನಿವಾರ್ಯ. ಆದುದರಿಂದ, ಪ್ರಧಾನಿ ಮೋದಿಯವರ ರಶ್ಯ ಭೇಟಿಯನ್ನು ಉಕ್ರೇನ್ ತನ್ನ ಹೇಳಿಕೆಗಳ ಮೂಲಕ ತಡೆಯುವುದಕ್ಕೆ ಸಾಧ್ಯವಿಲ್ಲ. ತನ್ನದೇ ದೇಶದ ಒಳಗೆ ನಡೆಯುತ್ತಿರುವ ಹಿಂಸಾಚಾರಗಳಿಗೆ ಸ್ಪಂದಿಸಲು ಅಸಾಧ್ಯವಾಗಿರುವ, ಹಲವು ಹಿಂಸಾಚಾರಗಳ ಜೊತೆಗೆ ಸಂಬಂಧವನ್ನು ಜೋಡಿಸಿಕೊಂಡಿರುವ ಪ್ರಧಾನಿ ಮೋದಿಯಿಂದ ಉಕ್ರೇನ್ ಅತಿಯಾದದ್ದನ್ನು ನಿರೀಕ್ಷಿಸಿದರೆ, ಅದಕ್ಕಾಗಿ ವಿಷಾದಿಸುವುದು ಅನಿವಾರ್ಯವಾಗುತ್ತದೆ.
ಉಕ್ರೇನ್‌ನ ಮೇಲೆ ರಶ್ಯ ನಡೆಸಿದ ದಾಳಿಯು ಭಾರತದ ಮೇಲೆ ಹಲವು ರೀತಿಯಲ್ಲಿ ಪರಿಣಾಮಗಳನ್ನು ಬೀರಿದ್ದವು. ಉಕ್ರೇನ್‌ನಲ್ಲಿದ್ದ ಭಾರತದ ಸಾವಿರಾರು ವಿದ್ಯಾರ್ಥಿಗಳು ಏಕಾಏಕಿ ಬೀದಿಗೆ ಬಿದ್ದರು. ಅವರನ್ನು ಮರಳಿ ಭಾರತಕ್ಕೆ ಕರೆ ತರುವುದೇ ಒಂದು ದೊಡ್ಡ ಸಾಹಸವಾಯಿತು. ತೈಲ ಬೆಲೆಯಲ್ಲಿ ಆದ ಏರುಪೇರುಗಳು ಭಾರತದ ಆರ್ಥಿಕತೆಯ ಮೇಲೆ ದುಷ್ಪರಿಣಾಮಗಳನ್ನು ಬೀರಿದವು. ರಶ್ಯದ ಮೇಲೆ ಬಿದ್ದ ಅಂತರ್‌ರಾಷ್ಟ್ರೀಯ ಒತ್ತಡಕ್ಕೆ ಭಾರತ ಹೇಗೆ ಸ್ಪಂದಿಸಬೇಕು ಎನ್ನುವುದೂ ಒಂದು ಸವಾಲೇ ಆಗಿತ್ತು. ರಶ್ಯದ ಜೊತೆಗೆ ಮೈತ್ರಿ ಮುಂದುವರಿಸುವುದರ ಕುರಿತಂತೆ ಅಮೆರಿಕದ ಆಕ್ಷೇಪಗಳಿದ್ದವು. ಒಂದೆಡೆ ಅಮೆರಿಕ-ಇನ್ನೊಂದೆಡೆ ರಶ್ಯ ಹೀಗೆ ಎರಡು ದೋಣಿಯ ಮೇಲೆ ಕಾಲಿಟ್ಟು ಭಾರತದ ಅಂತರ್‌ರಾಷ್ಟ್ರೀಯ ಸಂಬಂಧಗಳು ಮುಂದುವರಿಯುತ್ತಿದೆ. ಉಕ್ರೇನ್ ವಿರುದ್ಧ ಯುದ್ಧಕ್ಕೆ ಭಾರತದ ನಾಗರಿಕರನ್ನು ಅಕ್ರಮವಾಗಿ ಬಳಸಲಾಗುತ್ತಿರುವುದು ಕೂಡ ಇತ್ತೀಚೆಗೆ ಬೆಳಕಿಗೆ ಬಂದಿದೆ. ಭೇಟಿಯ ಸಂದರ್ಭದಲ್ಲಿ ಪ್ರಧಾನಿ ಈ ಅಕ್ರಮವನ್ನು ಪ್ರಸ್ತಾಪಿಸಿದ್ದಾರೆ ಮಾತ್ರವಲ್ಲ, ಅವರನ್ನು ಬಿಡುಗಡೆಗೊಳಿಸಿ, ಭಾರತಕ್ಕೆ ಮರಳಿಸಬೇಕು ಎಂದೂ ಒತ್ತಾಯಿಸಿದ್ದಾರೆ.
ರಶ್ಯ ತನ್ನ ದೇಶದ ನಾಗರಿಕರ ಮೇಲೆ ನಡೆಸುತ್ತಿರುವ ದೌರ್ಜನ್ಯಗಳಿಗಾಗಿ ಭಾರತದಿಂದ ಅನುಕಂಪವನ್ನು ಅಪೇಕ್ಷಿಸುತ್ತಿರುವ ಉಕ್ರೇನ್ ಅಧ್ಯಕ್ಷರು, ಇಸ್ರೇಲ್‌ನ ಯುದ್ಧ ದಾಹದ ಕುರಿತಂತೆ ಯಾವ ನಿಲುವನ್ನು ತಳೆದಿದ್ದಾರೆ ಎನ್ನುವುದರ ಬಗ್ಗೆಯೂ ಆತ್ಮಾವಲೋಕನ ಮಾಡಬೇಕಾಗುತ್ತದೆ. ರಶ್ಯ ಉಕ್ರೇನ್‌ನ ಮೇಲೆ ನಡೆಸುತ್ತಿರುವ ದಾಳಿಗೂ, ಇಸ್ರೇಲ್ ಫೆಲೆಸ್ತೀನ್ ನಾಗರಿಕರ ಮೇಲೆ ನಡೆಸುತ್ತಿರುವ ದಾಳಿಗೂ ಅಂತರವೇನೂ ಇಲ್ಲ. ಹಾಗೆ ನೋಡಿದರೆ ಫೆಲೆಸ್ತೀನ್ ಮೇಲೆ ಇಸ್ರೇಲ್‌ನದ್ದು ಬಹುತೇಕ ಏಕಮುಖ ದಾಳಿ. ಫೆಲೆಸ್ತೀನಿಯರ ಸಾವುನೋವುಗಳು ಯಾವ ರೀತಿಯಲ್ಲೂ ಉಕ್ರೇನ್‌ನಲ್ಲಿ ನಡೆಯುತ್ತಿರುವ ಸಾವು ನೋವುಗಳಿಗಿಂತ ಕಡಿಮೆಯಿಲ್ಲ. ಉಕ್ರೇನ್‌ನಲ್ಲಿ ಮಕ್ಕಳ ಸಾವುನೋವುಗಳಿಗಿಂತ ಫೆಲೆಸ್ತೀನ್‌ನ ಮಕ್ಕಳು, ಮಹಿಳೆಯರ ಸಾವು ನೋವುಗಳು ಅತ್ಯಂತ ಭೀಕರವಾಗಿವೆ. ಫೆಲೆಸ್ತೀನ್ ಪರವಾಗಿ ಯಾರಾದರೂ ಧ್ವನಿಯೆತ್ತುವುದಿದ್ದರೆ ಅವರಲ್ಲಿ ಉಕ್ರೇನ್ ಮೊದಲ ಸ್ಥಾನದಲ್ಲಿರಬೇಕು. ಆದರೆ ಉಕ್ರೇನ್ ಫೆಲೆಸ್ತೀನ್ ಪರವಾಗಿ ಧ್ವನಿಯೆತ್ತುವ ಧೈರ್ಯವನ್ನು ಯಾವತ್ತೂ ತೋರಿಸಿಲ್ಲ. ಪರೋಕ್ಷವಾಗಿ ಉಕ್ರೇನ್‌ಕೂಡ ಇಸ್ರೇಲ್ ಕೃತ್ಯಗಳಿಗೆ ಬೆಂಬಲ ನೀಡುತ್ತಾ ಬಂದಿದೆ. ಸ್ವತಃ ಯುದ್ಧ ಸಂತ್ರಸ್ತ ದೇಶವಾಗಿರುವ ಉಕ್ರೇನ್‌ಗೆ ಇಸ್ರೇಲ್‌ನ ವಿಷಯದಲ್ಲಿ ಸ್ಪಷ್ಟ ನಿಲುವನ್ನು ತಾಳಲು ಸಾಧ್ಯವಿಲ್ಲದೇ ಇರುವಾಗ, ಭಾರತವು ತನ್ನೆಲ್ಲ ಹಿತಾಸಕ್ತಿಯನ್ನು ಬದಿಗಿಟ್ಟು ರಶ್ಯದ ವಿರುದ್ಧ ಮಾತನಾಡಬೇಕು ಎಂದು ಅಪೇಕ್ಷಿಸುವುದು ಎಷ್ಟರಮಟ್ಟಿಗೆ ನ್ಯಾಯಯುತವಾದುದು?
ನೇಟೊ ಸದಸ್ಯತ್ವಕ್ಕಾಗಿ ಉಕ್ರೇನ್ ತೋರಿಸಿದ ಆತುರವೇ ಅಂತಿಮವಾಗಿ ಯುದ್ಧ ಸ್ಫೋಟಿಸಲು ಕಾರಣವಾಯಿತು ಎನ್ನುವುದನ್ನು ಉಕ್ರೇನ್ ಅಧ್ಯಕ್ಷರು ಮರೆಯಬಾರದು. ಅಮೆರಿಕ ಸೇರಿದಂತೆ ಯುರೋಪಿಯನ್ ರಾಷ್ಟ್ರಗಳ ಜೊತೆಗಿನ ಮೈತ್ರಿಗೆ ಕೈ ಚಾಚುವಾಗ, ಭಯೋತ್ಪಾದನೆಯ ದಮನದ ಹೆಸರಿನಲ್ಲಿ ನೇಟೊ ನಡೆಸಿದ ಹಿಂಸಾಚಾರಗಳನ್ನು ಉಕ್ರೇನ್ ಮರೆತು ಬಿಟ್ಟಿತು. ರಶ್ಯ ಯುದ್ಧಪರಾಧಿ ಹೌದಾದರೆ ಅಮೆರಿಕವೂ ಅಂತಹ ಹಲವು ಯುದ್ಧಾಪರಾಧದಲ್ಲಿ ಶಾಮೀಲಾಗಿದೆ. ಇಸ್ರೇಲ್ ನಡೆಸುತ್ತಿರುವ ಭಯೋತ್ಪಾದನೆಯಲ್ಲಿ ಅಮೆರಿಕ ಮತ್ತು ಯುರೋಪ್ ರಾಷ್ಟ್ರಗಳ ಪಾತ್ರವಿದೆ. ಇಂತಹ ದೇಶಗಳ ಜೊತೆಗೆ ಮಾಡಿಕೊಂಡ ಅತಿರೇಕದ ಮೈತ್ರಿ ಅಂತಿಮವಾಗಿ ಉಕ್ರೇನ್‌ನ ನಾಗರಿಕರನ್ನು ದುರಂತಕ್ಕೆ ತಳ್ಳಿತು. ರಶ್ಯದ ವಿರುದ್ಧ ಉಕ್ರೇನನ್ನು ಅಮೆರಿಕ ಬಳಸಿಕೊಂಡಿತು ಮಾತ್ರವಲ್ಲ, ಅಂತಿಮವಾಗಿ ಅದು ಉಕ್ರೇನ್‌ನ್ನು ಕೈ ಬಿಟ್ಟಿತು. ಉಕ್ರೇನ್ ತಾನು ಮಾಡಿದ ತಪ್ಪುಗಳು ಏನೇನು ಎನ್ನುವುದರ ಬಗ್ಗೆ ಆತ್ಮವಿಮರ್ಶೆ ನಡೆಸಬೇಕು. ಇದೇ ಸಂದರ್ಭದಲ್ಲಿ ಭಾರತದಂತಹ ದೇಶಗಳು ಉಕ್ರೇನ್, ಫೆಲೆಸ್ತೀನ್ ಪರವಾಗಿ ವ್ಯಕ್ತಪಡಿಸುವ ನೈತಿಕ ಧ್ವನಿಯಲ್ಲಿ ಬದ್ಧತೆಯ ಅಗತ್ಯವಿದೆ. ಯಾಕೆಂದರೆ, ಭಾರತವೂ ಚೀನಾ, ಅಮೆರಿಕದಂತಹ ಬಲಾಢ್ಯ ದೇಶಗಳ ನಡುವೆ ತನ್ನ ಸಾರ್ವಭೌಮತೆಯನ್ನು, ಸಮಗ್ರತೆಯನ್ನು ಉಳಿಸಿಕೊಳ್ಳಲು ಹೋರಾಟ ನಡೆಸುತ್ತಲೇ ಬರುತ್ತಿದೆ. ನಾಳೆ ಭಾರತದ ಪರವಾಗಿ ಉಳಿದ ದೇಶಗಳು ಗಟ್ಟಿಯಾಗಿ ನಿಲ್ಲಬೇಕಾದರೆ, ಇಂದು ತನ್ನ ಕೈಗಳಿಗೆ ಯಾವುದೇ ರಕ್ತದ ಕಲೆಗಳು ಅಂಟಿಕೊಳ್ಳದಂತೆ ಜಾಗರೂಕತೆ ವಹಿಸಬೇಕಾಗಿದೆ.