ಮುಡಾ ಹಗರಣ: ಈ.ಡಿ. ಕೀಟಲೆ
PC: fb.com
ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ
ಉಪ ಚುನಾವಣೆಯಲ್ಲಿ ಮೂರು ಕ್ಷೇತ್ರಗಳನ್ನು ಹೀನಾಯವಾಗಿ ಸೋತ ಬಿಜೆಪಿ ನಾಯಕರು, ಮತ್ತೆ ಮುಡಾ ಹಗರಣದ ಹಿಂದೆ ಬಿದ್ದಿದ್ದಾರೆ. ರಾಜ್ಯದಲ್ಲಿ ಸಿದ್ದರಾಮಯ್ಯ ಅವರನ್ನು ಮುಖ್ಯಮಂತ್ರಿ ಕುರ್ಚಿಯಿಂದ ಇಳಿಸದೆ ರಾಜ್ಯದಲ್ಲಿ ಕಾಂಗ್ರೆಸನ್ನು ದುರ್ಬಲಗೊಳಿಸಲು ಸಾಧ್ಯವಿಲ್ಲ ಎನ್ನುವ ವಾಸ್ತವವನ್ನು ಕೇಂದ್ರ ಬಿಜೆಪಿ ವರಿಷ್ಠರು ಮನಗಂಡಂತಿದೆ. ಆದುದರಿಂದ ಮುಡಾ ಹಗರಣಕ್ಕೆ ಮತ್ತೆ ಜೀವಕೊಡಲು ಹೊರಟಿದ್ದಾರೆ. ಈಗಾಗಲೇ ಪಡೆದುಕೊಂಡ ಮುಡಾ ನಿವೇಶನವನ್ನು ಮರಳಿಸಿ, ವಿವಾದವನ್ನು ತಿಳಿಗೊಳಿಸಲು ಮುಖ್ಯಮಂತ್ರಿ ಪ್ರಯತ್ನಿಸಿದ್ದಾರಾದರೂ, ತಿಳಿಯಾಗುವುದು ಬಿಜೆಪಿಗೆ ಬೇಡವಾಗಿದೆ. ಒಳ ಜಗಳದಿಂದ ತತ್ತರಿಸಿರುವ ರಾಜ್ಯ ಬಿಜೆಪಿಗೆ ಮುಡಾ ಹಗರಣ ಮುಳುಗುವವನಿಗೆ ಹುಲ್ಲುಕಡ್ಡಿ ಎನ್ನುವಂತಾಗಿದೆ. ವಕ್ಫನ್ನು ಕೈ ಬಿಟ್ಟು ಮತ್ತೆ ಮುಡಾದ ಬೆನ್ನು ಹತ್ತಲು ಬಿಜೆಪಿ ನಿರ್ಧರಿಸಿದೆ. ಅದರ ಭಾಗವಾಗಿಯೇ, ಇದೀಗ ಮುಡಾ ಹಗರಣದಲ್ಲಿ ಈ.ಡಿ. ಪ್ರವೇಶವಾಗಿದೆ.
ಮುಡಾ ಹಗರಣ ತನಿಖೆಗೆ ಅನುಮತಿ ನೀಡಿರುವುದನ್ನು ಪ್ರಶ್ನಿಸಿ ಮುಖ್ಯಮಂತ್ರಿ ಅವರು ಸಲ್ಲಿಸಿರುವ ರಿಟ್ ಅರ್ಜಿ ವಿಚಾರಣೆಯ ಹಂತದಲ್ಲಿದೆ. ಜೊತೆಗೆ ಪ್ರಕರಣವನ್ನು ಲೋಕಾಯುಕ್ತ ತನಿಖೆ ನಡೆಸುತ್ತಿದೆ. ಸಿದ್ದರಾಮಯ್ಯ ಅವರು ತನಿಖೆಗೆ ಸರ್ವ ರೀತಿಯಲ್ಲಿ ಸಹಕರಿಸುತ್ತಿದ್ದಾರೆ. ತನಿಖೆಯ ವರದಿಯನ್ನು ಸಲ್ಲಿಸಲು ನ್ಯಾಯಾಲಯವು ಲೋಕಾಯಕ್ತಕ್ಕೆ ಸೂಚನೆಯನ್ನೂ ನೀಡಿದೆ. ಇಂತಹ ಹೊತ್ತಿನಲ್ಲಿ, ಪ್ರಕರಣದಲ್ಲಿ ಈ.ಡಿ. ಅನಗತ್ಯ ಮೂಗು ತೂರಿಸಲು ಯತ್ನಿಸುತ್ತಿದೆ. ಲೋಕಾಯುಕ್ತ ತನಿಖೆ ನಡೆಯುತ್ತಿರುವಾಗಲೇ, ಪ್ರಕರಣದ ಬಗ್ಗೆ ಈ.ಡಿ. ಲೋಕಾಯುಕ್ತ ಜೊತೆಗೆ ಮಾಹಿತಿಯನ್ನು ಹಂಚಿಕೊಂಡಿದೆ ಮಾತ್ರವಲ್ಲ, ಆ ಹಂಚಿಕೊಂಡ ಮಾಹಿತಿಯನ್ನು ಮಾಧ್ಯಮಗಳಿಗೆ ಸೋರಿಕೆ ಮಾಡಿದೆ. ಈ.ಡಿ.ಯ ಈ ಕೀಟಲೆಯ ಹಿಂದೆ ಯಾರಿದ್ದಾರೆ ಎನ್ನುವುದು ಊಹಿಸುವುದು ಕಷ್ಟವೇನೂ ಇಲ್ಲ. ಬಿಜೆಪಿ ಅಧಿಕಾರಾವಧಿಯಲ್ಲಿ ನಡೆದ ಒಂದು ಸಣ್ಣ ಹಗರಣವನ್ನು ಈ.ಡಿ. ಅತ್ಯಾಸಕ್ತಿಯಿಂದ ಯಾರ ಅನುಮತಿಯೂ ಇಲ್ಲದೆ ತನಿಖೆ ಮಾಡಲು ಹೊರಡುವುದು ಮತ್ತು ಏಕಾಏಕಿ ಲೋಕಾಯುಕ್ತ ಜೊತೆಗೆ ಮಾಹಿತಿಗಳನ್ನು ಹಂಚಿಕೊಳ್ಳುವುದು ಇವೆಲ್ಲದರ ಗುರಿ ಸಿದ್ದರಾಮಯ್ಯ ಅವರು ಎನ್ನುವುದರಲ್ಲಿ ಎರಡು ಮಾತಿಲ್ಲ. ಮುಡಾ ಹಗರಣದ ಉರುಳನ್ನು ಸಿದ್ದರಾಮಯ್ಯ ಅವರ ಕೊರಳಿಗೆ ಬಿಗಿಯಾಗಿಸುವುದು ಮತ್ತು ಆ ಮೂಲಕ ಅವರು ಅಧಿಕಾರದಿಂದ ಕೆಳಗಿಳಿಯಲೇ ಬೇಕಾದಂತಹ ಸನ್ನಿವೇಶವನ್ನು ಸೃಷ್ಟಿಸುವುದಕ್ಕಾಗಿ ಕೇಂದ್ರ ಸರಕಾರ ಈ.ಡಿ.ಯನ್ನು ಬಳಸಿಕೊಳ್ಳುತ್ತಿದೆ. ಉಪಚುನಾವಣೆಯ ಬಳಿಕ ರಾಜ್ಯದಲ್ಲಿ ಕಾಂಗ್ರೆಸ್ ತನ್ನ ಬೇರನ್ನು ಇನ್ನಷ್ಟು ಆಳಕ್ಕೆ ಇಳಿಸಿಕೊಂಡಿದೆ ಮಾತ್ರವಲ್ಲ, ಅತಂತ್ರದಲ್ಲಿದ್ದ ಸಿದ್ದರಾಮಯ್ಯ ಕುರ್ಚಿ ಗಟ್ಟಿಯಾಗಿದೆ. ರಾಜ್ಯದಲ್ಲಿ ಕಾಂಗ್ರೆಸನ್ನು ದುರ್ಬಲಗೊಳಿಸಬೇಕಾದರೆ ಸಿದ್ದರಾಮಯ್ಯ ಅವರು ಕುರ್ಚಿಯಿಂದ ಇಳಿಯುವ ಸನ್ನಿವೇಶ ನಿರ್ಮಾಣವಾಗಬೇಕು. ಕಾಂಗ್ರೆಸ್ನೊಳಗೆ ಅಧಿಕಾರಕ್ಕೆ ಕಚ್ಚಾಟ ಆರಂಭವಾಗಬೇಕು. ಈ ದುರುದ್ದೇಶವನ್ನು ಸಾಧಿಸಲು ಲೋಕಾಯುಕ್ತ ತನಿಖೆಯಿಂದ ಸಾಧ್ಯವಾಗಲಿಕ್ಕಿಲ್ಲ ಎನ್ನುವುದು ಅರಿತು, ಕೇಂದ್ರ ಸರಕಾರ ಈ.ಡಿ.ಯನ್ನು ಮುಂದಕ್ಕೆ ತಂದಿದೆ.
ಸಿದ್ದರಾಮಯ್ಯ ಅವರ ಮುಡಾ ಹಗರಣದ ಬಗ್ಗೆ ಈ ದೇಶದ ತನಿಖಾ ಸಂಸ್ಥೆಗಳು ತೋರಿಸುತ್ತಿರುವ ಆಸಕ್ತಿಯನ್ನು ಅದಾನಿಯ ಹಗರಣಗಳ ಬಗ್ಗೆ ತೋರಿಸಿದ್ದಿದ್ದರೆ ಇಷ್ಟು ಹೊತ್ತಿಗೆ ಅದಾನಿ ಜೈಲಲ್ಲಿ ಇರುತ್ತಿದ್ದರು ಮತ್ತು ಪ್ರಧಾನಿ ಮೋದಿ ರಾಜೀನಾಮೆ ನೀಡಬೇಕಾದ ಸನ್ನಿವೇಶ ಸೃಷ್ಟಿಯಾಗಿ ಬಿಡುತ್ತಿತ್ತು. ಸದ್ಯಕ್ಕೆ ಮುಡಾ ಹಗರಣದಲ್ಲಿ ಈ.ಡಿ.ಯ ನಡೆಯಿಂದ ಎರಡು ಸ್ಪಷ್ಟವಾಗುತ್ತಿದೆ. ಒಂದು, ಅದು ಲೋಕಾಯುಕ್ತದ ತನಿಖೆಯ ಮೇಲೆ ತನ್ನ ಪ್ರಭಾವ ಬೀರಲು ಹೊರಟಿದೆ. ಮುಡಾ ಹಗರಣದ ಬಗ್ಗೆ ಕೇಂದ್ರದ ಈ.ಡಿ.ಯ ನಿಲುವು ಬಿಜೆಪಿಯ ನಿಲುವು ಬೇರೆ ಬೇರೆ ಆಗಿರಲು ಸಾಧ್ಯವಿಲ್ಲ. ಅಷ್ಟರಮಟ್ಟಿಗೆ ಕೇಂದ್ರದ ತನಿಖಾ ಸಂಸ್ಥೆಗಳು ವಿಶ್ವಾಸಾರ್ಹತೆಯನ್ನು ಕಳೆದುಕೊಂಡಿವೆ. ಇದೀಗ ಮುಡಾದಂತಹ ಸಣ್ಣ ಹಗರಣದ ಬಗ್ಗೆ ಆಸಕ್ತಿ ತೋರಿಸುವ ಮೂಲಕ ಈ ಸಂಸ್ಥೆ ಇನ್ನಷ್ಟು ಶಂಕೆಗೊಳಗಾಗಿದೆ. ಸೋರಿಕೆಯು ಆಕಸ್ಮಿಕ ಖಂಡಿತ ಅಲ್ಲ. ಹಾಸನದಲ್ಲಿ ಸಿದ್ದರಾಮಯ್ಯ ಪರವಾಗಿ ಬೃಹತ್ ಸಮಾವೇಶ ನಡೆಯುತ್ತಿರುವ ಹೊತ್ತಿನಲ್ಲೇ, ಈ ಸೋರಿಕೆ ನಡೆದಿದೆ. ಈ ಸಮಾವೇಶಕ್ಕೆ ಹಿನ್ನಡೆಯನ್ನುಂಟು ಮಾಡಲು ಮತ್ತು ಕಾಂಗ್ರೆಸ್ನ ಇತ್ತೀಚಿನ ಗೆಲುವಿನ ಗಮನವನ್ನು ಬೇರೆಡೆಗೆ ಸೆಳೆಯಲು ಚರ್ಚೆಗೆ ಹೊಸ ವಿಷಯವನ್ನು ನೀಡಿದೆ. ರಾಜ್ಯ ಬಿಜೆಪಿಯು ಸರಕಾರದ ವಿರುದ್ಧ ಹಮ್ಮಿಕೊಂಡ ಬಹುತೇಕ ಆಂದೋಲನಗಳು ವಿಫಲವಾಗಿವೆ. ಇದರ ಜೊತೆ ಜೊತೆಗೆ ಬಿಜೆಪಿಯೊಳಗೆ ಬಂಡಾಯ ಎದ್ದಿದ್ದು, ಮಾಧ್ಯಮಗಳಲ್ಲಿ ದಿನನಿತ್ಯ ಚರ್ಚೆಗೊಳಗಾಗುತ್ತಿವೆ. ಈಗಾಗಲೇ ಯತ್ನಾಳ್ ಅವರಿಗೆ ಶೋಕಾಸ್ ನೋಟಿಸ್ ನೀಡಲಾಗಿದೆ. ಇದೇ ಸಂದರ್ಭದಲ್ಲಿ, ಯತ್ನಾಳ್ ಅವರು ಬಸವಣ್ಣರ ವಿರುದ್ಧ ನೀಡಿರುವ ವಿವಾದಾತ್ಮಕ ಹೇಳಿಕೆಯೂ ಬಿಜೆಪಿಯನ್ನು ಇಕ್ಕಟ್ಟಿಗೆ ಸಿಲುಕಿಸಿದೆ. ಇವೆಲ್ಲದರ ಹಾನಿಯ ಪ್ರಮಾಣವನ್ನು ಕಡಿಮೆ ಮಾಡಲು ಈ.ಡಿ.ಯ ಮೂಲಕ ಮುಡಾ ಹಗರಣವನ್ನು ಕೆದಕುವುದು ಬಿಜೆಪಿ ವರಿಷ್ಠರಿಗೆ ಅನಿವಾರ್ಯವಾಗಿದೆ.
ಇದೇ ಸಂದರ್ಭದಲ್ಲಿ ‘ಸಿದ್ದರಾಮಯ್ಯ ಪೂರ್ಣಾವಧಿ ಮುಖ್ಯಮಂತ್ರಿ ಯಾಗುತ್ತಾರೆಯೋ’ ಎನ್ನುವ ಚರ್ಚೆಗೆ ಮತ್ತೆ ರೆಕ್ಕೆ ಮೂಡಿದೆ. ‘ಸಿಎಂ ಹುದ್ದೆ ಬಗ್ಗೆ ಈ ಹಿಂದೆ ಒಪ್ಪಂದ ಆಗಿದೆ’ ಎನ್ನುವ ಮೂಲಕ ಡಿ.ಕೆ. ಶಿವಕುಮಾರ್ ಚರ್ಚೆಯನ್ನು ಕೈಗೆತ್ತಿಕೊಂಡಿದ್ದಾರೆ. ಜನಕಲ್ಯಾಣೋತ್ಸವ ಸಮಾವೇಶದ ಸಂದರ್ಭದಲ್ಲಿ ಅವರಿಂದ ಈ ಮಾತು ಹೊರಗೆ ಬಿದ್ದದ್ದು ಕೂಡ ಆಕಸ್ಮಿಕವಲ್ಲ. ಗೃಹ ಸಚಿವ ಪರಮೇಶ್ವರ್ ಅವರು ‘ಈ ಬಗ್ಗೆ ವಿವಾದ ಇಲ್ಲ’ ಎಂದು ಮಾಧ್ಯಮಗಳ ಮುಂದೆ ಸ್ಪಷ್ಟಪಡಿಸಿದ್ದಾರಾದರೂ, ಸಿದ್ದರಾಮಯ್ಯ ಅವರೇ ಮುಂದುವರಿಯುತ್ತಾರೆ ಎನ್ನುವ ಸ್ಪಷ್ಟ ಹೇಳಿಕೆಯನ್ನು ನೀಡಿಲ್ಲ. ‘‘ಸಿಎಂ ಹುದ್ದೆ ಬಗ್ಗೆ ಒಪ್ಪಂದ ಆಗಿದೆ ಎಂದು ಡಿ.ಕೆ. ಶಿವಕುಮಾರ್ ಹೇಳಿದ್ದಾರೆ. ಇಲ್ಲ ಅಂತ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ಅಲ್ಲಿಗೆ ಅದು ಮುಗಿಯಿತು. ಇಬ್ಬರಲ್ಲಿ ಯಾರು ಸತ್ಯ ಹೇಳುತ್ತಿದ್ದಾರೆ, ಯಾರು ಸುಳ್ಳು ಹೇಳುತ್ತಿದ್ದಾರೆ ಗೊತ್ತಿಲ್ಲ. ಒಪ್ಪಂದದ ಬಗ್ಗೆ ನನಗೆ ವಿವರ ಇಲ್ಲ’’ ಎಂದು ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದಾರೆ. ಉಪಚುನಾವಣೆಯ ಗೆಲುವಿನ ಮಾಲಕರಾಗಲು ಕಾಂಗ್ರೆಸ್ನೊಳಗೆ ಒಳಗೊಳಗೆ ಪೈಪೋಟಿ ನಡೆಯುತ್ತಿರುವುದು ಗುಟ್ಟಾಗಿಯೇನೂ ಇಲ್ಲ. ಚನ್ನಪಟ್ಟಣದಲ್ಲಿ ಕಾಂಗ್ರೆಸ್ನಿಂದ ಯಾರೇ ಸ್ಪರ್ಧಿಸಿದರೂ ನಾನೇ ಸ್ಪರ್ಧಿಸಿದಂತೆ ಎಂದು ಡಿಕೆಶಿ ಚುನಾವಣೆಗೆ ಮುನ್ನವೇ ಘೋಷಿಸಿದ್ದರು. ಚನ್ನಪಟ್ಟಣದಲ್ಲಿ ಕಾಂಗ್ರೆಸ್ ಗೆಲುವಿಗೆ ಡಿಕೆಶಿ ಪಾತ್ರವನ್ನು ನಿರ್ಲಕ್ಷಿಸಲು ಸಾಧ್ಯವಿಲ್ಲ. ಇದೇ ಸಂದರ್ಭದಲ್ಲಿ ಸಿದ್ದರಾಮಯ್ಯ ಅವರ ಗ್ಯಾರಂಟಿಯಾಧಾರಿತ ಜನಪರ ಆಡಳಿತವೂ ಉಪಚುನಾವಣೆಯಲ್ಲಿ ಕೆಲಸ ಮಾಡಿದೆ. ಗೆಲುವು ಸಿದ್ದರಾಮಯ್ಯ ಅವರಿಗೆ ಆನೆ ಬಲ ನೀಡಿದೆ. ಸದ್ಯಕ್ಕೆ ಏಕಾಏಕಿ ಅವರನ್ನು ಬದಲಿಸುವುದಕ್ಕೆ ಕಾಂಗ್ರೆಸ್ ವರಿಷ್ಠರ ಬಳಿ ಕಾರಣಗಳಿಲ್ಲ. ಆದರೆ ಡಿಕೆಶಿ ಹೇಳಿದಂತೆ ಅಂತಹದೊಂದು ಒಪ್ಪಂದ ಆಗಿದ್ದಿದ್ದರೆ ಭವಿಷ್ಯದಲ್ಲಿ ಮತ್ತೆ ಮುಖ್ಯಮಂತ್ರಿಯ ಅಧಿಕಾರಾವಧಿ ಚರ್ಚೆ ಕಾವು ಪಡೆಯಬಹುದು. ಮುಡಾ ಹಗರಣ ಸಿದ್ದರಾಮಯ್ಯ ಕೊರಳಿಗೆ ಬಿಗಿಯಾದಷ್ಟು ಅದರ ಫಲಾನುಭವಿಗಳಾಗಲು ಕಾಂಗ್ರೆಸ್ನೊಳಗೆ ಕೆಲವರು ಕಾದು ಕುಳಿತಿದ್ದಾರೆ. ಆದುದರಿಂದಲೇ, ಬಿಜೆಪಿ ಮುಡಾ ಹಗರಣವನ್ನು ತನ್ನ ಮೂಗಿನ ನೇರಕ್ಕೆ ತನಿಖೆ ನಡೆಸಲು ಹೊರಟಿದೆ. ಬಿಜೆಪಿಗೆ ಸವಾಲು ಹಾಕುವಂತೆ ಸಾರ್ವಜನಿಕವಾಗಿ ಒಗ್ಗಟ್ಟನ್ನು ಪ್ರದರ್ಶಿಸುತ್ತಿರುವ ರಾಜ್ಯ ಕಾಂಗ್ರೆಸ್ನೊಳಗೆ ಬಿರುಕುಂಟು ಮಾಡುವುದು ಕೇಂದ್ರದ ಒಟ್ಟು ಉದ್ದೇಶವಾಗಿದೆ.