ಮುಡಾ ಹಗರಣ: ಇಲಿ ಹಿಡಿಯಲೆಂದೇ ಗುಡ್ಡ ಅಗೆಯಲಾಯಿತೆ?
ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ನಿವೇಶನ ಹಂಚಿಕೆ ಪ್ರಕರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಲೋಕಾಯುಕ್ತರಿಂದ ಕ್ಲೀನ್ ಚಿಟ್ ಸಿಕ್ಕಿರುವ ಬಗ್ಗೆ ವದಂತಿಗಳು ಹರಡಿವೆ. ಪ್ರಕರಣದಲ್ಲಿ ಮುಡಾ ಅಧಿಕಾರಿಗಳನ್ನೇ ಆರೋಪಿ ಸ್ಥಾನದಲ್ಲಿ ನಿಲ್ಲಿಸಲಾಗಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹಂಚಿಕೆ ಸಂದರ್ಭದಲ್ಲಿ ಪ್ರಭಾವ ಬೀರಿದ್ದಾರೆ ಎನ್ನುವುದನ್ನು ಲೋಕಾಯುಕ್ತ ವರದಿ ಎತ್ತಿ ಹಿಡಿದಿಲ್ಲ ಎನ್ನಲಾಗುತ್ತಿದೆ. ಈ ವದಂತಿ ಹೊರ ಬೀಳುತ್ತಿದ್ದಂತೆಯೇ ಇದರ ವಿರುದ್ಧ ಬಿಜೆಪಿಯ ನಾಯಕರು ತಮ್ಮ ಆಕ್ಷೇಪವನ್ನು ವ್ಯಕ್ತಪಡಿಸುತ್ತಿದ್ದಾರೆ. ಲೋಕಾಯುಕ್ತವನ್ನು ಬಳಸಿ ಮುಡಾ ಪ್ರಕರಣವನ್ನು ಮುಚ್ಚಿ
ಹಾಕಲು ಪ್ರಯತ್ನಿಸಲಾಗುತ್ತಿದೆ ಎಂದು ಅವರು ಆರೋಪಿಸುತ್ತಿದ್ದಾರೆ. ಆದರೆ ವರದಿ ಇನ್ನೂ ನ್ಯಾಯಾಲಯಕ್ಕೆ ಸಲ್ಲಿಕೆಯಾಗಿಲ್ಲ. ಅದಕ್ಕೂ ಮೊದಲು ಮಾಧ್ಯಮಗಳಿಗೆ ಹೇಗೆ ಸೋರಿಕೆಯಾಯಿತು ಮತ್ತು ಅದರ ಆಧಾರದಲ್ಲೇ ಬಿಜೆಪಿ ನಾಯಕರು ಮತ್ತೆ ಬೀದಿ ರಂಪ ಶುರು ಹಚ್ಚಿರುವುದು ಎಷ್ಟು ಸರಿ ಎನ್ನುವ ಪ್ರಶ್ನೆ ಎದ್ದಿದೆ.
ಮುಡಾ ಹಗರಣದ ತನಿಖೆ ಯಾವ ಹಾದಿಯಲ್ಲಿ ಸಾಗಿ, ಎಲ್ಲಿ ಮುಕ್ತಾಯಗೊಳ್ಳುತ್ತದೆ ಎನ್ನುವುದು ಯಾರೂ ಊಹಿಸಬಹುದಾಗಿತ್ತು. ಮುಡಾ ಹಗರಣಕ್ಕೆ ಸಂಬಂಧಿಸಿ ಸಿದ್ದರಾಮಯ್ಯ ವಿರುದ್ಧ ಪ್ರತಿಭಟನೆ ನಡೆಸುತ್ತಿರುವುದನ್ನು ಸ್ವತಃ ಬಿಜೆಪಿಯೊಳಗಿರುವ ಒಂದು ಗುಂಪು ವಿರೋಧಿಸಿತ್ತು. ಆರೋಪವು ಆಂದೋಲನ ರೂಪಿಸುವಷ್ಟು ಗಂಭೀರವಾದುದಲ್ಲ ಎನ್ನುವುದು ಅವರ ಅಭಿಪ್ರಾಯವಾಗಿತ್ತು. ಪಡೆದ ನಿವೇಶನವನ್ನು ಸಿದ್ದರಾಮಯ್ಯ ಕುಟುಂಬ ಮರಳಿಸಿದ ಬಳಿಕ, ಹಗರಣದಲ್ಲಿ ಸಿದ್ದರಾಮಯ್ಯ ಅವರನ್ನು ಅಧಿಕಾರದಿಂದ ಕೆಳಗಿಳಿಸುವ ಒತ್ತಾಯಕ್ಕೆ ಅರ್ಥವೂ ಇರಲಿಲ್ಲ. ಸಿದ್ದರಾಮಯ್ಯ ಸರಕಾರದ ವಿರುದ್ಧ ಆಂದೋಲನ ರೂಪಿಸಲು ವಿರೋಧ ಪಕ್ಷಗಳ ಕೈಯಲ್ಲಿ ಬೇರೆ ಅಸ್ತ್ರಗಳು ಇಲ್ಲದೇ ಇರುವುದರಿಂದ, ಈ ಮುಡಾ ಎನ್ನುವ ಮೊಂಡು ಕತ್ತಿಯನ್ನು ಕೆಳಗಿಡುವ ಸ್ಥಿತಿಯಲ್ಲಿ ಬಿಜೆಪಿ ನಾಯಕರೂ ಇದ್ದಿರಲಿಲ್ಲ. ಲೋಕಾಯುಕ್ತ ತನಿಖೆಯ ಗತಿಯ ಬಗ್ಗೆ ಬಿಜೆಪಿಗೆ ಅರಿವಿರುವುದರಿಂದಲೇ, ಅನಗತ್ಯವಾಗಿ ಈ.ಡಿ ಮೂಗು ತೂರಿಸುವ ಅನಿವಾರ್ಯ ಸೃಷ್ಟಿಯಾಯಿತು. ಸ್ವಯಂ ಪ್ರೇರಿತವಾಗಿ ಈ.ಡಿ ತನಿಖೆ ನಡೆಸಿದ್ದೇ ಅಲ್ಲದೆ, ವರದಿಯನ್ನು ಲೋಕಾಯುಕ್ತದೊಂದಿಗೆ ಹಂಚಿಕೊಂಡಿತು. ಅಂದರೆ, ಲೋಕಾಯುಕ್ತ ತನಿಖೆಯ ಮೇಲೆ ಪ್ರಭಾವ ಬೀರಲು ಯತ್ನಿಸಿತು. ಹಗರಣದ ಗಂಭೀರತೆಯ ಬಗ್ಗೆ ಬಿಜೆಪಿಗೆ ನಿಜಕ್ಕೂ ಭರವಸೆಯಿದ್ದದ್ದೇ ಆದರೆ, ಅದು ಲೋಕಾಯುಕ್ತ ತನಿಖೆ ಮುಗಿಯುವವರೆಗೆ ಕಾಯಬೇಕಾಗಿತ್ತು. ತನಿಖೆ ನಡೆಯುತ್ತಿರುವ ಸಂದರ್ಭದಲ್ಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜೀನಾಮೆಗೆ ಒತ್ತಾಯಿಸಿದ್ದಲ್ಲದೆ, ತನಿಖೆಯ ಗತಿಯನ್ನು ಬದಲಾಯಿಸಲು ಈ.ಡಿಯನ್ನು ದುರುಪಯೋ ಗಪಡಿಸಿಕೊಂಡಿರುವುದರಲ್ಲೇ ಬಿಜೆಪಿಯ ಒಟ್ಟು ಹತಾಶೆಯನ್ನು ಗುರುತಿಸಬಹುದು. ಈ ಹಿಂದೆ ಸಂತೋಷ್ ಹೆಗ್ಡೆ ನೇತೃತ್ವದಲ್ಲಿ ಹೊರ ಬಿದ್ದ ಗಣಿ ಭ್ರಷ್ಟಾಚಾರ ವರದಿ ಅಂತಿಮವಾಗಿ ಯಡಿಯೂರಪ್ಪ ಅವರ ರಾಜೀನಾಮೆಯೊಂದಿಗೆ ಮುಕ್ತಾಯಗೊಂಡಿತ್ತು. ಅಷ್ಟೇ ಗಂಭೀರವಾದ ಪ್ರಕರಣ ಇದು ಆಗಿದ್ದಿದ್ದರೆ, ಬಿಜೆಪಿ ಇಷ್ಟೆಲ್ಲ ಒದ್ದಾಟ ನಡೆಸುವ ಅಗತ್ಯ ಇದ್ದಿರಲಿಲ್ಲ.
ಮುಖ್ಯವಾಗಿ ನಿವೇಶನ ಹಂಚಿಕೆಯ ಸಂದರ್ಭದಲ್ಲಿ ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಿರಲಿಲ್ಲ ಎನ್ನುವುದು ಸ್ವತಃ ಬಿಜೆಪಿ ನಾಯಕರಿಗೂ ಗೊತ್ತಿರುವ ವಿಷಯ. ಬಿಜೆಪಿ ಸರಕಾರ ಅಸ್ತಿತ್ವದಲ್ಲಿದ್ದಾಗ ಈ ಹಗರಣ ನಡೆದಿದೆ. ಕಾನೂನು ಉಲ್ಲಂಘಿಸಿ ನಿವೇಶನಗಳನ್ನು ನೀಡಲಾಗಿದೆಯಾದರೆ, ಅದರಲ್ಲಿ ಅಧಿಕಾರಿಗಳ ಪಾತ್ರ ಪ್ರಮುಖವಾದದ್ದು ಮತ್ತು ಈ ಸಂದರ್ಭದಲ್ಲಿ ಕೇವಲ ಸಿದ್ದರಾಮಯ್ಯ ಕುಟುಂಬ ಮಾತ್ರ ನಿವೇಶನವನ್ನು ಪಡೆದಿರಲಿಲ್ಲ. ಲೋಕಾಯುಕ್ತ ವರದಿ ಸಲ್ಲಿಕೆಯಾದ ಬಳಿಕವಷ್ಟೇ ಈ ಅಕ್ರಮಗಳಲ್ಲಿ ಪಾಲುಗೊಂಡ ಇನ್ನಿತರರ ಹೆಸರುಗಳು ಬಹಿರಂಗವಾಗುವ ಸಾಧ್ಯತೆಗಳಿವೆ. ಲೋಕಾಯುಕ್ತ ವರದಿ ನ್ಯಾಯಾಲಯಕ್ಕೆ ಸಲ್ಲಿಕೆಯಾಗುವ ಮೊದಲೇ ‘‘ಮುಡಾ ಪ್ರಕರಣವನ್ನು ಮುಚ್ಚಿ ಹಾಕಲು ಪ್ರಯತ್ನಿಸಲಾಗಿದೆ’’ ಎನ್ನುವ ಬಿಜೆಪಿ ಆರೋಪ ಸಮರ್ಥನೀಯವಲ್ಲ. ‘‘ಸಿಬಿಐ ತನಿಖೆಯಾಗಬೇಕು’’ ಎಂದು ಬಿಜೆಪಿ ನಾಯಕರು ಒತ್ತಾಯಿಸುತ್ತಿದ್ದಾರೆ. ಸಿಬಿಐ ಕೇಂದ್ರ ಸರಕಾರದ ಹಿಡಿತದಲ್ಲಿರುವುದು ಮತ್ತು ಈ ತನಿಖಾ ಸಂಸ್ಥೆಯನ್ನು ತನ್ನ ರಾಜಕೀಯ ಸೇಡಿಗಾಗಿ ಕೇಂದ್ರ ಸರಕಾರ ಬಳಸಿಕೊಳ್ಳುತ್ತಿರುವುದು ಈಗಾಗಲೇ ಚರ್ಚೆಯಲ್ಲಿರುವಾಗ, ಸಿಬಿಐಯಿಂದ ಪಾರದರ್ಶಕ ತನಿಖೆ ನಡೆಯುತ್ತದೆ ಎನ್ನುವುದನ್ನು ಕಾಂಗ್ರೆಸ್ ಪಕ್ಷ ಯಾಕೆ ಒಪ್ಪಿಕೊಳ್ಳಬೇಕು?
ಇದೇ ಸಂದರ್ಭದಲ್ಲಿ 2013-2018ರ ಅವಧಿಯಲ್ಲಿ ಮುಖ್ಯಮಂತ್ರಿಯಾಗಿದ್ದಾಗ ಸಿದ್ದರಾಮಯ್ಯ ಅವರು ಅಧಿಕಾರ ದುರ್ಬಳಕೆ ಮಾಡಿಕೊಂಡು 1.30 ಕೋಟಿ ರೂ. ಕಿಕ್‌ಬ್ಯಾಂಕ್ ಪಡೆದು ಓರ್ವರನ್ನು ನಾಮನಿರ್ದೇಶನ ಮಾಡಿದ್ದಾರೆ ಎಂದು ಬಿಜೆಪಿ ಮುಖಂಡನೊಬ್ಬ ಆರೋಪಿಸಿ ದೂರು ಸಲ್ಲಿಸಿದ್ದರು. ಇದನ್ನು ಕೂಡ ಲೋಕಾಯುಕ್ತ ಪೊಲೀಸರು ತನಿಖೆ ನಡೆಸಿ, ಅವರಿಗೆ ಕ್ಲೀನ್ ಚಿಟ್ ನೀಡಿದ್ದಾರೆ. ಲೋಕಾಯುಕ್ತ ಪೊಲೀಸರು ಸಲ್ಲಿಸಿರುವ ಬಿ ರಿಪೋರ್ಟ್‌ನ್ನು ಜನಪ್ರತಿನಿಧಿಗಳ ನ್ಯಾಯಾಲಯ ಅಂಗೀಕರಿಸಿದೆ. ಬಿಜೆಪಿ ಬೇಕಾದರೆ, ಈ ವರದಿಯನ್ನೂ ಅಲ್ಲಗಳೆಯಬಹುದು. ಅಷ್ಟೇ ಏಕೆ, ತಮ್ಮ ಮೂಗಿನ ನೇರಕ್ಕೆ ಹೊರ ಬೀಳದೆ ಇರುವ ಯಾವುದೇ ವರದಿಗಳನ್ನು ಬಿಜೆಪಿ ಒಪ್ಪಿಕೊಳ್ಳುವ ಸಾಧ್ಯತೆಗಳು ಕಡಿಮೆ. ಕನಿಷ್ಠ ಹಗರಣದ ಗಂಭೀರತೆಯನ್ನು ನಾಡಿನ ಜನತೆಗಾದರೂ ಮನವರಿಕೆ ಮಾಡಲು ಬಿಜೆಪಿ ಯಶಸ್ವಿಯಾಗಿದೆಯೆ ಎಂದರೆ ಅದೂ ಇಲ್ಲ. ವಿರೋಧ ಪಕ್ಷಗಳು ಇರುವುದು ಆಡಳಿತ ಪಕ್ಷದ ತಪ್ಪುಗಳನ್ನು ಗುರುತಿಸಿ ಅವುಗಳನ್ನು ಜನತೆಯ ಮುಂದೆ ಇಡುವುದಕ್ಕೆ ಎನ್ನುವುದರ ಬಗ್ಗೆ ಎರಡು ಮಾತಿಲ್ಲ. ಆದರೆ, ಒಬ್ಬ ಮುಖ್ಯಮಂತ್ರಿಯ ಬಗ್ಗೆ ಆರೋಪಗಳನ್ನು ಮಾಡಿ, ಅವರನ್ನು ರಾಜೀನಾಮೆಗೆ ಒತ್ತಾಯಿಸುವ ಸಂದರ್ಭದಲ್ಲಿ ಅದಕ್ಕೆ ಸಂಬಂಧಿಸಿದ ಅರ್ಹ ದಾಖಲೆಗಳು ವಿರೋಧ ಪಕ್ಷದ ಬಳಿ ಇರಬೇಕಾಗಿತ್ತು. ತನ್ನ ಆರೋಪಗಳನ್ನು ನಿರಾಕರಿಸುವ ದಾಖಲೆಗಳನ್ನು ಸಿದ್ದರಾಮಯ್ಯ ಅವರು ಎರಡೆರಡು ಬಾರಿ ಪತ್ರಿಕಾಗೋಷ್ಠಿ ನಡೆಸಿ ಜನರ ಮುಂದಿಟ್ಟಿದ್ದಾರೆ. ಅಷ್ಟೇ ಅಲ್ಲ, ಬಿಜೆಪಿಯ ಅಧಿಕಾರಾವಧಿಯಲ್ಲಿ ನಡೆದ ಇಂತಹ ಪ್ರಕರಣಗಳನ್ನೂ ಮುಂದಿಟ್ಟಿದ್ದಾರೆ. ಅವುಗಳಿಗೂ ಬಿಜೆಪಿ ಸ್ಪಷ್ಟೀಕರಣ ನೀಡಿಲ್ಲ. ಹೀಗಿರುವಾಗ, ಲೋಕಾಯುಕ್ತ ವರದಿಯನ್ನು ಒಪ್ಪಿಕೊಳ್ಳುವುದಿಲ್ಲ ಎನ್ನುವ ಬಿಜೆಪಿಯ ಮೊಂಡುತನಕ್ಕೆ ಯಾವುದೇ ಔಷಧಿಯಿಲ್ಲ.
ಇಷ್ಟಕ್ಕೂ ಮುಡಾ ಹಗರಣಕ್ಕೆ ಹೋಲಿಸಿದರೆ ಕೊರೋನ ಕಾಲದಲ್ಲಿ ಬಿಜೆಪಿ ಸರಕಾರದ ಅವಧಿಯಲ್ಲಿ ನಡೆದ ಹಗರಣ ನಾಡು ಬೆಚ್ಚಿ ಬೀಳಿಸುವಂತಹದು. ಇದರಿಂದ ನಾಡಿನ ಜನತೆ ನೇರ ಸಂತ್ರಸ್ತರಾಗಿದ್ದಾರೆ. ಒಂದೆಡೆ ಕೊರೋನಾ, ಲಾಕ್‌ಡೌನ್‌ಗಳಿಂದ ಜನತೆ ತತ್ತರಿಸುತ್ತಿರುವಾಗ ಕೊರೋನಾ ವೈದ್ಯಕೀಯ ಸಲಕರಣೆಗಳ ಖರೀದಿಯಲ್ಲಿ ಅವ್ಯವಹಾರ ನಡೆದಿರುವುದು ಮತ್ತು ಅದರಲ್ಲಿ ಬಿಜೆಪಿಯ ಮುಖಂಡರು ಭಾಗಿಯಾಗಿರುವುದನ್ನು ಸ್ವತಃ ಬಿಜೆಪಿ ನಾಯಕರೇ ಒಪ್ಪಿಕೊಂಡಿದ್ದಾರೆ. ಹಲವು ಸಾವಿರ ಕೋಟಿಯ ಹಗರಣ ಇದು ಎನ್ನುವುದನ್ನು ಬಿಜೆಪಿ ನಾಯಕರೂ ಮಾಧ್ಯಮಗಳ ಮುಂದೆ ಬಹಿರಂಗಪಡಿಸಿದ್ದರು. ಮುಡಾ ಹಗರಣಕ್ಕೆ ಸಂಬಂಧಿಸಿ, ಇಂದು ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜೀನಾಮೆ ನೀಡಬೇಕು ಎಂದಾದರೆ ನೂರಾರು ಜನರ ಸಾವಿಗೆ ಕಾರಣವಾದ ಕೊರೋನ ಹಗರಣಕ್ಕೆ ಸಂಬಂಧಿಸಿ, ಅಂದು ಅಧಿಕಾರದಲ್ಲಿದ್ದ ರಾಜಕಾರಣಿಗಳನ್ನು ಗಲ್ಲಿಗೇರಿಸುವುದು ಅನಿವಾರ್ಯವಾಗುತ್ತದೆ. ನಾಡಿನ ಬಗ್ಗೆ ಕಾಳಜಿ ವಹಿಸುತ್ತಿರುವ ಬಿಜೆಪಿ ನಾಯಕರು, ಇದಕ್ಕೆ ಸಿದ್ಧರಿದ್ದಾರೆಯೆ? ಹಾಗೆಂದು ಮುಡಾ ಹಗರಣದಲ್ಲಿ ಅಪರಾಧಿಗಳು ಇಲ್ಲವೇ ಇಲ್ಲ ಎಂದಲ್ಲ. ಹಗರಣದಲ್ಲಿ ಅಂದು ಕೈ ಜೋಡಿಸಿದ ಯಾವುದೇ ಅಧಿಕಾರಿಗಳಿದ್ದರೂ ಅವರ ಮೇಲೆ ಕ್ರಮ ಕೈಗೊಳ್ಳಬೇಕಾಗಿದೆ. ಹಾಗೆಯೇ, ಅದೇ ಮಾದರಿಯಲ್ಲಿ ನಿವೇಶನಗಳನ್ನು ಪಡೆದಿರುವ ಇದರ ನಾಯಕರನ್ನು ಯಾವ ಪಕ್ಷಗಳಲ್ಲಿದ್ದರೂ ಗುರುತಿಸಿ ಅವರಿಂದಲೂ ಆ ನಿವೇಶನಗಳನ್ನು ವಾಪಸ್ ಪಡೆಯುವ ಕೆಲಸವೂ ಆಗಬೇಕಾಗಿದೆ. ಗುಡ್ಡದಲ್ಲಿರುವುದು ಇಲಿಯೆನ್ನುವುದು ಖಚಿತವಿದ್ದುದರಿಂದಲೇ ಲೋಕಾಯುಕ್ತ ಗುಡ್ಡ ಅಗೆಯಲಾರಂಭಿಸಿತ್ತು. ಇದೀಗ ಅದು ಹುಲಿ ಹಿಡಿಯಲಿಲ್ಲ ಇಲಿ ಹಿಡಿದಿದೆ ಎಂದು ರಂಪ ಮಾಡಿದರೆ, ಲೋಕಾಯುಕ್ತ ಪೊಲೀಸರಾದರೂ ಏನು ಮಾಡಬೇಕು?