ಇತಿಹಾಸದ ವಿರುದ್ಧ ಯುದ್ಧ ಸಾರಲು ಹೊರಟ ಎನ್ಸಿಇಆರ್ಟಿ
Photo: twitter.com/ciet_ncert
ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ
ಒಂದೆಡೆ ಉನ್ನತ ವಿದ್ಯಾಭ್ಯಾಸಕ್ಕಾಗಿ ವಿದೇಶಗಳಿಗೆ ತೆರಳುವ ಭಾರತೀಯ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚುತ್ತಿರುವಂತೆಯೇ, ಮಗದೊಂದೆಡೆ ಭಾರತದ ಶಿಕ್ಷಣ ವ್ಯವಸ್ಥೆಯನ್ನು ಇನ್ನಷ್ಟು ಹೇಗೆ ಗಬ್ಬೆಬ್ಬಿಸಬಹುದು ಎನ್ನುವ ಬಗ್ಗೆ ಕೇಂದ್ರ ಸರಕಾರ ಭಾರೀ ಪ್ರಯೋಗಗಳನ್ನು ಮಾಡಲು ಹೊರಟಿದೆ. ಮೇಲ್ವರ್ಗ ಮತ್ತು ಮೇಲ್ಜಾತಿಯ ಜನರು ಉನ್ನತ ವಿದ್ಯಾಭ್ಯಾಸಗಳಿಗೆ ವಿದೇಶಿ ವಿಶ್ವವಿದ್ಯಾನಿಲಯಗಳನ್ನು ನೆಚ್ಚಿಕೊಳ್ಳುತ್ತಿರುವುದು ಸಮೀಕ್ಷೆಗಳಲ್ಲಿ ಬೆಳಕಿಗೆ ಬರುತ್ತಿದ್ದರೆ, ಇತ್ತ ಭಾರತದ ವಿಶ್ವವಿದ್ಯಾನಿಲಯಗಳನ್ನು ‘ಬೂಸ ಕುಟ್ಟುವ’ ಕೇಂದ್ರವನ್ನಾಗಿಸಲು ಕೇಂದ್ರ ಸರಕಾರವು ರಾಷ್ಟ್ರೀಯ ಶೈಕ್ಷಣಿಕ ಸಂಶೋಧನೆ ಮತ್ತು ತರಬೇತಿ (ಎನ್ಸಿಇಆರ್ಟಿ)ಗೆ ‘ಸುಪಾರಿ’ ನೀಡಿದೆ. ಇದೀಗ ರಾಷ್ಟ್ರೀಯ ಶಿಕ್ಷಣ ನೀತಿಗೆ ಅನುಗುಣವಾಗಿ ಐದು ಪ್ರಸ್ತಾವಗಳನ್ನು ಎನ್ಸಿಇಆರ್ಟಿ ಸ್ವೀಕರಿಸಲು ಮುಂದಾಗಿದೆ. ಅದರಲ್ಲಿ ಒಂದು ಪಠ್ಯ ಪುಸ್ತಕಗಳಲ್ಲಿ ಇಂಡಿಯಾ ಬದಲು ‘ಭಾರತ’ ಬಳಕೆ. ಇಂಡಿಯಾವನ್ನು ಭಾರತವೆಂದು ಕರೆಯುವುದರಿಂದ ಪಠ್ಯ ಪುಸ್ತಕಗಳ ಆಮೂಲಾಗ್ರ ಸುಧಾರಣೆ ಹೇಗಾಗುತ್ತದೆ ಎನ್ನುವುದರ ಬಗ್ಗೆ ಯಾವ ಸ್ಪಷ್ಟನೆಯೂ ಎನ್ಸಿಇಆರ್ಟಿ ಬಳಿಯಿಲ್ಲ. ಸರಕಾರದ ಆದೇಶವನ್ನು ಅದು ಪಾಲಿಸಲು ಹೊರಟಿದೆ. ಆದರೆ ಇದೇ ಸಂದರ್ಭದಲ್ಲಿ ಸರಕಾರವೇ ಘೋಷಿಸಿರುವ ‘ಸ್ಟಾರ್ಟ್ ಆಪ್ ಇಂಡಿಯಾ’ ‘ಮೇಕ್ ಇನ್ ಇಂಡಿಯಾ’ ‘ಡಿಜಿಟಲ್ ಇಂಡಿಯಾ’ ಎಲ್ಲಕ್ಕಿಂತ ಮುಖ್ಯವಾಗಿ ‘ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ’ ಇವನ್ನೆಲ್ಲ ಭಾರತವನ್ನಾಗಿ ಬದಲಿಸಬೇಕಾಗಿದೆ. ಉಳಿದಂತೆ ಸಕಲ ಭಾರತೀಯರು ಈ ದೇಶವನ್ನು ಭಾರತವೆಂದು ಕರೆಯುವುದರ ಬಗ್ಗೆ ಭಿನ್ನಭಿಪ್ರಾಯ ಹೊಂದಿಲ್ಲ. ಇಂಗ್ಲಿಷ್ನಲ್ಲಿ ಮಾತನಾಡುವ ಸಂದರ್ಭದಲ್ಲಷ್ಟೇ ಇಂಡಿಯಾ ಬಳಕೆಯಾಗುತ್ತಿದೆ. ಭಾರತದೊಳಗೆ ಇಂಡಿಯಾ ಅವಿನಾಭಾವವಾಗಿ ಬೆರೆತಿದೆ. ಅದನ್ನು ಬೇರ್ಪಡಿಸುವ ಅನಗತ್ಯ ಆಪರೇಷನ್ ಅಗತ್ಯವಂತೂ ಸದ್ಯಕ್ಕೆ ಭಾರತದ ತುರ್ತು ಅಗತ್ಯವಾಗಿ ಕಾಣುತ್ತಿಲ್ಲ.
ಜೊತೆಗೆ ‘ಪ್ರಾಚೀನ ಇತಿಹಾಸ’ವನ್ನು ಶಾಸ್ತ್ರೀಯ ಇತಿಹಾಸವಾಗಿಸಲು ಮಂಡಳಿ ಹೊರಟಿದೆ. ಈ ಮೂಲಕ ಭಾರತದ ಪ್ರಾಚೀನ ಇತಿಹಾಸಕ್ಕೆ ‘ಉಪನಯನ’ ಮಾಡುವುದಕ್ಕೆ ಮುಂದಾದಂತಿದೆ. ಇದು ಭಾರತದ ಇತಿಹಾಸವನ್ನು ವೈದಿಕೀಕರಣಗೊಳಿಸುವ ಭಾಗವಾಗಿದೆ ಎಂದು ಈಗಾಗಲೇ ಇತಿಹಾಸ ತಜ್ಞರು ಆರೋಪಿಸಲಾರಂಭಿಸಿದ್ದಾರೆ. ಇಷ್ಟೆಲ್ಲಗೊಂದಲಗಳು ಸಾಕಾಗಲಿಲ್ಲ ಎನ್ನುವಂತೆ ಇತಿಹಾಸದ ಯುದ್ಧಗಳಲ್ಲಿ ಯಾವೆಲ್ಲ ವಿಜಯಗಳನ್ನು ‘ಹಿಂದೂಗಳ ವಿಜಯ’ವಾಗಿ ಘೋಷಿಸಬೇಕು ಎನ್ನುವ ಮಹತ್ವದ ಹೊಣೆಗಾರಿಕೆಯೂ ಎನ್ಸಿಇಆರ್ಟಿ ತಲೆಗೆ ಬಿದ್ದಿದೆ. ಅಂದರೆ, ಇತಿಹಾಸದಲ್ಲಿ ನಡೆದಿರುವ ಯುದ್ಧಗಳನ್ನೆಲ್ಲ ಪುನರ್ ಪರಿಶೀಲಿಸಿ, ಸೋತವರು, ಗೆದ್ದವರನ್ನು ಮತ್ತೆ ಹೊಸದಾಗಿ ಗುರುತಿಸಬೇಕಾಗಿದೆ. ಹಿಂದೂಗಳ ವಿಜಯಕ್ಕೆ ಆದ್ಯತೆಯನ್ನು ನೀಡಿ ಎಂದು ಸೂಚಿಸಲಾಗಿದೆ. ಇಷ್ಟಕ್ಕೂ ಇತಿಹಾಸ ಪುಸ್ತಕದಲ್ಲಿ ಭಾರತದ ಜನರನ್ನು ಹಿಂದೂಗಳೆಂದು ಗುರುತಿಸಿರುವುದೇ ವಿದೇಶಿಯರು. ವಿದೇಶಿಯರು ಈ ದೇಶಕ್ಕೆ ಆಗಮಿಸುವವರೆಗೆ ಇಲ್ಲಿ ಚೋಳರು, ಪಾಂಡ್ಯರು, ಮೌರ್ಯರು, ರಜಪೂತ ದೊರೆಗಳು, ಮರಾಠರು, ಬ್ರಾಹ್ಮಣ ಅಥವಾ ಪೇಶ್ವೆ ದೊರೆಗಳು, ಜಾಟ್ ದೊರೆಗಳು.... ಹೀಗೆ ತಮ್ಮ ತಮ್ಮ ಕ್ಷತ್ರಿಯ ಜಾತಿಗಳ ಮೂಲಕ, ವಂಶಗಳ ಗುರುತಿಸುವ ದೊರೆಗಳಿದ್ದರೇ ಹೊರತು, ಹಿಂದೂ ದೊರೆಗಳಿರಲಿಲ್ಲ. ಹಿಂದುತ್ವದ ನೇತಾರನಾಗಿ ಸಂಘಪರಿವಾರ ಬಳಕೆ ಮಾಡುತ್ತಿರುವ ಶಿವಾಜಿಯೂ ಮರಾಠಾ ದೊರೆಯಾಗಿ ಗುರುತಿಸಲ್ಪಡುತ್ತಿದ್ದ. ಆದರೆ ಆತ ಭೋಸಲೆ ಎನ್ನುವ ಕೆಳ ಜಾತಿಗೆ ಸೇರಿದವನಾಗಿರುವುದರಿಂದ ಮರಾಠರೇ ಅವನನ್ನು ಪೂರ್ಣ ಪ್ರಮಾಣದಲ್ಲಿ ಒಪ್ಪುತ್ತಿರಲಿಲ್ಲ. ಎಲ್ಲಕ್ಕಿಂತ ಮುಖ್ಯವಾಗಿ ಈ ಎಲ್ಲ ಅರಸರೂ ಪರಸ್ಪರ ಹೊಡೆದಾಡಿಕೊಂಡಿದ್ದಾರೆ ಮತ್ತು ಇವರ ನಡುವಿನ ಸೋಲು ಗೆಲುವುಗಳನ್ನು ಎನ್ಸಿಇಆರ್ಟಿ ಯಾವ ದೃಷ್ಟಿಯಲ್ಲಿ ನೋಡುತ್ತದೆ? ಎನ್ನುವ ಪ್ರಶ್ನೆಯೂ ಜೊತೆಗೇ ಎದ್ದಿದೆ. ಬಹುಶಃ ಅವರವರ ಜಾತಿಗಳನ್ನು ಆಧರಿಸಿ ಆ ಗೆಲುವಿಗೆ ಆದ್ಯತೆಯನ್ನು ನೀಡಲಿದೆಯೆ? ಎನ್ನುವುದು ಇನ್ನೂ ಸ್ಪಷ್ಟವಿಲ್ಲ.
ಈ ದೇಶಕ್ಕೆ ಕಾಲಿಟ್ಟ ಹಲವು ವಿದೇಶಿ ರಾಜರು ಈ ದೇಶದ ಅರಸರ ಮೇಲೆ ದಾಳಿ ನಡೆಸಿ ಗೆದ್ದು ಈ ನೆಲದವರಾಗಿಯೇ ಉಳಿದು, ಬೆಳೆದು ಸತ್ತರು. ಅಲ್ಲಾವುದ್ದೀನ್ ಖಿಲ್ಜಿಯಂತಹ ಅರಸನಿಂದಾಗಿ ಮಂಗೋಲಿಯನ್ ಲೂಟಿಕೋರರಿಂದ ಭಾರತ ರಕ್ಷಿಸಲ್ಪಟ್ಟಿತು. ಜಾತಿ ಆಧಾರಿತವಾದ ಕ್ಷತ್ರಿಯರಿಂದ ಛಿದ್ರವಾಗಿದ್ದ ಭಾರತ ನಿಧಾನಕ್ಕೆ ಒಂದಾಗುತ್ತಾ ಹೋದದ್ದು ಮೊಗಲರಿಂದ. ಚಕ್ರವರ್ತಿ ಅಶೋಕನ ಬಳಿಕ, ಈ ದೇಶವನ್ನು ಹೊಸದಾಗಿ ಹಿಂದೂಸ್ಥಾನವಾಗಿ ವಿಸ್ತರಿಸಿದ್ದು ಮೊಗಲರು. ಕುತೂಹಲಕರವಿಷಯವೆಂದರೆ, ಬಾಬರ್ನನ್ನು ಈ ದೇಶಕ್ಕೆ ಆಹ್ವಾನಿಸಿದ್ದೇ ಎನ್ಸಿಇಆರ್ಟಿಯು ಹಿಂದೂಗಳೆಂದು ಗುರುತಿಸುವ ಹಿಂದೂಸ್ಥಾನದ ಅರಸರು. ಅಷ್ಟೇ ಅಲ್ಲ, ಮೊಗಲರ ಜೊತೆಗೆ ನಿಂತು ಹಲವು ಭಾರತೀಯ ಅರಸರು ಯುದ್ಧ ಮಾಡಿದ್ದಾರೆ. ಮೊಗಲರ ಬಹುತೇಕ ಸೇನಾಧಿಪತಿಗಳು ರಜಪೂತರಾಗಿದ್ದರು. ಆದುದರಿಂದ ಇಲ್ಲಿ ನಡೆದ ಹಲವು ಯುದ್ಧಗಳ ಗೆಲುವು ಈ ದೇಶದ ಹಿಂದೂಗಳ ಗೆಲುವೂ ಹೌದು. ಶಿವಾಜಿಯ ಸೇನಾಪಡೆಗಳನ್ನೇ ತೆಗೆದುಕೊಳ್ಳೋಣ. ಆತನ 11 ದಂಡನಾಯಕರು ಮುಸ್ಲಿಮರಾಗಿದ್ದರು. ಆತನ ಪ್ರಮುಖ ಅಂಗರಕ್ಷಕರಲ್ಲಿ ಒಬ್ಬ ದಲಿತನಾಗಿದ್ದರೆ ಇನ್ನೋರ್ವ ಮುಸ್ಲಿಮನಾಗಿದ್ದ. ಅಫಝಲ್ ಖಾನ್ನ ಅಂಗರಕ್ಷಕನ ಹೆಸರು ಕೃಷ್ಣಜೀ ಭಾಸ್ಕರ್ ಕುಲಕರ್ಣಿ. ಅಫಝಲ್ಖಾನ್ನ ಭೇಟಿಯ ಸಂದರ್ಭದಲ್ಲಿ ಈತ ಹಿಂದಿನಿಂದ ಶಿವಾಜಿಯ ಮೇಲೆ ದಾಳಿಗೆ ಯತ್ನಿಸಿದ. ಆಗ ಶಿವಾಜಿಯ ಅಂಗರಕ್ಷಕರಲ್ಲಿ ಒಬ್ಬನಾಗಿದ ದಲಿತ ಸೇನಾನಿ ಜೀವಾ ಮಹಾರ್ ಕುಲಕರ್ಣಿಯನ್ನು ಕೊಂದು ಹಾಕಿದ. ಶಿವಾಜಿಯ ವಿರುದ್ಧ ಮೊಗಲರ ಪರವಾಗಿ ಯುದ್ಧ ಮಾಡುತ್ತಿದ್ದ ಸೇನಾಧಿಪತಿಗಳ ಹೆಸರು ರಾಜರಾಯ ಸಿಂಗ್, ಸುಜನ್ ಸಿಂಗ್, ಹರಿಬಾನ್ ಸಿಂಗ್, ಉದಯಬಾನ್ ಗೌರ, ಶೇರ್ ಸಿಂಹ್ ರಾಥೋಡ್...ಹೀಗೆ ಮುಂದುವರಿಯುತ್ತದೆ. ಹೀಗಿರುವಾಗ ಶಿವಾಜಿಯ ಗೆಲುವನ್ನು, ಸೋಲನ್ನು ಹಿಂದೂಗಳ ಗೆಲುವು, ಸೋಲು ಎಂದು ಪಠ್ಯಗಳಲ್ಲಿ ದಾಖಲಿಸುವುದು ಅಷ್ಟು ಸುಲಭವೆ?
ಅಷ್ಟೇ ಯಾಕೆ? ಶಿವಾಜಿ ಕನ್ನಡಿಗರ ಅರಸರ ಮೇಲೆ ದಾಳಿ ನಡೆಸಿದ. ಬೆಳವಡಿ ಮಲ್ಲಮ್ಮ ವೀರಾವೇಶದಿಂದ ಹೋರಾಡಿ ಶಿವಾಜಿಯ ಸೇನೆಯನ್ನು ಸೋಲಿಸಿದಳು. ಇದರಲ್ಲಿ ಹಿಂದೂಗಳ ವಿಜಯವೆಂದು ಪಠ್ಯಪುಸ್ತಕಗಳಲ್ಲಿ ಯಾರ ಗೆಲುವಿಗೆ ಆದ್ಯತೆ ನೀಡಬೇಕು? ಪೇಶ್ವೆಗಳು ಬಂಗಾಳದಲ್ಲಿ ಹಿಂದೂ ಅರಸರ ಮೇಲೆ ಭೀಕರ ದಾಳಿಗಳನ್ನು ನಡೆಸಿದರು. ಇದನ್ನು ಹಿಂದೂಗಳು ಯಾರ ಮೇಲೆ ನಡೆಸಿದ ದೌರ್ಜನ್ಯವೆಂದು ಪಠ್ಯ ಪುಸ್ತಕಗಳಲ್ಲಿ ದಾಖಲಿಸಬೇಕು? ಪೇಶ್ವೆಗಳು ಶೃಂಗೇರಿ ಮಠಗಳ ಮೇಲೆ ದಾಳಿ ನಡೆಸಿದರು. ಇದನ್ನು ಹಿಂದೂಗಳ ವಿಜಯವೆಂದು ಕರೆಯಬೇಕೋ? ಇದೇ ಸಂದರ್ಭದಲ್ಲಿ ಶೃಂಗೇರಿ ಮಠದ ಪರವಾಗಿ ನಿಂತ ಟಿಪ್ಪುಸುಲ್ತಾನನನ್ನು ಇತಿಹಾಸ ಪಠ್ಯದಲ್ಲಿ ಏನೆಂದು ಗುರುತಿಸಬೇಕು?
ಕೋರೆಗಾಂವ್ ವಿಜಯ ದಿನವನ್ನು ಈ ದೇಶದ ದಲಿತರು ಪ್ರತಿವರ್ಷ ಆಚರಿಸುತ್ತಾರೆ. ಸುಮಾರು 25,000 ಯೋಧರಿರುವ ಪೇಶ್ವೆಗಳ ಸೇನೆಯನ್ನು ಬ್ರಿಟಿಷರ ಪರವಾಗಿ 500 ಮಂದಿ ದಲಿತ ಮಹಾರರು ಸೋಲಿಸಿದ ಸ್ಮರಣಾರ್ಥವಾಗಿ ಕೋರೆಗಾಂವ್ ವಿಜಯ ಸ್ತಂಭವನ್ನು ಸ್ಥಾಪಿಸಲಾಯಿತು. ಪೇಶ್ವೆಗಳು ಚಿತ್ಪಾವನ ಬ್ರಾಹ್ಮಣರು. ಶಿವಾಜಿಯ ಬೆನ್ನೆಲುಬಾಗಿ ನಿಂತಿದ್ದ ಮಹಾರ್ ಯೋಧರನ್ನು ಜಾತಿಯ ಕಾರಣಕ್ಕಾಗಿ ಬಳಿಕ ಪೇಶ್ವೆಗಳು ಕಡೆಗಣಿಸಿದರು. ಅಸ್ಪಶ್ಯರೆಂದು ಅವರನ್ನು ಹೊರಗಿಟ್ಟರು. ಇದನ್ನು ವಿರೋಧಿಸಿ ಮಹಾರ್ ದಲಿತ ಯೋಧರು ಬಂಡೆದ್ದರು. ಪೇಶ್ವೆಗಳು ಹಿಂದೂಗಳೇ ಆಗಿದ್ದರೂ ಅವರ ಆಡಳಿತ ಕಾಲದಲ್ಲಿ ಈ ದೇಶ ಜಾತೀಯತೆಯಿಂದ ಗಬ್ಬೆದ್ದು ಹೋಗಿತ್ತು. ಮಹಾರ್ ಯೋಧರು ಪೇಶ್ವೆಗಳ ವಿರುದ್ಧ ಯುದ್ಧ ಘೋಷಿಸುವ ಮೂಲಕ ಈ ದೇಶದ ಜಾತೀಯತೆಗೆ ಮೊಟ್ಟ ಮೊದಲ ಪ್ರತಿರೋಧವನ್ನು ವ್ಯಕ್ತಪಡಿಸಿದ್ದರು ಮತ್ತು ದಲಿತ ಯೋಧರ ಮೊದಲ ಮಹಾ ವಿಜಯ ಅದಾಗಿತ್ತು. ಈ ಕಾರಣದಿಂದ ಅಂಬೇಡ್ಕರ್ ಅದನ್ನು ಭಾರತದ ಗೆಲುವಾಗಿ ಪರಿಗಣಿಸಿ, ‘ವಿಜಯ ದಿವಸ’ವೆಂದು ಆಚರಿಸಲು ನಾಂದಿ ಹಾಡಿದರು. ಹಾಗಾದರೆ ಎನ್ಸಿಇಆರ್ಟಿ ಕೋರೆಗಾಂವ್ ಯುದ್ಧದ ಗೆಲುವನ್ನು ಹಿಂದೂಗಳ ವಿಜಯವೆಂದು ಕರೆದು ಪಠ್ಯಪುಸ್ತಕಗಳಲ್ಲಿ ಅದಕ್ಕೆ ಆದ್ಯತೆ ನೀಡಲಿದೆಯೆ? ಕಾದು ನೋಡಬೇಕಾಗಿದೆ. ಅಖಂಡ ಭಾರತವನ್ನು ಆಳಿದ ಬೌದ್ಧ ದೊರೆ ಚಕ್ರವರ್ತಿ ಅಶೋಕನಿಗೆ ಪಠ್ಯದಲ್ಲಿ ಎನ್ಸಿಇಆರ್ಟಿಸಿ ಎಷ್ಟರ ಮಟ್ಟಿಗೆ ಆದ್ಯತೆ ನೀಡಲಿದೆ ಎನ್ನುವುದು ಕೂಡ ಕುತೂಹಲಕರವಾಗಿದೆ.